ಸೋಮವಾರ, ಜೂನ್ 25, 2012

ಗೆಳೆತನ ಸಂಪಾದಿಸುವಾಗ ಎಚ್ಚರ ವಹಿಸಿ


ಗೆಳೆತನವೆಂಬುದು ಮನುಷ್ಯನ ಜೀವನದ ಅನಿವಾರ್ಯ ಬೇಡಿಕೆಗಳಲ್ಲೊಂದಾಗಿದೆ. ಎಲ್ಲರೂ ಗೆಳೆಯರನ್ನು ಹೊಂದಿರುತ್ತಾರೆ. ಇನ್ನು ಗೆಳೆಯರಿಲ್ಲದವರು ಅವರ ಗಳಿಕೆಗಾಗಿ ಹಂಬಲಿಸುತ್ತಿರುತ್ತಾರೆ. ಯಾರಿಗೂ ಕೂಡಾ ಏಕಾಂಗಿಯಾಗಿ ಯಾರದೇ ಸಹಾಯವಿಲ್ಲದೇ ಜೀವಿಸಲು ಸಾಧ್ಯವಿಲ್ಲ. ಗೆಳೆತನವು ಮಾನವರ ಬದುಕಿನ ಮಾರ್ಗ ಸೂಚಿಯಾಗಿದೆ. ತಂದೆ ತಾಯಿಗಳೊಂದಿಗೆ ಹೇಳಲು ಸಾಧ್ಯವಿಲ್ಲದ್ದನ್ನೂ ನಾವು ಗೆಳೆಯರೊಂದಿಗೆ ಹಂಚಿಕೊಳ್ಳುತ್ತೇವೆ. ಅದು ಬದುಕಿನ ಮೇಲೆ ಹಲವಾರು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಓರ್ವನ ಸ್ವಭಾವ ಹಾಗೂ ಚಾರಿತ್ರ್ಯ ನಿರ್ಮಾಣದ ಮೇಲೆ ಗೆಳೆತನವು ನಿರ್ವಹಿಸುವ ಪಾತ್ರವು ಸಣ್ಣದಲ್ಲ. ಓರ್ವ ವ್ಯಕ್ತಿಯ ವ್ಯಕ್ತಿತ್ವವು ಅವನ ಗೆಳೆಯರಿಗೆ ಹೊಂದಿಕೊಂಡಿರುತ್ತದೆ. ಉತ್ತಮ ಗೆಳೆಯರನ್ನು ಹೊಂದಿದವನ ಸ್ವಭಾವ, ವರ್ತನೆಗಳು ಯಾವಾಗಲೂ ಉತ್ತಮವಾಗಿಯೇ ಇರುತ್ತದೆ. ಇನ್ನು ಕೆಟ್ಟಗೆಳೆಯರಿದ್ದರೆ ಅದರ ಪರಿಣಾಮವು ಅವರಲ್ಲಿ ಖಂಡಿತವಾಗಿಯೂ ಗೋಚರವಾಗುತ್ತದೆ. ಉತ್ತಮ ಹಾಗೂ ಕೆಟ್ಟ ಗೆಳೆಯರ ಕುರಿತು ಪ್ರವಾದಿ(ಸ) ಹೀಗೆ ಹೇಳಿದ್ದಾರೆ.
ಅಬೂ ಮೂಸಲ್ ಅಶ್ಅರಿ(ರ) ವರದಿ ಮಾಡಿದ್ದಾರೆ. ಪ್ರವಾದಿ(ಸ) ಹೇಳಿದರು. “ಉತ್ತಮ ಹಾಗೂ ಕೆಟ್ಟ ಗೆಳೆಯರ ಉಪಮೆಯು ಕಸ್ತೂರಿ ಹೊರುವವನು ಮತ್ತು ಒಲೆಗೆ ಊದುವವನಂತಾಗಿದೆ. ಕಸ್ತೂರಿ ಹೊರುವವನು ಅದರಿಂದ ನಿನಗೆ ಏನಾದರೂ ನೀಡಬಹುದು. ಇಲ್ಲದಿದ್ದರೆ ನೀನು ಅವನಿಂದ ಹಣ ನೀಡಿ ಖರೀದಿಸಬಹುದು. ಅದೂ ಅಲ್ಲದಿದ್ದರೆ ಅದರ ಸುವಾಸನೆಯನ್ನಾದರೂ ಸವಿಯಬಹುದು. ಇನ್ನು ಒಲೆಯಲ್ಲಿ ಊದುವವನು ಒಂದೋ ನಿನ್ನ ಬಟ್ಟೆಯನ್ನು ಸುಟ್ಟು ಬಿಡಬಹುದು. ಇಲ್ಲದಿದ್ದರೆ ದುರ್ಗಂಧವನ್ನು ನೀನು ಅನುಭವಿಸ ಬೇಕಾಗುವುದು.” ಇದು ಬಹಳ ಉತ್ತಮವಾದ ಉದಾಹರಣೆಯಾಗಿದೆ. ಉತ್ತಮ ಗೆಳೆಯನನ್ನು ಪ್ರವಾದಿಯವರು ಕಸ್ತೂರಿ ಹೊರುವವನಿಗೆ ಹೋಲಿಸಿದ್ದಾರೆ. ಕಸ್ತೂರಿ ಹೊರುವವನನ್ನು ಎಲ್ಲರೂ ಇಷ್ಟ ಪಡುತ್ತಾರೆ. ಯಾಕೆಂದರೆ ಅವನ ಬಳಿ ಹೋದರೆ ಉತ್ತಮ ಪರಿಮಳ ಲಭಿಸುತ್ತದೆ. ಮನಸ್ಸಿಗೆ ಆಹ್ಲಾದವಾಗುತ್ತದೆ. ಆದರೆ ಒಲೆಗೆ ಊದುವವನ ಸ್ಥಿತಿಯು ಇದಕ್ಕೆ ವಿರುದ್ಧವಾಗಿರುತ್ತದೆ. ಕಿಡಿಗಳು ಅಲ್ಲಲ್ಲ್ಲಿ ಹಾರುತ್ತಿರುತ್ತವೆ. ಬಳಿ ಹೋದವರ ಬಟ್ಟೆ ಅಥವಾ ಶರೀರ ಸುಡುವ ಸಾಧ್ಯತೆ ಇದೆ. ಆದ್ದರಿಂದ ಯಾರು ಕೂಡಾ ಅವನ ಬಳಿ ಹೋಗಲು ಇಷ್ಟ ಪಡುವುದಿಲ್ಲ.
ನಾವು ನಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಉತ್ತಮ ಗೆಳೆಯರು ನೆರವಾಗುತ್ತಾರೆ. ಸಚ್ಚಾರಿತ್ರ್ಯದಿಂದ ತುಂಬಿದ ಅವರ ಜೀವನವು ಇತರರಿಗೆ ದಾರಿ ದೀಪವಾಗುತ್ತದೆ. ಅಂತಹ ವ್ಯಕ್ತಿಗಳೊಂದಿಗೆ ಗೆಳೆತನ ಬೆಳೆಸಲು ಎಲ್ಲರೂ ಮುಂದಾಗುತ್ತಾರೆ. ಉತ್ತಮ ಗೆಳೆಯರ ಕುರಿತು ಪ್ರವಾದಿ(ಸ) ಹೀಗೆ ಹೇಳಿದರು, “ಎರಡು ಗೆಳೆಯರು ಎರಡು ಕೈಗಳಿದ್ದಂತೆ. ಒಂದು ಕೈಯು ಇನ್ನೊಂದು ಕೈಯನ್ನು ಶುಚಿಗೊಳಿಸಲು ಸದಾ ನೆರವಾಗುತ್ತಿರುತ್ತದೆ. ವಿಶ್ವಾಸಿಗಳಾದ ಇಬ್ಬರು ವ್ಯಕ್ತಿಗಳು ಪರಸ್ಪರ ಭೇಟಿಯಾದರೆ ಓರ್ವನಿಂದ ಇನ್ನೋರ್ವನಿಗೆ ಅಲ್ಲಾಹನು ಯಾವುದಾದರೂ ಒಳಿತನ್ನು ನೀಡದಿರಲಿಕ್ಕಿಲ್ಲ.”
ಕೆಟ್ಟ ಗೆಳೆಯರೊಂದಿಗೆ ಗೆಳೆತನ ಬೆಳೆಸಿದರೆ ಅದು ಜೀವನದ ಅಧಃಪತನಕ್ಕೆ ನಾಂದಿ ಹಾಡಿದಂತಾಗುತ್ತದೆ. ಅವರಿಂದ ಯಾವುದೇ ಉತ್ತಮ ಗುಣಗಳನ್ನು ನಿರೀಕ್ಷಿಸುವಂತಿಲ್ಲ. ಅವರೊಂದಿಗೆ ಗೆಳೆತನ ಬೆಳೆಸಿದರೆ ನಮ್ಮ ಜೀವನವು ಅವರ ಜೀವನದಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕುರಿತು ಪ್ರವಾದಿ(ಸ) ಎಚ್ಚರಿಕೆ ನೀಡಿದ್ದಾರೆ. ಅಬೂದರ್ರುಲ್ ಗಿಫಾರಿ(ರಿ) ವರದಿ ಮಾಡಿದ್ದಾರೆ. ಪ್ರವಾದಿ(ಸ) ಹೇಳಿದರು. “ಕೆಟ್ಟ ಗೆಳೆಯರಿಗಿಂತ ಉತ್ತಮವಾದದ್ದು ಏಕಾಂತತೆಯಾಗಿದೆ. ಏಕಾಂತತೆಗಿಂತ ಉತ್ತಮವಾದುದು ಸಚ್ಚರಿತರಾದ ಉತ್ತಮ ಗೆಳೆಯರಾಗಿದ್ದಾರೆ. ಉತ್ತಮ ಮಾತುಕತೆಯು ಮೌನಕ್ಕಿಂತ ಶ್ರೇಷ್ಠವಾದುದಾಗಿದೆ. ಮೌನವು ಕೆಟ್ಟ ಮಾತುಕತೆಗಿಂತ ಶ್ರೇಷ್ಠ ವಾದುದಾಗಿದೆ.”
ನಾವು ಗೆಳೆತನ ಬೆಳೆಸುವಾಗ ಜಾಗರೂಕರಾಗಿರಬೇಕು. ಕೆಟ್ಟ ಗೆಳೆಯರ ಸಂಪಾದನೆಯು ವಿನಾಶಕ್ಕೆ ಆಹ್ವಾನವೀಯುತ್ತದೆ. ಪ್ರವಾದಿ(ಸ) ಹೇಳಿದರು, “ಮನುಷ್ಯನು ಅವನ ಗೆಳೆಯನ ಧರ್ಮದಲ್ಲಾಗಿರುವನು. ಆದ್ದರಿಂದ ಯಾರೊಂದಿಗೆ ಗೆಳೆತನ ಬೆಳೆಸಬೇಕೆಂದು ಪ್ರತಿಯೊಬ್ಬನೂ ಆಲೋಚಿಸಿ ತೀರ್ಮಾನಿಸಲಿ.” ಗೆಳೆಯರನ್ನು ಸಂಪಾದಿಸುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಇಮಾಮ್ ಜಅïಫರ್ ಸ್ವಾದಿಕ್(ರ) ಹೀಗೆ ಹೇಳುತ್ತಾರೆ. “ಸುಳ್ಳು ಹೇಳುವವನು, ಪೆದ್ದ, ಜಿಪುಣ, ಹೇಡಿ, ದುರ್ವರ್ತನೆ ಹೊಂದಿದವನು ವೊದಲಾದವರೊಂದಿಗೆ ನೀನು ಗೆಳೆತನ ಬೆಳೆಸಬಾರದು. ಸುಳ್ಳು ಹೇಳುವವನು ನಿನ್ನನ್ನು ವಂಚನೆಯಲ್ಲಿ ಸಿಲುಕಿಸುವನು. ಅವನು ಮರುಭೂಮಿಯಲ್ಲಿರುವ ಮರೀಚಿಕೆಯಂತಿರುವನು. ಹತ್ತಿರ ಇರುವುದನ್ನು ದೂರವಾಗಿಯೂ ದೂರ ಇರುವುದನ್ನು ಹತ್ತಿರವಾಗಿಯೂ ಪ್ರದರ್ಶಿಸುವನು. ಪೆದ್ದನಿಂದ ನಿನಗೆ ಯಾವುದೇ ಉಪಕಾರ ಲಭಿಸಲಿಕ್ಕಿಲ್ಲ. ಅವನು ಉಪಕಾರ ಮಾಡಲು ಬಯಸಿದರೂ ಅದು ಉಪದ್ರವದಲ್ಲಿ ಕೊನೆಗೊಳ್ಳುತ್ತದೆ. ಜಿಪುಣನು, ನಿನಗೆ ಅವನ ಅಗತ್ಯ ಹೆಚ್ಚಿರುವಾಗ ಅವನು ನಿನ್ನೊಂದಿಗೆ ಸಂಬಂಧವನ್ನು ಕಡಿದುಕೊಳ್ಳತ್ತಾನೆ. (ಹಣ ಖರ್ಚಾಗಬಹುದು ಎಂಬ ಭಯ) ಹೇಡಿಯು ಸಂಕಷ್ಟದ ಸ್ಥಿತಿಯಲ್ಲಿ ನಿನ್ನನ್ನು ಕೈಬಿಡುವನು. ದುರ್ವರ್ತನೆ ಹೊಂದಿ ದವನು ನಿನ್ನನ್ನು ತುಚ್ಚ ಬೆಲೆಗೆ ಮಾರಿ ಬಿಡಲೂ ಹೇಸಲಿಕ್ಕಿಲ್ಲ.”
ಗೆಳೆಯರ ಕುರಿತು ಖಲೀಫ ಮಾಮೂನ್ ಹೀಗೆ ಹೇಳಿದ್ದರು. “ಗೆಳೆಯರು ಮೂರು ವಿಧದಲ್ಲಿದ್ದಾರೆ. ಒಂದು ವಿಭಾಗವು ಆಹಾರದಂತಿದೆ. ಅದಿಲ್ಲದೆ ಯಾರಿಗೂ ಜೀವಿಸಲು ಸಾಧ್ಯವಿಲ್ಲ. ಇನ್ನೊಂದು ವಿಭಾಗವು ರೋಗಕ್ಕಿರುವ ಔಷಧದಂತಿದೆ. ಅಗತ್ಯವಿರುವ ಸಂದರ್ಭದಲ್ಲಿ ಅದನ್ನು ಉಪಯೋಗಿಸಬಹುದು. ಯಾವಾಗಲೂ ಅದರ ಅವಶ್ಯಕತೆ ಇರಲಿಕ್ಕಿಲ್ಲ. ಮೂರನೇ ವಿಭಾಗವು ರೋಗದಂತಿದೆ. ಅದರ ಉಪಸ್ಥಿತಿಯನ್ನು ಯಾರೂ ಇಷ್ಟಪಡುವುದಿಲ್ಲ. ಅದು ಅಂಟಿಕೊಂಡರೆ ಶರೀರವು ಅವ್ಯವಸ್ಥಿತವಾಗುತ್ತದೆ.”
ಆದ್ದರಿಂದ ಗೆಳೆಯರನ್ನು ಆರಿಸುವಾಗ ಅವರ ಸ್ವಭಾವ-ಗುಣಗಳ ಕಡೆಗೆ ಗಮನ ಹರಿಸಬೇಕು. ನಾವು ನಮ್ಮ ಮಕ್ಕಳ ಮೇಲೆ ತೀವ್ರ ನಿಗಾ ಇರಿಸಬೇಕು. ವಿಶೇಷತಃ ಈ ಕಾಲದಲ್ಲಿ ಮಕ್ಕಳ ಗೆಳೆಯರು ಎಂತಹವರೆಂಬುದನ್ನು ಹೆತ್ತವರು ಖಾತರಿ ಪಡಿಸಿಕೊಳ್ಳಬೇಕು. ಕಾರಣ, ಗೆಳೆಯರಿಗೆ ಹೊಂದಿಕೊಂಡು ಮಕ್ಕಳ ಸ್ವಭಾವವು ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗ ಬೇಕಾಗಿದೆ. ಅಲ್ಲಾಹನು ಅನುಗ್ರಹಿಸಲಿ.

ನೇಪಾಳಿ ನಟಿ ಪೂಜಾ ಲಾಮಾ ಅಮ್ನ ಫಾರೂಖಿಯಾದಾಗ



ನೇಪಾಳದ ಪ್ರಸಿದ್ಧ ನಟಿ ಮಾಡಲ್, ಗಾಯಕಿಯೂ ಆದ ಪೂಜಾ ಲಮಾ ಇಸ್ಲಾಮಿಗೆ ಮತಾಂತರಗೊಂಡಿದ್ದಾರೆ. ಹಲವು ವಿವಾದಗಳ ಒಡತಿಯಾದ ಪೂಜಾ ಈಗ ಅಮ್ನಾ ಫಾರೂಕಿಯಾಗಿ ಬದಲಾಗಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನವನ್ನು ಇಲ್ಲಿ ನೀಡಲಾಗಿದೆ.
  ನೀವು ಇಸ್ಲಾಮ್ ಸ್ವೀಕರಿಸಲು ಪ್ರೇರಕವಾದ ಅಂಶಗಳು ಯಾವುವು?
  ನಾನು ಬೌದ್ಧ ಕುಟುಂಬದಿಂದ ಬಂದವಳಾಗಿದ್ದೇನೆ. ಒಂದು ವರ್ಷದ ಹಿಂದೆ ನನ್ನಲ್ಲಿ ಇತರ ಧರ್ಮಗಳ ಕುರಿತು ಕಲಿಯುವ ಬಯಕೆ ಉಂಟಾಯಿತು. ನಾನು ಹಿಂದು, ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳನ್ನು ತುಲನಾತ್ಮಕವಾಗಿ ಕಲಿಯಲು ಪ್ರಾರಂಭಿಸಿದೆ. ನಾನು ದುಬೈ ಮತ್ತು ಖತಾರ್ಗೆ ಪ್ರವಾಸ ಹೋದ ಸಂದರ್ಭದಲ್ಲಿ ಅಲ್ಲಿನ ಇಸ್ಲಾಮಿ ಸಂಸ್ಕ್ರತಿಯು ನನ್ನ ಮೇಲೆ ಪ್ರಭಾವ ಬೀರಿತು. ಇಸ್ಲಾಮಿನ ವೈಶಿಷ್ಯವೇನೆಂದರೆ ಏಕದೇವತ್ವ ಸಿದ್ಧಾಂತವಾಗಿದೆ. ಇದು ಇತರ ಯಾವುದೇ ಧರ್ಮದಲ್ಲಿ ನಮಗೆ ಕಾಣಲು ಸಾಧ್ಯವಿಲ್ಲ.
  ಇಂದು ಮಾಧ್ಯಮಗಳು ಇಸ್ಲಾಮಿಗೆ ವಿರುದ್ಧವಾಗಿ ಪ್ರಚಾರ ಮಾಡುತ್ತಿವೆ. ಅದು ಭಯೋತ್ಪಾದಕ ಧರ್ಮವಾಗಿ ಪರಿಚಯಿಸುತ್ತಿದೆ. ಇದು ನಿಮ್ಮ ಮೇಲೆ ಯಾವುದೇ ಪ್ರಭಾವ ಬೀರಿಲ್ಲವೇ?
  ನಾನು ಇಸ್ಲಾಮ್ ಸ್ವೀಕರಿಸಲು ಇಸ್ಲಾಮಿನ ವಿರುದ್ಧ ಪ್ರಚಾರವಾಗಿದ್ದ ಸುಳ್ಳಾರೋಪಗಳೂ, ಅಪಪ್ರಚಾರಗಳೂ ಕೂಡಾ ಕಾರಣವಾಗಿವೆ. ಯಾಕೆಂದರೆ ನಾನು ಇಸ್ಲಾಮಿನ ಕುರಿತು ಅಧ್ಯಯನ ನಡೆಸಿದಾಗ ಆ ಆರೋಪಗಳೆಲ್ಲ ಸುಳ್ಳಾಗಿದ್ದವು. ಇಸ್ಲಾಮ್ ಮಾನವೀಯತೆಯ ಮತ್ತು ಶಾಂತಿಯ ಏಕೈಕ ಧರ್ಮವಾಗಿದ್ದೆ ಎಂದು ನಾನು ಬಹಳ ಅಭಿಮಾನದಿಂದ ಹೇಳುತ್ತೇನೆ. ಇಸ್ಲಾಮಿನಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ.
  ಪೂಜಾರವರೇ, ನಿಮಗೆ ಚಲನಚಿತ್ರ ರಂಗದಿಂದ ವಿರೋಧಗಳು ವ್ಯಕ್ತವಾಗಿದೆ. ನೀವು ಅವರಿಂದ ಅವಮಾನಕ್ಕೆ ಒಳಗಾಗಿದ್ದೀರಿ. ಇದರಿಂದಾಗಿ ಒಮ್ಮೆ ನೀವು ಆತ್ಮಹತ್ಯೆಗೆ ಕೂಡಾ ಯತ್ನಿಸಿದ್ದೀರಿ. ಇದರ ಕುರಿತು ವಿವರಿಸುವಿರಾ?
 ವಾರ್ತಾ ಮಾಧ್ಯಮಗಳು ನನ್ನ ವೈಯಕ್ತಿಕ ಜೀವನವನ್ನು ಹೀಯಾಳಿಸಿದೇ. ನನ್ನ ವಿರುದ್ಧ ಆರೋಪ ಹೊರಡಿಸಿವೆ. ಆದರೆ ನಾನು ಅವರನ್ನು ಶಪಿಸುತ್ತಿಲ್ಲ. ನನ್ನ ಜೀವನದಲ್ಲಿ ಮೂರು ವಿವಾಹಗಳು ನಡೆದಿವೆ. ಆದರೆ ಅವೆಲ್ಲವೂ ವಿಚ್ಛೇಧನದಲ್ಲಿ ಪರ್ಯಾವಸಾನವಾಯಿತು. ನನಗೆ ನನ್ನ ವೊದಲ ಪತಿಯಿಂದ ಲಭಿಸಿದ ಓರ್ವ ಮಗನಿದ್ದಾನೆ. ಅವನು ಈಗ ನನ್ನ ತಾಯಿಯೊಂದಿಗೆ ಜೀವಿಸುತ್ತಿದ್ದಾನೆ. ಮಾಧ್ಯಮಗಳು ನನ್ನ ವಿರುದ್ಧ ಕಪೋಲಕಲ್ಪಿತವಾದ ವಿಚಾರಗಳನ್ನು ಪ್ರಚಾರ ಮಾಡಿದವು. ನಾನು ಇದೆಲ್ಲ ಮಾಡಿದ್ದು ಖ್ಯಾತಿ ಗಳಿಸೆಲಿಕೈ ಮಾಡಿದೆ ಎಂದು ಜನರಾಡಿಕೊಳ್ಳಲು ಪ್ರಾರಂಭಿಸಿದರು. ಬಳಿಕ ಇಸ್ಲಾಮ್ ಸ್ವೀಕರಿಸಿದೆ. ನಾನು ನನ್ನ ಹಿಂದಿನ ಜೀವನವನ್ನು ಮರೆಯಲು ಯತ್ನಿಸುತ್ತೇನೆ. ಯಾಕೆಂದರೆ ಈಗ ನಾನು ಶಾಂತ ಮತ್ತು ಸಭ್ಯ ಜೀವನ ನಡೆಸುತ್ತಿದ್ದೇನೆ.
  ಪೂಜಾರವರೇ, ನೀವು ಇಸ್ಲಾಮ್ ಸ್ವೀಕರಿಸಿದ ಬಳಿಕ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ನೀವು ಈಗ ಸ್ಕಾರ್ಫ್ ಧರಿಸುತ್ತೀರಿ. ಮದ್ಯಪಾನ ಮತ್ತು ಧೂಮಪಾನವನ್ನು ವರ್ಜಿಸಿದ್ದೀರಿ. ಇದರ ಕುರಿತು...?
 ದಯವಿಟ್ಟು ನನ್ನನ್ನು ಪೂಜಾ ಎಂದು ಕರೆಯಬೇಡಿ. ಪೂಜಾ ನನ್ನ ಹಿಂದಿನ ಹೆಸರಾಗಿದೆ. ಈಗ ನಾನು ‘ಅಮ್ನ ಫಾರೂಖಿ’ ಆಗಿದ್ದೇನೆ. ಇಸ್ಲಾಮ್ ಸ್ವೀಕಾರಕ್ಕಿಂತ ಮುಂಚೆ ನನ್ನ ಜೀವನವು ಸಂಕಷ್ಟಗಳಿಂದ ಕೂಡಿತ್ತು. ಆಗ ಅವುಗಳಿಂದ ತಾತ್ಕಾಲಿಕ ಮುಕ್ತಿ ಹೊಂದಲು ಮದ್ಯ ಸೇವಿಸುತ್ತಿದ್ದೆ. ಆದರೆ ಎಂದೂ ನಾನು ಮಾನಸಿಕ ಸೀಮಿತ ಕಳೆದುಕೊಳ್ಳುವಷ್ಟು ಮದ್ಯಪಾನ ಮಾಡುತ್ತಿರಲಿಲ್ಲ. ಈಗ ನಾನು ಅವುಗಳ ಪರಿಹಾರಕ್ಕಾಗಿ ದೇವನೊಂದಿಗೆ ಪ್ರಾರ್ಥಿಸುತ್ತೇನೆ.
  ಇಸ್ಲಾಮಿನಲ್ಲಿ ಮಹಿಳೆಯರ ದೇಹ ಪ್ರದರ್ಶನವೂ, ಅದೇ ರೀತಿಯ ಹಾಡು-ಕುಣಿತಗಳೂ ವಿರೋಧಿಸಲ್ಪಟ್ಟಿವೆ. ಈ ನಿಯಮವನ್ನು ನೀವು ಪಾಲಿಸುತ್ತಿದ್ದೀರಾ?
  ನಾನು ಇಸ್ಲಾಮಿಗೆ ಮತಾಂತರಗೊಂಡಾಗ ಎಲ್ಲಾ ಸಿನಿಮಾ ನಿರ್ಮಾಪಕರು ನನ್ನೊಂದಿಗೆ ಸಂಬಂಧವನ್ನು ಕಡಿದುಕೊಂಡರು. ಸಂಗೀತವು ನನ್ನ ರಕ್ತದಲ್ಲಿ ಬೆರೆತುಹೋಗಿದೆ. ಆದ್ದರಿಂದ ನಾನು ಹೊಟೇಲುಗಳಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತೇನೆ. ಅದೂ ಕೂಡಾ ಹಿಜಾಬ್ ಧರಿಸಿಯೇ. ಇನ್ನು ನಾನು ಅದನ್ನೂ ವರ್ಜಿಸಲು ತೀರ್ಮಾನಿಸಿದ್ದೇನೆ.
  ನೀವು ಇಸ್ಲಾಮ್ ಸ್ವೀಕರಿಸಲಿಕ್ಕಿರುವ ಪ್ರೇರಣೆ ಏನು?
  ನನ್ನ ಕೆಲವು ಬೌದ್ಧ ಗೆಳೆಯ-ಗೆಳತಿಯರು ಇಸ್ಲಾಮಿಗೆ ಮತಾಂತರಗೊಂಡಿದ್ದರು. ಅವರು ನನ್ನನ್ನು ಇಸ್ಲಾಮಿಗೆ ಪ್ರವೇಶಿಸಲು ನಿರಂತರವಾಗಿ ಒತ್ತಾಯಪಡಿಸುತ್ತಿದ್ದರು. ಮತ್ತು ಯಾರನ್ನಾದರೂ ಇಸ್ಲಾಮ್ ಕಲಿಸಲು ನೇಮಿಸಬೇಕು ಎಂದು ಹೇಳುತ್ತಿದ್ದರು. ಅವರ ಒತ್ತಾಯಕ್ಕೆ ಮಣಿದು ನಾನು ಓರ್ವ ಮುಸ್ಲಿಮ್ ಗೆಳೆಯನಿಂದ ಇಸ್ಲಾಮನ್ನು ಕಲಿಯಲು ಪ್ರಾರಂಭಿಸಿದೆ. ಅವನು ಕಲಿಸಿದ ಒಂದು ವಿಚಾರವು ನನ್ನನ್ನು ಅತಿಯಾಗಿ ಪ್ರೇರೇಪಿಸಿತು. ಅದೇನೆಂದರೆ “ಈ ಜಗತ್ತಿನಲ್ಲಿರುವ ಯಾವುದೇ ಮನುಷ್ಯನಿಗೆ ಹೆದರಿ ಪಾಪಕೃತ್ಯಗಳನ್ನೆಸಗಬಾರದು. ಹೆದರುವುದಿದ್ದರೆ ಅದು ಅಲ್ಲಾಹನನ್ನು ಮಾತ್ರ” ಎಂಬುದಾಗಿದೆ. ಅಂದಿನಿಂದ ನಾನು ಇಸ್ಲಾಮ್ ಸ್ವೀಕರಿಸಲು ತೀರ್ಮಾನಿಸಿದೆ.
  ನೀವು ಇಸ್ಲಾಮ್ ಸ್ವೀಕರಿಸಿದ್ದಕ್ಕೆ ನಿಮ್ಮ ಮನೆಯವರಿಂದ ವಿರೋಧ ವ್ಯಕ್ತವಾಗಿದೆಯೇ?
  ನಾನು ಇಸ್ಲಾಮ್ ಸ್ವೀಕರಿಸಿದ ನಂತರ ನನ್ನ ಕುಟುಂಬಿಕರಿಗೆ ತಿಳಿಸಿದೆ. ಪ್ರಸ್ತುತ ಅವರು ಡಾರ್ಜಿಲಿಂಗ್ನಲ್ಲಿ ನೆಲೆಸಿದ್ದಾರೆ. ನನ್ನ ತಾಯಿ ನನಗೆ ಸಂಪೂರ್ಣ ಸಹಕಾರ ನೀಡಿದರು. “ಮಗಳೇ, ನೀನು ಸರಿಯಾದ ಮಾರ್ಗವನ್ನು ಸ್ವೀಕರಿಸಿದ್ದಿ. ಯಾಕೆಂದರೆ ನೀನು ಇಷ್ಟು ಸಂತೋಷದಿಂದಿರುವುದನ್ನು ನಾನು ಈ ವೊದಲು ನೋಡಲೇ” ಇಲ್ಲ ಎಂದು ಅವರು ಹೇಳಿದ್ದಾರೆ. ನನ್ನ ಇತರ ಬಂಧುಗಳು ಕೂಡಾ ನನ್ನ ಕುಟುಂಬಿಕರನ್ನು ಅಭಿನಂದಿಸಿದ್ದಾರೆ.
  ನೀವು ಎಲ್ಲೋ ಓರ್ವ ಮುಸ್ಲಿಮನನ್ನು ಪ್ರೀತಿಸಿ ಮದುವೆಯಾಗಿದ್ದೀರಿ. ಆದ್ದರಿಂದ ನೀವು ಇಸ್ಲಾಮ್ ಸ್ವೀಕಾರ ಮಾಡಿದ್ದು ಎಂದು ಮಾಧ್ಯಮಗಳು ಹೇಳುತ್ತಿವೆ. ಇದು ಎಷ್ಟರ ಮಟ್ಟಿಗೆ ಸರಿ?
  ಇದು ಆಧಾರ ರಹಿತ ಆರೋಪವಾಗಿದೆ. ನನಗೆ ಕೆಲವು ಮುಸ್ಲಿಮ್ ಗೆಳೆಯ-ಗೆಳತಿಯರಿದ್ದಾರೆ. ಅಂದರೆ ಇದರರ್ಥ ನಾನು ಪ್ರಿತಿಸುತ್ತಿದ್ದೇನೆ ಮತ್ತು ಅವನನ್ನು ಮದುವೆಯಾಗುತ್ತೇನೆ ಎಂದಾಗುತ್ತದೆಯೇ? ಈಗ ನಾನು ಅಭಿಮಾನದಿಂದ ಹೇಳುತ್ತಿದ್ದೇನೆ. “ನಾನು ಮುಸ್ಲಿಮಳಾಗಿದ್ದೇನೆ. ಆದ್ದರಿಂದ ನಾನು ಓರ್ವ ಉತ್ತಮ ಮುಸ್ಲಿಮನನ್ನೇ ಮದುವೆಯಾಗುತ್ತೇನೆ” ನಾನು ಜನರಿಗೆ ತಿಳಿಸುವ ಸಂದೇಶವೇನೆಂದರೆ ಇತರರ ಮಾತುಕೇಳಿ ಒಂದು ವಿಷಯದಲ್ಲಿ ತೀರ್ಮಾನ ಕೈಗೊಳ್ಳಬಾರದು.
 ನಾವು ಸ್ವತಃ ಆ ವಿಷಯದ ಬಗ್ಗೆ ಪರೀಕ್ಷಿಸಬೇಕು. ಯಾಕೆಂದರೆ ಇತರರ ಮಾತು ಸುಳ್ಳಾಗಿರಬಹುದು.

ಸೋಮವಾರ, ಜೂನ್ 04, 2012

ಆಪತ್ಕಾಲದಲ್ಲಿ ಆಪತ್ಬಾಂಧವರಾಗುವವರು



ನಮ್ಮ ಮನೆಯಲ್ಲಿ ನಮಗೆ ಏನಾದರೂ ಸಂಕಷ್ಟ ಉಂಟಾದಾಗ ನೆರವಿಗೆ ಧಾವಿಸುವವರು ನೆರೆಮನೆಯ ಮಂದಿಯಾಗಿದ್ದಾರೆ. ನಮ್ಮ ಸುಖಗಳಲ್ಲೂ ದುಃಖಗಳಲ್ಲೂ ಅವರು ಭಾಗಿಯಾಗುತ್ತಾರೆ. ನೆರೆಕರೆಯವರಿದ್ದರೆ ನಮಗೆ ಒಂದು ರೀತಿಯ ಭದ್ರತಾ ಭಾವ ಮನದಲ್ಲಿ ಮೂಡುತ್ತದೆ. ನಾವು ಹೊರಗಡೆ ಹೋಗುವಾಗ ಮನೆಯ ಬೀಗದ ಕೈಯನ್ನೂ ನೆರೆಯವರ ಕೈಗೆ ಒಪ್ಪಿಸಿ ಹೋಗುತ್ತೇವೆ. ಮನೆಗೆ ನೆಂಟರು ಬಂದಾಗ ಸಕ್ಕರೆಯೋ ಇನ್ನಾವುದೋ ವಸ್ತುಗಳು ಮುಗಿದದ್ದು ಗೊತ್ತಾದರೆ ನಾವು ಲೋಟ ಹಿಡಿದು ಎರವಲು ಪಡೆಯಲು ನೆರೆಮನೆಗೆ ಓಡುತ್ತೇವೆ. ಒಟ್ಟಿನಲ್ಲಿ ಜೀವನದ ಹಲವಾರು ಸಂದರ್ಭಗಳಲ್ಲಿ ಸಂಕಷ್ಟವೆರಗಿದಾಗ ನಮಗೆ ಸಹಾಯ ಹಸ್ತ ಚಾಚುವವರು ನೆರೆಕರೆಯವರೇ ಆಗಿದ್ದಾರೆ. ಆದ್ದರಿಂದ ನಮಗೆ ಅವರ ಮೇಲೆ ಹಲವಾರು ಬಾಧ್ಯತೆಗಳಿವೆ. ಆ ಭಾದ್ಯತೆಗಳ ಕುರಿತು ನಾವು ಜಾಣ ಮರೆವು ಪ್ರದರ್ಶಿಸುತ್ತಿದ್ದೇವೆ.
ನೆರೆಕರೆಯವರೊಂದಿಗಿನ ವರ್ತನೆಗೆ ಕುರಾನ್ ಹೆಚ್ಚಿನ ಮಹತ್ವ ನೀಡಿದೆ. ಅಲ್ಲಾಹನೊಂದಿಗಿನ ಆರಾಧನೆಯ ಬಳಿಕ ಪರಸ್ಪರರ ಸಂಬಂಧಕ್ಕೆ  ಕುರಾನ್   ಮಹತ್ವ ನೀಡಿದ್ದನ್ನೂ ನಮಗೆ ಕಾಣಲು ಸಾಧ್ಯ. ಅಲ್ಲಾಹನು ಅನ್ನಿಸಾ ಅಧ್ಯಾಯದ 36ನೇ ಸೂಕ್ತದಲ್ಲಿ ಈ ರೀತಿ ಹೇಳುತ್ತಾನೆ, “ನೀವೆಲ್ಲರೂ ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ. ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಬೇಡಿರಿ. ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಿರಿ. ಸಂಬಂಧಿಕರೊಂದಿಗೂ ನಿರ್ಗತಿಕರೊಂದಿಗೂ ಆಪ್ತರಾದ ನೆರೆಕರೆಯವರೊಂದಿಗೂ ಅಪರಿಚಿತ ನೆರೆಹೊರೆಯವರೊಂದಿಗೂ ಅನುಚರರೊಂದಿಗೂ ಪ್ರಯಾಣಿಕರೊಂದಿಗೂ ನಿಮ್ಮ ಅಧೀನದಲ್ಲಿರುವ ದಾಸದಾಸಿಯರೊಂದಿಗೆ ಉತ್ತಮ ರೀತಿಯಿಂದ ವರ್ತಿಸಿರಿ. ದುರಹಂಕಾರ ಹೊಂದಿದ ಗರ್ವಿಷ್ಟನನ್ನೂ ಆತ್ಮಸ್ತುತಿಗೈಯುವವನನ್ನೂ ಅಲ್ಲಾಹನು ಇಷ್ಟಪಡುವುದಿಲ್ಲ.”
ನೆರೆಕರೆಯವರೊಂದಿಗಿನ ಬಾಧ್ಯತೆಯ ಕುರಿತು ತ್ವಬ್ರಾನಿ ಉದ್ಧರಿಸಿರುವ ಒಂದು ಪ್ರವಾದಿ ವಚನವು ಇಂತಿದೆ. “ಅವನು ರೋಗಿಯಾದರೆ ಅವನನ್ನು ಸಂದರ್ಶಿಸುವುದು ಮತ್ತು ಉಪಚರಿಸುವುದು, ಅವನು ಮರಣ ಹೊಂದಿದರೆ ಅವನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದು, ಅವನು ಸಾಲ ಕೇಳಿದರೆ ನೀಡುವುದು, ಅವನ ತಪ್ಪುಗಳನ್ನು ಕ್ಷಮಿಸುವುದು, ಮನೆ ನಿರ್ಮಿಸುವಾಗ ನೆರೆಮನೆಗಿರುವ ವಾಯು ಸಂಚಾರಕ್ಕೆ ತಡೆಯಾಗುವ ರೀತಿಯಲ್ಲಿ ನಿರ್ಮಿಸದಿರುವುದು, ಅಡುಗೆ ಮಾಡುವಾಗ ಅದರ ಗಂಧವು ನೆರೆಮನೆಯವನಿಗೆ ಉಪದ್ರವ ನೀಡದಂತಿರುವುದು. ಏನಾದರೂ ತಿಂಡಿ ತಿನಿಸುಗಳನ್ನು ತಂದರೆ ನೆರೆಮನೆಯವನಿಗೂ ನೀಡುವುದು.” ಕಂಸುಲ್ ಉಮ್ಮಾಲ್ ಎಂಬ ಗ್ರಂಥದಲ್ಲಿ ಹೀಗೆ ಉದ್ಧರಿಸಲಾಗಿದೆ, “ನೀವು ಹಣ್ಣನ್ನು ಖರೀದಿಸಿ ತಂದರೆ ಅದರಿಂದ ಒಂದು ಪಾಲನ್ನು ನೆರೆಮನೆಯವನಿಗೆ ನೀಡಬೇಕು. ಹಾಗೆ ನೀಡಲು ಸಾಧ್ಯವಿಲ್ಲದಿದ್ದರೆ ಅವರಿಗೆ ತೋರಿಸಬಾರದು.”
ಆದರೆ ಇಂದು ನಾವು ಈ ಎಲ್ಲಾ ಬಾಧ್ಯತೆಯ ಕುರಿತು ನಿರ್ಲಕ್ಷ್ಯರಾಗಿದ್ದೇವೆ. ಇಂದು ನಮ್ಮ ಜೀವನವು ಸಂಕೀರ್ಣಗೊಂಡು ದೊಡ್ಡ ದೊಡ್ಡ ‘ಫ್ಲಾಟ್’ಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಸೀಮಿತಗೊಂಡಿದ್ದೇವೆ. ಆಚೀಚೆ ಕಣ್ಣೆತ್ತಿಯೂ ನೋಡದೆ ಕೇವಲ ಪತ್ನಿ ಮಕ್ಕಳೊಂದಿಗೆ ಲೋಕದ ಪರಿವೇ ಇಲ್ಲದೆ ಕಾಲ ಕಳೆಯುವಾಗ ನೆರೆಕರೆಯಲ್ಲಿ ಏನೇ ಸಂಭವಿಸಿದರೂ ತಿಳಿಯದ ಪರಿಸ್ಥಿತಿ ಇಂದು ಬಂದೊದಗಿದೆ. ಇತ್ತೀಚೆಗೆ ಒಂದು ಫ್ಲಾಟಿನಲ್ಲಿ ಕೆಳಗಿನ ಅಂತಸ್ತಿನಲ್ಲಿರುವ ಒಂದು ಮನೆಯಲ್ಲಿ ಓರ್ವರು ಮರಣ ಹೊಂದಿ ಅವರ ಶವ ಸಂಸ್ಕಾರ ನಡೆದು ಸಂಜೆಯ ವರೆಗೂ ಮೇಲಿನ ಅಂತಸ್ತಿನ ಮನೆಯವರಿಗೆ ತಿಳಿಯದ ಪ್ರಸಂಗವೂ ನಡೆದಿದೆ.
ನೀವೇ ಆಲೋಚಿಸಿ ನೋಡಿ, ಬದುಕು ಎಷ್ಟು ಸಂಕೀರ್ಣಗೊಂಡಿದೆ! ನೆರೆಮನೆಯ ಮಕ್ಕಳು ನಮ್ಮ ಮಕ್ಕಳೊಂದಿಗಿರುವಾಗ ಕೇವಲ ನಮ್ಮ ಮಕ್ಕಳಿಗೆ ಮಾತ್ರ ತಿಂಡಿ-ತಿನಿಸನ್ನು ನೀಡುವ ಎಷ್ಟೋ ಹೆತ್ತವರಿದ್ದಾರೆ. ನಾವು ನಮ್ಮ ಸ್ಥಳದಲ್ಲಿಯೇ ಮನೆ ನಿರ್ಮಿಸುತ್ತಿದ್ದರೂ ಅದರಿಂದ ನೆರೆಮನೆಗೆ ಉಪದ್ರವ ಉಂಟಾಗದಿರುವುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಇಂದು ಯಾರು ಕೂಡಾ ಮುಂದಾಗುತ್ತಿಲ್ಲ. ಈ ಸ್ವಭಾವಗಳು ಯಾವನೇ ವಿಶ್ವಾಸಿಗೆ ಭೂಷಣವಲ್ಲ. ಎಲ್ಲ ಆರಾಧನಾ ಕರ್ಮಗಳನ್ನು ಭಕ್ತಿಯಿಂದ ನಿರ್ವಹಿಸುವ ಏಕದೇವತ್ವಕ್ಕೆ ಎಲ್ಲಿಲ್ಲದ ಮಹತ್ವ ನೀಡುತ್ತಿರುವ ಮಂದಿ ನೆರೆಮನೆಯವರೊಂದಿಗಿನ ವರ್ತನೆಯ ವಿಚಾರದಲ್ಲಿ ಬಹಳ ಹಿಂದಿದ್ದಾರೆ.
ನೆರೆಕರೆಯವರಿಗೆ ಕಾಟ ನೀಡುವುದು ಮಾತ್ರವಲ್ಲ, ಅವರಿಗೆ ಉಪಕಾರ ಮಾಡದಿರುವುದು ಕೂಡಾ ಪಾಪವಾಗಿದೆ. ಈ ಕುರಿತು ನಾಳೆ ಪರಲೋಕದಲ್ಲಿ ನೆರೆಮನೆಯವನು ಅಲ್ಲಾಹನ ಮುಂದೆ ನಮ್ಮ ವಿರುದ್ಧ ಸಾಕ್ಷಿ ನುಡಿಯುವನು. ಪ್ರವಾದಿ(ಸ) ಹೇಳಿದರು, “ಅಂತ್ಯ ದಿನದಲ್ಲಿ ಎಷ್ಟೋ ಜನರು ತಮ್ಮ ನೆರೆಕರೆಯವರೊಂದಿಗೆ ಹಾಜರಾಗುತ್ತಾರೆ. ನೆರೆಮನೆಯವನು ಹೇಳುವನು, ಓ ನನ್ನ ಪ್ರಭೂ, ಇವನು ನನಗಾಗಿ ತನ್ನ ಬಾಗಿಲನ್ನು ಮುಚ್ಚಿದ್ದಾನೆ. ತನ್ನ ಒಳಿತುಗಳನ್ನು ನನಗೆ ತಡೆದಿದ್ದಾನೆ.”
ಇಂದು ಹಲವರು, ಮುಸ್ಲಿಮರು ಮಾತ್ರ ನೆರೆಕರೆಯವರು ಎಂದು ಭಾವಿಸಿದ್ದಾರೆ. ಮುಸ್ಲಿಮೇತರರು ನೆರೆಕರೆಯ ಪಟ್ಟಿಗೆ ಸೇರಿದವರಲ್ಲ ಎಂದು ತೀರ್ಮಾನಿಸಿ ಬಿಟ್ಟಿದ್ದಾರೆ. ಆದರೆ ಇದು ತಪ್ಪಾದ ಕಲ್ಪನೆಯಾಗಿದೆ. ಮನೆಯ ಸುತ್ತ ವಾಸಿಸುವ ಯಾರೇ ಆದರೂ ಅವರು ನೆರೆಕರೆಯ ಸಾಲಿಗೆ ಸೇರುತ್ತಾರೆ. ಅವರೊಂದಿಗೆ ಬಾಧ್ಯತೆಯ ವಿಚಾರದಲ್ಲಿ ಹೆಚ್ಚು ಕಡಿಮೆ ಇದ್ದರೂ ನೆರೆಕರೆಯವರು ಎಂಬ ಸ್ಥಾನದಿಂದ ಅವರು ಹೊರಗುಳಿಯುವುದಿಲ್ಲ. ನಮ್ಮ ನೆರೆಯಲ್ಲಿರುವ ಒಂದೆರಡು ಮನೆಗಳನ್ನು ನೆರೆಮನೆಯವರ ಸಾಲಿಗೆ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತೇವೆ. ಆದರೆ ಪ್ರವಾದಿ(ಸ) ಒಂದು ಮನೆಯ ಸುತ್ತಮುತ್ತ ಇರುವ 40 ಮನೆಗಳು ನೆರೆಕರೆಯವರಾಗಿದ್ದಾರೆ ಎಂದು ಹೇಳಿದ್ದಾರೆ.
ಮುಸ್ನದ್ ಬಸ್ಸಾರ್ ವರದಿ ಮಾಡಿರುವ ಒಂದು ಪ್ರವಾದಿ ವಚನ ಹೀಗಿದೆ, “ನೆರೆಮನೆಯವರಲ್ಲಿ ಮೂರು ವಿಭಾಗಗಳಿವೆ. ಒಂದನೇ ವಿಭಾಗದವರಲ್ಲಿ ಒಂದೇ ಬಾಧ್ಯತೆ. ಎರಡನೇ ವಿಭಾಗದವರಲ್ಲಿ ಎರಡು ಬಾಧ್ಯತೆಗಳಿವೆ. ಮೂರನೇ ವಿಭಾಗದವರಲ್ಲಿ ಮೂರು ಬಾಧ್ಯತೆಗಳಿವೆ. ಒಂದನೇ ವಿಭಾಗದವರಲ್ಲಿ ನೆರೆಮನೆಯವರು ಎಂಬ ಬಾಧ್ಯತೆ ಮಾತ್ರ. ಎರಡನೇ ವಿಭಾಗದವರು ಮುಸ್ಲಿಮರಾಗಿದ್ದಾರೆ. ಅವರೊಂದಿಗೆ ನೆರೆಮನೆಯವರು ಎಂಬ ಬಾಧ್ಯತೆಯೊಂದಿಗೆ ಮುಸಲ್ಮಾನರು ಎಂಬ ಬಾಧ್ಯತೆಯೂ ಇದೆ. ಮೂರನೇ ವಿಭಾಗದವರು ಮುಸ್ಲಿಮರಾದ ಸಂಬಂಧಿಕರು. ಅವರೊಂದಿಗೆ ಮುಸ್ಲಿಮರು, ಸಂಬಂಧಿಕರು ಮತ್ತು ನೆರೆಮನೆಯವರು ಎಂಬ ನೆಲೆಯಲ್ಲಿ ಮೂರು ಬಾಧ್ಯತೆಗಳಿವೆ.”
ಆದರೆ ಇಂದು ಇವೆಲ್ಲದಕ್ಕೆ ಭಿನ್ನವಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೆರೆಮನೆಯವರಿಗೆ ಸದಾ ಅಪಚಾರ ಮಾಡುವ ಎಷ್ಟೋ ಮಂದಿಯಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೆ ಪರಸ್ಪರ ಜಗಳವಾಡುತ್ತಾರೆ. ನೆರೆಮನೆಯ ಕೋಳಿ ಅಥವಾ ಆಡು ನಮ್ಮ ಮನೆಗೆ ಬಂದರೆ ಅಲ್ಲಿ ದೊಡ್ಡ ಯುದ್ಧವೇರ್ಪಡುತ್ತದೆ. ಬುದ್ಧಿ ಇಲ್ಲದ ಜಾನುವಾರುಗಳು ಮಾಡುವ ಕೃತ್ಯಕ್ಕೆ ಬುದ್ಧಿ ಇರುವ ಮಾನವರು ಸಂಬಂಧಗಳನ್ನೇ ಮುರಿದುಕೊಳ್ಳುತ್ತಾರೆ. ಆದರೆ ಇದು ವಿಶ್ವಾಸಿಗೆ ತರವಲ್ಲ. ನೆರೆಮನೆಯವರೊಂದಿಗೆ ಉತ್ತಮವಾಗಿ ವರ್ತಿಸದವನು ವಿಶ್ವಾಸಿಯಾಗಲಿಕ್ಕಿಲ್ಲ. ಅವನ ಕರ್ಮಗಳು ನಿಶ್ಫಲವಾಗಬಹುದು. ಆದ್ದರಿಂದ ನಾವು ನಮ್ಮ ನೆರೆಕರೆಯವರೊಂದಿಗೆ ಉತ್ತಮವಾಗಿ ವರ್ತಿಸಬೇಕು ಮತ್ತು ಅವರೊಂದಿಗಿನ ಬಾಧ್ಯತೆಗಳನ್ನು ಪೂರೈಸಬೇಕು. ಆಪತ್ಕಾಲದಲ್ಲಿ ಆಪತ್ಭಾಂಧವರಾಗುವುದು ಅವರಲ್ಲವೇ?