ಬುಧವಾರ, ಡಿಸೆಂಬರ್ 05, 2012

ಸೆಯ್ಯದ್ ಕುತುಬರ ಮರಣದ ಕ್ಷಣಗಳು


 1966 ಆಗಸ್ಟ್ 29, 20ನೇ ಶತಮಾನದಲ್ಲಿ ಇಸ್ಲಾಮೀ  ಚಳುವಳಿಗೆ ಕಿಡಿ ಹೊತ್ತಿಸಿದ ಅದರ ದಿಕ್ಸೂಚಿಯಂತಿದ್ದ ಸಯ್ಯದ್  ಕುತುಬ್‍ರನ್ನು ಈಜಿಪ್ಟಿನ ಅಧ್ಯಕ್ಷರಾಗಿದ್ದ ಜಮಾಲ್ ಅಬ್ದುನ್ನಾಸಿರ್ ಜೈಲಿಗೆ ತಳ್ಳಿದ ದಿನವಾಗಿತ್ತದು. ಚಿಂತಕ, ಸಾಹಿತಿ, ಬರಹಗಾರ, ಗ್ರಂಥಕರ್ತ, ಇಖ್ವಾನುಲ್ ಮುಸ್ಲಿಮೂನ್ ಸಂಘಟನೆಯ ಮುಖ್ಯಧಾರೆ ‘ಫಿ ಝಿಲಾಲಿಲ್’ ಕುರ್‍ಆನ್ ಎಂಬ ಪ್ರಸಿದ್ಧ ಕುರ್‍ಆನ್ ವ್ಯಾಖ್ಯಾನ ಗ್ರಂಥದ ರಚನಾಕಾರ ಎಂಬ ನೆಲೆಯಲ್ಲಿ ಜಗತ್ತು ಒಪ್ಪಿಕೊಂಡ ಆ ಸಯ್ಯದ್ ಕುತುಬ್‍ರನ್ನು ಗಲ್ಲಿಗೇರಿಸಿ ನಾಲ್ಕೂವರೆ ದಶಕಗಳು ಕಳೆದು ಇಂದು ಕೂಡಾ ಅವರ ಚಿಂತನೆಗಳು ರಚನೆಗಳು ಎಲ್ಲೆಂದರಲ್ಲಿ ಚರ್ಚೆಗಳಿಗೆ ಗ್ರಾಸವಾಗುತ್ತವೆ. ಸಯ್ಯದ್  ಕುತುಬ್‍ರ ಚಿಂತನೆ ಹಾಗೂ ಧೋರಣೆಗಳಲ್ಲಿ ಬೆಂಬಲ ಸೂಚಿಸದಿರುವವರೂ ಅವರು ಇಸ್ಲಾಮಿಗೆ ನೀಡಿರುವ ಕೊಡುಗೆ ಗಳನ್ನು ಅಲ್ಲಗಳೆಯಲಿಲ್ಲ. ಒಂದು ಕಾಲದಲ್ಲಿ ದಂತಕತೆಯಾಗಿದ್ದ ಸಯ್ಯದ್ ಕುತುಬ್‍ರಂತಹ ಪ್ರತಿಭಾಶಾಲಿಗಳನ್ನು ನೈಲ್ ನದಿಯ ತೀರವು ಜಗತ್ತಿಗೆ ಕೊಡುಗೆಯಾಗಿ ನೀಡಿತು. ಇಖ್ವಾನುಲ್ ಮುಸ್ಲಿಮೂನ್‍ನ ಸ್ಥಾಪನೆಯಾದಂದಿನಿಂದಲೇ ಆ ಸಂಘಟನೆಯ ಚುಕ್ಕಾಣಿ ಹಿಡಿದ ಸಯ್ಯದ್ ಕುತುಬ್ ‘ಫ್ರೀ ಆಫಿಸರ್ಸ್ ಕ್ಲಬ್’ನಲ್ಲಿ ಸದಸ್ಯತ್ವ ಇರುವ ಏಕೈಕ ಪ್ರಜೆಯಾಗಿದ್ದರು. ಬಳಿಕ ನಿರ್ವಹಣೆ ಸಂಬಂಧಿ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದ್ದರಿಂದ ಅವರು ಅದರಿಂದ ಹೊರಬಂದರು.
1954ರಲ್ಲಿ ಅಲೆಗ್ಸಾಂಡ್ರಿಯಾದ ಬಳಿ ಇರುವ ಮಿನ್‍ಶಿಯಾದಲ್ಲಿ ಅಧ್ಯಕ್ಷ ಜಮಾಲ್ ಅಬ್ದುಲ್ ನಾಸಿರ್‍ರ ಕೊಲೆಯತ್ನ ನಡೆದಾಗ ಅದರಲ್ಲಿ ಇಖ್ವಾನುಲ್ ಮುಸ್ಲಿಮೂನ್‍ನ ಕೈವಾಡವಿದೆ ಎಂದು ಆರೋಪಿಸಿ ಹಲವಾರು ಇಖ್ವಾನೀ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಅವರಲ್ಲಿ ಸಯ್ಯದ್ ಕುತುಬ್ ಕೂಡಾ ಇದ್ದರು. ಅವರಿಗೆ 15 ವರ್ಷಗಳ ಜೈಲು ವಾಸ ವಿಧಿಸಲಾಯಿತು. ಅವರ ಶಿಕ್ಷೆಯ ಅವಧಿಯು 10 ವರ್ಷವಾದಾಗ ಅವರನ್ನು ಮಾಜಿ ಇರಾಕ್ ಅಧ್ಯಕ್ಷ ಅಬ್ದುಸ್ಸಲಾಮ್ ಆರಿಫ್ ಬಿಡುಗಡೆ ಗೊಳಿಸಲು ಪ್ರಯತ್ನಿಸಿ ಯಶಸ್ವಿಯಾದರೂ ಎಂಟು ತಿಂಗಳ ಬಳಿಕ ಮತ್ತೆ ಅಬ್ದುನ್ನಾಸಿರ್ ವಿವಿಧ ಆರೋಪ ಹೊರಿಸಿ ಕುತುಬ್‍ರನ್ನು ಪುನಃ ಜೈಲಿಗಟ್ಟಿದರು. ಭೀಕರ ದೌರ್ಜನ್ಯಗಳಿಗೆ ಸಯ್ಯದ್ ಕುತುಬ್ ಮತ್ತು ಇಖ್ವಾನೀ ಕಾರ್ಯಕರ್ತರು ಬಲಿಯಾದರು. ಪೆÇಲೀಸ್ ಸುಪರಿಡೆಂಟ್ ಬದರ್‍ನ ನೇತೃತ್ವದಲ್ಲಿ ಜರಗಿದ ಕಿರಾತ ದೌರ್ಜನ್ಯಗಳ ಮನಕರಗಿಸುವ ಕಥೆಗಳು ಝೈನಬುಲ್ ಗಝ್ಝಾಲಿಯವರ ಆತ್ಮ ಕಥೆಯಲ್ಲಿ ಪ್ರ್ರಸ್ತಾ ಪಿಸಲಾಗಿದೆ. 1965 ಜುಲೈ 30ರಂದು ತನ್ನ ಸಹೋದರ ಮುಹಮ್ಮದ್ ಕುತುಬ್‍ರ ಬಂಧನದ ವಿರುದ್ಧ ಪ್ರತಿಭಟಿಸಿ ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿಗೆ ಸಯ್ಯದ್ ಕುತುಬ್ ಬರೆದ ಪತ್ರವು ಮತ್ತೆ ಅವರನ್ನು ಬಂಧಿಸಲಿಕ್ಕಿರುವ ನೆಪವಾಯಿತು. ಇಖ್ವಾನುಲ್ ಮುಸ್ಲಿಮೂನ್‍ನ ಇತರ ಏಳು ಮಂದಿಯೊಂದಿಗೆ ಬಂಧಿಸಲ್ಪಟ್ಟ ಸಯ್ಯದ್  ಕುತುಬ್‍ರನ್ನು ಸರಕಾರವು ವಿಚಾರಣೆಯ ನಾಟಕವಾಡಿ ಕೊನೆಗೆ ವಧೆ ಶಿಕ್ಷೆ ವಿಧಿಸಿತು. 1966 ಆಗಸ್ಟ್ 29 ಸೋಮವಾರ ಮುಂಜಾನೆ ಅವರನ್ನು ನೇಣುಗಂಭಕ್ಕೇರಿಸಲಾಯಿತು.
ಗಲ್ಲಿಗೇರಿಸುವ ದಿನ ಸಯ್ಯದ್ ಕುತ್‍ಬ್‍ರೊಂದಿಗೆ ಸೇನಾಧಿ ಕಾರಿಯು “ಶರೀಅತ್ ಕಾನೂನನ್ನು ಜಾರಿಗೊಳಿಸಲಿಕ್ಕಿರುವ ಬೇಡಿಕೆ ಮತ್ತು ಅದಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಸ್ಥಗಿತಗೊಳಿಸಿ ಈ ಶಿಕ್ಷೆಯಿಂದ ಪಾರಾಗಬಹುದಲ್ಲವೇ” ಎಂದು ಕೇಳಿದನು. ಮರಣವು ಕಣ್ಮುಂದೆ ಬಂದು ನಿಂತಿದ್ದರೂ ಸಯ್ಯದ್ ಕುತುಬೆಂಬ ಆ ಧೀರ ಮುಜಾಹಿದ್‍ರು ದಿಟ್ಟವಾಗಿ ಮರುತ್ತರ ನೀಡಿದರು, “ಅಲ್ಲಾಹನಿಗಾಗಿ ರುವ ಕೆಲಸದ ವಿಚಾರದಲ್ಲಿ ನಾನು ಕ್ಷಮೆ ಕೋರಲು ಸಿದ್ಧನಿಲ್ಲ. ನಮಾಝಿನಲ್ಲಿ ಅಲ್ಲಾಹನ ಏಕತ್ವವನ್ನು ಪ್ರತಿಪಾದಿಸುವ ಈ ತೋರು ಬೆರಳಿನಲ್ಲಿ ಅಕ್ರಮಿಯಾದ ಆಡಳಿತಾಧಿಕಾರಿಯ ವಿಧಿಯನ್ನು ಬೆಂಬಲಿಸುವ ಒಂದಕ್ಷರವನ್ನು ಬರೆಯಲು ನಾನು ತಯಾರಿಲ್ಲ.” ಅಧ್ಯಕ್ಷರಿಗೆ ಒಂದು ದಯಾ ಅರ್ಜಿ ಸಲ್ಲಿಸಬಾರದೇ ಎಂದು ಮುಂದಿನ ಪ್ರಶ್ನೆ ಕೇಳಲಾಯಿತು. ಸಯ್ಯದ್ ಕುತುಬ್ ಉತ್ತರಿಸಿದರು. “ನಾನು ಯಾಕೆ ದಯೆ ಕೋರಬೇಕು. ವಾಸ್ತವದಲ್ಲಿ ನಾನು ಈ ತೀರ್ಪಿಗೆ ಅರ್ಹನಾಗಿದ್ದರೆ ಈ ತೀರ್ಪಿನಲ್ಲಿ ನಾನು ಸಂತೃಪ್ತನಾಗಿದ್ದೇನೆ. ಇನ್ನು ಸುಳ್ಳಾರೋಪಗಳ ಹೆಸರಿನಲ್ಲಿ ಈ ತೀರ್ಪಾದರೆ ಒಂದು ಅಸತ್ಯದ ವ್ಯವಸ್ಥೆಗಾಗಿ ಪ್ರಾಣ ಭಿಕ್ಷೆ ಬೇಡಲು ನಾನು ಅಷ್ಟು ಕೀಳುಮಟ್ಟದವನಲ್ಲ.”
ಗಲ್ಲಿಗೇರಿಸುವುದಕ್ಕಿಂತ ಮುಂಚೆ ಶಹಾದತ್ ಕಲಿಮ ಹೇಳಿಕೊಡಲು ಬಂದ ಅಧಿಕಾರಿಯು “ಶಹಾದತ್ ಕಲಿಮ ಹೇಳು” ಎಂದು ಹೇಳಿದನು. ಸಯ್ಯದ್ ಕುತುಬ್ ಕೂಡಲೇ ಪ್ರತಿಕ್ರಿಯಿಸಿದರು. “ಈ ನಾಟಕ ರಂಗವನ್ನು ಪೂರ್ತಿಗೊಳಿಸಲು ನೀವು ಕೂಡಾ ಬಂದು ತಲುಪಿದರಲ್ಲವೇ? ಸಹೋದರಾ. ನೀವು ಉಚ್ಚರಿಸಲು ಹೇಳಿದ `ಲಾ ಇಲಾಹ ಇಲ್ಲಲ್ಲಾಹ್’ನ ಕಾರಣದಿಂದಾಗಿ ನಾವು ಗಲ್ಲಿಗೇರಿಸಲ್ಪಡುತ್ತಿದ್ದೇವೆ. ನಿಮ್ಮ ಆಹಾರಗಳಿಗೂ ಅದೇ `ಲಾ ಇಲಾಹ ಇಲ್ಲಲ್ಲಾಹ್’ ಬೇಕು.”
ಈಜಿಪ್ಟಿನಲ್ಲಿ ಒಂದು ಕಾಲದಲ್ಲಿ ಹೋರಾಟದ ಪ್ರೇರಕ ಶಕ್ತಿಯೂ ಆಗಿದ್ದ ಶೈಖ್ ಅಬ್ದುಲ್ ಹವಿೂದ್ ಕಶಕ್ ತಮ್ಮ ನೆನಪುಗಳನ್ನು ಮೆಲುಕು ಹಾಕುತ್ತಾರೆ. ತನ್ನ ಕೈಕಾಲುಗಳನ್ನು ಬಂಧಿಸಲು ಮುಂದಾದ ಜೈಲ್ ವಾರ್ಡನ್‍ನೊಂದಿಗೆ ಸಯ್ಯದ್  ಕುತುಬ್ ಹೇಳಿದರು. “ಆ ಹಗ್ಗವನ್ನು ನನಗೆ ನೀಡಿ. ನನ್ನ ಕೈಕಾಲು ಗಳನ್ನು ನಾನೇ ಬಂಧಿಸಿಡುವೆನು. ನನ್ನ ಸೃಷ್ಟಿಕರ್ತನ ಸ್ವರ್ಗದಿಂದ ನಾನು ಓಡಿ ಹೋಗುವೆನೇ?”
ನೇಣಿನ ಹಗ್ಗವನ್ನು ಕುತ್ತಿಗೆಗೆ ಬಿಗಿದಾಗ ಸಯ್ಯದ್ ಕುತುಬ್ ಕೊನೆಗೆ ಉಚ್ಚರಿಸಿದ್ದು ಪ್ರವಾದಿ ನೂಹ್(ಅ) ಕೊನೆಗೆ ಉಚ್ಚರಿಸಿದ ಅದೇ ಶಬ್ದಗಳಾಗಿತ್ತು. ‘ರಬ್ಬಿ ಇನ್ನೀ ಮಗ್‍ಲೂಬುನ್ ಪಂತಸ್ವಿರ್’ (ನನ್ನ ಪ್ರಭು! ನಾನು ಶರಣಾಗಿದ್ದೇನೆ. ಇನ್ನು ನೀನು ಪ್ರತಿಕಾರ ನಡೆಸು).
“ನೇಣು ಕಂಬ ನೆಟ್ಟ ಕೊಠಡಿಯ ಮುಂದಿನ ಕೊನೆಯ ಕ್ಷಣಗಳು. ಅಪರಾಧಿಯ ಹೆಸರನ್ನು ಕೂಗಿ ಕರೆಯಲಾಯಿತು. ಸಯ್ಯದ್ ಕುತುಬ್ ಇಬ್ರಾಹೀಮ್ 60 ವರ್ಷ ಕೆಲಸ: ಮಾಜಿ ಪ್ರೊಫೆಸರ್, ಅಪರಾಧ: ಸರಕಾರವನ್ನು  ಬುಡಮೇಲು ಗೊಳಿಸುವ ಯತ್ನ. ಸಯ್ಯದ್ ಕುತುಬ್‍ರನ್ನು ಗಲ್ಲಿಗೇರಿಸಲು ನೇಮಿಸಲ್ಪಟ್ಟ ಆಶ್ಮಾಮಿ ಎಂಬವನ ಮುಖದಲ್ಲಿದ್ದ ವಿಷಾದವು ನಿಟ್ಟುಸಿರಾಗಿ ಹೊರಹೊಮ್ಮಿತು. ತಾನು ಕೂಡಾ ಓರ್ವ ಮಾನವ ಎಂದು ಆಶ್ಮಾಮಿಗೆ ಭಾಸವಾದ ಐತಿಹಾಸಿಕ ಕ್ಷಣವಾಗಿತ್ತದು. ಎಂದಿನಂತೆ ತನ್ನ ಕೆಲಸವನ್ನು ಅವನಿಗೆ ಇಂದು ನಿರ್ವಹಿಸಲಾಗುತ್ತಿಲ್ಲ. ಆದರೂ ಅದನ್ನು ನಿರ್ವಹಿಸಲೇ ಬೇಕು. ಸಯ್ಯದ್ ಕುತುಬ್‍ರನ್ನು ನೇರ ವಾಗಿ ಕಂಡಿಲ್ಲದಿದ್ದರೂ ಜನರು ಮಾತುಗಳಿಂದ ಆಶ್ಮಾಮಿಯು ಅವರ ಕುರಿತು ತಿಳಿದುಕೊಂಡಿದ್ದನು.
ಅಂತಹ ವ್ಯಕ್ತಿಯನ್ನು ಸ್ವಂತ ಕೈಗಳಿಂದ ಮೃತ್ಯುಗೊಪ್ಪಿಸುವುದೆಂದರೆ ಆಶ್ಮಾಮಿಗೆ ಮಾತ್ರವಲ್ಲ ಎಂಥವರಿಗೂ ನಡುಕದ ವಿಚಾರವೇ ಆಗಿದೆ. ಆ ಕಣ್ಣುಗಳಿಗೆ ಕಣ್ಣು ನೆಟ್ಟು ಕುತ್ತಿಗೆಗೆ ನೇಣಿನ ಹಗ್ಗವನ್ನು ಹಾಕುವುದು! ಆಶ್ಮಾಮಿಯ ಧರ್ಮ ಸಂಕಟವನ್ನು ವಿವರಿಸಲು ಮಾತುಗಳು ಸಾಲದು. ಅಂದು ಬೇರೆ ಎರಡು ಇಖ್ವಾನೀ ನಾಯಕ ರನ್ನು ಗಲ್ಲಿಗೇರಿಸಬೇಕಾಗಿತ್ತು. ಮುಹಮ್ಮದ್ ಯೂಸುಫ್ ಹವಾಣಿ ಮತ್ತು ಅಬ್ದುಲ್ ಫತ್ತಾಹ್ ಇಸ್ಮಾಈಲ್.
ಸಯ್ಯದ್ ಕುತುಬ್‍ರನ್ನು ಗಲ್ಲಿಗೇರಿಸಲು ನೇಮಿಸಲ್ಪಟ್ಟ ಆಶ್ಮಾಮಿ ಯೊಂದಿಗೆ ಇನ್ನಿಬ್ಬರು ಸಹಾಯಿಗಳೂ ಇದ್ದರು. ಬಳಿಕ ಅವರು ಪಶ್ಚಾತ್ತಾಪಪಟ್ಟುಕೊಂಡು ಆ ಕ್ಷಣವನ್ನು ಹೀಗೆ ಬಿಚ್ಚಿಟ್ಟಿದ್ದಾರೆ, “ಕೊನೆಗೆ ನಾವು ಕಾವಲುಗಾರರಾಗಿ ನಿಲ್ಲಬೇಕಾದದ್ದು ಕಂಟೆಂಡ್ ಸೆಲ್ಲಿನಲ್ಲಿರಿಸಿದ್ದ ಓರ್ವ ಕೈದಿಗಾಗಿತ್ತು. ಅತ್ಯಂತ ಅಪಾಯಕಾರೀ ವ್ಯಕ್ತಿ ಎಂದು ಆ ಕೈದಿಯ ಕುರಿತು ನಮಗೆ ಮುನ್ನೆಚ್ಚರಿಕೆ ನೀಡ ಲಾಗಿತ್ತು. ಭಯೋತ್ಪಾದಕರು, ಬುಡಮೇಲು ಕೃತ್ಯ ನಡೆಸುವವರ ಮೆದುಳು ಎಂದು ಅವರನ್ನು ವಿಶ್ಲೇಷಿಸಲಾಗಿತ್ತು. ಶರೀರದಲ್ಲಿ ಕಿರಾತ ದೌರ್ಜನ್ಯಗಳ ಚಿಹ್ನೆಗಳು ವ್ಯಾಪಕವಾಗಿವೆ. ಅವರು ಸಯ್ಯದ್ ಕುತುಬಾಗಿದ್ದರು. ಎದ್ದು ನಿಲ್ಲಲೂ ಸಾಧ್ಯವಿಲ್ಲದ ಅವ ರನ್ನು ನಾವು ಸೈನಿಕ ನ್ಯಾಯಾಲಯಕ್ಕೆ ಹೊತ್ತುಕೊಂಡು ಹೋದೆವು. ಒಂದು ರಾತ್ರಿ, ನೇಣುಗಂಬವನ್ನು ಸಿದ್ಧಪಡಿಸಲಿಕ್ಕಿರುವ ಆಜ್ಞೆ ಬಂತು. ಕೊನೆಯ ಉಪದೇಶ ನೀಡಲೂ, ಪ್ರಾರ್ಥಿಸಲೂ ಓರ್ವ ಶೈಖ್‍ರನ್ನು ಸೆಲ್ಲಿಗೆ ಕಳುಹಿಸಲಾಯಿತು. ಮರುದಿನ ಮುಂಜಾನೆ ನಾನು ಮತ್ತು ನನ್ನ ಗೆಳೆಯ ಅವರನ್ನು ಹೊತ್ತುಕೊಂಡು ಹೋಗಿ ದೂರ ನಿಲ್ಲಿಸಿದ್ದ ಸೈನಿಕ ಜೀಪೊಂದರಲ್ಲಿ ಕುಳ್ಳಿರಿಸಿದೆವು. ವಧೆ ಶಿಕ್ಷೆ ನೀಡುವ ಸ್ಥಳಕ್ಕಾಗಿತ್ತು ಪ್ರಯಾಣ. ಶಸ್ತ್ರಧಾರಿಗಳಾದ ಸೈನಿಕರು ನಮ್ಮನ್ನು ಹಿಂಬಾಲಿಸುತ್ತಿದ್ದರು. ವಾಹನಗಳು ನಿಶ್ಚಿತ ಸ್ಥಳಕ್ಕೆ ತಲುಪಿದುವು. ಸೈನಿಕರು ಜೀಪ್‍ನಿಂದ ಜಿಗಿದರು. ಸೇನಾಧಿಕಾರಿಗಳು ಎಲ್ಲವನ್ನು ಮೊದಲೇ ಸಿದ್ಧಪಡಿಸಿಟ್ಟಿದ್ದರು. ಎಲ್ಲರೂ ತಮಗಾಗಿ ತಯಾರಿಸಿಟ್ಟಿದ್ದ ನೇಣುಗಂಬದ ಬಳಿಗೆ ಸಾಗಿದರು. ನೇಣುಗಂಬದ ಬಳಿಗೆ ಸಾಗುವಾಗ ಪರಸ್ಪರ ಕೈ ಬೀಸಿ ಹೇಳಿದ ಮಾತುಗಳು ಇಂದಿಗೂ ನಮ್ಮ ಕಿವಿಗಳಲ್ಲಿ ಮಾರ್ದನಿಸುತ್ತಿದೆ. `ನಲ್‍ತಕೀ ಫೀ ಜನ್ನತಿಲ್ ಖುಲ್ದಿ ಮಅ ಮುಹಮ್ಮದಿನ್ ವ ಅಸ್ಹಾಬಿಹೀ’ [ಮುಹಮ್ಮದ್(ಸ) ಮತ್ತು ಅವರ ಸಹಾಬಿಗಳೊಂದಿಗೆ ನಾವು ಸ್ವರ್ಗದಲ್ಲಿ ಭೇಟಿಯಾಗೋಣ].
ಓರ್ವ ಸೇನಾಧಿಕಾರಿಯು ಸಯ್ಯದ್  ಕುತುಬ್‍ರ ಬಳಿಗೆ ಬಂದನು. ಕಣ್ಣುಗಳಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಲಾಯಿತು. ಕುತ್ತಿಗೆ ಯಿಂದ ನೇಣು ಹಗ್ಗವನ್ನು ತೆಗೆಯಲಾಯಿತು. ಮೆಲ್ಲನೆ ಕುತುಬ್ ರೊಂದಿಗೆ ಹೇಳಿದನು, “ಕರುಣಾಮಯಿಯೂ ಸ್ನೇಹಮಯಿಯೂ ಆದ ಅಧ್ಯಕ್ಷರ ಒಂದು ಉಡುಗೊರೆಯೊಂದಿಗೆ ನಾನು ಬಂದಿದ್ದೇನೆ. ಒಂದೇ ಒಂದು ಮಾತು ಬರೆದು ಸಹಿ ಹಾಕಿದರೆ ಸಾಕು. ನಿಮ್ಮನ್ನು ಈಗಲೇ ಬಿಡುಗಡೆಗೊಳಿಸುವುದು. ‘ನನಗೆ ತಪ್ಪು ಸಂಭವಿ ಸಿತು. ನಾನು ಕ್ಷಮೆ ಕೋರುತ್ತೇನೆ’ ಎಂಬ ವಾಕ್ಯ ಬರೆದರೆ ಸಾಕು.” ಅಂದು ಸಯ್ಯದ್ ಕುತುಬ್ ಮುಗುಳ್ನಗೆಯೊಂದಿಗೆ ಅ ಅಧಿಕಾರಿಯ ಮುಖವನ್ನು ದಿಟ್ಟಿಸಿದ ಆ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ. ವಿಚಲಿತವಾಗದ ಕಣ್ಣುಗಳೊಂದಿಗೆ ಮಂದಸ್ಮಿತ ಮುಖಭಾವದೊಂದಿಗೆ ಸಯ್ಯದ್ ಕುತುಬ್ ಹೇಳಿದರು, “ಖಂಡಿತಾ ಸಾಧ್ಯವಿಲ್ಲ... ಒಮ್ಮೆಯೂ ಅಳಿದು ಹೋಗದ ಒಂದು ಸುಳ್ಳು ಮಾತು ಆಡಿ ನಶ್ವರವಾದ ಈ ಜೀವನವನ್ನು ಬದಲಿಯಾಗಿ ಪಡೆದುಕೊಳ್ಳಲು ನಾನು ತಯಾರಿಲ್ಲ.” ದುಃಖದ ಕಟ್ಟೆಯೊಡೆದ ಸೇನಾಧಿಕಾರಿಯು “ಸಯ್ಯದ್, ಇನ್ನು ಮರಣವಾಗಿದೆ ನಿಮ್ಮ ಮುಂದಿರುವುದು.” ಸಯ್ಯದ್  ಕುತುಬ್‍ರ ಅಚಲವಾದ ಉತ್ತರ, ಯಾ ಮರ್‍ಹಬನ್ ಬಿಲ್ ಮೌತಿ ಫೀ ಸಬೀಲಿಲ್ಲಾಹ್. (ಅಲ್ಲಾಹನ ಮಾರ್ಗದ ಮರಣಕ್ಕೆ ಸ್ವಾಗತ).
ಅಧಿಕಾರಿಯು ಅಶ್ಮಾಮಿಗೆ ಆಜ್ಞಾಪಿಸಿದನು. ಅವರು ಸಯ್ಯದ್ ಕುತುಬ್ ನಿಂತುಕೊಂಡಿದ್ದ ಕುರ್ಚಿಯನ್ನು ತಪ್ಪಿಸಿದರು. ಇಸ್ಲಾಮಿನ ಮಾರ್ಗದ ಕರ್ಮ ಯೋಧರ ಜಡ ಶರೀರವು ನೇಣುಗಂಬದಲ್ಲಿ ತೂಗಾಡಿದವು. ಆ ಪವಿತ್ರ ಆತ್ಮವು ಸೃಷ್ಟಿಕರ್ತನ ಸನ್ನಿಧಿಗೆ ಯಾತ್ರೆ ಹೊರಟಿತು.
 ಪಿ . ಕೆ. ಜಮಾಲ್