ಸೋಮವಾರ, ಜನವರಿ 14, 2013

ರಕ್ತ ಸಾಕ್ಷಿತ್ವಕ್ಕೂ ಪರಿಹರಿಸಲಾಗದ ಪಾಪಗಳು

ಓರ್ವ ವಿಶ್ವಾಸಿಯ ಜೀವನದಲ್ಲಿ ರಕ್ತ ಸಾಕ್ಷಿತ್ವ ಎಂಬುದು ಸಾಟಿಯಿಲ್ಲದ ಶ್ರೇಷ್ಠ ಕರ್ಮವಾಗಿದೆ. ಅದಕ್ಕಿಂತ ಶ್ರೇಷ್ಠ ಕರ್ಮ ಬೇರೊಂದಿಲ್ಲ. ಅದು ಸ್ವರ್ಗ ವಾಗ್ದಾನ ಮಾಡಲ್ಪಟ್ಟ ಕರ್ಮವಾಗಿದೆ. ಇತರ ಯಾವುದೇ ಆರಾಧನಾ ಕರ್ಮಗಳು ರಕ್ತ ಸಾಕ್ಷಿತ್ವಕ್ಕೆ ಸಮಾನವಾಗಲಾರವು. ಅದು ತ್ಯಾಗ ಹಾಗೂ ಸಮರ್ಪಣೆಯ ಪರಾಕಾಷ್ಠೆಯಾಗಿದೆ. ಜೀವವನ್ನೇ ಸೃಷ್ಟಿಕರ್ತನಿಗೆ ಸಮರ್ಪಿಸುವ ಆರಾಧನೆ. ಆದರೆ ದೇವನ ಮುಂದೆ ಗುರುತರವಾಗಿ ಪರಿಗಣಿಸಲ್ಪಡುವ, ರಕ್ತ ಸಾಕ್ಷಿತ್ವದಿಂದ ಪರಿಹರಿಸಲ್ಪಡದ ಕೆಲವು ಪಾಪಗಳಿವೆ. ನಾವು ಅವನ್ನು ಮೇಲ್ನೋಟಕ್ಕೆ ಕ್ಷುಲ್ಲಕವೆಂದು ಭಾವಿಸುತ್ತೇವೆ.
ಅನಸ್‍ರಿಂದ(ರ) ವರದಿಯಾಗಿದೆ. “ಉಹುದ್ ಯುದ್ಧದಲ್ಲಿ ನಮ್ಮ ಪೈಕಿ ಓರ್ವರು ರಕ್ತ ಸಾಕ್ಷಿಯಾದರು. ಹಸಿವೆ ತಾಳಲಾರದೆ ಅವರು ತನ್ನ ಉದರಕ್ಕೆ ಕಲ್ಲನ್ನು ಕಟ್ಟಿದ್ದರು. ಅವರ ತಾಯಿ ಅವರ ಮುಖದಿಂದ ಮಣ್ಣನ್ನು ಒರೆಸುತ್ತಾ ಹೇಳಿದರು. “ಮಗನೇ, ಸಂತೋಷಪಡು. ನಿನಗೆ ಸ್ವರ್ಗವಿದೆ.” ಇದನ್ನು ಆಲಿಸಿದ ಪ್ರವಾದಿಯವರು(ಸ) ಹೇಳಿದರು. “ನಿಮಗೇನು ಗೊತ್ತು. ಒಂದು ವೇಳೆ ಅವರು ಅನಗತ್ಯ ಮಾತುಗಳನ್ನು ಆಡಿರಬಹುದು ಅಥವಾ ತನಗೆ ಉಪದ್ರವ ನೀಡದ್ದನ್ನು ತಡೆದಿರಲೂ ಬಹುದು.”
ಈ ಹದೀಸ್‍ನಲ್ಲಿ ಪ್ರಥಮವಾಗಿ ತಿಳಿಸಿರುವುದು ಅನಗತ್ಯವಾಗಿ ಮಾತಾಡುವುದನ್ನಾಗಿದೆ. ಇದು ಸಮಾಜದಲ್ಲಿ ಇಂದು ನಾವು ಕಾಣುತ್ತಿರುವ ಒಂದು ದುಶ್ಚಟವಾಗಿದೆ. ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸುತ್ತಾರೆ. ಅಗತ್ಯವಾದುದನ್ನೂ ಅನಗತ್ಯವಾದುದನ್ನೂ ಯಾವುದೇ ನಿಯಂತ್ರಣವಿಲ್ಲದೆ ಮಾತಾಡುತ್ತಿರುತ್ತಾರೆ. ಬಾಯಿಂದ ಹೊರಡುವ ಮಾತುಗಳ ಅವಶ್ಯಕತೆಯ ಕುರಿತೋ ಅವು ಸಮಾಜದಲ್ಲಿ ಸೃಷ್ಟಿಸುವ ಬಿರುಕುಗಳ ಕುರಿತೋ ಅವರು ಪ್ರಜ್ಞಾವಂತರಲ್ಲ. ಸಮಯ, ಸಂದರ್ಭ, ಅವಶ್ಯಕತೆಯನ್ನು ನೋಡದೆ ಅನಗತ್ಯವಾಗಿ ಮಾತಾಡುವವರನ್ನು ಪ್ರವಾದಿಯವರು(ಸ) ಹಗಲಿಡೀ ಮೇಯ್ದು ಬಂದು ರಾತ್ರಿ ಮೆಲುಕು ಹಾಕುವ ದನಗಳಿಗೆ ಹೋಲಿಸಿದ್ದಾರೆ. ಪ್ರವಾದಿಯವರು(ಸ) ಹೇಳಿದರು, “ಹಸುಗಳು ಮೆಲುಕು ಹಾಕುವಂತೆ ಸದಾ ಮಾತನಾಡುತ್ತಿರುವವರೊಂದಿಗೆ ಅಲ್ಲಾಹನು ಕೋಪಿಷ್ಠನಾಗುತ್ತಾನೆ.”
ಅನಗತ್ಯ ಮಾತುಗಳು ಮನುಷ್ಯರನ್ನು ಹಲವು ಪಾಪಗಳಿಗೆ ಕೊಂಡೊಯ್ಯುತ್ತವೆ. ಇಬ್ಬರ ಮಧ್ಯೆ ತಪ್ಪು ತಿಳುವಳಿಕೆಗಳನ್ನೂ ವೈರತ್ವವನ್ನೂ ಸೃಷ್ಟಿಸುತ್ತವೆ. ಇಂದು ಸಮಾಜದಲ್ಲಿ ಹಲವಾರು ಮಿತಭಾಷಿಗಳಿದ್ದಾರೆ. ಅವರು ಬೇಕಾದಷ್ಟನ್ನು ಮಾತ್ರ ಮಾತನಾಡಿ ಸುಮ್ಮನಿರುತ್ತಾರೆ. ಆದರೆ ನಾವು ಅವರನ್ನು ಮೂಕನೆಂದೂ ಮೌನ ವ್ರತ ಆಚರಿಸಿದ್ದಾನೆಂದೂ ಮೂದಲಿಸುತ್ತೇವೆ. ನಿಜವಾಗಿ ಅಂಥವರು ಮಾತುಗಳ ಮೂಲಕ ಸಂಭವಿಸುವ ಪಾಪಗಳಿಂದ ಕನಿಷ್ಠ ಮುಕ್ತರಾಗಿರುತ್ತಾರೆ. ನಾವು ಅವರನ್ನು ಗೇಲಿಯಾಡುವುದರ ಮೂಲಕ ಪಾಪಗಳನ್ನು ಕಟ್ಟಿಕೊಳ್ಳುತ್ತೇವೆ. ಪ್ರವಾದಿಯವರು(ಸ) ಹೇಳಿದರು, “ಯಾರ ಮಾತುಗಳು ಹೆಚ್ಚಾಗುತ್ತವೋ ಅಂಥವರ ತಪ್ಪುಗಳು ಹೆಚ್ಚಾಗುತ್ತವೆ. ತಪ್ಪುಗಳು ಹೆಚ್ಚಾದಾಗ ಪಾಪಗಳೂ ವರ್ದಿಸುತ್ತವೆ. ಪಾಪಗಳು ಹೆಚ್ಚಾದಾಗ ಕೊನೆಗೆ ನರಕದ ಹಕ್ಕುದಾರರಾಗಿ ಮಾರ್ಪಡುತ್ತಾರೆ.”
ಒಮ್ಮೆ ಓರ್ವರು ಪ್ರವಾದಿಯವರ(ಸ) ಬಳಿ ಬಂದು ನಿರಂತರವಾಗಿ ಮಾತನಾಡುತ್ತಿದ್ದರು. ಅವರ ಮಾತಿನಲ್ಲಿ ತೀವ್ರ ಅಸಂತೃಪ್ತರಾದ ಪ್ರವಾದಿಯವರು(ಸ) ಅವರೊಂದಿಗೆ ಹೇಳಿದರು, “ತಮ್ಮ ನಾಲಗೆಗೆ ಎಷ್ಟು ತಡೆಗಳಿವೆ.” ಅವರು ಹೇಳಿದರು, ‘ಎರಡು ನನ್ನ ಹಲ್ಲುಗಳು ಹಾಗೂ ತುಟಿಗಳು.’ ಆಗ ಪ್ರವಾದಿಯವರು(ಸ) ಕೇಳಿದರು. “ಆದರೂ ನಿಮಗೆ ನಿಮ್ಮ ಮಾತುಗಳಿಗೆ ನಿಯಂತ್ರಣ ಹೇರಲು ಸಾಧ್ಯವಾಗುವುದಿಲ್ಲವೇ?”
ಪ್ರವಾದಿಯವರು(ಸ) ಅನಗತ್ಯ ಮಾತುಗಳನ್ನಾಡುತ್ತಿರಲಿಲ್ಲ. ಸಹಾಬಿಗಳು ಕೂಡಾ ಅದೇ ಶಿಕ್ಷಣವನ್ನು ಪಡೆದಿದ್ದರು. ತಮ್ಮನ್ನು ತರಾಟೆಗೆ ತೆಗೆದುಕೊಂಡವರಿಗೆ ಅನವಶ್ಯಕ ಮಾತುಗಳಿಂದ ಉತ್ತರ ನೀಡುತ್ತಿರಲಿಲ್ಲ. ಹೆಚ್ಚು ಮಾತನಾಡುವ ಅಸಂಸ್ಕøತ ವ್ಯಕ್ತಿಗಳನ್ನು ಪ್ರವಾದಿಯವರು(ಸ) ದ್ವೇಶಿಸುತ್ತಿದ್ದರು. ಪ್ರವಾದಿಯವರು(ಸ) ಹೇಳುತ್ತಿದ್ದರು. “ನಾಳೆ ಪರಲೋಕದಲ್ಲಿ ನನಗೆ ಅತ್ಯಂತ ಪ್ರಿಯರೂ ಸಮೀಪಸ್ಥರೂ ಆದವರು ಉತ್ತಮ ಸ್ವಾಭಾವಗಳನ್ನು ಹೊಂದಿದವರಾಗಿದ್ದಾರೆ. ನನಗೆ ಇಷ್ಟವಿಲ್ಲದವರು ಮತ್ತು ನನ್ನಿಂದ ದೂರ ನಿಲ್ಲುವವರು ಅನಗತ್ಯವಾಗಿ ಮಾತನಾಡುವವರು, ಅಹಂಕಾರಿಗಳು ಮತ್ತು ಮಾತಿನಲ್ಲಿ ಕಾಪಟ್ಯ ಹೊಂದಿದ ನಿಕೃಷ್ಟ ಸ್ವಭಾವ ಹೊಂದಿದವರಾಗಿದ್ದಾರೆ.”
ಆದ್ದರಿಂದ ನಾವು ಅನಗತ್ಯ ಮಾತುಕತೆಗಳಿಂದ ದೂರವಿರಬೇಕಾಗಿದೆ. ಆಡಿದ ಮಾತನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಮಾತನಾಡುವಾಗಲೇ ಯೋಚಿಸಿ ಮಾತನಾಡುವುದು ಉತ್ತಮ.
ಸ್ವರ್ಗ ಪ್ರವೇಶವನ್ನು ತಡೆಯುವ ಎರಡನೇ ಪಾಪಕೃತ್ಯ ‘ಸ್ವಂತಕ್ಕೆ ಉಪದ್ರವ ಉಂಟುಮಾಡದ ವಿಚಾರಗಳನ್ನು ತಡೆಯುವುದಾಗಿದೆ. ಅಂದರೆ ಜನರಿಗೆ ಪ್ರಯೋಜನವನ್ನುಂಟು ಮಾಡುವ ಕಾರ್ಯಗಳಿಂದ ಮನಃಪೂರ್ವಕವಾಗಿ ಹಿಂದೆ ಸರಿಯುವುದಾಗಿದೆ. ತನಗೋ, ತನ್ನ ಕುಟುಂಬಕ್ಕೋ ತನ್ನ ಸಂಪತ್ತಿಗೋ ಯಾವುದೇ ನಷ್ಟವನ್ನುಂಟು ಮಾಡದ ಅದೇ ವೇಳೆ ಇತರರಿಗೆ ಪ್ರಯೋಜನಕಾರಿಯಾದಂತಹ ಕಾರ್ಯಗಳನ್ನು ಅಸೂಯೆಂದಲೋ ಇನ್ನಾವುದರಿಂದಲೋ ಮಾಡದಿರುವುದು. ಕುರ್‍ಆನ್ ಇಂತಹ ಪುಟ್ಟ ಪುಟ್ಟ ಉಪಕಾರಗಳಿಗೆ ‘ಮಾಊನ್’ ಎಂದು ಹೇಳಿದೆ. (ಅಲ್ ಮಾಊ ನ್-7)
ಸಮಾಜದಲ್ಲಿ ಇಂತಹ ಪುಟ್ಟ ಉಪಕಾರಗಳಿಗೆ ಬಹುದೊಡ್ಡ ಸ್ಥಾನವಿದೆ. ಅದು ಮಾನವರ ಮಧ್ಯೆ ಬಾಂಧವ್ಯ ಸೃಷ್ಟಿಯಾಗಲೂ ವೃದ್ಧಿಯಾಗಲೂ ಸಹಕಾರಿಯಾಗಿವೆ. ಇಂತಹ ಉಪಕಾರಗಳು ಅಪರಿಚಿತರ ಮಧ್ಯೆ ಪರಿಚಿತತೆಯನ್ನು ಸೃಷ್ಟಿಸುತ್ತವೆ. ನಾವು ಈ ಉಪಕಾರಗಳನ್ನು ಕ್ಷುಲ್ಲಕವೆಂದು ಭಾವಿಸಿದರೂ ಅದನ್ನು ಪಡೆಯುವವರ ಪಾಲಿಗೆ ಅವು ಮಹತ್ತರವಾಗಿರಲೂ ಬಹುದು. ಪ್ರವಾದಿಯವರು(ಸ) ಮುಸ್ಲಿಮ್ ಮಹಿಳೆಯರನ್ನು ಅಭಿಸಂಬೋಧಿಸುತ್ತಾ ಒಮ್ಮೆ ಹೀಗೆ ಹೇಳಿದರು. “ಓ ಸತ್ಯವಿಶ್ವಾಸಿಯರೇ, ನೀವು ನಿಮ್ಮ ನೆರೆಯವರಿಗೆ ನೀಡುವ ಯಾವುದೇ ವಸ್ತುವನ್ನು ಕ್ಷುಲ್ಲಕವೆಂದು ಭಾವಿಸಬೇಡಿ. ಅದು ಆಡಿನ ಒಂದು ಗೊರಸಾದರೂ ಸರಿ.”
ನಾವು ಇತರರಿಗೆ ಇಂತಹ ಪುಟ್ಟ ಸಹಾಯವನ್ನೂ ಮಾಡದೆ ನಮ್ಮ ಸ್ವಂತಕ್ಕಾಗಿ ಮಾತ್ರ ಬದುಕುತ್ತಿದ್ದೇವೆ. ಈ ಕರ್ಮಗಳನ್ನು ಮಾಡುವ ಸಂದರ್ಭವೊದಗಿದಾಗ ಅದರಿಂದ ಹಿಂದೆ ಸರಿದು ಎಷ್ಟೇ ಆರಾಧನೆಗಳನ್ನೆಸಗಿದರೂ ಪ್ರಯೋಜನವಿಲ್ಲ ಎಂದು ಮೊದಲಿನ ಹದೀಸ್‍ನಿಂದ ಸೃಷ್ಟವಾಗುತ್ತದೆ. ರಕ್ತಸಾಕ್ಷಿಗಳಿಗೂ ರಕ್ಷಣೆ ಹೊಂದಲು ಸಾಧ್ಯವಿಲ್ಲದಂತಹ ಈ ಕಾರ್ಯಗಳು ಎಷ್ಟು ಮಹತ್ವದ್ದಾಗಿದೆಯೆಂದು ಇದರಿಂದ ಮನದಟ್ಟಾಗುತ್ತದೆ. ಆದ್ದರಿಂದ ನಾವು ಇತರರಿಗೆ ಸಹಾಯ ಮಾಡುವ ಅವಕಾಶ ಒದಗಿದಾಗ ಅದರಿಂದ ಹಿಂದೆ ಸರಿಯಬಾರದು. ಅದೇ ರೀತಿ ವ್ಯರ್ಥ, ಅನಗತ್ಯ ಮಾತುಗಳಿಂದಲೂ ದೂರ ಸರಿಯಬೇಕು. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.