ಸೋಮವಾರ, ಮೇ 20, 2013

ಹ್ರದಯಕ್ಕೆ ತಕ್ವಾದ ಉಡುಪು ತೊಡಿಸಿ


ಕೆಡುಕು ರಹಿತ ಜೀವನ ನಡೆಸುವುದು ಪ್ರತಿಯೋರ್ವ ವಿಶ್ವಾಸಿಯ ಗುರಿಯಾಗಿದೆ. ಆ ಮೂಲಕ ಶಾಶ್ವತವಾದ ಸ್ವರ್ಗಗಳಿಸುವುದು ಆತನ ಅದಮ್ಯ ಬಯಕೆಯಾಗಿರುತ್ತದೆ. ಓರ್ವನ ಜೀವನವನ್ನು ಉತ್ತಮ ಅಥವಾ ಕೆಟ್ಟದ್ದಾಗಿ ಪರಿವರ್ತಿಸುವುದು ಆತನ ಕರ್ಮಗಳಾಗಿವೆ. ಆತನ ಕರ್ಮಗಳನ್ನು ಮಾನದಂಡವಾಗಿಸಿ ಅವನ ಸೋಲು-ಗೆಲುವು ನಿರ್ಣಯವಾಗುತ್ತದೆ. ಕೆಡುಕು ಗಳು ತುಂಬಿ ತುಳುಕುವ ಒಂದು ಸಮಾಜದಲ್ಲಿ ಬದುಕುವಾಗ ಅವುಗಳು ಮನಸ್ಸು ಹಾಗೂ ಶರೀರಕ್ಕೆ ವ್ಯಾಪಿಸದಿರಬೇಕಾದರೆ ಅಲ್ಲಾಹನ ಅನುಗ್ರಹವೇ ಬೇಕು. ಆ ಕೆಡುಕುಗಳಿಂದ ಮನಸ್ಸಿಗೋ ಕರ್ಮಗಳಿಗೋ ಕೇಡುಂಟಾಗದಂತೆ ತೋರುವ ಜಾಗೃತಾ ಮನೋಭಾವವು ತಕ್ವಾ (ದೇವಭಯ) ಆಗಿದೆ.
ಉಮರ್‍ರವರು(ರ) ಉಬಯ್ಯ್ ಬಿನ್ ಕಅಬ್ ರೊಂದಿಗೆ ಪ್ರಶ್ನಿಸಿದರು. “ಉಬಯ್ಯ್ ತಕ್ವಾ ಎಂದರೇನು?” ಉಬಯ್ಯ್ ಉತ್ತರಿಸಿದರು. “ಕಲ್ಲು, ಮುಳ್ಳುಗಳು ತುಂಬಿದ ಹಾದಿಯಲ್ಲಿ ನಗ್ನ ಪಾದಗಳೊಂದಿಗೆ ನಡೆಯುವ ಸಂದರ್ಭವೊದಗಿ ದಾಗ ಕಲ್ಲು ಕಾಲಿಗೆ ತಾಗದಂತೆ ಮುಳ್ಳು ಕಾಲಿಗೆ ಚುಚ್ಚದಂತೆ ನಾವು ಎಚ್ಚರ ವಹಿಸಿ ಒಂದೊಂದು ಹೆಜ್ಜೆ ಮುಂದಿಡುತ್ತೇವಲ್ಲವೇ. ಈ ಜಾಗ್ರತೆ ಹಾಗೂ ಎಚ್ಚರವೇ ತಕ್ವಾ ಆಗಿದೆ.” ಇದು ತಕ್ವಾದ ಕುರಿತು ಸರಳ ಹಾಗೂ ಮನಮುಟ್ಟುವ ಉದಾ ಹರಣೆಯಾಗಿದೆ. ತಕ್ವಾವು ಹೃದಯಾಂತರಾಳದಿಂದ ಉದ್ಭವಗೊಂಡಾಗಲೇ ಅದು ಕರ್ಮಗಳ ಮೇಲೆ ಪ್ರಭಾವ ಬೀರುತ್ತದೆ. ಕರ್ಮಗಳಿಗೆ ಪ್ರಾಮಾಣಿಕತೆ ಯನ್ನು ನೀಡುತ್ತದೆ. ಕೇವಲ ಬಾಹ್ಯವಾಗಿ ಗೋಚರಿಸುವ ತಕ್ವಾವು ಮನುಷ್ಯನನ್ನು ವಿಜಯ ಪಥದೆಡೆಗೆ ಕೊಂಡೊಯ್ಯಲಾರದು. ಬಾಹ್ಯ ರೂಪ ದಲ್ಲಿ ಪ್ರಕಟವಾಗುವ ತಕ್ವಾವು ಕೇವಲ ತೋರಿಕೆ ಗಾಗಿರುತ್ತದೆ. ಅಂತಹ ತಕ್ವಾಗಳಿಂದ ಉದ್ಭವಿಸುವ ಕರ್ಮಗಳು ವ್ಯರ್ಥ. ನೀರಿನಲ್ಲಿ ಬರೆದಂತೆ ಅವು ನಿಷ್ಫಲಗೊಳ್ಳುವುದು.
ಅಲ್ಲಾಹನು ಮನುಷ್ಯರನ್ನು ಅತ್ಯುತ್ತಮ ಪ್ರಕೃತಿ ಯಲ್ಲಿ ಸೃಷ್ಟಿಸಿದನು. ಸುಂದರವಾದ ಅಂಗಾಂಗ ಗಳನ್ನೂ ನೀಡಿದನು. ಆ ಅಂಗಾಂಗಗಳನ್ನು ಕಾಪಾಡುವುದು ಮನುಷ್ಯನ ಬಾಧ್ಯತೆಯಾಗಿದೆ. ಅವುಗಳಿಗೆ ಬೇಕಾದ ವ್ಯವಸ್ಥೆಗಳನ್ನು ನೀಡುವುದು ಮನುಷ್ಯನ ಹೊಣೆಗಾರಿಕೆಯಾಗಿದೆ. ಆದರೆ ಅಲ್ಲಾಹನು ನಾಳೆ ನಾವು ಎಂತಹಾ ಬಟ್ಟೆ ಧರಿಸಿದ್ದೇವೆ. ಶರೀರದ ರಕ್ಷಣೆಗೆ ಯಾವೆಲ್ಲಾ ಮಾರ್ಗಗಳನ್ನು ಕೈಗೊಂಡಿದ್ದೇವೆ ಎಂದು ನೋಡುವುದಿಲ್ಲ. ಬದಲಾಗಿ ಅವನು ನೋಡುವುದು ನಮ್ಮ ಹೃದಯವನ್ನಾಗಿದೆ. ನಮ್ಮ ಹೃದಯದಲ್ಲಿರುವ ತಕ್ವಾಕ್ಕನುಸಾರವಾಗಿ ನಮ್ಮ ಜಯಾಪಜಯಗಳು ನಿರ್ಣಯವಾಗುತ್ತವೆ. ಪ್ರವಾದಿಯವರು(ಸ) ಹೇಳಿದರು, “ಅಲ್ಲಾಹನು ನಿಮ್ಮ ಶರೀರ ಅಥವಾ ರೂಪವನ್ನೋ ನೋಡುವುದಿಲ್ಲ. ಅವನು ನೋಡು ವುದು ನಿಮ್ಮ ಹೃದಯ ಹಾಗೂ ಕರ್ಮಗಳನ್ನಾ ಗಿದೆ.” ಆದ್ದರಿಂದ ಹೃಯದಕ್ಕೆ ರೋಗ ಬಾಧಿಸದಂತೆ
ಎಚ್ಚರ ವಹಿಸುವವರು ವಿಶ್ವಾಸಿಗಳು ಮಾತ್ರ.
ಪರಲೋಕದ ವಿಜಯಕ್ಕಾಗಿ ತಯಾರಿಯಾಗು ವಾಗ ಪ್ರಥಮ ಆದ್ಯತೆ ನೀಡಬೇಕಾದುದು ಹೃದಯಕ್ಕಾಗಿದೆ. ಕುರ್‍ಆನ್ ಹಾಗೂ ಪ್ರವಾದಿ ಚರ್ಯೆಯ ಹಿನ್ನೆಲೆಯಲ್ಲಿ ತರಬೇತಿಯ ಮಾರ್ಗಗಳು ಹಾಗೂ ಶೈಲಿಗಳು ವಿವರಿಸಲ್ಪಡುವಾಗ ಪ್ರಥಮವಾಗಿ ಪ್ರಸ್ತಾಪಗೊಳ್ಳುವುದು ಹೃದಯವಾಗಿದೆ. ಕೆಡುಕುಗಳು ಹೃದಯಕ್ಕೆ ಸೋಂಕದಂತೆ ಸದಾ ಹೃದಯವನ್ನು ಶೋಭಾಯಮಾನಗೊಳಿಸಲು ನಿರಂತರ ಕರ್ಮ ನಿರತರಾಗಬೇಕೆಂದು ಪ್ರವಾದಿ ಯವರು(ಸ) ಸಲಹೆ ನೀಡಿದ್ದಾರೆ. ಪ್ರವಾದಿ ಯವರು(ಸ) ಹೇಳಿದರು, “ಅರಿಯಿರಿ, ಶರೀರದಲ್ಲಿ ಮಾಂಸದ ತುಂಡೊಂದಿದೆ. ಅದು ಉತ್ತಮವಾದರೆ ಸಮಸ್ತ ಶರೀರ ಉತ್ತಮಗೊಂಡಂತೆ. ಅದು ಕೆಟ್ಟು ಹೋದರೆ ಶರೀರವಿಡೀ ಕೆಟ್ಟಂತೆ. ಅದುವೇ ಹೃದಯವಾಗಿದೆ.” (ಬುಖಾರಿ) ಈ ವಚನವನ್ನು ವಿವರಿಸುತ್ತಾ ಇಬ್ನು ಹಜರ್ ಬರೆಯುತ್ತಾರೆ, “ಪ್ರವಾದಿಯವರು(ಸ) ಹೃದಯಕ್ಕೆ ಒತ್ತು ನೀಡಿರು ವುದು ಅದು ಶರೀರದ ಆಡಳಿತಾಧಿ ಕಾರಿಯಾಗಿ ರುವುದರಿಂದಾಗಿದೆ. ಆಡಳಿತಾಧಿಕಾರಿ ಉತ್ತಮ ಗೊಂಡರೆ ಪ್ರಜೆಗಳೂ ಉತ್ತಮರಾಗುವರು. ಆಡಳಿತಾಧಿಕಾರಿ ಕೆಟ್ಟು ಹೋದರೆ ಪ್ರಜೆಗಳೂ ಕೆಟ್ಟು ಹೋಗುವರು.” (ಫತ್‍ಹುಲ್ ಬಾರಿ)
ಹೃದಯವು ರೋಗಪೀಡಿತವಾದರೆ ಅದರ ದುಷ್ಪರಿಣಾಮ ಶರೀರ ಹಾಗೂ ಕರ್ಮಗಳ ಮೇಲೂ ಗೋಚರವಾಗುತ್ತದೆ. ಅದು ತಕ್ವಾದಿಂದ ಕೂಡಿದ್ದರೆ ಅದರ ಸತ್ಪರಿಣಾಮ ಶರೀರದಲ್ಲೂ ಕಾಣಿಸ ತೊಡಗುತ್ತದೆ. ಮಾತ್ರವಲ್ಲ, ಸಮಾಜದಲ್ಲೂ ಅದರ ಪ್ರಭಾವ ಗೋಚರವಾಗುತ್ತದೆ. ಇಮಾಮ್ ಇಬ್ನು ಕಯ್ಯಿಮ್ ಹೇಳುತ್ತಾರೆ, “ಶರೀರಕ್ಕೆ ರೋಗಬಾಧೆಯಾಗುವಂತೆ ಹೃದಯವೂ ರೋಗ ಪೀಡಿತವಾಗುತ್ತದೆ. ಅದನ್ನು ಶಮನಗೊಳಿಸುವುದು ತೌಬಾ ಹಾಗೂ ಈಮಾನ್ ವಧರ್ನೆಗೊಳಿಸುವ ಕರ್ಮಗಳಿಂದಾಗಿದೆ. ಕನ್ನಡಿಯ ಹೊಳಪೂ ಮಾಸುವಂತೆ ಹೃದಯದ ಹೊಳಪು ಮಾಸುತ್ತದೆ. ಅದಕ್ಕೆ ಹೊಳಪು ನೀಡಬೇಕಾದದ್ದು ದೇವ ಸ್ಮರಣೆಯ ಮೂಲಕವಾಗಿದೆ. ಶರೀರ ನಗ್ನವಾಗು ವಂತೆ ಹೃದಯ ಕೂಡಾ ನಗ್ನವಾಗುತ್ತದೆ. ಅದಕ್ಕೆ ಬಟ್ಟೆ ತೊಡಿಸಬೇಕಾದದ್ದು ತಕ್ವಾದ ಮೂಲಕವಾಗಿದೆ. ಶರೀರದಂತೆ ಹೃದಯಕ್ಕೂ ಹಸಿವು, ಬಾಯಾರಿಕೆ ಗಳಿವೆ. ಅದರ ಅನ್ನ-ಪಾನೀಯಗಳು ಜ್ಞಾನ, ದೇವ ಸಂಪ್ರೀತಿ, ತ್ಯಾಗ, ಪಶ್ಚಾತ್ತಾಪ, ಸೇವಾ ಮನೋಭಾವಗಳಾಗಿವೆ.”
ತಕ್ವಾವು ಹೃದಯಕ್ಕೆ ಅಂಧಕಾರ ಆವರಿಸುವು ದನ್ನು ತಡೆಯುತ್ತದೆ. ತಕ್ವಾದಿಂದಾಗಿ ಹೃದಯವು ಯಾವಾಗಲೂ ಎಚ್ಚರದಲ್ಲಿರುತ್ತದೆ. ತಪ್ಪೆಸಗುವ ಸಂದರ್ಭವೊದಗಿದಾಗ ದೇವಭಯವು ಅದರಿಂದ ತಡೆಯುತ್ತದೆ. ದೇಹೇಚ್ಛೆಯ ದುಷ್ಟ ಆಜ್ಞೆಗಳನ್ನು ಧಿಕ್ಕರಿಸಿದಾಗ ಜೀವನವು ಸನ್ಮಾರ್ಗದಲ್ಲಿ ನೆಲೆ ಯೂರುತ್ತದೆ. ಇಂತಹ ಸ್ವಭಾವ ಹೊಂದಿದವರಿಗೆ ನಾಳೆ ಪರಲೋಕದಲ್ಲಿ ವಿಜಯಿಗಳಾಗಲು ಸಾಧ್ಯ.
ಹಾಫಿಝ್ ಇಬ್ನು ಅಸಾಕಿರ್ ಉದ್ಧರಿಸುವ ಒಂದು ಘಟನೆ ಇಂತಿದೆ. “ಓರ್ವ

ಯುವಕನು ಮಸೀದಿಯಲ್ಲಿ ಸದಾ ಆರಾಧನೆ ನಿರತನಾಗಿದ್ದನು. ಅವನು ತನ್ನ ಹೆಚ್ಚಿನ ಸಮಯವನ್ನು ಮಸೀದಿಯಲ್ಲೇ ಕಳೆಯುತ್ತಿದ್ದನು. ಹೀಗಿರುವಾಗ ಓರ್ವ ಯುವತಿ ಆತನನ್ನು ಬಯಸಿದಳು. ಮಾತ್ರವಲ್ಲ ದೇಹ ಸಂಬಂಧಕ್ಕೂ ಆಹ್ವಾನಿಸಿದಳು. ಆತ ನಿರಾಕರಿಸಿದರೂ ಆಕೆ ಬಿಡಲಿಲ್ಲ. ಹಾಗೆ ಒತ್ತಾಯಕ್ಕೆ ಮಣಿದು ಆತ ಅವಳ ಮನೆಗೆ ಆಗಮಿಸಿದನು. ಈ ಸಂದರ್ಭದಲ್ಲಿ ಆತನಿಗೆ ಈ ಸೂಕ್ತವು ಸ್ಮ್ರತಿ ಪಟಲದಲ್ಲಿ ಮೂಡುತ್ತದೆ. “ವಾಸ್ತವದಲ್ಲಿ ಧರ್ಮನಿಷ್ಠರಾದವರಿಗೆ ಶೈತಾನನ ಪ್ರಭಾವದಿಂದ ದುರಾಲೋಚನೆಗಳು ಸೋಂಕಿದರೂ ಅವರು ತಕ್ಷಣ ಜಾಗೃತರಾಗುತ್ತಾರೆ ಮತ್ತು ಅವರಿಗೆ ಸರಿಯಾದ ಕರ್ಮ ವಿಧಾನ ಯಾವು ದೆಂದು ಸ್ಪಷ್ಟವಾಗಿ ತೋರುತ್ತದೆ.” (ಅಲ್ ಅಅïರಾಫ್: 201) ಈ ಸೂಕ್ತವು ನೆನಪಾದ ಕೂಡಲೇ ಆತ ಪ್ರಜ್ಞೆ ಕಳಕೊಂಡು ಬಿದ್ದನು. ಪ್ರಜ್ಞೆ ಮರಳಿದಾಗ ಆತ ಮತ್ತೆ ಆ ಸೂಕ್ತವನ್ನು ಸ್ಮರಿಸಿದನು. ಆಗ ಆತನ ಪ್ರಾಣ ಪಕ್ಷಿ ಹಾರಿ ಹೋಯಿತು. ಉಮರ್(ರ) ಬಂದು ಆ ಯುವಕನ ತಂದೆಗೆ ಸಾಂತ್ವನ ನೀಡಿದರು. ಆ ಯುವಕನನ್ನು ರಾತ್ರಿ ದಫನ ಮಾಡಲಾಗಿತ್ತು. ಬಳಿಕ ಉಮರ್(ರ) ಮತ್ತು ಸಂಗಡಿಗರು ಗೋರಿಯ ಬಳಿ ನಮಾಝ್ ನಿರ್ವಹಿಸಿದರು. ಬಳಿಕ ಉಮರ್(ರ) ಹೇಳಿದರು, “ಓ ಯುವಕಾ! ತನ್ನ ಪ್ರಭುವಿನ ಸನ್ನಿಧಿಯಲ್ಲಿ ಹಾಜರಾಗ ಬೇಕಾಗಬಹುದು ಎಂದು ಹೆದರಿದ ಪ್ರತಿಯೋರ್ವರಿಗೂ ಎರಡು ಉದ್ಯಾನಗಳಿವೆ.” ಆಗ ಗೋರಿಯ ಒಳಗಿನಿಂದ ಆ ಯುವಕ ಹೇಳಿದನು, “ಓ ಉಮರ್! ನನ್ನ ಪ್ರಭು ನನಗೆ ಸ್ವರ್ಗದಲ್ಲಿ ಅವುಗಳನ್ನು ಎರಡು ಬಾರಿ ನೀಡಿಯಾಗಿದೆ.”
(ಇಬ್ನು ಕಸೀರ್ ಭಾಗ- 2, ಪುಟ- 279)