ಸೋಮವಾರ, ಜೂನ್ 17, 2013

ನಾವು ಶಅಬಾನ್ ತಿಂಗಳಲ್ಲಿದ್ದೇವೆ

ನಾವು ಅನುಗ್ರಹೀತ ರಮಝಾನ್ ತಿಂಗಳಿಗೆ ಹತ್ತಿರವಾಗುತ್ತಿದ್ದೇವೆ. ಪ್ರತ್ಯೇಕ ಪದವಿ ಹಾಗೂ ಶ್ರೇಷ್ಠತೆ ಇರುವ ಶಅಬಾನ್ ತಿಂಗಳಲ್ಲಿ ನಾವಿದ್ದೇವೆ. ಸಾಮಾನ್ಯವಾಗಿ ಈ ತಿಂಗಳನ್ನು ರಮಝಾನಿಗೆ ತಯಾರಿಯ ತಿಂಗಳಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಪ್ರವಾದಿಯವರು(ಸ) ಈ ತಿಂಗಳಲ್ಲಿ ಹೆಚ್ಚು ಉಪವಾಸ ವ್ರತ ಕೈಗೊಳ್ಳುತ್ತಿದ್ದರು. ಆಯಿಶಾ(ರ) ಹೇಳುತ್ತಾರೆ, “ರಮಝಾನಿನಲ್ಲಿ ಮಾತ್ರ ಒಂದು ತಿಂಗಳು ಪೂರ್ಣವಾಗಿ ಪ್ರವಾದಿಯವರು(ಸ) ಉಪವಾಸ ವ್ರತ ಕೈಗೊಂಡದ್ದನ್ನು ನಾನು ನೋಡಿದ್ದೇನೆ. ಪ್ರವಾದಿಯವರು(ಸ) ಹೆಚ್ಚು ಉಪವಾಸ ಆಚರಿಸಿದ್ದು ಶಅಬಾನ್ ತಿಂಗಳಿನಲ್ಲಾಗಿತ್ತು.” (ಬುಖಾರಿ, ಮುಸ್ಲಿಮ್).
ಶಅಬಾನ್ ತಿಂಗಳ ಉಪವಾಸಕ್ಕೆ ಮಹತ್ವ ನೀಡಿದುದರ ಕುರಿತು ಇನ್ನೊಂದು ಹದೀಸ್‍ನಲ್ಲಿ ಹೀಗೆ ವಿವರಿಸಲಾಗಿದೆ: ಉಸಾಮರಿಂದ(ರ) ವರದಿಯಾಗಿದೆ, “ಅಲ್ಲಾಹನ ಸಂದೇಶವಾಹಕರೇ ಶಅಬಾನಿನಲ್ಲಿ ಉಪವಾಸ ಆಚರಿಸುವಷ್ಟು ಇತರ ತಿಂಗಳುಗಳಲ್ಲಿ ತಾವು ಉಪವಾಸ ಆಚರಿಸುವುದನ್ನು ನಾವು ಕಂಡಿಲ್ಲವಲ್ಲಾ” ಎಂದು ನಾನು ಪ್ರವಾದಿಯವರೊಂದಿಗೆ(ಸ) ಕೇಳಿದೆ. ಆಗ ಪ್ರವಾದಿಯವರು(ಸ) ಹೇಳಿದರು, “ರಜಬ್ ಹಾಗೂ ರಮಝಾನ್ ತಿಂಗಳ ಮಧ್ಯೆ ಇರುವ ಈ ತಿಂಗಳಲ್ಲಿ ಜನರು ಕರ್ಮಗಳನ್ನೆಸಗುವುದರಲ್ಲಿ ಅನಾಸ್ಥೆ ತೋರುತ್ತಾರೆ. ಪ್ರಸ್ತುತ ತಿಂಗಳ ಕರ್ಮಗಳನ್ನು ಅಲ್ಲಾಹನಲ್ಲಿಗೆ ಎತ್ತಲಾಗುವುದು. ಉಪವಾಸಿಗನಾಗಿರುವ ಸ್ಥಿತಿಯಲ್ಲಿ ನನ್ನ ಕರ್ಮಗಳನ್ನು ಅಲ್ಲಾಹನ ಬಳಿಗೆ ಎತ್ತಲಾಗುವುದನ್ನು ನಾನು ಇಷ್ಟಪಡುತ್ತೇನೆ.”
(ಅಬೂದಾವೂದ್, ನಸಾಈ)
ಆದ್ದರಿಂದ ಈ ತಿಂಗಳಲ್ಲಿ ಅಲ್ಲಾಹನ ಸಂಪ್ರೀತಿ ಗಳಿಸಲಿಕ್ಕಾಗಿ ಹೆಚ್ಚು ಆರಾಧನೆಗಳನ್ನು ನಿರ್ವಹಿಸಬೇಕು. ಆಯಿಶಾ(ರ) ವರದಿ ಮಾಡಿದ್ದಾರೆ: ಪ್ರವಾದಿಯವರು(ಸ) ಹೇಳಿದರು, “ಶಅಬಾನ್ ನನ್ನ ತಿಂಗಳಾಗಿದೆ ಮತ್ತು ರಮಝಾನ್ ಅಲ್ಲಾಹನ ತಿಂಗಳಾಗಿದೆ.”
ಶಅಬಾನ್ 15ರ ಬಳಿಕ ಕಾಯಂ ಆಗಿ ಉಪವಾಸ ಆಚರಿಸುವವರು ಮಾತ್ರ (ಸೋಮವಾರ ಮತ್ತು ಗುರುವಾರ) ಆಚರಿಸಿದರೆ ಸಾಕು. ಕಾರಣ ಅದು ರಮಝಾನಿಗಿರುವ ತಯಾರಿಯ ಒಂದು ಭಾಗವಾಗಿದೆ. ಅಬೂ ಉಮಾಮ(ರ) ಹೇಳುತ್ತಾರೆ: ಪ್ರವಾದಿಯವರ(ಸ) ಸನ್ನಿಧಿಗೆ ಹೋಗಿ ನಾನು ಹೇಳಿದೆ. “ಸ್ವರ್ಗ ಪ್ರವೇಶಕ್ಕೆ ಕಾರಣವಾಗುವ ಒಂದು ಕರ್ಮದ ಕುರಿತು ನನಗೆ ತಿಳಿಸಿರಿ.” ಆಗ ಪ್ರವಾದಿಯವರು(ಸ) ಹೇಳಿದರು, “ಉಪವಾಸ ಆಚರಿಸಿರಿ. ಅದಕ್ಕೆ ಪರ್ಯಾಯವಾಗಿ ಯಾವುದೂ ಇಲ್ಲ.“ ಎರಡನೇ ಬಾರಿ ಪ್ರವಾದಿಯವರನ್ನು(ಸ) ಸಮೀಪಿಸಿದಾಗಲೂ ಅವರು ಉಪವಾಸ ಆಚರಿಸಲು ಆಜ್ಞಾಪಿಸಿದರು. (ಅಹ್ಮದ್, ನಸಾಈ).
ಶಅಬಾನ್ ತಿಂಗಳಿಗೆ ಪ್ರವಾದಿಯವರು(ಸ) ಇಷ್ಟೆಲ್ಲಾ ಮಹತ್ವ ನೀಡಿರುವಾಗ ಇಂದು ಹಲವರು ಶಅಬಾನ್ 15ರ ರಾತ್ರಿಗೆ ಮಾತ್ರ (ಬರಾಅತ್) ಮಹತ್ವ ನೀಡುತ್ತಾರೆ. ಪುರಾವೆಗಳಿಲ್ಲದ ಈ ರಾತ್ರಿಯಲ್ಲಿ ಹಲವಾರು ನವೀನಾಚಾರಗಳು ನಡೆಯುತ್ತವೆ. ಆ ರಾತ್ರಿಯನ್ನು ಒಂದು ಆಚರಣೆಯಾಗಿ ಕಾಣುವವರಿದ್ದಾರೆ. ಅಂದು ವಿಶೇಷ ಧಾರ್ಮಿಕ ಪ್ರವಚನಗಳು ದಿಕ್ರ್, ದುಆಗಳು ನಡೆಯುತ್ತವೆ. ಆ ರಾತ್ರಿಯಲ್ಲಿ ರಮಝಾನಿನ ತರಾವೀಹ್ ನಮಾಝ್‍ನಂತೆ ಸಾಮೂಹಿಕ ನಮಾಝ್ ನಡೆಯುವುದಿದೆ. ಇಶಾ ನಮಾಝ್‍ಗಳು ಪುಟ್ಟ ಸೂರಃಗಳು ಓದಿ ನಂತರದ ಸಾಮೂಹಿಕ ನಮಾಝ್‍ಗೆ ಸಮಯ ಮೀಸಲಿಡುತ್ತಾರೆ. ಆ ರಾತ್ರಿಯಲ್ಲಿ ಲೈಲತುಲ್ ಕದ್ರ್‍ನಂತೆ ರಾತ್ರಿಯಿಡೀ ಜಾಗರಣೆ ಕೂರುವ ಸಂಪ್ರದಾಯವು ಕೂಡಾ ಇದೆ. ಕೆಲವು ಮಂದಿ ತಮ್ಮ ಮನೆಗಳನ್ನೂ ಅಲಂಕರಿಸುತ್ತಾರೆ.
ಆದರೆ ಇವೆಲ್ಲವೂ ನವೀನಾಚಾರಗಳಾಗಿವೆ. ಈ ಆಚರಣೆಗಳನ್ನು ಪ್ರವಾದಿ(ಸ), ಸಹಾಬಿಗಳು ಹಾಗೂ ತಾಬಿಈಗಳು ಮಾಡಿರುವ ಯಾವುದೇ ಪುರಾವೆಗಳಿಲ್ಲ. ಪ್ರವಾದಿಯವರು(ಸ) ಆ ರಾತ್ರಿಯಲ್ಲಿ ಪ್ರಾರ್ಥಿಸಿದ್ದರು ಮತ್ತು ಪಾಪ ವಿಮೋಚನೆಗಾಗಿ ಅಲ್ಲಾಹನಲ್ಲಿ ಬೇಡಿದ್ದರು. ಇದನ್ನು ಈ ಆಚರಣೆಗಳಿಗಿರುವ ಪುರಾವೆಯಾಗಿ ಹಲವರು ಉಲ್ಲೇಖಿಸು ತ್ತಾರೆ. ಪ್ರವಾದಿಯವರು(ಸ) ಅಂದು ಮಾತ್ರವಲ್ಲ, ಎಲ್ಲಾ ದಿವಸವೂ ಪ್ರಾರ್ಥಿಸುತ್ತಿದ್ದರು. ಪ್ರವಾದಿಯವರು(ಸ) ಶಅಬಾನ್ 15ರಂದು ರಾತ್ರಿ ಪ್ರತ್ಯೇಕ ಪ್ರಾರ್ಥನೆ ನಡೆಸಿದ್ದರೆ, ಆ ಪ್ರಾರ್ಥನೆಗಳು ವರದಿ ಮಾಡಲ್ಪಡುತ್ತಿದ್ದವು. ಆದರೆ ಪ್ರಸ್ತುತ ಪ್ರಾರ್ಥನೆಗಳನ್ನು ಯಾರೂ ವರದಿ ಮಾಡಿಲ್ಲ. ಯಾಕೆಂದರೆ ಅದು ಪ್ರವಾದಿಯವರ(ಸ) ದೈನಂದಿನ ಪ್ರಾರ್ಥನೆಯಾಗಿತ್ತು.
ಕೆಲವು ಕಡೆಗಳಲ್ಲಿ, ಪ್ರವಾದಿಯವರು(ಸ) ಬರಾಅತ್‍ನಂದು ರಾತ್ರಿ ಪ್ರಾರ್ಥಿಸಿದ ಪ್ರಾರ್ಥನೆಗಳು ಎಂದು ಹೇಳಿ ಕೆಲವು ಪ್ರಾರ್ಥನೆಗಳನ್ನು ಮುದ್ರಿಸಿ ಮಾರಾಟ ಮಾಡುವವರಿದ್ದಾರೆ. ಆದರೆ ಅದಕ್ಕೆ ಸೂಕ್ತ ಪುರಾವೆಗಳೋ ಹದೀಸ್‍ನ ಪರಂಪರೆಯೋ ಇಲ್ಲ.
ಅವುಗಳ ಪೈಕಿ ಒಂದು ಪ್ರಾರ್ಥನೆ ಇಂತಿದೆ. “ಓ ಅಲ್ಲಾಹ್, ನೀನು `ಉಮ್ಮುಲ್ ಕಿತಾಬ್’ನಲ್ಲಿ ನನಗೆ ದೌರ್ಭಾಗ್ಯ, ಸಂಕಷ್ಟ, ಅಸಹಾಯಕತೆ, ದಾರಿದ್ರ್ಯ ವಿಧಿಸಿದ್ದರೆ ಅವೆಲ್ಲವನ್ನೂ ಅಳಿಸಿ ನನಗೆ ನಿನ್ನ ಔದಾರ್ಯದಿಂದ ಸೌಭಾಗ್ಯವನ್ನು ನೀಡು. ಕಾರಣ ನೀನು ನಿನ್ನ ಸಂದೇಶವಾಹಕರ(ಸ) ನಾಲಗೆಯ ಮೂಲಕ ನಮಗೆ ನೀಡಿರುವ ಗ್ರಂಥದಲ್ಲಿ “ಅಲ್ಲಾಹನು ಇಚ್ಛಿಸುವವನಿಗೆ ಅವನ ಪಾಪಗಳನ್ನು ಅಳಿಸುತ್ತಾನೆ ಮತ್ತು ಅವನಿಚ್ಛಿಸುವವರಿಗೆ ಖಾಯಂ ಗೊಳಿಸುತ್ತಾನೆ” ಎಂದು ಹೇಳಿ ಲ್ಲವೇ! ನಿನ್ನ ವಚನಗಳು ಸತ್ಯವಾಗಿವೆ.”
ಈ ವಾಕ್ಯಗಳಲ್ಲಿ ವೈರುಧ್ಯಗಳಿವೆ. ಕಾರಣ, ದೌರ್ಭಾಗ್ಯವನ್ನು ಅಳಿಸಿ ಸೌಭಾಗ್ಯವನ್ನು ನೀಡಬೇಕು ಎಂಬುದಕ್ಕೆ ಪುರಾವೆಯಾಗಿ ನೀಡುವ ಕುರ್‍ಆನ್ ವಾಕ್ಯದ ಅರ್ಥವು ‘ಉಮ್ಮುಲ್ ಕಿತಾಬ್’ನಿಂದ ಏನನ್ನೂ ಅಳಿಸಿ ಹಾಕಲಾಗುವುದಿಲ್ಲ ಮತ್ತು ಏನನ್ನೂ ಹೊಸದಾಗಿ ಸೇರಿಸಲಾಗುವುದಿಲ್ಲ ಎಂದಾಗಿದೆ. ಮಾತ್ರವಲ್ಲ ಆ ಪ್ರಾರ್ಥನೆಗೆ ನೈಜ ಪ್ರಾರ್ಥನೆಯ ಶೈಲಿಯೂ ಇಲ್ಲ. “ಪ್ರಾರ್ಥಿಸುವಾಗ ನಾವು ಅಲ್ಲಾಹನೊಂದಿಗೆ ದೃಢತೆಯಿಂದ ಬೇಡಬೇಕು” ಎಂದು ಪ್ರವಾದಿಯವರು(ಸ) ಕಲಿಸಿದ್ದಾರೆ. ಆದ್ದರಿಂದ ಇಂತಹ ಪ್ರಾರ್ಥನೆಗಳಲ್ಲಿ ಒಂದು ಆಲಸ್ಯತನ ಎದ್ದು ತೋರುತ್ತದೆ. ಇದು ಓರ್ವ ವಿಶ್ವಾಸಿಗೆ ಭೂಷಣವಲ್ಲ. ಯಾರೋ ಸೃಷ್ಟಿಸಿದ ಪ್ರಾರ್ಥನೆಗಿಂತ ಪ್ರವಾದಿಯವರು(ಸ) ಕಲಿಸಿದ ಪ್ರಾರ್ಥನೆಯೇ ಪ್ರತೀ ವಿಶ್ವಾಸಿಯ ಆಯುಧವಾಗಬೇಕು.
ಶಅಬಾನ್ 15ರಂದು ಜನರು ಪ್ರತ್ಯೇಕವಾಗಿ ಮಾಡುವ ಹಲವು ಕರ್ಮಗಳಿಗೆ ಪ್ರವಾದಿಯವರ(ಸ) ಮಾದರಿಯಿಲ್ಲ. ಇಂತಹ ಅನಾಚಾರಗಳನ್ನೆಸಗಲು ಇಸ್ಲಾಮ್ ಬಯಸುವುದೂ ಇಲ್ಲ. ಆದರೆ ಇಸ್ಲಾಮ್ ಬಯಸುವ ಕಾರ್ಯಗಳನ್ನು ಮಾಡುವಲ್ಲಿ ಈ ಮಂದಿ ಕಾಣುತ್ತಿಲ್ಲ. ಶಅಬಾನ್ 15ರಂದು ರಾತ್ರಿ ಮಸೀದಿಗಳಲ್ಲಿ ಜರಗುವ ಅನ್ನ ಸಂತರ್ಪಣೆ, ಧಾರ್ಮಿಕ ಪ್ರವಚನಗಳಲ್ಲಿ ಮುಂದಿ ರುವವರು ಅಂದಿನ ಮಗ್ರಿಬ್, ಇಶಾ ನಮಾಝ್ ನಿರ್ವಹಿಸಿದ್ದಾರೆಯೇ ಎಂದು ನೋಡಿದರೆ ಅವರ ಈಮಾನಿನ ಕಾಪಟ್ಯವು ಗೋಚರವಾಗಬಹುದು. ಅಂದು ರಾತ್ರಿಯಿಡೀ ಸಕ್ರಿಯರಾಗಿರುವ ಎಷ್ಟು ಮಂದಿ ಮರು ದಿನದ ಸುಬಹ್ ನಮಾಝಿಗೆ ಎದ್ದೇಳುತ್ತಾರೆ?
ಕಡ್ಡಾಯಗೊಳಿಸಲ್ಪಟ್ಟ ರಮಝಾನಿನ ಉಪವಾಸ ವನ್ನು ತ್ಯಜಿಸುವವರು ಕೂಡಾ ಶಅಬಾನ್ 15ರ ಪುರಾವೆಗಳಿಲ್ಲದ ಉಪವಾಸವನ್ನು ಎಷ್ಟೇ ಕಷ್ಟ ಪಟ್ಟಾದರೂ ಆಚರಿಸುತ್ತಾರೆ. ಜನರ ಮನಸ್ಥಿತಿ ವಿಚಿತ್ರವಾಗಿದೆ. ಇಸ್ಲಾಮ್ ಆಜ್ಞಾಪಿಸುವ ಕಾರ್ಯಗಳನ್ನು ಬದಿಗಿಟ್ಟು ತಮ್ಮ ಪೂರ್ವಿಕರು ಮಾಡಿದ್ದ ಕರ್ಮಗಳನ್ನು ಅನುಸರಿಸುತ್ತಿದ್ದಾರೆ. ಇಸ್ಲಾಮ್ ಮಾಡಬಾರದೆಂದು ಹೇಳಿರುವ ಕಾರ್ಯಗಳನ್ನು ಹಟದಿಂದ ಮಾಡುತ್ತಾರೆ. ಇವಕ್ಕೆಲ್ಲಾ ಇಸ್ಲಾಮ್ ಅನುಮತಿ ನೀಡಿಲ್ಲ ಎಂದು ತಿಳಿದಿದ್ದೂ ಜನರಿಂದ ಇವೆಲ್ಲವನ್ನೂ ಮಾಡಿಸುವ ಪುರೋಹಿತ ವರ್ಗವು ತಮ್ಮ ಈ ಕರ್ಮಗಳ ಬಗ್ಗೆ ಪ್ರಜ್ಞಾವಂತರಾಗಬೇಕಾಗಿದೆ ಮತ್ತು ಆತ್ಮಾವಲೋಕನ ನಡೆಸಬೇಕಾಗಿದೆ.
ಈ ರಾತ್ರಿಯನ್ನು ವಿಧಿ ನಿರ್ಣಯದ ರಾತ್ರಿ ಎಂದು ಹೇಳುವವರಿದ್ದಾರೆ. ಅಂದು ಮನುಷ್ಯರ ವಿಧಿಗಳನ್ನು ನಿರ್ಣಯಿಸಲಾಗುತ್ತದಂತೆ. ಆದರೆ ಕುರ್‍ಆನ್ ವಿಧಿ ನಿರ್ಣಯದ ರಾತ್ರಿ ಯಾವುದೆಂದು ಸ್ಪಷ್ಟವಾಗಿ ತಿಳಿಸಿದೆ. ಕುರ್‍ಆನನ್ನು ಅವತೀರ್ಣ ಗೊಳಿಸಲಾದ ರಾತ್ರಿ, ಲೈಲತುಲ್ ಕದ್ರ್. ಈ ರಾತ್ರಿ ವಿಧಿ ನಿರ್ಣಯವಾಗುತ್ತದೆ ಎಂಬ ವಿಷಯದಲ್ಲಿ ತರ್ಕವಿಲ್ಲ. ಈ ರಾತ್ರಿ ರಮಝಾನ್ ತಿಂಗಳಲ್ಲಾಗಿದೆ. ಹಾಗಿರುವಾಗ ಬರಾಅತ್‍ನ ರಾತ್ರಿ ವಿಧಿ ನಿರ್ಣಯದ ರಾತ್ರಿಯಾಗುವುದು ಹೇಗೆ?
ಒಟ್ಟಿನಲ್ಲಿ ಸಮಾಜವು ಹಲವಾರು ಅನಾಚಾರ ಗಳಲ್ಲೂ ನವೀನಾಚಾರಗಳಲ್ಲೂ ಮುಳುಗಿರುವಾಗ ನಾವು ಅದರ ವಾಸ್ತವಿಕತೆಯನ್ನು ಬಲ್ಲ ಮೂಲಗಳಿಂದ ತಿಳಿಯಲು ಪ್ರಯತ್ನಿಸಬೇಕಾಗಿದೆ. ಪೂರ್ವಿಕರ ಅಂಧಾನುಕರಣೆಯು ಇಸ್ಲಾಮಿನ ಶೈಲಿಯಲ್ಲ. ಅದು ಇಸ್ಲಾಮಿನ ಆಚಾರಗಳಿಗೆ ಪುರಾವೆಯೂ ಅಲ್ಲ. ಇಸ್ಲಾಮಿಗೆ ಪುರಾವೆ ಕುರ್‍ಆನ್ ಹಾಗೂ ಪ್ರವಾದಿಚರ್ಯೆಯಾಗಿದೆ. ಆದ್ದರಿಂದ ನಾವು ನಮ್ಮ ಕರ್ಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ. ಅಲ್ಲಾಹನು ನಮ್ಮೆಲ್ಲರಿಗೆ ರಮಝಾನ್ ತಿಂಗಳ ಉಪವಾಸ ಆಚರಿಸುವ ಸೌಭಾಗ್ಯವನ್ನು ಕರುಣಿಸಲಿ.