ಸೋಮವಾರ, ಸೆಪ್ಟೆಂಬರ್ 23, 2013

ಜನರಿಗೆ ಸ್ವರ್ಗ-ನರಕ ನೀಡಲು ನೀವು ಯಾರು?


ಇಂದು ಮನುಷ್ಯನು ಹಲವಾರು ತಪ್ಪು ಗಳನ್ನೆಸಗುತ್ತಾನೆ. ಅದು ತಿಳಿದೋ ತಿಳಿಯದೆಯೋ  ಆಗಿರಬಹುದು. ಆದರೆ ಆ ತಪ್ಪುಗಳನ್ನು ಕಂಡಾಗ ಪರಸ್ಪರ ವಿಮರ್ಶಿಸುವ ಅಥವಾ ತಿದ್ದುವ  ಸ್ವಭಾವವು ಮಾನವ ಸಹಜವಾಗಿದೆ. ಕೆಲವರು ತಪ್ಪುಗಳನ್ನು ಕಂಡು ಪ್ರತ್ಯಕ್ಷವಾಗಿ  ಪ್ರತಿಕ್ರಿಯಿಸದಿದ್ದರೂ ಅವರ ಮನಸ್ಸಿನಲ್ಲಿ ಆ ತಪ್ಪುಗಳ ಬಗ್ಗೆ ಅಸಹನೆ, ತಿರಸ್ಕಾರ ಮನೋಭಾವ  ಮೂಡುತ್ತದೆ. ತಪ್ಪುಗಳನ್ನು ತಿದ್ದುವುದು ಸಮಾಜದಲ್ಲಿರುವ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ.  ಕೆಡುಕು ಮುಕ್ತ ಸಮಾಜದ ನಿರ್ಮಾಣಕ್ಕೆ ಇದು ಅನಿವಾರ್ಯವಾಗಿದೆ. ಇಸ್ಲಾಮ್ ಕೂಡಾ  ಇದನ್ನೇ ಆಜ್ಞಾಪಿಸಿದೆ. ಅಲ್ಲಾಹನ ಪ್ರವಾದಿಯವರು(ಸ) ಹೇಳಿದರು, "ಯಾರಾದರೂ ಕೆಡುಕನ್ನು  ಕಾಣುವುದಾದರೆ ಅದನ್ನು ತನ್ನ ಕೈಯಿಂದ ತಡೆಯಲಿ. ಅದು ಸಾಧ್ಯವಿಲ್ಲವೆಂದಾದರೆ  ನಾಲಗೆಯಿಂದ ತಡೆಯಲಿ. ಅದೂ ಅಸಾಧ್ಯ ಎಂದಾದರೆ ಅದರ ಬಗ್ಗೆ ಮನಸ್ಸಿನಲ್ಲಾದರೂ  ತಿರಸ್ಕಾರ ಮನೋಭಾವ ಮೂಡಬೇಕು. ಇದು ವಿಶ್ವಾಸದ ಅತ್ಯಂತ ದುರ್ಬಲ ಸ್ತರವಾಗಿದೆ."  ಆದ್ದರಿಂದ ತಪ್ಪನ್ನು ಕಂಡಾಗ ಮೌನವಹಿಸುವುದು ಓರ್ವ ವಿಶ್ವಾಸಿಯ ಮಟ್ಟಿಗೆ ಭೂಷಣವಲ್ಲ.  ತಪ್ಪನ್ನು ಕಂಡಾಗ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸದೆ ತಟಸ್ಥರಾಗುವುದಾದರೆ ಅದು  ಆ ತಪ್ಪನ್ನು ಪೆÇ್ರೀತ್ಸಾಹಿಸಿದಂತೆ.
ಆದರೆ ತಪ್ಪೆಸಗಿದಾತನನ್ನು ತಿದ್ದುವಾಗ ಅಥವಾ ವಿಮರ್ಶಿಸುವಾಗ ವಿಶ್ವಾಸಿಗಳು ಪಾಲಿಸಬೇಕಾದ  ಕೆಲವು ಶಿಷ್ಟಾಚಾರಗಳೂ ನಿಯಮಗಳೂ ಇವೆ. ಸಂಸ್ಕರಣೆಯ ಕಾರ್ಯವು ಯಶಸ್ವಿಯಾಗಲು  ಪರಲೋಕದಲ್ಲಿ ಪ್ರತಿಫಲ ಪಡೆಯಲು ಅವುಗಳ ಪಾಲನೆಯು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ  ತಿದ್ದುವಾತನೇ ತಪ್ಪಿತಸ್ಥನಾಗಬಹುದು. ಅಬೂ ಹುರೈರ(ರ) ವರದಿ ಮಾಡಿರುವ ಒಂದು ಹದೀಸ್  ಹೀಗಿದೆ. "ಅಲ್ಲಾಹನ ಪ್ರವಾದಿ(ಸ) ಹೇಳಿರುವುದಾಗಿ ನಾನು ಕೇಳಿದ್ದೇನೆ. ಇಸ್ರಾಯೀಲ್ಯ ರಾದ  ಎರಡು ಮಂದಿ ಸಹೋದರರಿದ್ದರು. ಇವರ ಪೈಕಿ ಓರ್ವನು ಸದಾ ಕೆಡುಕುಗಳಲ್ಲಿ ಮುಳುಗಿದ್ದನು.  ಮತ್ತೋರ್ವನು ಸದಾ ಆರಾಧನೆ ಗಳಲ್ಲಿ ತಲ್ಲೀನನಾಗಿ ಬದುಕುತ್ತಿದ್ದನು. ಭಕ್ತನು ತನ್ನ  ಸಹೋದರನನ್ನು ಯಾವಾಗಲೂ ತಪ್ಪೆಸ ಗುವವನಾಗಿಯೇ ಕಾಣುತ್ತಿದ್ದನು. ಅವನು  ಉಪದೇಶಿಸುತ್ತಿದ್ದನು." ಪ್ರಿಯ ಸಹೋದರಾ, ಕೆಡುಕುಗಳನ್ನು ತ್ಯಜಿಸು."
ಒಮ್ಮೆ ಒಂದು ತಪ್ಪಿನ ಹೆಸರಿನಲ್ಲಿ ಭಕ್ತನು ಹೇಳಿದನು, "ನೀನು ತಪ್ಪುಗಳಿಂದೆಲ್ಲಾ ದೂರವಿರ  ಬೇಕು." ಆಗ ತಪ್ಪೆಸಗುವ ಸಹೋದರನು ಹೇಳಿದನು, "ಇದು ನನ್ನ ಹಾಗೂ ನನ್ನ ಸೃಷ್ಟಿಕರ್ತನ  ಮಧ್ಯೆ ಇರುವ ವಿಚಾರ. ಇದಕ್ಕೆ ನೀನು ಮೂಗು ತೂರಿಸಬೇಡಾ. ನನ್ನ ಮೇಲ್ನೋಟ  ವಹಿಸುವವನಾಗಿ ನಿನ್ನನ್ನು ನೇಮಿಸಲಾಗಿದೆಯೇ?" ಆಗ ಭಕ್ತನು ಹೇಳಿದನು. "ಅಲ್ಲಾಹನಾಣೆ,  ಅವನು ನಿನ್ನನ್ನು ಎಂದೂ ಕ್ಷಮಿಸಲಿಕ್ಕಿಲ್ಲ. ಒಂದು ದಿವಸವೂ ನಿನ್ನನ್ನು ಸ್ವರ್ಗಕ್ಕೆ ಪ್ರವೇಶ  ಗೊಳಿಸಲಿಕ್ಕಿಲ್ಲ." (ಪ್ರವಾದಿಯವರು(ಸ) ಹೇಳು ತ್ತಾರೆ) ಬಳಿಕ ಅವರ ಆತ್ಮವನ್ನು ಅಲ್ಲಾಹನು  ತೆಗೆದನು. ಹಾಗೆ ಅವರು ಸೃಷ್ಟಿಕರ್ತನ ಸನ್ನಿಧಿಗೆ ತಲುಪಿದರು. ಅಲ್ಲಾಹನು ಭಕ್ತನೊಂದಿಗೆ  ಕೇಳಿದನು, "ನನ್ನ ಬಗ್ಗೆ ಹೆಚ್ಚು ತಿಳಿದವನು ನೀನಾ? ಅಥವಾ ನನ್ನ ಅಧಿಕಾರದಲ್ಲಿ ನಿನಗೆ  ಏನಾದರೂ ಪಾಲಿದೆಯೇ?" ತಪ್ಪೆಸಗುತ್ತಿದ್ದವನೊಂದಿಗೆ ಅಲ್ಲಾಹನು ಹೇಳಿದನು, "ನನ್ನ  ಕರುಣೆಯಿಂದಾಗಿ ನೀನು ಸ್ವರ್ಗಕ್ಕೆ ಹೋಗು" ಭಕ್ತನ ಕುರಿತು ಮಲಕ್‍ಗಳಿಗೆ ಆಜ್ಞಾಪಿಸಿದನು.  "ಇವನನ್ನು ನೀವು ನರಕಕ್ಕೆ ಎಳೆದುಕೊಂಡು ಹೋಗಿರಿ". (ಹದೀಸ್ ವರದಿ ಮಾಡಿದ ಬಳಿಕ)  ಅಬೂ ಹುರೈರ(ರ) ಹೇಳುತ್ತಾರೆ, "ನನ್ನ ಆತ್ಮವು ಯಾರ ಹಸ್ತದಲ್ಲಿ ದೆಯೋ ಆತನಾಣೆ! ಓರ್ವನ  ಇಹ-ಪರಗಳನ್ನು ಬುಡಮೇಲುಗೊಳಿಸಲು ಆತ ಉಚ್ಚರಿಸುವ ಒಂದು ಮಾತು ಸಾಕು."
ತಪ್ಪುಗಳು ಸಂಭವಿಸುವುದು ಮನುಷ್ಯ ಸಹಜವಾಗಿದೆ. ಎಲ್ಲ ತಪ್ಪುಗಳಿಂದ ಮುಕ್ತರಾದ ಪ್ರವಾದಿಗಳ  ಹೊರತು ಇದರಿಂದ ಯಾರೂ ಮುಕ್ತರಾಗಿಲ್ಲ. ಆದ್ದರಿಂದ ತಪ್ಪೆಸಗುವವರನ್ನು ನಿಂದಿಸಬಾರದು  ಮತ್ತು ಅವಹೇಳನಕ್ಕೆ ಗುರಿಪಡಿಸಬಾರದು. ಅದು ರಹಸ್ಯವಾಗಿಯಾದರೂ  ಬಹಿರಂಗವಾಗಿಯಾದರೂ ಸರಿ. ತಪ್ಪೆಸಗುವವರನ್ನು ವೈಯಕ್ತಿಕವಾಗಿ ಕಂಡು ಅವರಿಗೆ ತನ್ನ ತಪ್ಪಿನ  ಕುರಿತು ಮನವರಿಕೆ ಮಾಡಿಕೊಡಬೇಕು. ಅವರ ತಪ್ಪಿನ ಭವಿಷ್ಯದ ಬಗ್ಗೆ ತಿಳಿಹೇಳಬೇಕು. ಆಗ  ಅವರು ತನ್ನ ತಪ್ಪನ್ನು ತಿದ್ದಿಕೊಳ್ಳಲು ತಯಾ ರಾಗುತ್ತಾರೆ. ತಿದ್ದಿದವನ ಕುರಿತು ಗೌರವ  ಮನೋಭಾವ ತಾಳುತ್ತಾರೆ. ತನ್ನ ಮೇಲೆ ಆತನಿಗೆ ಏನೋ ಕಾಳಜಿ ಇದೆ ಎಂದು ಬಾವಿಸಿ ಅವರ  ಸಂಬಂಧವು ಸುದೃಢವಾಗುತ್ತದೆ. ಮುಂದೆ ಹಲವಾರು ಸಲಹೆ, ಉಪದೇಶಗಳಿಗೆ ಆ  ಸಹೋದರನನ್ನು ಸವಿೂಪಿಸುತ್ತಾನೆ.
ಉಮರ್(ರ) ಹೇಳುತ್ತಾರೆ, "ನಿಮ್ಮ ಸಹೋದರನು ಒಂದು ತಪ್ಪೆಸಗಿದರೆ ಅವನನ್ನು ಆ ತಪ್ಪಿನಿಂದ  ಕೈ ಹಿಡಿದು ಮೇಲೆತ್ತಲು ಮತ್ತು ಸನ್ಮಾರ್ಗದಲ್ಲಿ ಮುನ್ನಡೆಸಲು ಪ್ರಯತ್ನಿಸಬೇಕು. ಮಾಡಿದ ತಪ್ಪಿಗೆ  ಪಶ್ಚಾತ್ತಾಪ ಮನೋಭಾವ ಮೂಡಲು ಮತ್ತು ಅವನನ್ನು  ಕ್ಷಮಿಸಲು ಅಲ್ಲಾಹನೊಂದಿಗೆ  ಪ್ರಾರ್ಥಿಸಬೇಕು. ನಿಮ್ಮ ಸಹೋದರರ ವಿಚಾರದಲ್ಲಿ ಯಾವತ್ತೂ ಶೈತಾನ ನನ್ನು  ಸಹಾಯಕನಾಗಿಸಬಾರದು."
ಒಮ್ಮೆ ಅಬೂದರ್ದಾ(ರ) ಒಂದು ದಾರಿಯ ಮೂಲಕ ಸಾಗುತ್ತಿದ್ದಾಗ ಜನರು ಓರ್ವನನ್ನು  ಸಿಕ್ಕಾಪಟ್ಟೆ ಬೈಯುತ್ತಿರುವುದನ್ನು ಕಂಡರು. ಅಬೂದರ್ದಾ ಅವರೊಂದಿಗೆ ಕೇಳಿದರು, "ನಿಮ್ಮ ಈ  ಸಹೋದರನು ಒಂದು ಬಾವಿಗೆ ಬಿದ್ದಿದ್ದಾನೆ ಎಂದು ಭಾವಿಸೋಣ. ಆಗ ನೀವು ಈತನೊಂದಿಗೆ  ಹೇಗೆ ವರ್ತಿಸುವಿರಿ?" ಅವರು ಹೇಳಿದರು. "ನಾವು ಅವರನ್ನು ಬಾವಿಯಿಂದ ಮೇಲೆತ್ತಲು  ಯತ್ನಿಸುವೆವು." ಆಗ ಅಬೂದರ್ದಾ ಹೇಳಿದರು. "ಹಾಗಾದರೆ ಈ ಸಹೋದರನನ್ನು  ಆಕ್ಷೇಪಿಸಬೇಡಿ. ಅವನ ಒಳಿತಿಗಾಗಿ ಪ್ರಾರ್ಥಿಸಿರಿ. ತಪ್ಪುಗಳಲ್ಲಿ ಸಿಲುಕುವುದರಿಂದ ನಿಮ್ಮನ್ನು  ಕಾಪಾಡಿದ ಅಲ್ಲಾಹನನ್ನುಸ್ತುತಿಸಿರಿ." ಆಗ ಅವರು ಕೇಳಿದರು. "ನಾವು ಈತನನ್ನು ದ್ವೇಷಿಸುವುದಕ್ಕೆ  ವಿರೋಧ ವಿದೆಯೇ?" ಅಬೂದರ್ದಾ ಹೇಳಿದರು, "ನಾನು ಈತನ ತಪ್ಪುಗಳನ್ನು ಮಾತ್ರ  ದ್ವೇಷಿಸುತ್ತೇನೆ. ಅದನ್ನು ಆತ ತ್ಯಜಿಸಿದ ಕ್ಷಣದಲ್ಲೇ ಆತ ನನ್ನ ಗೆಳೆಯನಾಗುವನು."
ಇಂದು ತಪ್ಪನ್ನು ತಿದ್ದುವ ವಿಚಾರದಲ್ಲಿ ಹೆಚ್ಚಾಗಿ ಸಂಬಂಧಗಳೇ ಮುರಿಯುತ್ತವೆ. ಕಾರಣ ಅದರ  ಶೈಲಿಯಾಗಿದೆ. ನಾಲ್ಕು ಜನರ ಮುಂದೆ ತಪ್ಪೆಸಗಿದವನನ್ನು ನಾವು ತರಾಟೆಗೆ ತೆಗೆದು ಕೊಳ್ಳುತ್ತೇವೆ.  ಆತನನ್ನು ಅವಹೇಳನ ಮಾಡುತ್ತೇನೆ. ಇಂತಹ ಸಂದರ್ಭಗಳಲ್ಲಿ ತಪ್ಪೆಸಗಿದವನು ತನ್ನ ತಪ್ಪನ್ನು  ತಿದ್ದುವುದಕ್ಕೆ ಬದಲಾಗಿ ತಿದ್ದಿದವನ ಮೇಲೆ ಹಗೆತನ ಕಟ್ಟಿಕೊಳ್ಳುತ್ತಾನೆ. ಆತನ ಮೇಲೆ ಪ್ರತಿಕಾರ  ತೀರಿಸಲು ಅವಕಾಶಕ್ಕಾಗಿ ಕಾಯು ತ್ತಿರುತ್ತಾನೆ. ಈ ರೀತಿಯ ತಿದ್ದುವಿಕೆಯಿಂದಾಗಿ ಆತನು ತನ್ನ  ತಪ್ಪನ್ನು ಮುಂದುವರಿಸುತ್ತಾನೆ ಮತ್ತು ಅದು ಇತರ ತಪ್ಪುಗಳಿಗೆ ನಾಂದಿಯಾಗುತ್ತದೆ. ಕೊನೆಗೆ  ತಿದ್ದಿದವನೇ ತಪ್ಪಿತಸ್ಥನಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇಂದು ಜನರನ್ನು ಸ್ವರ್ಗಕ್ಕೂ ನರಕಕ್ಕೂ ವಿಂಗಡಿಸಿ ಕಳುಹಿಸುವ ಹೊಣೆಗಾರಿಕೆಯನ್ನು ಕೆಲ ವರು  ವಹಿಸಿಕೊಂಡಂತೆ ಭಾಸವಾಗುತ್ತದೆ. ಅದೂ ಕೂಡಾ ಬಹಿರಂಗವಾಗಿ ಸ್ಟೇಜುಗಳಲ್ಲೂ ಪೇಜು  ಗಳಲ್ಲೂ ನಡೆಯುತ್ತಿದೆ. ತಪ್ಪುಗಳನ್ನು ತಿದ್ದಿ ಕೊನೆಗೆ ಸ್ವರ್ಗ ನರಕದ ತೀರ್ಪು ನೀಡಿ ಬಿಡುತ್ತಾರೆ.  ಇದ ರಿಂದಾಗಿ ಸಮಾಜದಲ್ಲಿ ಅಶಾಂತಿ ಮೂಡುತ್ತದೆಯೇ ಹೊರತು ಶಾಂತಿ ನೆಲೆಸಲು  ಸಾಧ್ಯವಿಲ್ಲ. ಇದು ಜನರ ಮಧ್ಯೆ ದ್ವೇಷವನ್ನು ಬಿತ್ತುತ್ತದೆ.
"ಒಳಿತನ್ನು ಆಜ್ಞಾಪಿಸಿರಿ ಕೆಡುಕನ್ನು ತಡೆಯಿರಿ" ಎಂಬ ಕುರ್‍ಆನ್‍ನ ಆಹ್ವಾನವನ್ನು ಸ್ವೀಕರಿಸಿ  ಕಾರ್ಯವೆಸಗುವುದಾದರೂ ಇತರರ ಅಭಿ ಮಾನಕ್ಕೂ ಪ್ರತಿಷ್ಠೆಗೂ ಕುಂದುಂಟು ಮಾಡ ಬಾರದು.  ಮೇಲೆ ಉದ್ಧರಿಸಲಾದ ಬನೀ ಇಸ್ರಾಯೀಲ್ ಸಹೋದರರ ಕಥೆಯು ಇದನ್ನೇ ಬೆಟ್ಟು  ಮಾಡುತ್ತದೆ. ತಪ್ಪೆಸಗಿದ ಕಾರಣಕ್ಕಾಗಿ ಓರ್ವನಿಗೆ ದೇವನ ಕುರುಣೆಯನ್ನೂ ಸ್ವರ್ಗವನ್ನೂ  ನಿಷೇಧಿಸುವುದು ಪ್ರಾಮಾಣಿಕ ವಿಶ್ವಾಸಿಯ ಕೆಲಸವಲ್ಲ, ಪ್ರವಾದಿಯವರು(ಸ) ಅತ್ಯಂತ  ಗೌರವಯುತವಾಗಿ ಹೇಳಿದ್ದಾರೆ. "ಇಂತಹ ವ್ಯಕ್ತಿ ಸ್ವರ್ಗಕ್ಕೆ ಹೋಗುತ್ತಾನೆ, ಇಂತಹ ವ್ಯಕ್ತಿ ನರಕಕ್ಕೆ  ಹೋಗುತ್ತಾನೆ ಎಂದೆಲ್ಲಾ ತೀರ್ಪು ನೀಡುವ ಸಮುದಾಯದ ಮಂದಿಗೆ ನಾಶ."
ಆದ್ದರಿಂದ ಸ್ವರ್ಗ-ನರಕವನ್ನು ಯಾರಿಗೆ ನೀಡಬೇಕು ಎಂಬುದನ್ನು ತೀರ್ಮಾನಿಸುವುದು  ಅಲ್ಲಾಹನು ಮಾತ್ರ. ಅದರಲ್ಲಿ ಯಾರೂ ಹಸ್ತಕ್ಷೇಪ ನಡೆಸುವಂತಿಲ್ಲ. ಅಲ್ಲಾಹನು ಇಚ್ಛಿಸು ವವನಿಗೆ  ಅದನ್ನು ನೀಡುತ್ತಾನೆ. ಆತನ ಅಧಿಕಾರದಲ್ಲಿ ಹಸ್ತಕ್ಷೇಪ ನಡೆಸುವುದು ಶಿರ್ಕ್ ಆಗಿದೆ. ಶಿರ್ಕ್‍ನ್ನು  ತಡೆಯಲು ಹೋಗಿ ಸ್ವತಃ ಶಿರ್ಕ್‍ನಲ್ಲಿ ಸಿಲುಕಿ ಕೊಳ್ಳುವ ದುರವಸ್ಥೆಯು ಯಾರಿಗೂ  ಬರಬಾರದು. ಸ್ವರ್ಗ-ನರಕ ನೀಡುವ ಮಂದಿಗೆ ತನ್ನ ಸ್ವಂತ ಸ್ಥಿತಿಯ ಕುರಿತು ಹೇಳಲು ಅಸಾಧ್ಯ.  ಹೆಚ್ಚೇಕೆ! ಪ್ರವಾದಿಯವರಿಗೆ(ಸ) ತನ್ನ ಬಗ್ಗೆ ಹೇಳಲಿಕ್ಕಾಗಲಿಲ್ಲ. ಒಮ್ಮೆ ಪ್ರವಾದಿಯವರು(ಸ) ಹೀಗೆ  ಹೇಳಿದರು, "ಅಲ್ಲಾಹನಾಣೆ, ನಾನು ಪ್ರವಾದಿಯಾಗಿದ್ದ ಅಂತ್ಯ ದಿನದಲ್ಲಿ ನನಗೇನು  ಸಂಭವಿಸುತ್ತದೆ ಎಂದು ನನಗೆ ತಿಳಿದಿಲ್ಲ."
ಆದ ಕಾರಣ ಯಾರಿಗೂ ಏನನ್ನೂ ತೀರ್ಮಾನಿಸಲು ಸಾಧ್ಯವಿಲ್ಲ. ಅವೆಲ್ಲವೂ ಅಲ್ಲಾಹನಿಗೆ  ವಿೂಸಲಾದ ವಿಚಾರವಾಗಿದೆ. ತಪ್ಪನ್ನು ತಿದ್ದಲು ಹೋಗಿ ಸ್ವತಃ ತಪ್ಪಿತಸ್ಥರಾಗದಂತೆ ಎಚ್ಚರ  ವಹಿಸಬೇಕು. ಉಮರ್(ರ) ಹೇಳಿದರು. "ನಿಮ್ಮ ವಿಚಾರದಲ್ಲಿ ನಾನು ಅತ್ಯಂತ ಹೆದರುವುದು  ಓರ್ವನು ಸ್ವಂತ ಅಭಿಪ್ರಾಯದಲ್ಲಿ ಹೆಮ್ಮೆ ಪಡುವುದನ್ನಾಗಿದೆ. ತಾನು ಓರ್ವ ವಿದ್ವಾಂಸ ಎಂದು  ಯಾರಾದರೂ ಸ್ವತಃ ಹೇಳಿಕೊಂಡರೆ ಆತ ಅಜ್ಞಾನಿಯಾಗಿದ್ದಾನೆ. ತಾನು ಸ್ವರ್ಗಕ್ಕೆ ಹಕ್ಕುದಾರ  ಎಂದು ಓರ್ವನು ಹೆಮ್ಮೆಪಟ್ಟರೆ ಆತ ನರಕಕ್ಕೆ ಹಕ್ಕುದಾರನಾಗುತ್ತಾನೆ.

ಸೋಮವಾರ, ಸೆಪ್ಟೆಂಬರ್ 02, 2013

ಆ ಮೂವರ ಪ್ರಾರ್ಥನೆಯ ಬಗ್ಗೆ ಎಚ್ಚರ ವಹಿಸಿ



ಓರ್ವ ವಿಶ್ವಾಸಿಗೆ ಸಂಬಂಧಿಸಿದಂತೆ ಪ್ರಾರ್ಥನೆ ಎಂಬುದು ಆತನ ಆಯುಧವಾಗಿದೆ. ಪ್ರಾರ್ಥನೆಯು ವಿಶ್ವಾಸಿಯನ್ನು ತನ್ನ ಸೃಷ್ಟಿಕರ್ತನೊಂದಿಗೆ ಜೋಡಿಸುತ್ತದೆ. ವಿಶ್ವಾಸಿಯು ಅಲ್ಲಾಹ ನೊಂದಿಗೆ ಪ್ರಾರ್ಥಿಸುವಾಗ ಅಲ್ಲಾಹನು ಸಂತುಷ್ಟನಾಗುತ್ತಾನೆ. ಪ್ರವಾದಿಯವರು(ಸ) ಪ್ರಾರ್ಥನೆಯನ್ನು ಆರಾಧನೆ ಎಂದಿದ್ದಾರೆ. ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ ಅಲ್ಲಾಹನು ಖಂಡಿತವಾಗಿಯೂ ಸ್ವೀಕರಿಸುತ್ತಾನೆ. ಅಲ್ಲಾಹನ ವಿಧಿಯನ್ನು ಬದಲಿಸುವ ಶಕ್ತಿಯು ಪ್ರಾರ್ಥನೆಯಾಗಿದೆ. ಪ್ರವಾದಿಯವರು(ಸ) ಹೇಳಿದರು. “ಪ್ರಾರ್ಥನೆ ಯಲ್ಲದೆ ವಿಧಿಯನ್ನು ಬದಲಿಸುವುದಿಲ್ಲ. ಒಳಿತಲ್ಲದೆ ಆಯುಷ್ಯವನ್ನು ಹೆಚ್ಚಿಸುವುದಿಲ್ಲ.”
ನಾವೆಲ್ಲರೂ ಪ್ರಾರ್ಥಿಸುತ್ತೇವೆ. ನಮ್ಮ ಬೇಡಿಕೆಗಳನ್ನು ಕಷ್ಟ, ಬೇಗುದಿಗಳನ್ನೂ ಅಲ್ಲಾಹನ ಮುಂದೆ ಇಡುತ್ತೇವೆ. ಅಲ್ಲಾಹನು ಬಯಸಿದರೆ ಅದಕ್ಕೆ ಉತ್ತರ ನೀಡುತ್ತಾನೆ ಅಥವಾ ತಿರಸ್ಕರಿಸುತ್ತಾನೆ. ತಿರಸ್ಕರಿಸಲ್ಪಡದ ಮೂರು ಮಂದಿಯ ಪ್ರಾರ್ಥನೆಗಳ ಕುರಿತು ಪ್ರವಾದಿಯವರು(ಸ) ಹೇಳಿದ್ದಾರೆ.
ಅಬೂ ಹುರೈರಾ(ರ) ವರದಿ ಮಾಡಿದ್ದಾರೆ. ಪ್ರವಾದಿ ಯವರು(ಸ) ಹೇಳಿದರು, “ಮೂರು ಮಂದಿಯ ಪ್ರಾರ್ಥನೆಗಳು ತಿರಸ್ಕರಿಸಲ್ಪಡುವುದಿಲ್ಲ. ಉಪವಾಸಿಗನು ಉಪವಾಸ ತೊರೆಯುವ ವರೆಗೆ, ನ್ಯಾಯವಂತ ಆಡಳಿತಗಾರ ಮತ್ತು ಮರ್ದಿತನ ಪ್ರಾರ್ಥನೆ. ಅಲ್ಲಾಹನು ಅದನ್ನು ಮೋಡಗಳಿಗಿಂತ ಮೇಲೆ ಉತ್ತುಂಗಕ್ಕೇರಿಸುವನು ಮತ್ತು ಅದಕ್ಕಾಗಿ ಆಕಾಶದ ಬಾಗಿಲುಗಳನ್ನು ತೆರೆಯುವನು. ಅಲ್ಲಾಹನು ಹೇಳುವನು. “ನನ್ನ ಪ್ರತಾಪದಾಣೆ. ಸ್ವಲ್ಪ ತಡವಾದರೂ ನಾನು ನಿನಗೆ ಖಂಡಿತವಾಗಿಯೂ ಸಹಾಯ ಮಾಡುವೆನು.”
ಈ ಪ್ರವಾದಿ ವಚನದ ಪ್ರಕಾರ ಅಲ್ಲಾಹನು ಮೂರು ವಿಭಾಗದವರ ಪ್ರಾರ್ಥನೆಯನ್ನು ಸ್ವೀಕರಿಸುವನು. ಅವರ ಪೈಕಿ ಮೊದಲಿಗರು ಉಪವಾಸಿಗಳಾಗಿದ್ದಾರೆ. ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಉಪವಾಸಿಗನು ತನಗೆ ಅನುಮತಿಸಿದ್ದನ್ನೂ ಹಗಲಿಡೀ ತೊರೆಯುತ್ತಾನೆ. ತನ್ನ ಮನಸ್ಸನ್ನೂ ಜೀವನವನ್ನೂ ಶುದ್ಧೀಕರಿಸಲು ಅವನು ರಮಝಾನ್ ತಿಂಗಳಲ್ಲಿ ಪಣತೊಟ್ಟಿರುತ್ತಾನೆ. ಅದಕ್ಕಾಗಿ ಅವನು ಎಲ್ಲಾ ಕಷ್ಟ, ತ್ಯಾಗಗಳನ್ನು ಸಹಿಸುತ್ತಾನೆ. ಶೈತಾನನ ದುರ್ಭೋದನೆಗಳನ್ನು ಮೆಟ್ಟಿ ನಿಲ್ಲುತ್ತಾನೆ. ಅಲ್ಲಾಹನಿಗಾಗಿ ಅನ್ನ ಪಾನೀಯಗಳನ್ನು ತೊರೆಯುತ್ತಾನೆ. ದೈಹಿಕ ವ್ಯಾಮೋಹಗಳನ್ನು ದಮನಿಸುತ್ತಾನೆ. ತನ್ನ ಜೀವವನ್ನೇ ಅಲ್ಲಾಹನಿನಗಾಗಿ ಸಮರ್ಪಿಸು ತ್ತಾನೆ. ಮಾತನಾಡುವಾಗಲೂ, ಇತರರೊಂದಿಗೆ ವ್ಯವಹರಿಸು ವಾಗಲೂ, ವ್ಯಾಪಾರದಲ್ಲೂ ಕೊಡುಕೊಳ್ಳುವಿಕೆಯಲ್ಲೂ ತಪ್ಪು ಸಂಭವಿಸದಂತೆ ಎಚ್ಚರ ವಹಿಸುತ್ತಾನೆ. ಒಟ್ಟಿನಲ್ಲಿ ಆತ ಅಲ್ಲಾಹ ನನ್ನು ಭಯಪಟ್ಟು ಜೀವಿಸುತ್ತಾನೆ. ಆದ್ದರಿಂದ ಅಲ್ಲಾಹನು ಉಪವಾಸಿಗನಿಗೆ ಪ್ರತ್ಯೇಕ ಆದ್ಯತೆ ನೀಡಿದ್ದಾನೆ. ಪ್ರವಾದಿಯವರು(ಸ) ಉಪವಾಸಿಗನ ಕರ್ಮಗಳ ಕುರಿತು ಹೀಗೆ ಹೇಳಿದ್ದಾರೆ. “ಉಪವಾಸಿಗನ ನಿದ್ದೆಯು ಆರಾಧನೆಯಾಗಿದೆ. ಅವನ ಮೌನವು ದೇವಸ್ಮರಣೆಯಾಗಿದೆ. ಅವನ ಕರ್ಮಗಳಿಗೆ ಇಮ್ಮಡಿ ಪ್ರತಿಫಲ ದೊರೆಯುತ್ತದೆ. ಅವನ ಪ್ರಾರ್ಥನೆಗಳು ಸ್ವೀಕಾರಾರ್ಹವಾಗಿವೆ. ಅವನ ಪಾಪಗಳು ಕ್ಷಮಿಸಲ್ಪಡುವುವು.”
ಅಬೂ ಹುರೈರ(ರ) ವರದಿ ಮಾಡಿರುವ ಇನ್ನೊಂದು ಪ್ರವಾದಿ ವಚನವು ಹೀಗಿದೆ. “ಎಲ್ಲಾ ಉಪವಾಸಿಗರಿಗೂ ಅಲ್ಲಾಹನ ಬಳಿ ಸ್ವೀಕರಿಸಲ್ಪಡುವ ಒಂದು ಪ್ರಾರ್ಥನೆ ಇದೆ. ಒಂದೋ ಇಹಲೋಕದಲ್ಲೇ ಅಲ್ಲಾಹನು ನೀಡುವನು. ಇಲ್ಲದಿದ್ದರೆ ಪರಲೋಕಕ್ಕಾಗಿ ತೆಗೆದಿರಿಸುವನು.”
ಆದ್ದರಿಂದ ಉಪವಾಸಿಗನು ಶುದ್ಧ ಮನಸ್ಸಿನಿಂದ ಪ್ರಾರ್ಥಿಸು ವುದಾದರೆ ಖಂಡಿತವಾಗಿಯೂ ಅದಕ್ಕೆ ಉತ್ತರ ಲಭಿಸುತ್ತದೆ. ಇಮಾಮ್ ತಿರ್ಮಿದಿ ವರದಿ ಮಾಡಿರುವ ಇನ್ನೊಂದು ವಚನದಲ್ಲಿ “ಉಪವಾಸಿಗನು ಉಪವಾಸ ತೊರೆಯುವಾಗ” ಎಂದಿದೆ. ಅಂದರೆ ಉಪವಾಸಿಗನಿಗೆ ನೀಡಲಾದ ಈ ಸೌಲ ಭ್ಯವು ಅತ್ಯಂತ ಹೆಚ್ಚು ಸೂಕ್ತವಾಗಿರುವುದು ಉಪವಾಸ ತೊರೆ ಯುವ ವೇಳೆಯಲ್ಲಾಗಿದೆ. ನಮಾಝ್ ನಿರ್ವಹಿಸುವವನ ಪ್ರಾರ್ಥನೆಯು ಹೆಚ್ಚು ಸ್ವೀಕಾರಾರ್ಹವಾಗುವುದು ಅದರ ಕೊನೆಯ ಗಳಿಗೆಯಲ್ಲಾಗಿದೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ, “ಉಪವಾಸವೂ ಕೂಡಾ ಹಾಗೆಯೇ ಆಗಿದೆ. ಕರ್ಮಗಳಿಗೆ ಪ್ರತಿಫಲ ದೊರೆಯುವುದು ಅದರಿಂದ ವಿರಮಿಸುವ ಸಂದರ್ಭದಲ್ಲಾಗಿದೆಯಷ್ಟೇ.”
ಉಪವಾಸಿಗನ ಬಳಿಕ ಸ್ವೀಕಾರಾರ್ಹವಾಗುವ ಪ್ರಾರ್ಥನೆಯು ನ್ಯಾಯವಂತನಾದ ಆಡಳಿತಾಧಿಕಾರಿಯದ್ದಾಗಿದೆ. ಓರ್ವನಿಗೆ ಅಲ್ಲಾಹನು ಅಧಿಕಾರ ನೀಡಿದರೆ ಆ ಅಧಿಕಾರವು ಅಲ್ಲಾಹನ ಅಮಾನತ್ತಾಗಿದೆ. ಅದನ್ನು ಅಲ್ಲಾಹನ ಬಯಕೆಯಂತೆಯೇ ಈ ಭೂಮಿಯಲ್ಲಿ ಸ್ಥಾಪಿಸಬೇಕಾಗಿದೆ. ನ್ಯಾಯ ಪೂರ್ಣವೂ ಅಕ್ರಮ ರಹಿತವೂ ಆದ ಆಡಳಿತ ನಡೆಸುವುದು ಪ್ರತೀ ಆಡಳಿತಾಧಿಕಾರಿಯ ಹೊಣೆಗಾರಿಕೆಯಾಗಿದೆ. ಅಕ್ರಮಿಯಾದ ಆತಳಿತಾಧಿಕಾರಿಯು ಪ್ರಜೆಗಳಿಗೂ, ದೇಶಕ್ಕೂ ಮಾತ್ರವಲ್ಲ ಈ ಲೋಕಕ್ಕೇ ಕಂಟಕ ವಾಗಿರುತ್ತಾನೆ. ಅವನಿಂದಾಗಿ ಸಮಾಜವು ಸರಿದಾರಿಗೆ ಬರುವ ಹೊರತು ತಪ್ಪು ಹಾದಿ ತುಳಿಯುತ್ತದೆ. ಆತ ಎಸಗುವ ಅಕ್ರಮ ಗಳ ದುಷ್ಪರಿಣಾಮಗಳು ಆತನ ಪ್ರಜೆಗಳಿಗೆ ಮಾತ್ರವಲ್ಲ ತಲೆ ತಲಾಂತರಗಳಿಗೂ ವ್ಯಾಪಿಸುತ್ತವೆ. ಇದರಿಂದಾಗಿ ಸಮಾಜದಲ್ಲಿ ಶಾಂತಿಯು ಮರೀಚಿಕೆಯಾಗಿ ಕ್ಷೋಭೆಯು ತಾಂಡವವಾಡುತ್ತದೆ.
ಆದರೆ ನ್ಯಾಯವಂತನಾದ ಆಡಳಿತಾಧಿಕಾರಿಯು ಇದಕ್ಕೆ ನೇರ ವಿರುದ್ಧವಾಗಿರುತ್ತಾನೆ. ಆತ ಯಾವಾಗಲೂ ಪ್ರಜೆಗಳ ಶ್ರೇಯೋಭಿವೃದ್ಧಿಯ ಕುರಿತು ಚಿಂತಿಸುತ್ತಿರುತ್ತಾನೆ. ತನ್ನ ಪ್ರಜೆಗಳಿಗಾಗಿ ತನ್ನ ಬೇಕು-ಬೇಡಗಳನ್ನೆಲ್ಲಾ ಬದಿಗಿರಿಸುತ್ತಾನೆ. ಇತರರಿಗಾಗಿ ಕಷ್ಟ ಅನುಭವಿಸುತ್ತಾನೆ. ಉಮರ್‍ರಂಥ(ರ) ಆಡಳಿತಾಧಿಕಾರಿಗಳ ಜೀವನವನ್ನು ಅಧ್ಯಯನ ನಡೆಸಿದರೆ ಅಧಿಕಾರದಲ್ಲಿ ನ್ಯಾಯ ಪಾಲನೆಯ ನೈಜ ರೂಪವು ಗೋಚರವಾಗಬಹುದು. ಅಲ್ಲಾಹನ ಆಜ್ಞೆಗಳನ್ನು ಸ್ಥಾಪಿಸಲು ಪ್ರಯತ್ನಿಸುವುದರಿಂದ ನ್ಯಾಯವಂತ ಆಡಳಿತಾಧಿಕಾರಿಯು ಅಲ್ಲಾಹನ ಪ್ರಿಯ ದಾಸನಾಗಿರುತ್ತಾನೆ. ಪ್ರವಾದಿಯವರು(ಸ) ಹೇಳಿದರು, “ಅಂತ್ಯ ದಿನದಲ್ಲಿ ಅಲ್ಲಾಹನಿಗೆ ಅತ್ಯಂತ ಪ್ರೀತಿ ಪಾತ್ರನೂ ಅವನ ಸಾಮಿಪ್ಯ ಪಡೆಯುವವನು ನ್ಯಾಯವಂತ ಆಡಳಿತಾಧಿಕಾರಿಯಾಗಿರುತ್ತಾನೆ. ಅಲ್ಲಾಹನಿಗೆ ಅತ್ಯಂತ ಹೆಚ್ಚು ದ್ವೇಷ ಇರುವವನೂ ಅವನಿಂದ ದೂರ ದಲ್ಲಿರುವನನೂ ಅಕ್ರಮಿಯಾದ ಆಡಳಿತಾಧಿಕಾರಿಯಾಗಿರುತ್ತಾನೆ.” (ಅಹ್ಮದ್, ತಿರ್ಮಿದಿ). ಮಾತ್ರವಲ್ಲ, ನಾಳೆ ಪರಲೋಕದಲ್ಲಿ ಅಲ್ಲಾಹನ ನೆರಳು ಲಭಿಸುವ ಏಳು ವಿಭಾಗದವರ ಪೈಕಿ ನ್ಯಾಯವಂತ ಆಡಳಿತಗಾರರೂ ಸೇರಿದ್ದಾರೆ.
ಆದ್ದರಿಂದ ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸುವ ನ್ಯಾಯವಂತ ಆಡಳಿತಾಧಿಕಾರಿಗಳ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸುತ್ತಾನೆ.
ಮೂರನೆಯದಾಗಿ ಹೇಳಿರುವುದು ಮರ್ದಿತನ ಪ್ರಾರ್ಥನೆ ಯಾಗಿದೆ. ಅವನ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸುವನು. ಓರ್ವನು ಅನ್ಯಾಯವಾಗಿ ಆಕ್ರಮಣಕ್ಕೆ ಗುರಿಯಾಗಿರುತ್ತಾನೆ. ಅವನ ನೆರವಿಗೆ ಯಾರೂ ಇರುವುದಿಲ್ಲ. ಯಾರೂ ಇಲ್ಲದವರಿಗೆ ಅಲ್ಲಾಹನು ರಕ್ಷಕನಾಗಿರುತ್ತಾನೆ. ಅವನು ಮನನೊಂದು ನಿಷ್ಕಳಂಕವಾಗಿ ಪ್ರಾರ್ಥಿಸಿದರೆ ಆ ಪ್ರಾರ್ಥನೆಯನ್ನು ಅಲ್ಲಾಹನು ಖಂಡಿತವಾಗಿಯೂ ಸ್ವೀಕರಿಸುವನು. ನೆರವಿಗಾಗಿರುವ ಮರ್ದಿತನ ಮೊರೆಗೆ ಅಲ್ಲಾಹನು ಸ್ಪಂದಿಸುವನು. ಪ್ರವಾದಿಯವರು(ಸ) ಮರ್ದಿತನ ಪ್ರಾರ್ಥನೆಯ ಕುರಿತು ಈ ರೀತಿ ಹೇಳಿದ್ದಾರೆ. “ಮರ್ದಿತನ ಪ್ರಾರ್ಥನೆಯ ಬಗ್ಗೆ ಎಚ್ಚರದಿಂದಿರಿ. ಯಾಕೆಂದರೆ ಅದು ಬೆಂಕಿಯ ಜ್ವಾಲೆಗಳ ಕಣಗಳಂತೆ ಬಾನಲೋಕಕ್ಕೇ ರುತ್ತಿರುತ್ತದೆ.” ಮುಆದ್ ಬಿನ್ ಜಬಲ್‍ರನ್ನು ಯಮನ್‍ಗೆ ರಾಜ್ಯಪಾಲರಾಗಿ ನೇಮಿಸಿದಾಗ ಪ್ರವಾದಿಯವರು(ಸ) ಪ್ರತ್ಯೇಕವಾಗಿ ಹೇಳಿದ್ದರು, “ಮರ್ದಿತನ ಪ್ರಾರ್ಥನೆಯ ಕುರಿತು ನೀನು ಭಯಪಡು. ಕಾರಣ, ಆ ಪ್ರಾರ್ಥನೆ ಮತ್ತು ಅಲ್ಲಾಹನ ಮಧ್ಯೆ ಯಾವುದೇ ಪರದೆಯಿಲ್ಲ.”
ಆದ್ದರಿಂದ ಅಲ್ಲಾಹನೊಂದಿಗೆ ಪ್ರಾರ್ಥಿಸುವುದು ಪ್ರತಿಯೊಬ್ಬ ಸತ್ಯವಿಶ್ವಾಸಿಯ ಕೆಲಸವಾಗಿದೆ. ಪ್ರಾರ್ಥನೆಗೆ ಉತ್ತರ ಲಭಿಸಲಿಲ್ಲ ಎಂದು ನಿರಾಶರಾಗಬಾರದು. ಅಲ್ಲಾಹನು ಪ್ರಾರ್ಥನೆಗಳಿಗೆ ಮೂರು ವಿಧದಲ್ಲಿ ಉತ್ತರ ನೀಡುತ್ತಾನೆ. ಒಂದೋ ಕೂಡಲೇ ಉತ್ತರ ನೀಡುತ್ತಾನೆ. ಅಲ್ಲದಿದ್ದರೆ ಪ್ರಾರ್ಥನೆಯಲ್ಲಿ ಬೇಡಿಕೆ ಯಿರಿಸಿದ್ದಕ್ಕೆ ಸಮಾನವಾದ ಯಾವುದಾದರೂ ಕಾರ್ಯವನ್ನು ನೆರವೇರಿಸಿಕೊಡುತ್ತಾನೆ. ಅದೂ ಅಲ್ಲದಿದ್ದರೆ ಅದನ್ನು ಪರಲೋಕಕ್ಕೆ ವಿೂಸಲಿಡುತ್ತಾನೆ. ಆದ್ದರಿಂದ ನಾವು ನಿಷ್ಕಳಂಕ ಮನಸ್ಸಿನಿಂದ ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸಬೇಕು. ನಮ್ಮ ಪ್ರಾರ್ಥನೆಗಳಿಗೆ ಉತ್ತರ ನೀಡಲು ಅಲ್ಲಾಹನ ಹೊರತು ಇನ್ನಾರಿಗೂ ಸಾಧ್ಯವಿಲ್ಲ.