ಸೋಮವಾರ, ಮಾರ್ಚ್ 04, 2013

ಕೈಗೆ ನಾಲ್ಕು ಕಾಸು ಬಂದಾಗ ಧರ್ಮವನ್ನು ಮರೆಯಬೇಡಿ


ಇಸ್ಲಾಮ್ ಒಂದು ಸಂಪೂರ್ಣ ಜೀವನ ಕ್ರಮವಾಗಿದೆ. ಅದು ಜೀವನದ ಎಲ್ಲಾ ರಂಗಗಳಿಗೂ ವ್ಯಾಪಿಸಿದೆ. ಐಹಿಕ ಜೀವನದ ಸುಖಾಡಂಬರಗಳಿಗಾಗಿಯೇ ಜೀವಿಸುವುದನ್ನು ಮತ್ತು ಎಲ್ಲಾ ಸುಖಾಡಂಬರಗಳಿಂದ ವಿರಕ್ತರಾಗಿ ಜೀವಿಸುವುದನ್ನು ಇಸ್ಲಾಮ್ ವಿರೋಧಿಸುತ್ತದೆ. ಪರಲೋಕ ಮೋಕ್ಷಕ್ಕಾಗಿ ಐಹಿಕ ಜೀವನವನ್ನು ತ್ಯಜಿಸಲು ಅಥವಾ ಐಹಿಕ ಜೀವನಕ್ಕಾಗಿ ಪರಲೋಕ ಜೀವನವನ್ನು ತ್ಯಜಿಸಲು ಇಸ್ಲಾಮ್ ಅನುಮತಿಸುವುದಿಲ್ಲ. ಎರಡೂ ಲೋಕಗಳು ಒಂದಕ್ಕೊಂದು ಪೂರಕವಾಗಿವೆ.
ಮನುಷ್ಯರು ಈ ಲೋಕದಲ್ಲಿ ಹೆಚ್ಚಾಗಿ ಮಾರುಹೋಗುವುದು ಸಂಪತ್ತಿಗಾಗಿದೆ. ವಾಸ್ತವದಲ್ಲಿ ಸಂಪತ್ತು ಒಂದು ಶತ್ರುವೋ, ಶಾಪವೋ, ಕೆಡುಕೋ ಅಲ್ಲ. ಬದಲಾಗಿ ಲೌಕಿಕ ಜೀವನದ ಅವಶ್ಯಕತೆಗಾಗಿ ಅಲ್ಲಾಹನು ನೀಡಿರುವ ಅನುಗ್ರಹಗಳ ಪೈಕಿ ಒಂದು ಅನುಗ್ರಹ ಮಾತ್ರವಾಗಿದೆ. ಅದಿಲ್ಲದಿದ್ದರೆ ಈ ಲೋಕದಲ್ಲಿ ಮನುಷ್ಯನಿಗೆ ಜೀವಿಸಲು ಕಷ್ಟ ಸಾಧ್ಯ. ಪ್ರತೀ ಅನುಗ್ರಹಗಳಿಗೂ ಪರೀಕ್ಷೆಯ ಇನ್ನೊಂದು ಮಗ್ಗುಲಿದೆ. ಐಹಿಕ ಜೀವನದ ಎಲ್ಲಾ ಅನುಗ್ರಹಗಳು ಒಂದರ್ಥದಲ್ಲದಿದ್ದರೆ ಮತ್ತೊಂದರ್ಥದಲ್ಲಿ ಪರೀಕ್ಷೆಯಾಗಿದೆ. ಅಲ್ಲಾಹನು ಹೇಳುತ್ತಾನೆ, “ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವವನೆಂದು ನೋಡಲಿಕ್ಕಾಗಿ ಅವನು ಜೀವನವನ್ನೂ ಮರಣವನ್ನೂ ಆವಿಷ್ಕರಿಸಿದನು. ಅವನು ಪ್ರಬಲನೂ ಕ್ಷಮಾಶೀಲನೂ ಆಗಿರುತ್ತಾನೆ.” (ಅಲ್‍ಮುಲ್ಕ್- 2) ಅಂದರೆ ಭೂಮಿಯಲ್ಲಿ ಮಾನವನ ಹುಟ್ಟು ಸಾವುಗಳ ಸರಣಿಯನ್ನು ಅವನು ಆರಂಭಿಸಿದನು. ಯಾವ ಮಾನವ ಹೆಚ್ಚು ಉತ್ತಮವಾದ ಕರ್ಮಗಳನ್ನೆಸಗುತ್ತಾನೆ ಎಂದು ಪರೀಕ್ಷಿಸುವುದೇ ಇದರ ಉದ್ದೇಶ.
ಸಂಪತ್ತು ಕೂಡಾ ಏಕ ಕಾಲದಲ್ಲಿ ಅನುಗ್ರಹವೂ ಪರೀಕ್ಷೆಯೂ ಆಗಿದೆ. ಮನುಷ್ಯನು ಇಹಲೋಕದಲ್ಲಿ ಸಂಪತ್ತಿನ ನಿರ್ವಹಣೆಯನ್ನು ಹೇಗೆ ನಿರ್ವಹಿಸಿದ್ದಾನೆ ಎಂಬ ಬಗ್ಗೆ ನಾಳೆ ಪರಲೋಕದಲ್ಲಿ ವಿಚಾರಣೆ ನಡೆಯಲಿದೆ. ಮನುಷ್ಯನು ವ್ಯಯಿಸಿದ ಸಂಪತ್ತು, ಕಟ್ಟಿಟ್ಟ ಸಂಪತ್ತು, ವಂಚಿಸಿದ ಸಂಪತ್ತು ಹೀಗೆ ಎಲ್ಲದರ ಬಗ್ಗೆಯೂ ವಿಚಾರಣೆ ನಡೆಯಲಿದೆ. ಒಂದು ನಯಾ ಪೈಸೆಯೂ ವಿಚಾರಣೆಯ ಮೇರೆ ವಿೂರಿ ಹೋಗದು. ಅಲ್ಲಾಹನು ಹೇಳುತ್ತಾನೆ, “ನಿಮ್ಮ ಸೊತ್ತುಗಳು ಮತ್ತು ನಿಮ್ಮ ಸಂತಾನಗಳು ವಾಸ್ತವದಲ್ಲಿ ಪರೀಕ್ಷಾ ಸಾಧನಗಳೆಂದೂ ಪ್ರತಿಫಲ ನೀಡಲು ಅಲ್ಲಾಹನ ಬಳಿ ಬೇಕಾದಷ್ಟಿದೆಯೆಂದೂ ತಿಳಿದುಕೊಳ್ಳಿರಿ.” (ಅಲ್ ಅನ್‍ಫಾಲ್- 28)
ಪ್ರವಾದಿಯವರು(ಸ) ಹೇಳಿದ್ದಾರೆ, “ಖಂಡಿತವಾಗಿಯೂ ಎಲ್ಲಾ ಸಮುದಾಯಗಳಿಗೂ ಒಂದೊಂದು ಪರೀಕ್ಷಾ ಸಾಧನಗಳಿವೆ. ನನ್ನ ಸಮುದಾಯದ ಪರೀಕ್ಷಾ ವಸ್ತು ಸಂಪತ್ತಾಗಿದೆ.” ಸಂಪತ್ತು ಮತ್ತು ಸುಖಾಡಂಬರಗಳು ಕೆಲವರ ವಿಶ್ವಾಸಕ್ಕೂ ಧಾರ್ಮಿಕ ಕಾರ್ಯ ಚಟುವಟಿಕೆಗಳಿಗೂ ಆರಾಧನೆಗಳಿಗೂ ತೊಡಕಾಗುವುದಿದೆ. ಹಲವು ವೇಳೆ ಸಂಪನ್ನತೆಯು ವ್ಯಕ್ತಿಗಳ ಕರ್ಮ ರಂಗವನ್ನು ಉತ್ತೇಜಿಸುವುದಿಲ್ಲ. ಬದಲಾಗಿ ಅದನ್ನು ಕುಂಠಿತಗೊಳಿಸುತ್ತದೆ. ಕೆಲವು ಮೇರೆಗಳಿಗೆ ಸೀಮಿತ ಗೊಳಿಸುತ್ತದೆ. ಈ ವಿಷಯದಲ್ಲಿ ಒಂದು ಪ್ರವಾದಿ ವಚನವು ಹೀಗಿದೆ. “ಅಲ್ಲಾಹನಾಣೆ! ನಿಮ್ಮ ವಿಚಾರದಲ್ಲಿ ನಾನು ದಾರಿದ್ರ್ಯವನ್ನು ಭಯಪಡುತ್ತಿಲ್ಲ. ನಿಮ್ಮ ಪೂರ್ವಿಕರಿಗುಂಟಾಗಿರುವಂತೆ ನಿಮಗೆ ಸಂಪತ್ತು ವೃದ್ಧಿಯಾಗುವುದರ ಬಗ್ಗೆ ನಾನು ಕಳವಳಗೊಳ್ಳುತ್ತೇನೆ. ಅವರು ಪರಸ್ಪರ ಪೈಪೋಟಿ ನಡೆಸಿದಂತೆ ನೀವು ಕೂಡಾ ಪರಸ್ಪರ ಪೈಪೋ ಟಿ ನಡೆಸುವಿರಿ. ಅವರು ನಾಶ ಹೊಂದಿದಂತೆ ನೀವೂ ನಾಶ ಹೊಂದುವಿರಿ.”
ಉಮರ್(ರ) ಹೇಳಿದರು, “ಸಂಪತ್ತು ಒಂದು ಮಾದಕ ಪದಾರ್ಥದಂತಿದೆ. ಮದ್ಯದಲ್ಲಿ ಅಮಲಿರುವಂತೆ ಸಂಪತ್ತಿನಲ್ಲೂ ಒಂದು ರೀತಿಯ ಅಮಲಿದೆ.”
ಸಂಪತ್ತು ಅಲ್ಲಾಹನೊಂದಿಗಿರುವ ಸಂಬಂಧಕ್ಕೆ ಮಾತ್ರವಲ್ಲ ವ್ಯಕ್ತಿಗಳ ಮಧ್ಯೆ ಇರುವ ಸಂಬಂಧಕ್ಕೂ ಧಕ್ಕೆ ತರುತ್ತದೆ. ಹಣಕ್ಕಾಗಿ ಸಂಬಂಧ ಹಳಸಿದ ಎಷ್ಟೋ ಕುಟುಂಬಗಳು, ವ್ಯಕ್ತಿಗಳು ನಮ್ಮ ಸಮಾಜದಲ್ಲಿದ್ದಾರೆ. ಅಲ್ಪ ಹಣಕ್ಕಾಗಿ ಬೆಲೆಕಟ್ಟಲಾಗದ ರಕ್ತ ಸಂಬಂಧವನ್ನೂ ಮುರಿಯುವವರಿದ್ದಾರೆ. ಸಂಪತ್ತು ಕೈ ಸೇರಿದಾಗ ಮನುಷ್ಯನು ಸಂಬಂಧಗಳ  ಮಹತ್ವವನ್ನೇ ಮರೆತು ಬಿಡುತ್ತಾನೆ. ಅವನು ಸಂಪತ್ತಿನ ಅಮಲಿನಲ್ಲಿ ಯಾರದೇ ನೆರವು ತನಗೆ ಬೇಕಾಗಿಲ್ಲ ಎಂದು ತೀರ್ಮಾನಿಸುತ್ತಾನೆ. ಕಷ್ಟ ಕಾಲದಲ್ಲಿ ತನಗೆ ನೆರವಾದವರನ್ನು ಮರೆತು ಬಿಡುತ್ತಾನೆ.
ಮುಸ್ಲಿಮ್ ಸೇನೆಯು ಇರಾಕನ್ನು ಜಯಿಸಿದ ಸಂದರ್ಭದಲ್ಲಿ ಧಾರಾಳ ಸ್ವರ್ಣಾಭರಣಗಳನ್ನು ಇತರ ಸೊತ್ತುಗಳನ್ನೂ ಉಮರ್‍ರವರ(ರ) ಮುಂದಿರಿಸಲಾಯಿತು. ಅವುಗಳನ್ನು ನೋಡಿ ಉಮರ್‍ರವರು(ರ) ಅಳಲು ಪ್ರಾರಂಭಿಸಿದರು. ಆಗ ಅನುಯಾಯಿಗಳು ಕೇಳಿದರು, “ಅಮೀರುಲ್ ಮುಅಮಿನೀನ್. ತಾವು ಏತಕ್ಕೆ ಅಳುತ್ತಿದ್ದೀರಿ? ಅಲ್ಲಾಹನು ತಮಗೆ ವಿಜಯ ನೀಡುವ ಮೂಲಕ ಶತ್ರುಗಳನ್ನು ಸೋಲಿಸಿದ್ದಾನೆ. ಮಾತ್ರವಲ್ಲ ತಮ್ಮ ಕಣ್ಣಿಗೂ ತಂಪೆರೆದಿದ್ದಾನೆ.” ಆಗ ಉಮರ್(ರ) ಹೇಳಿದರು, “ಪ್ರವಾದಿಯವರು(ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ. ಯಾವ ಸಮುದಾಯಕ್ಕೆ ಐಹಿಕ ಲೋಕವು ತೆರೆಯಲ್ಪಡುವುದೋ ಅವರ ಮಧ್ಯ ಅಂತ್ಯದಿನದ ವರೆಗೆ ನೆಲೆನಿಲ್ಲುವ ಶತ್ರುತ್ವ ವನ್ನೂ ದ್ವೇಷವನ್ನೂ ಉಂಟು ಮಾಡುವನು.”
ಬೇಕಾದಷ್ಟು ಸಂಪತ್ತು ಲಭಿಸುವಾಗ ಜೀವನದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು. ಬಳಿಕ ಅಲ್ಲಾಹನ ಮಾರ್ಗದಲ್ಲಿ ಪೂರ್ಣವಾಗಿ ಕಾರ್ಯ ನಿರತರಾಗಬಹುದು ಎಂದು ಭಾವಿಸುವವರಿದ್ದಾರೆ. ಆದರೆ ಇದು ಕೇವಲ ವ್ಯಾಮೋಹವಷ್ಟೇ. ಸಂಪತ್ತು ಹೆಚ್ಚಾದಾಗ ಮನುಷ್ಯನು ಸಮಯವನ್ನು ಆರಾಧನೆಗಾಗಿ ವಿೂಸಲಿರಿಸುವುದಿಲ್ಲ. ಅವನು ಹೆಚ್ಚು ಹೆಚ್ಚು ಗಳಿಸಲಿಕ್ಕಾಗಿ ಆರಾಧನೆಗಳನ್ನು ಬದಿಗಿರಿಸುತ್ತಾನೆ.
ಸಂಪತ್ತು ಮನುಷ್ಯನನ್ನು ಹೇಗೆ ವಿನಾಶಕ್ಕೊಡ್ಡುತ್ತದೆ ಎಂಬುದಕ್ಕೆ ಸಅಲಬತ್ ಬಿನ್ ಹಾತ್ತಿಬ್‍ರ ಇತಿಹಾಸವು ಉತ್ತಮ ಉದಾಹರಣೆಯಾಗಿದೆ. ಒಂದು ಕಾಲದಲ್ಲಿ ಅವರು ‘ಹಮಾಮತುಲ್ ಮಸ್ಜಿದ್’ (ಮಸೀದಿಯ ಪಾರಿವಾಳ) ಎಂದು ಕರೆಯಲ್ಪಡುವ ಶ್ರೇಷ್ಠ ವ್ಯಕ್ತಿಯಾಗಿದ್ದರು. ನಮಾಝ್‍ಗಾಗಿಯೂ ಇತರ ಸಂದರ್ಭಗಳಲ್ಲೂ ಮಸೀದಿಯಲ್ಲೇ ಅವರು ಕಾಲ ಕಳೆಯುತ್ತಿದ್ದರು. ಆದ್ದರಿಂದ ಅವರಿಗೆ ಈ ಬಿರುದು ಲಭಿಸಿತ್ತು. ಉಡಲು ವಸ್ತ್ರಗಳಿಲ್ಲದಷ್ಟು ಬಡತನವನ್ನು ಅವರು ಅನುಭವಿಸುತ್ತಿದ್ದರು. ಆದರೂ ಅವರು ಅಲ್ಲಾಹನ ಮಾರ್ಗದಿಂದ ವಿಚಲಿತರಾಗಲಿಲ್ಲ. ಯಾವುದೇ ಸಾಮೂಹಿಕ ನಮಾಝ್ ನಷ್ಟವಾಗದ ರೀತಿಯಲ್ಲಿ ಎಚ್ಚರ ವಹಿಸುತ್ತಿದ್ದರು.
ಅಬೂಉಮಾಮ(ರ) ಹೇಳುತ್ತಾರೆ, “ಬಡತನವನ್ನು ಸಹಿಸಲು ಸಾಧ್ಯವಾಗದೆ ಒಮ್ಮೆ ಸಅಲಬ ಪ್ರವಾದಿಯವರ(ಸ) ಬಳಿಗೆ ಬಂದು ಹೇಳಿದರು. “ಅಲ್ಲಾಹನ ಸಂದೇಶವಾಹಕರೇ ನನಗೆ ಸ್ವಲ್ಪ ಸಂಪತ್ತು ಲಭಿಸಲು ತಾವು ಅಲ್ಲಾಹನೊಂದಿಗೆ ಪ್ರಾರ್ಥಿಸಬೇಕು.” ಪ್ರವಾದಿಯವರು(ಸ) ಹೇಳಿದರು, “ಸಅïಲಬಾ ಧಾರಾಳವಾಗಿ ಸಂಪತ್ತುಂಟಾಗಿ ಅಲ್ಲಾಹ ನಿಗೆ ಕೃತಘ್ನನಾಗುವುದಕ್ಕಿಂತ ಸ್ವಲ್ಪ ಹಣ ಉಂಟಾಗಿ ಅಲ್ಲಾಹನಿಗೆ ಕೃತಜ್ಞನಾಗುವುದು ವಾಸಿಯಲ್ಲವೇ?” ಆಗ ಸಅïಲಬ ಹೇಳಿದರು, “ಪ್ರವಾದಿಯವರೇ(ಸ) ನನಗೆ ಸಂಪತ್ತುಂಟಾಗುವುದಾದರೆ ನಾನು ಅಲ್ಲಾಹನ ಮಾರ್ಗದಲ್ಲಿ ಧಾರಾಳ ದಾನ ಮಾಡುವೆ. ಸಂಪತ್ತಿನ ಹಕ್ಕುಗಳೆಲ್ಲವನ್ನು ಪೂರೈಸುವೆನು. ಆದ್ದರಿಂದ ತಾವು ನನಗಾಗಿ ಪ್ರಾರ್ಥಿಸಬೇಕು.”
ಅಬೂಉಮಾಮ(ರ) ಮುಂದುವರಿಸುತ್ತಾರೆ. “ಸಅಲಬರಿಗಾಗಿ ಪ್ರವಾದಿಯವರು(ಸ) ಪ್ರಾರ್ಥಿಸಿದರು. ಹಾಗೆ ಅವರ ಜೀವನದಲ್ಲಿ ಆರ್ಥಿಕ ಅಭಿವೃದ್ಧಿ ಉಂಟಾಗತೊಡಗಿತು. ಅವರಿಗೆ ಆಡು-ದನಗಳೆಲ್ಲ ಲಭಿಸಿದವು. ಮೊದಲೆಲ್ಲಾ ಅವರು ದಿನನಿತ್ಯ ಪ್ರವಾದಿಯವರನ್ನು(ಸ) ಭೇಟಿಯಾಗಲು ಬರುತ್ತಿದ್ದರು. ಆದರೆ ಜಾನುವಾರುಗಳು ವರ್ಧಿಸಿ ಸಂಪತ್ತು ಹೆಚ್ಚಾದಾಗ ಅವರು ಪ್ರವಾದಿಯವರ(ಸ) ಬಳಿ ಬರುವುದನ್ನು ಕಡಿಮೆ ಮಾಡಿದರು. ಮಗ್ರಿಬ್, ಇಶಾ ನಮಾಝ್‍ಗೆ ಮಾತ್ರ ಮಸೀದಿಗೆ ಬರಲಾಂರಭಿಸಿದರು. ಸಂಪತ್ತು ಇನ್ನೂ ಹೆಚ್ಚಾದಾಗ ತನ್ನ ವಾಸ್ತವ್ಯವನ್ನು ಮದೀನಾದ ಹೊರಭಾಗಕ್ಕೆ ಬದಲಾಯಿಸಿದರು. ಬಳಿಕ ಶುಕ್ರವಾರಗಳಂದು ಮಾತ್ರ ಪ್ರವಾದಿಯವರನ್ನು(ಸ) ಭೇಟಿಯಾಗಲು ಬರುತ್ತಿದ್ದರು. ಕೆಲ ಕಾಲಗಳ ನಂತರ ಅದೂ ಇಲ್ಲವಾಯಿತು. ನಮಾಝ್‍ನ ಬಳಿಕ ಪ್ರವಾದಿಯವರು(ಸ) ತನ್ನ ಅನುಯಾಯಿಗಳೊಂದಿಗೆ ಕುಳಿತುಕೊಳ್ಳುವಾಗ ಕೇಳುತ್ತಿದ್ದರು. “ಸಅಲಬರಿಗೆ ಏನಾಯಿತು? ಈಗ ಅವರನ್ನು ಕಾಣುತ್ತಿಲ್ಲವಲ್ಲ?”
ಹೀಗಿರುವಾಗ ಝಕಾತನ್ನು ಕಡ್ಡಾಯಗೊಳಿ ಸುತ್ತಾ ಅಲ್ಲಾಹನ ಆದೇಶ ಬಂತು. ಪ್ರವಾದಿಯವರು(ಸ) ಒಂದು ಪತ್ರ ಬರೆದು ತನ್ನ ಅನುಯಾಯಿಗಳ ಮೂಲಕ ಸಅಲಬಗೆ ಕಳುಹಿಸಿದರು. ಪತ್ರ ಓದಿದ ಬಳಿಕ ಅವರು ಕೇಳಿದರು, “ನಿಮಗೆ ಬೇರೆ ಸ್ಥಳಗಳಿಂದ ಝಕಾತ್ ಶೇಖರಿಸಲಿಕ್ಕಿದೆಯೇ? ಹಾಗಾದರೆ ಅದು ಮುಗಿದ ಬಳಿಕ ಬನ್ನಿ” ಹಾಗೆ ಎಲ್ಲಾ ಕಡೆಗಳಲ್ಲೂ ಝಕಾತ್ ಶೇಖರಿಸಿದ ಬಳಿಕ ಕೊನೆಗೆ ಅವರು ಸಅಲಬರ ಬಳಿಗೆ ಬಂದರು. ಆಗ ಸಅಲಬ ಹೇಳಿದರು, “ಅಲ್ಲಾಹನಾಣೆ, ಇದೆಂಥಾ ಒಂದು ತೆರಿಗೆ. ನೀವು ಮರಳಿ ಹೋಗಿರಿ. ನನಗೆ ಒಂದು ಸಲ ಆಲೋಚಿಸಲಿಕ್ಕಿದೆ.”
ಅವರು ಪ್ರವಾದಿಯವರ(ಸ) ಬಳಿಗೆ ಮರಳಿದರು. ಆಗ ಪವಿತ್ರ ಕುರ್‍ಆನಿನ ಈ ಸೂಕ್ತ ಅವತೀರ್ಣಗೊಂಡಿತು. “ಅವನು ತನ್ನ ಅನುಗ್ರಹದಿಂದ ನಮಗೇನಾದರೂ ಕೊಟ್ಟರೆ ನಾವೂ ದಾನ ಮಾಡುವೆವೆಂದೂ ಸಜ್ಜನರಾಗಿ ಬಾಳುವೆವೆಂದೂ ಅಲ್ಲಾಹನೊಡನೆ ಕರಾರು ಮಾಡಿದವರೂ ಅವರಲ್ಲಿ ಕೆಲವರಿದ್ದಾರೆ. ಆದರೆ, ಅಲ್ಲಾಹನು ತನ್ನ ಅನುಗ್ರಹದಿಂದ ಅವರನ್ನು ಸಂಪನ್ನರನ್ನಾಗಿ ಮಾಡಿದಾಗ ಅವರು ಜಿಪುಣತೆಗೆ ಇಳಿದರು ಮತ್ತು ತಮ್ಮ ಕರಾರಿನ ಗೊಡವೆಯೇ ಇಲ್ಲದಂತೆ ಅದರಿಂದ ವಿಮುಖರಾದರು. ಪರಿಣಾಮವಾಗಿ ಅವರು ಅಲ್ಲಾಹನೊಡನೆ ಮಾಡಿದ ಕರಾರು ಭಂಗಕ್ಕಾಗಿಯೂ ಅವರು ಸುಳ್ಳು ಹೇಳಿದುದಕ್ಕಾಗಿಯೂ ಅಲ್ಲಾಹನು ಅವರ ಹೃದಯದಲ್ಲಿ `ಕಾಪಟ್ಯ’ವನ್ನು ಇರಿಸಿ ಬಿಟ್ಟನು. ಅದು ಅವರು ಅವನ ಸನ್ನಿಧಿಯಲ್ಲಿ ಹಾಜರಾಗುವವರೆಗೂ ಅವರ ಬೆನ್ನು ಬಿಡದು.” (ಅತ್ತೌಬ: 75-77)
ಸಂಪತ್ತು ಮತ್ತು ಸುಖಾಡಂಬರಗಳು ಸಅಲಬ ಹಾಗೂ ಅವರಂತಹವರ ಧಾರ್ಮಿಕತೆಯನ್ನು ಬುಡಮೇಲು ಗೊಳಿಸಿದರೆ ಆರ್ಥಿಕ ಸಮೃದ್ಧಿಯಿಂದ ಜೀವನವನ್ನು ಸನ್ಮಾರ್ಗದಲ್ಲೇ ವ್ಯಯಿಸಿದ ಸಹಾಬಿಗಳೂ ಇದ್ದಾರೆ. ಮಿಸ್‍ಅಬ್ ಬಿನ್ ಉಮೈರ್‍ರಂಥ(ರ) ಅಗರ್ಭ ಶ್ರೀಮಂತರು ಅದಕ್ಕೆ ಉದಾ ಹರಣೆಯಾಗಿದ್ದಾರೆ. ಒಟ್ಟಿನಲ್ಲಿ ಸಂಪತ್ತು ಜೀವನದ ನೈಜಗುರಿಯನ್ನು ತಪ್ಪಿಸುವಂತಹದ್ದಾಗಬಾರದು. ಸಂಪತ್ತನ್ನು ನೀಡಿದರೂ ನೀನು ನಮ್ಮನ್ನು ಸನ್ಮಾರ್ಗದಲ್ಲೇ ದೃಢವಾಗಿ ನಿಲ್ಲುವಂತೆ ಮಾಡು ಎಂದು ನಾವು ಅಲ್ಲಾಹನಲ್ಲಿ ಪ್ರಾರ್ಥಿಸಬೇಕಾಗಿದೆ.

ಸೋಮವಾರ, ಫೆಬ್ರವರಿ 11, 2013

ಯಾರೊಂದಿಗೋ ಪ್ರಾರ್ಥಿಸಿ ಉತ್ತರ ಲಭಿಸಲಿಲ್ಲ ಎಂದು ಅಲ್ಲಾಹನನ್ನು ದೂರಿದರೆ ಹೇಗೆ?


 ಮಾನವರೆಲ್ಲರೂ ಅಲ್ಲಾಹನ ಸೃಷ್ಟಿಗಳು. ಪ್ರತಿಯೋರ್ವನ ಜನನವೂ ಮರಣವೂ ದೇವ ಲಿಖಿತವಾಗಿದೆ. ಅಲ್ಲಾಹನು ಮನುಷ್ಯರನ್ನು ಕೇವಲ ಸೃಷ್ಟಿಸಿಬಿಟ್ಟದ್ದು ಮಾತ್ರವಲ್ಲ, ಅವನಿಗೆ ಜೀವನ ನಡೆಸಲಿಕ್ಕಿರುವ ಎಲ್ಲಾ ಸೌಕರ್ಯಗಳನ್ನೂ ಒದಗಿಸಿದ್ದಾನೆ. ಆದ್ದರಿಂದ ಸೌಕರ್ಯಗಳ ಕೊರತೆ ಉಂಟಾದಾಗ ಅವುಗಳ ಬೇಡಿಕೆ ಸಲ್ಲಿಸಬೇಕಾದುದು ಕೂಡಾ ಅಲ್ಲಾಹನಲ್ಲೇ ಆಗಿದೆ. ಅದಕ್ಕಾಗಿ ಅಲ್ಲಾಹನು ನಮಗೆ ಪ್ರಾರ್ಥನೆ ಎಂಬ ಮಾರ್ಗವನ್ನು ನೀಡಿದ್ದಾನೆ. ಪ್ರಾರ್ಥನೆ ಎಂಬುದು ಓರ್ವ ವಿಶ್ವಾಸಿಯನ್ನು ತನ್ನ ಸೃಷ್ಟಿಕರ್ತನಾದ ಅಲ್ಲಾಹನೊಂದಿಗೆ ಜೋಡಿಸುವ ಪಾಶವಾಗಿದೆ. ಬಾನ ಲೋಕದ ಬಾಗಿಲುಗಳನ್ನು ಬಡಿಯುವ ಪ್ರಾರ್ಥನೆಗಳು ವಿಶ್ವಾಸಿಗಳ ಆಯುಧಗಳಾಗಿವೆ. ಪ್ರವಾದಿಯವರು(ಸ) ಹೇಳಿದರು, “ನೀವು ಪ್ರಾರ್ಥನೆಯಲ್ಲಿ ಅನಾಸ್ಥೆ ತೋರಬಾರದು. ಪ್ರಾರ್ಥಿಸುವವನು ನಾಶವನ್ನು ಎದುರಿಸಬೇಕಾಗಲಿಕ್ಕಿಲ್ಲ.” ಪ್ರಾರ್ಥನೆಯನ್ನು ರೂಢಿಯಾಗಿಸಿದವನು ಹೇಡಿಯಾಗಲಿಕ್ಕಿಲ್ಲ. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಹೆದರಿ ಅವನು ಮುಖ ತಿರುಗಿಸಲಿಕ್ಕಿಲ್ಲ. ಅದನ್ನು ಕೆಚ್ಚೆದೆಯಿಂದ ಎದುರಿಸುತ್ತಾನೆ. ಸರ್ವಶಕ್ತನಾದ ಅಲ್ಲಾಹನ ಸಾನ್ನಿಧ್ಯವು ಜೀವನದಲ್ಲಿ ಮುನ್ನುಗ್ಗಲು ಅವನನ್ನು ಸದಾ ಪ್ರೇರೇಪಿಸುತ್ತಿರುತ್ತದೆ.
ಪ್ರವಾದಿಯವರು(ಸ) ಹೀಗೆ ಕಲಿಸಿದ್ದಾರೆ, “ಪ್ರಾರ್ಥನೆಯು ವಿಶ್ವಾಸಿಯ ಆಯುಧವಾಗಿದೆ. ಧರ್ಮದ ಸ್ಥಂಭವಾಗಿದೆ. ಭೂಮ್ಯಾಕಾಶಗಳ ಪ್ರಕಾಶವಾಗಿದೆ.” ಸಂಕಷ್ಟಕ್ಕೆ ಸಿಲುಕಿ ದಡ ಸೇರಲು ಸಾಧ್ಯವಾಗದೆ ಚಡಪಡಿಸುತ್ತಿರುವಾಗ ಕಗ್ಗತ್ತಲೆಯಲ್ಲಿ ದೀಪ ಲಭಿಸಿದಂತೆ ಪ್ರಾರ್ಥನೆಯು ನೆರವಿಗೆ ಬರುತ್ತದೆ. ಅಲ್ಲಾಹನು ನೆರವಾಗುತ್ತಾನೆ ಎಂಬ ಸಂಕಲ್ಪದೊಂದಿಗೆ ಪ್ರಾರ್ಥಿಸುವಾಗ ಮನಸ್ಸಿನಲ್ಲಿ ಒಂದು ರೀತಿಯ ಸ್ಥೈರ್ಯ ಮೂಡುತ್ತದೆ. ಒಮ್ಮೆ ಪ್ರವಾದಿಯವರು(ಸ) ಮಸೀದಿಗೆ ಪ್ರವೇಶಿಸಿದಾಗ ಅಬೂ ಉಮಾಮ(ರ) ಮಸೀದಿಯ ಮೂಲೆಯಲ್ಲಿ ದುಃಖದಿಂದ ಕುಳಿತಿರುವುದನ್ನು ಕಾಣುತ್ತಾರೆ.
       “ಓ ಅಬೂ ಉಮಾಮ! ತಾವೇಕೆ ಹೀಗೆ ಕುಳಿತಿದ್ದೀರಿ. ಇದು ನಮಾಝಿನ ಸಮಯ ಅಲ್ಲವಲ್ಲ?” ಪ್ರವಾದಿಯವರು(ಸ) ಕೇಳಿದರು.
      “ಪ್ರವಾದಿಯವರೇ(ಸ) ಹಲವಾರು ಸಂಕಷ್ಟಗಳು, ದುಃಖ-ದುಮ್ಮಾನಗಳು, ಸಾಲಗಳು ನನ್ನನ್ನು ಆವರಿಸಿ ಕೊಂಡಿವೆ” ಅಬೂ ಉಮಾಮ(ರ) ದುಃಖದಿಂದ ಉತ್ತರಿಸಿದರು.
       “ನಾನು ನಿಮಗೆ ಒಂದು ಪ್ರಾರ್ಥನೆ ಕಲಿಸಿಕೊಡುತ್ತೇನೆ. ನೀವು ಅದನ್ನು ಪ್ರಾರ್ಥಿಸುತಲಿದ್ದರೆ ನಿಮ್ಮ ಸಾಲಗಳು ತೀರುವುದು, ಸಂಕಷ್ಟಗಳು ನೀಗುವುದು, ಸಂತೋಷವು ಮರಳುವುದು.”
        “ಸರಿ ಪ್ರವಾದಿಯವರೇ(ಸ) ತಾವು ಹೇಳಿರಿ” ಅಬೂ ಉಮಾಮ(ರ) ಹೇಳಿದರು,
     “ಅಲ್ಲಾಹನೇ ದುಃಖಗಳಿಂದಲೂ ವ್ಯಥೆಗಳಿಂದಲೂ ಮಾನಸಿಕ ಸಂಘರ್ಷಗಳಿಂದಲೂ ನಾನು ನಿನ್ನಿಂದ ಅಭಯ ಯಾಚಿಸುತ್ತೇವೆ. ದೌರ್ಬಲ್ಯಗಳಿಂದಲೂ ಆಲಸ್ಯ ಗಳಿಂದಲೂ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ. ಹೇಡಿತನದಿಂದಲೂ ಜಿಪುಣತೆಯಿಂದಲೂ ಸಾಲಗಳಿಂದಲೂ ಜನರ ಅವಹೇಳನಗಳಿಂದಲೂ ನೀನು ನನ್ನನ್ನು ರಕ್ಷಿಸು.” ಅಬೂ ಉಮಾಮ(ರ) ಈ ಪ್ರಾರ್ಥನೆಯನ್ನು ರೂಢಿಯಾಗಿಸಿದರು. ಅಲ್ಲಾಹನು ತನ್ನ ಎಲ್ಲಾ ಸಂಕಷ್ಟಗಳನ್ನು ನೀಗಿಸಿರುವುದಾಗಿ ಅವರು ಬಳಿಕ ಹೇಳುತ್ತಿದ್ದರು.
ನನ್ನ ದಾಸನು ನನ್ನೊಂದಿಗೇ ಬೇಡಬೇಕು ಮತ್ತು ನಿರಂತರವಾಗಿ ಸಂಬಂಧವಿರಿಸಬೇಕು ಎಂದು ಅಲ್ಲಾಹನು ಬಯಸುತ್ತಾನೆ. ದಾಸರ ಪ್ರಾರ್ಥನೆಗೆ ಉತ್ತರಿಸಲು ಅಲ್ಲಾಹನು ಸಿದ್ಧನಾಗಿದ್ದಾನೆ. ಮನುಷ್ಯರ ಬೇಡಿಕೆಗಳನ್ನು ಈಡೇರಿಸಲು ಅಲ್ಲಾಹನಿಗೆ ಮಾತ್ರ ಸಾಧ್ಯ. ಅಲ್ಲಾಹನು ಹೇಳುತ್ತಾನೆ, “ಓ ಪೈಗಂಬರರೇ, ನನ್ನ ದಾಸರು ನಿಮ್ಮೊಡನೆ ನನ್ನ ಬಗ್ಗೆ ಕೇಳಿದರೆ, ನಾನು ಅವರಿಗೆ ನಿಕಟನಾಗಿದ್ದೇನೆಂದೂ ಪ್ರಾರ್ಥಿಸುವವನು ನನ್ನೊಂದಿಗೆ ಪ್ರಾರ್ಥಿಸಿದಾಗ ಅವರ ಪ್ರಾರ್ಥನೆಯನ್ನು ಆಲಿಸು ತ್ತೇನೆಂದೂ ಅವರಿಗೆ ಹೇಳಿರಿ. ಆದುದರಿಂದ ಅವರು ನನ್ನ ಕರೆಗೆ ಓಗೊಡಲಿ ಮತ್ತು ನನ್ನ ಮೇಲೆ ವಿಶ್ವಾಸವಿರಿಸಲಿ. ಅವರು ಸನ್ಮಾರ್ಗ ಪಡೆಯಲೂ ಬಹುದು.” (ಅಲ್ ಬಕರ: 186)
‘ನಿಮ್ಮ ಪ್ರಾರ್ಥನೆಗೆ ನಾನು ಉತ್ತರ ನೀಡುತ್ತೇನೆ’ ಎಂದು ಅಲ್ಲಾಹನು ಸ್ಪಷ್ಟವಾಗಿ ಹೇಳಿರುವಾಗ ಅಲ್ಲಾಹೇತರರೊಂದಿಗೆ ಪ್ರಾರ್ಥಿಸುವುದರ ವಾಸ್ತವಿಕತೆ ಯಾದರೂ ಏನು? ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸುತ್ತಿದ್ದ ಮಹಾನರು ಮರಣ ಹೊಂದಿದ ಬಳಿಕ ಜನರು ಅವರ ಘೋರಿಗಳ ಬಳಿ ನಿಂತು ಅವರೊಂದಿಗೆ ಪ್ರಾರ್ಥಿಸುವುದು ಅಜ್ಞಾನವೋ ದೇವ ಧಿಕ್ಕಾರವೋ? ಹಣಗಳಿಸಲಿಕ್ಕಾಗಿ ಜನರ ನಂಬಿಕೆಗಳನ್ನು ಪಣಕ್ಕಿಡುವವರು ನಾಳೆ ಅಲ್ಲಾಹನ ಮುಂದೆ ಹಾಜರಾಗಲಿಕ್ಕಿದೆ ಎಂಬ ವಾಸ್ತವಿಕತೆ ಯನ್ನು ಮರೆತಿದ್ದಾರೆಯೇ?
ಮಕ್‍ಬರಗಳ ಹೆಸರಿನಲ್ಲಿ ಜನರ ಸಂಪತ್ತನ್ನು ಕೊಳ್ಳೆ ಹೊಡೆಯುವ ಒಂದು ದಂಧೆಯೇ ನಡೆಯುತ್ತಿದೆ. ‘ಈಗ ಎಲ್ಲಕ್ಕಿಂತ ಲಾಭದಾಯಕ ವ್ಯವಸಾಯ ಮಕ್‍ಬರ ವ್ಯವಸಾಯ’ ಎಂದು ನನ್ನ ಗೆಳೆಯರೊಬ್ಬರು ಹೇಳುತ್ತಿದ್ದರು. ಅವರು ಇದನ್ನು ತಮಾಷೆಗಾಗಿ ಹೇಳುತ್ತಿದ್ದರೂ ಅದು ವಾಸ್ತವದಂತೆ ಭಾಸವಾಗುತ್ತಿತ್ತು. ಇಂತಹ ಕೇಂದ್ರ ಗಳಿಗೆ ಹೋಗಿ ಪ್ರಾರ್ಥನೆ ನಡೆಸಿದರೆ ಉತ್ತರ ಲಭಿಸುತ್ತದೆ ಎಂಬುದು ದೇವ ಧಿಕ್ಕಾರವಲ್ಲವೇ? ಶಾಲೆಯಲ್ಲಿ ಪರೀಕ್ಷೆ ಹತ್ತಿರ ಬರುವಾಗ ವಿದ್ಯಾರ್ಥಿ ಗಳು ಇಂತಹ ಮಕ್‍ಬರಗಳ ಬಳಿ ನಿಂತು ಪರೀಕ್ಷೆ ಉತ್ತೀರ್ಣರಾಗಲು ಪ್ರಾರ್ಥಿಸುವುದನ್ನು ಇಂದು ನಾವು ವ್ಯಾಪಕವಾಗಿ ಕಾಣುತ್ತಿದ್ದೇವೆ. ಉತ್ತರ ಸಿಗದಂತಹ ಪ್ರಾರ್ಥನೆ ನಡೆಸಿ ಕೊನೆಗೆ ಅನುತ್ತೀರ್ಣರಾದಾಗ ದೇವನ ಮೇಲೆ ಕೋಪ ಗೊಂಡು ಪ್ರಯೋಜನವಾದರೂ ಏನು? ಅಲ್ಲಾಹ ನೊಂದಿಗಿನ ಪ್ರಾರ್ಥನೆಗೆ ಮಾತ್ರ ಉತ್ತರ ಲಭಿಸುವುದು ಎಂಬುದು ಹಗಲಿನಂತೆ ಸತ್ಯವಾಗಿದೆ. ಆದ್ದರಿಂದ ಪ್ರಾರ್ಥನೆ ಅಲ್ಲಾಹನೊಡನೆ ಮಾತ್ರ.
ಅಲ್ಲಾಹನು ನಮಗೆ ಹಲವಾರು ಅನುಗ್ರಹಗಳನ್ನು ನೀಡಿದ್ದಾನೆ. ಅದನ್ನು ಎಣಿಸಲು ಸಾಧ್ಯವಿಲ್ಲ. ಆದ್ದರಿಂದ ಅದಕ್ಕಾಗಿ ಕೃತಜ್ಞತೆ ಸಲ್ಲಿಸಬೇಕಾದದ್ದು ಪ್ರತೀ ವಿಶ್ವಾಸಿಯ ಕಡ್ಡಾಯ ಹೊಣೆಗಾರಿಕೆಯಾಗಿದೆ. ಓರ್ವ ಪತ್ನಿಯು ತನ್ನ ಪತಿಯನ್ನು ಪ್ರೀತಿಸುತ್ತಾಳೆ. ಅವನಿಗೆ ಬೇಕಾದ ಆಹಾರ ವಸ್ತುಗಳನ್ನು ತಯಾರಿ ಸುತ್ತಾಳೆ. ಅವನ ಬಟ್ಟೆಬರೆಗಳನ್ನು ಒಗೆಯುತ್ತಾಳೆ. ಅವನಿಗೆ ರೋಗ ಬಂದರೆ ಶುಶ್ರೂಷೆ ಮಾಡುತ್ತಾಳೆ. ಆದರೆ ಇವೆಲ್ಲವನ್ನು ಅನುಭವಿಸುವ ಪತಿಯು ಪ್ರೀತಿಸುವುದು ಬೇರೊಬ್ಬಳನ್ನಾದರೆ ಹೇಗಾಗಬಹುದು? ಅಲ್ಲಾಹನು ನೀಡಿದ ಎಲ್ಲಾ ಅನುಗ್ರಹಗಳನ್ನು ಸವಿದು ಪ್ರಾರ್ಥನೆ, ಆರಾಧನೆ ಇನ್ನಾರಿಗೋ ಆದರೆ ಅದು ಎಷ್ಟು ದೊಡ್ಡ ಅಪರಾಧ ಎಂದು ಚಿಂತಿಸುವ ಯಾರಿಗೂ ಅರ್ಥವಾಗಬಹುದು. ಅಲ್ಲಾಹನು ‘ನನ್ನೊಂದಿಗೆ ಪ್ರಾರ್ಥಿಸಿರಿ, ಉತ್ತರ ನೀಡುತ್ತೇನೆ’ ಎಂದು ಭರವಸೆ ನೀಡುವಾಗ ಇತರರೊಂದಿಗೆ ಪ್ರಾರ್ಥಿಸುವುದು ಅಲ್ಲಾಹನ ಮೇಲೆ ನಂಬಿಕೆ ಇಲ್ಲದ್ದರಿಂದಲ್ಲವೇ?
ಪ್ರವಾದಿಯವರು(ಸ) ಹೇಳಿದರು, “ತನ್ನ ಮುಂದೆ ಬೊಗಸೆ ಕೈಯೊಂದಿಗೆ ಬಂದು ಪ್ರಾರ್ಥಿಸುವವರನ್ನು ಬರಿಗೈಯಿಂದ ಮರಳಿಸುವುದು ಅಲ್ಲಾಹ ನಿಗೆ ನಾಚಿಕೆಗೇಡಿನ ವಿಚಾರವಾಗಿದೆ.” (ಅಬೂ ದಾವೂದ್, ತಿರ್ಮಿದಿ). ಅಲ್ಲಾಹನು ಕುದ್ಸಿಯಾದ ಹದೀಸ್‍ನಲ್ಲಿ ಹೇಳುತ್ತಾನೆ, “ನನ್ನ ದಾಸನು ನನ್ನ ಕುರಿತು ಏನಾದರೂ ಯೋಚಿಸಿದರೆ ನಾನು ಆ ಯೋಚನೆಯೊಂದಿಗಿರುತ್ತೇನೆ. ಅವನು ನನ್ನೊಂದಿಗೆ ಪ್ರಾರ್ಥಿಸಿದರೆ ನಾನು ಅವನೊಂದಿಗಿರುವೆನು.” (ಬುಖಾರಿ, ಮುಸ್ಲಿಮ್)
ಪ್ರಾರ್ಥನೆಗಳು ಹೃದಯಾಂತರಾಳದಿಂದ ಬರುವುದಾದರೆ ಅವುಗಳಿಗೆ ಉತ್ತರ ಬೇಗನೇ ಲಭಿಸುತ್ತದೆ. ಏನು ಪ್ರಾರ್ಥಿಸುತ್ತಿದ್ದೇವೆ ಎಂಬ ಬಗ್ಗೆ ಪ್ರಜ್ಞಾವಂತರಾಗಿರಬೇಕು. ಅನಾಸ್ಥೆಯಿಂದ ಯಾಂತ್ರಿಕವಾಗಿ ಪ್ರಾರ್ಥಿಸುವುದಾದರೆ ಅದರಿಂದ ಪ್ರಯೋಜನವೇನೂ ಸಿಗಲಿಕ್ಕಿಲ್ಲ. ಪ್ರಾರ್ಥಿಸುವಾಗ ಇರಬೇಕಾದ ಮನಃಸ್ಥಿತಿಯ ಕುರಿತು ಪ್ರವಾದಿಯವರು(ಸ) ಹೀಗೆ ಹೇಳಿದ್ದಾರೆ, “ಹೃದಯಗಳೆಲ್ಲವೂ ಪ್ರಜ್ಞೆ ಇರುವಂಥದ್ದಾಗಿವೆ. ಆದರೆ ಕೆಲವು ಹೃದಯಗಳು ಇತರ ಕೆಲವು ಹೃದಯಗಳಿಗಿಂತ ಹೆಚ್ಚು ಪ್ರಜ್ಞೆ ಇರುವವುಗಳಾಗಿರುತ್ತವೆ. ಆದ್ದರಿಂದ ಜನರೇ, ನೀವು ಅಲ್ಲಾಹನ ಮುಂದೆ ಪ್ರಾರ್ಥಿಸುವಾಗ ಪ್ರಾರ್ಥನೆಗೆ ಉತ್ತರ ಲಭಿಸುತ್ತದೆ ಎಂಬ ದೃಢ ವಿಶ್ವಾಸದೊಂದಿಗೆ ಪ್ರಾರ್ಥಿಸಬೇಕು. ಅನಾಸ್ಥೆಯಿಂದ ಕೂಡಿದ ಹೃದಯಗಳಿಂದ ಹೊರಡುವ ಪ್ರಾರ್ಥನೆಗೆ ಅಲ್ಲಾಹನು ಉತ್ತರಿಸಲಿಕ್ಕಿಲ್ಲ.”
ಪ್ರಾರ್ಥನೆಗಳಿಗೆ ಉತ್ತರ ನೀಡಲು ಅಲ್ಲಾಹನಿಗೆ ಹೊರತು ಇನ್ನಾರಿಗೂ ಸಾಧ್ಯವಿಲ್ಲ. ಆದ್ದರಿಂದ ನಾವು ಅಲ್ಲಾಹನೊಂದಿಗೇ ಪ್ರಾರ್ಥಿಸಬೇಕು. ಪ್ರಾರ್ಥಿಸುವುದು ಸೃಷ್ಟಿಗಳ ಕೆಲಸವಾದರೆ ಉತ್ತರ ನೀಡುವುದು ಸೃಷ್ಟಿಕರ್ತನ ಕೆಲಸವಾಗಿದೆ. ಎಷ್ಟೇ ಪ್ರಾರ್ಥಿಸಿದರೂ ಉತ್ತರ ಲಭಿಸುವುದಿಲ್ಲ ಎಂದು ಯಾರೂ ವ್ಯಥೆ ಪಡಬೇಕಾಗಿಲ್ಲ. ಪ್ರವಾದಿಯವರು(ಸ) ಹೇಳಿದರು, “ಅಲ್ಲಾಹನು ತನ್ನ ದಾಸರ ಪ್ರಾರ್ಥನೆಗೆ ಮೂರು ವಿಧದಲ್ಲಿ ಉತ್ತರ ನೀಡುವನು. ಒಂದೋ ಪ್ರಾರ್ಥನೆಗೆ ಶೀಘ್ರ ಉತ್ತರ. ಇಲ್ಲದಿದ್ದರೆ ಅದನ್ನು ಪರಲೋಕಕ್ಕೆ ಮೀಸಲಿರಿಸುವನು. ಅದಲ್ಲದಿದ್ದರೆ ನಿಮ್ಮ ಬೇಡಿಕೆಗೆ ಸಮಾನಾಂತರವಾದ ಯಾವುದಾದರೂ ಸಂಕಷ್ಟವನ್ನು ನೀಗಿಸುವನು.” (ಅಹ್ಮದ್)
ಆದ್ದರಿಂದ ಪ್ರಾರ್ಥನೆಗಳನ್ನು ಅಲ್ಲಾಹನಿಗೆ ಮಾತ್ರ ಸೀಮಿತಗೊಳಿಸಬೇಕು. ಅಲ್ಲಾಹೇತರರೊಂದಿಗೆ ಪ್ರಾರ್ಥಿಸುವುದು ಶಿರ್ಕ್ ಆಗಿದೆ. ಶಿರ್ಕ್ ಎಂಬುದು ಮಹಾ ಪಾಪವಾಗಿದೆ. ಮಾತ್ರವಲ್ಲ, ಅದಕ್ಕೆ ಅಲ್ಲಾಹನ ಬಳಿ ಕ್ಷಮೆಯಿಲ್ಲ. ಹಾಗಾಗಿ ನಾವು ನಮ್ಮ ಜೀವನದಲ್ಲಿ ಶಿರ್ಕ್ ಬರದಂತೆ ಎಚ್ಚರ ವಹಿಸಬೇಕು. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಸೋಮವಾರ, ಜನವರಿ 14, 2013

ರಕ್ತ ಸಾಕ್ಷಿತ್ವಕ್ಕೂ ಪರಿಹರಿಸಲಾಗದ ಪಾಪಗಳು

ಓರ್ವ ವಿಶ್ವಾಸಿಯ ಜೀವನದಲ್ಲಿ ರಕ್ತ ಸಾಕ್ಷಿತ್ವ ಎಂಬುದು ಸಾಟಿಯಿಲ್ಲದ ಶ್ರೇಷ್ಠ ಕರ್ಮವಾಗಿದೆ. ಅದಕ್ಕಿಂತ ಶ್ರೇಷ್ಠ ಕರ್ಮ ಬೇರೊಂದಿಲ್ಲ. ಅದು ಸ್ವರ್ಗ ವಾಗ್ದಾನ ಮಾಡಲ್ಪಟ್ಟ ಕರ್ಮವಾಗಿದೆ. ಇತರ ಯಾವುದೇ ಆರಾಧನಾ ಕರ್ಮಗಳು ರಕ್ತ ಸಾಕ್ಷಿತ್ವಕ್ಕೆ ಸಮಾನವಾಗಲಾರವು. ಅದು ತ್ಯಾಗ ಹಾಗೂ ಸಮರ್ಪಣೆಯ ಪರಾಕಾಷ್ಠೆಯಾಗಿದೆ. ಜೀವವನ್ನೇ ಸೃಷ್ಟಿಕರ್ತನಿಗೆ ಸಮರ್ಪಿಸುವ ಆರಾಧನೆ. ಆದರೆ ದೇವನ ಮುಂದೆ ಗುರುತರವಾಗಿ ಪರಿಗಣಿಸಲ್ಪಡುವ, ರಕ್ತ ಸಾಕ್ಷಿತ್ವದಿಂದ ಪರಿಹರಿಸಲ್ಪಡದ ಕೆಲವು ಪಾಪಗಳಿವೆ. ನಾವು ಅವನ್ನು ಮೇಲ್ನೋಟಕ್ಕೆ ಕ್ಷುಲ್ಲಕವೆಂದು ಭಾವಿಸುತ್ತೇವೆ.
ಅನಸ್‍ರಿಂದ(ರ) ವರದಿಯಾಗಿದೆ. “ಉಹುದ್ ಯುದ್ಧದಲ್ಲಿ ನಮ್ಮ ಪೈಕಿ ಓರ್ವರು ರಕ್ತ ಸಾಕ್ಷಿಯಾದರು. ಹಸಿವೆ ತಾಳಲಾರದೆ ಅವರು ತನ್ನ ಉದರಕ್ಕೆ ಕಲ್ಲನ್ನು ಕಟ್ಟಿದ್ದರು. ಅವರ ತಾಯಿ ಅವರ ಮುಖದಿಂದ ಮಣ್ಣನ್ನು ಒರೆಸುತ್ತಾ ಹೇಳಿದರು. “ಮಗನೇ, ಸಂತೋಷಪಡು. ನಿನಗೆ ಸ್ವರ್ಗವಿದೆ.” ಇದನ್ನು ಆಲಿಸಿದ ಪ್ರವಾದಿಯವರು(ಸ) ಹೇಳಿದರು. “ನಿಮಗೇನು ಗೊತ್ತು. ಒಂದು ವೇಳೆ ಅವರು ಅನಗತ್ಯ ಮಾತುಗಳನ್ನು ಆಡಿರಬಹುದು ಅಥವಾ ತನಗೆ ಉಪದ್ರವ ನೀಡದ್ದನ್ನು ತಡೆದಿರಲೂ ಬಹುದು.”
ಈ ಹದೀಸ್‍ನಲ್ಲಿ ಪ್ರಥಮವಾಗಿ ತಿಳಿಸಿರುವುದು ಅನಗತ್ಯವಾಗಿ ಮಾತಾಡುವುದನ್ನಾಗಿದೆ. ಇದು ಸಮಾಜದಲ್ಲಿ ಇಂದು ನಾವು ಕಾಣುತ್ತಿರುವ ಒಂದು ದುಶ್ಚಟವಾಗಿದೆ. ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸುತ್ತಾರೆ. ಅಗತ್ಯವಾದುದನ್ನೂ ಅನಗತ್ಯವಾದುದನ್ನೂ ಯಾವುದೇ ನಿಯಂತ್ರಣವಿಲ್ಲದೆ ಮಾತಾಡುತ್ತಿರುತ್ತಾರೆ. ಬಾಯಿಂದ ಹೊರಡುವ ಮಾತುಗಳ ಅವಶ್ಯಕತೆಯ ಕುರಿತೋ ಅವು ಸಮಾಜದಲ್ಲಿ ಸೃಷ್ಟಿಸುವ ಬಿರುಕುಗಳ ಕುರಿತೋ ಅವರು ಪ್ರಜ್ಞಾವಂತರಲ್ಲ. ಸಮಯ, ಸಂದರ್ಭ, ಅವಶ್ಯಕತೆಯನ್ನು ನೋಡದೆ ಅನಗತ್ಯವಾಗಿ ಮಾತಾಡುವವರನ್ನು ಪ್ರವಾದಿಯವರು(ಸ) ಹಗಲಿಡೀ ಮೇಯ್ದು ಬಂದು ರಾತ್ರಿ ಮೆಲುಕು ಹಾಕುವ ದನಗಳಿಗೆ ಹೋಲಿಸಿದ್ದಾರೆ. ಪ್ರವಾದಿಯವರು(ಸ) ಹೇಳಿದರು, “ಹಸುಗಳು ಮೆಲುಕು ಹಾಕುವಂತೆ ಸದಾ ಮಾತನಾಡುತ್ತಿರುವವರೊಂದಿಗೆ ಅಲ್ಲಾಹನು ಕೋಪಿಷ್ಠನಾಗುತ್ತಾನೆ.”
ಅನಗತ್ಯ ಮಾತುಗಳು ಮನುಷ್ಯರನ್ನು ಹಲವು ಪಾಪಗಳಿಗೆ ಕೊಂಡೊಯ್ಯುತ್ತವೆ. ಇಬ್ಬರ ಮಧ್ಯೆ ತಪ್ಪು ತಿಳುವಳಿಕೆಗಳನ್ನೂ ವೈರತ್ವವನ್ನೂ ಸೃಷ್ಟಿಸುತ್ತವೆ. ಇಂದು ಸಮಾಜದಲ್ಲಿ ಹಲವಾರು ಮಿತಭಾಷಿಗಳಿದ್ದಾರೆ. ಅವರು ಬೇಕಾದಷ್ಟನ್ನು ಮಾತ್ರ ಮಾತನಾಡಿ ಸುಮ್ಮನಿರುತ್ತಾರೆ. ಆದರೆ ನಾವು ಅವರನ್ನು ಮೂಕನೆಂದೂ ಮೌನ ವ್ರತ ಆಚರಿಸಿದ್ದಾನೆಂದೂ ಮೂದಲಿಸುತ್ತೇವೆ. ನಿಜವಾಗಿ ಅಂಥವರು ಮಾತುಗಳ ಮೂಲಕ ಸಂಭವಿಸುವ ಪಾಪಗಳಿಂದ ಕನಿಷ್ಠ ಮುಕ್ತರಾಗಿರುತ್ತಾರೆ. ನಾವು ಅವರನ್ನು ಗೇಲಿಯಾಡುವುದರ ಮೂಲಕ ಪಾಪಗಳನ್ನು ಕಟ್ಟಿಕೊಳ್ಳುತ್ತೇವೆ. ಪ್ರವಾದಿಯವರು(ಸ) ಹೇಳಿದರು, “ಯಾರ ಮಾತುಗಳು ಹೆಚ್ಚಾಗುತ್ತವೋ ಅಂಥವರ ತಪ್ಪುಗಳು ಹೆಚ್ಚಾಗುತ್ತವೆ. ತಪ್ಪುಗಳು ಹೆಚ್ಚಾದಾಗ ಪಾಪಗಳೂ ವರ್ದಿಸುತ್ತವೆ. ಪಾಪಗಳು ಹೆಚ್ಚಾದಾಗ ಕೊನೆಗೆ ನರಕದ ಹಕ್ಕುದಾರರಾಗಿ ಮಾರ್ಪಡುತ್ತಾರೆ.”
ಒಮ್ಮೆ ಓರ್ವರು ಪ್ರವಾದಿಯವರ(ಸ) ಬಳಿ ಬಂದು ನಿರಂತರವಾಗಿ ಮಾತನಾಡುತ್ತಿದ್ದರು. ಅವರ ಮಾತಿನಲ್ಲಿ ತೀವ್ರ ಅಸಂತೃಪ್ತರಾದ ಪ್ರವಾದಿಯವರು(ಸ) ಅವರೊಂದಿಗೆ ಹೇಳಿದರು, “ತಮ್ಮ ನಾಲಗೆಗೆ ಎಷ್ಟು ತಡೆಗಳಿವೆ.” ಅವರು ಹೇಳಿದರು, ‘ಎರಡು ನನ್ನ ಹಲ್ಲುಗಳು ಹಾಗೂ ತುಟಿಗಳು.’ ಆಗ ಪ್ರವಾದಿಯವರು(ಸ) ಕೇಳಿದರು. “ಆದರೂ ನಿಮಗೆ ನಿಮ್ಮ ಮಾತುಗಳಿಗೆ ನಿಯಂತ್ರಣ ಹೇರಲು ಸಾಧ್ಯವಾಗುವುದಿಲ್ಲವೇ?”
ಪ್ರವಾದಿಯವರು(ಸ) ಅನಗತ್ಯ ಮಾತುಗಳನ್ನಾಡುತ್ತಿರಲಿಲ್ಲ. ಸಹಾಬಿಗಳು ಕೂಡಾ ಅದೇ ಶಿಕ್ಷಣವನ್ನು ಪಡೆದಿದ್ದರು. ತಮ್ಮನ್ನು ತರಾಟೆಗೆ ತೆಗೆದುಕೊಂಡವರಿಗೆ ಅನವಶ್ಯಕ ಮಾತುಗಳಿಂದ ಉತ್ತರ ನೀಡುತ್ತಿರಲಿಲ್ಲ. ಹೆಚ್ಚು ಮಾತನಾಡುವ ಅಸಂಸ್ಕøತ ವ್ಯಕ್ತಿಗಳನ್ನು ಪ್ರವಾದಿಯವರು(ಸ) ದ್ವೇಶಿಸುತ್ತಿದ್ದರು. ಪ್ರವಾದಿಯವರು(ಸ) ಹೇಳುತ್ತಿದ್ದರು. “ನಾಳೆ ಪರಲೋಕದಲ್ಲಿ ನನಗೆ ಅತ್ಯಂತ ಪ್ರಿಯರೂ ಸಮೀಪಸ್ಥರೂ ಆದವರು ಉತ್ತಮ ಸ್ವಾಭಾವಗಳನ್ನು ಹೊಂದಿದವರಾಗಿದ್ದಾರೆ. ನನಗೆ ಇಷ್ಟವಿಲ್ಲದವರು ಮತ್ತು ನನ್ನಿಂದ ದೂರ ನಿಲ್ಲುವವರು ಅನಗತ್ಯವಾಗಿ ಮಾತನಾಡುವವರು, ಅಹಂಕಾರಿಗಳು ಮತ್ತು ಮಾತಿನಲ್ಲಿ ಕಾಪಟ್ಯ ಹೊಂದಿದ ನಿಕೃಷ್ಟ ಸ್ವಭಾವ ಹೊಂದಿದವರಾಗಿದ್ದಾರೆ.”
ಆದ್ದರಿಂದ ನಾವು ಅನಗತ್ಯ ಮಾತುಕತೆಗಳಿಂದ ದೂರವಿರಬೇಕಾಗಿದೆ. ಆಡಿದ ಮಾತನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಮಾತನಾಡುವಾಗಲೇ ಯೋಚಿಸಿ ಮಾತನಾಡುವುದು ಉತ್ತಮ.
ಸ್ವರ್ಗ ಪ್ರವೇಶವನ್ನು ತಡೆಯುವ ಎರಡನೇ ಪಾಪಕೃತ್ಯ ‘ಸ್ವಂತಕ್ಕೆ ಉಪದ್ರವ ಉಂಟುಮಾಡದ ವಿಚಾರಗಳನ್ನು ತಡೆಯುವುದಾಗಿದೆ. ಅಂದರೆ ಜನರಿಗೆ ಪ್ರಯೋಜನವನ್ನುಂಟು ಮಾಡುವ ಕಾರ್ಯಗಳಿಂದ ಮನಃಪೂರ್ವಕವಾಗಿ ಹಿಂದೆ ಸರಿಯುವುದಾಗಿದೆ. ತನಗೋ, ತನ್ನ ಕುಟುಂಬಕ್ಕೋ ತನ್ನ ಸಂಪತ್ತಿಗೋ ಯಾವುದೇ ನಷ್ಟವನ್ನುಂಟು ಮಾಡದ ಅದೇ ವೇಳೆ ಇತರರಿಗೆ ಪ್ರಯೋಜನಕಾರಿಯಾದಂತಹ ಕಾರ್ಯಗಳನ್ನು ಅಸೂಯೆಂದಲೋ ಇನ್ನಾವುದರಿಂದಲೋ ಮಾಡದಿರುವುದು. ಕುರ್‍ಆನ್ ಇಂತಹ ಪುಟ್ಟ ಪುಟ್ಟ ಉಪಕಾರಗಳಿಗೆ ‘ಮಾಊನ್’ ಎಂದು ಹೇಳಿದೆ. (ಅಲ್ ಮಾಊ ನ್-7)
ಸಮಾಜದಲ್ಲಿ ಇಂತಹ ಪುಟ್ಟ ಉಪಕಾರಗಳಿಗೆ ಬಹುದೊಡ್ಡ ಸ್ಥಾನವಿದೆ. ಅದು ಮಾನವರ ಮಧ್ಯೆ ಬಾಂಧವ್ಯ ಸೃಷ್ಟಿಯಾಗಲೂ ವೃದ್ಧಿಯಾಗಲೂ ಸಹಕಾರಿಯಾಗಿವೆ. ಇಂತಹ ಉಪಕಾರಗಳು ಅಪರಿಚಿತರ ಮಧ್ಯೆ ಪರಿಚಿತತೆಯನ್ನು ಸೃಷ್ಟಿಸುತ್ತವೆ. ನಾವು ಈ ಉಪಕಾರಗಳನ್ನು ಕ್ಷುಲ್ಲಕವೆಂದು ಭಾವಿಸಿದರೂ ಅದನ್ನು ಪಡೆಯುವವರ ಪಾಲಿಗೆ ಅವು ಮಹತ್ತರವಾಗಿರಲೂ ಬಹುದು. ಪ್ರವಾದಿಯವರು(ಸ) ಮುಸ್ಲಿಮ್ ಮಹಿಳೆಯರನ್ನು ಅಭಿಸಂಬೋಧಿಸುತ್ತಾ ಒಮ್ಮೆ ಹೀಗೆ ಹೇಳಿದರು. “ಓ ಸತ್ಯವಿಶ್ವಾಸಿಯರೇ, ನೀವು ನಿಮ್ಮ ನೆರೆಯವರಿಗೆ ನೀಡುವ ಯಾವುದೇ ವಸ್ತುವನ್ನು ಕ್ಷುಲ್ಲಕವೆಂದು ಭಾವಿಸಬೇಡಿ. ಅದು ಆಡಿನ ಒಂದು ಗೊರಸಾದರೂ ಸರಿ.”
ನಾವು ಇತರರಿಗೆ ಇಂತಹ ಪುಟ್ಟ ಸಹಾಯವನ್ನೂ ಮಾಡದೆ ನಮ್ಮ ಸ್ವಂತಕ್ಕಾಗಿ ಮಾತ್ರ ಬದುಕುತ್ತಿದ್ದೇವೆ. ಈ ಕರ್ಮಗಳನ್ನು ಮಾಡುವ ಸಂದರ್ಭವೊದಗಿದಾಗ ಅದರಿಂದ ಹಿಂದೆ ಸರಿದು ಎಷ್ಟೇ ಆರಾಧನೆಗಳನ್ನೆಸಗಿದರೂ ಪ್ರಯೋಜನವಿಲ್ಲ ಎಂದು ಮೊದಲಿನ ಹದೀಸ್‍ನಿಂದ ಸೃಷ್ಟವಾಗುತ್ತದೆ. ರಕ್ತಸಾಕ್ಷಿಗಳಿಗೂ ರಕ್ಷಣೆ ಹೊಂದಲು ಸಾಧ್ಯವಿಲ್ಲದಂತಹ ಈ ಕಾರ್ಯಗಳು ಎಷ್ಟು ಮಹತ್ವದ್ದಾಗಿದೆಯೆಂದು ಇದರಿಂದ ಮನದಟ್ಟಾಗುತ್ತದೆ. ಆದ್ದರಿಂದ ನಾವು ಇತರರಿಗೆ ಸಹಾಯ ಮಾಡುವ ಅವಕಾಶ ಒದಗಿದಾಗ ಅದರಿಂದ ಹಿಂದೆ ಸರಿಯಬಾರದು. ಅದೇ ರೀತಿ ವ್ಯರ್ಥ, ಅನಗತ್ಯ ಮಾತುಗಳಿಂದಲೂ ದೂರ ಸರಿಯಬೇಕು. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.


ಬುಧವಾರ, ಡಿಸೆಂಬರ್ 05, 2012

ಸೆಯ್ಯದ್ ಕುತುಬರ ಮರಣದ ಕ್ಷಣಗಳು


 1966 ಆಗಸ್ಟ್ 29, 20ನೇ ಶತಮಾನದಲ್ಲಿ ಇಸ್ಲಾಮೀ  ಚಳುವಳಿಗೆ ಕಿಡಿ ಹೊತ್ತಿಸಿದ ಅದರ ದಿಕ್ಸೂಚಿಯಂತಿದ್ದ ಸಯ್ಯದ್  ಕುತುಬ್‍ರನ್ನು ಈಜಿಪ್ಟಿನ ಅಧ್ಯಕ್ಷರಾಗಿದ್ದ ಜಮಾಲ್ ಅಬ್ದುನ್ನಾಸಿರ್ ಜೈಲಿಗೆ ತಳ್ಳಿದ ದಿನವಾಗಿತ್ತದು. ಚಿಂತಕ, ಸಾಹಿತಿ, ಬರಹಗಾರ, ಗ್ರಂಥಕರ್ತ, ಇಖ್ವಾನುಲ್ ಮುಸ್ಲಿಮೂನ್ ಸಂಘಟನೆಯ ಮುಖ್ಯಧಾರೆ ‘ಫಿ ಝಿಲಾಲಿಲ್’ ಕುರ್‍ಆನ್ ಎಂಬ ಪ್ರಸಿದ್ಧ ಕುರ್‍ಆನ್ ವ್ಯಾಖ್ಯಾನ ಗ್ರಂಥದ ರಚನಾಕಾರ ಎಂಬ ನೆಲೆಯಲ್ಲಿ ಜಗತ್ತು ಒಪ್ಪಿಕೊಂಡ ಆ ಸಯ್ಯದ್ ಕುತುಬ್‍ರನ್ನು ಗಲ್ಲಿಗೇರಿಸಿ ನಾಲ್ಕೂವರೆ ದಶಕಗಳು ಕಳೆದು ಇಂದು ಕೂಡಾ ಅವರ ಚಿಂತನೆಗಳು ರಚನೆಗಳು ಎಲ್ಲೆಂದರಲ್ಲಿ ಚರ್ಚೆಗಳಿಗೆ ಗ್ರಾಸವಾಗುತ್ತವೆ. ಸಯ್ಯದ್  ಕುತುಬ್‍ರ ಚಿಂತನೆ ಹಾಗೂ ಧೋರಣೆಗಳಲ್ಲಿ ಬೆಂಬಲ ಸೂಚಿಸದಿರುವವರೂ ಅವರು ಇಸ್ಲಾಮಿಗೆ ನೀಡಿರುವ ಕೊಡುಗೆ ಗಳನ್ನು ಅಲ್ಲಗಳೆಯಲಿಲ್ಲ. ಒಂದು ಕಾಲದಲ್ಲಿ ದಂತಕತೆಯಾಗಿದ್ದ ಸಯ್ಯದ್ ಕುತುಬ್‍ರಂತಹ ಪ್ರತಿಭಾಶಾಲಿಗಳನ್ನು ನೈಲ್ ನದಿಯ ತೀರವು ಜಗತ್ತಿಗೆ ಕೊಡುಗೆಯಾಗಿ ನೀಡಿತು. ಇಖ್ವಾನುಲ್ ಮುಸ್ಲಿಮೂನ್‍ನ ಸ್ಥಾಪನೆಯಾದಂದಿನಿಂದಲೇ ಆ ಸಂಘಟನೆಯ ಚುಕ್ಕಾಣಿ ಹಿಡಿದ ಸಯ್ಯದ್ ಕುತುಬ್ ‘ಫ್ರೀ ಆಫಿಸರ್ಸ್ ಕ್ಲಬ್’ನಲ್ಲಿ ಸದಸ್ಯತ್ವ ಇರುವ ಏಕೈಕ ಪ್ರಜೆಯಾಗಿದ್ದರು. ಬಳಿಕ ನಿರ್ವಹಣೆ ಸಂಬಂಧಿ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದ್ದರಿಂದ ಅವರು ಅದರಿಂದ ಹೊರಬಂದರು.
1954ರಲ್ಲಿ ಅಲೆಗ್ಸಾಂಡ್ರಿಯಾದ ಬಳಿ ಇರುವ ಮಿನ್‍ಶಿಯಾದಲ್ಲಿ ಅಧ್ಯಕ್ಷ ಜಮಾಲ್ ಅಬ್ದುಲ್ ನಾಸಿರ್‍ರ ಕೊಲೆಯತ್ನ ನಡೆದಾಗ ಅದರಲ್ಲಿ ಇಖ್ವಾನುಲ್ ಮುಸ್ಲಿಮೂನ್‍ನ ಕೈವಾಡವಿದೆ ಎಂದು ಆರೋಪಿಸಿ ಹಲವಾರು ಇಖ್ವಾನೀ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಅವರಲ್ಲಿ ಸಯ್ಯದ್ ಕುತುಬ್ ಕೂಡಾ ಇದ್ದರು. ಅವರಿಗೆ 15 ವರ್ಷಗಳ ಜೈಲು ವಾಸ ವಿಧಿಸಲಾಯಿತು. ಅವರ ಶಿಕ್ಷೆಯ ಅವಧಿಯು 10 ವರ್ಷವಾದಾಗ ಅವರನ್ನು ಮಾಜಿ ಇರಾಕ್ ಅಧ್ಯಕ್ಷ ಅಬ್ದುಸ್ಸಲಾಮ್ ಆರಿಫ್ ಬಿಡುಗಡೆ ಗೊಳಿಸಲು ಪ್ರಯತ್ನಿಸಿ ಯಶಸ್ವಿಯಾದರೂ ಎಂಟು ತಿಂಗಳ ಬಳಿಕ ಮತ್ತೆ ಅಬ್ದುನ್ನಾಸಿರ್ ವಿವಿಧ ಆರೋಪ ಹೊರಿಸಿ ಕುತುಬ್‍ರನ್ನು ಪುನಃ ಜೈಲಿಗಟ್ಟಿದರು. ಭೀಕರ ದೌರ್ಜನ್ಯಗಳಿಗೆ ಸಯ್ಯದ್ ಕುತುಬ್ ಮತ್ತು ಇಖ್ವಾನೀ ಕಾರ್ಯಕರ್ತರು ಬಲಿಯಾದರು. ಪೆÇಲೀಸ್ ಸುಪರಿಡೆಂಟ್ ಬದರ್‍ನ ನೇತೃತ್ವದಲ್ಲಿ ಜರಗಿದ ಕಿರಾತ ದೌರ್ಜನ್ಯಗಳ ಮನಕರಗಿಸುವ ಕಥೆಗಳು ಝೈನಬುಲ್ ಗಝ್ಝಾಲಿಯವರ ಆತ್ಮ ಕಥೆಯಲ್ಲಿ ಪ್ರ್ರಸ್ತಾ ಪಿಸಲಾಗಿದೆ. 1965 ಜುಲೈ 30ರಂದು ತನ್ನ ಸಹೋದರ ಮುಹಮ್ಮದ್ ಕುತುಬ್‍ರ ಬಂಧನದ ವಿರುದ್ಧ ಪ್ರತಿಭಟಿಸಿ ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿಗೆ ಸಯ್ಯದ್ ಕುತುಬ್ ಬರೆದ ಪತ್ರವು ಮತ್ತೆ ಅವರನ್ನು ಬಂಧಿಸಲಿಕ್ಕಿರುವ ನೆಪವಾಯಿತು. ಇಖ್ವಾನುಲ್ ಮುಸ್ಲಿಮೂನ್‍ನ ಇತರ ಏಳು ಮಂದಿಯೊಂದಿಗೆ ಬಂಧಿಸಲ್ಪಟ್ಟ ಸಯ್ಯದ್  ಕುತುಬ್‍ರನ್ನು ಸರಕಾರವು ವಿಚಾರಣೆಯ ನಾಟಕವಾಡಿ ಕೊನೆಗೆ ವಧೆ ಶಿಕ್ಷೆ ವಿಧಿಸಿತು. 1966 ಆಗಸ್ಟ್ 29 ಸೋಮವಾರ ಮುಂಜಾನೆ ಅವರನ್ನು ನೇಣುಗಂಭಕ್ಕೇರಿಸಲಾಯಿತು.
ಗಲ್ಲಿಗೇರಿಸುವ ದಿನ ಸಯ್ಯದ್ ಕುತ್‍ಬ್‍ರೊಂದಿಗೆ ಸೇನಾಧಿ ಕಾರಿಯು “ಶರೀಅತ್ ಕಾನೂನನ್ನು ಜಾರಿಗೊಳಿಸಲಿಕ್ಕಿರುವ ಬೇಡಿಕೆ ಮತ್ತು ಅದಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಸ್ಥಗಿತಗೊಳಿಸಿ ಈ ಶಿಕ್ಷೆಯಿಂದ ಪಾರಾಗಬಹುದಲ್ಲವೇ” ಎಂದು ಕೇಳಿದನು. ಮರಣವು ಕಣ್ಮುಂದೆ ಬಂದು ನಿಂತಿದ್ದರೂ ಸಯ್ಯದ್ ಕುತುಬೆಂಬ ಆ ಧೀರ ಮುಜಾಹಿದ್‍ರು ದಿಟ್ಟವಾಗಿ ಮರುತ್ತರ ನೀಡಿದರು, “ಅಲ್ಲಾಹನಿಗಾಗಿ ರುವ ಕೆಲಸದ ವಿಚಾರದಲ್ಲಿ ನಾನು ಕ್ಷಮೆ ಕೋರಲು ಸಿದ್ಧನಿಲ್ಲ. ನಮಾಝಿನಲ್ಲಿ ಅಲ್ಲಾಹನ ಏಕತ್ವವನ್ನು ಪ್ರತಿಪಾದಿಸುವ ಈ ತೋರು ಬೆರಳಿನಲ್ಲಿ ಅಕ್ರಮಿಯಾದ ಆಡಳಿತಾಧಿಕಾರಿಯ ವಿಧಿಯನ್ನು ಬೆಂಬಲಿಸುವ ಒಂದಕ್ಷರವನ್ನು ಬರೆಯಲು ನಾನು ತಯಾರಿಲ್ಲ.” ಅಧ್ಯಕ್ಷರಿಗೆ ಒಂದು ದಯಾ ಅರ್ಜಿ ಸಲ್ಲಿಸಬಾರದೇ ಎಂದು ಮುಂದಿನ ಪ್ರಶ್ನೆ ಕೇಳಲಾಯಿತು. ಸಯ್ಯದ್ ಕುತುಬ್ ಉತ್ತರಿಸಿದರು. “ನಾನು ಯಾಕೆ ದಯೆ ಕೋರಬೇಕು. ವಾಸ್ತವದಲ್ಲಿ ನಾನು ಈ ತೀರ್ಪಿಗೆ ಅರ್ಹನಾಗಿದ್ದರೆ ಈ ತೀರ್ಪಿನಲ್ಲಿ ನಾನು ಸಂತೃಪ್ತನಾಗಿದ್ದೇನೆ. ಇನ್ನು ಸುಳ್ಳಾರೋಪಗಳ ಹೆಸರಿನಲ್ಲಿ ಈ ತೀರ್ಪಾದರೆ ಒಂದು ಅಸತ್ಯದ ವ್ಯವಸ್ಥೆಗಾಗಿ ಪ್ರಾಣ ಭಿಕ್ಷೆ ಬೇಡಲು ನಾನು ಅಷ್ಟು ಕೀಳುಮಟ್ಟದವನಲ್ಲ.”
ಗಲ್ಲಿಗೇರಿಸುವುದಕ್ಕಿಂತ ಮುಂಚೆ ಶಹಾದತ್ ಕಲಿಮ ಹೇಳಿಕೊಡಲು ಬಂದ ಅಧಿಕಾರಿಯು “ಶಹಾದತ್ ಕಲಿಮ ಹೇಳು” ಎಂದು ಹೇಳಿದನು. ಸಯ್ಯದ್ ಕುತುಬ್ ಕೂಡಲೇ ಪ್ರತಿಕ್ರಿಯಿಸಿದರು. “ಈ ನಾಟಕ ರಂಗವನ್ನು ಪೂರ್ತಿಗೊಳಿಸಲು ನೀವು ಕೂಡಾ ಬಂದು ತಲುಪಿದರಲ್ಲವೇ? ಸಹೋದರಾ. ನೀವು ಉಚ್ಚರಿಸಲು ಹೇಳಿದ `ಲಾ ಇಲಾಹ ಇಲ್ಲಲ್ಲಾಹ್’ನ ಕಾರಣದಿಂದಾಗಿ ನಾವು ಗಲ್ಲಿಗೇರಿಸಲ್ಪಡುತ್ತಿದ್ದೇವೆ. ನಿಮ್ಮ ಆಹಾರಗಳಿಗೂ ಅದೇ `ಲಾ ಇಲಾಹ ಇಲ್ಲಲ್ಲಾಹ್’ ಬೇಕು.”
ಈಜಿಪ್ಟಿನಲ್ಲಿ ಒಂದು ಕಾಲದಲ್ಲಿ ಹೋರಾಟದ ಪ್ರೇರಕ ಶಕ್ತಿಯೂ ಆಗಿದ್ದ ಶೈಖ್ ಅಬ್ದುಲ್ ಹವಿೂದ್ ಕಶಕ್ ತಮ್ಮ ನೆನಪುಗಳನ್ನು ಮೆಲುಕು ಹಾಕುತ್ತಾರೆ. ತನ್ನ ಕೈಕಾಲುಗಳನ್ನು ಬಂಧಿಸಲು ಮುಂದಾದ ಜೈಲ್ ವಾರ್ಡನ್‍ನೊಂದಿಗೆ ಸಯ್ಯದ್  ಕುತುಬ್ ಹೇಳಿದರು. “ಆ ಹಗ್ಗವನ್ನು ನನಗೆ ನೀಡಿ. ನನ್ನ ಕೈಕಾಲು ಗಳನ್ನು ನಾನೇ ಬಂಧಿಸಿಡುವೆನು. ನನ್ನ ಸೃಷ್ಟಿಕರ್ತನ ಸ್ವರ್ಗದಿಂದ ನಾನು ಓಡಿ ಹೋಗುವೆನೇ?”
ನೇಣಿನ ಹಗ್ಗವನ್ನು ಕುತ್ತಿಗೆಗೆ ಬಿಗಿದಾಗ ಸಯ್ಯದ್ ಕುತುಬ್ ಕೊನೆಗೆ ಉಚ್ಚರಿಸಿದ್ದು ಪ್ರವಾದಿ ನೂಹ್(ಅ) ಕೊನೆಗೆ ಉಚ್ಚರಿಸಿದ ಅದೇ ಶಬ್ದಗಳಾಗಿತ್ತು. ‘ರಬ್ಬಿ ಇನ್ನೀ ಮಗ್‍ಲೂಬುನ್ ಪಂತಸ್ವಿರ್’ (ನನ್ನ ಪ್ರಭು! ನಾನು ಶರಣಾಗಿದ್ದೇನೆ. ಇನ್ನು ನೀನು ಪ್ರತಿಕಾರ ನಡೆಸು).
“ನೇಣು ಕಂಬ ನೆಟ್ಟ ಕೊಠಡಿಯ ಮುಂದಿನ ಕೊನೆಯ ಕ್ಷಣಗಳು. ಅಪರಾಧಿಯ ಹೆಸರನ್ನು ಕೂಗಿ ಕರೆಯಲಾಯಿತು. ಸಯ್ಯದ್ ಕುತುಬ್ ಇಬ್ರಾಹೀಮ್ 60 ವರ್ಷ ಕೆಲಸ: ಮಾಜಿ ಪ್ರೊಫೆಸರ್, ಅಪರಾಧ: ಸರಕಾರವನ್ನು  ಬುಡಮೇಲು ಗೊಳಿಸುವ ಯತ್ನ. ಸಯ್ಯದ್ ಕುತುಬ್‍ರನ್ನು ಗಲ್ಲಿಗೇರಿಸಲು ನೇಮಿಸಲ್ಪಟ್ಟ ಆಶ್ಮಾಮಿ ಎಂಬವನ ಮುಖದಲ್ಲಿದ್ದ ವಿಷಾದವು ನಿಟ್ಟುಸಿರಾಗಿ ಹೊರಹೊಮ್ಮಿತು. ತಾನು ಕೂಡಾ ಓರ್ವ ಮಾನವ ಎಂದು ಆಶ್ಮಾಮಿಗೆ ಭಾಸವಾದ ಐತಿಹಾಸಿಕ ಕ್ಷಣವಾಗಿತ್ತದು. ಎಂದಿನಂತೆ ತನ್ನ ಕೆಲಸವನ್ನು ಅವನಿಗೆ ಇಂದು ನಿರ್ವಹಿಸಲಾಗುತ್ತಿಲ್ಲ. ಆದರೂ ಅದನ್ನು ನಿರ್ವಹಿಸಲೇ ಬೇಕು. ಸಯ್ಯದ್ ಕುತುಬ್‍ರನ್ನು ನೇರ ವಾಗಿ ಕಂಡಿಲ್ಲದಿದ್ದರೂ ಜನರು ಮಾತುಗಳಿಂದ ಆಶ್ಮಾಮಿಯು ಅವರ ಕುರಿತು ತಿಳಿದುಕೊಂಡಿದ್ದನು.
ಅಂತಹ ವ್ಯಕ್ತಿಯನ್ನು ಸ್ವಂತ ಕೈಗಳಿಂದ ಮೃತ್ಯುಗೊಪ್ಪಿಸುವುದೆಂದರೆ ಆಶ್ಮಾಮಿಗೆ ಮಾತ್ರವಲ್ಲ ಎಂಥವರಿಗೂ ನಡುಕದ ವಿಚಾರವೇ ಆಗಿದೆ. ಆ ಕಣ್ಣುಗಳಿಗೆ ಕಣ್ಣು ನೆಟ್ಟು ಕುತ್ತಿಗೆಗೆ ನೇಣಿನ ಹಗ್ಗವನ್ನು ಹಾಕುವುದು! ಆಶ್ಮಾಮಿಯ ಧರ್ಮ ಸಂಕಟವನ್ನು ವಿವರಿಸಲು ಮಾತುಗಳು ಸಾಲದು. ಅಂದು ಬೇರೆ ಎರಡು ಇಖ್ವಾನೀ ನಾಯಕ ರನ್ನು ಗಲ್ಲಿಗೇರಿಸಬೇಕಾಗಿತ್ತು. ಮುಹಮ್ಮದ್ ಯೂಸುಫ್ ಹವಾಣಿ ಮತ್ತು ಅಬ್ದುಲ್ ಫತ್ತಾಹ್ ಇಸ್ಮಾಈಲ್.
ಸಯ್ಯದ್ ಕುತುಬ್‍ರನ್ನು ಗಲ್ಲಿಗೇರಿಸಲು ನೇಮಿಸಲ್ಪಟ್ಟ ಆಶ್ಮಾಮಿ ಯೊಂದಿಗೆ ಇನ್ನಿಬ್ಬರು ಸಹಾಯಿಗಳೂ ಇದ್ದರು. ಬಳಿಕ ಅವರು ಪಶ್ಚಾತ್ತಾಪಪಟ್ಟುಕೊಂಡು ಆ ಕ್ಷಣವನ್ನು ಹೀಗೆ ಬಿಚ್ಚಿಟ್ಟಿದ್ದಾರೆ, “ಕೊನೆಗೆ ನಾವು ಕಾವಲುಗಾರರಾಗಿ ನಿಲ್ಲಬೇಕಾದದ್ದು ಕಂಟೆಂಡ್ ಸೆಲ್ಲಿನಲ್ಲಿರಿಸಿದ್ದ ಓರ್ವ ಕೈದಿಗಾಗಿತ್ತು. ಅತ್ಯಂತ ಅಪಾಯಕಾರೀ ವ್ಯಕ್ತಿ ಎಂದು ಆ ಕೈದಿಯ ಕುರಿತು ನಮಗೆ ಮುನ್ನೆಚ್ಚರಿಕೆ ನೀಡ ಲಾಗಿತ್ತು. ಭಯೋತ್ಪಾದಕರು, ಬುಡಮೇಲು ಕೃತ್ಯ ನಡೆಸುವವರ ಮೆದುಳು ಎಂದು ಅವರನ್ನು ವಿಶ್ಲೇಷಿಸಲಾಗಿತ್ತು. ಶರೀರದಲ್ಲಿ ಕಿರಾತ ದೌರ್ಜನ್ಯಗಳ ಚಿಹ್ನೆಗಳು ವ್ಯಾಪಕವಾಗಿವೆ. ಅವರು ಸಯ್ಯದ್ ಕುತುಬಾಗಿದ್ದರು. ಎದ್ದು ನಿಲ್ಲಲೂ ಸಾಧ್ಯವಿಲ್ಲದ ಅವ ರನ್ನು ನಾವು ಸೈನಿಕ ನ್ಯಾಯಾಲಯಕ್ಕೆ ಹೊತ್ತುಕೊಂಡು ಹೋದೆವು. ಒಂದು ರಾತ್ರಿ, ನೇಣುಗಂಬವನ್ನು ಸಿದ್ಧಪಡಿಸಲಿಕ್ಕಿರುವ ಆಜ್ಞೆ ಬಂತು. ಕೊನೆಯ ಉಪದೇಶ ನೀಡಲೂ, ಪ್ರಾರ್ಥಿಸಲೂ ಓರ್ವ ಶೈಖ್‍ರನ್ನು ಸೆಲ್ಲಿಗೆ ಕಳುಹಿಸಲಾಯಿತು. ಮರುದಿನ ಮುಂಜಾನೆ ನಾನು ಮತ್ತು ನನ್ನ ಗೆಳೆಯ ಅವರನ್ನು ಹೊತ್ತುಕೊಂಡು ಹೋಗಿ ದೂರ ನಿಲ್ಲಿಸಿದ್ದ ಸೈನಿಕ ಜೀಪೊಂದರಲ್ಲಿ ಕುಳ್ಳಿರಿಸಿದೆವು. ವಧೆ ಶಿಕ್ಷೆ ನೀಡುವ ಸ್ಥಳಕ್ಕಾಗಿತ್ತು ಪ್ರಯಾಣ. ಶಸ್ತ್ರಧಾರಿಗಳಾದ ಸೈನಿಕರು ನಮ್ಮನ್ನು ಹಿಂಬಾಲಿಸುತ್ತಿದ್ದರು. ವಾಹನಗಳು ನಿಶ್ಚಿತ ಸ್ಥಳಕ್ಕೆ ತಲುಪಿದುವು. ಸೈನಿಕರು ಜೀಪ್‍ನಿಂದ ಜಿಗಿದರು. ಸೇನಾಧಿಕಾರಿಗಳು ಎಲ್ಲವನ್ನು ಮೊದಲೇ ಸಿದ್ಧಪಡಿಸಿಟ್ಟಿದ್ದರು. ಎಲ್ಲರೂ ತಮಗಾಗಿ ತಯಾರಿಸಿಟ್ಟಿದ್ದ ನೇಣುಗಂಬದ ಬಳಿಗೆ ಸಾಗಿದರು. ನೇಣುಗಂಬದ ಬಳಿಗೆ ಸಾಗುವಾಗ ಪರಸ್ಪರ ಕೈ ಬೀಸಿ ಹೇಳಿದ ಮಾತುಗಳು ಇಂದಿಗೂ ನಮ್ಮ ಕಿವಿಗಳಲ್ಲಿ ಮಾರ್ದನಿಸುತ್ತಿದೆ. `ನಲ್‍ತಕೀ ಫೀ ಜನ್ನತಿಲ್ ಖುಲ್ದಿ ಮಅ ಮುಹಮ್ಮದಿನ್ ವ ಅಸ್ಹಾಬಿಹೀ’ [ಮುಹಮ್ಮದ್(ಸ) ಮತ್ತು ಅವರ ಸಹಾಬಿಗಳೊಂದಿಗೆ ನಾವು ಸ್ವರ್ಗದಲ್ಲಿ ಭೇಟಿಯಾಗೋಣ].
ಓರ್ವ ಸೇನಾಧಿಕಾರಿಯು ಸಯ್ಯದ್  ಕುತುಬ್‍ರ ಬಳಿಗೆ ಬಂದನು. ಕಣ್ಣುಗಳಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಲಾಯಿತು. ಕುತ್ತಿಗೆ ಯಿಂದ ನೇಣು ಹಗ್ಗವನ್ನು ತೆಗೆಯಲಾಯಿತು. ಮೆಲ್ಲನೆ ಕುತುಬ್ ರೊಂದಿಗೆ ಹೇಳಿದನು, “ಕರುಣಾಮಯಿಯೂ ಸ್ನೇಹಮಯಿಯೂ ಆದ ಅಧ್ಯಕ್ಷರ ಒಂದು ಉಡುಗೊರೆಯೊಂದಿಗೆ ನಾನು ಬಂದಿದ್ದೇನೆ. ಒಂದೇ ಒಂದು ಮಾತು ಬರೆದು ಸಹಿ ಹಾಕಿದರೆ ಸಾಕು. ನಿಮ್ಮನ್ನು ಈಗಲೇ ಬಿಡುಗಡೆಗೊಳಿಸುವುದು. ‘ನನಗೆ ತಪ್ಪು ಸಂಭವಿ ಸಿತು. ನಾನು ಕ್ಷಮೆ ಕೋರುತ್ತೇನೆ’ ಎಂಬ ವಾಕ್ಯ ಬರೆದರೆ ಸಾಕು.” ಅಂದು ಸಯ್ಯದ್ ಕುತುಬ್ ಮುಗುಳ್ನಗೆಯೊಂದಿಗೆ ಅ ಅಧಿಕಾರಿಯ ಮುಖವನ್ನು ದಿಟ್ಟಿಸಿದ ಆ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ. ವಿಚಲಿತವಾಗದ ಕಣ್ಣುಗಳೊಂದಿಗೆ ಮಂದಸ್ಮಿತ ಮುಖಭಾವದೊಂದಿಗೆ ಸಯ್ಯದ್ ಕುತುಬ್ ಹೇಳಿದರು, “ಖಂಡಿತಾ ಸಾಧ್ಯವಿಲ್ಲ... ಒಮ್ಮೆಯೂ ಅಳಿದು ಹೋಗದ ಒಂದು ಸುಳ್ಳು ಮಾತು ಆಡಿ ನಶ್ವರವಾದ ಈ ಜೀವನವನ್ನು ಬದಲಿಯಾಗಿ ಪಡೆದುಕೊಳ್ಳಲು ನಾನು ತಯಾರಿಲ್ಲ.” ದುಃಖದ ಕಟ್ಟೆಯೊಡೆದ ಸೇನಾಧಿಕಾರಿಯು “ಸಯ್ಯದ್, ಇನ್ನು ಮರಣವಾಗಿದೆ ನಿಮ್ಮ ಮುಂದಿರುವುದು.” ಸಯ್ಯದ್  ಕುತುಬ್‍ರ ಅಚಲವಾದ ಉತ್ತರ, ಯಾ ಮರ್‍ಹಬನ್ ಬಿಲ್ ಮೌತಿ ಫೀ ಸಬೀಲಿಲ್ಲಾಹ್. (ಅಲ್ಲಾಹನ ಮಾರ್ಗದ ಮರಣಕ್ಕೆ ಸ್ವಾಗತ).
ಅಧಿಕಾರಿಯು ಅಶ್ಮಾಮಿಗೆ ಆಜ್ಞಾಪಿಸಿದನು. ಅವರು ಸಯ್ಯದ್ ಕುತುಬ್ ನಿಂತುಕೊಂಡಿದ್ದ ಕುರ್ಚಿಯನ್ನು ತಪ್ಪಿಸಿದರು. ಇಸ್ಲಾಮಿನ ಮಾರ್ಗದ ಕರ್ಮ ಯೋಧರ ಜಡ ಶರೀರವು ನೇಣುಗಂಬದಲ್ಲಿ ತೂಗಾಡಿದವು. ಆ ಪವಿತ್ರ ಆತ್ಮವು ಸೃಷ್ಟಿಕರ್ತನ ಸನ್ನಿಧಿಗೆ ಯಾತ್ರೆ ಹೊರಟಿತು.
-  ಪಿ . ಕೆ. ಜಮಾಲ್ 

ಸೋಮವಾರ, ಅಕ್ಟೋಬರ್ 29, 2012

ವಿಶ್ವಾಸಾರ್ಹರಾಗಿ, ಘಾತುಕರಾಗಬೇಡಿ


ಅಮಾನತ್ ಎಂಬುದು ನಾವು ಸಾಮಾನ್ಯವಾಗಿ ಕೇಳುವ ಪದವಾಗಿದೆ. ಈ ಪದಕ್ಕೆ ವಿಶಾಲವಾದ ಅರ್ಥಗಳಿವೆ. ವಿಶ್ವಾಸಾರ್ಹತೆ, ಸತ್ಯಸಂಧತೆ ಎಂಬುದೆಲ್ಲಾ ಅಮಾನತ್‍ನ ಭಾಷಾರ್ಥವಾಗಿದೆ. ಓರ್ವನು ಇನ್ನೋರ್ವನ ಮೇಲೆ ವಿಶ್ವಾಸವಿರಿಸಿ ಆತನಿಗೆ ವಹಿಸಿಕೊಡಲಾಗುವ ಎಲ್ಲಾ ಹೊಣೆಗಾರಿಕೆಗಳನ್ನು ಅಮಾನತ್ ಎನ್ನುತ್ತಾರೆ. ಅದು ಕರಾರನ್ನು ಈಡೇರಿಸುವುದು, ಸಾಮೂಹಿಕ ಸಂಧಾನ ಮಾಡಿಸುವುದು, ಸಮಾಜದ ರಹಸ್ಯ ಪಾಲನೆ ಮಾಡುವುದು, ವೈಯಕ್ತಿಕ ಅಥವಾ ಸಾಮೂಹಿಕ ಸೊತ್ತಿನ ಮೇಲ್ನೋಟ ವಹಿಸುವುದು, ಯಾವುದೇ ಪದವಿ ಅಥವಾ ಹುದ್ದೆಯನ್ನು ಸ್ವೀಕರಿಸುವುದು ಮುಂತಾದ ವ್ಯಕ್ತಿಯ ಮೇಲಿನ ಭರವಸೆಯೊಂದಿಗೆ ಸಮಾಜ ಅವನಿಗೆ ನೀಡುವಂತಹ ಯಾವುದೇ ಹೊಣೆಗಾರಿಕೆಯಾಗಿರಬಹುದು. ಅಲ್ಲಾಹನು ಹೇಳುತ್ತಾನೆ, “ಓ ಸತ್ಯವಿಶ್ವಾಸಿಗಳೇ, ತಿಳುವಳಿಕೆ ಇದ್ದೂ ಅಲ್ಲಾಹ್ ಮತ್ತು ರಸೂಲರೊಂದಿಗೆ ವಿಶ್ವಾಸಘಾತುಕವೆಸಗಬೇಡಿರಿ ಮತ್ತು ಅಮಾನತ್(ವಿಶ್ವಸ್ಥ ನಿಧಿ)ಗಳಲ್ಲಿ ವಿದ್ರೋಹವೆಸಗಬೇಡಿ.” (ಅಲ್ ಅನ್‍ಫಾಲ್: 27)
ಅಮಾನತ್ತನ್ನು ಕಾಪಾಡುವುದು ಪ್ರತಿಯೋರ್ವ ವಿಶ್ವಾಸಿಯ ಕರ್ತವ್ಯವಾಗಿದೆ. ಅದನ್ನು ಕಾಪಾಡಲು ಹೇಳಿದವನಿಗೆ ವಿದ್ರೋಹವೆಸಗುವುದು ಸತ್ಯವಿಶ್ವಾಸಿಗಳ ಲಕ್ಷಣವಲ್ಲ. ಅದು ಕಪಟವಿಶ್ವಾಸಿಯ ಸ್ವಭಾವವಾಗಿದೆ. ಕಪಟ ವಿಶ್ವಾಸಿಗಳ ಗುಣಗಳ ಪೈಕಿ ಅಮಾನತಿನಲ್ಲಿ ವಂಚನೆ ನಡೆಸುವುದು ಒಂದಾಗಿದೆ.
ಹುದೈಫ(ರ) ವರದಿ ಮಾಡಿದ್ದಾರೆ: ಪ್ರವಾದಿಯವರು(ಸ) ನಮ್ಮೊಂದಿಗೆ ಹೇಳಿದರು, “ವಿಶ್ವಾಸಾರ್ಹತೆ (ಅಮಾನತ್) ಮನುಷ್ಯರ ಹೃದಯಗಳ ಕೆಳಸ್ತರದಲ್ಲಿರುವುದಾಗಿದೆ.” ಬಳಿಕ ಕುರ್‍ಆನ್ ಅವತೀರ್ಣಗೊಂಡಾಗ ಜನರು ಕುರ್‍ಆನಿನಿಂದಲೂ ಹದೀಸ್‍ಗಳಿಂದಲೂ ಅದನ್ನು ಕಲಿತರು. ಮುಂದುವರಿದು ಪ್ರವಾದಿಯವರು(ಸ) ವಿಶ್ವಾಸಾರ್ಹತೆ ಇಲ್ಲವಾಗುವುದರ ಕುರಿತು ಹೇಳಿದರು. “ಓರ್ವ ವ್ಯಕ್ತಿ ನಿದ್ರಿಸುತ್ತಿರುವಾಗ ಅವನ ಹೃದಯದಿಂದ ವಿಶ್ವಾಸಾರ್ಹತೆಯನ್ನು ನೀಗಿಸಲಾಗುವುದು. ಬಳಿಕ ಅಲ್ಲಿ ಬೆಂಕಿ ತಾಗಿದಾಗ ಉಂಟಾಗುವಂತೆ ಸಣ್ಣ ಕಲೆ ಮಾತ್ರ ಅಲ್ಲಿ ಉಳಿದಿರುತ್ತದೆ. ಅವನು ಮತ್ತೆ ನಿದ್ರಿಸುವಾಗ ಉಳಿದ ಅಮಾನತ್ ಕೂಡಾ ನಷ್ಟವಾಗುವುದು. ಬಳಿಕ ಕೆಂಡ ತಾಗಿದಾಗ ಉಂಟಾಗುವ ಗುಳ್ಳೆಯಂತೆ ಒಂದು ಗುರುತು ಮಾತ್ರ ಉಳಿದಿರುತ್ತದೆ. ಅದು ತುಂಬಿರುವಂತೆ ತೋರುತ್ತದೆ. ಆದರೆ ಅದರೊಳಗೆ ಶೂನ್ಯವಾಗಿರುವುದು. ಜನರು ಪರಸ್ಪರ ಕ್ರಯ-ವಿಕ್ರಯ ನಡೆಯುತ್ತಿರುವರು. ಯಾರು ಕೂಡಾ ವಿಶ್ವಾಸಾರ್ಹತೆ ತೋರಿಸಲಿಕ್ಕಿಲ್ಲ. ಅಂತಹ ಸಂದರ್ಭದಲ್ಲಿ ಜನರು ಆಶ್ಚರ್ಯದಿಂದ ಹೇಳುವರು, “ಇಂತಿಂಥ ಕುಟುಂಬದಲ್ಲಿ ವಿಶ್ವಾಸಾರ್ಹ ವ್ಯಕ್ತಿಯೋರ್ವನಿದ್ದಾನೆ. ಆತ ಮಹಾ ಧೀರ, ವಿವೇಕಶಾಲಿ ಮತ್ತು ಬುದ್ಧಿವಂತನಾಗಿರುವನು. ಆದರೆ ಆತನ ಹೃದಯದಲ್ಲಿ ಒಂದು ಸಾಸಿವೆ ಕಾಳಿನಷ್ಟೂ ಈಮಾನ್ ಇರಲಿಕ್ಕಿಲ್ಲ.”
ಈಮಾನ್ ಮತ್ತು ಅಮಾನತ್ ಒಂದೇ ಪದದಿಂದ ಉದ್ಭವಗೊಂಡದ್ದಾಗಿವೆ. ಸತ್ಯವನ್ನು ಮನಸಾರೆ ಒಪ್ಪಿಕೊಂಡು ಅದಕ್ಕಾಗಿ ಎಲ್ಲವನ್ನೂ ಅರ್ಪಿಸಿದವನಿಗೆ ಕಪಟಿಯೂ ವಂಚಕನೂ ಆಗಲು ಎಂದೂ ಸಾಧ್ಯವಿಲ್ಲ. ಕಳ್ಳನು, ವಂಚಕನು ವಿಶ್ವಾಸಘಾತುಕನು ಮೊದಲಾದವರೆಲ್ಲರೂ ಸತ್ಯಕ್ಕೆ ವಿರುದ್ಧವಾಗಿದ್ದಾರೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಅನಸ್(ರ) ಹೇಳುತ್ತಾರೆ, “ಪ್ರವಾದಿಯವರು(ಸ) ನಮ್ಮ ಮುಂದೆ ಮಾಡುವ ಎಲ್ಲಾ ಭಾಷಣಗಳಲ್ಲೂ ಈ ರೀತಿ ನೆನಪಿಸುತ್ತಿದ್ದರು. ತಿಳಿಯಿರಿ, ವಿಶ್ವಾಸಾರ್ಹತೆ ಇಲ್ಲದವನಿಗೆ ಈಮಾನಿಲ್ಲ. ಕರಾರು ಪಾಲಿಸದವನಿಗೆ ಧರ್ಮವಿಲ್ಲ.”
ಅಮಾನತ್ ಎಂಬುದು ಮನುಷ್ಯ ಹುಟ್ಟಿನಿಂದಲೇ ಪಡೆದಿರುತ್ತಾನೆ. ಬಳಿಕ ಜನರು ಕುರ್‍ಆನಿನಿಂದಲೂ ಪ್ರವಾದಿ ವಚನಗಳಿಂದಲೂ ಅವರ ಎಲ್ಲಾ ಭಾಗಗಳನ್ನೂ ಕರಗತ ಮಾಡಿಕೊಂಡರು. ವಿಶ್ವಾಸಾರ್ಹತೆ, ಸದಾಚಾರ, ಧಾರ್ಮಿಕ ಪ್ರಜ್ಞೆಗಳೊಂದೂ ಮಾನವರಿಗೆ ಅಪರಿಚಿತವಾದ ವಿಚಾರವಲ್ಲ. ಇವೆಲ್ಲವೂ ಮನುಷ್ಯ ಎಂದು ಕರೆಸಿಕೊಳ್ಳಲಿಕ್ಕೆ ಪೂರಕವಾದ ವಿಚಾರಗಳಾಗಿವೆ. ಜನರಿಗೆ ಅಪರಿಚಿತವಾಗಿರುವ ಹೊಸ ವಿಚಾರಗಳನ್ನು ಮಾತ್ರ ಕಲಿಸಲು ಪ್ರವಾದಿಗಳು ಬಂದದ್ದಲ್ಲ. ಬದಲಾಗಿ ಅವರಲ್ಲಿ ಹುಟ್ಟಿನಿಂದಲೇ ಅಡಕವಾಗಿರುವ ಮಾನವೀಯ ಮೌಲ್ಯಗಳಿಗೆ ಪ್ರಚೋದನೆ ನೀಡಲು ಆಗಮಿಸಿದ್ದರು.
ಮೇಲೆ ತಿಳಿಸಿರುವ ಹದೀಸ್‍ನಲ್ಲಿ ವಿಶ್ವಾಸಾರ್ಹತೆ ಸಷ್ಟವಾಗುವುದರ ಕುರಿತು ತಿಳಿಸಲಾಗಿದೆ. ಒಂದು ಸ್ವಭಾವವು ಓರ್ವನಿಂದ ಒಮ್ಮೆಲೇ ನಷ್ಟ ಹೊಂದುವುದಿಲ್ಲ. ಅದು ಅವನಿಂದ ಸ್ವಲ್ಪ ಸ್ವಲ್ಪವೇ ಸರಿದು ಹೋಗುತ್ತದೆ. ನಾವು ಕ್ಷುಲ್ಲಕವೆಂದು ಭಾವಿಸುವ ತಪ್ಪುಗಳು ನಮ್ಮನ್ನು ಮಹಾಪಾಪಗಳ ವರೆಗೆ ತಲುಪಿಸುತ್ತವೆ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ನಾವು ತಪ್ಪು ಮಾಡುತ್ತೇವೆ. ಹಾಗೆ ನಿರಂತರವಾಗಿ ಮಾಡುವಾಗ ತಪ್ಪುಗಳ ಕುರಿತು ಮೊದಲಿದ್ದ ಧೋರಣೆಯು ಸಡಿಲಗೊಳ್ಳುತ್ತದೆ. ಮನಸ್ಸಿನಲ್ಲಿ ಉಂಟಾಗುತ್ತಿದ್ದ ಕಳವಳವು ಕ್ರಮೇಣ ದೂರವಾಗುತ್ತದೆ. ಹಾಗೇ ದೊಡ್ಡ ತಪ್ಪುಗಳನ್ನು ಮಾಡುವಾಗ ಯಾವುದೇ ಪಾಪ ಪ್ರಜ್ಞೆ ಇಲ್ಲದಾಗುತ್ತದೆ. ಅಮಾನತ್ತಿನ ಸ್ಥಿತಿಯೂ ಇದೇ ರೀತಿಯಾಗಿದೆ. ಅದನ್ನು ಪಾಲಿಸಲು ಅನಾಸ್ಥೆ ತೋರುವುದಾದರೆ ಮುಂದೆ ಅದು ನಮ್ಮಿಂದ ಕಳೆದುಹೋಗುತ್ತದೆ. ಅದಕ್ಕೆ ಕೇವಲ ನಿದ್ರೆಯ ಸಮಯವಷ್ಟೇ ಸಾಕು. ಅವನು ಎಚ್ಚೆತ್ತುಕೊಳ್ಳುವಾಗ ಕಪಟಿಯೂ ವಿಶ್ವಾಸಘಾತುಕನೂ ಆಗಿ ಬದಲಾಗಿರುತ್ತಾನೆ. ಇಂತಹವರು ಹೊರ ಪ್ರಪಂಚಕ್ಕೆ ಸಭ್ಯರಾಗಿ ಕಂಡರೂ ಅವರ ಹೃದಯವು ಟೊಳ್ಳಾಗಿರುತ್ತದೆ. ವಂಚನೆಯ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.
ಪ್ರವಾದಿಯವರು(ಸ) ಹೇಳಿದರು, “ನಿಮ್ಮ ಪೈಕಿ ಅತ್ಯುತ್ತಮರು ನನ್ನ ಕಾಲದವರಾಗಿದ್ದಾರೆ. ಬಳಿಕ ಅವರ ನಂತರ ಬರುವವರು. ಕೊನೆಗೆ ಒಂದು ವಿಭಾಗದ ಜನರು ಬರುವರು. ಅವರು ಸಾಕ್ಷಿ ಹೇಳುವರು. ಆದರೆ ಯಾರೂ ಅವರಲ್ಲಿ ಸಾಕ್ಷಿ ನುಡಿಯಲು ಹೇಳಲಿಕ್ಕಿಲ್ಲ. ಅವರು ವಂಚನೆ ನಡೆಸುವರು. ವಿಶ್ವಾಸಘಾತುಕರಾಗುವರು. ಅವರು ಪ್ರತಿಜ್ಞೆಗಳನ್ನು ಮಾಡುವರು. ಆದರೆ ಅವುಗಳನ್ನು ಪಾಲಿಸಲಿಕ್ಕಿಲ್ಲ. ಹೊರ ನೋಟಕ್ಕೆ ಅವರು ಸಭ್ಯರಾಗಿರುವರು.”
ಅತ್ಯಂತ ಹೆಚ್ಚು ವಿಶ್ವಾಸಾರ್ಹತೆ ತೋರಬೇಕಾಗಿರುವುದು ಜನರ ಮಧ್ಯೆ ಇರುವ ಆರ್ಥಿಕ ವ್ಯವಹಾರದಲ್ಲಾಗಿದೆ. ಹಣದ ವಿಚಾರದಲ್ಲಿ ಹೆಚ್ಚಿನ ಮಂದಿ ಎಡವಿ ಬೀಳುವ ಸಾಧ್ಯತೆ ಇದೆ. ಹಣವು ಮನುಷ್ಯನಿಗೆ ಅಲಂಕಾರ ವಸ್ತುವಾಗಿದೆ. ಅವನು ಸದಾ ಅದರ ಕಡೆಗೆ ಆಕರ್ಷಿತನಾಗಿರುತ್ತಾನೆ. ಮಾನವರ ಶರೀರದಲ್ಲಿ ರಕ್ತದಂತೆ ಚಲಿಸುವ ಶೈತಾನನು ಹಣದ ವಿಚಾರದಲ್ಲಿ ವಂಚನೆ ನಡೆಸಲು ಪ್ರೇರೇಪಿಸುತ್ತಿರುತ್ತಾನೆ. ಈ ಸಂದರ್ಭದಲ್ಲಿ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಕಡೆಗಣಿಸಿದರೆ ನಾವು ಪಾಪಿಗಳ ಸಾಲಿಗೆ ಸೇರುವುದು ನಿಶ್ಚಿತವಾಗಿದೆ. ಹಣದ ವಿಚಾರದಲ್ಲಿ ವಂಚನೆ ನಡೆಸುವುದು ಮಹಾ ಅಪರಾಧವಾಗಿದೆ. ಅಬ್ದುಲ್ಲಾ ಬಿನ್ ಮಸ್‍ಊದ್(ರ) ಹೇಳುತ್ತಾರೆ,
“ವಿಶ್ವಾಸ ವಂಚನೆ ನಡೆಸದಿದ್ದರೆ ರಕ್ತ ಸಾಕ್ಷಿಯಾದವನ ಎಲ್ಲಾ ಪಾಪಗಳು ಮನ್ನಿಸಲ್ಪಡುತ್ತವೆ. ಅಂತ್ಯ ದಿನದಲ್ಲಿ ಅಂತಹ ವ್ಯಕ್ತಿಯನ್ನು ಕರೆತರಲಾಗುವುದು. ಅವನು ಅಲ್ಲಾಹನ ಮಾರ್ಗದಲ್ಲಿ ತನ್ನ ಪ್ರಾಣವನ್ನು ಅರ್ಪಿಸಿರುವವನಾಗಿರುವನು. ಆತನಲ್ಲಿ ಅಲ್ಲಾಹನು ಅಮಾನತ್ತುಗಳನ್ನು ಪೂರ್ತೀಕರಿಸಲು ಹೇಳುವನು. ಆಗ ಅವನು ಹೇಳುವನು, ‘ಪ್ರಭೂ, ಐಹಿಕ ಜೀವನವು ಕೊನೆಗೊಂಡಿತಲ್ಲವೇ. ಇನ್ನು ನಾನು ಅದನ್ನು ಪೂರ್ತಿಗೊಳಿಸುವುದು ಹೇಗೆ?’ ಆಗ ಆತನನ್ನು ನರಕಕ್ಕೆ ಎಳೆದೊಯ್ಯಲು ಆಜ್ಞೆ ಬರುತ್ತದೆ. ಭೂಮಿಯಲ್ಲಿ ಆತನ ಮೇಲೆ ವಿಶ್ವಾಸವಿರಿಸಿ ಜನರು ನೀಡಿರುವ ಸೊತ್ತುಗಳೆಲ್ಲವೂ ಯಥಾs ಪ್ರಕಾರ ನರಕದಲ್ಲಿ ಆತ ಕಾಣುವನು. 'ಬಚಾವಾದೆ' ಎಂಬ ಭಾವನೆಯಿಂದ ಅವೆಲ್ಲವನ್ನೂ ಬಾಚಿ ನರಕದಿಂದ ಹೊರಬರಲು ಪ್ರಯತ್ನಿಸುವನು. ಆದರೆ ಅವೆಲ್ಲವೂ ಅವನ ಬಾಹು ಬಂಧನದಿಂದ ಜಾರಿ ಬೀಳುವುದು. ಆತ ಮತ್ತೆ ಅದನ್ನು ಹೊತ್ತುಕೊಳ್ಳಲು ಪ್ರಯತ್ನಿಸುವನು. ಆಗಲೂ ಅವು ಕೆಳಗೆ ಬೀಳುತ್ತಿರುವುವು. ಇದೇ ಪ್ರಕಾರ ಆತ ನರಕದಲ್ಲಿ ಕಳೆಯುವನು.” ಇಬ್ನು ಮಸ್‍ಊದ್(ರ) ಮುಂದುವರಿಸುತ್ತಾ ಹೇಳುತ್ತಾರೆ, "ತಿಳಿಯಿರಿ, ಎಲ್ಲವೂ ಅಮಾನತ್ತಾಗಿದೆ. ನಮಾಝ್, ವುಝೂ, ಅಳತೆ, ತೂಕ ಮೊದಲಾದವುಗಳೆಲ್ಲವೂ ಅಮಾನತ್ತಾಗಿದೆ. ಅತ್ಯಂತ ದೊಡ್ಡ ಅಮಾನತ್ ವಿಶ್ವಾಸವಿರಿಸಿ ನೀಡಿರುವ ಸಂಪತ್ತಾಗಿದೆ. ಅಮಾನತ್ತಿನಲ್ಲಿ ವಂಚನೆ ನಡೆಸಿರುವ ರಕ್ತಸಾಕ್ಷಿಗಳ ದುಃಸ್ಥಿತಿಯು ಈ ರೀತಿಯಾದರೆ ನಮ್ಮ ಗತಿ ಏನಾಗಿರಬಹುದು!"
ಪ್ರವಾದಿ(ಸ) ಈ ಕುರಿತು ಎಚ್ಚರಿಕೆ ನೀಡಿರುವರು, "ಎಲ್ಲ ವಂಚಕರಿಗೂ ಅಂತ್ಯ ದಿನದಲ್ಲಿ ಒಂದು ಪತಾಕೆ ನೀಡಲಾಗುವುದು. ವಂಚನೆಯ ಪ್ರಮಾಣಕ್ಕನುಸಾರವಾಗಿ ಅದು ಎತ್ತರಕ್ಕೇರುತ್ತದೆ. ತಿಳಿಯಿರಿ, ನಾಯಕ ನಡೆಸುವ ವಿಶ್ವಾಸ ವಂಚನೆಗಿಂತ ದೊಡ್ಡ ವಿಶ್ವಾಸ ವಂಚನೆ ಬೇರೊಂದಿಲ್ಲ."
ನಾವು ಹಲವು ವೇಳೆ ಅಮಾನತ್ತಿನ ವಿಚಾರದಲ್ಲಿ ಅಸಡ್ಡೆ ತೋರುತ್ತೇವೆ. ಇದರಿಂದ ಮಹಿಳೆಯರೂ ಹೊರತಾಗಿಲ್ಲ. ಯಾರಾದರೂ ಏನಾದರೂ ವಿಚಾರವೊಂದನ್ನು ನಮಗೆ ತಿಳಿಸಿ ಯಾರಿಗೂ ಹೇಳಬಾರದೆಂದು ಹೇಳಿರುತ್ತಾರೆ. ಆದರೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಅವರು ಹೇಳಿದ ವಿಚಾರವು ಒಂದು ಅಮಾನತ್ತಾಗಿರುತ್ತದೆ. ಅವರು ನಮ್ಮ ಮೇಲೆ ವಿಶ್ವಾಸವಿರಿಸಿ ಹೇಳಿರುತ್ತಾರೆ. ಆದರೆ ನಾವು ಮಾಡುವ ಕೆಲಸವೇ ಬೇರೆ. ನಾವು ಅದನ್ನು ಇತರರಲ್ಲಿ ತಿಳಿಸುತ್ತೇವೆ. ಅದರೊಂದಿಗೆ "ಇದು ನಿನ್ನಲ್ಲಿ ಮಾತ್ರ ಹೇಳುವುದು, ಯಾರಲ್ಲೂ ಹೇಳಬಾರದೆಂದು ಆತ ತಿಳಿಸಿದ್ದಾನೆ" ಎಂಬ ಔದಾರ್ಯದ ಮಾತನ್ನಾಡಲು ಮರೆಯುವುದಿಲ್ಲ. ಅದು ಹಾಗೇ ಬಾಯಿಯಿಂದ ಬಾಯಿಗೆ ಹರಡಿ ರಹಸ್ಯವಿದ್ದದ್ದು ಬಹಿರಂಗವಾಗುತ್ತದೆ. ಇದು ನಮ್ಮ ನಿತ್ಯ ಜೀವನದಲ್ಲಿ ನಡೆಯುವ, ನಾವು ಕ್ಷುಲ್ಲಕವೆಂದು ಭಾವಿಸುವ ದೊಡ್ಡ ವಿಚಾರವಾಗಿದೆ.
ವಿಶ್ವಾಸಿಯಾದವನು ವಿಶ್ವಾಸದ್ರೋಹವೆಸಗುವುದು ಧರ್ಮವನ್ನೇ ಅವಹೇಳನ ಮಾಡಿದಂತೆ. ಅಂತಹವರು ಇಹಲೋಕದಲ್ಲೂ ಪರಲೋಕದಲ್ಲೂ ಮೌಲ್ಯಹೀನರಾಗುವರು. ಜನರ ಮಧ್ಯೆ ವಿಶ್ವಾಸ ಗಳಿಸಲು ವರ್ಷಗಳ ಸಭ್ಯ ವರ್ತನೆ ಬೇಕಾಗಬಹುದು. ಆದರೆ ಅದನ್ನು ಕಳೆದುಕೊಳ್ಳಲು ಒಂದು ಕ್ಷಣದ ವಂಚನೆ, ಕಪಟತನದ ವರ್ತನೆ ಧಾರಾಳ ಸಾಕು. ವಿಶ್ವಾಸ ದ್ರೋಹವು ಕಪಟ ವಿಶ್ವಾಸಿಗಳ ಸ್ವಭಾವವಾದುದರಿಂದ ನಾವು ಅವರ ಸಾಲಿಗೆ ಸೇರದಂತಾಗಲು ಗರಿಷ್ಠ ಪ್ರಯತ್ನ ನಡೆಸಬೇಕಾಗಿದೆ. ಅದಕ್ಕೆ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಧಾರೆಯೆರೆಯುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಕರ್ಮಗಳ ಬಗ್ಗೆ ಜಾಗೃತರಾಗಬೇಕು. ಸರ್ವಶಕ್ತನಾದ ಅಲ್ಲಾಹನು ಅದಕ್ಕಾಗಿ ನಮ್ಮೆಲ್ಲರನ್ನೂ ಅನುಗ್ರಹಿಸಲಿ.


ಸೋಮವಾರ, ಅಕ್ಟೋಬರ್ 15, 2012

ನಿಮ್ಮ ಸಂಪತ್ತು ಪಿಶಾಚಿಯ ಹಿಡಿತದಲ್ಲಿರಬಹುದೇ?


ದಾನ ಧರ್ಮವು ಶ್ರೇಷ್ಠ ಕರ್ಮಗಳ ಪೈಕಿ ಒಂದಾಗಿದೆ. ಇದು ಧನಿಕರ ಮೇಲಿನ ಹೊಣೆಗಾರಿಕೆಯಾಗಿದೆ. ಸಮಾಜದಲ್ಲಿನ ಬಡತನವನ್ನು ಹೋಗಲಾಡಿಸಲು ದಾನ ಮಾಡುವುದು ಅನಿವಾರ್ಯವಾಗಿದೆ. ಪ್ರವಾದಿಯವರು(ಸ) ಮತ್ತು ಅವರ ಅನುಯಾಯಿಗಳ ಜೀವನದ ಕಡೆಗೊಮ್ಮೆ ಕಣ್ಣೋಡಿಸುವುದಾದರೆ ದಾನ ಧರ್ಮದ ಉಜ್ವಲ ಉದಾಹರಣೆಯನ್ನು ದರ್ಶಿಸಲು ಸಾಧ್ಯವಿದೆ. ಅವರು ಎಲ್ಲವನ್ನೂ ಅಲ್ಲಾಹನ ಮಾರ್ಗದಲ್ಲಿ ದಾನ ಮಾಡುತ್ತಿದ್ದರು. ಮಾತ್ರವಲ್ಲ, ಈ ವಿಷಯದಲ್ಲಿ ಪರಸ್ಪರ ಪೈಪೋಟಿ  ನಡೆಸುತ್ತಿದ್ದರು. ಸಂಪತ್ತನ್ನು ದಾನ ಮಾಡಿದರೆ ಅಲ್ಲಾಹನು ಹೆಚ್ಚು ಹೆಚ್ಚು ನೀಡುತ್ತಾನೆ ಎಂಬ ಅಚಲ ನಂಬಿಕೆ ಅವರಲ್ಲಿತ್ತು. ದಾನ ಮಾಡಿದ್ದರಿಂದ ಯಾರು ಕೂಡಾ ದಿವಾಳಿಯಾಗಿಲ್ಲ. ದಿವಾಳಿಯಾಗುವುದೂ ಇಲ್ಲ.
ಸಂಪತ್ತೆಲ್ಲ ಒಂದು ಕಡೆಯೇ ವ್ಯಕ್ತಿಗತವಾಗಿ ಶೇಖರಣೆಯಾಗುವಾಗ ಬಡತನ, ದಾರಿದ್ರ್ಯ ಹೆಚ್ಚಾಗುತ್ತಲೇ ಹೋಗುತ್ತದೆ. ಈ ಸಂಪತ್ತು ಜನರ ಮಧ್ಯೆ ಹರಿದಾಡುವಾಗ ಬಡತನದ ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ. ಅದಕ್ಕಾಗಿಯೇ ಅಲ್ಲಾಹನು ಝಕಾತ್, ದಾನ ಧರ್ಮಗಳನ್ನು ಪುಣ್ಯ ಕಾರ್ಯಗಳ ಸಾಲಿಗೆ ಸೇರಿಸಿದ್ದಾನೆ. ಮರಣದ ಬಳಿಕವೂ ಪ್ರತಿಫಲ ಲಭಿಸುವ ಕರ್ಮಗಳ ಪೈಕಿ ಒಂದು ಕರ್ಮವನ್ನಾಗಿ ಮಾಡಿದ್ದಾನೆ.
ಸಂಪತ್ತನ್ನು ದಾನ ಮಾಡುವ ವಿಚಾರದಲ್ಲಿ ಜನರು ಹಿಂದೆ ಸರಿಯುವುದನ್ನು ನಾವು ಕಾಣುತ್ತೇವೆ. ಕಾರಣ ಸಂಪತ್ತು ಮನುಷ್ಯರನ್ನು ಆಕರ್ಷಣೆಗೆ ಒಳಪಡಿಸುವ ಒಂದು ಸಾಧನವಾಗಿದೆ. ಗಳಿಸಿದಷ್ಟೂ ಬೇಕೆನಿಸುವ ಒಂದು ಅನುಗ್ರಹವಾಗಿದೆ ಸಂಪತ್ತು. ಸುಖ ಸೌಲಭ್ಯಗಳೆಲ್ಲ ಇದ್ದೂ ಅದನ್ನು ದೇವಮಾರ್ಗದಲ್ಲಿ ವ್ಯಯಿಸದೆ ಆಡಂಬರದ ಪ್ರದರ್ಶನಕ್ಕೆ ವ್ಯಯಿಸಿ ಕೊನೆಗೆ ಮರಣ ಸನ್ನಿಹಿತವಾಗುವಾಗ “ನಾನು ನನ್ನ ಸಂಪತ್ತೆಲ್ಲವನ್ನು ದಾನ ಮಾಡುತ್ತೇನೆ” ಎಂದು ಉಯಿಲು ಬರೆದಿಡುವ ಕೆಲವರಿದ್ದಾರೆ. ಇವರು ತಮ್ಮ ಜೀವಿತಾವಧಿಯಲ್ಲಿ ಬಡವರ್ಗವನ್ನು ಕಂಡೂ ಕಾಣದಂತೆ ನಟಿಸುತ್ತಿದ್ದವರಾಗಿರುತ್ತಾರೆ. ಸ್ವಂತ ಸುಖಾಡಂಬರಗಳಿಗೆ ಮಹತ್ವ ನೀಡಿದವರು. ಕೊನೆಗೆ ಜೀವನವು ಕೊನೆಗೊಂಡಿತೆಂದು ಅರಿವಾಗುವಾಗ ಎಲ್ಲವನ್ನೂ ದೇವನ ಮಾರ್ಗದಲ್ಲಿ ವ್ಯಯಿಸುವ ತೀರ್ಮಾನ ಕೈಗೊಂಡು ದೇವನನ್ನು ಮರುಳು ಮಾಡುವ ವ್ಯರ್ಥ ಪ್ರಯತ್ನಕ್ಕೆ ಮುಂದಾಗುತ್ತಾರೆ. ಅಲ್ಲಾಹನ ಪ್ರೀತಿ ಗಳಿಸಲಿಕ್ಕೆ ಮರಣಾಸನ್ನ ಸಮಯದಲ್ಲಿ ನಡೆಸುವ ಇಂತಹ ನಟನೆಗಳು ಸಾಕೆಂದು ಅವರು ಭಾವಿಸುತ್ತಾರೆ.
ದಾನವು ಅತ್ಯಂತ ಪ್ರತಿಫಲಾರ್ಹವಾಗುವುದು ವ್ಯಕ್ತಿಯ ಆರೋಗ್ಯ ಸಮಯದಲ್ಲಿ ವ್ಯಯಿಸುವ ಮೂಲಕವಾಗಿದೆ. ಅಬೂ ಹುರೈರಾ(ರ) ವರದಿ ಮಾಡುತ್ತಾರೆ: ಓರ್ವರು ಪ್ರವಾದಿಯವರ(ಸ) ಬಳಿ ಬಂದು ಕೇಳಿದರು, “ಅಲ್ಲಾಹನ ಸಂದೇಶವಾಹಕರೇ! ಅತ್ಯಂತ ಪ್ರತಿಫಲಾರ್ಹವಾದ ದಾನ ಯಾವುದು?” ಆಗ ಪ್ರವಾದಿಯವರು(ಸ) ಹೇಳಿದರು, “ನಾನು ಹೇಳಿಕೊಡುತ್ತೇನೆ. ನೀನು ಆರೋಗ್ಯವಂತನೂ ಜಿಪುಣನೂ ಆಗಿರಬೇಕು. ಅದೇ ವೇಳೆ ಬಡತನವನ್ನು ಹೆದರುತ್ತಿ ಮತ್ತು ಐಶ್ವರ್ಯವನ್ನು ಬಯಸುತ್ತಿ. ಈ ಸಂದರ್ಭದಲ್ಲಿ ನೀನು ಮಾಡುವ ದಾನವು ಶ್ರೇಷ್ಠ ದಾನವಾಗಿದೆ. ದಾನ ಮಾಡಲು ನೀನು ಆತ್ಮವು ಗಂಟಲಿಗೆ ತಲುಪುವವರೆಗೆ ಕಾಯಬಾರದು. ಇಂತಿಂಥವನಿಗೆ ಇಂತಿಷ್ಟು ಕೊಡಬೇಕು ಇಂತಿಂಥವನಿಗೆ ಅಷ್ಟು ಕೊಡಬೇಕು ಎಂದೆಲ್ಲಾ ಆಗ ನೀನು ಹೇಳುತ್ತಿರುವೆ. ಆದರೆ ವಾಸ್ತವದಲ್ಲಿ ಆ ಸಂದರ್ಭ ಬಂದೊದಗಿದಾಗಲೇ ಸೊತ್ತೆಲ್ಲವೂ ಇತರರದ್ದಾಗಿರುತ್ತದೆ.”
ತನ್ನ ಅವಶ್ಯಕತೆಗಳನ್ನು ಪೂರೈಸುವುದರೊಂದಿಗೆ ಇತರರ ಅಗತ್ಯತೆಗಳಿಗೂ ಸ್ಪಂಧಿಸುವ ಉನ್ನತ ಗುಣವನ್ನು ಓರ್ವ ವಿಶ್ವಾಸಿ ಹೊಂದಿರುತ್ತಾನೆ. ತನ್ನ ಎಲ್ಲಾ ಬೇಡಿಕೆಗಳನ್ನು ಬದಿಗಿಟ್ಟು ಇತರರ ಕರೆಗೆ ಆತನು ಓಗೊಡುತ್ತಾನೆ. ತನ್ನ ಹಸಿವೆಯನ್ನು ಕಡೆಗಣಿಸಿ ಇತರರ ಹಸಿವಿನ ಶಮನಕ್ಕೆ ಪ್ರಯತ್ನಿಸುತ್ತಾನೆ. ಪವಿತ್ರ ಕುರ್‍ಆನ್ ಸತ್ಯವಿಶ್ವಾಸಿಗಳನ್ನು ಈ ರೀತಿ ಪರಿಚಯಿಸುತ್ತದೆ. “ಅಲ್ಲಾಹನ ಮೇಲಿನ ಪ್ರೇಮದಿಂದ ದರಿದ್ರರಿಗೂ ಅನಾಥರಿಗೂ ಸೆರೆಯಾಳುಗಳಿಗೂ ಊಟ ಕೊಡುತ್ತಾರೆ. (ಮತ್ತು ಅವರೊಡನೆ ಹೇಳುತ್ತಾರೆ) ನಾವು ನಿಮಗೆ ಕೇವಲ ಅಲ್ಲಾಹನಿಗಾಗಿ ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಲಿ, ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ. ನಮಗಂತು ನಮ್ಮ ಪ್ರಭುವಿನಿಂದ ಆ ತೀವ್ರ ಕಾಠಿಣ್ಯದ ಅತ್ಯಂತ ಸುದೀರ್ಘ ದಿನದ ಭಯವಿದೆ.” (ಅದ್ದಹ್ರ್: 8-10) ಅದೇ ರೀತಿ ಸೂರಃ ಅಲ್‍ಹಶ್ರ್‍ನ 9ನೇ ಸೂಕ್ತದಲ್ಲಿ ಅಲ್ಲಾಹನು ಈ ರೀತಿ ಹೇಳುತ್ತಾನೆ, “ಸ್ವತಃ ತಮಗೆ ಅಗತ್ಯವಿದ್ದರೂ ಇತರರಿಗೆ ತಮ್ಮ ಮೇಲಿನದಕ್ಕಿಂತ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ವಾಸ್ತವದಲ್ಲಿ ಯಾರು ತಮ್ಮ ಮನಸ್ಸಿನ ಸಂಕುಚಿತತೆಯಿಂದ ರಕ್ಷಿಸಲ್ಪಟ್ಟರೋ ಅವರೇ ವಿಜಯಿಗಳು.”
“ನಮ್ಮ ಅವಶ್ಯಕತೆಗಳೆಲ್ಲಾ ಮುಗಿದ ಬಳಿಕ ಇತರರಿಗೆ ನೆರವಾಗುವ” ಎಂದು ತೀರ್ಮಾನಿಸುವ ಹಲವರಿದ್ದಾರೆ. ಇಂತಹ ಮನೋಭಾವವು ಒಂದು ಮೌಢ್ಯವಾಗಿದೆ. ಮನುಷ್ಯನ ಅವಶ್ಯಕತೆಗಳಿಗೆ ಕೊನೆಯೆಂಬುದಿಲ್ಲ. ಅದು ನಿರಂತರ ಮುಂದುವರಿಯುತ್ತದೆ. ಒಂದು ಸಿಕ್ಕಿದರೆ ಮತ್ತೊಂದನ್ನು ಗಳಿಸಬೇಕು ಎಂಬ ಹಂಬಲ ಅವನಲ್ಲಿರುತ್ತದೆ. ಮನಸ್ಸಿನಲ್ಲಿ ಸಂತೃಪ್ತಿ ಎಂಬ ಅಂಶವಿಲ್ಲದ ವ್ಯಕ್ತಿಗೆ ಎಷ್ಟೇ ಲಭಿಸಿದರೂ ಅದು ಸಾಕಾಗಲಿಕ್ಕಿಲ್ಲ. “ಮಣ್ಣಲ್ಲದೆ ಮನುಷ್ಯನ ಬಾಯಿಯನ್ನು ತುಂಬಲಿಕ್ಕಿಲ್ಲ” ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಆದ್ದರಿಂದ ವಿಶ್ವಾಸಿಗಳು ದಾನ ಧರ್ಮದ ವಿಚಾರದಲ್ಲಿ ಎಂದೂ ಮುಂದಿರುತ್ತಾರೆ. ಅಲ್ಪವನ್ನು ತಮಗಿಟ್ಟು ಮಿಕ್ಕಿದ್ದನ್ನು ಇತರರಿಗೆ ನೀಡುತ್ತಾರೆ. ಕುರ್‍ಆನಿನಲ್ಲಿ ವಿಶ್ವಾಸಿಗಳ ಸ್ವಭಾವದ ಕುರಿತು ಹೀಗೆ ಹೇಳಲಾಗಿದೆ. “ಅವರು ಸ್ಥಿತಿವಂತರಾಗಿರುವಾಗಲೂ ದುಃಸ್ಥಿತಿಯಲ್ಲಿರುವಾಗಲೂ ತಮ್ಮ ಸಂಪತ್ತನ್ನು ದಾನ ಮಾಡುತ್ತಾರೆ, ಕೋಪವನ್ನು ನುಂಗಿಕೊಳ್ಳುತ್ತಾರೆ ಮತ್ತು ಇತರರ ಅಪರಾಧಗಳನ್ನು ಕ್ಷಮಿಸುತ್ತಾರೆ. ಇಂತಹ ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು.” (ಆಲಿಇಮ್ರಾನ್: 134)
ದಾನಧರ್ಮದಿಂದ ಬಡತನ ಬರುತ್ತದೆ. ಎಂಬ ಅಂಜಿಕೆಯು ವಿಶ್ವಾಸಿಗೆ ತರವಲ್ಲ. ಅಲ್ಲಾಹನು ಸಂಪತ್ತನ್ನು ವ್ಯಯಿಸುವುದು ಅಲ್ಲಾಹನ ಬೇಡಿಕೆಯಾಗಿದೆ. ಹಾಗೆ ವ್ಯಯಿಸಿದರೆ ಅಲ್ಲಾಹನು ಹೆಚ್ಚು ಹೆಚ್ಚು ನೀಡುತ್ತಾನೆಯೇ ಹೊರತು ಕಡಿತಗೊಳಿಸುವುದಿಲ್ಲ. ದಾನ ಮಾಡಿ ಬೀದಿ ಪಾಲಾದವರಿಲ್ಲ. ಬಡತನಕ್ಕೆ ಹೆದರಿ ದಾನ ಧರ್ಮಗಳಿಂದ ಹಿಂದೆ ಸರಿಯುವವರನ್ನು ಅಲ್ಲಾಹನು ವಿಮರ್ಶಿಸಿದ್ದಾನೆ. “ಶೈತಾನನು ನಿಮ್ಮನ್ನು ದಾರಿದ್ರ್ಯದಿಂದ ಭಯಭೀತಗೊಳಿಸುತ್ತಾನೆ ಮತ್ತು ಅಶ್ಲೀಲ ಕಾರ್ಯಗಳನ್ನೆಸಗುವ ಪ್ರಚೋದನೆಯನ್ನೀಯುತ್ತಾನೆ. ಆದರೆ, ಅಲ್ಲಾಹನು ನಿಮಗೆ ತನ್ನ ಕ್ಷಮೆ ಹಾಗೂ ಅನುಗ್ರಹದ ವಚನವನ್ನೀಯುತ್ತಾನೆ. ಅಲ್ಲಾಹನು ಮಹಾ ವಿಶಾಲನೂ ಸರ್ವಜ್ಞನೂ ಆಗಿರುತ್ತಾನೆ.”
ಪ್ರವಾದಿಯವರು(ಸ) ಹೇಳಿದರು, “ದಾನ ಮಾಡುವುದನ್ನು ತಡೆಯುತ್ತಾ ತನ್ನ ಸಂಪತ್ತಿನಲ್ಲಿ ಕಚ್ಚಿ ಹಿಡಿದಿರುವ ಎಪ್ಪತ್ತು ಪಿಶಾಚಿಗಳ ದವಡೆಗಳನ್ನು ಅದರಿಂದ ಬೇರ್ಪಡಿಸದೆ ಯಾರಿಗೂ ಏನನ್ನೂ ದಾನ ಮಾಡಲು ಸಾಧ್ಯವಿಲ್ಲ.” ದಾನ ಮಾಡಲು ಒಪ್ಪದ ಮನಸ್ಥಿತಿಯನ್ನು ಈ ಪ್ರವಾದಿ ವಚನವು ಬೆಟ್ಟು ಮಾಡುತ್ತದೆ. ಸಂಪತ್ತನ್ನು ದಾನ ಮಾಡುವ ವಿಚಾರದಲ್ಲಿ ಹಿಂದೇಟು ಹಾಕುವರ ಸಂಪತ್ತನ್ನು ಶೈತಾನನು ಹಿಡಿದಿಟ್ಟುಕೊಂಡಿರುತ್ತಾನೆ ಎಂಬುದು ಮೇಲಿನ ಪ್ರವಾದಿ ವಚನದ ಸಾರವಾಗಿದೆ. ಇದು ಶೈತಾನನಿಗೆ ತಲೆಬಾಗಿದಂತೆ. ಹಾಗೆ ಮಾಡುವುದು ವಿಶ್ವಾಸಿಯ ಮಟ್ಟಿಗೆ ಭೂಷಣವಲ್ಲ.
ಎಲ್ಲ ಕರ್ಮಗಳಿಗೂ ಸಂಕಲ್ಪ ಶುದ್ಧಿ ಇರಬೇಕು. ದಾನ ಧರ್ಮದ ವಿಚಾರದಲ್ಲೂ ಇದು ಬಹಳ ಮುಖ್ಯವಾಗಿದೆ. ತಮ್ಮ ಸಂಪತ್ತನ್ನು ಯಥೇಚ್ಛವಾಗಿ ದಾನ ಮಾಡಿ ಅದರ ಹಿಂದೆ ‘ತಾನು ಕೊಡುಗೈ ದಾನಿ’ ಎಂದು ಜನರಿಂದ ಕರೆಸಿಕೊಳ್ಳಬೇಕೆಂಬ ಉದ್ದೇಶವಿದ್ದರೆ, ಆ ದಾನವು ವ್ಯರ್ಥ ಎಂಬುದರಲ್ಲಿ ಎರಡು ಮಾತಿಲ್ಲ. ದಾನ ಮಾಡಬೇಕಾದುದು ಅಲ್ಲಾಹನ ಸಂತೃಪ್ತಿಯನ್ನು ಬಯಸಿಯೇ ಹೊರತು ಅದನ್ನು ಪಡೆಯುವವನ ಸಂತೃಪ್ತಿಗಾಗಿ ಅಲ್ಲ. ಅಂತಹ ದಾನದಿಂದ ಅವನಿಗೆ ಈ ಭೂಮಿಯಲ್ಲಿ ಗೌರವಾದರಗಳು ಲಭಿಸಬಹುದು. ಆದರೆ ಪರಲೋಕದಲ್ಲಿ ಯಾವುದೇ ಬೆಲೆ ಇರಲಿಕ್ಕಿಲ್ಲ. ಅದ್ದರಿಂದ ನಾವು ನಮ್ಮ ದಾನಧರ್ಮಗಳ ಹಿಂದೆ ತೋರಿಕೆಯ ಭಾವವು ಬರದಂತೆ ಎಚ್ಚರ ವಹಿಸಬೇಕು. ತೋರಿಕೆಗಾಗಿ ಮಾಡುವ ಕರ್ಮಗಳು ಅತ್ಯಂತ ಸಣ್ಣ ಶಿರ್ಕಾಗಿದೆ ಎಂದು ಪ್ರವಾದಿಯವರು(ಸ) ಕಲಿಸಿದ್ದಾರೆ. ಆದ್ದರಿಂದ ದಾನ ಮಾಡಿ ಶಿಕ್ಷೆಗೆ ಗುರಿಯಾಗುವ ದು:ಸ್ಥಿತಿಯಿಂದ ಪಾರಾಗಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಮಂಗಳವಾರ, ಅಕ್ಟೋಬರ್ 09, 2012

ಇಸ್ಲಾಂ ಶಾಂತಿಯ ಧರ್ಮವಾಗಿದೆ . ಅದು ಯಾರನ್ನೂ ......

ಇಸ್ಲಾಂ ಶಾಂತಿಯ ಧರ್ಮವಾಗಿದೆ . ಅದು ಯಾರನ್ನೂ ಕೊಲ್ಲಲು ಹೇಳಿಲ್ಲ . ಆದರೂ ಎಲ್ಲರೂ ಇಸ್ಲಾಮನ್ನು  ದೂರುತ್ತಾರೆ ... ಯಾಕೆ ?  ಇತರರ ಮಾತು ಕೇಳಿ ನೀವು ಮೂರ್ಕರಾಗಬೇಡಿ . ಇಸ್ಲಾಮಿನ ಕುರಿತು ಕಲಿಯಿರಿ . ಇಸ್ಲಾಂ ಧರ್ಮವು  ರಹಸ್ಯವಲ್ಲ . ಅದು ತೆರೆದ ಪುಸ್ತಕವಾಗಿದೆ . ಯಾರಿಗೂ ಅದರ ಬಗ್ಗೆ ಅಧ್ಯಯನ ನಡೆಸಬಹುದು .. ಇನ್ನೇಕೆ ತಡ .. ಕೂಡಲೇ ತಯಾರಾಗಿ . 

ಮಂಗಳವಾರ, ಸೆಪ್ಟೆಂಬರ್ 25, 2012

ಜಾಗ್ರತೆ, ನಿಮ್ಮ ಶತ್ರು ನಿಮ್ಮಲ್ಲೇ ಇದ್ದಾರೆ!

ಸಂಪತ್ತು ಮತ್ತು ಸಂತಾನಗಳು ಅಲ್ಲಾಹನು ನೀಡಿರುವ ದೊಡ್ಡ ಅನುಗ್ರಹಗಳಾಗಿವೆ. ಮಾನವರು ಈ ವಸ್ತುಗಳನ್ನು ಸದಾ ಆಶ್ರಯಿಸಿರುತ್ತಾರೆ. ಸಂಪತ್ತು ಮತ್ತು ಸಂತಾನಗಳ ಗಳಿಕೆಗಾಗಿ ಕಷ್ಟ ಸಾಧ್ಯವಾದ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅವುಗಳನ್ನು ಪಡೆಯುಲು ಹಾತೊರೆಯದವರಿದ್ದಾರೆಯೇ? ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅವುಗಳನ್ನು ಬಯಸುತ್ತಾರೆ. ಮಾನವನ ಐಹಿಕ ಜೀವನವನ್ನೂ ಪರಲೋಕ ಜೀವನವನ್ನೂ ಯಶಸ್ವಿ ಗೊಳಿಸುವ ಶಕ್ತಿ ಈ ಎರಡೂ ಅನುಗ್ರಹಗಳಿಗಿವೆ. ಐಹಿಕ ಜೀವನಕ್ಕೆ ಸಂಬಂಧಿಸಿದಂತೆ ಇವುಗಳು ಕೇವಲ ಅಲಂಕಾರಗಳಾಗಿವೆ. ಅಲ್ಲಾಹನು ಹೇಳುತ್ತಾನೆ, “ಜನರಿಗೆ ಇಂದ್ರಿಯಾಸಕ್ತಿಗಳಾದ-ಸ್ತ್ರೀಯರು, ಮಕ್ಕಳು, ಚಿನ್ನ-ಬೆಳ್ಳಿಗಳ ರಾಶಿ, ಆಯ್ದ ಕುದುರೆಗಳು ಜಾನುವಾರುಗಳು ಮತ್ತು ಕೃಷಿ ಭೂಮಿ-ಇವುಗಳನ್ನು ಅತ್ಯಾಕರ್ಷಕವಾಗಿ ಮಾಡಲಾಗಿದೆ. ಆದರೆ, ಇವೆಲ್ಲ ಇಹಲೋಕದ ಕೆಲವೇ ದಿನಗಳ ಜೀವನ ಸಾಧನಗಳು. ಯಥಾರ್ಥದಲ್ಲಿ ಅತ್ಯುತ್ತಮ ವಾಸ ಸ್ಥಳವಂತು ಅಲ್ಲಾಹನ ಬಳಿಯಲ್ಲಿದೆ.” (ಆಲಿ ಇಮ್ರಾನ್: 14)
ಇನ್ನೊಂದೆಡೆ ಹೀಗೆ ಹೇಳಲಾಗಿದೆ. “ಈ ಸೊತ್ತು ಮತ್ತು ಸಂತತಿಗಳು ಕೇವಲ ಲೌಕಿಕ ಜೀವನದ (ನಿಮ್ಮ ಪ್ರಭುವಿನ ಬಳಿ) ಕ್ಷಣಿಕ ಸೊಬಗು ಮಾತ್ರ. ವಾಸ್ತವದಲ್ಲಿ, ಉಳಿಯುವ ಪುಣ್ಯ ಕಾರ್ಯಗಳೇ ಪರಿಣಾಮದ ದೃಷ್ಟಿಯಿಂದ ಶ್ರೇಷ್ಠವಾಗಿರುತ್ತವೆ. ಅವುಗಳ ಮೇಲೆಯೇ ಉತ್ತಮ ನಿರೀಕ್ಷೆಗಳನ್ನಿರಿಸಿಕೊಳ್ಳಬಹುದು.” (ಅಹ್‍ಕಾಫ್: 46)
ಸಂಪತ್ತು ಮತ್ತು ಸಂತಾನಗಳನ್ನು ಈ ಲೋಕದಲ್ಲಿ ನಮಗೆ ಆಕರ್ಷಣೀಯ  ವಸ್ತುಗಳನ್ನಾಗಿ ಮಾಡಲಾಗಿದೆ. ಅವುಗಳಿಗೆ ಮಾರು ಹೋಗುವುದು ಮಾನವನ ದೌರ್ಬಲ್ಯಗಳಲ್ಲಿ ಸೇರಿದೆ. ಮನುಷ್ಯನ ಪರಲೋಕ ವಿಜಯವು ಇವುಗಳ ನಿರ್ವಹಣೆಯ ಮೇಲೆ ಅವಲಂಬಿತವಾಗಿದೆ. ನಾವು ಬಹಳ ಪ್ರೀತಿಯಿಂದ ನೋಡಿಕೊಳ್ಳುವ ಈ ವಸ್ತುಗಳು ಕೊನೆಗೊಂದು ದಿನ ನಮ್ಮ ಶತ್ರುಗಳಾಗುತ್ತವೆ. ಇಬ್ನುಮಾಲಿಕುಲ್ ಅಶ್‍ಅರಿಯವರಿಂದ(ರ) ವರದಿಯಾಗಿದೆ. ಪ್ರವಾದಿ(ಸ) ಹೇಳಿದರು.
 لَيْسَ عَدُوُّكَ الَّذِي إِذَا قَتَلَكَ أَدْخَلَكَ الْجَنَّةَ ، وَإِذَا قَتَلْتَهُ كَانَ لَكَ نُورًا أَعْدَى عَدُوًّا لَكَ نَفْسُكَ الَّتِي بَيْنَ جَنْبَيْكَ “ನೀನು ಕೊಂದರೆ ನಿನಗೆ ಪ್ರಕಾಶಮಯವಾಗುವ ಮತ್ತು ನಿನ್ನನ್ನು ಕೊಂದು ಬಿಟ್ಟರೆ ನಿನಗೆ ಸ್ವರ್ಗ ಲಭಿಸಲು ಕಾರಣಕರ್ತನಾಗುವವನಲ್ಲ ನಿನ್ನ ನೈಜ ಶತ್ರು. ಬದಲಾಗಿ ನಿನ್ನ ಬೆನ್ನೆಲುಬಿನಿಂದ ನಿನಗೆ ಹುಟ್ಟಿದ ನಿನ್ನ ಸಂತಾನಗಳಾಗಿರಬಹುದು ನಿನ್ನ ಅತ್ಯಂತ ದೊಡ್ಡ ಶತ್ರು. ಆ ಬಳಿಕ ನೀನು ಶೇಖರಿಸಿಟ್ಟಿರುವ ಸಂಪತ್ತಾಗಿದೆ.”
ನಮ್ಮ ಶತ್ರುಗಳು ಹೊರಗೆಲ್ಲೋ ಇದ್ದಾರೆ ಎಂದು ನಾವು ಭಾವಿಸಿದ್ದೇವೆ. ನೆರೆಕರೆಯವರು ಕೆಲವೊಮ್ಮೆ ನಮಗೆ ಶತ್ರುಗಳಾಗುತ್ತಾರೆ. ಸಂಬಂಧಿಕರನ್ನು ನಾವು ಶತ್ರುಗಳಾಗಿಸುತ್ತೇವೆ. ಆದರೆ ಈ ಹದೀಸಿನ ಪ್ರಕಾರ ನಮ್ಮ ಶತ್ರುಗಳು ನಮ್ಮೊಳಗೇ ಇದ್ದಾರೆ. ನಾವು ಜತನದಿಂದ ಕಾಪಾಡಿಕೊಂಡಿದ್ದ ಸಂಪತ್ತು ಮತ್ತು ಸಂತಾನವು ನಮ್ಮ ಮುಂದೆ ಶತ್ರುಗಳಾಗಿ ನಿಲ್ಲುತ್ತವೆ. ನಮ್ಮ ಪರಲೋಕ ವಿಜಯಕ್ಕೆ ಅಡ್ಡಗಾಲು ಹಾಕುತ್ತವೆ. ನಮ್ಮ ಸ್ವರ್ಗ ಪ್ರಾಪ್ತಿಯನ್ನು ತಡೆಯುತ್ತವೆ.
ಹಣ ಸಂಪಾದಿಸುವ ವಿಚಾರದಲ್ಲಿ ಇಸ್ಲಾಮ್ ನಿಷೇಧ ವಿಧಿಸಿಲ್ಲ. ಆದರೆ ಅದು ಜೀವನದ ಪರಮ ಗುರಿಯಾಗುವುದು ಮತ್ತು ಉಳಿದೆಲ್ಲಾ ವಿಚಾರಗಳು ನಗಣ್ಯವಾಗುವ ಸಂದರ್ಭವನ್ನು ಇಸ್ಲಾಮ್ ಸಹಿಸುವುದಿಲ್ಲ. ಸಂಪತ್ತಿನ ಗಳಿಕೆಯೇ ಪ್ರಧಾನ ಕೆಲಸವಾಗಿ ಬಿಟ್ಟರೆ ಅದನ್ನು ಪಡೆಯಲು ಮನುಷ್ಯನು ಯಾವುದೇ ದಾರಿಯನ್ನು ಸ್ವೀರಿಸಲು ಸಿದ್ಧನಾಗುತ್ತಾನೆ. ಅದು ಅಡ್ಡದಾರಿಯಾದರೂ ಸರಿ. ಆಗ ಅವನಿಗೆ ಒಳಿತು-ಕೆಡುಕುಗಳು ಸಮಸ್ಯೆಯಾಗುವುದಿಲ್ಲ. ಹಣ ಗಳಿಕೆಗಾಗಿ ಎದುರಾಗುವ ಎಲ್ಲಾ ತೊಡಕುಗಳನ್ನೂ ಅವನು ನೀಗಿಸಲು ಪ್ರಯತ್ನಿಸುತ್ತಾನೆ. ತತ್ಪರಿಣಾಮಗಾಗಿ ಅವನಲ್ಲಿ ಸಚ್ಚಾರಿತ್ರ್ಯವು ನಶಿಸಿ ಹೋಗುತ್ತದೆ.
ಇನ್ನು ಸರಿಯಾದ ರೀತಿಯಲ್ಲಿ ಸಂಪತ್ತನ್ನು ಗಳಿಸಿದವನು ಅದನ್ನು ಹಕ್ಕುದಾರರಿಗೆ ನೀಡದೆ ಶೇಖರಿಸಿಡುತ್ತಾನೆ. ಬಡವರ ಹಕ್ಕುಗಳು ಅವನಿಂದ ದಮನಿಸಲ್ಪಡುತ್ತವೆ. ಅಲ್ಲಾಹನು ಹೇಳುತ್ತಾನೆ, “ಅವನು ಸಂಪತ್ತನ್ನು ಸಂಗ್ರಹಿಸಿದನು ಮತ್ತು ಅದನ್ನು ಎಣಿಸಿ ಎಣಿಸಿ ಇಟ್ಟನು. ಅವನ ಸಂಪತ್ತು ಶಾಶ್ವತವಾಗಿ ಅವನ ಬಳಿಯಲ್ಲೇ ಇರುವುದೆಂದು ಅವನು ಭಾವಿಸುತ್ತಾನೆ. ಖಂಡಿತ ಇಲ್ಲ. ಅವನು ಪುಡಿಗಟ್ಟಿ ಬಿಡುವ ಸ್ಥಳಕ್ಕೆ ಎಸೆಯಲ್ಪಡುವನು.” (ಅಲ್ ಹುಮಝ: 2-4)
ಮನುಷ್ಯನು ತನ್ನ ಸಂಪತ್ತು ಶಾಶ್ವತ ಎಂದು ಭಾವಿಸುತ್ತಾನೆ. ಇವೆಲ್ಲವನ್ನೂ ಬಿಟ್ಟು ಒಂದು ದಿನ ಬರಿಗೈಯಲ್ಲಿ ಮರಳಲಿಕ್ಕಿದೆ ಎಂಬ ಪ್ರಜ್ಞೆ ಅವನಲ್ಲಿ ಇರುವುದಿಲ್ಲ. ಪ್ರವಾದಿ(ಸ) ಹೇಳಿದರು,
تعس عبد الدينار، تعس عبد الدرهم، عبد الخميصة، إن أعطي منها رضي، وإن لم يعط سخط، تعس وانتكس، وإذا شيك فلا انتقش “ದಿರ್ಹಮ್ ಮತ್ತು ದೀನಾರ್‍ಗಳ ಗುಲಾಮನು ನಾಶ ಹೊಂದಿದನು. ಅವನಿಗೆ ಏನಾದರೂ ನೀಡಲ್ಪಟ್ಟರೆ ಅವನು ಸಂತುಷ್ಟನಾಗುವನು. ನೀಡದಿದ್ದರೆ ಅವನು ಕೋಪಿಷ್ಠನಾಗುವನು. ಅವನ ಎಲ್ಲಾ ಲೆಕ್ಕಾಚಾರಗಳೂ ತಲೆಕೆಳಗಾಗುವುದು. ಅವನಿಗೆ ಒಂದು ಮುಳ್ಳು ಚುಚ್ಚಿದರೂ ಅದನ್ನು ತೆಗೆಯಲು ಜನರು ಸಿಗದೆ ಅವನು ಕಷ್ಟ ಅನುಭವಿಸುವನು.”
ಸಂತಾನಗಳ ಸ್ಥಿತಿಯೂ ಇದೇ ಆಗಿದೆ. ಅಲ್ಲಾಹನ ಸಂಪ್ರೀತಿಗಿಂತ ಹೆಚ್ಚಿನ ಆದ್ಯತೆಯನ್ನು ಮಕ್ಕಳಿಗೆ ನೀಡುವಾಗ ಅವರು ಹೆತ್ತವರಿಗೆ ಶತ್ರುಗಳಾಗಿ ಮಾರ್ಪಡುತ್ತಾರೆ. ಮಕ್ಕಳೊಂದಿಗಿರುವ ಮೇರೆ ವಿೂರಿದ ಪ್ರೀತ್ಯಾದರವು ಹೆತ್ತವರನ್ನು ಮಕ್ಕಳ ಗುಲಾಮರನ್ನಾಗಿಸುತ್ತದೆ. ಮಕ್ಕಳ ಬೇಡಿಕೆ ಗಳನ್ನು, ಆಸೆ-ಚಪಲಗಳನ್ನು ಪೂರೈಸಲು ಹೆತ್ತವರು ಹಲಾಲ್-ಹರಾಮ್‍ಗಳ ಕಡೆಗೆ ಜಾಣ ಕುರುಡು ಪ್ರದರ್ಶಿಸುವ ಮಟ್ಟಕ್ಕೆ ತಲುಪುತ್ತಾರೆ. ಹೇಗಾದರೂ ಮಾಡಿ ಮಕ್ಕಳನ್ನು ತೃಪ್ತಿ ಪಡಿಸುವುದು ಅವರ ಗುರಿಯಾಗಿರುತ್ತದೆ. ದೇವನ ಮಾರ್ಗದಿಂದ ಪಥ ಭ್ರಷ್ಟಗೊಳ್ಳುವ ಸಾಧ್ಯತೆಯೂ ಇಂತಹ ಸಂದರ್ಭಗಳಲ್ಲಿ ಉಂಟಾಗುತ್ತದೆ. ಹೀಗೆ ಮಕ್ಕಳು ಹೆತ್ತವರ ಪಾಲಿಗೆ ಪರಲೋಕ ಜೀವನವನ್ನು ದುರಂತ ಮಯಗೊಳಿಸುವ ಶತ್ರುಗಳಾಗಿ ಬದಲಾಗುತ್ತಾರೆ. ಪ್ರವಾದಿ(ಸ) ಹೇಳಿದರು.
يأتي على الناس زمان يكون هلاك الرجل على يد زوجته وأبويه وولده ، يعيرونه بالفقر ويكلفونه ما لا يطيق ! فيدخل المداخل التي يذهب فيها دينه فيهلك “ನನ್ನ ಸಮುದಾಯಕ್ಕೆ ಒಂದು ಕಾಲ ಬರಲಿಕ್ಕಿದೆ. ಅಂದು ಓರ್ವನ ನಾಶವು ಅವನ ಪತ್ನಿ ಮತ್ತು ಮಕ್ಕಳ ಮೂಲಕವಾಗಿರಬಹುದು. ದಾರಿದ್ರ್ಯದಿಂದಾಗಿ ಅವರು ಅವನನ್ನು ತೆಗಳುತ್ತಿರುವರು. ಹಾಗೆ ಅವನು ನಿಷಿದ್ಧ ಮಾರ್ಗ ತುಳಿಯಲು ನಿರ್ಬಂಧಿತನಾಗುವನು. ಕೊನೆಗೆ ಅವನು ನಾಶ ಹೊಂದುವನು.”
ಪತ್ನಿ-ಮಕ್ಕಳ ಬೇಡಿಕೆಗಳನ್ನು ಪೂರೈಸಲಿಕ್ಕಾಗಿ ಪಾಪ ಕೃತ್ಯಗಳಿಗೆ ಬಲಿಯಾದ ಎಷ್ಟೋ ಮಂದಿ ನಮ್ಮ ಕಣ್ಮುಂದೆಯೇ ಇದ್ದಾರೆ. ಪತ್ನಿಯ ಆಭರಣದ ವ್ಯಾಮೋಹಕ್ಕೆ ಮಣಿದು, ಮಕ್ಕಳ ಆಟಿಕೆಯ ತೀವ್ರ ಬೇಡಿಕೆಗೆ ಬಲಿಯಾಗಿ ಕಳ್ಳತನ ನಡೆಸಿ ಸಿಕ್ಕಿ ಬೀಳುವವರ ಪಟ್ಟಿಯು ಪುಟ್ಟದಲ್ಲ. ಪತ್ನಿ-ಮಕ್ಕಳಿಗಾಗಿ ತನ್ನ ಅಸ್ತಿತ್ವವನ್ನೇ ಅವರು ಮರೆಯುತ್ತಾರೆ. ತಮ್ಮ ಧಾರ್ಮಿಕ ಪ್ರಜ್ಞೆಯನ್ನೇ ಅವರು ಪಣಕ್ಕಿಡುತ್ತಾರೆ. ಅಂಥವರ ಕುರಿತು ಪ್ರವಾದಿ(ಸ) ಹೀಗೆ ಹೇಳಿದ್ದಾರೆ, “ನಾಳೆ ಪರ ಲೋಕದಲ್ಲಿ ಓರ್ವ ವ್ಯಕ್ತಿಯನ್ನು ಕರೆತರಲಾಗುವುದು. ಅವನ ಕುರಿತು “ಇವನ ಒಳಿತುಗಳನ್ನೆಲ್ಲಾ ಇವನ ಕುಟುಂಬವು ತಿಂದು ಮುಗಿಸಿದೆ” ಎಂದು ಹೇಳಲಾಗುವುದು. ಆದ್ದರಿಂದ ನಾವು ನಮ್ಮ ಸಂಪತ್ತು-ಸಂತಾನಗಳು ನಮ್ಮ ಶತ್ರುಗಳಾಗಿ ಬದಲಾಗದಂತೆ ಎಚ್ಚರ ವಹಿಸಬೇಕು. ಆ ಅನುಗ್ರಹಗಳಿಂದಾಗಿ ನಮಗೆ ಸ್ವರ್ಗಪ್ರಾಪ್ತಿಯಾಗಬೇಕೇ ಹೊರತು ನರಕವಲ್ಲ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಸೋಮವಾರ, ಸೆಪ್ಟೆಂಬರ್ 17, 2012

ಪ್ಲೀಸ್, ಕುಟುಂಬ ಸಂಬಂಧ ಮುರಿಯಬೇಡಿ


 ಮಾನವನು ಸಂಘಜೀವಿಯಾಗಿದ್ದಾನೆ. ಇತರರೊಂದಿಗೆ ಕೂಡಿ ಬಾಳುವುದು ಅವನ ಪ್ರಕೃತಿದತ್ತ ಗುಣವಾಗಿದೆ. ಆದ್ದರಿಂದ ಅವನಿಗೆ ಏಕಾಂಗಿಯಾಗಿ ಜೀವಿಸಲು ಕೆಲವು ದಿನಗಳ ಮಟ್ಟಿಗೆ ಸಾಧ್ಯವಾದರೂ ಅದು ಶಾಶ್ವತವಾಗಿಸಲು ಅವನಿಂದ ಸಾಧ್ಯವಿಲ್ಲ. ಇನ್ನು ಯಾರ ಹಂಗಿಲ್ಲದೇ ಏಕಾಂಗಿಯಾಗಿ ಜೀವಿಸುವುದು ಮಾನಸಿಕ ಸ್ಥಿಮಿತ ಕಳಕೊಂಡಿರುವ ಹುಚ್ಚರು ಮಾತ್ರ.
ಮನುಷ್ಯರಲ್ಲಿ ಕೂಡಿ ಬಾಳುವ ಗುಣ ಇರುವುದರಿಂದಲೇ ಅವನು ಒಂದು ಕುಟುಂಬವನ್ನು ಬಯಸುತ್ತಾನೆ. ಓರ್ವ ಮನುಷ್ಯನ ಸುತ್ತಲೂ ಸಂಬಂಧಗಳ ಸರಪಳಿಯು ಪೋಣಿಸಲ್ಪಟ್ಟಿದೆ. ತಂದೆ, ತಾಯಿ, ಪತ್ನಿ, ಮಕ್ಕಳು, ಸಹೋದರ-ಸಹೋದರಿಯರು, ಅತ್ತೆ, ಮಾವ ಹೀಗೆ ಈ ಸರಪಳಿಯು ಅವನನ್ನು ಬಂಧಿಸಿ ಸಹಬಾಳ್ವೆಯ ಸುಖವನ್ನು ನೀಡುತ್ತಿರುತ್ತದೆ. ಆದ್ದರಿಂದಲೇ ಮಾನವನು ಈ ಸರಪಳಿಯಿಂದ ಬಂಧಮುಕ್ತಗೊಳ್ಳಲು ತಯಾರಾಗುತ್ತಿಲ್ಲ.
ಓರ್ವ ವಿಶ್ವಾಸಿಗೆ ಕುಟುಂಬದ ಮೇಲೆ ಹಲವಾರು ಬಾಧ್ಯತೆಗಳಿವೆ. ಅಲ್ಲಾಹನೊಂದಿಗೂ ಸ್ವಂತದೊಂದಿಗೂ ಇರುವ ಬಾಧ್ಯತೆಗಳ ಬಳಿಕ ಇಸ್ಲಾಮಿನಲ್ಲಿ ಅತ್ಯಂತ ಹೆಚ್ಚು ಮಹತ್ವ ಇರುವುದು ಈ ಸಂಬಂಧಗಳಿಗಾಗಿದೆ. ಆದ್ದರಿಂದ ಕುಟುಂಬ ಸಂಬಂಧಕ್ಕೆ ಧಕ್ಕೆ ಯಾಗುವಂತಹ ಯಾವುದೇ ಕೆಲಸವು ಓರ್ವ ನೈಜ ವಿಶ್ವಾಸಿ ಯಿಂದ ಘಟಿಸಬಾರದು. ಕುಟುಂಬ ಸಂಬಂಧಕ್ಕೆ ಇಸ್ಲಾಮ್ ಅತೀ ಹೆಚ್ಚು ಮಹತ್ವ ನೀಡಿದೆ. ಕುಟುಂಬದೊಂದಿಗೆ ಹಳಸಲು ಸಂಬಂಧವಿರಿಸಿ ನಾವು ಮಾಡುವ ಸತ್ಕರ್ಮಗಳು ನಿರರ್ಥಕ ವಾಗಬಹುದು. ಇಂದು ಸಮಾಜದಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಳ್ಳುವವರು, ಸಮಾಜದ ಜನರ ಸಂಕಷ್ಟಗಳಿಗೆ ಹೆಗಲು ಕೊಡುವವರು, ಸಮಾಜದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿಕೊಂಡವರು ಕುಟುಂಬದ ವಿಚಾರದಲ್ಲಿ ವಿಫಲರಾಗಿರು ತ್ತಾರೆ. ಅಣ್ಣನ ಅಭಿವೃದ್ಧಿಯನ್ನು ಸಹಿಸದ ತಮ್ಮ, ತಮ್ಮನ ಅಭಿವೃದ್ಧಿಯ ವಿರುದ್ಧ ಅಸೂಯೆ ತೋರುವ ಅಣ್ಣ ಹೀಗೆ ಬಹಳ ಹತ್ತಿರದ ಸಂಬಂಧಗಳಲ್ಲೂ ಬಿದ್ದಿರುವ ಬಿರುಕುಗಳು ನಮ್ಮ ಧಾರ್ಮಿಕ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ.
ಅಬ್ದುರ್ರಹ್ಮಾನ್ ಬಿನ್ ಔಫ್‍ರಿಂದ(ರ) ವರದಿಯಾಗಿದೆ. ಪ್ರವಾದಿ(ಸ) ಹೇಳಿರುವುದಾಗಿ ನಾನು ಕೇಳಿದ್ದೇನೆ: ಅಲ್ಲಾಹನು ಹೇಳಿದ್ದಾನೆ, “ನಾನು ಅಲ್ಲಾಹನಾಗಿದ್ದೇನೆ. ನಾನು ಪರಮ ದಯಾ ಮಯನಾಗಿದ್ದೇನೆ. ಕುಟುಂಬ ಸಂಬಂಧವನ್ನು ಸೃಷ್ಟಿಸಿದ್ದು ನಾನು. ನನ್ನ ನಾಮಗಳಿಂದ ಅದಕ್ಕೆ ಪಾಲು ಮಾಡಿ ನೀಡಿದ್ದೇನೆ. ಆದ್ದ ರಿಂದ ಕುಟುಂಬ ಸಂಬಂಧವನ್ನು ಸ್ಥಾಪಿಸುವವರೊಂದಿಗೆ ನಾನೂ ಸಂಬಂಧ ಸ್ಥಾಪಿಸುತ್ತೇನೆ. ಕುಟುಂಬದೊಂದಿಗಿನ ಸಂಬಂಧವನ್ನು ಕಡಿಯುವವರೊಂದಿಗೆ ನಾನೂ ಸಂಬಂಧ ಕಡಿಯುತ್ತೇನೆ.”
قَالَ عَبْدُ الرَّحْمَنِ بْنُ عَوْفٍ : إِنِّي سَمِعْتُ رَسُولَ اللَّهِ يَقُولُ : " قَالَ اللَّهُ جَلَّ وَعَزَّ : " أَنَا اللَّهُ وَأَنَا الرَّحْمَنُ خَلَقْتُ الرَّحِمَ وَشَقَقْتُ لَهَا     مِنَ اسْمِي فَمَنْ وَصَلَهَا وَصَلْتُهُ وَمَنْ قَطَعَهَا بَتَتُّهُ
ಕುಟುಂಬ ಸಂಬಂಧದ ಮಹತ್ವದ ಕುರಿತು ಕುರ್‍ಆನ್ ಮತ್ತು ಹದೀಸ್‍ಗಳಲ್ಲಿ ಹಲವಾರು ಪ್ರಸ್ತಾಪಗಳು ಬಂದಿವೆ. ಅಲ್ಲಾಹನು ಸೂರಃ ಅನ್ನಿಸಾದ ಪ್ರಥಮ ಸೂಕ್ತದಲ್ಲೇ ಈ ರೀತಿ ಹೇಳುತ್ತಾನೆ,
يَـٰٓأَيُّہَا ٱلنَّاسُ ٱتَّقُواْ رَبَّكُمُ ٱلَّذِى خَلَقَكُم مِّن نَّفۡسٍ۬ وَٲحِدَةٍ۬ وَخَلَقَ مِنۡہَا زَوۡجَهَا وَبَثَّ مِنۡہُمَا رِجَالاً۬ كَثِيرً۬ا وَنِسَآءً۬‌ۚ وَٱتَّقُواْ ٱللَّهَ ٱلَّذِى تَسَآءَلُونَ بِهِۦ وَٱلۡأَرۡحَامَ‌ۚ إِنَّ ٱللَّهَ كَانَ عَلَيۡكُمۡ رَقِيبً۬ا  
“ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು. ನೀವು ಯಾರ ಹೆಸರನ್ನೆತ್ತಿ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಕೇಳುತ್ತೀರೋ ಆ ಅಲ್ಲಾಹನನ್ನು ಭಯಪಡಿರಿ. ಕುಟುಂಬ ಸಂಬಂಧವನ್ನು ಕೆಡಿಸಬೇಡಿರಿ. ಅಲ್ಲಾಹನು ನಿಮ್ಮ ಮೇಲೆ ಮೇಲ್ನೊಟ ಇರಿಸಿ ಕೊಂಡಿದ್ದಾನೆ ಎಂಬುದನ್ನು ಚೆನ್ನಾಗಿ ಅರಿತುಕೊಳ್ಳಿರಿ.”
ಇಲ್ಲಿ ಅಲ್ಲಾಹನು ‘ಕುಟುಂಬ ಸಂಬಂಧವನ್ನು ಕೆಡಿಸಬೇಡಿರಿ’ ಎಂದು ಸ್ಪಷ್ಟವಾಗಿ ಆಜ್ಞಾಪಿಸಿದ್ದಾನೆ. ಈ ಸಂಬಂಧವನ್ನು ಮುರಿಯುವವರು ಮತ್ತು ಭೂಮಿಯಲ್ಲಿ ಕ್ಷೋಭೆ ಹರಡುವವರಿಗೆ ಅಲ್ಲಾಹನು ಈ ರೀತಿ ಎಚ್ಚರಿಕೆ ನೀಡಿದ್ದಾನೆ,
فَهَلۡ عَسَيۡتُمۡ إِن تَوَلَّيۡتُمۡ أَن تُفۡسِدُواْ فِى ٱلۡأَرۡضِ وَتُقَطِّعُوٓاْ أَرۡحَامَكُمۡ 
 فَأَصَمَّهُمۡ وَأَعۡمَىٰٓ أَبۡصَـٰرَهُمۡ ‭۝ ‬أُوْلَـٰٓٮِٕكَ ٱلَّذِينَ لَعَنَهُمُ ٱللَّهُ  ‭  
 “ನೀವು ವಿಮುಖರಾಗಿ ಬಿಟ್ಟರೆ ಭೂಮಿಯಲ್ಲಿ ಪುನಃ ಕ್ಷೋಭೆಯನ್ನುಂಟು ಮಾಡುವ ಹಾಗೂ ನಿಮ್ಮ ಕುಟುಂಬ ಸಂಬಂಧವನ್ನು ಕೆಡಿಸುವ ಹೊರತು ನಿಮ್ಮಿಂದ ಬೇರೇನನ್ನಾದರೂ ನಿರೀಕ್ಷಿಸಬಹುದೇ? ಅಲ್ಲಾಹನು ಶಪಿಸಿರುವುದು ಮತ್ತು ಕಿವುಡರಾಗಿಯೂ ಕುರುಡರಾಗಿಯೂ ಮಾಡಿ ಬಿಟ್ಟಿರುವುದು ಇವರನ್ನೇ.” (ಮುಹಮ್ಮದ್: 22-23)
ಈ ಸೂಕ್ತದ ತಾತ್ಪರ್ಯವೇನೆಂದರೆ ಪ್ರವಾದಿ(ಸ) ಮತ್ತು ಅವರ ಅನುಯಾಯಿಗಳಾದ ಸತ್ಯವಿಶ್ವಾಸಿಗಳು ನಡೆದು ತೋರಿಸಿರುವ ಹಾದಿಯಿಂದ ನೀವು ವಿಮುಖರಾಗುವುದಾದರೆ ಅದರ ಪರಿಣಾಮ ವಾಗಿ ನೀವು ಅಜ್ಞಾನದಲ್ಲೇ ಬಿದ್ದುಕೊಂಡಿರುತ್ತೀರಿ. ಮಾತ್ರವಲ್ಲ, ನೀವು ಪರಸ್ಪರ ರಕ್ತ ಹರಿಸುತ್ತಾ ಶತಮಾನಗಳನ್ನೇ ಕಳೆಯುತ್ತೀರಿ. ಸ್ವಂತ ಸಂತಾನವನ್ನೇ ಜೀವಂತ ಹೂಳಲು ಹೇಸದ ಮನಸ್ಥಿತಿ ಯವರಾಗುತ್ತೀರಿ ಎಂಬುದಾಗಿದೆ.
ಪ್ರವಾದಿಯವರು(ಸ) ಮಕ್ಕಾದಲ್ಲಿ ಧರ್ಮ ಪ್ರಚಾರ ನಡೆಸುತ್ತಿದ್ದ ಆರಂಭ ಕಾಲದಲ್ಲೇ ಕುಟುಂಬ ಸಂಬಂಧದ ಕಡೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಅಮ್ರ್ ಬಿನ್ ಆಸ್(ರ) ಹೇಳುತ್ತಾರೆ: ಜಾಹಿಲಿಯಾ ಕಾಲದಲ್ಲಿ ಅರೇಬಿಯಾದಲ್ಲಿ ಓರ್ವ ಪ್ರವಾದಿ ಬಂದಿದ್ದಾರೆಂದೂ ಅವರು ಕೆಲವು ವಿಚಾರಗಳನ್ನು ಹೇಳುತ್ತಿದ್ದಾರೆಂದೂ ಯಾರೋ ಹೇಳುವುದನ್ನು ನಾನು ಕೇಳಿದೆ ಹಾಗೂ ನಾನು ಅವರನ್ನು ಭೇಟಿಯಾಗಲು ಹೋದೆ. ಅವರ ಬಳಿ ಹೋಗಿ ಕೇಳಿದೆ, “ತಾವು ಯಾರು?” ಪ್ರವಾದಿಯವರು(ಸ) ಹೇಳಿದರು. “ನಾನು ಪ್ರವಾದಿಯಾಗಿದ್ದೇನೆ. ಅಲ್ಲಾಹನು ನನ್ನನ್ನು ಜನರ ಬಳಿಗೆ ಪ್ರವಾದಿಯಾಗಿ ನೇಮಿಸಿದ್ದಾನೆ.” ನಾನು ಕೇಳಿದೆ, “ಯಾವ ಸಂದೇಶದೊಂದಿಗೆ ಅಲ್ಲಾಹನು ನಿಮ್ಮನ್ನು ಕಳುಹಿಸಿದ್ದಾನೆ?” ಪ್ರವಾದಿಯವರು(ಸ) ಹೇಳಿದರು,
أَرْسَلَنِي بِصِلَةِ الْأَرْحَام وَكَسْر الْأَوْثَان وَأَنْ يُوَحَّد اللَّه لَا يُشْرَك بِهِ شَيْء
 “ಕುಟುಂಬ ಸಂಬಂಧವನ್ನು ಸ್ಥಾಪಿಸಬೇಕು. ವಿಗ್ರಹಗಳನ್ನು ಧ್ವಂಸಗೊಳಿಸಬೇಕು. ಅಲ್ಲಾಹನೊಂದಿಗೆ ಇತರರನ್ನು ಸಹಭಾಗಿಗಳಾಗಿ ಮಾಡದೆ ಅವನ ಏಕತ್ವವನ್ನು ಸ್ಥಾಪಿಸಬೇಕು.”
ಇಮಾಮ್ ನವವಿ(ರ) ಈ ಹದೀಸಿನ ಕುರಿತು ಹೀಗೆ ವಿವರಿಸಿದ್ದಾರೆ, “ಕುಟುಂಬ ಸಂಬಂಧಗಳನ್ನು ಸ್ಥಾಪಿಸುವುದಕ್ಕೆ ಇಸ್ಲಾಮ್ ನೀಡುವ ಪ್ರೇರಣೆ ಹಾಗೂ ಪ್ರೋತ್ಸಾಹಗಳಿಗೆ ಈ ಹದೀಸಿನಲ್ಲಿ ಪುರಾವೆ ಇದೆ. ಯಾಕೆಂದರೆ, ಪ್ರವಾದಿಯವರು(ಸ) ಕುಟುಂಬ ಸಂಬಂಧವನ್ನು ಪರಾಮರ್ಶಿಸಿರುವುದು ತೌಹೀದ್ ನೊಂದಿಗಾಗಿದೆ. ಧರ್ಮದ ಇತರ ವಿಷಯಗಳನ್ನು ಪ್ರಸ್ತಾಪಿಸದೆ ಕುಟುಂಬದ ಮಹತ್ವವನ್ನು ಸ್ಮರಿಸುತ್ತಾ ಅದನ್ನು ಪ್ರಥಮವಾಗಿ ಅವರು ಹೇಳಿದ್ದಾರೆ.”
ಇಸ್ಲಾಮಿನಲ್ಲಿ ಎಲ್ಲಾ ವಿಧದ ಸಂಬಂಧಗಳಿಗಿಂತಲೂ ಆದರ್ಶ ಸಂಬಂಧವು ದೊಡ್ಡದಾಗಿದೆ. ಆದರ್ಶದಲ್ಲಿ ವೈರುಧ್ಯತೆ ಇದ್ದರೂ ಕುಟುಂಬ ಸಂಬಂಧಿಗಳೊಂದಿಗೆ ಉತ್ತಮ ರೀತಿಯಿಂದ ವರ್ತಿಸಲು ಇಸ್ಲಾಮ್ ಧರ್ಮವು ಆಜ್ಞಾಪಿಸುತ್ತದೆ. ಈ ಸೂಕ್ತವು ಅದಕ್ಕಿರುವ ಒಂದು ಉದಾಹರಣೆಯಾಗಿದೆ. ಸೂರಃ ಲುಕ್ಮಾನ್‍ನ 15ನೇ ಸೂಕ್ತ ದಲ್ಲಿ ಅಲ್ಲಾಹನು ಹೆತ್ತವರ ಕುರಿತು ಈ ರೀತಿ ಹೇಳುತ್ತಾನೆ, “ಅವರು ನಿನಗೆ ತಿಳಿಯದುದನ್ನು ನನ್ನೊಂದಿಗೆ ಸಹಭಾಗಿಯಾಗಿ ಮಾಡಬೇಕೆಂದು ನಿನ್ನ ಮೇಲೆ ಒತ್ತಡ ಹಾಕಿದರೆ ಅವರ ಮಾತನ್ನು ಎಷ್ಟು ಮಾತ್ರಕ್ಕೂ ಕೇಳಬೇಡ. ಆದರೆ ಈ ಲೋಕದಲ್ಲಿ ಅವ ರೊಂದಿಗೆ ಸದ್ವರ್ತನೆ ಮಾಡುತ್ತಿರು.”
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್(ರ) ಹೇಳುತ್ತಾರೆ: ಪ್ರವಾದಿ ಯವರು(ಸ) ಏರು ದನಿಯಲ್ಲಿ ಹೀಗೆ ಹೇಳುವುದನ್ನು ನಾನು ಕೇಳಿದೆ,
" إِنَّ آلَ أَبِي فُلانٍ لَيْسُوا لِي بِأَوْلِيَاءَ , إِنَّمَا وَلِيِّ اللَّهُ وَصَالِحُو الْمُؤْمِنِينَ " . 
 “ಇಂತಿಂತಹ ವ್ಯಕ್ತಿಯ ಕುಟುಂಬವು ನನ್ನ ಸಹಾಯಕರಲ್ಲ. ನನ್ನ ಸಹಾಯಿಗಳು ಅಲ್ಲಾಹ್ ಮತ್ತು ಸಚ್ಚರಿತ ಸತ್ಯವಿಶ್ವಾಸಿಗಳಾಗಿದ್ದಾರೆ. ಆದರೆ ಇಂತಿಂತಹ ವ್ಯಕ್ತಿಗಳಿಗೆ ನನ್ನೊಂದಿಗೆ ಕೌಟುಂಬಿಕ ಸಂಬಂಧವಿದೆ. ನಾನು ಆ ಸಂಬಂಧವನ್ನು ಹಸನುಗೊಳಿಸಿಯೇ ಸಿದ್ಧ.”
ಇಸ್ಲಾಮಿನಲ್ಲಿ ಕುಟುಂಬ ಸಂಬಂಧಕ್ಕೆ ಇಷ್ಟು ಮಹತ್ವ ಇರುವಾಗ ಅದನ್ನು ಮುರಿಯುವುದು ದೊಡ್ಡ ಅಪರಾಧವಾಗುತ್ತದೆ. ಕುಟುಂಬ ಸಂಬಂಧವನ್ನು ಕೆಡಿಸುವುದರಿಂದ ದೇವ ಕೋಪಕ್ಕೆ ಪಾತ್ರರಾಗಬಹುದು. ಮಾಡಿದ ಸತ್ಕರ್ಮಗಳು ನೀರಿನಲ್ಲಿ ಬರೆದಂತಾಗಬಹುದು. ಅಬೂ ಹುರೈರಾ(ರ) ವರದಿ ಮಾಡುತ್ತಾರೆ:
 إِنَّ أَعْمَالَ بَنِي آدَمَ تُعْرَضُ عَلَى اللَّهِ تَبَارَكَ وَتَعَالَى عَشِيَّةَ كُلِّ خَمِيسٍ لَيْلَةَ الْجُمُعَةِ ، فَلا يَقْبَلُ عَمَلَ قَاطِعِ رَحِمٍ 
ಪ್ರವಾದಿಯವರು(ಸ) ಹೇಳಿದರು, “ಮನುಷ್ಯರ ಕರ್ಮಗಳನ್ನು ಎಲ್ಲಾ ಶುಕ್ರವಾರದ ಮುಂಜಾನೆ ಅಲ್ಲಾಹನ ಮುಂದೆ ಪ್ರದರ್ಶಿಸಲಾಗುವುದು. ಆದರೆ ಕುಟುಂಬ ಸಂಬಂಧವನ್ನು ಮುರಿದವನ ಕರ್ಮಗಳನ್ನು ತಿರಸ್ಕರಿಸಲಾಗುವುದು.”
ಅಬ್ದುಲ್ಲಾ ಬಿನ್ ಅಬೀ ಔಫ್(ರ) ಹೇಳುತ್ತಾರೆ: ಒಮ್ಮೆ ನಾವು ಪ್ರವಾದಿಯವರೊಂದಿಗೆ(ಸ) ಕುಳಿತಿದ್ದೆವು. ಆಗ ಪ್ರವಾದಿಯವರು(ಸ) ಹೇಳಿದರು,لَا يُجَالِسُنَا الْعَشِيَّةَ قَاطِعُ رَحِمٍ “ಕುಟುಂಬ ಸಂಬಂಧವನ್ನು ಮುರಿದವರು ಇಂದು ನಮ್ಮೊಂದಿಗೆ ಕುಳಿತುಕೊಳ್ಳಬಾರದು.” ಆಗ ಅಲ್ಲಿಂದ ಓರ್ವರು ಎದ್ದು ಹೊರ ನಡೆದರು. ಅವರ ಮಾತೃ ಸಹೋದರಿ ಹಾಗೂ ಅವರ ಮಧ್ಯೆ ಮನಸ್ತಾಪವಿತ್ತು. ಹಾಗೆ ಅವರು ಅದನ್ನು ಸರಿಪಡಿಸಿ ಮರಳಿದರು. ಆಗ ಪ್ರವಾದಿಯವರು(ಸ) ಹೇಳಿದರು,
 إِنَّ الرَّحْمَةَ لَا تَنْزِلُ عَلَى قَوْمٍ فِيهِمْ قَاطِعُ رَحِمٍ“ಕುಟುಂಬ ಸಂಬಂಧವನ್ನು ಕಡಿದುಕೊಂಡವನು ಇರುವಲ್ಲಿಗೆ ಅಲ್ಲಾಹನ ಕರುಣೆಯು ವರ್ಷಿಸುವು ದಿಲ್ಲ” ಅದೇ ರೀತಿ ಪ್ರಮುಖ ಸಹಾಬಿಯಾದ ಅಬ್ದುಲ್ಲಾ ಬಿನ್ ಮಸ್‍ಊದ್ ಸುಬ್‍ಹಿ ನಮಾಝ್‍ನ ಬಳಿಕ ನಡೆಸುತ್ತಿದ್ದ ಧಾರ್ಮಿಕ ಪ್ರವಚನದ ಬಳಿಕ ಪ್ರಾರ್ಥನೆ ನಡೆಸುವುದಕ್ಕಿಂತ ಮುಂಚೆ ಈ ರೀತಿ ಹೇಳುತ್ತಿದ್ದರು,
  أَنْشُدُ اللَّهَ قَاطِعَ الرَّحِمِ إِمَّا قَامَ عَنَّا ، فَإِنَّا نُرِيدُ أَنْ نَدْعُوَا رَبَّنَا ، وَإِنَّ أَبْوَابَ السَّمَاءِ مُرَتَجَةٌ دُونَ قَاطِعِ الرَّحِمِ“ಅಲ್ಲಾಹನ ಮೇಲೆ ಆಣೆ ಹಾಕಿ ಹೇಳುತ್ತಿದ್ದೇನೆ. ಕುಟುಂಬ ಸಂಬಂಧವನ್ನು ಮುರಿದವರು ಇಲ್ಲಿಂದ ಎದ್ದು ಹೋಗಲಿ. ಯಾಕೆಂದರೆ ನಾವು ಅಲ್ಲಾಹನೊಂದಿಗೆ ಪ್ರಾರ್ಥಿಸಲಿದ್ದೇವೆ. ಕುಟುಂಬ ಸಂಬಂಧವನ್ನು ಮುರಿದವನಿಗೆ ಆಕಾಶದ ಬಾಗಿಲುಗಳು ಮುಚ್ಚಲ್ಪಡುತ್ತವೆ.”
ಇದರಿಂದ ಕುಟುಂಬ ಸಂಬಂಧಕ್ಕೆ ಎಷ್ಟು ಮಹತ್ವ ಇದೆಯೆಂದು ಸ್ಪಷ್ಟವಾಗುತ್ತದೆ. ಆದ್ದರಿಂದ ನಾವು ಕುಟುಂಬ ಸಂಬಂಧಿಗಳೊಂದಿಗೆ ಮಾತು ಬಿಟ್ಟಿದ್ದರೆ ಅದನ್ನು ಮರುಸ್ಥಾಪಿಸಬೇಕಾಗಿದೆ. ಇಲ್ಲದಿದ್ದರೆ ನಾವು ನಿರ್ವಹಿಸುವ ಎಲ್ಲಾ ಸತ್ಕರ್ಮಗಳು ನಿಶ್ಫಲವಾಗುವುದು. ಈ ನಿಟ್ಟಿನಲ್ಲಿ ನಾವು ಕುಟುಂಬ ಸಂಬಂಧದ ಸ್ಥಾಪನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಅದಕ್ಕೆ ಸರ್ವಶಕ್ತನಾದ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಮಂಗಳವಾರ, ಸೆಪ್ಟೆಂಬರ್ 11, 2012

ಪದಾರ್ಥದಲ್ಲಿ ಕೂದಲು ಸಿಕ್ಕಿದರೆ...


ದಾಂಪತ್ಯದ ಮೂಲ ಘಟಕಗಳು ಪತಿ ಮತ್ತು ಪತ್ನಿಯಾಗಿದ್ದಾರೆ. ದಾಂಪತ್ಯ ಎಂಬ ಗಾಡಿಯು ಸುಸೂತ್ರವಾಗಿ ಮುಂದೆ ಸಾಗಬೇಕಾದರೆ ಪತಿ-ಪತ್ನಿಯರ ಮುಂದೆ ಸಮತೋಲನಾತ್ಮಕ ವರ್ತನೆಗಳು ಅತ್ಯಗತ್ಯವಾಗಿವೆ. ದಾಂಪತ್ಯ ಜೀವನದ ಯಶಸ್ವಿಗಾಗಿ ಕುರ್‍ಆನ್ ಹಾಗೂ ಹದೀಸ್‍ಗಳಲ್ಲಿ ಹಲವಾರು ಸಲಹೆ, ಆಜ್ಞೆಗಳು ಬಂದಿವೆ. ಕಾರಣ ದಾಂಪತ್ಯದಷ್ಟು ಪರಿಶುದ್ಧವೂ ಆನಂದಮಯವೂ ಆದ ಸಂಬಂಧ ಇನ್ನೊಂದಿಲ್ಲ. ಅದು ಸೃಷ್ಟಿಕರ್ತನು ತನ್ನ ಸೃಷ್ಟಿಗಳ ಪೈಕಿ ಶ್ರೇಷ್ಠರಾದ ಮಾನವರಿಗೆ ಮೀಸಲಿರಿಸಿದ ಸೌಭಾಗ್ಯವಾಗಿದೆ.
ಅಬೂ ಸಈದುಲ್ ಕುದ್ರಿ(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಓರ್ವ ಪರುಷನು ತನ್ನ ಪತ್ನಿಯನ್ನು ಮತ್ತು ಓರ್ವ ಮಹಿಳೆಯು ಅವಳ ಪತಿಯನ್ನು ಪರಸ್ಪರ ನೋಡಿದರೆ ಅಲ್ಲಾಹನು ಅವರೀರ್ವರನ್ನೂ ಕರುಣೆಯ ದೃಷ್ಟಿಯಿಂದ ನೋಡುತ್ತಾನೆ. ಇನ್ನು, ಅವನು ತನ್ನ ಪತ್ನಿಗೆ ಹಸ್ತಲಾಘವ ಮಾಡಿದರೆ ಅವರು ಮಾಡಿದ ಪಾಪಗಳು ಅವರ ಕೈ ಬೆರಳುಗಳ ಎಡೆಯಿಂದ ಜಾರಿ ಹೋಗುವುದು.” ಕುರ್‍ಆನ್ ಕೂಡಾ ಈ ರೀತಿ ಹೇಳಿದೆ, “ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ವಿವೇಚಿಸುವವರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.”
ಪತಿ ಮತ್ತು ಪತ್ನಿಯು ಪರಸ್ಪರ ಪೂರಕವಾಗಿ ವರ್ತಿಸಿದರೆ ಮಾತ್ರ ದಾಂಪತ್ಯ ಜೀವನವು ಸುಖಮಯವಾಗುವುದು. ಪತಿಯು ಪತ್ನಿಯೊಂದಿಗೆ ಮತ್ತು ಪತ್ನಿಯು ಪತಿಯೊಂದಿಗೆ ಮನ ಮುದಗೊಳಿಸುವ ವರ್ತನೆಗಳು ತೋರಬೇಕು. ಪತಿಗೆ, ತಾನು ಯಜಮಾನ ಮತ್ತು ಪತ್ನಿಗೆ ತಾನು ಗುಲಾಮಳು ಎಂಬ ಭಾವನೆ ಉಂಟಾಗತೊಡಗಿದರೆ ಆ ದಾಂಪತ್ಯ ಸಂಬಂಧದಲ್ಲಿ ಬಿರುಕು ಕಾಣಿಸತೊಡಗುತ್ತದೆ. ಹಾಗೇ ಮುಂದುವರಿದರೆ ಅದು ದೊಡ್ಡ ಪ್ರಪಾತವಾಗಿ ಪರಸ್ಪರ ಸಂಬಂಧ ಕಡಿದುಹೋಗುತ್ತದೆ.
ಇಂದು ಹಲವು ಪುರುಷರು ತಮ್ಮ ಪತ್ನಿಗೆ `ಪತ್ನಿ’ ಎಂಬ ಸ್ಥಾನವನ್ನು ನೀಡದೆ ಗುಲಾಮಳನ್ನಾಗಿಸಿದ್ದಾರೆ. ಅವಳ ಬೇಕು ಬೇಡಗಳ ಕಡೆಗೆ ಗಮನ ಹರಿಸುತ್ತಿಲ್ಲ. ಪುರುಷರು ಮಹಿಳೆಯರಿಗಿಂತ ಶ್ರೇಷ್ಠರು ಎಂಬ ಒಣ ಜಂಭವು ಪುರುಷರಲ್ಲಿ ತಲೆ ಎತ್ತಿದೆ. ಹಗಲೆಲ್ಲಾ ತಾನು ದುಡಿದು ಬರುವವನಾಗಿದ್ದರಿಂದ ತನ್ನ ಮುಂದೆ ಮನೆ ಮಂದಿ ತಲೆ ಬಾಗಬೇಕು ಎಂದು ಅವರು ಸ್ವತಃ ತೀರ್ಮಾನಿಸಿದ್ದಾರೆ. ಪುರುಷರು ತೋಳ್ಬಲದಲ್ಲೂ ಇತರ ವಿಷಯಗಳಲ್ಲೂ ಮಹಿಳೆಯರಿಗಿಂತ ಶ್ರೇಷ್ಠರು ನಿಜ. ಆದರೆ ಅದು ದಾಂಪತ್ಯ ಜೀವನದಲ್ಲಿ ಗಣನಾರ್ಹವಾದ ವಿಚಾರವಾಗಬಾರದು. ಅಲ್ಲಿ ಸ್ತ್ರೀಯರು ಮತ್ತು ಪುರುಷರು ಸಮಾನವಾಗಿದ್ದಾರೆ. ಒಬ್ಬರಿಗೊಬ್ಬರು ನೆರವಾಗಬೇಕಾದುದು ದಾಂಪತ್ಯ ಸುಖಮಯವಾಗಲಿಕ್ಕಿರುವ ಮಾನದಂಡವಾಗಿದೆ. ಓರ್ವ ಪತ್ನಿಯನ್ನು ಸತಾಯಿಸುವುದು ಪತಿಯಾದವನಿಗೆ ಭೂಷಣವಲ್ಲ.
ಮಹಿಳೆಯರೊಂದಿಗೆ ಗೌರವಾದರದಿಂದ ವರ್ತಿಸಲು ಇಸ್ಲಾಮ್ ಆಜ್ಞಾಪಿಸುತ್ತದೆ. ಮಹಿಳೆಗೆ ಇಸ್ಲಾಮ್ ನೀಡಿದಷ್ಟು ಸ್ಥಾನಮಾನ ಬೇರಾವುದೇ ಧರ್ಮವು ನೀಡಿಲ್ಲ. ಅಲ್ಲಾಹನು ಹೇಳುತ್ತಾನೆ, “ನೀವು ಅವರೊಂದಿಗೆ ಉತ್ತಮ ರೀತಿಯಿಂದ ಜೀವನ ನಡೆಸಿರಿ.“ (ಅನ್ನಿಸಾ: 19) ಪ್ರವಾದಿ(ಸ) ಹಜ್ಜತುಲ್ ವಿದಾಅïನ ಭಾಷಣದಲ್ಲಿ ಮಹಿಳೆಯರ ಕುರಿತು ಹೇಳಲು ಮರೆಯಲಿಲ್ಲ. “ತಿಳಿಯಿರಿ, ಪತ್ನಿಯರೊಂದಿಗೆ ಉತ್ತಮವಾಗಿ ವರ್ತಿಸಲಿಕ್ಕಿರುವ ನನ್ನ ಉಪದೇಶವನ್ನು ನೀವು ಸ್ವೀಕರಿಸಿರಿ. ಅವರು ನಿಮ್ಮೊಂದಿಗಿರುವ ನಿಮ್ಮ ಆಶ್ರಿತರಾಗಿದ್ದಾರೆ. ನಿಮಗೆ ಇತರ ಯಾವುದೇ ಅಧಿಕಾರ ಅವರ ಮೇಲಿಲ್ಲ. ಅರಿಯಿರಿ, ನಿಮಗೆ ಮಹಿಳೆಯರ ಮೇಲೆ ಕೆಲವು ಹಕ್ಕುಗಳಿವೆ. ಹಾಗೆಯೇ ಅವರಿಗೂ ನಿಮ್ಮ ಮೇಲೆ ಕೆಲವು ಹಕ್ಕುಗಳಿವೆ.”
ಒಮ್ಮೆ ಓರ್ವರು ಪ್ರವಾದಿಯವರೊಂದಿಗೆ(ಸ) ಕೇಳಿದರು, “ಅಲ್ಲಾಹನ ಸಂದೇಶವಾಹಕರೇ, ನಮ್ಮ ಪತ್ನಿಯರಿಗೆ ನಮ್ಮಿಂದ ಲಭಿಸಬೇಕಾದ ಹಕ್ಕುಗಳು ಯಾವುವು?” ಆಗ ಪ್ರವಾದಿ(ಸ) ಹೇಳಿದರು, “ನೀನು ತಿನ್ನುವುದಾದರೆ ಅವಳಿಗೂ ತಿನ್ನಿಸಬೇಕು. ನೀನು ಬಟ್ಟೆ ಧರಿಸಿದರೆ ಅವಳಿಗೂ ತೊಡಿಸಬೇಕು. ಮುಖಕ್ಕೆ ಹೊಡೆಯಬಾರದು. ಅಸಭ್ಯ ಮಾತುಗಳಿಂದ ಜರೆಯಬಾರದು. ಅವರೊಂದಿಗೆ ವಿರಸಗೊಳ್ಳುವುದಾದರೆ ಅದು ಮನೆಯ ಒಳಗೆ ಮಾತ್ರವಾಗಿರಬೇಕು.”
ಇಷ್ಟೆಲ್ಲಾ ನಿಯಮ-ನಿರ್ದೇಶನಗಳು ಕಣ್ಮುಂದೆಯೇ ಇರುವಾಗ ಇಂದು ಪತಿಯಂದಿರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಪ್ರವಾದಿಯವರ(ಸ) ಜೀವನ ಚರ್ಯೆಯನ್ನು ಬೇಕಾದ ಕಡೆಗೆ ಮಾತ್ರ ತೆಗೆದುಕೊಳ್ಳುವುದಲ್ಲ. ದಾಂಪತ್ಯ ಜೀವನಕ್ಕೂ ಅದು ಅನ್ವಯವಾಗುತ್ತದೆ. ಪ್ರವಾದಿಎಸಏ ಓರ್ವ ಉತ್ತಮ ಪತಿಯಾಗಿ ತನ್ನ ಜೀವನವನ್ನು ಇತರರಿಗೆ ಕಲಿಸಿಕೊಟ್ಟಿದ್ದಾರೆ. ಅವರು(ಸ) ತನ್ನ ಪತ್ನಿಯರೊಂದಿಗೆ ಉತ್ತಮವಾಗಿ ವರ್ತಿಸುತ್ತಿದ್ದರು. ನೀವೊಬ್ಬ ಉತ್ತಮ ಪತಿಯಾಗಬೇಕಾದರೆ ಅದಕ್ಕಿರುವ ಮಾರ್ಗದರ್ಶನವು ಪ್ರವಾದಿಯವರ(ಸ) ಜೀವನದಲ್ಲಿದೆ. ಪ್ರವಾದಿ (ಸ)  ಹೇಳಿದರು, “ನಿಮ್ಮ ಪೈಕಿ ಶ್ರೇಷ್ಠರು ಯಾರೆಂದರೆ ಪತ್ನಿಯೊಂದಿಗೆ ಉತ್ತಮವಾಗಿ ವರ್ತಿಸುವವರಾಗಿದ್ದಾರೆ. ನಾನು ನನ್ನ ಪತ್ನಿಯರೊಂದಿಗೆ ಅತ್ಯುತ್ತಮವಾಗಿ ವರ್ತಿಸುವವನಾಗಿದ್ದೇನೆ.”
ಪತ್ನಿಯರ ಅವಶ್ಯಕತೆಗಳು, ಬೇಡಿಕೆಗಳು, ಆಗ್ರಹಗಳನ್ನು ಅರಿತು ಅವರ ಮನಸ್ಸಿಗೆ ಮುದ ನೀಡುವ, ಅವರನ್ನು ಸಂತೋಷಪಡಿಸುವ ವಾತಾವರಣವನ್ನು ಪ್ರವಾದಿ(ಸ) ಸೃಷ್ಟಿ ಮಾಡುತ್ತಿದ್ದರು. ಪ್ರವಾದಿ(ಸ) ಪತ್ನಿಯರೊಂದಿಗಿರುವಾಗ ಅವರ ಮಾನಸಿಕ ಸ್ಥಿತಿಗೆ ಪ್ರವಾದಿಯವರೂ ಮರಳುತ್ತಿದ್ದರು. ಪ್ರವಾದಿಯವರ(ಸ) ಉಪಸ್ಥಿತಿಯನ್ನು ಅವರು ಯಾವಾಗಲೂ ಬಯಸುತ್ತಿದ್ದರು. ಹಾಸ್ಯದ ಮಾತುಗಳಿಂದ ಪತ್ನಿಯರನ್ನು ನಗಿಸುತ್ತಿದ್ದರು. ಅನಸ್(ರ) ವರದಿ ಮಾಡುತ್ತಾರೆ, “ಪ್ರವಾದಿ(ಸ) ಜನರ ಪೈಕಿ ಅತೀ ಹೆಚ್ಚು ಹಾಸ್ಯ ಪ್ರಜ್ಞೆ ಇರುವ ವ್ಯಕ್ತಿಯಾಗಿದ್ದರು.”
ಇಂದಿನ ಪತಿಯಂದಿರು ಇದಕ್ಕೆ ನೇರ ವಿರುದ್ಧವಾಗಿದ್ದಾರೆ. ಪತಿಯು ಮನೆಯಲ್ಲಿದ್ದರೆ ಪತ್ನಿಗೆ ಕಿರಿಕಿರಿಯಾಗುತ್ತದೆ. “ಈ ಮನುಷ್ಯ ಒಮ್ಮೆ ಹೊರಗಡೆ ಹೋಗಿದ್ದರೆ” ಎಂದು ಪತ್ನಿಯು ಬಯಸುವ ವಾತಾವರಣವು ಸೃಷ್ಟಿಯಾಗಿದೆ. ಇದು ಸೃಷ್ಟಿಯಾದದ್ದಲ್ಲ. ಪತಿಯರೇ ಸೃಷ್ಟಿ ಮಾಡಿದ್ದು. ಇಂತಹ ಒಂದು ಮನಸ್ಥಿತಿಯು ದಾಂಪತ್ಯದಲ್ಲಿ ಸೃಷ್ಟಿಯಾದರೆ ಆ ದಾಂಪತ್ಯ ಜೀವನಕ್ಕೆ ಉಳಿಗಾಲವಿದೆಯೇ?
ಆಯಿಶಾರೊಂದಿಗೆ(ರ) ಪ್ರವಾದಿ(ಸ) ಹಲವು ವೇಳೆ ಓಟದ ಸ್ಪರ್ಧೆ ನಡೆಸುತ್ತಿದ್ದರು. ಕೆಲವು ವೇಳೆ ಪ್ರವಾದಿಯವರು(ಸ) ವಿಜಯಿಯಾಗುತ್ತಿದ್ದರು. ಇನ್ನು ಕೆಲವು ವೇಳೆ ಆಯಿಶಾರು(ರ). ಆಯಿಶಾ(ರ) ಕೆಲವು ವರ್ಷಗಳ ಬಳಿಕ ಈ ಘಟನೆಯನ್ನೆಲ್ಲಾ ವಿವರಿಸುತ್ತಾ ಈ ರೀತಿ ಬೋಧಿಸಿದ್ದಾರೆ, “ಆದ್ದರಿಂದ ಕೌಮಾರ ಪ್ರಾಯದವರೂ ವಿನೋದ ಪ್ರಿಯರೂ ಆದ ಸ್ತ್ರೀಯರಿಗೆ ಅರ್ಹವಾದದ್ದನ್ನು ನೀವು ನೀಡಬೇಕು.”
ಆಟಗಳಲ್ಲೂ ವಿನೋದಗಳಲ್ಲೂ ಭಾಗವಹಿಸಲು ಪತ್ನಿಯರಿಗೆ ಅನುಮತಿ ನೀಡುವುದು ದಾಂಪತ್ಯದ ಭದ್ರತೆ ಹಾಗೂ ಬಾಂಧವ್ಯವನ್ನು ಉಳಿಸಿಕೊಳ್ಳಲು ಸಹಾಯಕವಾಗಿದೆ. ಉಮರ್(ರ) ಒಮ್ಮೆ ಹೇಳಿದರು, “ಪುರುಷನು ತನ್ನ ಪತ್ನಿ-ಮಕ್ಕಳ ಬಳಿಗೆ ಹೋದರೆ ಒಂದು ಮಗುವಿನಂತೆ ವರ್ತಿಸಲಿ. ಆದರೆ ಅವನ ಬಳಿಯಿರುವ ಪೌರುಷವು ಏನೆಂದು ಅವರು ತಿಳಿಯಬಯಸುವುದಾದರೆ ಅವನು ಓರ್ವ ಪುರುಷನಾಗಿ ಬದಲಾಗಲಿ.”
ಪ್ರವಾದಿ(ಸ) ತನ್ನನ್ನು ವಿಮರ್ಶಿಸುವ ಮತ್ತು ವಿರೋಧಿಸುವ ಸ್ವಾತಂತ್ರ್ಯವನ್ನು ಪತ್ನಿಯರಿಗೆ ನೀಡಿದ್ದರು. ಎಷ್ಟೊಂದು ಉದಾತ್ತ ಮಾದರಿ, ಇಂದು ಈ ಕುರಿತು ಆಲೋಚಿಸಲೂ ಸಾಧ್ಯವಿಲ್ಲ. ಪತ್ನಿಗೆ ಪತಿಯ ಮುಂದೆ ಸ್ವರ ಎತ್ತುವಂತಿಲ್ಲ. ತನ್ನ ತಪ್ಪುಗಳನ್ನು ತಿದ್ದುವಂತಿಲ್ಲ. “ತಾನು ಮಾಡಿದ್ದೇ ಸರಿ, ತಾನು ಹೇಳಿದ್ದೇ ವೇದ” ಎಂಬ ಧೋರಣೆಯು ಹಲವು ಪುರುಷರಲ್ಲಿ ತಲೆ ಎತ್ತಿದೆ. ಸ್ವಂತ ತೀರ್ಮಾನ ಕೈಗೊಂಡರೆ ಅದನ್ನು ಅನುಸರಿಸಲು ಪತ್ನಿಯರಿಗೆ ನಿರ್ಬಂಧಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಒಂದೊಂದು ಆಯ್ಕೆಗಳಿರುತ್ತವೆ. ಎಲ್ಲರ ಮನಸ್ಸೂ ಒಂದೇ ತೆರನಾಗಿರುವುದಿಲ್ಲ. ಹಾಗಿರುವಾಗ ಪುರುಷನ ತೀರ್ಮಾನಗಳನ್ನು ಬಲಾತ್ಕಾರವಾಗಿ ಪತ್ನಿಯ ಮೇಲೆ ಜಪಹೊರಿಸುವುದು ಎಷ್ಟರ ಮಟ್ಟಿಗೆ ಸರಿ. ಪತ್ನಿಗೂ ಒಂದು ಮನಸ್ಸಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಬೇಕು.
ಒಮ್ಮೆ ಆಯಿಶಾರ(ರ) ಮತ್ತು ಪ್ರವಾದಿಯವರ(ಸ) ಮಧ್ಯೆ ಯಾವುದೋ ಒಂದು ವಿಚಾರದಲ್ಲಿ ವಿರಸ ಉಂಟಾಯಿತು. ಆಗ ಆಯಿಶಾ(ರ) ಹೇಳಿದರು, “ಅಲ್ಲಾಹನ ಪ್ರವಾದಿ ಎಂದು ವಾದಿಸುವ ವ್ಯಕ್ತಿ ನೀವಾ?” ಈ ತರದ ಒಂದು ಪ್ರಶ್ನೆ ಇಂದಿನ ಪತಿಯರಲ್ಲಿ ಕೇಳಿದ್ದರೆ ಅಲ್ಲಿನ ವಾತಾವರಣವೇ ಯುದ್ಧಮಯವಾಗುತ್ತಿತ್ತು. ಆದರೆ ಪ್ರವಾದಿ(ಸ) ಕೇವಲ ಒಂದು ಮುಗುಳ್ನಗೆ ಮಾತ್ರ ಬೀರಿದ್ದರು.
ನಾವು ಕ್ಷುಲ್ಲಕವೆಂದು ಭಾವಿಸುವ ಹಲವಾರು ವಿಚಾರಗಳಿಗೆ ದಾಂಪತ್ಯದಲ್ಲಿ ಮಹತ್ವವಿದೆ. ಪ್ರೀತಿಯಿಂದ ಕೂಡಿದ ಕುಡಿನೋಟ, ಕನಿಕರದಿಂದ ತಲೆ ಸವರುವುದು, ಮನಸ್ಸು ಪುಳಕಗೊಳ್ಳುವಂತಹ ಮಾತುಗಳು ಮೊದಲಾದವುಗಳೆಲ್ಲಾ ದಾಂಪತ್ಯ ಜೀವನದಲ್ಲಿ ಪ್ರಭಾವ ಬೀರುವವುಗಳಾಗಿವೆ. ಒಂದು ನೋಟ, ಒಂದು ಸ್ಪರ್ಶ, ಒಂದು ಉತ್ತಮ ಮಾತು ಇವುಗಳ ಕೊರತೆಯು ಕೆಲವು ವೇಳೆ ಸಮಸ್ಯೆಯ ಸೃಷ್ಟಿಗೆ ಕಾರಣವಾಗಿರಬಹುದು. ಒಂದು ಮಂದಹಾಸವು ಎಲ್ಲಾ ಸಮಸ್ಯೆಗಳನ್ನು ಮರೆಯುವಂತೆ ಮಾಡುವ ಶಕ್ತಿ ಹೊಂದಿದೆ. ಪತಿ-ಪತ್ನಿಯರ ನಡುವಿನ ನೋಟವು ಅಲ್ಲಾಹನ ಕರುಣೆಯ ಭಾಗವಾಗಿ ಪ್ರವಾದಿ(ಸ) ಬಣ್ಣಿಸಿದ್ದಾರೆ. ಆದ್ದರಿಂದ ದಾಂಪತ್ಯದ ಯಶಸ್ವಿಯು ನಮ್ಮ ಕೈಯಲ್ಲೇ ಇದೆ. ಅದನ್ನು ನಾವೇ ಪಡೆದುಕೊಳ್ಳಬೇಕಾಗಿದೆ. “ಪದಾರ್ಥದಲ್ಲಿ ಕೂದಲು” ಸಿಕ್ಕಿದರೆ ಅಂತಹ ಕ್ಷುಲ್ಲಕ ವಿಚಾರಗಳು ದಾಂಪತ್ಯ ಛಿದ್ರಗೊಳ್ಳುವುದಕ್ಕೆ ಕಾರಣವಾಗದಿರಲಿ. ದಾಂಪತ್ಯದಲ್ಲಿನ ಯಶಸ್ವಿಯೇ ಇಹಪರಗಳ ವಿಜಯವಾಗಿದೆ.

ಸೋಮವಾರ, ಸೆಪ್ಟೆಂಬರ್ 03, 2012

ಅನುಗ್ರಹಗಳಿಗೆ ಕೃತಘ್ನರಾಗುತ್ತೀರಾ?


 ಅಲ್ಲಾಹನು ನಮಗೆ ಲೆಕ್ಕವಿಲ್ಲದಷ್ಟು ಅನುಗ್ರಹಗಳನ್ನು ದಯಪಾಲಿಸಿದ್ದಾನೆ. ಲೋಕದ ವೈಭವವನ್ನು ನೋಡಲು ಕಣ್ಣುಗಳು, ಶಬ್ದ ತರಂಗಗಳನ್ನು ಆಲಿಸಲು ಕಿವಿಗಳು, ಜನರ ಮಧ್ಯೆ ಪರಸ್ಪರ ವಿಚಾರ ವಿನಿಮಯ ನಡೆಸಲು ನಾಲಗೆ, ವಸ್ತುಗಳನ್ನು ಹಿಡಿದುಕೊಳ್ಳಲು ಕೈಗಳು, ನಡೆದಾಡಲು ಕಾಲುಗಳು, ಆಲೋಚಿಸಲು ಬುದ್ಧಿ ಶಕ್ತಿ ಇವೆಲ್ಲವೂ ಅಲ್ಲಾಹನ ಅಪಾರ ಅನುಗ್ರಹಗಳ ಪೈಕಿ ಕೆಲವೊಂದಾಗಿವೆ. ಇವ್ಯಾವುದೂ ಕ್ಷುಲ್ಲಕ ವಿಚಾರಗಳಲ್ಲ. ಅಲ್ಲಾಹನು ನೀಡಿರುವ ಅನುಗ್ರಹಗಳನ್ನು ಎಣಿಸಲು ಅದು ನಿಮ್ಮಿಂದ ಸಾಧ್ಯವಿಲ್ಲ. ಇದು ಅಲ್ಲಾಹನೇ ಸ್ವತಃ ತಿಳಿಸಿರುವ ವಿಚಾರವಾಗಿದೆ. ಅಲ್ಲಾಹನು ನೀಡಿರುವ ಅನುಗ್ರಹಗಳನ್ನು ಅವನ ಆಜ್ಞೆ, ಆದೇಶಗಳನುಸಾರ ಬಳಸಿದರೆ ಅವು ಅನುಗ್ರಹವಾಗಿ ಉಳಿಯುತ್ತವೆ. ಬದಲಾಗಿ ಆ ಅನುಗ್ರಹಗಳನ್ನು ಸ್ವೇಚ್ಛೆಯಂತೆ ಅಲ್ಲಾಹನ ನಿಯಮಗಳನ್ನು ಉಲ್ಲಂಘಿಸಿ ಬಳಸಿದರೆ ಅದು ನಮ್ಮ ಪಾಲಿಗೆ ಪರೀಕ್ಷೆಯಾಗಿ ಬದಲಾಗುತ್ತವೆ.
ನಮಗೆ ಲಭಿಸುವ ಪ್ರತಿಯೊಂದು ಅನುಗ್ರಹದ ಕುರಿತು ನಾವು ನಾಳೆ ಪರಲೋಕದಲ್ಲಿ ಪ್ರಶ್ನಿಸಲ್ಪಡಲಿದ್ದೇವೆ. ಅನುಗ್ರಹಗಳ ಕುರಿತ ಪ್ರಶ್ನೆಗಳನ್ನು ಎದುರಿಸದೆ ಯಾರು ಕೂಡಾ ಒಂದಡಿ ಮುಂದೆ ಸಾಗಲಿಕ್ಕಿಲ್ಲ. ಭೂಮಿಯಲ್ಲಿ ಲಭಿಸಿದ ಅನುಗ್ರಹಗಳನ್ನು ಅಲ್ಲಾಹನ ಇಚ್ಛೆಗನುಸಾರವಾಗಿ ಬಳಸಿಕೊಂಡವನು ತನ್ನ ವಿಚಾರಣೆಯಲ್ಲಿ ಯಶಸ್ವಿಯಾಗುವನು ಇನ್ನು ಅದನ್ನು ಒಂದು ಪರೀಕ್ಷೆಯಾಗಿ ಪರಿವರ್ತಿಸಿದವನು ಹಲವು ಸಂಕಷ್ಟಗಳನ್ನು ಎದುರಿಸಬೇಕಾದೀತು. ಪ್ರವಾದಿಯವರು(ಸ) ಪ್ರತೀ ಸಂದರ್ಭಗಳಲ್ಲೂ ಅಲ್ಲಾಹನ ಅನುಗ್ರಹಗಳನ್ನು ಬಳಸುವಾಗ ಅವರಲ್ಲಿ ನಾಳೆ ಪರಲೋಕದಲ್ಲಿ ಈ ಅನುಗ್ರಹಗಳಿಗೆ ಸೂಕ್ತ ಉತ್ತರ ನೀಡಲಿಕ್ಕಿದೆ ಎಂಬ ಪ್ರಜ್ಞೆಯು ಜಾಗೃತವಾಗುತ್ತಿತ್ತು. ಅವರು ತಮ್ಮ ಅನುಯಾಯಿಗಳಿಗೂ ಅದೇ ಶಿಕ್ಷಣ ನೀಡಿದ್ದರು. ಆದರೆ ನಮ್ಮಲ್ಲಿ ಇಂದು ಅಂತಹ ಪ್ರಜ್ಞೆ ಅಸ್ತಂಗತವಾಗಿದೆ. ದಿನನಿತ್ಯ ಹಲವಾರು ಅನುಗ್ರಹಗಳನ್ನು ಬೇಕಾಬಿಟ್ಟಿಯಾಗಿ ನಾವು ಬಳಸುತ್ತಿದ್ದರೂ ನಾಳೆ ಅದಕ್ಕೆಲ್ಲಾ ಉತ್ತರಿಸಲಿಕ್ಕಿದೆ ಎಂಬ ಪ್ರಜ್ಞೆ ನಮ್ಮಲ್ಲಿ ಎಂದಾದರೂ ಮೂಡಿದೆಯೇ?
ಆರೋಗ್ಯವು ಅತ್ಯಂತ ಶ್ರೇಷ್ಠ ಅನುಗ್ರಹವಾಗಿದೆ. ಅವಯವಗಳ ರಚನೆ, ಜ್ಞಾನೇಂದ್ರಿಯಗಳ ವ್ಯವಸ್ಥೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಅನುಗ್ರಹಗಳನ್ನು ಋಜುಮಾರ್ಗದಲ್ಲಿ ವಿನಿಯೋಗಿಸಿ ಅದನ್ನು ನೀಡಿದಾತನಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಂದಿ ಈ ಎರಡು ಅನುಗ್ರಹಗಳಿಂದ ವಂಚಿತರಾಗಿರುತ್ತಾರೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಅವುಗಳ ಪೈಕಿ ಒಂದು ಆರೋಗ್ಯವಾಗಿದೆ.
ಅಲ್ಲಾಹನು ಹಲವರಿಗೆ ಉತ್ತಮ ಆರೋಗ್ಯವನ್ನು ದಯಪಾಲಿಸಿದ್ದರೂ ಅವರು ಹಲವು ಚಟಗಳನ್ನು ಮೈಗೂಡಿಸಿ ತಮ್ಮ ಆರೋಗ್ಯವನ್ನು ಹಾಳುಗೆಡಹುತ್ತಿದ್ದಾರೆ. ಮದ್ಯಪಾನ, ಮಾದಕ ವಸ್ತುಗಳ ಸೇವನೆಯಿಂದ ತಮ್ಮ ಉತ್ತಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಕ್ಷಣಿಕ ಸುಖದ ಲಾಲಸೆಗಾಗಿ ಮಹಾ ಅನುಗ್ರಹವೊಂದನ್ನು ಕೈಚೆಲ್ಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸೃಷ್ಟಿಕರ್ತನ ಕುರಿತು ಜ್ಞಾನದ ಕೊರತೆಯಾಗಿದೆ. ನಾಳೆ ಅಲ್ಲಾಹನ ಮುಂದೆ ಆರೋಗ್ಯವೆಂಬ ಅನುಗ್ರಹದ ಕುರಿತು ವರದಿ ಒಪ್ಪಿಸಲಿಕ್ಕಿದೆ ಎಂಬ ಪ್ರಜ್ಞೆಯು ಮನಸ್ಸಲ್ಲಿದ್ದರೆ ಅವರು ಆರೋಗ್ಯವನ್ನು ದೇವ ಮಾರ್ಗಕ್ಕಾಗಿಯೇ ಮುಡಿಪಾಗಿರಿಸುತ್ತಿದ್ದರು.
ನಮಗೆ ಲಭಿಸಿರುವ ಆರೋಗ್ಯದ ಬೆಲೆ ತಿಳಿಯಬೇಕಾದರೆ ರೋಗ ಪೀಡಿತರನ್ನು ಸಂದರ್ಶಿಸಬೇಕು. ಕಣ್ಣಿನ ಬೆಲೆ ತಿಳಿಯಬೇಕಾದರೆ ಕುರುಡನ ಪರದಾಟನ್ನು ನೋಡಿದರೆ ಸಾಕು. ಬುದ್ಧಿಶಕ್ತಿಯ ಬೆಲೆ ಅರಿಯಬೇಕಾದರೆ ಬುದ್ಧಿಮಾಂದ್ಯನ ವರ್ತನೆಗಳನ್ನು ಗಮನಿಸಿದರೆ ಮನದಟ್ಟಾಗುತ್ತದೆ. ನಗರದ ಆಸ್ಪತ್ರೆಗಳಿಗೆ ನೀವು ಒಮ್ಮೆ ಭೇಟಿ ನೀಡಿದರೆ, ಅಲ್ಲಾಹನು ನಮಗೆ ದಯಪಾಲಿಸಿರುವ ಈ ಆರೋಗ್ಯದ ಮೌಲ್ಯವು ಹಗಲಿನಂತೆ ವ್ಯಕ್ಯವಾಗುವುದು. ಕ್ಯಾನ್ಸರ್‍ನಂತಹ ಮಾರಕ ರೋಗಗಳಿಂದ ಬಳಲುತ್ತಿರುವವರು, ಪ್ರಾರ್ಥಮಿಕ ಆವಶ್ಯಕತೆಗಳ ಪೂರೈಕೆಗಾಗಿ ಇತರರನ್ನು ಆಶ್ರಯಿಸುವವರು, ಎದ್ದು ಸರಿಯಾಗಿ ನಡೆದಾಡಲಾಗದವರು, ನಿದ್ದೆಯಿಲ್ಲದೆ ರಾತ್ರಿಯಿಡಿ ಹಾಸಿಗೆಯಲ್ಲಿ ಹೊರಳಾಡುವವರು, ಮಾನಸಿಕ ರೋಗಗಳಿಂದ ನರಳುವವರು ಮೊದಲಾದವರೆಲ್ಲರೂ ನಮ್ಮ ಆರೋಗ್ಯದ ಬೆಲೆಯನ್ನು ನಮಗೆ ನೆನಪಿಸುತ್ತಿದ್ದಾರೆ.
ನಮ್ಮಲ್ಲಿರುವ ಸಂಪತ್ತು, ಪದವಿ, ಅಧಿಕಾರಗಳು ಆರೋಗ್ಯದ ಮುಂದೆ ಕ್ಷುಲ್ಲಕ ವಸ್ತುಗಳಾಗಿವೆ. ಅನಾರೋಗ್ಯ ಪೀಡಿತರಾದಾಗ ಇದು ಹೆಚ್ಚು ಖಾತ್ರಿಯಾಗುತ್ತದೆ. ಸಂಪತ್ತು, ಅಧಿಕಾರದ ಮೂಲಕ ದರ್ಪ ಪ್ರದರ್ಶಿಸಿದವರು ಕೊನೆಗೆ ತಮ್ಮ ಅನಾರೋಗ್ಯದ ಚಿಕಿತ್ಸೆಗಾಗಿ ತಮ್ಮ ಸಂಪತ್ತನ್ನೆಲ್ಲಾ ವ್ಯಯಿಸಿ ದಿವಾಳಿಯಾದವರು ಹಲವರಿದ್ದಾರೆ. ಆರೋಗ್ಯವಿದೆ ಎಂಬ ಹುಂಬ ಧೈರ್ಯದಿಂದ ಸಂಪತ್ತು, ಅಧಿಕಾರದಿಂದ ಅಹಂಕಾರಿಗಳಾದವರು ಆರೋಗ್ಯವನ್ನೇ ಕಳಕೊಂಡಾಗ ಪಶ್ಚಾತ್ತಾಪ ಪಡುತ್ತಾರೆ. ಆರೋಗ್ಯದ ಮರಳಿಕೆಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.
ಅಬ್ಬಾಸಿ ಖಲೀಫರಾದ ಹಾರೂನ್ ರಶೀದ್ ಒಮ್ಮೆ ಇಬ್ನು ಸಮಾಕ್ ಎಂಬ ವಿದ್ವಾಂಸರೊಂದಿಗೆ, “ನನಗೆ ಉಪದೇಶ ಮಾಡಿರಿ” ಎಂದು ಭಿನ್ನವಿರಿಸಿಕೊಂಡರು. ಆ ಸಂದರ್ಭದಲ್ಲಿ ಖಲೀಫರಿಗೆ ಕುಡಿಯಲಿಕ್ಕಾಗಿ ಸ್ವಲ್ಪ ನೀರು ತಂದಿಟ್ಟಿದ್ದರು. ಇಬ್ನು ಸಮಾಕ್ ಹೇಳಿದರು. “ಓ ಅವಿೂರುಲ್ ಮುಅïಮಿನೀನ್ ನಿಮಗೆ ಈ ನೀರನ್ನು ಕುಡಿಯಲು ಅಸಾಧ್ಯವಾದಂತಹ ಸ್ಥಿತಿ ಬಂದೊದಗಿದರೆ ತಮ್ಮ ಅಧಿಕಾರವನ್ನೆಲ್ಲಾ ಅದರ ಚಿಕಿತ್ಸೆಗಾಗಿ ವ್ಯಯಿಸಲಿಕ್ಕಿಲ್ಲವೇ?” ಖಲೀಫ ಹೌದೆಂದು ಉತ್ತರಿಸಿದರು. “ಇನ್ನು ಅದನ್ನು ಸೇವಿಸಿದ ಬಳಿಕ ಅದು ಹೊರ ಹೋಗದಿದ್ದರೆ ಆಗಲೂ ತಾವು ತಮ್ಮ ಅಧಿಕಾರವನ್ನೆಲ್ಲಾ ವಿನಿಯೋಗಿಸಲಿಕ್ಕಿಲ್ಲವೇ?” ಆಗಲೂ ಹೌದೆಂದು ಖಲೀಫರು ಉತ್ತರಿಸಿದರು. ಆಗ ಇಬ್ನು ಸಮಾಕ್ ಹೇಳಿದರು, “ನೀರು ಸೇವಿಸಲು ಮತ್ತು ಅದನ್ನು ವಿಸರ್ಜಿಸಲು ಅಸಾಧ್ಯವಾದುದಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲದ ನಿಮ್ಮ ಅಧಿಕಾರದ ಬೆಲೆಯಾದರೂ ಏನು?” ಇಲ್ಲಿ ರಾಷ್ಟ್ರ ಹಾಗೂ ಅಧಿಕಾರಕ್ಕಿಂತ ಹೆಚ್ಚಿನ ಬೆಲೆ ಆರೋಗ್ಯಕ್ಕಿದೆ ಎಂದು ಉಪದೇಶಿಸಲಾಗಿದೆ.
ನಾವು ಆರೋಗ್ಯವಂತರಾಗಿದ್ದರಿಂದ ನಮಗೆ ಆರೋಗ್ಯದ ಬೆಲೆ ತಿಳಿಯುತ್ತಿಲ್ಲ. ಅದರ ಮಹತ್ವವನ್ನು ಅರ್ಥಮಾಡಿಕೊಳ್ಳಲು ಯಾರೂ ಪ್ರಯತ್ನಿಸುತ್ತಿಲ್ಲ. ಒಂದು ವಸ್ತುವು ನಮ್ಮಲ್ಲಿರುವಾಗ ನಮಗೆ ಅದರ ಬೆಲೆ ತಿಳಿಯುವುದಿಲ್ಲ. ಅದು ಕಳೆದು ಹೋದಾಗ ಮಾತ್ರ ನಮಗೆ ಅದರ ಮೌಲ್ಯ ತಿಳಿಯುತ್ತದೆ. ಬಳಿಕ ಪಶ್ಚಾತ್ತಾಪಪಟ್ಟರೂ ಏನೂ ಪ್ರಯೋಜನವಾಗುವುದಿಲ್ಲ. ನಾಳೆ ಅನುಗ್ರಹದ ವಿಚಾರಣೆಯ ಕುರಿತು ಯಾರೂ ಸಂಶಯ ಪಡಬೇಕಾಗಿಲ್ಲ. ಅದು ನಡೆದೇ ತೀರುವುದು.
ಪ್ರವಾದಿಯವರು(ಸ) ಹೇಳಿದರು, “ನನ್ನ ಆತ್ಮ ಯಾರ ಕೈಯಲ್ಲಿದೆಯೋ, ಅವನಾಣೆ! ನಿಶ್ಚಯವಾಗಿಯೂ ಅಂತ್ಯದಿನದಲ್ಲಿ ಸತ್ಕರ್ಮಗಳೊಂದಿಗೆ ಓರ್ವನು ಬರುವನು. ಅವುಗಳನ್ನು ಒಂದು ಪರ್ವತದ ಮೇಲಿಟ್ಟರೆ ಆ ಪವರ್ತವು ಭಾರದಿಂದ ಕುಸಿಯುವುದು. ಆಗ ಅಲ್ಲಾಹನ ಅನುಗ್ರಹಗಳ ಪೈಕಿ ಒಂದು ಅನುಗ್ರಹವು ಎದ್ದು ನಿಲ್ಲುತ್ತದೆ. ಅಲ್ಲಾಹನ ಅನುಗ್ರಹವು ಅವನನ್ನು ಆವರಿಸದಿರುತ್ತಿದ್ದರೆ ಅದು ಅವನ ಸತ್ಕರ್ಮಗಳೆಲ್ಲವನ್ನು ನಾಶಪಡಿಸುತ್ತಿತ್ತು.” (ತ್ವಬ್ರಾನಿ)
ಇಸ್ಲಾಮ್ ಜೀವನವನ್ನೇ ಒಂದು ಒಂದು ಅನುಗ್ರಹವಾಗಿ ಕಾಣುತ್ತದೆ. ನಮಗೆ ನೀಡಲಾಗಿರುವ ಮನೆ, ರಾತ್ರಿ-ಹಗಲುಗಳ ಸೃಷ್ಟಿ, ಸಂಚಾರ ಸೌಕರ್ಯ ಇವೆಲ್ಲವೂ ಅಲ್ಲಾಹನ ಅನುಗ್ರಹಗಳ ಸಾಲಿಗೆ ಸೇರಿವೆ. ಇವುಗಳಿಗೆಲ್ಲಾ ಕೃತಜ್ಞತೆ ಸಲ್ಲಿಸಲು ಅಲ್ಲಾಹನು ಹೇಳಿದ್ದಾನೆ. ಶ್ರೇಷ್ಠವಾದ ಈ ಜೀವನವು ಅಲ್ಲಾಹನ ವತಿಯಿಂದಿರುವ ಮಹಾ ಸೌಭಾಗ್ಯವಾಗಿದೆ. ಆದ್ದರಿಂದ ಅಲ್ಲಾಹನ ಹಕ್ಕುಗಳನ್ನು ಪೂರೈಸಬೇಕಾದುದೂ ಅತ್ಯಗತ್ಯವಾಗಿದೆ. ಅಲ್ಲಾಹನು ಹೇಳುತ್ತಾನೆ, “ನೀವು ಅಲ್ಲಾಹನನ್ನು ಹೇಗೆ ನಿರಾಕರಿಸುತ್ತೀರಿ? ನೀವಾದರೋ ನಿರ್ಜೀವಿಗಳಾಗಿದ್ದಿರಿ. ಅವನು ನಿಮಗೆ ಜೀವವಿತ್ತನು. ಇನ್ನು ಅವನೇ ನಿಮ್ಮ ಪ್ರಾಣ ತೆಗೆಯುವನು ಮತ್ತು ಅವನೇ ನಿಮಗೆ ಪುನರ್ಜೀವನ ನೀಡುವನು. ತರುವಾಯ ನಿಮಗೆ ಆತನೆಡೆಗೇ ಮರಳಿ ಹೋಗಬೇಕಾಗಿದೆ.”
ಅಲ್ಲಾಹನ ಅನುಗ್ರಹಗಳನ್ನು ಗುರುತಿಸಲಿಕ್ಕಾಗಿ ಅವನು ನಮಗೆ ಪಂಚೇಂದ್ರಿಯಗಳನ್ನು ನೀಡಿದ್ದಾನೆ. ಈ ಮೂಲಕ ನಾವು ಜಗದ ಸೌಂದರ್ಯವನ್ನು ಸವಿಯುತ್ತೇವೆ. ಜೀವನದ ಎಲ್ಲಾ ರಂಗಗಳಲ್ಲೂ ಅದು ವ್ಯಾಪಿಸುವಾಗ ಅದನ್ನು ನೀಡಿದಾತನಿಗೆ ನಾವು ಕೃತಜ್ಞರಾಗಬೇಕಾಗಿದೆ. ಅಲ್ಲಾಹನು ಅನ್ನಹ್ಲ್ ಅಧ್ಯಾಯದ 78ನೇ ಸೂಕ್ತದಲ್ಲಿ ಹೇಳುತ್ತಾನೆ, “ಅಲ್ಲಾಹನು ನೀವು ಏನೂ ಅರಿಯದ ಸ್ಥಿತಿಯಲ್ಲಿ ನಿಮ್ಮನ್ನು ನಿಮ್ಮ ತಾಯಂದಿರ ಹೊಟ್ಟೆಗಳಿಂದ ಹೊರ ತಂದನು. ನೀವು ಕೃತಜ್ಞರಾಗಲಿಕ್ಕಾಗಿ ಅವನು ನಿಮಗೆ ಶ್ರವಣ ಶಕ್ತಿಯನ್ನೂ ದೃಷ್ಟಿಗಳನ್ನೂ ವಿಚಾರ ಮಾಡುವ ಮನಸ್ಸುಗಳನ್ನೂ ನೀಡಿದನು.”
ಆದ್ದರಿಂದ ಅನುಗ್ರಹಗಳನ್ನು ನೀಡಿದಾತನ ಆರಾಧನೆಯು ನಮ್ಮ ನಿಮ್ಮೆಲ್ಲರ ಕಡ್ಡಾಯ ಕರ್ತವ್ಯವಾಗಿದೆ. ಇಷ್ಟೆಲ್ಲಾ ಅನುಗ್ರಹಗಳನ್ನು ಅಲ್ಲಾಹನು ನೀಡಿದ್ದರೂ ಅವನಿಗೆ ಕೃತಜ್ಞತೆ ಸಲ್ಲಿಸುವಲ್ಲಿ ನಾವು ಜಿಪುಣರಾಗುತ್ತಿದ್ದೇವೆ ಅಥವಾ ಆ ಕಡೆಗೆ ಗಮನಹರಿಸುತ್ತಿಲ್ಲ. ನಾಳೆ ಅಲ್ಲಾಹನು ಅನುಗ್ರಹಗಳ ಕುರಿತು ವಿಚಾರಿಸುವಾಗ ಸಮರ್ಪಕ ಉತ್ತರ ನೀಡಲು ನಮಗೆ ಸಾಧ್ಯವಾಗಬೇಕು. ಅವುಗಳನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸುವವರ ಪಟ್ಟಿಯಲ್ಲಿ ಸೇರಲು ನಮಗೆ ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ನಾವು ಸಾಧ್ಯವಾದಷ್ಟು ಪ್ರಯತ್ನ ನಡೆಸಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.


ಮಂಗಳವಾರ, ಜುಲೈ 10, 2012

ಆತ್ಮಾವಲೋಕನಕ್ಕೆ ಸಿದ್ಧರಾಗೋಣ


ಓರ್ವ ವಿಶ್ವಾಸಿಯು ಹೃದಯದಲ್ಲಿ ಸದಾ ದೇವಭಯವನ್ನಿರಿಸುತ್ತಾನೆ. ಅವನು ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ವ್ಯವಹಾರಗಳಲ್ಲೂ ದೇವನಿಗೆ ಪ್ರಥಮ ಆದ್ಯತೆ ನೀಡುತ್ತಾನೆ. ಪ್ರತೀ ಕೆಲಸಕ್ಕೆ ಮುಂದಾಗುವಾಗಲೂ ಅವನು ದೇವನ ಆಜ್ಞೆ ಏನು ಎಂಬುದನ್ನು ತಿಳಿದ ಬಳಿಕವಷ್ಟೇ ಅದನ್ನು ಮಾಡುತ್ತಾನೆ. ಅವನು ತನಗೂ ದೇವನಿಗೂ ಮಧ್ಯೆ ಇರುವ ಅಂತರವನ್ನು ಕಡಿಮೆಗೊಳಿಸಲು ಬೇಕಾಗುವ ಎಲ್ಲವನ್ನೂ ಮಾಡುತ್ತಾನೆ. ನಮಾಝಿನಲ್ಲಿ ಕೈ ಕಟ್ಟಿದ ಬಳಿಕ “ನನ್ನ ನಮಾಝ್, ನನ್ನ ಬಲಿಕರ್ಮಗಳು, ನನ್ನ ಜೀವನ ಮತ್ತು ನನ್ನ ಮರಣವು ಸರ್ವಲೋಕಗಳ ಪರಿಪಾಲಕನಿಗಾಗಿದೆ” ಎಂದು ಮನಸರಿತು ಹೇಳುತ್ತಾನೆ. ಆದರೆ ಇದು ಕೇವಲ ನಮಾಝಿಗೆ ಮಾತ್ರ ಸೀಮಿತಗೊಳ್ಳದೆ ಅವನ ಜೀವನದ ಎಲ್ಲಾ ರಂಗಗಳಲ್ಲೂ ಗೋಚರವಾಗುತ್ತದೆ. 
ವಿಶ್ವಾಸಿಯು ದೇವನ ಕರುಣೆಯ ಕುರಿತು ಹೆಚ್ಚು ನಿರೀಕ್ಷೆಯಿರಿಸಿರುತ್ತಾನೆ. ಅದರೊಂದಿಗೆ ದೇವನ ಶಿಕ್ಷೆಯ ಕುರಿತು ಸದಾ ಚಿಂತಿತನಾಗಿರುತ್ತಾನೆ. ಹೃದಯವು ಅದರ ಕುರಿತು ಕಂಪಿಸುತ್ತಿರುತ್ತದೆ. ಆಯಿಶಾ(ರ) ವರದಿ ಮಾಡಿದ್ದಾರೆ. ಆಯಿಶಾ(ರ) ಪ್ರವಾದಿಯವರೊಂದಿಗೆ ಕೇಳಿದರು, “ಅಲ್ಲಾಹನ ಸಂದೇಶವಾಹಕರೇ “ತಮ್ಮ ಪ್ರಭುವಿನ ಕಡೆಗೆ ಮರಳಲಿಕ್ಕಿದೆಯೆಂಬ ಪ್ರಜ್ಞೆಯಿಂದ ಕಂಪಿಸುತ್ತಿರುವ ಹೃದಯಗಳಿರುವವರು” (ಅಲ್ ಮೂಮಿನೂನ್- 60) ಎಂದು ಕುರಾನ್ ಹೇಳಿರುವುದು, ವ್ಯಭಿಚಾರ, ಕಳ್ಳತನ, ಮದ್ಯಪಾನ ಮಾಡಿರುವ ವ್ಯಕ್ತಿಗಳ ಕುರಿತಲ್ಲವೇ? ಆಗ ಪ್ರವಾದಿಯವರು(ಸ) ಹೇಳಿದರು. “ಓ ಅಬೂಬಕ್ಕರ್ರ(ರ) ಪುತ್ರಿಯೇ ಅಲ್ಲ. ಇದು ಉಪವಾಸ ಆಚರಿಸುವ, ನಮಾಝ್ ನಿರ್ವಹಿಸುವ, ದಾನ-ಧರ್ಮ ಮಾಡುವ ವ್ಯಕ್ತಿಗಳ ಕುರಿತಾಗಿದೆ. ತನ್ನ ಕರ್ಮಗಳನ್ನು ಅಲ್ಲಾಹನು ಸ್ವೀಕರಿಸಲಿಕ್ಕಿಲ್ಲ ಎಂದು ಅವರು ಭಯಪಡುತ್ತಿರುವರು.”
ವಿಶ್ವಾಸಿಗೆ ತನ್ನ ಸೃಷ್ಟಿಕರ್ತನ ಮಹಿಮೆಯ ಕುರಿತು ಅಪಾರ ಜ್ಞಾನ  ಹೊಂದಿರುತ್ತಾನೆ. ದೇವನ ಮುಂದೆ ತನ್ನ ಕುಬ್ಜತನವನ್ನು ಮನಸಾರೆ ಒಪ್ಪಿಕೊಳ್ಳುತ್ತಾನೆ. ತನ್ನ ಜೀವನದ ಗುರಿಯ ಕುರಿತು ಪ್ರಜ್ಞಾವಂತನಾಗಿರುತ್ತಾನೆ. ಆ ಗುರಿಯೆಡೆಗೆ ಸಾಗಲಿಕ್ಕಾಗಿ ಎಲ್ಲಾ ರೀತಿಯ ಕಷ್ಟಗಳನ್ನು ಅನುಭವಿಸಲು ತಯಾರಾಗುತ್ತಾನೆ. ದೇವನ ಆಜ್ಞಾನುಸಾರ ಅವನು ಹಲವಾರು ಕರ್ಮಗಳನ್ನೆಸಗುತ್ತಾನೆ. ಜನರು ಆ ಕರ್ಮಗಳೆಲ್ಲವೂ ಮೌಲ್ಯಯುತವಾದುದೆಂದು ಒಪ್ಪಿಕೊಳ್ಳುತ್ತಾರೆ ಮತ್ತು ಅವನನ್ನು ಗೌರವಿಸುತ್ತಾರೆ. ಆದರೆ ಓರ್ವ ವಿಶ್ವಾಸಿಗೆ ಇವೆಲ್ಲವೂ ನಗಣ್ಯವಾಗಿದೆ. ಅಲ್ಲಾಹನ ಸಂಪ್ರೀತಿಗೆ ಪಾತ್ರವಾಗಲು, ಅವನ ಶಿಕ್ಷೆಯಿಂದ ಪಾರಾಗಲು ಜನರು ತನ್ನ ಬಗ್ಗೆ ಮಾಡುವ ಪ್ರಶಂಸೆಯು ಯಾವುದೇ ಪ್ರಯೋಜನ ನೀಡುವುದಿಲ್ಲ ಎಂದು ಅವನು ದೃಢವಾಗಿ ನಂಬುತ್ತಾನೆ. ತನ್ನ ಕರ್ಮಗಳು ತೋರಿಕೆಯಾಗಿ ಮಾರ್ಪಡುವುದೋ ಎಂಬ ಬಗ್ಗೆ ಸದಾ ಚಿಂತಿತನಾಗಿರುತ್ತಾನೆ. ತೋರಿಕೆಗಾಗಿ ಮಾಡುವ ಕರ್ಮವು ಅತ್ಯಂತ ಸಣ್ಣ ಶಿರ್ಕ್ ಆಗಿದೆಯಷ್ಟೇ. ಅಲ್ಲಾಹನು ನಮ್ಮ ಸೌಂದರ್ಯವನ್ನೊ ಸಂಪತ್ತನ್ನೋ ಪದವಿಗಳನ್ನೋ ನೋಡುವುದಿಲ್ಲ. ಬದಲಾಗಿ ನಮ್ಮ ಹೃದಯಕ್ಕೂ ಕರ್ಮಗಳಿಗೂ ನೋಡುತ್ತಾನೆ. ನಾವು ಎಷ್ಟು ಕರ್ಮಗಳನ್ನೆಸಗಿದ್ದೇವೆ ಎಂಬುದು ಮುಖ್ಯವಲ್ಲ. ಹೇಗೆ ಕರ್ಮಗಳನ್ನೆಸಗಿದ್ದೇವೆ ಎಂಬುದು ಮುಖ್ಯ. ಕರ್ಮಗಳ ಹಿಂದಿರುವ ಉದ್ದೇಶದ ಕಡೆಗೆ ಅಲ್ಲಾಹನು ನೋಡುತ್ತಾನೆ. ಆದ್ದರಿಂದ ವಿಶ್ವಾಸಿಯು ತನ್ನ ಕರ್ಮಗಳು ನಿಶ್ಫಲಗೊಳ್ಳುವುದೇ ಎಂಬ ಕುರಿತು ಸದಾ ಚಿಂತಿತನಾಗಿರುತ್ತಾನೆ.
ಕುದ್ಸಿಯಾದ ಹದೀಸ್ನಲ್ಲಿ ಹೀಗಿದೆ. “ಅಲ್ಲಾಹನು ಹೇಳುತ್ತಾನೆ. ನನ್ನ ಪ್ರತಾಪದ ಮೇಲಾಣೆ. ನನ್ನ ದಾಸರ ಮೇಲೆ ಎರಡು ಸಂದರ್ಭಗಳ ಭಯ ಹಾಗೂ ನಿರ್ಭಯವನ್ನು ಒಟ್ಟಿಗೆ ನೀಡಲಿಕ್ಕಿಲ್ಲ. ಇಹಲೋಕದಲ್ಲಿ ನನ್ನ ಭಯವಿರಿಸಿ ಜೀವಿಸಿದವನಿಗೆ ನಾಳೆ ಪರಲೋಕದಲ್ಲಿ ನಾನು ಅವನಿಗೆ ನಿರ್ಭಯ ನೀಡುವೆನು. ಇಹಲೋಕದಲ್ಲಿ ನನ್ನ ಭಯವಿಲ್ಲದೆ ಜೀವಿಸಿದವನಿಗೆ ನಾಳೆ ಪರಲೋಕದಲ್ಲಿ ನಾನು ಭಯವನ್ನು ನೀಡುವೆನು.” ಇನ್ನೊಂದು ಪ್ರವಾದಿ ವಚನವು ಹೀಗಿದೆ. “ಯಾವ ವಸ್ತುವಿನ ಬಗ್ಗೆ ಮನುಷ್ಯನು ಭಯ ಭೀತನಾಗಿರುತ್ತಾನೋ ಆ ವಸ್ತುವಿನಿಂದ ದೂರ ಸರಿಯಲು ಅವನು ಪ್ರಯತ್ನಿಸುತ್ತಾನೆ. ಆದರೆ ಅಲ್ಲಾಹನನ್ನು ಭಯಪಡುವವನು ಅವನಿಂದ ದೂರ ಸರಿಯುವುದಲ್ಲ. ಬದಲಾಗಿ ಅವನ ಬಳಿಗೆ ಓಡಿ ಹೋಗಲು ಬಯಸುತ್ತಾನೆ.”
ಅಲ್ಲಾಹನ ಕುರಿತು ಭಯವೂ, ನಿರೀಕ್ಷೆಯೂ ಸದಾ ನಮ್ಮ ಮನಸ್ಸಿನಲ್ಲಿ ಜಾಗೃತವಾಗಿರಬೇಕು. ನಾವು ಅಲ್ಲಾಹನ ಸಂಪ್ರೀತಿಗಾಗಿ ಏನೆಲ್ಲಾ ಕಸರತ್ತು ನಡೆಸುತ್ತೇವೆ. ಭಯ ಭಕ್ತಿಯಿಂದ ನಮಾಝ್ ನಿರ್ವಹಿಸುತ್ತೇವೆ. ಕೊಡುಗೈ ದಾನಿ ಎಂದು ಜನರಾಡಿಕೊಳ್ಳುವಷ್ಟರ ಮಟ್ಟಿಗೆ ದಾನ-ಧರ್ಮ ನೀಡುತ್ತೇವೆ. ಆದರೆ ಅದರ ಮರುಕ್ಷಣದಲ್ಲೇ ಅವೆಲ್ಲವೂ ನಿಶ್ಫಲಗೊಳ್ಳುವಂತಹ, ನಾವು ಕ್ಷುಲ್ಲಕವೆಂದು ಭಾವಿಸುವ ತಪ್ಪುಗಳನ್ನು ಮಾಡಿ ಬಿಡುತ್ತೇವೆ. ಅಲ್ಲಾಹನ ಕರುಣೆಯ ಮೇಲೆ ಮಾತ್ರ ವಿಪರೀತ ನಿರೀಕ್ಷೆ ಇರಿಸಿ ತಪ್ಪುಗಳನ್ನೆಸಗುತ್ತಾ ಜೀವಿಸುವುದು ವಿಶ್ವಾಸಿಗಳ ಲಕ್ಷಣವಲ್ಲ.
ವಿಶ್ವಾಸಿಗಳು ಅಲ್ಲಾಹನ ಪ್ರೀತಿಗೆ ಪಾತ್ರರಾಗಲು ಸದಾ ಹಂಬಲಿಸುತ್ತಿರುತ್ತಾರೆ. ಅವರ ಇಹಲೋಕ ಜೀವನದ ಸರ್ವಸ್ವವು ಅಲ್ಲಾಹನ ಸಂಪ್ರೀತಿಯಗಳಿಯಾಗಿರುತ್ತದೆ. ಉಮರ್(ರ) ಹೇಳಿರುವರು. “ಆಕಾಶದಿಂದ “ಓ ಜನರೇ ನಿಮ್ಮಲ್ಲಿ ಇಂತಹ ವ್ಯಕ್ತಿಯ ಹೊರತು ಉಳಿದೆಲ್ಲರೂ ಸ್ವರ್ಗಕ್ಕೆ ಪ್ರವೇಶಿಸಿರಿ” ಎಂಬ ಕರೆ ಕೇಳಿದರೆ, ಸ್ವರ್ಗಕ್ಕಿರುವ ಗುಂಪಿನಿಂದ ಕೈಬಿಡಲ್ಪಟ್ಟ ವ್ಯಕ್ತಿ ನಾನಾಗಿರಬಹುದೇ ಎಂದು ನಾನು ಭಯಪಡುತ್ತೇವೆ. ಅದೇ ರೀತಿ “ಓ ಜನರೇ ನಿಮ್ಮಲ್ಲಿ ಇಂತಹ ವ್ಯಕ್ತಿಯ ಹೊರತು ಉಳಿ ಕೆÉೀಳಿದರೆ ಆ ಕೈ ಬಿಡಲ್ಪಟ್ಟ ವ್ಯಕ್ತಿ ನಾನಾಗಿರಬೇಕು ಎಂದು ನಿರೀಕ್ಷೆ ಇರಿಸುತ್ತೇನೆ.”
ಆದ್ದರಿಂದ ನಾವು ನಮ್ಮ ಜೀವನದ ಕಡೆಗೊಮ್ಮೆ ಕಣ್ಣೋಡಿಸಬೇಕಾಗಿದೆ. ನಾವು ಎಸಗುವ ಕರ್ಮಗಳು ಜನರ ಪ್ರಶಂಸೆ ಸಂಪಾದಿಸುವುದಕ್ಕೋಸ್ಕರವಾದರೆ ಅಂತಹ ಕರ್ಮಗಳಿಂದ ಯಾವುದೇ ಪ್ರಯೋಜನವಿಲ್ಲ. ಮಾತ್ರವಲ್ಲ ಅಂಥ ಕರ್ಮಗಳ ಹೆಸರಿನಲ್ಲಿ ಶಿಕ್ಷೆಗೂ ಗುರಿಯಾಗಬಹುದು. ಉಮರ್(ರ) ಹೇಳಿರುವರು, “ನಾವು ವಿಚಾರಣೆಗೆ ಗುರಿಯಾಗುವುದಕ್ಕಿಂತ ಮುಂಚೆಯೇ ನಾವು ಸ್ವತಃ ವಿಚಾರಣೆ ನಡೆಸಬೇಕು.” ಈ ನಿಟ್ಟಿನಲ್ಲಿ ನಮ್ಮ ಕರ್ಮಗಳ ಕುರಿತು ಆತ್ಮಾವಲೋಕನ ನಡೆಸಬೇಕಾಗಿದೆ. ಸತ್ಕರ್ಮಗಳನ್ನು ಮಾಡಿ ಆ ಸತ್ಕರ್ಮಗಳು ನಿಶ್ಪ್ರಯೋಜಕವಾಗುವ ಹತಭಾಗ್ಯರ ಗುಂಪಿಗೆ ಸೇರದಂತೆ ನಾವು ಸದಾ ಜಾಗೃತರಾಗಬೇಕಾಗಿದೆ. ಅದಕ್ಕಾಗಿ ಸರ್ವಲೋಕಗಳ ಪರಿಪಾಲಕರು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಸೋಮವಾರ, ಜುಲೈ 02, 2012

ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕೇ?


ಅಲ್ಲಾಹನೊಂದಿಗೆ ಪ್ರೀತಿ ಮತ್ತು ಸಹಸೃಷ್ಟಿಗಳೊಂದಿಗಿನ ಸೇವೆಯು ಇಸ್ಲಾಮಿನಲ್ಲಿ ಅತೀ ಹೆಚ್ಚು ಮಹತ್ವ ಇರುವ ಕರ್ಮಗಳಾಗಿವೆ. ಈ ಎರಡು ವಿಷಯಗಳು ಪರಸ್ಪರ ಪೂರಕವಾಗಿದೆ. ಅಲ್ಲಾಹನೊಂದಿಗಿರುವ ಪ್ರೀತಿ, ಇಷ್ಟಗಳು ಅವನ ಇತರ ಸೃಷ್ಟಿಜಾಲಗಳೊಂದಿಗಿರುವ ಕರುಣೆಗೂ ದಯೆಗೂ ನಾಂದಿಯಾಗುತ್ತವೆ. ಓರ್ವನು ತನ್ನ ಪ್ರಭುವಿನಿಂದ ದೂರ ಸರಿಯುತ್ತಿದ್ದಂತೆ ಇತರ ಸೃಷ್ಟಿಗಳಿಂದಲೂ ಅವನು ದೂರ ಸರಿಯುತ್ತಾನೆ. ಅವನು ಅಲ್ಲಾಹನ ಸಾಮಿಪ್ಯ ಗಳಿಸುತ್ತಾನೆಂದಾದರೆ ಇತರ ಸೃಷ್ಟಿಗಳಿಗೂ ಹತ್ತಿರವಾಗುತ್ತಾನೆ.
ಇಬ್ಬ್ನು ಉಮರ್(ರ) ವರದಿ ಮಾಡಿದ್ದಾರೆ. ಓರ್ವರು ಪ್ರವಾದಿಯವರೊಂದಿಗೆ(ಸ) ಕೇಳಿದರು “ಅಲ್ಲಾಹನ ಸಂದೇಶವಾಹಕರೇ. ಜನರ ಪೈಕಿ ಅಲ್ಲಾಹನಿಗೆ ಹೆಚ್ಚು ಇಷ್ಟವಿರುವವರು ಯಾರು? ಅಲ್ಲಾಹನಿಗೆ ಅತ್ಯಂತ ಹೆಚ್ಚು ಇಷ್ಟ ಇರುವ ಕೆಲಸ ಯಾವುದು?” ಆಗ ಪ್ರವಾದಿ(ಸ) ಹೇಳಿದರು, “ಅಲ್ಲಾಹನಿಗೆ ಹೆಚ್ಚು ಪ್ರೀತಿ ಪಾತ್ರರು ಜನರಿಗೆ ಹೆಚ್ಚು ಉಪಕಾರ ಮಾಡುವವರಾಗಿದ್ದಾರೆ. ಅಲ್ಲಾಹನಿಗೆ ಹೆಚ್ಚು ಇಷ್ಟ ಇರುವ ಕೆಲಸ ಓರ್ವ ಮುಸ್ಲಿಮನಿಗೆ ನಿನ್ನ ಮೂಲಕ ಲಭಿಸುವ ಸಂತೋಷವಾಗಿದೆ. ಅಲ್ಲದಿದ್ದರೆ ಅವನ ಒಂದು ಸಂಕಷ್ಟವನ್ನು ಪರಿಹರಿಸುವುದು ಅಥವಾ ಸಾಲ ಸಂದಾಯ ಮಾಡುವುದಾಗಿದೆ. ಅದೂ ಅಲ್ಲದಿದ್ದರೆ ಅವನ ಹಸಿವನ್ನು ನೀಗಿಸುವುದಾಗಿದೆ. ನಿಶ್ಚಯವಾಗಿಯೂ, ಓರ್ವ ಸಹೋದರನೊಂದಿಗೆ ಅವನ ಅವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಸಂಚರಿಸಿದರೆ ಈ ಮಸೀದಿಯಲ್ಲಿ (ಮಸ್ಜಿದುನ್ನಬವಿ) ಒಂದು ತಿಂಗಳು ಪೂರ್ತಿಯಾಗಿ ಇಅïತಿಕಾಫ್ ನಿರ್ವಹಿಸುವುದಕ್ಕಿಂತ ಹೆಚ್ಚು ನನಗೆ ಪ್ರಿಯವಾಗಿದೆ. ಓರ್ವನು ತನ್ನ ಕೋಪವನ್ನು ತಡೆದಿರಿಸಿದರೆ ಅಲ್ಲಾಹನು ಅವನ ನ್ಯೂನತೆಗಳನ್ನು ಮರೆಸುವನು. ಬಯಸಿದ್ದನ್ನು ಮಾಡಿಬಿಡುವ ಸಾಮಥ್ರ್ಯವಿದ್ದೂ ತನ್ನ ದ್ವೇಷವನ್ನು ತಡೆದಿರಿಸಿದವನ ಹೃದಯದಲ್ಲಿ ಅಲ್ಲಾಹನು ಅಂತ್ಯದಿನದಲ್ಲಿ ನಿರೀಕ್ಷೆಗಳನ್ನು ತುಂಬುವನು. ತನ್ನ ಸಹೋದರನೊಂದಿಗೆ ಸಂಚರಿಸಿ ಅವನ ಅವಶ್ಯಕತೆಗಳನ್ನು ಪೂರೈಸಿಕೊಟ್ಟವನ ಪಾದಗಳನ್ನು ಎಲ್ಲಾ ಪಾದಗಳು ಜಾರಿಬೀಳುವ ದಿನದಲ್ಲೂ ಅವುಗಳನ್ನು ಸುದೃಡವಾಗಿ ನಿಲ್ಲಿಸುವನು.”
ಇಸ್ಲಾಮಿನ ದೃಷ್ಟಿಯಲ್ಲಿ ಜನಸೇವೆ ಎಂಬುದು ಕೇವಲ ಬೌತಿಕ ಕರ್ಮವಲ್ಲ. ಅದು ತೌಹೀದ್ನ ಭಾಗವಾಗಿದೆ. ನಮಾಝ್, ಉಪವಾಸ, ಹಜ್ಜ್ ವೊದಲಾದವುಗಳಿಗೆ ಮಾತ್ರ ಇಸ್ಲಾಮ್ ಸೀಮಿತಗೊಂಡಿಲ್ಲ. ಬದಲಾಗಿ ಅದು ಮನುಷ್ಯನ ಬದುಕಿನ ಎಲ್ಲಾ ಸ್ತರಗಳಿಗೂ ವ್ಯಾಪಿಸಿದೆ. ಜನರ ಸೇವೆ ಮಾಡುವುದು ಮತ್ತು ಅವರನ್ನು ಪ್ರೀತಿಸುವುದು ನೈಜವಾಗಿ ಅಲ್ಲಾಹನನ್ನು ಪ್ರೀತಿಸುವುದಕ್ಕೆ ಸಮಾನವಾಗಿದೆ. ಜನರೊಂದಿಗೆ ಕೆಟ್ಟದಾಗಿ ವರ್ತಿಸಿದವನು, ಜನರನ್ನು ದ್ವೇಷಿಸುವವನು ಅಲ್ಲಾಹನೊಂದಿಗೂ ವೈರ ಕೆಟ್ಟಿಕೊಳ್ಳುತ್ತಾನೆ.
ಅಬೂ ಹುರೈರ(ರ) ವರದಿ ಮಾಡಿದ ಒಂದು ಪ್ರವಾದಿ ವಚನವು ಹೀಗಿದೆ: ಅಂತ್ಯ ದಿನದಲ್ಲಿ ತನ್ನ ಮುಂದೆ ಬರುವ ದಾಸನೊಂದಿಗೆ ಅಲ್ಲಾಹನು ಪ್ರಶ್ನಿಸುವನು, “ಓ ಮಾನವಾ ನಾನು ರೋಗಿಯಾಗಿದ್ದ ಸಂದರ್ಭದಲ್ಲಿ ನೀನು ಯಾಕೆ ನನ್ನನ್ನು ಭೇಟಿ ಮಾಡಲಿಲ್ಲ?” ಆಗ ಮಾನವನು ಹೇಳುವನು, “ಓ ನನ್ನ ಪ್ರಭೂ, ನಾನು ನಿನ್ನನ್ನು ಭೇಟಿ ಮಾಡುವುದೇ? ನೀನು ಸರ್ವಲೋಕಗಳ ಪಾಲಕನಲ್ಲವೇ?” ಅಲ್ಲಾಹನು ಹೇಳುವನು, “ನನ್ನ ಇಂಥ ದಾಸನು ರೋಗಿಯಾದದ್ದು ನಿನಗೆ ತಿಳಿದಿಲ್ಲವೇ? ಆದರೂ ನೀನು ಯಾಕೆ ಅವನನ್ನು ಸಂದರ್ಶಿಸಿಲ್ಲ? ಅವರನ್ನು ನೀನು ಬೇಟಿಯಾಗುತ್ತಿದ್ದರೆ ಖಂಡಿತವಾಗಿಯೂ ಅವನ ಬಳಿ ನನ್ನನ್ನು ಕಾಣಬಹುದಾಗಿತ್ತು. ಓ ಮನುಜಾ! ನಾನು ನಿನ್ನೊಂದಿಗೆ ಆಹಾರ ಕೇಳಿದೆ. ಆದರೆ ನೀನು ನನಗೆ ಆಹಾರ ನೀಡಲಿಲ್ಲ.” ಆಗ ದಾಸನು ಹೇಳುವನು, “ಓ ಪ್ರಭೂ ನಾನು ನಿನಗೆ ತಿನ್ನಿಸುವುದೇ? ನೀನು ಸರ್ವಲೋಕದವರಿಗೂ ಆಹಾರ ನೀಡುವವನಲ್ಲವೇ?” ಆಗ ಅಲ್ಲಾಹನು ಹೇಳುವನು, “ಹೌದು ನನ್ನ ಇಂತಹ ದಾಸನು ನಿನ್ನೊಂದಿಗೆ ಆಹಾರ ಕೇಳಿದ. ಆದರೆ ನೀನು ಆಹಾರ ನೀಡಲಿಲ್ಲ. ಅವನಿಗೆ ನೀನು ನೀಡುತ್ತಿದ್ದರೆ, ಅದರ ಪ್ರತಿಫಲವನ್ನು ನಿನಗೆ ಇಲ್ಲಿ ಅನುಭವಿಸಬಹುದಾಗಿತ್ತು.. ಓ ಮನುಜಾ! ನಾನು ನಿನ್ನೊಂದಿಗೆ ನೀರನ್ನು ಕೇಳಿದೆ. ಆದರೆ ನೀನು ನೀಡಲಿಲ್ಲ. ಆಗ ದಾಸನು ಹೇಳುವನು, “ಪ್ರಭೂ, ನೀನು ಸರ್ವಲೋಕಗಳ ಪರಿಪಾಲಕನಾಗಿರುವಾಗ ನಿನಗೆ ನಾನು ನೀರು ನೀಡುವುದೇ?” ಆಗ ಅಲ್ಲಾಹನು ಹೇಳುವನು. “ಹೌದು. ನನ್ನ ಇಂತಿಂತಹ ದಾಸನು ನಿನ್ನೊಂದಿಗೆ ನೀರನ್ನು ಕೇಳಿದನು. ನೀನು ಅವನಿಗೆ ನೀರು ನೀಡಲಿಲ್ಲ. ಅಂದು ನೀನು ಅವನಿಗೆ ನೀರು ನೀಡುತ್ತಿದ್ದರೆ ಅದರ ಪ್ರತಿಫಲವನ್ನು ನಿನಗೆ ಇಲ್ಲಿ ಕಾಣಬಹುದಾಗಿತ್ತು.”
ಈ ಪ್ರವಾದಿ ವಚನವು ಜನರ ಸೇವೆಯ ಮಹತ್ವವನ್ನು ಬೆಟ್ಟು ಮಾಡುತ್ತದೆ. ಕಷ್ಟ ಅನುಭವಿಸುವವರಿಗೆ ನೆರವಾಗುವಾಗ ಮಾತ್ರ ಓರ್ವನಿಗೆ ಪೂರ್ಣ ವಿಶ್ವಾಸಿಯಾಗಲು ಸಾಧ್ಯ. ಪ್ರವಾದಿಯವರ(ಸ) ಜೀವನವನ್ನು ಅವಲೋಕಿಸಿದರೆ ಹಲವಾರು ಜನಸೇವೆಯ ಕೆಲಸಗಳನ್ನು ಕಾಣಲು ಸಾಧ್ಯ. ಜನರ ಸಮಸ್ಯೆಗಳಿಗೆ ಹೆಗಲು ಕೊಡದೆ ಪ್ರವಾದಿಯವರ(ಸ) ಅನುಯಾಯಿಗಳೆಂದು ಹೆಮ್ಮೆ ಪಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅಲ್ಲಾಹನ ಪ್ರೀತಿ ಸಂಪಾದನೆಗೆ ಜನರ ಸೇವೆಯು ಅನಿವಾರ್ಯವಾಗಿದೆ.
ಇನ್ನು ಜನರಿಗೆ ಉಪಕಾರ ಮಾಡಲು ಸಾಧ್ಯವಿಲ್ಲದವರು ಉಪದ್ರವ ನೀಡದಿರಲಾದರೂ ಪ್ರಯತ್ನಿಸಬೇಕು. ಅದು ಕೂಡಾ ಪ್ರತಿಫಲಾರ್ಹವಾಗಿದೆ. ಕೆಲವರೊಂದಿಗಿರುವ ಹಗೆತನವು ಅವರೊಂದಿಗೆ ಅಕ್ರಮವೆಸಗಲು ಪ್ರೇರೇಪಿಸುತ್ತದೆ. ವಿಶೇಷತಃ ಅವರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ, ಪ್ರವಾದಿಯವರು(ಸ) ಶತ್ರುಗಳ ಹಿತಾಕಾಂಕ್ಷೆ ಬಯಸುತ್ತಿದ್ದರೇ ಹೊರತು ಅವರ ಸರ್ವನಾಶಕ್ಕಾಗಿ ಬಯಸಲಿಲ್ಲ. ಮಕ್ಕಾ ವಿಜಯದ ವೇಳೆ ಬಂಧಿತರಾದವರನ್ನು ಕೊಂದು ಬಿಡುವ ಎಲ್ಲಾ ಅವಕಾಶಗಳೂ ಪ್ರವಾದಿಯವರಿಗಿತ್ತು. ಆದರೆ ಅವರು ಆ ಬಂಧಿತರಿಗೆ ಕ್ಷಮೆ ನೀಡಿ ಸ್ವತಂತ್ರಗೊಳಿಸಿದರು.
ಮಸೀದಿಯಲ್ಲಿ ಜಾಗರಣೆ ನಡೆಸುವುದು ಅತೀ ಹೆಚ್ಚು ಪ್ರತಿಫಲಾರ್ಹ ಕರ್ಮಗಳಲ್ಲೊಂದಾಗಿದೆ. ಅದು ಕೂಡಾ ಮಸ್ಜಿದುನ್ನಬವಿಯಲ್ಲಾದರೆ ಪುಣ್ಯದ ಪಟ್ಟು ಇನ್ನೂ ಹೆಚ್ಚಾಗುತ್ತದೆ. ಆದರೆ ಪ್ರವಾದಿಯವರು(ಸ) ಓರ್ವ ಸಹೋದರನ ಕಷ್ಟಕ್ಕೆ ನೆರವಾಗುವುದನ್ನು ಜಾಗರಣೆ ನಡೆಸುವುದಕ್ಕೆಂತ ದೊಡ್ಡ ಪದವಿಗೆ ಏರಿಸಿದ್ದಾರೆ. ಸಹಜೀವಿಗಳ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಮಸೀದಿಗಳಲ್ಲಿ ಕುಳಿತು ಆರಾಧನೆಗಳಲ್ಲಿ ನಿರತರಾಗುವುದನ್ನು ಇಸ್ಲಾಮ್ ಪ್ರೋತ್ಸಾಹಿಸಿಲ್ಲ. ರಾತ್ರಿಕಾಲದ ಪ್ರಾರ್ಥನೆಗಳೂ ಹಗಲಿನ ಕರ್ಮಗಳೂ ಓರ್ವನನ್ನು ನೈಜ ವಿಶ್ವಾಸಿಯಾಗಿ ಮಾರ್ಪಡಿಸುತ್ತದೆ. ಅವನ ಈಮಾನನ್ನು ಪರಿಪೂರ್ಣಗೊಳಿಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ಈಮಾನನ್ನು ನವೀಕರಿಸಬೇಕಾಗಿದೆ. ನೈಜ ವಿಶ್ವಾಸಿಗಳಾಗಿ ಬಾಳಲು ಇಸ್ಲಾಮಿನ ಆದೇಶ ನಿರ್ದೇಶನಗಳನ್ನು ಪಾಲಿಸಬೇಕಾಗಿದೆ. ಅದಕ್ಕೆ ಅಲ್ಲಾಹನು ಅನುಗ್ರಹಿಸಲಿ.

ಸೋಮವಾರ, ಜೂನ್ 25, 2012

ಗೆಳೆತನ ಸಂಪಾದಿಸುವಾಗ ಎಚ್ಚರ ವಹಿಸಿ


ಗೆಳೆತನವೆಂಬುದು ಮನುಷ್ಯನ ಜೀವನದ ಅನಿವಾರ್ಯ ಬೇಡಿಕೆಗಳಲ್ಲೊಂದಾಗಿದೆ. ಎಲ್ಲರೂ ಗೆಳೆಯರನ್ನು ಹೊಂದಿರುತ್ತಾರೆ. ಇನ್ನು ಗೆಳೆಯರಿಲ್ಲದವರು ಅವರ ಗಳಿಕೆಗಾಗಿ ಹಂಬಲಿಸುತ್ತಿರುತ್ತಾರೆ. ಯಾರಿಗೂ ಕೂಡಾ ಏಕಾಂಗಿಯಾಗಿ ಯಾರದೇ ಸಹಾಯವಿಲ್ಲದೇ ಜೀವಿಸಲು ಸಾಧ್ಯವಿಲ್ಲ. ಗೆಳೆತನವು ಮಾನವರ ಬದುಕಿನ ಮಾರ್ಗ ಸೂಚಿಯಾಗಿದೆ. ತಂದೆ ತಾಯಿಗಳೊಂದಿಗೆ ಹೇಳಲು ಸಾಧ್ಯವಿಲ್ಲದ್ದನ್ನೂ ನಾವು ಗೆಳೆಯರೊಂದಿಗೆ ಹಂಚಿಕೊಳ್ಳುತ್ತೇವೆ. ಅದು ಬದುಕಿನ ಮೇಲೆ ಹಲವಾರು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಓರ್ವನ ಸ್ವಭಾವ ಹಾಗೂ ಚಾರಿತ್ರ್ಯ ನಿರ್ಮಾಣದ ಮೇಲೆ ಗೆಳೆತನವು ನಿರ್ವಹಿಸುವ ಪಾತ್ರವು ಸಣ್ಣದಲ್ಲ. ಓರ್ವ ವ್ಯಕ್ತಿಯ ವ್ಯಕ್ತಿತ್ವವು ಅವನ ಗೆಳೆಯರಿಗೆ ಹೊಂದಿಕೊಂಡಿರುತ್ತದೆ. ಉತ್ತಮ ಗೆಳೆಯರನ್ನು ಹೊಂದಿದವನ ಸ್ವಭಾವ, ವರ್ತನೆಗಳು ಯಾವಾಗಲೂ ಉತ್ತಮವಾಗಿಯೇ ಇರುತ್ತದೆ. ಇನ್ನು ಕೆಟ್ಟಗೆಳೆಯರಿದ್ದರೆ ಅದರ ಪರಿಣಾಮವು ಅವರಲ್ಲಿ ಖಂಡಿತವಾಗಿಯೂ ಗೋಚರವಾಗುತ್ತದೆ. ಉತ್ತಮ ಹಾಗೂ ಕೆಟ್ಟ ಗೆಳೆಯರ ಕುರಿತು ಪ್ರವಾದಿ(ಸ) ಹೀಗೆ ಹೇಳಿದ್ದಾರೆ.
ಅಬೂ ಮೂಸಲ್ ಅಶ್ಅರಿ(ರ) ವರದಿ ಮಾಡಿದ್ದಾರೆ. ಪ್ರವಾದಿ(ಸ) ಹೇಳಿದರು. “ಉತ್ತಮ ಹಾಗೂ ಕೆಟ್ಟ ಗೆಳೆಯರ ಉಪಮೆಯು ಕಸ್ತೂರಿ ಹೊರುವವನು ಮತ್ತು ಒಲೆಗೆ ಊದುವವನಂತಾಗಿದೆ. ಕಸ್ತೂರಿ ಹೊರುವವನು ಅದರಿಂದ ನಿನಗೆ ಏನಾದರೂ ನೀಡಬಹುದು. ಇಲ್ಲದಿದ್ದರೆ ನೀನು ಅವನಿಂದ ಹಣ ನೀಡಿ ಖರೀದಿಸಬಹುದು. ಅದೂ ಅಲ್ಲದಿದ್ದರೆ ಅದರ ಸುವಾಸನೆಯನ್ನಾದರೂ ಸವಿಯಬಹುದು. ಇನ್ನು ಒಲೆಯಲ್ಲಿ ಊದುವವನು ಒಂದೋ ನಿನ್ನ ಬಟ್ಟೆಯನ್ನು ಸುಟ್ಟು ಬಿಡಬಹುದು. ಇಲ್ಲದಿದ್ದರೆ ದುರ್ಗಂಧವನ್ನು ನೀನು ಅನುಭವಿಸ ಬೇಕಾಗುವುದು.” ಇದು ಬಹಳ ಉತ್ತಮವಾದ ಉದಾಹರಣೆಯಾಗಿದೆ. ಉತ್ತಮ ಗೆಳೆಯನನ್ನು ಪ್ರವಾದಿಯವರು ಕಸ್ತೂರಿ ಹೊರುವವನಿಗೆ ಹೋಲಿಸಿದ್ದಾರೆ. ಕಸ್ತೂರಿ ಹೊರುವವನನ್ನು ಎಲ್ಲರೂ ಇಷ್ಟ ಪಡುತ್ತಾರೆ. ಯಾಕೆಂದರೆ ಅವನ ಬಳಿ ಹೋದರೆ ಉತ್ತಮ ಪರಿಮಳ ಲಭಿಸುತ್ತದೆ. ಮನಸ್ಸಿಗೆ ಆಹ್ಲಾದವಾಗುತ್ತದೆ. ಆದರೆ ಒಲೆಗೆ ಊದುವವನ ಸ್ಥಿತಿಯು ಇದಕ್ಕೆ ವಿರುದ್ಧವಾಗಿರುತ್ತದೆ. ಕಿಡಿಗಳು ಅಲ್ಲಲ್ಲ್ಲಿ ಹಾರುತ್ತಿರುತ್ತವೆ. ಬಳಿ ಹೋದವರ ಬಟ್ಟೆ ಅಥವಾ ಶರೀರ ಸುಡುವ ಸಾಧ್ಯತೆ ಇದೆ. ಆದ್ದರಿಂದ ಯಾರು ಕೂಡಾ ಅವನ ಬಳಿ ಹೋಗಲು ಇಷ್ಟ ಪಡುವುದಿಲ್ಲ.
ನಾವು ನಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಉತ್ತಮ ಗೆಳೆಯರು ನೆರವಾಗುತ್ತಾರೆ. ಸಚ್ಚಾರಿತ್ರ್ಯದಿಂದ ತುಂಬಿದ ಅವರ ಜೀವನವು ಇತರರಿಗೆ ದಾರಿ ದೀಪವಾಗುತ್ತದೆ. ಅಂತಹ ವ್ಯಕ್ತಿಗಳೊಂದಿಗೆ ಗೆಳೆತನ ಬೆಳೆಸಲು ಎಲ್ಲರೂ ಮುಂದಾಗುತ್ತಾರೆ. ಉತ್ತಮ ಗೆಳೆಯರ ಕುರಿತು ಪ್ರವಾದಿ(ಸ) ಹೀಗೆ ಹೇಳಿದರು, “ಎರಡು ಗೆಳೆಯರು ಎರಡು ಕೈಗಳಿದ್ದಂತೆ. ಒಂದು ಕೈಯು ಇನ್ನೊಂದು ಕೈಯನ್ನು ಶುಚಿಗೊಳಿಸಲು ಸದಾ ನೆರವಾಗುತ್ತಿರುತ್ತದೆ. ವಿಶ್ವಾಸಿಗಳಾದ ಇಬ್ಬರು ವ್ಯಕ್ತಿಗಳು ಪರಸ್ಪರ ಭೇಟಿಯಾದರೆ ಓರ್ವನಿಂದ ಇನ್ನೋರ್ವನಿಗೆ ಅಲ್ಲಾಹನು ಯಾವುದಾದರೂ ಒಳಿತನ್ನು ನೀಡದಿರಲಿಕ್ಕಿಲ್ಲ.”
ಕೆಟ್ಟ ಗೆಳೆಯರೊಂದಿಗೆ ಗೆಳೆತನ ಬೆಳೆಸಿದರೆ ಅದು ಜೀವನದ ಅಧಃಪತನಕ್ಕೆ ನಾಂದಿ ಹಾಡಿದಂತಾಗುತ್ತದೆ. ಅವರಿಂದ ಯಾವುದೇ ಉತ್ತಮ ಗುಣಗಳನ್ನು ನಿರೀಕ್ಷಿಸುವಂತಿಲ್ಲ. ಅವರೊಂದಿಗೆ ಗೆಳೆತನ ಬೆಳೆಸಿದರೆ ನಮ್ಮ ಜೀವನವು ಅವರ ಜೀವನದಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕುರಿತು ಪ್ರವಾದಿ(ಸ) ಎಚ್ಚರಿಕೆ ನೀಡಿದ್ದಾರೆ. ಅಬೂದರ್ರುಲ್ ಗಿಫಾರಿ(ರಿ) ವರದಿ ಮಾಡಿದ್ದಾರೆ. ಪ್ರವಾದಿ(ಸ) ಹೇಳಿದರು. “ಕೆಟ್ಟ ಗೆಳೆಯರಿಗಿಂತ ಉತ್ತಮವಾದದ್ದು ಏಕಾಂತತೆಯಾಗಿದೆ. ಏಕಾಂತತೆಗಿಂತ ಉತ್ತಮವಾದುದು ಸಚ್ಚರಿತರಾದ ಉತ್ತಮ ಗೆಳೆಯರಾಗಿದ್ದಾರೆ. ಉತ್ತಮ ಮಾತುಕತೆಯು ಮೌನಕ್ಕಿಂತ ಶ್ರೇಷ್ಠವಾದುದಾಗಿದೆ. ಮೌನವು ಕೆಟ್ಟ ಮಾತುಕತೆಗಿಂತ ಶ್ರೇಷ್ಠ ವಾದುದಾಗಿದೆ.”
ನಾವು ಗೆಳೆತನ ಬೆಳೆಸುವಾಗ ಜಾಗರೂಕರಾಗಿರಬೇಕು. ಕೆಟ್ಟ ಗೆಳೆಯರ ಸಂಪಾದನೆಯು ವಿನಾಶಕ್ಕೆ ಆಹ್ವಾನವೀಯುತ್ತದೆ. ಪ್ರವಾದಿ(ಸ) ಹೇಳಿದರು, “ಮನುಷ್ಯನು ಅವನ ಗೆಳೆಯನ ಧರ್ಮದಲ್ಲಾಗಿರುವನು. ಆದ್ದರಿಂದ ಯಾರೊಂದಿಗೆ ಗೆಳೆತನ ಬೆಳೆಸಬೇಕೆಂದು ಪ್ರತಿಯೊಬ್ಬನೂ ಆಲೋಚಿಸಿ ತೀರ್ಮಾನಿಸಲಿ.” ಗೆಳೆಯರನ್ನು ಸಂಪಾದಿಸುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಇಮಾಮ್ ಜಅïಫರ್ ಸ್ವಾದಿಕ್(ರ) ಹೀಗೆ ಹೇಳುತ್ತಾರೆ. “ಸುಳ್ಳು ಹೇಳುವವನು, ಪೆದ್ದ, ಜಿಪುಣ, ಹೇಡಿ, ದುರ್ವರ್ತನೆ ಹೊಂದಿದವನು ವೊದಲಾದವರೊಂದಿಗೆ ನೀನು ಗೆಳೆತನ ಬೆಳೆಸಬಾರದು. ಸುಳ್ಳು ಹೇಳುವವನು ನಿನ್ನನ್ನು ವಂಚನೆಯಲ್ಲಿ ಸಿಲುಕಿಸುವನು. ಅವನು ಮರುಭೂಮಿಯಲ್ಲಿರುವ ಮರೀಚಿಕೆಯಂತಿರುವನು. ಹತ್ತಿರ ಇರುವುದನ್ನು ದೂರವಾಗಿಯೂ ದೂರ ಇರುವುದನ್ನು ಹತ್ತಿರವಾಗಿಯೂ ಪ್ರದರ್ಶಿಸುವನು. ಪೆದ್ದನಿಂದ ನಿನಗೆ ಯಾವುದೇ ಉಪಕಾರ ಲಭಿಸಲಿಕ್ಕಿಲ್ಲ. ಅವನು ಉಪಕಾರ ಮಾಡಲು ಬಯಸಿದರೂ ಅದು ಉಪದ್ರವದಲ್ಲಿ ಕೊನೆಗೊಳ್ಳುತ್ತದೆ. ಜಿಪುಣನು, ನಿನಗೆ ಅವನ ಅಗತ್ಯ ಹೆಚ್ಚಿರುವಾಗ ಅವನು ನಿನ್ನೊಂದಿಗೆ ಸಂಬಂಧವನ್ನು ಕಡಿದುಕೊಳ್ಳತ್ತಾನೆ. (ಹಣ ಖರ್ಚಾಗಬಹುದು ಎಂಬ ಭಯ) ಹೇಡಿಯು ಸಂಕಷ್ಟದ ಸ್ಥಿತಿಯಲ್ಲಿ ನಿನ್ನನ್ನು ಕೈಬಿಡುವನು. ದುರ್ವರ್ತನೆ ಹೊಂದಿ ದವನು ನಿನ್ನನ್ನು ತುಚ್ಚ ಬೆಲೆಗೆ ಮಾರಿ ಬಿಡಲೂ ಹೇಸಲಿಕ್ಕಿಲ್ಲ.”
ಗೆಳೆಯರ ಕುರಿತು ಖಲೀಫ ಮಾಮೂನ್ ಹೀಗೆ ಹೇಳಿದ್ದರು. “ಗೆಳೆಯರು ಮೂರು ವಿಧದಲ್ಲಿದ್ದಾರೆ. ಒಂದು ವಿಭಾಗವು ಆಹಾರದಂತಿದೆ. ಅದಿಲ್ಲದೆ ಯಾರಿಗೂ ಜೀವಿಸಲು ಸಾಧ್ಯವಿಲ್ಲ. ಇನ್ನೊಂದು ವಿಭಾಗವು ರೋಗಕ್ಕಿರುವ ಔಷಧದಂತಿದೆ. ಅಗತ್ಯವಿರುವ ಸಂದರ್ಭದಲ್ಲಿ ಅದನ್ನು ಉಪಯೋಗಿಸಬಹುದು. ಯಾವಾಗಲೂ ಅದರ ಅವಶ್ಯಕತೆ ಇರಲಿಕ್ಕಿಲ್ಲ. ಮೂರನೇ ವಿಭಾಗವು ರೋಗದಂತಿದೆ. ಅದರ ಉಪಸ್ಥಿತಿಯನ್ನು ಯಾರೂ ಇಷ್ಟಪಡುವುದಿಲ್ಲ. ಅದು ಅಂಟಿಕೊಂಡರೆ ಶರೀರವು ಅವ್ಯವಸ್ಥಿತವಾಗುತ್ತದೆ.”
ಆದ್ದರಿಂದ ಗೆಳೆಯರನ್ನು ಆರಿಸುವಾಗ ಅವರ ಸ್ವಭಾವ-ಗುಣಗಳ ಕಡೆಗೆ ಗಮನ ಹರಿಸಬೇಕು. ನಾವು ನಮ್ಮ ಮಕ್ಕಳ ಮೇಲೆ ತೀವ್ರ ನಿಗಾ ಇರಿಸಬೇಕು. ವಿಶೇಷತಃ ಈ ಕಾಲದಲ್ಲಿ ಮಕ್ಕಳ ಗೆಳೆಯರು ಎಂತಹವರೆಂಬುದನ್ನು ಹೆತ್ತವರು ಖಾತರಿ ಪಡಿಸಿಕೊಳ್ಳಬೇಕು. ಕಾರಣ, ಗೆಳೆಯರಿಗೆ ಹೊಂದಿಕೊಂಡು ಮಕ್ಕಳ ಸ್ವಭಾವವು ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗ ಬೇಕಾಗಿದೆ. ಅಲ್ಲಾಹನು ಅನುಗ್ರಹಿಸಲಿ.

ನೇಪಾಳಿ ನಟಿ ಪೂಜಾ ಲಾಮಾ ಅಮ್ನ ಫಾರೂಖಿಯಾದಾಗ



ನೇಪಾಳದ ಪ್ರಸಿದ್ಧ ನಟಿ ಮಾಡಲ್, ಗಾಯಕಿಯೂ ಆದ ಪೂಜಾ ಲಮಾ ಇಸ್ಲಾಮಿಗೆ ಮತಾಂತರಗೊಂಡಿದ್ದಾರೆ. ಹಲವು ವಿವಾದಗಳ ಒಡತಿಯಾದ ಪೂಜಾ ಈಗ ಅಮ್ನಾ ಫಾರೂಕಿಯಾಗಿ ಬದಲಾಗಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನವನ್ನು ಇಲ್ಲಿ ನೀಡಲಾಗಿದೆ.
  ನೀವು ಇಸ್ಲಾಮ್ ಸ್ವೀಕರಿಸಲು ಪ್ರೇರಕವಾದ ಅಂಶಗಳು ಯಾವುವು?
  ನಾನು ಬೌದ್ಧ ಕುಟುಂಬದಿಂದ ಬಂದವಳಾಗಿದ್ದೇನೆ. ಒಂದು ವರ್ಷದ ಹಿಂದೆ ನನ್ನಲ್ಲಿ ಇತರ ಧರ್ಮಗಳ ಕುರಿತು ಕಲಿಯುವ ಬಯಕೆ ಉಂಟಾಯಿತು. ನಾನು ಹಿಂದು, ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳನ್ನು ತುಲನಾತ್ಮಕವಾಗಿ ಕಲಿಯಲು ಪ್ರಾರಂಭಿಸಿದೆ. ನಾನು ದುಬೈ ಮತ್ತು ಖತಾರ್ಗೆ ಪ್ರವಾಸ ಹೋದ ಸಂದರ್ಭದಲ್ಲಿ ಅಲ್ಲಿನ ಇಸ್ಲಾಮಿ ಸಂಸ್ಕ್ರತಿಯು ನನ್ನ ಮೇಲೆ ಪ್ರಭಾವ ಬೀರಿತು. ಇಸ್ಲಾಮಿನ ವೈಶಿಷ್ಯವೇನೆಂದರೆ ಏಕದೇವತ್ವ ಸಿದ್ಧಾಂತವಾಗಿದೆ. ಇದು ಇತರ ಯಾವುದೇ ಧರ್ಮದಲ್ಲಿ ನಮಗೆ ಕಾಣಲು ಸಾಧ್ಯವಿಲ್ಲ.
  ಇಂದು ಮಾಧ್ಯಮಗಳು ಇಸ್ಲಾಮಿಗೆ ವಿರುದ್ಧವಾಗಿ ಪ್ರಚಾರ ಮಾಡುತ್ತಿವೆ. ಅದು ಭಯೋತ್ಪಾದಕ ಧರ್ಮವಾಗಿ ಪರಿಚಯಿಸುತ್ತಿದೆ. ಇದು ನಿಮ್ಮ ಮೇಲೆ ಯಾವುದೇ ಪ್ರಭಾವ ಬೀರಿಲ್ಲವೇ?
  ನಾನು ಇಸ್ಲಾಮ್ ಸ್ವೀಕರಿಸಲು ಇಸ್ಲಾಮಿನ ವಿರುದ್ಧ ಪ್ರಚಾರವಾಗಿದ್ದ ಸುಳ್ಳಾರೋಪಗಳೂ, ಅಪಪ್ರಚಾರಗಳೂ ಕೂಡಾ ಕಾರಣವಾಗಿವೆ. ಯಾಕೆಂದರೆ ನಾನು ಇಸ್ಲಾಮಿನ ಕುರಿತು ಅಧ್ಯಯನ ನಡೆಸಿದಾಗ ಆ ಆರೋಪಗಳೆಲ್ಲ ಸುಳ್ಳಾಗಿದ್ದವು. ಇಸ್ಲಾಮ್ ಮಾನವೀಯತೆಯ ಮತ್ತು ಶಾಂತಿಯ ಏಕೈಕ ಧರ್ಮವಾಗಿದ್ದೆ ಎಂದು ನಾನು ಬಹಳ ಅಭಿಮಾನದಿಂದ ಹೇಳುತ್ತೇನೆ. ಇಸ್ಲಾಮಿನಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ.
  ಪೂಜಾರವರೇ, ನಿಮಗೆ ಚಲನಚಿತ್ರ ರಂಗದಿಂದ ವಿರೋಧಗಳು ವ್ಯಕ್ತವಾಗಿದೆ. ನೀವು ಅವರಿಂದ ಅವಮಾನಕ್ಕೆ ಒಳಗಾಗಿದ್ದೀರಿ. ಇದರಿಂದಾಗಿ ಒಮ್ಮೆ ನೀವು ಆತ್ಮಹತ್ಯೆಗೆ ಕೂಡಾ ಯತ್ನಿಸಿದ್ದೀರಿ. ಇದರ ಕುರಿತು ವಿವರಿಸುವಿರಾ?
 ವಾರ್ತಾ ಮಾಧ್ಯಮಗಳು ನನ್ನ ವೈಯಕ್ತಿಕ ಜೀವನವನ್ನು ಹೀಯಾಳಿಸಿದೇ. ನನ್ನ ವಿರುದ್ಧ ಆರೋಪ ಹೊರಡಿಸಿವೆ. ಆದರೆ ನಾನು ಅವರನ್ನು ಶಪಿಸುತ್ತಿಲ್ಲ. ನನ್ನ ಜೀವನದಲ್ಲಿ ಮೂರು ವಿವಾಹಗಳು ನಡೆದಿವೆ. ಆದರೆ ಅವೆಲ್ಲವೂ ವಿಚ್ಛೇಧನದಲ್ಲಿ ಪರ್ಯಾವಸಾನವಾಯಿತು. ನನಗೆ ನನ್ನ ವೊದಲ ಪತಿಯಿಂದ ಲಭಿಸಿದ ಓರ್ವ ಮಗನಿದ್ದಾನೆ. ಅವನು ಈಗ ನನ್ನ ತಾಯಿಯೊಂದಿಗೆ ಜೀವಿಸುತ್ತಿದ್ದಾನೆ. ಮಾಧ್ಯಮಗಳು ನನ್ನ ವಿರುದ್ಧ ಕಪೋಲಕಲ್ಪಿತವಾದ ವಿಚಾರಗಳನ್ನು ಪ್ರಚಾರ ಮಾಡಿದವು. ನಾನು ಇದೆಲ್ಲ ಮಾಡಿದ್ದು ಖ್ಯಾತಿ ಗಳಿಸೆಲಿಕೈ ಮಾಡಿದೆ ಎಂದು ಜನರಾಡಿಕೊಳ್ಳಲು ಪ್ರಾರಂಭಿಸಿದರು. ಬಳಿಕ ಇಸ್ಲಾಮ್ ಸ್ವೀಕರಿಸಿದೆ. ನಾನು ನನ್ನ ಹಿಂದಿನ ಜೀವನವನ್ನು ಮರೆಯಲು ಯತ್ನಿಸುತ್ತೇನೆ. ಯಾಕೆಂದರೆ ಈಗ ನಾನು ಶಾಂತ ಮತ್ತು ಸಭ್ಯ ಜೀವನ ನಡೆಸುತ್ತಿದ್ದೇನೆ.
  ಪೂಜಾರವರೇ, ನೀವು ಇಸ್ಲಾಮ್ ಸ್ವೀಕರಿಸಿದ ಬಳಿಕ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ನೀವು ಈಗ ಸ್ಕಾರ್ಫ್ ಧರಿಸುತ್ತೀರಿ. ಮದ್ಯಪಾನ ಮತ್ತು ಧೂಮಪಾನವನ್ನು ವರ್ಜಿಸಿದ್ದೀರಿ. ಇದರ ಕುರಿತು...?
 ದಯವಿಟ್ಟು ನನ್ನನ್ನು ಪೂಜಾ ಎಂದು ಕರೆಯಬೇಡಿ. ಪೂಜಾ ನನ್ನ ಹಿಂದಿನ ಹೆಸರಾಗಿದೆ. ಈಗ ನಾನು ‘ಅಮ್ನ ಫಾರೂಖಿ’ ಆಗಿದ್ದೇನೆ. ಇಸ್ಲಾಮ್ ಸ್ವೀಕಾರಕ್ಕಿಂತ ಮುಂಚೆ ನನ್ನ ಜೀವನವು ಸಂಕಷ್ಟಗಳಿಂದ ಕೂಡಿತ್ತು. ಆಗ ಅವುಗಳಿಂದ ತಾತ್ಕಾಲಿಕ ಮುಕ್ತಿ ಹೊಂದಲು ಮದ್ಯ ಸೇವಿಸುತ್ತಿದ್ದೆ. ಆದರೆ ಎಂದೂ ನಾನು ಮಾನಸಿಕ ಸೀಮಿತ ಕಳೆದುಕೊಳ್ಳುವಷ್ಟು ಮದ್ಯಪಾನ ಮಾಡುತ್ತಿರಲಿಲ್ಲ. ಈಗ ನಾನು ಅವುಗಳ ಪರಿಹಾರಕ್ಕಾಗಿ ದೇವನೊಂದಿಗೆ ಪ್ರಾರ್ಥಿಸುತ್ತೇನೆ.
  ಇಸ್ಲಾಮಿನಲ್ಲಿ ಮಹಿಳೆಯರ ದೇಹ ಪ್ರದರ್ಶನವೂ, ಅದೇ ರೀತಿಯ ಹಾಡು-ಕುಣಿತಗಳೂ ವಿರೋಧಿಸಲ್ಪಟ್ಟಿವೆ. ಈ ನಿಯಮವನ್ನು ನೀವು ಪಾಲಿಸುತ್ತಿದ್ದೀರಾ?
  ನಾನು ಇಸ್ಲಾಮಿಗೆ ಮತಾಂತರಗೊಂಡಾಗ ಎಲ್ಲಾ ಸಿನಿಮಾ ನಿರ್ಮಾಪಕರು ನನ್ನೊಂದಿಗೆ ಸಂಬಂಧವನ್ನು ಕಡಿದುಕೊಂಡರು. ಸಂಗೀತವು ನನ್ನ ರಕ್ತದಲ್ಲಿ ಬೆರೆತುಹೋಗಿದೆ. ಆದ್ದರಿಂದ ನಾನು ಹೊಟೇಲುಗಳಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತೇನೆ. ಅದೂ ಕೂಡಾ ಹಿಜಾಬ್ ಧರಿಸಿಯೇ. ಇನ್ನು ನಾನು ಅದನ್ನೂ ವರ್ಜಿಸಲು ತೀರ್ಮಾನಿಸಿದ್ದೇನೆ.
  ನೀವು ಇಸ್ಲಾಮ್ ಸ್ವೀಕರಿಸಲಿಕ್ಕಿರುವ ಪ್ರೇರಣೆ ಏನು?
  ನನ್ನ ಕೆಲವು ಬೌದ್ಧ ಗೆಳೆಯ-ಗೆಳತಿಯರು ಇಸ್ಲಾಮಿಗೆ ಮತಾಂತರಗೊಂಡಿದ್ದರು. ಅವರು ನನ್ನನ್ನು ಇಸ್ಲಾಮಿಗೆ ಪ್ರವೇಶಿಸಲು ನಿರಂತರವಾಗಿ ಒತ್ತಾಯಪಡಿಸುತ್ತಿದ್ದರು. ಮತ್ತು ಯಾರನ್ನಾದರೂ ಇಸ್ಲಾಮ್ ಕಲಿಸಲು ನೇಮಿಸಬೇಕು ಎಂದು ಹೇಳುತ್ತಿದ್ದರು. ಅವರ ಒತ್ತಾಯಕ್ಕೆ ಮಣಿದು ನಾನು ಓರ್ವ ಮುಸ್ಲಿಮ್ ಗೆಳೆಯನಿಂದ ಇಸ್ಲಾಮನ್ನು ಕಲಿಯಲು ಪ್ರಾರಂಭಿಸಿದೆ. ಅವನು ಕಲಿಸಿದ ಒಂದು ವಿಚಾರವು ನನ್ನನ್ನು ಅತಿಯಾಗಿ ಪ್ರೇರೇಪಿಸಿತು. ಅದೇನೆಂದರೆ “ಈ ಜಗತ್ತಿನಲ್ಲಿರುವ ಯಾವುದೇ ಮನುಷ್ಯನಿಗೆ ಹೆದರಿ ಪಾಪಕೃತ್ಯಗಳನ್ನೆಸಗಬಾರದು. ಹೆದರುವುದಿದ್ದರೆ ಅದು ಅಲ್ಲಾಹನನ್ನು ಮಾತ್ರ” ಎಂಬುದಾಗಿದೆ. ಅಂದಿನಿಂದ ನಾನು ಇಸ್ಲಾಮ್ ಸ್ವೀಕರಿಸಲು ತೀರ್ಮಾನಿಸಿದೆ.
  ನೀವು ಇಸ್ಲಾಮ್ ಸ್ವೀಕರಿಸಿದ್ದಕ್ಕೆ ನಿಮ್ಮ ಮನೆಯವರಿಂದ ವಿರೋಧ ವ್ಯಕ್ತವಾಗಿದೆಯೇ?
  ನಾನು ಇಸ್ಲಾಮ್ ಸ್ವೀಕರಿಸಿದ ನಂತರ ನನ್ನ ಕುಟುಂಬಿಕರಿಗೆ ತಿಳಿಸಿದೆ. ಪ್ರಸ್ತುತ ಅವರು ಡಾರ್ಜಿಲಿಂಗ್ನಲ್ಲಿ ನೆಲೆಸಿದ್ದಾರೆ. ನನ್ನ ತಾಯಿ ನನಗೆ ಸಂಪೂರ್ಣ ಸಹಕಾರ ನೀಡಿದರು. “ಮಗಳೇ, ನೀನು ಸರಿಯಾದ ಮಾರ್ಗವನ್ನು ಸ್ವೀಕರಿಸಿದ್ದಿ. ಯಾಕೆಂದರೆ ನೀನು ಇಷ್ಟು ಸಂತೋಷದಿಂದಿರುವುದನ್ನು ನಾನು ಈ ವೊದಲು ನೋಡಲೇ” ಇಲ್ಲ ಎಂದು ಅವರು ಹೇಳಿದ್ದಾರೆ. ನನ್ನ ಇತರ ಬಂಧುಗಳು ಕೂಡಾ ನನ್ನ ಕುಟುಂಬಿಕರನ್ನು ಅಭಿನಂದಿಸಿದ್ದಾರೆ.
  ನೀವು ಎಲ್ಲೋ ಓರ್ವ ಮುಸ್ಲಿಮನನ್ನು ಪ್ರೀತಿಸಿ ಮದುವೆಯಾಗಿದ್ದೀರಿ. ಆದ್ದರಿಂದ ನೀವು ಇಸ್ಲಾಮ್ ಸ್ವೀಕಾರ ಮಾಡಿದ್ದು ಎಂದು ಮಾಧ್ಯಮಗಳು ಹೇಳುತ್ತಿವೆ. ಇದು ಎಷ್ಟರ ಮಟ್ಟಿಗೆ ಸರಿ?
  ಇದು ಆಧಾರ ರಹಿತ ಆರೋಪವಾಗಿದೆ. ನನಗೆ ಕೆಲವು ಮುಸ್ಲಿಮ್ ಗೆಳೆಯ-ಗೆಳತಿಯರಿದ್ದಾರೆ. ಅಂದರೆ ಇದರರ್ಥ ನಾನು ಪ್ರಿತಿಸುತ್ತಿದ್ದೇನೆ ಮತ್ತು ಅವನನ್ನು ಮದುವೆಯಾಗುತ್ತೇನೆ ಎಂದಾಗುತ್ತದೆಯೇ? ಈಗ ನಾನು ಅಭಿಮಾನದಿಂದ ಹೇಳುತ್ತಿದ್ದೇನೆ. “ನಾನು ಮುಸ್ಲಿಮಳಾಗಿದ್ದೇನೆ. ಆದ್ದರಿಂದ ನಾನು ಓರ್ವ ಉತ್ತಮ ಮುಸ್ಲಿಮನನ್ನೇ ಮದುವೆಯಾಗುತ್ತೇನೆ” ನಾನು ಜನರಿಗೆ ತಿಳಿಸುವ ಸಂದೇಶವೇನೆಂದರೆ ಇತರರ ಮಾತುಕೇಳಿ ಒಂದು ವಿಷಯದಲ್ಲಿ ತೀರ್ಮಾನ ಕೈಗೊಳ್ಳಬಾರದು.
 ನಾವು ಸ್ವತಃ ಆ ವಿಷಯದ ಬಗ್ಗೆ ಪರೀಕ್ಷಿಸಬೇಕು. ಯಾಕೆಂದರೆ ಇತರರ ಮಾತು ಸುಳ್ಳಾಗಿರಬಹುದು.

ಸೋಮವಾರ, ಜೂನ್ 04, 2012

ಆಪತ್ಕಾಲದಲ್ಲಿ ಆಪತ್ಬಾಂಧವರಾಗುವವರು



ನಮ್ಮ ಮನೆಯಲ್ಲಿ ನಮಗೆ ಏನಾದರೂ ಸಂಕಷ್ಟ ಉಂಟಾದಾಗ ನೆರವಿಗೆ ಧಾವಿಸುವವರು ನೆರೆಮನೆಯ ಮಂದಿಯಾಗಿದ್ದಾರೆ. ನಮ್ಮ ಸುಖಗಳಲ್ಲೂ ದುಃಖಗಳಲ್ಲೂ ಅವರು ಭಾಗಿಯಾಗುತ್ತಾರೆ. ನೆರೆಕರೆಯವರಿದ್ದರೆ ನಮಗೆ ಒಂದು ರೀತಿಯ ಭದ್ರತಾ ಭಾವ ಮನದಲ್ಲಿ ಮೂಡುತ್ತದೆ. ನಾವು ಹೊರಗಡೆ ಹೋಗುವಾಗ ಮನೆಯ ಬೀಗದ ಕೈಯನ್ನೂ ನೆರೆಯವರ ಕೈಗೆ ಒಪ್ಪಿಸಿ ಹೋಗುತ್ತೇವೆ. ಮನೆಗೆ ನೆಂಟರು ಬಂದಾಗ ಸಕ್ಕರೆಯೋ ಇನ್ನಾವುದೋ ವಸ್ತುಗಳು ಮುಗಿದದ್ದು ಗೊತ್ತಾದರೆ ನಾವು ಲೋಟ ಹಿಡಿದು ಎರವಲು ಪಡೆಯಲು ನೆರೆಮನೆಗೆ ಓಡುತ್ತೇವೆ. ಒಟ್ಟಿನಲ್ಲಿ ಜೀವನದ ಹಲವಾರು ಸಂದರ್ಭಗಳಲ್ಲಿ ಸಂಕಷ್ಟವೆರಗಿದಾಗ ನಮಗೆ ಸಹಾಯ ಹಸ್ತ ಚಾಚುವವರು ನೆರೆಕರೆಯವರೇ ಆಗಿದ್ದಾರೆ. ಆದ್ದರಿಂದ ನಮಗೆ ಅವರ ಮೇಲೆ ಹಲವಾರು ಬಾಧ್ಯತೆಗಳಿವೆ. ಆ ಭಾದ್ಯತೆಗಳ ಕುರಿತು ನಾವು ಜಾಣ ಮರೆವು ಪ್ರದರ್ಶಿಸುತ್ತಿದ್ದೇವೆ.
ನೆರೆಕರೆಯವರೊಂದಿಗಿನ ವರ್ತನೆಗೆ ಕುರಾನ್ ಹೆಚ್ಚಿನ ಮಹತ್ವ ನೀಡಿದೆ. ಅಲ್ಲಾಹನೊಂದಿಗಿನ ಆರಾಧನೆಯ ಬಳಿಕ ಪರಸ್ಪರರ ಸಂಬಂಧಕ್ಕೆ  ಕುರಾನ್   ಮಹತ್ವ ನೀಡಿದ್ದನ್ನೂ ನಮಗೆ ಕಾಣಲು ಸಾಧ್ಯ. ಅಲ್ಲಾಹನು ಅನ್ನಿಸಾ ಅಧ್ಯಾಯದ 36ನೇ ಸೂಕ್ತದಲ್ಲಿ ಈ ರೀತಿ ಹೇಳುತ್ತಾನೆ, “ನೀವೆಲ್ಲರೂ ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ. ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಬೇಡಿರಿ. ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಿರಿ. ಸಂಬಂಧಿಕರೊಂದಿಗೂ ನಿರ್ಗತಿಕರೊಂದಿಗೂ ಆಪ್ತರಾದ ನೆರೆಕರೆಯವರೊಂದಿಗೂ ಅಪರಿಚಿತ ನೆರೆಹೊರೆಯವರೊಂದಿಗೂ ಅನುಚರರೊಂದಿಗೂ ಪ್ರಯಾಣಿಕರೊಂದಿಗೂ ನಿಮ್ಮ ಅಧೀನದಲ್ಲಿರುವ ದಾಸದಾಸಿಯರೊಂದಿಗೆ ಉತ್ತಮ ರೀತಿಯಿಂದ ವರ್ತಿಸಿರಿ. ದುರಹಂಕಾರ ಹೊಂದಿದ ಗರ್ವಿಷ್ಟನನ್ನೂ ಆತ್ಮಸ್ತುತಿಗೈಯುವವನನ್ನೂ ಅಲ್ಲಾಹನು ಇಷ್ಟಪಡುವುದಿಲ್ಲ.”
ನೆರೆಕರೆಯವರೊಂದಿಗಿನ ಬಾಧ್ಯತೆಯ ಕುರಿತು ತ್ವಬ್ರಾನಿ ಉದ್ಧರಿಸಿರುವ ಒಂದು ಪ್ರವಾದಿ ವಚನವು ಇಂತಿದೆ. “ಅವನು ರೋಗಿಯಾದರೆ ಅವನನ್ನು ಸಂದರ್ಶಿಸುವುದು ಮತ್ತು ಉಪಚರಿಸುವುದು, ಅವನು ಮರಣ ಹೊಂದಿದರೆ ಅವನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದು, ಅವನು ಸಾಲ ಕೇಳಿದರೆ ನೀಡುವುದು, ಅವನ ತಪ್ಪುಗಳನ್ನು ಕ್ಷಮಿಸುವುದು, ಮನೆ ನಿರ್ಮಿಸುವಾಗ ನೆರೆಮನೆಗಿರುವ ವಾಯು ಸಂಚಾರಕ್ಕೆ ತಡೆಯಾಗುವ ರೀತಿಯಲ್ಲಿ ನಿರ್ಮಿಸದಿರುವುದು, ಅಡುಗೆ ಮಾಡುವಾಗ ಅದರ ಗಂಧವು ನೆರೆಮನೆಯವನಿಗೆ ಉಪದ್ರವ ನೀಡದಂತಿರುವುದು. ಏನಾದರೂ ತಿಂಡಿ ತಿನಿಸುಗಳನ್ನು ತಂದರೆ ನೆರೆಮನೆಯವನಿಗೂ ನೀಡುವುದು.” ಕಂಸುಲ್ ಉಮ್ಮಾಲ್ ಎಂಬ ಗ್ರಂಥದಲ್ಲಿ ಹೀಗೆ ಉದ್ಧರಿಸಲಾಗಿದೆ, “ನೀವು ಹಣ್ಣನ್ನು ಖರೀದಿಸಿ ತಂದರೆ ಅದರಿಂದ ಒಂದು ಪಾಲನ್ನು ನೆರೆಮನೆಯವನಿಗೆ ನೀಡಬೇಕು. ಹಾಗೆ ನೀಡಲು ಸಾಧ್ಯವಿಲ್ಲದಿದ್ದರೆ ಅವರಿಗೆ ತೋರಿಸಬಾರದು.”
ಆದರೆ ಇಂದು ನಾವು ಈ ಎಲ್ಲಾ ಬಾಧ್ಯತೆಯ ಕುರಿತು ನಿರ್ಲಕ್ಷ್ಯರಾಗಿದ್ದೇವೆ. ಇಂದು ನಮ್ಮ ಜೀವನವು ಸಂಕೀರ್ಣಗೊಂಡು ದೊಡ್ಡ ದೊಡ್ಡ ‘ಫ್ಲಾಟ್’ಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಸೀಮಿತಗೊಂಡಿದ್ದೇವೆ. ಆಚೀಚೆ ಕಣ್ಣೆತ್ತಿಯೂ ನೋಡದೆ ಕೇವಲ ಪತ್ನಿ ಮಕ್ಕಳೊಂದಿಗೆ ಲೋಕದ ಪರಿವೇ ಇಲ್ಲದೆ ಕಾಲ ಕಳೆಯುವಾಗ ನೆರೆಕರೆಯಲ್ಲಿ ಏನೇ ಸಂಭವಿಸಿದರೂ ತಿಳಿಯದ ಪರಿಸ್ಥಿತಿ ಇಂದು ಬಂದೊದಗಿದೆ. ಇತ್ತೀಚೆಗೆ ಒಂದು ಫ್ಲಾಟಿನಲ್ಲಿ ಕೆಳಗಿನ ಅಂತಸ್ತಿನಲ್ಲಿರುವ ಒಂದು ಮನೆಯಲ್ಲಿ ಓರ್ವರು ಮರಣ ಹೊಂದಿ ಅವರ ಶವ ಸಂಸ್ಕಾರ ನಡೆದು ಸಂಜೆಯ ವರೆಗೂ ಮೇಲಿನ ಅಂತಸ್ತಿನ ಮನೆಯವರಿಗೆ ತಿಳಿಯದ ಪ್ರಸಂಗವೂ ನಡೆದಿದೆ.
ನೀವೇ ಆಲೋಚಿಸಿ ನೋಡಿ, ಬದುಕು ಎಷ್ಟು ಸಂಕೀರ್ಣಗೊಂಡಿದೆ! ನೆರೆಮನೆಯ ಮಕ್ಕಳು ನಮ್ಮ ಮಕ್ಕಳೊಂದಿಗಿರುವಾಗ ಕೇವಲ ನಮ್ಮ ಮಕ್ಕಳಿಗೆ ಮಾತ್ರ ತಿಂಡಿ-ತಿನಿಸನ್ನು ನೀಡುವ ಎಷ್ಟೋ ಹೆತ್ತವರಿದ್ದಾರೆ. ನಾವು ನಮ್ಮ ಸ್ಥಳದಲ್ಲಿಯೇ ಮನೆ ನಿರ್ಮಿಸುತ್ತಿದ್ದರೂ ಅದರಿಂದ ನೆರೆಮನೆಗೆ ಉಪದ್ರವ ಉಂಟಾಗದಿರುವುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಇಂದು ಯಾರು ಕೂಡಾ ಮುಂದಾಗುತ್ತಿಲ್ಲ. ಈ ಸ್ವಭಾವಗಳು ಯಾವನೇ ವಿಶ್ವಾಸಿಗೆ ಭೂಷಣವಲ್ಲ. ಎಲ್ಲ ಆರಾಧನಾ ಕರ್ಮಗಳನ್ನು ಭಕ್ತಿಯಿಂದ ನಿರ್ವಹಿಸುವ ಏಕದೇವತ್ವಕ್ಕೆ ಎಲ್ಲಿಲ್ಲದ ಮಹತ್ವ ನೀಡುತ್ತಿರುವ ಮಂದಿ ನೆರೆಮನೆಯವರೊಂದಿಗಿನ ವರ್ತನೆಯ ವಿಚಾರದಲ್ಲಿ ಬಹಳ ಹಿಂದಿದ್ದಾರೆ.
ನೆರೆಕರೆಯವರಿಗೆ ಕಾಟ ನೀಡುವುದು ಮಾತ್ರವಲ್ಲ, ಅವರಿಗೆ ಉಪಕಾರ ಮಾಡದಿರುವುದು ಕೂಡಾ ಪಾಪವಾಗಿದೆ. ಈ ಕುರಿತು ನಾಳೆ ಪರಲೋಕದಲ್ಲಿ ನೆರೆಮನೆಯವನು ಅಲ್ಲಾಹನ ಮುಂದೆ ನಮ್ಮ ವಿರುದ್ಧ ಸಾಕ್ಷಿ ನುಡಿಯುವನು. ಪ್ರವಾದಿ(ಸ) ಹೇಳಿದರು, “ಅಂತ್ಯ ದಿನದಲ್ಲಿ ಎಷ್ಟೋ ಜನರು ತಮ್ಮ ನೆರೆಕರೆಯವರೊಂದಿಗೆ ಹಾಜರಾಗುತ್ತಾರೆ. ನೆರೆಮನೆಯವನು ಹೇಳುವನು, ಓ ನನ್ನ ಪ್ರಭೂ, ಇವನು ನನಗಾಗಿ ತನ್ನ ಬಾಗಿಲನ್ನು ಮುಚ್ಚಿದ್ದಾನೆ. ತನ್ನ ಒಳಿತುಗಳನ್ನು ನನಗೆ ತಡೆದಿದ್ದಾನೆ.”
ಇಂದು ಹಲವರು, ಮುಸ್ಲಿಮರು ಮಾತ್ರ ನೆರೆಕರೆಯವರು ಎಂದು ಭಾವಿಸಿದ್ದಾರೆ. ಮುಸ್ಲಿಮೇತರರು ನೆರೆಕರೆಯ ಪಟ್ಟಿಗೆ ಸೇರಿದವರಲ್ಲ ಎಂದು ತೀರ್ಮಾನಿಸಿ ಬಿಟ್ಟಿದ್ದಾರೆ. ಆದರೆ ಇದು ತಪ್ಪಾದ ಕಲ್ಪನೆಯಾಗಿದೆ. ಮನೆಯ ಸುತ್ತ ವಾಸಿಸುವ ಯಾರೇ ಆದರೂ ಅವರು ನೆರೆಕರೆಯ ಸಾಲಿಗೆ ಸೇರುತ್ತಾರೆ. ಅವರೊಂದಿಗೆ ಬಾಧ್ಯತೆಯ ವಿಚಾರದಲ್ಲಿ ಹೆಚ್ಚು ಕಡಿಮೆ ಇದ್ದರೂ ನೆರೆಕರೆಯವರು ಎಂಬ ಸ್ಥಾನದಿಂದ ಅವರು ಹೊರಗುಳಿಯುವುದಿಲ್ಲ. ನಮ್ಮ ನೆರೆಯಲ್ಲಿರುವ ಒಂದೆರಡು ಮನೆಗಳನ್ನು ನೆರೆಮನೆಯವರ ಸಾಲಿಗೆ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತೇವೆ. ಆದರೆ ಪ್ರವಾದಿ(ಸ) ಒಂದು ಮನೆಯ ಸುತ್ತಮುತ್ತ ಇರುವ 40 ಮನೆಗಳು ನೆರೆಕರೆಯವರಾಗಿದ್ದಾರೆ ಎಂದು ಹೇಳಿದ್ದಾರೆ.
ಮುಸ್ನದ್ ಬಸ್ಸಾರ್ ವರದಿ ಮಾಡಿರುವ ಒಂದು ಪ್ರವಾದಿ ವಚನ ಹೀಗಿದೆ, “ನೆರೆಮನೆಯವರಲ್ಲಿ ಮೂರು ವಿಭಾಗಗಳಿವೆ. ಒಂದನೇ ವಿಭಾಗದವರಲ್ಲಿ ಒಂದೇ ಬಾಧ್ಯತೆ. ಎರಡನೇ ವಿಭಾಗದವರಲ್ಲಿ ಎರಡು ಬಾಧ್ಯತೆಗಳಿವೆ. ಮೂರನೇ ವಿಭಾಗದವರಲ್ಲಿ ಮೂರು ಬಾಧ್ಯತೆಗಳಿವೆ. ಒಂದನೇ ವಿಭಾಗದವರಲ್ಲಿ ನೆರೆಮನೆಯವರು ಎಂಬ ಬಾಧ್ಯತೆ ಮಾತ್ರ. ಎರಡನೇ ವಿಭಾಗದವರು ಮುಸ್ಲಿಮರಾಗಿದ್ದಾರೆ. ಅವರೊಂದಿಗೆ ನೆರೆಮನೆಯವರು ಎಂಬ ಬಾಧ್ಯತೆಯೊಂದಿಗೆ ಮುಸಲ್ಮಾನರು ಎಂಬ ಬಾಧ್ಯತೆಯೂ ಇದೆ. ಮೂರನೇ ವಿಭಾಗದವರು ಮುಸ್ಲಿಮರಾದ ಸಂಬಂಧಿಕರು. ಅವರೊಂದಿಗೆ ಮುಸ್ಲಿಮರು, ಸಂಬಂಧಿಕರು ಮತ್ತು ನೆರೆಮನೆಯವರು ಎಂಬ ನೆಲೆಯಲ್ಲಿ ಮೂರು ಬಾಧ್ಯತೆಗಳಿವೆ.”
ಆದರೆ ಇಂದು ಇವೆಲ್ಲದಕ್ಕೆ ಭಿನ್ನವಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೆರೆಮನೆಯವರಿಗೆ ಸದಾ ಅಪಚಾರ ಮಾಡುವ ಎಷ್ಟೋ ಮಂದಿಯಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೆ ಪರಸ್ಪರ ಜಗಳವಾಡುತ್ತಾರೆ. ನೆರೆಮನೆಯ ಕೋಳಿ ಅಥವಾ ಆಡು ನಮ್ಮ ಮನೆಗೆ ಬಂದರೆ ಅಲ್ಲಿ ದೊಡ್ಡ ಯುದ್ಧವೇರ್ಪಡುತ್ತದೆ. ಬುದ್ಧಿ ಇಲ್ಲದ ಜಾನುವಾರುಗಳು ಮಾಡುವ ಕೃತ್ಯಕ್ಕೆ ಬುದ್ಧಿ ಇರುವ ಮಾನವರು ಸಂಬಂಧಗಳನ್ನೇ ಮುರಿದುಕೊಳ್ಳುತ್ತಾರೆ. ಆದರೆ ಇದು ವಿಶ್ವಾಸಿಗೆ ತರವಲ್ಲ. ನೆರೆಮನೆಯವರೊಂದಿಗೆ ಉತ್ತಮವಾಗಿ ವರ್ತಿಸದವನು ವಿಶ್ವಾಸಿಯಾಗಲಿಕ್ಕಿಲ್ಲ. ಅವನ ಕರ್ಮಗಳು ನಿಶ್ಫಲವಾಗಬಹುದು. ಆದ್ದರಿಂದ ನಾವು ನಮ್ಮ ನೆರೆಕರೆಯವರೊಂದಿಗೆ ಉತ್ತಮವಾಗಿ ವರ್ತಿಸಬೇಕು ಮತ್ತು ಅವರೊಂದಿಗಿನ ಬಾಧ್ಯತೆಗಳನ್ನು ಪೂರೈಸಬೇಕು. ಆಪತ್ಕಾಲದಲ್ಲಿ ಆಪತ್ಭಾಂಧವರಾಗುವುದು ಅವರಲ್ಲವೇ?