ಸೋಮವಾರ, ಜುಲೈ 29, 2013

ಈದ್ ಆಚರಣೆ ಹೇಗೆ?


ಸತ್ಯವಿಶ್ವಾಸಿಗಳಿಗೆ ಅಲ್ಲಾಹನು ಎರಡು ಆಚರಣೆಗಳನ್ನು ನೀಡಿದ್ದಾನೆ. ಒಂದು ಈದುಲ್ ಫಿತ್ರ್ ಮತ್ತು ಇನ್ನೊಂದು ಈದುಲ್ ಅಝ್‍ಹಾ. ಒಂದು ತಿಂಗಳ ರಮಝಾನ್ ಉಪವಾಸದ ಬಳಿಕ ಬರುವ ಈದುಲ್ ಫಿತ್ರ್‍ರನ್ನು ಸ್ವಾಗತಿಸಲು ನಾವು ತಯಾರಾಗುತ್ತಿದ್ದೇವೆ. ಅಲ್ಲಾಹನು ನೀಡಿರುವ ಆಚರಣೆಯನ್ನು ಸಂತೋಷ, ಆಹ್ಲಾದದಿಂದ ಆಚರಿಸಲು ನಾವು ತುದಿಗಾಲಲ್ಲಿ ನಿಂತಿದ್ದೇವೆ.
ಈದ್‍ನ ಮುಖ್ಯ ಘಟಕಗಳ ಪೈಕಿ ಎರಡು ರಕಅತ್ ನಮಾಝ್ ಹಾಗೂ ಖುತ್ಬಾ ಬಹು ಪ್ರಾಮುಖ್ಯವಾಗಿದೆ. ಇದು ಪ್ರಬಲ ಸುನ್ನತ್ತಾಗಿದೆ. ಪ್ರವಾದಿಯವರು(ಸ) ಆ ನಮಾಝ್‍ಗಳನ್ನು ಎಲ್ಲಾ ವರ್ಷವೂ ನಿರ್ವಹಿಸುತ್ತಿದ್ದರು ಮತ್ತು ಅದರಲ್ಲಿ ಭಾಗವಹಿಸಲು ಪುರುಷರು ಹಾಗೂ ಮಹಿಳೆಯರಿಗೆ ಆಜ್ಞಾಪಿಸುತ್ತಿದ್ದರು.
ಈದ್‍ನ ದಿನಗಳಲ್ಲಿ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಸುಗಂಧ ದ್ರವ್ಯ ಉಪಯೋಗಿಸುವುದು ಪ್ರವಾದಿ ಚರ್ಯೆಯಾಗಿದೆ. ಪ್ರವಾದಿಯವರು(ಸ) ಎಲ್ಲಾ ಈದ್‍ನ ದಿನಗಳಲ್ಲಿ ಯಮನಿನಲ್ಲಿ ನಿರ್ಮಿಸಲ್ಪಡುವ ಒಂದು ರೀತಿಯ ಸುಂದರ ವಸ್ತ್ರ ಧರಿಸುತ್ತಿದ್ದರು ಎಂದು ಜಅïಫರ್ ಬಿನ್ ಮುಹಮ್ಮದ್ ತನ್ನ ತಂದೆಯ ಮುಖಾಂತರ ವರದಿ ಮಾಡಿದ್ದಾರೆ. (ಶಾಫಿಈ, ಬಗವಿ)
“ಪ್ರವಾದಿಯವರು(ಸ) ಈದ್‍ನ ದಿನಗಳಲ್ಲಿ ಇದ್ದುದರಲ್ಲಿ ಉತ್ತಮ ಬಟ್ಟೆ ತೊಡುತ್ತಿದ್ದರು. ಪ್ರವಾದಿಯವರ(ಸ) ಬಳಿ ಈದ್ ಹಾಗೂ ಜುಮಾದ ದಿವಸ ಧರಿಸಲಿಕ್ಕಾಗಿ ಒಂದು ಉದ್ದ ವಾದ ಬಟ್ಟೆ ಇತ್ತು” ಎಂದು ಇಬ್ನು ಕೈಯ್ಯಿಮ್ ಹೇಳಿದ್ದಾರೆ.
ಈದುಲ್ ಫಿತ್ರ್‍ನ ನಮಾಝ್‍ಗೆ ಹೊರಡುವುದಕ್ಕಿಂತ ಮುಂಚೆ ಆಹಾರ ಸೇವಿಸುವುದು ಸುನ್ನತ್ತಾಗಿದೆ. ಅದು ಬೆಸ ಸಂಖ್ಯೆಯಲ್ಲಿ ಖರ್ಜೂರ ಸೇವಿಸಿದರೂ ಉತ್ತಮ. “ಪ್ರವಾದಿ ಯವರು(ಸ) ಈದುಲ್ ಫಿತ್ರ್‍ನ ದಿವಸ ಸ್ವಲ್ಪ ಖರ್ಜೂರ ಸೇವಿಸುತ್ತಿದ್ದರು. ಅದು ಕೂಡಾ ಬೆಸ ಸಂಖ್ಯೆಯಲ್ಲೇ ಸೇವಿಸಿ ದ್ದರು” ಎಂದು ಅನಸ್(ರ) ವರದಿ ಮಾಡಿದ್ದಾರೆ. (ಅಹ್ಮದ್, ಬುಖಾರಿ)
“ಈದುಲ್ ಫಿತ್ರ್‍ನ ದಿನ ನಮಾಝ್‍ಗೆ ಹೊರಡುವ ಮುಂಚೆ ಆಹಾರ ಸೇವಿಸಲು ಜನರಿಗೆ ಆಜ್ಞಾಪಿಸಲಾಗಿದೆ” ಎಂದು ಸಯೀದ್ ಬಿನ್ ಮುಸಯ್ಯಿಬ್ ವರದಿ ಮಾಡಿದ್ದಾರೆ. ಈದ್ ನಮಾಝಿಗೆ ಹೋಗುವುದಕ್ಕಿಂತ ಮುಂಚೆ ಆಹಾರ ಸೇವಿಸುವ ವಿಚಾರದಲ್ಲಿ ವಿದ್ವಾಂಸರ ಮಧ್ಯೆ ಭಿನ್ನಾಭಿಪ್ರಾಯ ಇರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಇಬ್ನು ಕುದಾಮ ಹೇಳಿದ್ದಾರೆ.
ಈದ್ ನಮಾಝ್‍ಗಳನ್ನು ಮಸೀದಿಗಳಲ್ಲಿ ನಿರ್ವಹಿಸಬಹು ದಾಗಿದ್ದರೂ ಮಳೆಯಂತಹ ಅಡೆತಡೆ ಇಲ್ಲದಿದ್ದರೆ ಹೊರಗೆ ತೆರೆದ ಮೈದಾನದಲ್ಲಿ ನಿರ್ವಹಿಸುವುದು ಉತ್ತಮವಾಗಿದೆ. ಕಾರಣ ಪ್ರವಾದಿಯವರು(ಸ) ಈದ್‍ನ ನಮಾಝ್‍ಗಳನ್ನು ಈದ್ಗಾದಲ್ಲೇ ನಿರ್ವಹಿಸುತ್ತಿದ್ದರು. ಮಳೆಯ ಕಾರಣದಿಂದ ಒಂದು ಬಾರಿ ಮಾತ್ರ ಪ್ರವಾದಿಯವರು(ಸ) ತಮ್ಮ ಮಸೀದಿಯಲ್ಲಿ ನಿರ್ವಹಿಸಿದ್ದರು. ಅಬೂಹುರೈರ(ರ) ವರದಿ ಮಾಡಿದ್ದಾರೆ, “ಒಮ್ಮೆ ಈದ್‍ನ ದಿನ ಮಳೆ ಸುರಿದಿದ್ದರಿಂದ ಪ್ರವಾದಿಯವರು(ಸ) ಜನರೆಲ್ಲರನ್ನು ಸೇರಿಸಿ ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸಿದರು.”
ಈದ್‍ನ ದಿನ ಮಹಿಳೆಯರು, ಮಕ್ಕಳು, ಈದ್ಗಾಗೆ ಹೋಗಬಹುದಾಗಿದೆ. ಅದಕ್ಕೆ ಶರೀಅತ್‍ನಲ್ಲಿ ಅನುಮತಿ ಇದೆ. ಈ ವಿಚಾರದಲ್ಲಿ ವಿವಾಹಿತೆಯರು, ಅವಿ ವಾಹಿತೆಯರು, ವಿಧವೆಯರು, ವೃದ್ಧರು ಮತ್ತು ಋತುಮತಿಗಳ ಮಧ್ಯೆ ವ್ಯತ್ಯಾಸ ವಿಲ್ಲ. ಉಮ್ಮುತ್ವಯ್ಯಿಬ್(ರ) ವರದಿ ಮಾಡಿ ದ್ದಾರೆ. “ಪುಣ್ಯ ಕರ್ಮಗಳಲ್ಲೂ ವಿಶ್ವಾಸಿಗಳ ಪ್ರಾರ್ಥನೆಗಳಲ್ಲೂ ಭಾಗಿಯಾಗಲಿಕ್ಕಾಗಿ ಅವಿವಾಹಿತೆಯರನ್ನೂ, ಋತುಮತಿ ಯರನ್ನೂ ಕರೆ ತರಲು ನಮಗೆ ಆಜ್ಞಾ ಪಿಸಲಾಗಿತ್ತು. ಆದರೆ ಋತುಮತಿಗಳು ನಮಾಝ್ ನಿರ್ವಹಿಸಬಾರದು.” (ಬುಖಾರಿ, ಮುಸ್ಲಿಮ್)
“ಪ್ರವಾದಿಯವರು(ಸ) ಈದ್‍ನ ದಿವಸ ಗಳಲ್ಲಿ ಪತ್ನಿಯರನ್ನು, ಪುತ್ರಿಯರನ್ನು ಹೊರ ಕರೆತರುತ್ತಿದ್ದರು” ಎಂದು ಇಬ್ನು ಅಬ್ಬಾಸ್ ವರದಿ ಮಾಡಿದ್ದಾರೆ. (ಇಬ್ನು ಮಾಜಃ, ಬೈಹಕಿ)
ಈದ್ ನಮಾಝ್‍ಗೆ ಹೊರಡುವಾಗ ಒಂದು ದಾರಿಯಲ್ಲಿ ಹೋಗುವುದು ಮತ್ತು ಮರಳುವಾಗ ಇನ್ನೊಂದು ದಾರಿಯಲ್ಲಿ ಬರುವುದು ಇಮಾಮ್ ಹಾಗೂ ಇತರ ರಿಗೂ ಸುನ್ನತ್ತಾಗಿದೆ ಎಂಬುದು ಹೆಚ್ಚಿನ ವಿದ್ವಾಂಸರ ಒಮ್ಮತಾಭಿಪ್ರಾಯವಾಗಿದೆ. ಜಾಬಿರ್(ರ) ವರದಿ ಮಾಡಿದ್ದಾರೆ. ಪ್ರವಾದಿಯವರು(ಸ) ಈದ್‍ನ ದಿವಸ ಒಂದು ದಾರಿಯ ಮೂಲಕ ಸಾಗಿ ಇನ್ನೊಂದು ದಾರಿಯಲ್ಲಿ ಮರಳುತ್ತಿದ್ದರು.”(ಬುಖಾರಿ)
“ಪ್ರವಾದಿಯವರು(ಸ) ಈದ್‍ನಂದು ಹೊರಟರೆ ಹೋದ ದಾರಿಯಲ್ಲದೆ ಇನ್ನೊಂದು ದಾರಿಯ ಮೂಲಕ ಮರಳು ತ್ತಿದ್ದರು” ಎಂದು ಅಬೂಹುರೈರಾ(ರ) ವರದಿ ಮಾಡಿದ್ದಾರೆ.

(ಅಹ್ಮದ್, ಮುಸ್ಲಿಮ್, ತಿರ್ಮಿದಿ)
ಈದ್ ನಮಾಝ್‍ನ ಸಮಯವು ಸೂರ್ಯ ಸರಿ ಸುಮಾರು ಮೂರು ವಿೂಟರ್ ಎತ್ತರಕ್ಕೆ ಬಂದದ್ದರಿಂದ ಮಧ್ಯಾಹ್ನದ ವರೆಗೆ ಇದೆ. ಸೂರ್ಯ ಎರಡು ಈಟಿಯಷ್ಟು ಮೇಲೆ ಬಂದ ಸಮಯದಲ್ಲಿ (ಒಂದು ಈಟಿ ಎಂದರೆ ಸರಿ ಸುಮಾರು 3 ವಿೂಟರ್ ಉದ್ದ) ಈದುಲ್ ಫಿತ್ರ್‍ನ ನಮಾಝ್ ಹಾಗೂ ಒಂದು ಈಟಿಯಷ್ಟು ಮೇಲೆ ಬಂದ ಸಮಯದಲ್ಲಿ ಈದುಲ್ ಅಝ್ಝಾ ನಮಾಝನ್ನು ಪ್ರವಾದಿಯವರ(ಸ) ನೇತೃತ್ವ ದೊಂದಿಗೆ ನಾವು ನಿರ್ವಹಿಸಿದ್ದೆವು ಎಂದು ಜುಂದುಬ್(ರ) ಹೇಳಿರುವುದಾಗಿ ಅಹ್ಮದ್ ಬಿನ್ ಹಸನುಲ್ ಬನ್ನಾ ವರದಿ ಮಾಡಿ ದ್ದಾರೆ. ಫಿತ್ರ್ ಝಕಾತ್ ವಿತರಣೆಗೆ ಸಮಯ ಲಭಿಸಲಿಕ್ಕಾಗಿ ಈದುಲ್ ಫಿತ್ರ್ ನಮಾಝನ್ನು ತಡವಾಗಿ ನಿರ್ವಹಿಸಲಾಗಿದೆ. ನಮಾಝ್‍ನ ಬಳಿಕ ಬಲಿಕರ್ಮ ನೆರ ವೇರಿಸಲಿಕ್ಕಿರುವುದರಿಂದ ಈದುಲ್ ಅಝ್ಝಾ ನಮಾಝನ್ನು ಬೇಗನೇ ನಿರ್ವಹಿಸ ಬೇಕಾಗಿದೆ.
ಈದ್‍ನ ನಮಾಝ್‍ಗಳು ಎರಡು ರಕಅತ್‍ಗಳಾಗಿವೆ. ಒಂದನೇ ರಕಅತ್‍ನಲ್ಲಿ ತಕ್ಬೀರತುಲ್ ಇಹ್ರಾಮ್‍ನ ಬಳಿಕ (ಅಲ್ಲಾಹು ಅಕ್ಬರ್ ಎಂದು ಕೈಕಟ್ಟಿದ ಬಳಿಕ) ಏಳು ಬಾರಿ ಹಾಗೂ ಎರಡನೇ ತಕ್ಬೀರತುಲ್ ಇಹ್ರಾಮ್‍ನ ಬಳಿಕ ಐದು ಬಾರಿ ತಕ್ಬೀರ್ ಹೇಳುವುದು ಪ್ರತೀ ತಕ್ಬೀರ್ ನೊಂದಿಗೆ ಕೈಗಳನ್ನು ಎತ್ತುವುದು ಪ್ರವಾದಿ ಚರ್ಯೆಯಾಗಿದೆ. “ಪ್ರವಾದಿಯವರು(ಸ) ಒಂದು ಈದ್ ನಮಾಝ್‍ನಲ್ಲಿ ಪ್ರಥಮ ರಕಅತ್‍ನಲ್ಲಿ ಏಳು ಎರಡನೇ ರಕಅತ್‍ನಲ್ಲಿ ಐದು ಹಾಗೆ 12 ತಕ್ಬೀರ್ ಹೇಳುತ್ತಿದ್ದರು. ಈ ನಮಾಝ್‍ಗಿಂತ ಮುಂಚೆ ಅಥವಾ ನಂತರ ಪ್ರವಾದಿಯವರು(ಸ) ಬೇರೆ ನಮಾಝ್ ನಿರ್ವಹಿಸುತ್ತಿರಲಿಲ್ಲ” ಎಂದು ಅಮ್ರ್ ಬಿನ್ ಶುಐಬ್ ತನ್ನ ತಂದೆಯ ಮೂಲಕ ವರದಿ ಮಾಡಿದ್ದಾರೆ. ಪ್ರವಾದಿ ಯವರು(ಸ) ತಕ್ಬೀರ್‍ಗಳ ನಂತರವೇ ಕುರ್‍ಆನ್ ಪಾರಾಯಣ ನಡೆಸುತ್ತಿದ್ದರು.
ಪುರುಷರು, ಮಹಿಳೆಯರು, ಮಕ್ಕಳು ಸಾಮೂಹಿಕವಾಗಿ ಅಥವಾ ವೈಯಕ್ತಿಕವಾಗಿ ಮನೆ, ಮಸೀದಿ ಅಥವಾ ಈದ್ಗಾಹ್‍ನಲ್ಲಿ ಈದ್ ನಮಾಝ್ ನಿರ್ವಹಿಸಿದರೆ ಅದು ಸಿಂಧುವಾಗುತ್ತದೆ. ಇನ್ನು ಯಾರಿಗಾದರೂ ಜಮಾಅತ್ ನಮಾಝ್ ನಷ್ಟವಾದರೂ ಅವರು ಎರಡು ರಕಅತ್ ನಮಾಝ್ ನಿರ್ವಹಿಸ ಬೇಕು. ಬುಖಾರಿಯಲ್ಲಿ ಈ ರೀತಿ ಇದೆ, “ಓರ್ವನಿಗೆ ಈದ್ ನಮಾಝ್ ನಷ್ಟವಾದರೆ ಆತ ಎರಡು ರಕಅತ್ ನಮಾಝ್ ನಿರ್ವಹಿಸಬೇಕು. ಮಹಿಳೆ ಯರು, ಮನೆಯಲ್ಲಿರುವವರೂ, ಗ್ರಾಮ ಗಳಲ್ಲಿರುವವರೂ ಇದೇ ರೀತಿ ಮಾಡ ಬೇಕು.” ಅತ್ವಾಯಿಂ ಹೇಳುತ್ತಾರೆ, “ಓರ್ವ ನಿಗೆ ಈದ್ ನಮಾಝ್‍ನಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ಆತ ಎರಡು ರಕಅತ್ ನಮಾಝ್ ನಿರ್ವಹಿಸಬೇಕು.”
ಈದ್ ನಮಾಝ್‍ನ ಬಳಿಕ ಖುತ್ಬಾ ನಿರ್ವಹಿಸಲಾಗುವುದು. ಅದನ್ನು ಗಮ ನವಿಟ್ಟು ಆಲಿಸಬೇಕು. ಇದು ಪ್ರವಾದಿ ಚರ್ಯೆಯಾಗಿದೆ. ಅಬ್ದುಲ್ಲಾ ಬಿನ್ ಸಾಯಿಬ್(ರ) ಹೇಳುತ್ತಾರೆ: ನಾನು ಪ್ರವಾದಿಯವರೊಂದಿಗೆ(ಸ) ಈದ್‍ನಲ್ಲಿ ಭಾಗವಹಿಸಿದೆ. ನಮಾಝ್ ನಿರ್ವಹಿಸಿದ ಬಳಿಕ ಪ್ರವಾದಿ(ಸ) ಹೇಳಿದರು. “ನಾವು ಖುತ್ಬಾ ನಿರ್ವಹಿಸಲಿದ್ದೇವೆ. ಖುತ್ಬಾ ಆಲಿಸಲು ಬಯಸುವವರು ಇಲ್ಲಿ ಕುಳಿತು ಕೊಳ್ಳಲಿ. ಹೋಗಲಿಚ್ಛಿಸುವವರು ಹೋಗಲಿ.” (ನಸಾಈ, ಅಬೂದಾವೂದ್, ಇಬ್ನು ಮಾಜಃ)
ಅಲ್ಲಾಹನಿಗೆ ಸ್ತುತಿ ಅರ್ಪಿಸುತ್ತಾ ಖುತ್ಬಾ ಆರಂಭಿಸಬೇಕು. ಪ್ರವಾದಿ ಯವರು(ಸ) ಎಲ್ಲಾ ಖುತ್ಬಾವನ್ನು ಹಾಗೆಯೇ ನಿರ್ವಹಿಸುತ್ತಿದ್ದರು. ಪ್ರವಾದಿ ಯವರು(ಸ) ಹೇಳಿದ್ದಾರೆ, “ಅಲ್ಲಾಹನನ್ನು ಸ್ತುತಿಸದೆ ಆರಂಭಿಸುವ ಎಲ್ಲಾ ಕಾರ್ಯ ಗಳೂ ನಿಶ್ಫಲವಾಗಿದೆ.”
ಈದ್‍ನ ದಿನ ವಿಶ್ವಾಸಿಗಳು ಪರಸ್ಪರ ಹಸ್ತಲಾಘವ ನಡೆಸಿ, ಆಲಂಗಿಸಿ ಪರಸ್ಪರ ಪ್ರಾರ್ಥಿಸಬೇಕಾಗಿದೆ. ಎಲ್ಲಾ ದ್ವೇಷ ಕೋಪ ಗಳನ್ನು ಮರೆತು ಪರಸ್ಪರ ಸಹೋದರರಾಗಿ ಬಾಳಬೇಕು. ಪ್ರವಾದಿಯವರು(ಸ) ಮತ್ತು ಅನುಯಾಯಿಗಳು ಈದ್‍ನ ದಿವಸ ಪರಸ್ಪರ ಭೇಟಿಯಾದಾಗ ‘ತಕಬ್ಬಲಲ್ಲಾಹು ಮಿನ್ನಾ ವಮಿಂಕ’ (ನಮ್ಮಿಂದಲೂ ನಿಮ್ಮಿಂದಲೂ ಅಲ್ಲಾಹನು ಸ್ವೀಕರಿಸಲಿ) ಎಂದು ಹೇಳುತ್ತಿದ್ದರೆಂದು ಜುಬೈರ್ ಬಿನ್ ನಫೀರ್ ವರದಿ ಮಾಡಿದ್ದಾರೆ.
ಈದ್‍ನ ದಿನವನ್ನು ಅನಾಚಾರ, ಕೆಟ್ಟ ಕೆಲಸಗಳಲ್ಲಿ ತೊಡಗಿ ಹಾಳು ಮಾಡದಿರಲು ಪ್ರತೀ ವಿಶ್ವಾಸಿಯೂ ಪ್ರಯತ್ನಿಸಬೇಕಾಗಿದೆ. ಆ ಸಂತೋಷ ದಾಯಕವಾದ ದಿವಸವು ಅಲ್ಲಾಹನ ಒಂದು ಅನುಗ್ರಹವಾಗಿದೆ. ಆ ದಿನದಲ್ಲಿ ಅವನಿಗೆ ಸ್ತುತಿ ಸ್ತೋತ್ರಗಳನ್ನು ಅರ್ಪಿಸುತ್ತಾ ಅವನ ಮಹಿಮೆಯನ್ನು ಕೊಂಡಾಡಬೇಕಾಗಿದೆ. ಈದನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲು ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ