ಮಂಗಳವಾರ, ಸೆಪ್ಟೆಂಬರ್ 11, 2012

ಪದಾರ್ಥದಲ್ಲಿ ಕೂದಲು ಸಿಕ್ಕಿದರೆ...


ದಾಂಪತ್ಯದ ಮೂಲ ಘಟಕಗಳು ಪತಿ ಮತ್ತು ಪತ್ನಿಯಾಗಿದ್ದಾರೆ. ದಾಂಪತ್ಯ ಎಂಬ ಗಾಡಿಯು ಸುಸೂತ್ರವಾಗಿ ಮುಂದೆ ಸಾಗಬೇಕಾದರೆ ಪತಿ-ಪತ್ನಿಯರ ಮುಂದೆ ಸಮತೋಲನಾತ್ಮಕ ವರ್ತನೆಗಳು ಅತ್ಯಗತ್ಯವಾಗಿವೆ. ದಾಂಪತ್ಯ ಜೀವನದ ಯಶಸ್ವಿಗಾಗಿ ಕುರ್‍ಆನ್ ಹಾಗೂ ಹದೀಸ್‍ಗಳಲ್ಲಿ ಹಲವಾರು ಸಲಹೆ, ಆಜ್ಞೆಗಳು ಬಂದಿವೆ. ಕಾರಣ ದಾಂಪತ್ಯದಷ್ಟು ಪರಿಶುದ್ಧವೂ ಆನಂದಮಯವೂ ಆದ ಸಂಬಂಧ ಇನ್ನೊಂದಿಲ್ಲ. ಅದು ಸೃಷ್ಟಿಕರ್ತನು ತನ್ನ ಸೃಷ್ಟಿಗಳ ಪೈಕಿ ಶ್ರೇಷ್ಠರಾದ ಮಾನವರಿಗೆ ಮೀಸಲಿರಿಸಿದ ಸೌಭಾಗ್ಯವಾಗಿದೆ.
ಅಬೂ ಸಈದುಲ್ ಕುದ್ರಿ(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಓರ್ವ ಪರುಷನು ತನ್ನ ಪತ್ನಿಯನ್ನು ಮತ್ತು ಓರ್ವ ಮಹಿಳೆಯು ಅವಳ ಪತಿಯನ್ನು ಪರಸ್ಪರ ನೋಡಿದರೆ ಅಲ್ಲಾಹನು ಅವರೀರ್ವರನ್ನೂ ಕರುಣೆಯ ದೃಷ್ಟಿಯಿಂದ ನೋಡುತ್ತಾನೆ. ಇನ್ನು, ಅವನು ತನ್ನ ಪತ್ನಿಗೆ ಹಸ್ತಲಾಘವ ಮಾಡಿದರೆ ಅವರು ಮಾಡಿದ ಪಾಪಗಳು ಅವರ ಕೈ ಬೆರಳುಗಳ ಎಡೆಯಿಂದ ಜಾರಿ ಹೋಗುವುದು.” ಕುರ್‍ಆನ್ ಕೂಡಾ ಈ ರೀತಿ ಹೇಳಿದೆ, “ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ವಿವೇಚಿಸುವವರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.”
ಪತಿ ಮತ್ತು ಪತ್ನಿಯು ಪರಸ್ಪರ ಪೂರಕವಾಗಿ ವರ್ತಿಸಿದರೆ ಮಾತ್ರ ದಾಂಪತ್ಯ ಜೀವನವು ಸುಖಮಯವಾಗುವುದು. ಪತಿಯು ಪತ್ನಿಯೊಂದಿಗೆ ಮತ್ತು ಪತ್ನಿಯು ಪತಿಯೊಂದಿಗೆ ಮನ ಮುದಗೊಳಿಸುವ ವರ್ತನೆಗಳು ತೋರಬೇಕು. ಪತಿಗೆ, ತಾನು ಯಜಮಾನ ಮತ್ತು ಪತ್ನಿಗೆ ತಾನು ಗುಲಾಮಳು ಎಂಬ ಭಾವನೆ ಉಂಟಾಗತೊಡಗಿದರೆ ಆ ದಾಂಪತ್ಯ ಸಂಬಂಧದಲ್ಲಿ ಬಿರುಕು ಕಾಣಿಸತೊಡಗುತ್ತದೆ. ಹಾಗೇ ಮುಂದುವರಿದರೆ ಅದು ದೊಡ್ಡ ಪ್ರಪಾತವಾಗಿ ಪರಸ್ಪರ ಸಂಬಂಧ ಕಡಿದುಹೋಗುತ್ತದೆ.
ಇಂದು ಹಲವು ಪುರುಷರು ತಮ್ಮ ಪತ್ನಿಗೆ `ಪತ್ನಿ’ ಎಂಬ ಸ್ಥಾನವನ್ನು ನೀಡದೆ ಗುಲಾಮಳನ್ನಾಗಿಸಿದ್ದಾರೆ. ಅವಳ ಬೇಕು ಬೇಡಗಳ ಕಡೆಗೆ ಗಮನ ಹರಿಸುತ್ತಿಲ್ಲ. ಪುರುಷರು ಮಹಿಳೆಯರಿಗಿಂತ ಶ್ರೇಷ್ಠರು ಎಂಬ ಒಣ ಜಂಭವು ಪುರುಷರಲ್ಲಿ ತಲೆ ಎತ್ತಿದೆ. ಹಗಲೆಲ್ಲಾ ತಾನು ದುಡಿದು ಬರುವವನಾಗಿದ್ದರಿಂದ ತನ್ನ ಮುಂದೆ ಮನೆ ಮಂದಿ ತಲೆ ಬಾಗಬೇಕು ಎಂದು ಅವರು ಸ್ವತಃ ತೀರ್ಮಾನಿಸಿದ್ದಾರೆ. ಪುರುಷರು ತೋಳ್ಬಲದಲ್ಲೂ ಇತರ ವಿಷಯಗಳಲ್ಲೂ ಮಹಿಳೆಯರಿಗಿಂತ ಶ್ರೇಷ್ಠರು ನಿಜ. ಆದರೆ ಅದು ದಾಂಪತ್ಯ ಜೀವನದಲ್ಲಿ ಗಣನಾರ್ಹವಾದ ವಿಚಾರವಾಗಬಾರದು. ಅಲ್ಲಿ ಸ್ತ್ರೀಯರು ಮತ್ತು ಪುರುಷರು ಸಮಾನವಾಗಿದ್ದಾರೆ. ಒಬ್ಬರಿಗೊಬ್ಬರು ನೆರವಾಗಬೇಕಾದುದು ದಾಂಪತ್ಯ ಸುಖಮಯವಾಗಲಿಕ್ಕಿರುವ ಮಾನದಂಡವಾಗಿದೆ. ಓರ್ವ ಪತ್ನಿಯನ್ನು ಸತಾಯಿಸುವುದು ಪತಿಯಾದವನಿಗೆ ಭೂಷಣವಲ್ಲ.
ಮಹಿಳೆಯರೊಂದಿಗೆ ಗೌರವಾದರದಿಂದ ವರ್ತಿಸಲು ಇಸ್ಲಾಮ್ ಆಜ್ಞಾಪಿಸುತ್ತದೆ. ಮಹಿಳೆಗೆ ಇಸ್ಲಾಮ್ ನೀಡಿದಷ್ಟು ಸ್ಥಾನಮಾನ ಬೇರಾವುದೇ ಧರ್ಮವು ನೀಡಿಲ್ಲ. ಅಲ್ಲಾಹನು ಹೇಳುತ್ತಾನೆ, “ನೀವು ಅವರೊಂದಿಗೆ ಉತ್ತಮ ರೀತಿಯಿಂದ ಜೀವನ ನಡೆಸಿರಿ.“ (ಅನ್ನಿಸಾ: 19) ಪ್ರವಾದಿ(ಸ) ಹಜ್ಜತುಲ್ ವಿದಾಅïನ ಭಾಷಣದಲ್ಲಿ ಮಹಿಳೆಯರ ಕುರಿತು ಹೇಳಲು ಮರೆಯಲಿಲ್ಲ. “ತಿಳಿಯಿರಿ, ಪತ್ನಿಯರೊಂದಿಗೆ ಉತ್ತಮವಾಗಿ ವರ್ತಿಸಲಿಕ್ಕಿರುವ ನನ್ನ ಉಪದೇಶವನ್ನು ನೀವು ಸ್ವೀಕರಿಸಿರಿ. ಅವರು ನಿಮ್ಮೊಂದಿಗಿರುವ ನಿಮ್ಮ ಆಶ್ರಿತರಾಗಿದ್ದಾರೆ. ನಿಮಗೆ ಇತರ ಯಾವುದೇ ಅಧಿಕಾರ ಅವರ ಮೇಲಿಲ್ಲ. ಅರಿಯಿರಿ, ನಿಮಗೆ ಮಹಿಳೆಯರ ಮೇಲೆ ಕೆಲವು ಹಕ್ಕುಗಳಿವೆ. ಹಾಗೆಯೇ ಅವರಿಗೂ ನಿಮ್ಮ ಮೇಲೆ ಕೆಲವು ಹಕ್ಕುಗಳಿವೆ.”
ಒಮ್ಮೆ ಓರ್ವರು ಪ್ರವಾದಿಯವರೊಂದಿಗೆ(ಸ) ಕೇಳಿದರು, “ಅಲ್ಲಾಹನ ಸಂದೇಶವಾಹಕರೇ, ನಮ್ಮ ಪತ್ನಿಯರಿಗೆ ನಮ್ಮಿಂದ ಲಭಿಸಬೇಕಾದ ಹಕ್ಕುಗಳು ಯಾವುವು?” ಆಗ ಪ್ರವಾದಿ(ಸ) ಹೇಳಿದರು, “ನೀನು ತಿನ್ನುವುದಾದರೆ ಅವಳಿಗೂ ತಿನ್ನಿಸಬೇಕು. ನೀನು ಬಟ್ಟೆ ಧರಿಸಿದರೆ ಅವಳಿಗೂ ತೊಡಿಸಬೇಕು. ಮುಖಕ್ಕೆ ಹೊಡೆಯಬಾರದು. ಅಸಭ್ಯ ಮಾತುಗಳಿಂದ ಜರೆಯಬಾರದು. ಅವರೊಂದಿಗೆ ವಿರಸಗೊಳ್ಳುವುದಾದರೆ ಅದು ಮನೆಯ ಒಳಗೆ ಮಾತ್ರವಾಗಿರಬೇಕು.”
ಇಷ್ಟೆಲ್ಲಾ ನಿಯಮ-ನಿರ್ದೇಶನಗಳು ಕಣ್ಮುಂದೆಯೇ ಇರುವಾಗ ಇಂದು ಪತಿಯಂದಿರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಪ್ರವಾದಿಯವರ(ಸ) ಜೀವನ ಚರ್ಯೆಯನ್ನು ಬೇಕಾದ ಕಡೆಗೆ ಮಾತ್ರ ತೆಗೆದುಕೊಳ್ಳುವುದಲ್ಲ. ದಾಂಪತ್ಯ ಜೀವನಕ್ಕೂ ಅದು ಅನ್ವಯವಾಗುತ್ತದೆ. ಪ್ರವಾದಿಎಸಏ ಓರ್ವ ಉತ್ತಮ ಪತಿಯಾಗಿ ತನ್ನ ಜೀವನವನ್ನು ಇತರರಿಗೆ ಕಲಿಸಿಕೊಟ್ಟಿದ್ದಾರೆ. ಅವರು(ಸ) ತನ್ನ ಪತ್ನಿಯರೊಂದಿಗೆ ಉತ್ತಮವಾಗಿ ವರ್ತಿಸುತ್ತಿದ್ದರು. ನೀವೊಬ್ಬ ಉತ್ತಮ ಪತಿಯಾಗಬೇಕಾದರೆ ಅದಕ್ಕಿರುವ ಮಾರ್ಗದರ್ಶನವು ಪ್ರವಾದಿಯವರ(ಸ) ಜೀವನದಲ್ಲಿದೆ. ಪ್ರವಾದಿ (ಸ)  ಹೇಳಿದರು, “ನಿಮ್ಮ ಪೈಕಿ ಶ್ರೇಷ್ಠರು ಯಾರೆಂದರೆ ಪತ್ನಿಯೊಂದಿಗೆ ಉತ್ತಮವಾಗಿ ವರ್ತಿಸುವವರಾಗಿದ್ದಾರೆ. ನಾನು ನನ್ನ ಪತ್ನಿಯರೊಂದಿಗೆ ಅತ್ಯುತ್ತಮವಾಗಿ ವರ್ತಿಸುವವನಾಗಿದ್ದೇನೆ.”
ಪತ್ನಿಯರ ಅವಶ್ಯಕತೆಗಳು, ಬೇಡಿಕೆಗಳು, ಆಗ್ರಹಗಳನ್ನು ಅರಿತು ಅವರ ಮನಸ್ಸಿಗೆ ಮುದ ನೀಡುವ, ಅವರನ್ನು ಸಂತೋಷಪಡಿಸುವ ವಾತಾವರಣವನ್ನು ಪ್ರವಾದಿ(ಸ) ಸೃಷ್ಟಿ ಮಾಡುತ್ತಿದ್ದರು. ಪ್ರವಾದಿ(ಸ) ಪತ್ನಿಯರೊಂದಿಗಿರುವಾಗ ಅವರ ಮಾನಸಿಕ ಸ್ಥಿತಿಗೆ ಪ್ರವಾದಿಯವರೂ ಮರಳುತ್ತಿದ್ದರು. ಪ್ರವಾದಿಯವರ(ಸ) ಉಪಸ್ಥಿತಿಯನ್ನು ಅವರು ಯಾವಾಗಲೂ ಬಯಸುತ್ತಿದ್ದರು. ಹಾಸ್ಯದ ಮಾತುಗಳಿಂದ ಪತ್ನಿಯರನ್ನು ನಗಿಸುತ್ತಿದ್ದರು. ಅನಸ್(ರ) ವರದಿ ಮಾಡುತ್ತಾರೆ, “ಪ್ರವಾದಿ(ಸ) ಜನರ ಪೈಕಿ ಅತೀ ಹೆಚ್ಚು ಹಾಸ್ಯ ಪ್ರಜ್ಞೆ ಇರುವ ವ್ಯಕ್ತಿಯಾಗಿದ್ದರು.”
ಇಂದಿನ ಪತಿಯಂದಿರು ಇದಕ್ಕೆ ನೇರ ವಿರುದ್ಧವಾಗಿದ್ದಾರೆ. ಪತಿಯು ಮನೆಯಲ್ಲಿದ್ದರೆ ಪತ್ನಿಗೆ ಕಿರಿಕಿರಿಯಾಗುತ್ತದೆ. “ಈ ಮನುಷ್ಯ ಒಮ್ಮೆ ಹೊರಗಡೆ ಹೋಗಿದ್ದರೆ” ಎಂದು ಪತ್ನಿಯು ಬಯಸುವ ವಾತಾವರಣವು ಸೃಷ್ಟಿಯಾಗಿದೆ. ಇದು ಸೃಷ್ಟಿಯಾದದ್ದಲ್ಲ. ಪತಿಯರೇ ಸೃಷ್ಟಿ ಮಾಡಿದ್ದು. ಇಂತಹ ಒಂದು ಮನಸ್ಥಿತಿಯು ದಾಂಪತ್ಯದಲ್ಲಿ ಸೃಷ್ಟಿಯಾದರೆ ಆ ದಾಂಪತ್ಯ ಜೀವನಕ್ಕೆ ಉಳಿಗಾಲವಿದೆಯೇ?
ಆಯಿಶಾರೊಂದಿಗೆ(ರ) ಪ್ರವಾದಿ(ಸ) ಹಲವು ವೇಳೆ ಓಟದ ಸ್ಪರ್ಧೆ ನಡೆಸುತ್ತಿದ್ದರು. ಕೆಲವು ವೇಳೆ ಪ್ರವಾದಿಯವರು(ಸ) ವಿಜಯಿಯಾಗುತ್ತಿದ್ದರು. ಇನ್ನು ಕೆಲವು ವೇಳೆ ಆಯಿಶಾರು(ರ). ಆಯಿಶಾ(ರ) ಕೆಲವು ವರ್ಷಗಳ ಬಳಿಕ ಈ ಘಟನೆಯನ್ನೆಲ್ಲಾ ವಿವರಿಸುತ್ತಾ ಈ ರೀತಿ ಬೋಧಿಸಿದ್ದಾರೆ, “ಆದ್ದರಿಂದ ಕೌಮಾರ ಪ್ರಾಯದವರೂ ವಿನೋದ ಪ್ರಿಯರೂ ಆದ ಸ್ತ್ರೀಯರಿಗೆ ಅರ್ಹವಾದದ್ದನ್ನು ನೀವು ನೀಡಬೇಕು.”
ಆಟಗಳಲ್ಲೂ ವಿನೋದಗಳಲ್ಲೂ ಭಾಗವಹಿಸಲು ಪತ್ನಿಯರಿಗೆ ಅನುಮತಿ ನೀಡುವುದು ದಾಂಪತ್ಯದ ಭದ್ರತೆ ಹಾಗೂ ಬಾಂಧವ್ಯವನ್ನು ಉಳಿಸಿಕೊಳ್ಳಲು ಸಹಾಯಕವಾಗಿದೆ. ಉಮರ್(ರ) ಒಮ್ಮೆ ಹೇಳಿದರು, “ಪುರುಷನು ತನ್ನ ಪತ್ನಿ-ಮಕ್ಕಳ ಬಳಿಗೆ ಹೋದರೆ ಒಂದು ಮಗುವಿನಂತೆ ವರ್ತಿಸಲಿ. ಆದರೆ ಅವನ ಬಳಿಯಿರುವ ಪೌರುಷವು ಏನೆಂದು ಅವರು ತಿಳಿಯಬಯಸುವುದಾದರೆ ಅವನು ಓರ್ವ ಪುರುಷನಾಗಿ ಬದಲಾಗಲಿ.”
ಪ್ರವಾದಿ(ಸ) ತನ್ನನ್ನು ವಿಮರ್ಶಿಸುವ ಮತ್ತು ವಿರೋಧಿಸುವ ಸ್ವಾತಂತ್ರ್ಯವನ್ನು ಪತ್ನಿಯರಿಗೆ ನೀಡಿದ್ದರು. ಎಷ್ಟೊಂದು ಉದಾತ್ತ ಮಾದರಿ, ಇಂದು ಈ ಕುರಿತು ಆಲೋಚಿಸಲೂ ಸಾಧ್ಯವಿಲ್ಲ. ಪತ್ನಿಗೆ ಪತಿಯ ಮುಂದೆ ಸ್ವರ ಎತ್ತುವಂತಿಲ್ಲ. ತನ್ನ ತಪ್ಪುಗಳನ್ನು ತಿದ್ದುವಂತಿಲ್ಲ. “ತಾನು ಮಾಡಿದ್ದೇ ಸರಿ, ತಾನು ಹೇಳಿದ್ದೇ ವೇದ” ಎಂಬ ಧೋರಣೆಯು ಹಲವು ಪುರುಷರಲ್ಲಿ ತಲೆ ಎತ್ತಿದೆ. ಸ್ವಂತ ತೀರ್ಮಾನ ಕೈಗೊಂಡರೆ ಅದನ್ನು ಅನುಸರಿಸಲು ಪತ್ನಿಯರಿಗೆ ನಿರ್ಬಂಧಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಒಂದೊಂದು ಆಯ್ಕೆಗಳಿರುತ್ತವೆ. ಎಲ್ಲರ ಮನಸ್ಸೂ ಒಂದೇ ತೆರನಾಗಿರುವುದಿಲ್ಲ. ಹಾಗಿರುವಾಗ ಪುರುಷನ ತೀರ್ಮಾನಗಳನ್ನು ಬಲಾತ್ಕಾರವಾಗಿ ಪತ್ನಿಯ ಮೇಲೆ ಜಪಹೊರಿಸುವುದು ಎಷ್ಟರ ಮಟ್ಟಿಗೆ ಸರಿ. ಪತ್ನಿಗೂ ಒಂದು ಮನಸ್ಸಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಬೇಕು.
ಒಮ್ಮೆ ಆಯಿಶಾರ(ರ) ಮತ್ತು ಪ್ರವಾದಿಯವರ(ಸ) ಮಧ್ಯೆ ಯಾವುದೋ ಒಂದು ವಿಚಾರದಲ್ಲಿ ವಿರಸ ಉಂಟಾಯಿತು. ಆಗ ಆಯಿಶಾ(ರ) ಹೇಳಿದರು, “ಅಲ್ಲಾಹನ ಪ್ರವಾದಿ ಎಂದು ವಾದಿಸುವ ವ್ಯಕ್ತಿ ನೀವಾ?” ಈ ತರದ ಒಂದು ಪ್ರಶ್ನೆ ಇಂದಿನ ಪತಿಯರಲ್ಲಿ ಕೇಳಿದ್ದರೆ ಅಲ್ಲಿನ ವಾತಾವರಣವೇ ಯುದ್ಧಮಯವಾಗುತ್ತಿತ್ತು. ಆದರೆ ಪ್ರವಾದಿ(ಸ) ಕೇವಲ ಒಂದು ಮುಗುಳ್ನಗೆ ಮಾತ್ರ ಬೀರಿದ್ದರು.
ನಾವು ಕ್ಷುಲ್ಲಕವೆಂದು ಭಾವಿಸುವ ಹಲವಾರು ವಿಚಾರಗಳಿಗೆ ದಾಂಪತ್ಯದಲ್ಲಿ ಮಹತ್ವವಿದೆ. ಪ್ರೀತಿಯಿಂದ ಕೂಡಿದ ಕುಡಿನೋಟ, ಕನಿಕರದಿಂದ ತಲೆ ಸವರುವುದು, ಮನಸ್ಸು ಪುಳಕಗೊಳ್ಳುವಂತಹ ಮಾತುಗಳು ಮೊದಲಾದವುಗಳೆಲ್ಲಾ ದಾಂಪತ್ಯ ಜೀವನದಲ್ಲಿ ಪ್ರಭಾವ ಬೀರುವವುಗಳಾಗಿವೆ. ಒಂದು ನೋಟ, ಒಂದು ಸ್ಪರ್ಶ, ಒಂದು ಉತ್ತಮ ಮಾತು ಇವುಗಳ ಕೊರತೆಯು ಕೆಲವು ವೇಳೆ ಸಮಸ್ಯೆಯ ಸೃಷ್ಟಿಗೆ ಕಾರಣವಾಗಿರಬಹುದು. ಒಂದು ಮಂದಹಾಸವು ಎಲ್ಲಾ ಸಮಸ್ಯೆಗಳನ್ನು ಮರೆಯುವಂತೆ ಮಾಡುವ ಶಕ್ತಿ ಹೊಂದಿದೆ. ಪತಿ-ಪತ್ನಿಯರ ನಡುವಿನ ನೋಟವು ಅಲ್ಲಾಹನ ಕರುಣೆಯ ಭಾಗವಾಗಿ ಪ್ರವಾದಿ(ಸ) ಬಣ್ಣಿಸಿದ್ದಾರೆ. ಆದ್ದರಿಂದ ದಾಂಪತ್ಯದ ಯಶಸ್ವಿಯು ನಮ್ಮ ಕೈಯಲ್ಲೇ ಇದೆ. ಅದನ್ನು ನಾವೇ ಪಡೆದುಕೊಳ್ಳಬೇಕಾಗಿದೆ. “ಪದಾರ್ಥದಲ್ಲಿ ಕೂದಲು” ಸಿಕ್ಕಿದರೆ ಅಂತಹ ಕ್ಷುಲ್ಲಕ ವಿಚಾರಗಳು ದಾಂಪತ್ಯ ಛಿದ್ರಗೊಳ್ಳುವುದಕ್ಕೆ ಕಾರಣವಾಗದಿರಲಿ. ದಾಂಪತ್ಯದಲ್ಲಿನ ಯಶಸ್ವಿಯೇ ಇಹಪರಗಳ ವಿಜಯವಾಗಿದೆ.

2 ಕಾಮೆಂಟ್‌ಗಳು:

  1. ಲೇಖನ ಚೆನ್ನಾಗಿದೆ.ನೆಮ್ಮದಿಯ ದಾಂಪತ್ಯ ಜೀವನಕ್ಕೆ ಪ್ರಚೋದನೆ ಮೂಡಿಸಿದೆ. ಸುಕಲೋಳುಪತಿ ಮತ್ತು ಲೌಕಿಕ ಜೀವನಕೆ ಮಾತ್ರ ಮೀರಿಸುವ ಜೀವನಕ್ಕೆ ಕಾರಣವಾಗುವ, ಆತ್ಮ ಹತ್ಯೆ, ವರದಕ್ಸಿಣೆ ಕಿರುಕುಳ ಕ್ಕೆ ವಿರುದ ಸಲಹೆ ಬೇಕಿತ್ತು. ಸುಕಲೋಳುಪತಿಗೆ ಮಾರು ಹೋಗುವ ಇಂದಿನ ಸಮಾಜದ ನವ ದಾಂಪತ್ಯ ಸಂಸಾರಕ್ಕೆ ಲಭ್ಯ ವಿರುವ ಸು:ಖ, ಸಂತೋಷ, ಸುಕಾರ್ಯಗಳಿಗೆ ತ್ರಪ್ತಿ ಪಡುವ ಸಲಹೆ ಯೂ ಲೇಖನದಲ್ಲಿ ಬೇಕಿತ್ತು.

    ಪ್ರತ್ಯುತ್ತರಅಳಿಸಿ