ಸೋಮವಾರ, ಸೆಪ್ಟೆಂಬರ್ 03, 2012

ಅನುಗ್ರಹಗಳಿಗೆ ಕೃತಘ್ನರಾಗುತ್ತೀರಾ?


 ಅಲ್ಲಾಹನು ನಮಗೆ ಲೆಕ್ಕವಿಲ್ಲದಷ್ಟು ಅನುಗ್ರಹಗಳನ್ನು ದಯಪಾಲಿಸಿದ್ದಾನೆ. ಲೋಕದ ವೈಭವವನ್ನು ನೋಡಲು ಕಣ್ಣುಗಳು, ಶಬ್ದ ತರಂಗಗಳನ್ನು ಆಲಿಸಲು ಕಿವಿಗಳು, ಜನರ ಮಧ್ಯೆ ಪರಸ್ಪರ ವಿಚಾರ ವಿನಿಮಯ ನಡೆಸಲು ನಾಲಗೆ, ವಸ್ತುಗಳನ್ನು ಹಿಡಿದುಕೊಳ್ಳಲು ಕೈಗಳು, ನಡೆದಾಡಲು ಕಾಲುಗಳು, ಆಲೋಚಿಸಲು ಬುದ್ಧಿ ಶಕ್ತಿ ಇವೆಲ್ಲವೂ ಅಲ್ಲಾಹನ ಅಪಾರ ಅನುಗ್ರಹಗಳ ಪೈಕಿ ಕೆಲವೊಂದಾಗಿವೆ. ಇವ್ಯಾವುದೂ ಕ್ಷುಲ್ಲಕ ವಿಚಾರಗಳಲ್ಲ. ಅಲ್ಲಾಹನು ನೀಡಿರುವ ಅನುಗ್ರಹಗಳನ್ನು ಎಣಿಸಲು ಅದು ನಿಮ್ಮಿಂದ ಸಾಧ್ಯವಿಲ್ಲ. ಇದು ಅಲ್ಲಾಹನೇ ಸ್ವತಃ ತಿಳಿಸಿರುವ ವಿಚಾರವಾಗಿದೆ. ಅಲ್ಲಾಹನು ನೀಡಿರುವ ಅನುಗ್ರಹಗಳನ್ನು ಅವನ ಆಜ್ಞೆ, ಆದೇಶಗಳನುಸಾರ ಬಳಸಿದರೆ ಅವು ಅನುಗ್ರಹವಾಗಿ ಉಳಿಯುತ್ತವೆ. ಬದಲಾಗಿ ಆ ಅನುಗ್ರಹಗಳನ್ನು ಸ್ವೇಚ್ಛೆಯಂತೆ ಅಲ್ಲಾಹನ ನಿಯಮಗಳನ್ನು ಉಲ್ಲಂಘಿಸಿ ಬಳಸಿದರೆ ಅದು ನಮ್ಮ ಪಾಲಿಗೆ ಪರೀಕ್ಷೆಯಾಗಿ ಬದಲಾಗುತ್ತವೆ.
ನಮಗೆ ಲಭಿಸುವ ಪ್ರತಿಯೊಂದು ಅನುಗ್ರಹದ ಕುರಿತು ನಾವು ನಾಳೆ ಪರಲೋಕದಲ್ಲಿ ಪ್ರಶ್ನಿಸಲ್ಪಡಲಿದ್ದೇವೆ. ಅನುಗ್ರಹಗಳ ಕುರಿತ ಪ್ರಶ್ನೆಗಳನ್ನು ಎದುರಿಸದೆ ಯಾರು ಕೂಡಾ ಒಂದಡಿ ಮುಂದೆ ಸಾಗಲಿಕ್ಕಿಲ್ಲ. ಭೂಮಿಯಲ್ಲಿ ಲಭಿಸಿದ ಅನುಗ್ರಹಗಳನ್ನು ಅಲ್ಲಾಹನ ಇಚ್ಛೆಗನುಸಾರವಾಗಿ ಬಳಸಿಕೊಂಡವನು ತನ್ನ ವಿಚಾರಣೆಯಲ್ಲಿ ಯಶಸ್ವಿಯಾಗುವನು ಇನ್ನು ಅದನ್ನು ಒಂದು ಪರೀಕ್ಷೆಯಾಗಿ ಪರಿವರ್ತಿಸಿದವನು ಹಲವು ಸಂಕಷ್ಟಗಳನ್ನು ಎದುರಿಸಬೇಕಾದೀತು. ಪ್ರವಾದಿಯವರು(ಸ) ಪ್ರತೀ ಸಂದರ್ಭಗಳಲ್ಲೂ ಅಲ್ಲಾಹನ ಅನುಗ್ರಹಗಳನ್ನು ಬಳಸುವಾಗ ಅವರಲ್ಲಿ ನಾಳೆ ಪರಲೋಕದಲ್ಲಿ ಈ ಅನುಗ್ರಹಗಳಿಗೆ ಸೂಕ್ತ ಉತ್ತರ ನೀಡಲಿಕ್ಕಿದೆ ಎಂಬ ಪ್ರಜ್ಞೆಯು ಜಾಗೃತವಾಗುತ್ತಿತ್ತು. ಅವರು ತಮ್ಮ ಅನುಯಾಯಿಗಳಿಗೂ ಅದೇ ಶಿಕ್ಷಣ ನೀಡಿದ್ದರು. ಆದರೆ ನಮ್ಮಲ್ಲಿ ಇಂದು ಅಂತಹ ಪ್ರಜ್ಞೆ ಅಸ್ತಂಗತವಾಗಿದೆ. ದಿನನಿತ್ಯ ಹಲವಾರು ಅನುಗ್ರಹಗಳನ್ನು ಬೇಕಾಬಿಟ್ಟಿಯಾಗಿ ನಾವು ಬಳಸುತ್ತಿದ್ದರೂ ನಾಳೆ ಅದಕ್ಕೆಲ್ಲಾ ಉತ್ತರಿಸಲಿಕ್ಕಿದೆ ಎಂಬ ಪ್ರಜ್ಞೆ ನಮ್ಮಲ್ಲಿ ಎಂದಾದರೂ ಮೂಡಿದೆಯೇ?
ಆರೋಗ್ಯವು ಅತ್ಯಂತ ಶ್ರೇಷ್ಠ ಅನುಗ್ರಹವಾಗಿದೆ. ಅವಯವಗಳ ರಚನೆ, ಜ್ಞಾನೇಂದ್ರಿಯಗಳ ವ್ಯವಸ್ಥೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಅನುಗ್ರಹಗಳನ್ನು ಋಜುಮಾರ್ಗದಲ್ಲಿ ವಿನಿಯೋಗಿಸಿ ಅದನ್ನು ನೀಡಿದಾತನಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಂದಿ ಈ ಎರಡು ಅನುಗ್ರಹಗಳಿಂದ ವಂಚಿತರಾಗಿರುತ್ತಾರೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಅವುಗಳ ಪೈಕಿ ಒಂದು ಆರೋಗ್ಯವಾಗಿದೆ.
ಅಲ್ಲಾಹನು ಹಲವರಿಗೆ ಉತ್ತಮ ಆರೋಗ್ಯವನ್ನು ದಯಪಾಲಿಸಿದ್ದರೂ ಅವರು ಹಲವು ಚಟಗಳನ್ನು ಮೈಗೂಡಿಸಿ ತಮ್ಮ ಆರೋಗ್ಯವನ್ನು ಹಾಳುಗೆಡಹುತ್ತಿದ್ದಾರೆ. ಮದ್ಯಪಾನ, ಮಾದಕ ವಸ್ತುಗಳ ಸೇವನೆಯಿಂದ ತಮ್ಮ ಉತ್ತಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಕ್ಷಣಿಕ ಸುಖದ ಲಾಲಸೆಗಾಗಿ ಮಹಾ ಅನುಗ್ರಹವೊಂದನ್ನು ಕೈಚೆಲ್ಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸೃಷ್ಟಿಕರ್ತನ ಕುರಿತು ಜ್ಞಾನದ ಕೊರತೆಯಾಗಿದೆ. ನಾಳೆ ಅಲ್ಲಾಹನ ಮುಂದೆ ಆರೋಗ್ಯವೆಂಬ ಅನುಗ್ರಹದ ಕುರಿತು ವರದಿ ಒಪ್ಪಿಸಲಿಕ್ಕಿದೆ ಎಂಬ ಪ್ರಜ್ಞೆಯು ಮನಸ್ಸಲ್ಲಿದ್ದರೆ ಅವರು ಆರೋಗ್ಯವನ್ನು ದೇವ ಮಾರ್ಗಕ್ಕಾಗಿಯೇ ಮುಡಿಪಾಗಿರಿಸುತ್ತಿದ್ದರು.
ನಮಗೆ ಲಭಿಸಿರುವ ಆರೋಗ್ಯದ ಬೆಲೆ ತಿಳಿಯಬೇಕಾದರೆ ರೋಗ ಪೀಡಿತರನ್ನು ಸಂದರ್ಶಿಸಬೇಕು. ಕಣ್ಣಿನ ಬೆಲೆ ತಿಳಿಯಬೇಕಾದರೆ ಕುರುಡನ ಪರದಾಟನ್ನು ನೋಡಿದರೆ ಸಾಕು. ಬುದ್ಧಿಶಕ್ತಿಯ ಬೆಲೆ ಅರಿಯಬೇಕಾದರೆ ಬುದ್ಧಿಮಾಂದ್ಯನ ವರ್ತನೆಗಳನ್ನು ಗಮನಿಸಿದರೆ ಮನದಟ್ಟಾಗುತ್ತದೆ. ನಗರದ ಆಸ್ಪತ್ರೆಗಳಿಗೆ ನೀವು ಒಮ್ಮೆ ಭೇಟಿ ನೀಡಿದರೆ, ಅಲ್ಲಾಹನು ನಮಗೆ ದಯಪಾಲಿಸಿರುವ ಈ ಆರೋಗ್ಯದ ಮೌಲ್ಯವು ಹಗಲಿನಂತೆ ವ್ಯಕ್ಯವಾಗುವುದು. ಕ್ಯಾನ್ಸರ್‍ನಂತಹ ಮಾರಕ ರೋಗಗಳಿಂದ ಬಳಲುತ್ತಿರುವವರು, ಪ್ರಾರ್ಥಮಿಕ ಆವಶ್ಯಕತೆಗಳ ಪೂರೈಕೆಗಾಗಿ ಇತರರನ್ನು ಆಶ್ರಯಿಸುವವರು, ಎದ್ದು ಸರಿಯಾಗಿ ನಡೆದಾಡಲಾಗದವರು, ನಿದ್ದೆಯಿಲ್ಲದೆ ರಾತ್ರಿಯಿಡಿ ಹಾಸಿಗೆಯಲ್ಲಿ ಹೊರಳಾಡುವವರು, ಮಾನಸಿಕ ರೋಗಗಳಿಂದ ನರಳುವವರು ಮೊದಲಾದವರೆಲ್ಲರೂ ನಮ್ಮ ಆರೋಗ್ಯದ ಬೆಲೆಯನ್ನು ನಮಗೆ ನೆನಪಿಸುತ್ತಿದ್ದಾರೆ.
ನಮ್ಮಲ್ಲಿರುವ ಸಂಪತ್ತು, ಪದವಿ, ಅಧಿಕಾರಗಳು ಆರೋಗ್ಯದ ಮುಂದೆ ಕ್ಷುಲ್ಲಕ ವಸ್ತುಗಳಾಗಿವೆ. ಅನಾರೋಗ್ಯ ಪೀಡಿತರಾದಾಗ ಇದು ಹೆಚ್ಚು ಖಾತ್ರಿಯಾಗುತ್ತದೆ. ಸಂಪತ್ತು, ಅಧಿಕಾರದ ಮೂಲಕ ದರ್ಪ ಪ್ರದರ್ಶಿಸಿದವರು ಕೊನೆಗೆ ತಮ್ಮ ಅನಾರೋಗ್ಯದ ಚಿಕಿತ್ಸೆಗಾಗಿ ತಮ್ಮ ಸಂಪತ್ತನ್ನೆಲ್ಲಾ ವ್ಯಯಿಸಿ ದಿವಾಳಿಯಾದವರು ಹಲವರಿದ್ದಾರೆ. ಆರೋಗ್ಯವಿದೆ ಎಂಬ ಹುಂಬ ಧೈರ್ಯದಿಂದ ಸಂಪತ್ತು, ಅಧಿಕಾರದಿಂದ ಅಹಂಕಾರಿಗಳಾದವರು ಆರೋಗ್ಯವನ್ನೇ ಕಳಕೊಂಡಾಗ ಪಶ್ಚಾತ್ತಾಪ ಪಡುತ್ತಾರೆ. ಆರೋಗ್ಯದ ಮರಳಿಕೆಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.
ಅಬ್ಬಾಸಿ ಖಲೀಫರಾದ ಹಾರೂನ್ ರಶೀದ್ ಒಮ್ಮೆ ಇಬ್ನು ಸಮಾಕ್ ಎಂಬ ವಿದ್ವಾಂಸರೊಂದಿಗೆ, “ನನಗೆ ಉಪದೇಶ ಮಾಡಿರಿ” ಎಂದು ಭಿನ್ನವಿರಿಸಿಕೊಂಡರು. ಆ ಸಂದರ್ಭದಲ್ಲಿ ಖಲೀಫರಿಗೆ ಕುಡಿಯಲಿಕ್ಕಾಗಿ ಸ್ವಲ್ಪ ನೀರು ತಂದಿಟ್ಟಿದ್ದರು. ಇಬ್ನು ಸಮಾಕ್ ಹೇಳಿದರು. “ಓ ಅವಿೂರುಲ್ ಮುಅïಮಿನೀನ್ ನಿಮಗೆ ಈ ನೀರನ್ನು ಕುಡಿಯಲು ಅಸಾಧ್ಯವಾದಂತಹ ಸ್ಥಿತಿ ಬಂದೊದಗಿದರೆ ತಮ್ಮ ಅಧಿಕಾರವನ್ನೆಲ್ಲಾ ಅದರ ಚಿಕಿತ್ಸೆಗಾಗಿ ವ್ಯಯಿಸಲಿಕ್ಕಿಲ್ಲವೇ?” ಖಲೀಫ ಹೌದೆಂದು ಉತ್ತರಿಸಿದರು. “ಇನ್ನು ಅದನ್ನು ಸೇವಿಸಿದ ಬಳಿಕ ಅದು ಹೊರ ಹೋಗದಿದ್ದರೆ ಆಗಲೂ ತಾವು ತಮ್ಮ ಅಧಿಕಾರವನ್ನೆಲ್ಲಾ ವಿನಿಯೋಗಿಸಲಿಕ್ಕಿಲ್ಲವೇ?” ಆಗಲೂ ಹೌದೆಂದು ಖಲೀಫರು ಉತ್ತರಿಸಿದರು. ಆಗ ಇಬ್ನು ಸಮಾಕ್ ಹೇಳಿದರು, “ನೀರು ಸೇವಿಸಲು ಮತ್ತು ಅದನ್ನು ವಿಸರ್ಜಿಸಲು ಅಸಾಧ್ಯವಾದುದಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲದ ನಿಮ್ಮ ಅಧಿಕಾರದ ಬೆಲೆಯಾದರೂ ಏನು?” ಇಲ್ಲಿ ರಾಷ್ಟ್ರ ಹಾಗೂ ಅಧಿಕಾರಕ್ಕಿಂತ ಹೆಚ್ಚಿನ ಬೆಲೆ ಆರೋಗ್ಯಕ್ಕಿದೆ ಎಂದು ಉಪದೇಶಿಸಲಾಗಿದೆ.
ನಾವು ಆರೋಗ್ಯವಂತರಾಗಿದ್ದರಿಂದ ನಮಗೆ ಆರೋಗ್ಯದ ಬೆಲೆ ತಿಳಿಯುತ್ತಿಲ್ಲ. ಅದರ ಮಹತ್ವವನ್ನು ಅರ್ಥಮಾಡಿಕೊಳ್ಳಲು ಯಾರೂ ಪ್ರಯತ್ನಿಸುತ್ತಿಲ್ಲ. ಒಂದು ವಸ್ತುವು ನಮ್ಮಲ್ಲಿರುವಾಗ ನಮಗೆ ಅದರ ಬೆಲೆ ತಿಳಿಯುವುದಿಲ್ಲ. ಅದು ಕಳೆದು ಹೋದಾಗ ಮಾತ್ರ ನಮಗೆ ಅದರ ಮೌಲ್ಯ ತಿಳಿಯುತ್ತದೆ. ಬಳಿಕ ಪಶ್ಚಾತ್ತಾಪಪಟ್ಟರೂ ಏನೂ ಪ್ರಯೋಜನವಾಗುವುದಿಲ್ಲ. ನಾಳೆ ಅನುಗ್ರಹದ ವಿಚಾರಣೆಯ ಕುರಿತು ಯಾರೂ ಸಂಶಯ ಪಡಬೇಕಾಗಿಲ್ಲ. ಅದು ನಡೆದೇ ತೀರುವುದು.
ಪ್ರವಾದಿಯವರು(ಸ) ಹೇಳಿದರು, “ನನ್ನ ಆತ್ಮ ಯಾರ ಕೈಯಲ್ಲಿದೆಯೋ, ಅವನಾಣೆ! ನಿಶ್ಚಯವಾಗಿಯೂ ಅಂತ್ಯದಿನದಲ್ಲಿ ಸತ್ಕರ್ಮಗಳೊಂದಿಗೆ ಓರ್ವನು ಬರುವನು. ಅವುಗಳನ್ನು ಒಂದು ಪರ್ವತದ ಮೇಲಿಟ್ಟರೆ ಆ ಪವರ್ತವು ಭಾರದಿಂದ ಕುಸಿಯುವುದು. ಆಗ ಅಲ್ಲಾಹನ ಅನುಗ್ರಹಗಳ ಪೈಕಿ ಒಂದು ಅನುಗ್ರಹವು ಎದ್ದು ನಿಲ್ಲುತ್ತದೆ. ಅಲ್ಲಾಹನ ಅನುಗ್ರಹವು ಅವನನ್ನು ಆವರಿಸದಿರುತ್ತಿದ್ದರೆ ಅದು ಅವನ ಸತ್ಕರ್ಮಗಳೆಲ್ಲವನ್ನು ನಾಶಪಡಿಸುತ್ತಿತ್ತು.” (ತ್ವಬ್ರಾನಿ)
ಇಸ್ಲಾಮ್ ಜೀವನವನ್ನೇ ಒಂದು ಒಂದು ಅನುಗ್ರಹವಾಗಿ ಕಾಣುತ್ತದೆ. ನಮಗೆ ನೀಡಲಾಗಿರುವ ಮನೆ, ರಾತ್ರಿ-ಹಗಲುಗಳ ಸೃಷ್ಟಿ, ಸಂಚಾರ ಸೌಕರ್ಯ ಇವೆಲ್ಲವೂ ಅಲ್ಲಾಹನ ಅನುಗ್ರಹಗಳ ಸಾಲಿಗೆ ಸೇರಿವೆ. ಇವುಗಳಿಗೆಲ್ಲಾ ಕೃತಜ್ಞತೆ ಸಲ್ಲಿಸಲು ಅಲ್ಲಾಹನು ಹೇಳಿದ್ದಾನೆ. ಶ್ರೇಷ್ಠವಾದ ಈ ಜೀವನವು ಅಲ್ಲಾಹನ ವತಿಯಿಂದಿರುವ ಮಹಾ ಸೌಭಾಗ್ಯವಾಗಿದೆ. ಆದ್ದರಿಂದ ಅಲ್ಲಾಹನ ಹಕ್ಕುಗಳನ್ನು ಪೂರೈಸಬೇಕಾದುದೂ ಅತ್ಯಗತ್ಯವಾಗಿದೆ. ಅಲ್ಲಾಹನು ಹೇಳುತ್ತಾನೆ, “ನೀವು ಅಲ್ಲಾಹನನ್ನು ಹೇಗೆ ನಿರಾಕರಿಸುತ್ತೀರಿ? ನೀವಾದರೋ ನಿರ್ಜೀವಿಗಳಾಗಿದ್ದಿರಿ. ಅವನು ನಿಮಗೆ ಜೀವವಿತ್ತನು. ಇನ್ನು ಅವನೇ ನಿಮ್ಮ ಪ್ರಾಣ ತೆಗೆಯುವನು ಮತ್ತು ಅವನೇ ನಿಮಗೆ ಪುನರ್ಜೀವನ ನೀಡುವನು. ತರುವಾಯ ನಿಮಗೆ ಆತನೆಡೆಗೇ ಮರಳಿ ಹೋಗಬೇಕಾಗಿದೆ.”
ಅಲ್ಲಾಹನ ಅನುಗ್ರಹಗಳನ್ನು ಗುರುತಿಸಲಿಕ್ಕಾಗಿ ಅವನು ನಮಗೆ ಪಂಚೇಂದ್ರಿಯಗಳನ್ನು ನೀಡಿದ್ದಾನೆ. ಈ ಮೂಲಕ ನಾವು ಜಗದ ಸೌಂದರ್ಯವನ್ನು ಸವಿಯುತ್ತೇವೆ. ಜೀವನದ ಎಲ್ಲಾ ರಂಗಗಳಲ್ಲೂ ಅದು ವ್ಯಾಪಿಸುವಾಗ ಅದನ್ನು ನೀಡಿದಾತನಿಗೆ ನಾವು ಕೃತಜ್ಞರಾಗಬೇಕಾಗಿದೆ. ಅಲ್ಲಾಹನು ಅನ್ನಹ್ಲ್ ಅಧ್ಯಾಯದ 78ನೇ ಸೂಕ್ತದಲ್ಲಿ ಹೇಳುತ್ತಾನೆ, “ಅಲ್ಲಾಹನು ನೀವು ಏನೂ ಅರಿಯದ ಸ್ಥಿತಿಯಲ್ಲಿ ನಿಮ್ಮನ್ನು ನಿಮ್ಮ ತಾಯಂದಿರ ಹೊಟ್ಟೆಗಳಿಂದ ಹೊರ ತಂದನು. ನೀವು ಕೃತಜ್ಞರಾಗಲಿಕ್ಕಾಗಿ ಅವನು ನಿಮಗೆ ಶ್ರವಣ ಶಕ್ತಿಯನ್ನೂ ದೃಷ್ಟಿಗಳನ್ನೂ ವಿಚಾರ ಮಾಡುವ ಮನಸ್ಸುಗಳನ್ನೂ ನೀಡಿದನು.”
ಆದ್ದರಿಂದ ಅನುಗ್ರಹಗಳನ್ನು ನೀಡಿದಾತನ ಆರಾಧನೆಯು ನಮ್ಮ ನಿಮ್ಮೆಲ್ಲರ ಕಡ್ಡಾಯ ಕರ್ತವ್ಯವಾಗಿದೆ. ಇಷ್ಟೆಲ್ಲಾ ಅನುಗ್ರಹಗಳನ್ನು ಅಲ್ಲಾಹನು ನೀಡಿದ್ದರೂ ಅವನಿಗೆ ಕೃತಜ್ಞತೆ ಸಲ್ಲಿಸುವಲ್ಲಿ ನಾವು ಜಿಪುಣರಾಗುತ್ತಿದ್ದೇವೆ ಅಥವಾ ಆ ಕಡೆಗೆ ಗಮನಹರಿಸುತ್ತಿಲ್ಲ. ನಾಳೆ ಅಲ್ಲಾಹನು ಅನುಗ್ರಹಗಳ ಕುರಿತು ವಿಚಾರಿಸುವಾಗ ಸಮರ್ಪಕ ಉತ್ತರ ನೀಡಲು ನಮಗೆ ಸಾಧ್ಯವಾಗಬೇಕು. ಅವುಗಳನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸುವವರ ಪಟ್ಟಿಯಲ್ಲಿ ಸೇರಲು ನಮಗೆ ಸಾಧ್ಯವಾಗಬೇಕು. ಈ ನಿಟ್ಟಿನಲ್ಲಿ ನಾವು ಸಾಧ್ಯವಾದಷ್ಟು ಪ್ರಯತ್ನ ನಡೆಸಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ