ಸೋಮವಾರ, ಆಗಸ್ಟ್ 12, 2013

ದೇವಾ, ಆ 7 ವಿಭಾಗದವರಲ್ಲಿ ನಮ್ಮನ್ನೂ ಸೇರಿಸು


ಈ ಲೋಕದಲ್ಲಿ ಮನುಷ್ಯನು ಹಲವಾರು ಕರ್ಮಗಳನ್ನೆಸಗುತ್ತಾನೆ. ಕೆಲವರು ಒಳಿತುಗಳನ್ನು ಮಾಡಿದರೆ ಇನ್ನು ಕೆಲವರು ಕೆಡುಕುಗಳಲ್ಲಿ ಮುಳುಗಿರುತ್ತಾರೆ. ಕೆಲವರು ಇತರರಿಗೆ ಅನ್ಯಾಯ ವೆಸಗುವವರಾದರೆ ಇನ್ನು ಕೆಲವರು ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುವವರಾಗಿ ದ್ದಾರೆ. ಇವರಿಗೆಲ್ಲಾ ತಕ್ಕ ಪ್ರತಿಫಲ ನಾಳೆ ಪರಲೋಕದಲ್ಲಿ ದೊರೆಯುತ್ತದೆ. ಹಾಗೆ ಪ್ರತಿಫಲ ನೀಡುವುದಕ್ಕಿಂತ ಮುಂಚೆ ಅಲ್ಲಾಹನು ಎಲ್ಲರನ್ನೂ ವಿಚಾರಣೆಗೆ ಗುರಿಪಡಿಸಲಿದ್ದಾನೆ. ಆ ವಿಚಾರಣೆಯ ದಿನವು ಅತ್ಯಂತ ಭಯಾನಕವೂ ಕಳವಳಕಾರಿಯೂ ಆಗಿರುತ್ತದೆ. ಅಂದು ಮನುಷ್ಯರು ‘ಈ ವಿಚಾರಣೆ ಒಮ್ಮೆ ಮುಗಿದಿರುತ್ತಿದ್ದರೆ’ ಎಂದು ಹಂಬಲಿಸುವರು. ಪ್ರವಾದಿಯವರೇ(ಸ) ಹೀಗೆ ಪ್ರಾರ್ಥಿಸುತ್ತಿದ್ದರು. “ಓ ಅಲ್ಲಾಹ್ ನನ್ನನ್ನು ನೀನು ಸರಳ ವಿಚಾರಣೆ ನಡೆಸು.” ಮತ್ತೆ ನಮ್ಮ ಸ್ಥಿತಿ ಹೇಗಿರಬಹುದು?
ಆದರೆ ಈ ವಿಚಾರಣೆಯ ಸಂದರ್ಭಗಳಲ್ಲಿ ಬಹಳ ಶಾಂತ ಚಿತ್ತದಿಂದ ನಿರ್ಭೀತರಾಗಿರುವ ಕೆಲವರಿದ್ದಾರೆ. ಅವರಿಗೆ ಅಲ್ಲಾಹನ ಸಿಂಹಾಸನದ ನೆರಳು ಲಭಿಸುತ್ತಿರುತ್ತದೆ. ಅವನ ಕರುಣೆಯು ಅವರ ಮೇಲಿರುತ್ತದೆ. ಅವರನ್ನು ಅಲ್ಲಿ ಗೌರವಿಸಲಾಗುತ್ತದೆ.
ಅಲ್ಲಾಹನ ಸಿಂಹಾಸನದ ನೆರಳು ಲಭಿಸುವ ಆ ವಿಭಾಗದವರು ಯಾರಾಗಿರಬಹುದು? ಆ ಸೌಭಾಗ್ಯವಂತರ ಯಾದಿಗೆ ಸೇರಲು ನಮಗೆ ಸಾಧ್ಯವೇ? ಅಬೂ ಹುರೈರ(ರ) ವರದಿ ಮಾಡಿದ್ದಾರೆ. ಪ್ರವಾದಿ ಯವರು(ಸ) ಹೇಳಿದರು, “ಅಲ್ಲಾಹನ ನೆರಳ ಹೊರತು ಬೇರಾವುದೇ ನೆರಳಿಲ್ಲದ ಒಂದು ದಿವಸದಲ್ಲಿ ಅಲ್ಲಾಹನು ಏಳು ಜನರಿಗೆ ತನ್ನ ನೆರಳಿನಲ್ಲಿ ಅಭಯ ನೀಡುವನು. ನ್ಯಾಯವಂತ ಇಮಾಮ್ (ನಾಯಕ). ದೇವನ ಆರಾಧನೆಯಲ್ಲಿ ಬೆಳೆದ ಯುವಕ, ಹೃದಯವು ಮಸೀದಿ ಯೊಂದಿಗೆ ಬೆಸೆದುಕೊಂಡಿರುವ ವ್ಯಕ್ತಿ, ಅಲ್ಲಾಹನಿಗಾಗಿ ಪರಸ್ಪರ ಪ್ರೀತಿಸಿ ಆ ಪ್ರೀತಿಯಲ್ಲಿ ಒಂದುಗೂಡಿ ಅದರಲ್ಲೇ ಬೇರ್ಪಟ್ಟ ಎರಡು ವ್ಯಕ್ತಿಗಳು, ಏಕಾಂತವಾಗಿ ಅಲ್ಲಾಹನನ್ನು ಸ್ಮರಿಸುತ್ತಾ ಕಣ್ಣೀರು ಹರಿಸಿದ ವ್ಯಕ್ತಿ, ಅಂತಸ್ತು ಹಾಗೂ ಸೌಂದರ್ಯವತಿಯಾದ ಓರ್ವ ಮಹಿಳೆ ಆಹ್ವಾನಿಸಿ ದಾಗ, “ನಾನು ಸರ್ವಶಕ್ತನಾದ ಅಲ್ಲಾಹನನ್ನು ಭಯಪಡುತ್ತೇನೆ” ಎಂದು ಪ್ರತ್ಯುತ್ತರ ನೀಡಿದ ಮನುಷ್ಯ ಹಾಗೂ ದಾನ ಮಾಡಿ ತನ್ನ ಬಲ ಕೈ ಖರ್ಚು ಮಾಡಿದ್ದನ್ನು ಎಡಗೈ ತಿಳಿಯದಂತೆ ಗೌಪ್ಯವಾಗಿರಿಸಿದ ವ್ಯಕ್ತಿ.”
ನ್ಯಾಯವಂತ ಇಮಾಮ್:
ಇಲ್ಲಿ ಇಮಾಮ್ ಎಂದರೆ ನಾವು ಸಾಮಾನ್ಯವಾಗಿ ಹೇಳುವಂತೆ ಮಸೀದಿಯ ಇಮಾಮ್ ಅಲ್ಲ. ಬದಲಾಗಿ ಮುಸ್ಲಿಮ್ ಸಮುದಾಯದ ಆಡಳಿತಾಧಿಕಾರಿಯಾಗಿದ್ದಾರೆ. ಆದರೂ ಎಲ್ಲಾ ವಿಧದ ನೇತಾರರನ್ನೂ ಈ ಹದೀಸ್ ಒಳಗೊಂಡಿದೆ. ಇಲ್ಲಿ ನ್ಯಾಯವಂತ ಇಮಾಮ್ ಎಂದಿರುವುದು ಅಲ್ಲಾಹನ ಆಜ್ಞಾನುಸಾರ ತನ್ನ ಅನುಯಾಯಿಗಳನ್ನು ಮುನ್ನಡೆಸುವುದಕ್ಕಾಗಿದೆ. ಏಳು ಜನರ ಪೈಕಿ ನ್ಯಾಯವಂತ ಇಮಾಮ ರನ್ನು ಹೆಸರಿಸಿರುವುದರಿಂದ ನಾಯಕತ್ವದ ಮಹತ್ವ ಸ್ಪಷ್ಟವಾಗುತ್ತದೆ. ಓರ್ವ ನಾಯಕನು ತನ್ನ ಅನುಯಾಯಿಗಳಿಗೆ ಉತ್ತಮ ಮಾದರಿ ಯಾಗಿರಬೇಕು. ಒಂದು ಸಮುದಾಯವು ಉತ್ತಮ ಅಥವಾ ಕೆಟ್ಟದಾಗುವುದು ಅವರ ನೇತಾರರಿಗೆ ಹೊಂದಿಕೊಂಡಿರುತ್ತದೆ. ನಾಯಕರು ಹೇಗಿರುತ್ತಾರೋ ಹಾಗೇ ಅವರ ಪ್ರಜೆಗಳು ಇರುತ್ತಾರೆ. ಒಂದು ಸಮಾಜವನ್ನು ಒಳಿತಿನೆಡೆಗೆ ಕೊಂಡೊಯ್ಯುವ ಬಹಳ ಗೌರವಯುತವೂ ಕ್ಲಿಷ್ಟಕರವೂ ಆದ ಜವಾಬ್ದಾರಿ ಆ ಸಮಾಜದ ನೇತಾರನ ಕೈಯಲ್ಲಿರುತ್ತದೆ. ಆದ್ದರಿಂದಲೇ ಅವರಿಗೆ ನಾಳೆ ಪರಲೋಕ ದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ.
ದೇವಾರಾಧನೆಯಲ್ಲಿ ಬೆಳೆದ ಯುವಕ:


ಯುವತ್ವ ಎಂಬುದು ಮಾನವ ಜೀವನದ ಒಂದು ಸುವರ್ಣ, ಸುಂದರ ಕಾಲವಾಗಿದೆ. ಈ ಕಾಲದಲ್ಲಿ ಮನುಷ್ಯನಿಗೆ ಏನನ್ನೂ ಮಾಡಲು ಸಾಧ್ಯವಿರುತ್ತದೆ. ಹೆಚ್ಚಾಗಿ ಕೆಡುಕಿನ ಕಡೆಗೆ ಆಕರ್ಷಿತರಾಗುವುದು ಈ ಕಾಲದಲ್ಲಾಗಿದೆ. ಸನ್ಮಾರ್ಗದಿಂದ ದುರ್ಮಾರ್ಗಕ್ಕೆ ಕೊಂಡೊಯ್ಯುವ ಶೈತಾನನ ಪ್ರಯತ್ನಗಳಿಗೆ ಸುಲಭವಾಗಿ ಬಲಿಪಶು ಆಗುವುದು ಯೌವ ನದ ಪ್ರಾಯದಲ್ಲಾಗಿದೆ. ಯೌವನವು ಮೋಜು-ಮಸ್ತಿಗಾಗಿ ಇರುವುದು ಎಂಬ ಭಾವನೆ ಯುವಜನತೆಯಲ್ಲಿರುತ್ತದೆ. ಪ್ರಾಯವಾಗುವಾಗ ಸತ್ಕರ್ಮಗಳನ್ನೆಸಗೋಣ ಎಂಬ ನಿರೀಕ್ಷೆಯನ್ನಿಟ್ಟಿರುತ್ತಾರೆ. ಆದ್ದರಿಂದ ಈ ಯೌವನದ ಕಾಲದಲ್ಲಿ ಜೀವನವನ್ನು ಅಲ್ಲಾಹನ ಆರಾಧನೆಗಾಗಿ ಮುಡಿಪಾಗಿರಿಸುವುದು ಕಷ್ಟ ಸಾಧ್ಯವಾದ ಕೆಲಸವಾಗಿರುತ್ತದೆ. ಹಿಂದಿನ ಕಾಲಕ್ಕಿಂತ ಈ ಕಾಲದಲ್ಲಿ ಇದು ಹೆಚ್ಚು ದುಸ್ತರವಾಗಿರುವುದು. ಮೊಬೈಲು ಇಂಟರ್‍ನೆಟ್‍ಗಳ ಈ ಯುಗದಲ್ಲಿ ಯುವತ್ವವು ಕೆಡುಕುಗಳ ಮುಂದೆ ಸುಲಭದಲ್ಲಿ ಶರಣಾಗುತ್ತದೆ. ಆದ್ದರಿಂದ ಈ ಅಡೆತಡೆಗಳನ್ನೆಲ್ಲ ಮೆಟ್ಟಿ ನಿಂತು ಅಲ್ಲಾಹನಿಗಾಗಿ ಯೌವನವನ್ನು ವ್ಯಯಿಸಿದವನಿಗೆ ಸ್ವರ್ಗವಲ್ಲದೆ ಇನ್ನೇನು ಲಭಿಸಲು ಸಾಧ್ಯ.
ಮಸೀದಿಯೊಂದಿಗೆ ಬೆಸೆಯಲ್ಪಟ್ಟ ಮನಸ್ಸು:
ನಮಾಝ್, ದಿಕ್ರ್, ತಸ್ಬೀಹ್, ರಾತ್ರಿ ಜಾಗರಣೆ ಮುಂತಾದವುಗಳಿ ಗಾಗಿ ಮಸೀದಿಯಲ್ಲಿ ಕಳೆಯುವುದು, ಮಸೀದಿಗಳನ್ನು ಪ್ರೀತಿಸುವುದು, ಮಸೀದಿಯ ಪಾಲನೆಯನ್ನು ನೋಡಿಕೊಳ್ಳುವುದು, ಮಸೀದಿಗೆ ಬೇಕಾಗುವ ವ್ಯವಸ್ಥೆಗಳನ್ನು ಮಾಡುವುದು ಮುಂತಾದ ಕಾರ್ಯಗಳು ಈ ಸಾಲಿಗೆ ಸೇರುತ್ತವೆ. ಇಂದು ಮಸೀದಿಯನ್ನು ಬಳಸಿಕೊಳ್ಳುವವರು ಬಹಳ ವಿರಳವಾಗಿದ್ದಾರೆ. ನಮಾಝ್‍ಗಳನ್ನು ನಿರ್ವಹಿಸುವುದಿದ್ದರೂ
ಅದನ್ನು ಮನೆಯಲ್ಲೇ ನಿರ್ವಹಿಸುತ್ತಾರೆ. ಮಸೀದಿಯ ಶೌಚಾಲಯ ಗಳನ್ನು ಮಾತ್ರ ಉಪಯೋಗಿಸುವವರಿದ್ದಾರೆ. ತನ್ನ ಪ್ರಾಥಮಿಕ ಅವಶ್ಯಕತೆ ಮುಗಿಸಿದ ಬಳಿಕ ಮಸೀದಿಯಲ್ಲಿ ಜಮಾಅತ್ ನಮಾಝ್ ನಡೆಯು ತ್ತಿದ್ದರೂ ಅದರಲ್ಲಿ ಭಾಗವಹಿಸದೆ ಹೋಗುವವರಿದ್ದಾರೆ.
ಇಂದು ಈ ಸಮುದಾಯದಲ್ಲಿ ಮಸೀದಿಯ ಪಾಲನೆ ಮಾಡುವವರನ್ನು ತಾತ್ಸಾರ ಭಾವನೆಯಿಂದ ನೋಡಲಾಗುತ್ತದೆ. ‘ಮುಕ್ರಿ’ ಎಂದು ಅವರನ್ನು ಕರೆಯಲಾಗುತ್ತದೆ. ‘ಮುಕ್ರಿ’ ಎಂಬುದು ಯಾವುದೋ ಕೀಳು ಮಟ್ಟದ ಕೆಲಸ ಎಂದು ಭಾವಿಸುತ್ತಾರೆ. ಆದರೆ ಇದು ಅಲ್ಲಾಹನ ಬಳಿ ಅತ್ಯಂತ ಶ್ರೇಷ್ಠ ಕೆಲಸವಾಗಿದೆ. ಮಸೀದಿಗಳು ಅಲ್ಲಾಹನ ಗೃಹವಾಗಿದೆ. ಮಸೀದಿಯೊಂದಿಗಿರುವ ಗೌರವಾದರಗಳು ಅಲ್ಲಾಹನೊಂದಿಗಿರುವ ಭಯಭಕ್ತಿಯ ಭಾಗವಾಗಿದೆ. ಕುರ್‍ಆನ್ ಹೇಳುತ್ತದೆ, “ಅಲ್ಲಾಹನಲ್ಲೂ ಅಂತ್ಯದಿನದಲ್ಲೂ ವಿಶ್ವಾಸ ತಾಳುವವರೂ ನಮಾಝ್ ಸಂಸ್ಥಾಪಿಸುವವರೂ ಝಕಾತ್ ಪಾವತಿಸುವವರೂ ಅಲ್ಲಾಹನ ಹೊರತು ಇತರ ಯಾರನ್ನೂ ಭಯಪಡದವರು ಮಾತ್ರ ಮಸೀದಿಗಳ ಪಾಲನೆ ಮಾಡುವರು.”
ಅಲ್ಲಾಹನಿಗಾಗಿ ಪ್ರೀತಿಸಿದವರು:
ಅಲ್ಲಾಹನಿಗಾಗಿ ಪರಸ್ಪರ ಪ್ರೀತಿಸುವವರೂ ಅದಕ್ಕಾಗಿ ಒಂದು ಗೂಡುವವರೂ ಅದಕ್ಕಾಗಿ ಪರಸ್ಪರ ಬೇರ್ಪಡುವವರೂ ಅಲ್ಲಾಹನ ಸಿಂಹಾಸನದ ನೆರಳು ಲಭಿಸುವ ವಿಭಾಗಕ್ಕೆ ಸೇರಿದವರಾಗಿದ್ದಾರೆ. ಅವರು ಅಲ್ಲಾಹನಿಗಾಗಿ ಪರಸ್ಪರ ಒಂದಾಗುತ್ತಾರೆ. ಅವರ ಮಧ್ಯೆ ಪ್ರೀತಿ, ಸೌಹಾರ್ದತೆಯನ್ನು ಬೆಳೆಸುತ್ತಾರೆ. ಇನ್ನು ಅಲ್ಲಾಹನಿಗಾಗಿ ಪರಸ್ಪರ ಬಿಟ್ಟಗಲುವ ಸಂದರ್ಭವೊದಗಿದಾಗ ಅವರು ಬೇರ್ಪಡುತ್ತಾರೆ. ಪರಸ್ಪರ ಇರುವ ಪ್ರೀತಿಯ ಆಳವು ಅವರನ್ನು ಬೇರ್ಪಡುವುದರಿಂದ ತಡೆದಿರಿಸುವುದಿಲ್ಲ. ಅವರು ತಮ್ಮ ಮಧ್ಯೆ ಇರುವ ಪ್ರೀತಿಯನ್ನು ಕಾಪಾಡುತ್ತಾ ಪರಸ್ಪರ ಬಿಟ್ಟಗಲುತ್ತಾರೆ.
ಅಲ್ಲಾಹನಿಗಾಗಿರುವ ಸ್ನೇಹ ಸಂಬಂಧವು ಒಂದು ದೊಡ್ಡ ಅನುಗ್ರಹವಾಗಿದೆ. ಅಂತಹ ಸಂಬಂಧಗಳ ದೃಢತೆ ಹಾಗೂ ಆಯುಷ್ಯವು ಬೇರಾವುದೇ ಸಂಬಂಧಕ್ಕಿರುವುದಿಲ್ಲ. ಪವಿತ್ರ ಕುರ್‍ಆನ್ ಹೇಳುತ್ತದೆ. “ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರು ಇವರೆಲ್ಲ ಪರಸ್ಪರ ಆಪ್ತರು. ಅವರು ಒಳಿತುಗಳ ಅಪ್ಪಣೆ ಕೊಡುತ್ತಾರೆ ಮತ್ತು ಕೆಡುಕುಗಳಿಂದ ತಡೆಯುತ್ತಾರೆ, ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ನೀಡುತ್ತಾರೆ ಮತ್ತು ಅಲ್ಲಾಹ್ ಹಾಗೂ ಅವನ ರಸೂಲರ ಅನುಸರಣೆ ಮಾಡುತ್ತಾರೆ. ಇವರ ಮೇಲೆ ಅಲ್ಲಾಹನ ಕರುಣೆ ಅವತೀರ್ಣಗೊಂಡೇ ತೀರುವುದು. ನಿಶ್ಚಯವಾಗಿಯೂ ಅಲ್ಲಾಹನು ಮಹಾ ಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ.” (ಅತ್ತೌಬ: 71)
ದೇವಸ್ಮರಣೆಯಿಂದ ಕಣ್ಣೀರು ಹರಿಸುವವರು:
ಈ ವಿಭಾಗದವರು ಲೌಕಿಕ ಬೆಡುಗು ಬಿನ್ನಾಣಗಳಿಂದೆಲ್ಲಾ ದೂರ ನಿಂತು ವ್ಯರ್ಥ ಕಾರ್ಯಗಳಲ್ಲಿ ಮುಳುಗದೆ ಏಕಾಂಗಿಯಾಗಿ ಅಲ್ಲಾಹನನ್ನು ಸ್ಮರಿಸುತ್ತಾ ತಮ್ಮ ತಪ್ಪುಗಳಿಗಾಗಿ ಕಣ್ಣೀರು ಹರಿಸಿ ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತಾರೆ. ಇದು ನೈಜ ಸತ್ಯವಿಶ್ವಾಸಿಗಳ ಗುಣಗಳ ಪೈಕಿ ಒಂದು ಶ್ರೇಷ್ಠ ಗುಣವಾಗಿದೆ. ಇಂಥವರ ಕುರಿತು ಅಲ್ಲಾಹನು ಹೇಳುತ್ತಾನೆ, “ಅಲ್ಲಾಹನ ಪ್ರಸ್ತಾಪ ಕೇಳಿದೊಡನೆ ಹೃದಯದಲ್ಲಿ ನಡುಕ ಉಂಟಾಗುವವರೇ ನಿಜವಾದ ಮುಅïಮಿನರು. ಅವರ ಮುಂದೆ ಅಲ್ಲಾಹನ ಸೂಕ್ತಗಳನ್ನು ಓದಿದಾಗ ಅವರ ಸತ್ಯವಿಶ್ವಾಸ ವೃದ್ಧಿಯಾಗುತ್ತದೆ ಮತ್ತು ಅವರು ತಮ್ಮ ಪ್ರಭುವಿನ ಮೇಲೆ ಭರವಸೆ ಇಡುತ್ತಾರೆ.” (ಅನ್‍ಫಾಲ್- 2)
ಶಿಷ್ಟಾಚಾರದ ಪ್ರಜ್ಞೆ ಇರುವವರು:
ಒಂದು ನಿರ್ಜನ ಪ್ರದೇಶದಲ್ಲಿ ಓರ್ವ ಮಹಿಳೆಯು ನಿಮ್ಮನ್ನು ಆಹ್ವಾನಿಸುವಾಗ ನಿಮ್ಮಲ್ಲಿನ ವಿಶ್ವಾಸದ ಪ್ರಭಾವದಿಂದಾಗಿ ನೀವು ಮನಸ್ಸಿನಲ್ಲೋ ನಾಲಗೆಯಲ್ಲೋ ಹೇಳುತ್ತೀರಿ, “ಇಲ್ಲ, ನಾನಿದಕ್ಕೆ ತಯಾ ರಿಲ್ಲ. ಇದು ಅಲ್ಲಾಹನು ತೀವ್ರವಾಗಿ ವಿರೋಧಿಸಿದ ಅಶ್ಲೀಲ ಕೃತ್ಯ ವಾಗಿದೆ.” ಈ ಶ್ರೇಷ್ಠವಾದ ಧಾರ್ಮಿಕ ಪ್ರಜ್ಞೆ ಹೊಂದಿದವರನ್ನು ಅಲ್ಲಾಹನು ತನ್ನ ಸಿಂಹಾಸನದ ನೆರಳು ನೀಡಿ ಅನುಗ್ರಹಿಸುತ್ತಾನೆ. ಅವರು ದೇಹೆಚ್ಛೆಯ ಬೇಡಿಕೆಗೆ ತಣ್ಣೀರೆರಚಿ ತನ್ನ ಪ್ರಭುವಿನ ಆಜ್ಞೆಯನ್ನು ಪಾಲಿಸುವವರಾಗಿದ್ದಾರೆ. ಇಂತಹ ವ್ಯಕ್ತಿಗಳು ಸ್ವರ್ಗಕ್ಕೆ ಅರ್ಹರಾಗುತ್ತಾರೆ.
ಪ್ರಸಿದ್ಧಿ ಬಯಸದೆ ದಾನ ಮಾಡುವವರು:
ಇವರು ಜನರ ಮಧ್ಯೆ ಪ್ರಸಿದ್ಧಿ ಅಥವಾ ಹೆಸರು ಗಳಿಸಲು ದಾನ ಮಾಡುವವರಲ್ಲ. ಅವರ ದಾನದ ಉದ್ದೇಶವು ಕೇವಲ ಅಲ್ಲಾಹನ ಸಂಪ್ರೀತಿ ಮಾತ್ರವಾಗಿರುತ್ತದೆ. ಅವರ ದಾನದಲ್ಲಿ ಸ್ವಾರ್ಥತೆ ಅಥವಾ ಕಾಪಟ್ಯ ಇರುವುದಿಲ್ಲ. ಪತ್ರಿಕೆಗಳಲ್ಲಿ ಫೆÇೀಟೋ ಪ್ರಕಟಗೊಳ್ಳುವುದಕ್ಕೋಸ್ಕರ ಅವರು ದಾನ ಮಾಡುವುದಲ್ಲ. ಎಷ್ಟರ ವರೆಗೆಂದರೆ ಅವರ ದಾನವು, ಬಲಗೈ ನೀಡಿದ್ದು ಎಡಗೈ ತಿಳಿಯ ದಷ್ಟರ ಮಟ್ಟಿಗೆ ರಹಸ್ಯವಾಗಿರುತ್ತದೆ. ಜನರ ಮಧ್ಯೆ ಹೆಸರು ಗಳಿಸಲಿಕ್ಕಾಗಿ ದಾನ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಅವರು ರಹಸ್ಯವಾಗಿ, ಅಲ್ಲಾಹನ ಸಂಪ್ರೀತಿಗೋಸ್ಕರ ದಾನ ಮಾಡುವವರಾಗಿರುತ್ತಾರೆ. ಅಲ್ಲಾಹನು ನಮ್ಮೆಲ್ಲರನ್ನು ಈ ಏಳು ವಿಭಾಗದವರಲ್ಲಿ ಸೇರಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ