ಸೋಮವಾರ, ಸೆಪ್ಟೆಂಬರ್ 02, 2013

ಆ ಮೂವರ ಪ್ರಾರ್ಥನೆಯ ಬಗ್ಗೆ ಎಚ್ಚರ ವಹಿಸಿ



ಓರ್ವ ವಿಶ್ವಾಸಿಗೆ ಸಂಬಂಧಿಸಿದಂತೆ ಪ್ರಾರ್ಥನೆ ಎಂಬುದು ಆತನ ಆಯುಧವಾಗಿದೆ. ಪ್ರಾರ್ಥನೆಯು ವಿಶ್ವಾಸಿಯನ್ನು ತನ್ನ ಸೃಷ್ಟಿಕರ್ತನೊಂದಿಗೆ ಜೋಡಿಸುತ್ತದೆ. ವಿಶ್ವಾಸಿಯು ಅಲ್ಲಾಹ ನೊಂದಿಗೆ ಪ್ರಾರ್ಥಿಸುವಾಗ ಅಲ್ಲಾಹನು ಸಂತುಷ್ಟನಾಗುತ್ತಾನೆ. ಪ್ರವಾದಿಯವರು(ಸ) ಪ್ರಾರ್ಥನೆಯನ್ನು ಆರಾಧನೆ ಎಂದಿದ್ದಾರೆ. ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ ಅಲ್ಲಾಹನು ಖಂಡಿತವಾಗಿಯೂ ಸ್ವೀಕರಿಸುತ್ತಾನೆ. ಅಲ್ಲಾಹನ ವಿಧಿಯನ್ನು ಬದಲಿಸುವ ಶಕ್ತಿಯು ಪ್ರಾರ್ಥನೆಯಾಗಿದೆ. ಪ್ರವಾದಿಯವರು(ಸ) ಹೇಳಿದರು. “ಪ್ರಾರ್ಥನೆ ಯಲ್ಲದೆ ವಿಧಿಯನ್ನು ಬದಲಿಸುವುದಿಲ್ಲ. ಒಳಿತಲ್ಲದೆ ಆಯುಷ್ಯವನ್ನು ಹೆಚ್ಚಿಸುವುದಿಲ್ಲ.”
ನಾವೆಲ್ಲರೂ ಪ್ರಾರ್ಥಿಸುತ್ತೇವೆ. ನಮ್ಮ ಬೇಡಿಕೆಗಳನ್ನು ಕಷ್ಟ, ಬೇಗುದಿಗಳನ್ನೂ ಅಲ್ಲಾಹನ ಮುಂದೆ ಇಡುತ್ತೇವೆ. ಅಲ್ಲಾಹನು ಬಯಸಿದರೆ ಅದಕ್ಕೆ ಉತ್ತರ ನೀಡುತ್ತಾನೆ ಅಥವಾ ತಿರಸ್ಕರಿಸುತ್ತಾನೆ. ತಿರಸ್ಕರಿಸಲ್ಪಡದ ಮೂರು ಮಂದಿಯ ಪ್ರಾರ್ಥನೆಗಳ ಕುರಿತು ಪ್ರವಾದಿಯವರು(ಸ) ಹೇಳಿದ್ದಾರೆ.
ಅಬೂ ಹುರೈರಾ(ರ) ವರದಿ ಮಾಡಿದ್ದಾರೆ. ಪ್ರವಾದಿ ಯವರು(ಸ) ಹೇಳಿದರು, “ಮೂರು ಮಂದಿಯ ಪ್ರಾರ್ಥನೆಗಳು ತಿರಸ್ಕರಿಸಲ್ಪಡುವುದಿಲ್ಲ. ಉಪವಾಸಿಗನು ಉಪವಾಸ ತೊರೆಯುವ ವರೆಗೆ, ನ್ಯಾಯವಂತ ಆಡಳಿತಗಾರ ಮತ್ತು ಮರ್ದಿತನ ಪ್ರಾರ್ಥನೆ. ಅಲ್ಲಾಹನು ಅದನ್ನು ಮೋಡಗಳಿಗಿಂತ ಮೇಲೆ ಉತ್ತುಂಗಕ್ಕೇರಿಸುವನು ಮತ್ತು ಅದಕ್ಕಾಗಿ ಆಕಾಶದ ಬಾಗಿಲುಗಳನ್ನು ತೆರೆಯುವನು. ಅಲ್ಲಾಹನು ಹೇಳುವನು. “ನನ್ನ ಪ್ರತಾಪದಾಣೆ. ಸ್ವಲ್ಪ ತಡವಾದರೂ ನಾನು ನಿನಗೆ ಖಂಡಿತವಾಗಿಯೂ ಸಹಾಯ ಮಾಡುವೆನು.”
ಈ ಪ್ರವಾದಿ ವಚನದ ಪ್ರಕಾರ ಅಲ್ಲಾಹನು ಮೂರು ವಿಭಾಗದವರ ಪ್ರಾರ್ಥನೆಯನ್ನು ಸ್ವೀಕರಿಸುವನು. ಅವರ ಪೈಕಿ ಮೊದಲಿಗರು ಉಪವಾಸಿಗಳಾಗಿದ್ದಾರೆ. ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಉಪವಾಸಿಗನು ತನಗೆ ಅನುಮತಿಸಿದ್ದನ್ನೂ ಹಗಲಿಡೀ ತೊರೆಯುತ್ತಾನೆ. ತನ್ನ ಮನಸ್ಸನ್ನೂ ಜೀವನವನ್ನೂ ಶುದ್ಧೀಕರಿಸಲು ಅವನು ರಮಝಾನ್ ತಿಂಗಳಲ್ಲಿ ಪಣತೊಟ್ಟಿರುತ್ತಾನೆ. ಅದಕ್ಕಾಗಿ ಅವನು ಎಲ್ಲಾ ಕಷ್ಟ, ತ್ಯಾಗಗಳನ್ನು ಸಹಿಸುತ್ತಾನೆ. ಶೈತಾನನ ದುರ್ಭೋದನೆಗಳನ್ನು ಮೆಟ್ಟಿ ನಿಲ್ಲುತ್ತಾನೆ. ಅಲ್ಲಾಹನಿಗಾಗಿ ಅನ್ನ ಪಾನೀಯಗಳನ್ನು ತೊರೆಯುತ್ತಾನೆ. ದೈಹಿಕ ವ್ಯಾಮೋಹಗಳನ್ನು ದಮನಿಸುತ್ತಾನೆ. ತನ್ನ ಜೀವವನ್ನೇ ಅಲ್ಲಾಹನಿನಗಾಗಿ ಸಮರ್ಪಿಸು ತ್ತಾನೆ. ಮಾತನಾಡುವಾಗಲೂ, ಇತರರೊಂದಿಗೆ ವ್ಯವಹರಿಸು ವಾಗಲೂ, ವ್ಯಾಪಾರದಲ್ಲೂ ಕೊಡುಕೊಳ್ಳುವಿಕೆಯಲ್ಲೂ ತಪ್ಪು ಸಂಭವಿಸದಂತೆ ಎಚ್ಚರ ವಹಿಸುತ್ತಾನೆ. ಒಟ್ಟಿನಲ್ಲಿ ಆತ ಅಲ್ಲಾಹ ನನ್ನು ಭಯಪಟ್ಟು ಜೀವಿಸುತ್ತಾನೆ. ಆದ್ದರಿಂದ ಅಲ್ಲಾಹನು ಉಪವಾಸಿಗನಿಗೆ ಪ್ರತ್ಯೇಕ ಆದ್ಯತೆ ನೀಡಿದ್ದಾನೆ. ಪ್ರವಾದಿಯವರು(ಸ) ಉಪವಾಸಿಗನ ಕರ್ಮಗಳ ಕುರಿತು ಹೀಗೆ ಹೇಳಿದ್ದಾರೆ. “ಉಪವಾಸಿಗನ ನಿದ್ದೆಯು ಆರಾಧನೆಯಾಗಿದೆ. ಅವನ ಮೌನವು ದೇವಸ್ಮರಣೆಯಾಗಿದೆ. ಅವನ ಕರ್ಮಗಳಿಗೆ ಇಮ್ಮಡಿ ಪ್ರತಿಫಲ ದೊರೆಯುತ್ತದೆ. ಅವನ ಪ್ರಾರ್ಥನೆಗಳು ಸ್ವೀಕಾರಾರ್ಹವಾಗಿವೆ. ಅವನ ಪಾಪಗಳು ಕ್ಷಮಿಸಲ್ಪಡುವುವು.”
ಅಬೂ ಹುರೈರ(ರ) ವರದಿ ಮಾಡಿರುವ ಇನ್ನೊಂದು ಪ್ರವಾದಿ ವಚನವು ಹೀಗಿದೆ. “ಎಲ್ಲಾ ಉಪವಾಸಿಗರಿಗೂ ಅಲ್ಲಾಹನ ಬಳಿ ಸ್ವೀಕರಿಸಲ್ಪಡುವ ಒಂದು ಪ್ರಾರ್ಥನೆ ಇದೆ. ಒಂದೋ ಇಹಲೋಕದಲ್ಲೇ ಅಲ್ಲಾಹನು ನೀಡುವನು. ಇಲ್ಲದಿದ್ದರೆ ಪರಲೋಕಕ್ಕಾಗಿ ತೆಗೆದಿರಿಸುವನು.”
ಆದ್ದರಿಂದ ಉಪವಾಸಿಗನು ಶುದ್ಧ ಮನಸ್ಸಿನಿಂದ ಪ್ರಾರ್ಥಿಸು ವುದಾದರೆ ಖಂಡಿತವಾಗಿಯೂ ಅದಕ್ಕೆ ಉತ್ತರ ಲಭಿಸುತ್ತದೆ. ಇಮಾಮ್ ತಿರ್ಮಿದಿ ವರದಿ ಮಾಡಿರುವ ಇನ್ನೊಂದು ವಚನದಲ್ಲಿ “ಉಪವಾಸಿಗನು ಉಪವಾಸ ತೊರೆಯುವಾಗ” ಎಂದಿದೆ. ಅಂದರೆ ಉಪವಾಸಿಗನಿಗೆ ನೀಡಲಾದ ಈ ಸೌಲ ಭ್ಯವು ಅತ್ಯಂತ ಹೆಚ್ಚು ಸೂಕ್ತವಾಗಿರುವುದು ಉಪವಾಸ ತೊರೆ ಯುವ ವೇಳೆಯಲ್ಲಾಗಿದೆ. ನಮಾಝ್ ನಿರ್ವಹಿಸುವವನ ಪ್ರಾರ್ಥನೆಯು ಹೆಚ್ಚು ಸ್ವೀಕಾರಾರ್ಹವಾಗುವುದು ಅದರ ಕೊನೆಯ ಗಳಿಗೆಯಲ್ಲಾಗಿದೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ, “ಉಪವಾಸವೂ ಕೂಡಾ ಹಾಗೆಯೇ ಆಗಿದೆ. ಕರ್ಮಗಳಿಗೆ ಪ್ರತಿಫಲ ದೊರೆಯುವುದು ಅದರಿಂದ ವಿರಮಿಸುವ ಸಂದರ್ಭದಲ್ಲಾಗಿದೆಯಷ್ಟೇ.”
ಉಪವಾಸಿಗನ ಬಳಿಕ ಸ್ವೀಕಾರಾರ್ಹವಾಗುವ ಪ್ರಾರ್ಥನೆಯು ನ್ಯಾಯವಂತನಾದ ಆಡಳಿತಾಧಿಕಾರಿಯದ್ದಾಗಿದೆ. ಓರ್ವನಿಗೆ ಅಲ್ಲಾಹನು ಅಧಿಕಾರ ನೀಡಿದರೆ ಆ ಅಧಿಕಾರವು ಅಲ್ಲಾಹನ ಅಮಾನತ್ತಾಗಿದೆ. ಅದನ್ನು ಅಲ್ಲಾಹನ ಬಯಕೆಯಂತೆಯೇ ಈ ಭೂಮಿಯಲ್ಲಿ ಸ್ಥಾಪಿಸಬೇಕಾಗಿದೆ. ನ್ಯಾಯ ಪೂರ್ಣವೂ ಅಕ್ರಮ ರಹಿತವೂ ಆದ ಆಡಳಿತ ನಡೆಸುವುದು ಪ್ರತೀ ಆಡಳಿತಾಧಿಕಾರಿಯ ಹೊಣೆಗಾರಿಕೆಯಾಗಿದೆ. ಅಕ್ರಮಿಯಾದ ಆತಳಿತಾಧಿಕಾರಿಯು ಪ್ರಜೆಗಳಿಗೂ, ದೇಶಕ್ಕೂ ಮಾತ್ರವಲ್ಲ ಈ ಲೋಕಕ್ಕೇ ಕಂಟಕ ವಾಗಿರುತ್ತಾನೆ. ಅವನಿಂದಾಗಿ ಸಮಾಜವು ಸರಿದಾರಿಗೆ ಬರುವ ಹೊರತು ತಪ್ಪು ಹಾದಿ ತುಳಿಯುತ್ತದೆ. ಆತ ಎಸಗುವ ಅಕ್ರಮ ಗಳ ದುಷ್ಪರಿಣಾಮಗಳು ಆತನ ಪ್ರಜೆಗಳಿಗೆ ಮಾತ್ರವಲ್ಲ ತಲೆ ತಲಾಂತರಗಳಿಗೂ ವ್ಯಾಪಿಸುತ್ತವೆ. ಇದರಿಂದಾಗಿ ಸಮಾಜದಲ್ಲಿ ಶಾಂತಿಯು ಮರೀಚಿಕೆಯಾಗಿ ಕ್ಷೋಭೆಯು ತಾಂಡವವಾಡುತ್ತದೆ.
ಆದರೆ ನ್ಯಾಯವಂತನಾದ ಆಡಳಿತಾಧಿಕಾರಿಯು ಇದಕ್ಕೆ ನೇರ ವಿರುದ್ಧವಾಗಿರುತ್ತಾನೆ. ಆತ ಯಾವಾಗಲೂ ಪ್ರಜೆಗಳ ಶ್ರೇಯೋಭಿವೃದ್ಧಿಯ ಕುರಿತು ಚಿಂತಿಸುತ್ತಿರುತ್ತಾನೆ. ತನ್ನ ಪ್ರಜೆಗಳಿಗಾಗಿ ತನ್ನ ಬೇಕು-ಬೇಡಗಳನ್ನೆಲ್ಲಾ ಬದಿಗಿರಿಸುತ್ತಾನೆ. ಇತರರಿಗಾಗಿ ಕಷ್ಟ ಅನುಭವಿಸುತ್ತಾನೆ. ಉಮರ್‍ರಂಥ(ರ) ಆಡಳಿತಾಧಿಕಾರಿಗಳ ಜೀವನವನ್ನು ಅಧ್ಯಯನ ನಡೆಸಿದರೆ ಅಧಿಕಾರದಲ್ಲಿ ನ್ಯಾಯ ಪಾಲನೆಯ ನೈಜ ರೂಪವು ಗೋಚರವಾಗಬಹುದು. ಅಲ್ಲಾಹನ ಆಜ್ಞೆಗಳನ್ನು ಸ್ಥಾಪಿಸಲು ಪ್ರಯತ್ನಿಸುವುದರಿಂದ ನ್ಯಾಯವಂತ ಆಡಳಿತಾಧಿಕಾರಿಯು ಅಲ್ಲಾಹನ ಪ್ರಿಯ ದಾಸನಾಗಿರುತ್ತಾನೆ. ಪ್ರವಾದಿಯವರು(ಸ) ಹೇಳಿದರು, “ಅಂತ್ಯ ದಿನದಲ್ಲಿ ಅಲ್ಲಾಹನಿಗೆ ಅತ್ಯಂತ ಪ್ರೀತಿ ಪಾತ್ರನೂ ಅವನ ಸಾಮಿಪ್ಯ ಪಡೆಯುವವನು ನ್ಯಾಯವಂತ ಆಡಳಿತಾಧಿಕಾರಿಯಾಗಿರುತ್ತಾನೆ. ಅಲ್ಲಾಹನಿಗೆ ಅತ್ಯಂತ ಹೆಚ್ಚು ದ್ವೇಷ ಇರುವವನೂ ಅವನಿಂದ ದೂರ ದಲ್ಲಿರುವನನೂ ಅಕ್ರಮಿಯಾದ ಆಡಳಿತಾಧಿಕಾರಿಯಾಗಿರುತ್ತಾನೆ.” (ಅಹ್ಮದ್, ತಿರ್ಮಿದಿ). ಮಾತ್ರವಲ್ಲ, ನಾಳೆ ಪರಲೋಕದಲ್ಲಿ ಅಲ್ಲಾಹನ ನೆರಳು ಲಭಿಸುವ ಏಳು ವಿಭಾಗದವರ ಪೈಕಿ ನ್ಯಾಯವಂತ ಆಡಳಿತಗಾರರೂ ಸೇರಿದ್ದಾರೆ.
ಆದ್ದರಿಂದ ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸುವ ನ್ಯಾಯವಂತ ಆಡಳಿತಾಧಿಕಾರಿಗಳ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸುತ್ತಾನೆ.
ಮೂರನೆಯದಾಗಿ ಹೇಳಿರುವುದು ಮರ್ದಿತನ ಪ್ರಾರ್ಥನೆ ಯಾಗಿದೆ. ಅವನ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸುವನು. ಓರ್ವನು ಅನ್ಯಾಯವಾಗಿ ಆಕ್ರಮಣಕ್ಕೆ ಗುರಿಯಾಗಿರುತ್ತಾನೆ. ಅವನ ನೆರವಿಗೆ ಯಾರೂ ಇರುವುದಿಲ್ಲ. ಯಾರೂ ಇಲ್ಲದವರಿಗೆ ಅಲ್ಲಾಹನು ರಕ್ಷಕನಾಗಿರುತ್ತಾನೆ. ಅವನು ಮನನೊಂದು ನಿಷ್ಕಳಂಕವಾಗಿ ಪ್ರಾರ್ಥಿಸಿದರೆ ಆ ಪ್ರಾರ್ಥನೆಯನ್ನು ಅಲ್ಲಾಹನು ಖಂಡಿತವಾಗಿಯೂ ಸ್ವೀಕರಿಸುವನು. ನೆರವಿಗಾಗಿರುವ ಮರ್ದಿತನ ಮೊರೆಗೆ ಅಲ್ಲಾಹನು ಸ್ಪಂದಿಸುವನು. ಪ್ರವಾದಿಯವರು(ಸ) ಮರ್ದಿತನ ಪ್ರಾರ್ಥನೆಯ ಕುರಿತು ಈ ರೀತಿ ಹೇಳಿದ್ದಾರೆ. “ಮರ್ದಿತನ ಪ್ರಾರ್ಥನೆಯ ಬಗ್ಗೆ ಎಚ್ಚರದಿಂದಿರಿ. ಯಾಕೆಂದರೆ ಅದು ಬೆಂಕಿಯ ಜ್ವಾಲೆಗಳ ಕಣಗಳಂತೆ ಬಾನಲೋಕಕ್ಕೇ ರುತ್ತಿರುತ್ತದೆ.” ಮುಆದ್ ಬಿನ್ ಜಬಲ್‍ರನ್ನು ಯಮನ್‍ಗೆ ರಾಜ್ಯಪಾಲರಾಗಿ ನೇಮಿಸಿದಾಗ ಪ್ರವಾದಿಯವರು(ಸ) ಪ್ರತ್ಯೇಕವಾಗಿ ಹೇಳಿದ್ದರು, “ಮರ್ದಿತನ ಪ್ರಾರ್ಥನೆಯ ಕುರಿತು ನೀನು ಭಯಪಡು. ಕಾರಣ, ಆ ಪ್ರಾರ್ಥನೆ ಮತ್ತು ಅಲ್ಲಾಹನ ಮಧ್ಯೆ ಯಾವುದೇ ಪರದೆಯಿಲ್ಲ.”
ಆದ್ದರಿಂದ ಅಲ್ಲಾಹನೊಂದಿಗೆ ಪ್ರಾರ್ಥಿಸುವುದು ಪ್ರತಿಯೊಬ್ಬ ಸತ್ಯವಿಶ್ವಾಸಿಯ ಕೆಲಸವಾಗಿದೆ. ಪ್ರಾರ್ಥನೆಗೆ ಉತ್ತರ ಲಭಿಸಲಿಲ್ಲ ಎಂದು ನಿರಾಶರಾಗಬಾರದು. ಅಲ್ಲಾಹನು ಪ್ರಾರ್ಥನೆಗಳಿಗೆ ಮೂರು ವಿಧದಲ್ಲಿ ಉತ್ತರ ನೀಡುತ್ತಾನೆ. ಒಂದೋ ಕೂಡಲೇ ಉತ್ತರ ನೀಡುತ್ತಾನೆ. ಅಲ್ಲದಿದ್ದರೆ ಪ್ರಾರ್ಥನೆಯಲ್ಲಿ ಬೇಡಿಕೆ ಯಿರಿಸಿದ್ದಕ್ಕೆ ಸಮಾನವಾದ ಯಾವುದಾದರೂ ಕಾರ್ಯವನ್ನು ನೆರವೇರಿಸಿಕೊಡುತ್ತಾನೆ. ಅದೂ ಅಲ್ಲದಿದ್ದರೆ ಅದನ್ನು ಪರಲೋಕಕ್ಕೆ ವಿೂಸಲಿಡುತ್ತಾನೆ. ಆದ್ದರಿಂದ ನಾವು ನಿಷ್ಕಳಂಕ ಮನಸ್ಸಿನಿಂದ ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸಬೇಕು. ನಮ್ಮ ಪ್ರಾರ್ಥನೆಗಳಿಗೆ ಉತ್ತರ ನೀಡಲು ಅಲ್ಲಾಹನ ಹೊರತು ಇನ್ನಾರಿಗೂ ಸಾಧ್ಯವಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ