ಮಂಗಳವಾರ, ಸೆಪ್ಟೆಂಬರ್ 25, 2012

ಜಾಗ್ರತೆ, ನಿಮ್ಮ ಶತ್ರು ನಿಮ್ಮಲ್ಲೇ ಇದ್ದಾರೆ!

ಸಂಪತ್ತು ಮತ್ತು ಸಂತಾನಗಳು ಅಲ್ಲಾಹನು ನೀಡಿರುವ ದೊಡ್ಡ ಅನುಗ್ರಹಗಳಾಗಿವೆ. ಮಾನವರು ಈ ವಸ್ತುಗಳನ್ನು ಸದಾ ಆಶ್ರಯಿಸಿರುತ್ತಾರೆ. ಸಂಪತ್ತು ಮತ್ತು ಸಂತಾನಗಳ ಗಳಿಕೆಗಾಗಿ ಕಷ್ಟ ಸಾಧ್ಯವಾದ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅವುಗಳನ್ನು ಪಡೆಯುಲು ಹಾತೊರೆಯದವರಿದ್ದಾರೆಯೇ? ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅವುಗಳನ್ನು ಬಯಸುತ್ತಾರೆ. ಮಾನವನ ಐಹಿಕ ಜೀವನವನ್ನೂ ಪರಲೋಕ ಜೀವನವನ್ನೂ ಯಶಸ್ವಿ ಗೊಳಿಸುವ ಶಕ್ತಿ ಈ ಎರಡೂ ಅನುಗ್ರಹಗಳಿಗಿವೆ. ಐಹಿಕ ಜೀವನಕ್ಕೆ ಸಂಬಂಧಿಸಿದಂತೆ ಇವುಗಳು ಕೇವಲ ಅಲಂಕಾರಗಳಾಗಿವೆ. ಅಲ್ಲಾಹನು ಹೇಳುತ್ತಾನೆ, “ಜನರಿಗೆ ಇಂದ್ರಿಯಾಸಕ್ತಿಗಳಾದ-ಸ್ತ್ರೀಯರು, ಮಕ್ಕಳು, ಚಿನ್ನ-ಬೆಳ್ಳಿಗಳ ರಾಶಿ, ಆಯ್ದ ಕುದುರೆಗಳು ಜಾನುವಾರುಗಳು ಮತ್ತು ಕೃಷಿ ಭೂಮಿ-ಇವುಗಳನ್ನು ಅತ್ಯಾಕರ್ಷಕವಾಗಿ ಮಾಡಲಾಗಿದೆ. ಆದರೆ, ಇವೆಲ್ಲ ಇಹಲೋಕದ ಕೆಲವೇ ದಿನಗಳ ಜೀವನ ಸಾಧನಗಳು. ಯಥಾರ್ಥದಲ್ಲಿ ಅತ್ಯುತ್ತಮ ವಾಸ ಸ್ಥಳವಂತು ಅಲ್ಲಾಹನ ಬಳಿಯಲ್ಲಿದೆ.” (ಆಲಿ ಇಮ್ರಾನ್: 14)
ಇನ್ನೊಂದೆಡೆ ಹೀಗೆ ಹೇಳಲಾಗಿದೆ. “ಈ ಸೊತ್ತು ಮತ್ತು ಸಂತತಿಗಳು ಕೇವಲ ಲೌಕಿಕ ಜೀವನದ (ನಿಮ್ಮ ಪ್ರಭುವಿನ ಬಳಿ) ಕ್ಷಣಿಕ ಸೊಬಗು ಮಾತ್ರ. ವಾಸ್ತವದಲ್ಲಿ, ಉಳಿಯುವ ಪುಣ್ಯ ಕಾರ್ಯಗಳೇ ಪರಿಣಾಮದ ದೃಷ್ಟಿಯಿಂದ ಶ್ರೇಷ್ಠವಾಗಿರುತ್ತವೆ. ಅವುಗಳ ಮೇಲೆಯೇ ಉತ್ತಮ ನಿರೀಕ್ಷೆಗಳನ್ನಿರಿಸಿಕೊಳ್ಳಬಹುದು.” (ಅಹ್‍ಕಾಫ್: 46)
ಸಂಪತ್ತು ಮತ್ತು ಸಂತಾನಗಳನ್ನು ಈ ಲೋಕದಲ್ಲಿ ನಮಗೆ ಆಕರ್ಷಣೀಯ  ವಸ್ತುಗಳನ್ನಾಗಿ ಮಾಡಲಾಗಿದೆ. ಅವುಗಳಿಗೆ ಮಾರು ಹೋಗುವುದು ಮಾನವನ ದೌರ್ಬಲ್ಯಗಳಲ್ಲಿ ಸೇರಿದೆ. ಮನುಷ್ಯನ ಪರಲೋಕ ವಿಜಯವು ಇವುಗಳ ನಿರ್ವಹಣೆಯ ಮೇಲೆ ಅವಲಂಬಿತವಾಗಿದೆ. ನಾವು ಬಹಳ ಪ್ರೀತಿಯಿಂದ ನೋಡಿಕೊಳ್ಳುವ ಈ ವಸ್ತುಗಳು ಕೊನೆಗೊಂದು ದಿನ ನಮ್ಮ ಶತ್ರುಗಳಾಗುತ್ತವೆ. ಇಬ್ನುಮಾಲಿಕುಲ್ ಅಶ್‍ಅರಿಯವರಿಂದ(ರ) ವರದಿಯಾಗಿದೆ. ಪ್ರವಾದಿ(ಸ) ಹೇಳಿದರು.
 لَيْسَ عَدُوُّكَ الَّذِي إِذَا قَتَلَكَ أَدْخَلَكَ الْجَنَّةَ ، وَإِذَا قَتَلْتَهُ كَانَ لَكَ نُورًا أَعْدَى عَدُوًّا لَكَ نَفْسُكَ الَّتِي بَيْنَ جَنْبَيْكَ “ನೀನು ಕೊಂದರೆ ನಿನಗೆ ಪ್ರಕಾಶಮಯವಾಗುವ ಮತ್ತು ನಿನ್ನನ್ನು ಕೊಂದು ಬಿಟ್ಟರೆ ನಿನಗೆ ಸ್ವರ್ಗ ಲಭಿಸಲು ಕಾರಣಕರ್ತನಾಗುವವನಲ್ಲ ನಿನ್ನ ನೈಜ ಶತ್ರು. ಬದಲಾಗಿ ನಿನ್ನ ಬೆನ್ನೆಲುಬಿನಿಂದ ನಿನಗೆ ಹುಟ್ಟಿದ ನಿನ್ನ ಸಂತಾನಗಳಾಗಿರಬಹುದು ನಿನ್ನ ಅತ್ಯಂತ ದೊಡ್ಡ ಶತ್ರು. ಆ ಬಳಿಕ ನೀನು ಶೇಖರಿಸಿಟ್ಟಿರುವ ಸಂಪತ್ತಾಗಿದೆ.”
ನಮ್ಮ ಶತ್ರುಗಳು ಹೊರಗೆಲ್ಲೋ ಇದ್ದಾರೆ ಎಂದು ನಾವು ಭಾವಿಸಿದ್ದೇವೆ. ನೆರೆಕರೆಯವರು ಕೆಲವೊಮ್ಮೆ ನಮಗೆ ಶತ್ರುಗಳಾಗುತ್ತಾರೆ. ಸಂಬಂಧಿಕರನ್ನು ನಾವು ಶತ್ರುಗಳಾಗಿಸುತ್ತೇವೆ. ಆದರೆ ಈ ಹದೀಸಿನ ಪ್ರಕಾರ ನಮ್ಮ ಶತ್ರುಗಳು ನಮ್ಮೊಳಗೇ ಇದ್ದಾರೆ. ನಾವು ಜತನದಿಂದ ಕಾಪಾಡಿಕೊಂಡಿದ್ದ ಸಂಪತ್ತು ಮತ್ತು ಸಂತಾನವು ನಮ್ಮ ಮುಂದೆ ಶತ್ರುಗಳಾಗಿ ನಿಲ್ಲುತ್ತವೆ. ನಮ್ಮ ಪರಲೋಕ ವಿಜಯಕ್ಕೆ ಅಡ್ಡಗಾಲು ಹಾಕುತ್ತವೆ. ನಮ್ಮ ಸ್ವರ್ಗ ಪ್ರಾಪ್ತಿಯನ್ನು ತಡೆಯುತ್ತವೆ.
ಹಣ ಸಂಪಾದಿಸುವ ವಿಚಾರದಲ್ಲಿ ಇಸ್ಲಾಮ್ ನಿಷೇಧ ವಿಧಿಸಿಲ್ಲ. ಆದರೆ ಅದು ಜೀವನದ ಪರಮ ಗುರಿಯಾಗುವುದು ಮತ್ತು ಉಳಿದೆಲ್ಲಾ ವಿಚಾರಗಳು ನಗಣ್ಯವಾಗುವ ಸಂದರ್ಭವನ್ನು ಇಸ್ಲಾಮ್ ಸಹಿಸುವುದಿಲ್ಲ. ಸಂಪತ್ತಿನ ಗಳಿಕೆಯೇ ಪ್ರಧಾನ ಕೆಲಸವಾಗಿ ಬಿಟ್ಟರೆ ಅದನ್ನು ಪಡೆಯಲು ಮನುಷ್ಯನು ಯಾವುದೇ ದಾರಿಯನ್ನು ಸ್ವೀರಿಸಲು ಸಿದ್ಧನಾಗುತ್ತಾನೆ. ಅದು ಅಡ್ಡದಾರಿಯಾದರೂ ಸರಿ. ಆಗ ಅವನಿಗೆ ಒಳಿತು-ಕೆಡುಕುಗಳು ಸಮಸ್ಯೆಯಾಗುವುದಿಲ್ಲ. ಹಣ ಗಳಿಕೆಗಾಗಿ ಎದುರಾಗುವ ಎಲ್ಲಾ ತೊಡಕುಗಳನ್ನೂ ಅವನು ನೀಗಿಸಲು ಪ್ರಯತ್ನಿಸುತ್ತಾನೆ. ತತ್ಪರಿಣಾಮಗಾಗಿ ಅವನಲ್ಲಿ ಸಚ್ಚಾರಿತ್ರ್ಯವು ನಶಿಸಿ ಹೋಗುತ್ತದೆ.
ಇನ್ನು ಸರಿಯಾದ ರೀತಿಯಲ್ಲಿ ಸಂಪತ್ತನ್ನು ಗಳಿಸಿದವನು ಅದನ್ನು ಹಕ್ಕುದಾರರಿಗೆ ನೀಡದೆ ಶೇಖರಿಸಿಡುತ್ತಾನೆ. ಬಡವರ ಹಕ್ಕುಗಳು ಅವನಿಂದ ದಮನಿಸಲ್ಪಡುತ್ತವೆ. ಅಲ್ಲಾಹನು ಹೇಳುತ್ತಾನೆ, “ಅವನು ಸಂಪತ್ತನ್ನು ಸಂಗ್ರಹಿಸಿದನು ಮತ್ತು ಅದನ್ನು ಎಣಿಸಿ ಎಣಿಸಿ ಇಟ್ಟನು. ಅವನ ಸಂಪತ್ತು ಶಾಶ್ವತವಾಗಿ ಅವನ ಬಳಿಯಲ್ಲೇ ಇರುವುದೆಂದು ಅವನು ಭಾವಿಸುತ್ತಾನೆ. ಖಂಡಿತ ಇಲ್ಲ. ಅವನು ಪುಡಿಗಟ್ಟಿ ಬಿಡುವ ಸ್ಥಳಕ್ಕೆ ಎಸೆಯಲ್ಪಡುವನು.” (ಅಲ್ ಹುಮಝ: 2-4)
ಮನುಷ್ಯನು ತನ್ನ ಸಂಪತ್ತು ಶಾಶ್ವತ ಎಂದು ಭಾವಿಸುತ್ತಾನೆ. ಇವೆಲ್ಲವನ್ನೂ ಬಿಟ್ಟು ಒಂದು ದಿನ ಬರಿಗೈಯಲ್ಲಿ ಮರಳಲಿಕ್ಕಿದೆ ಎಂಬ ಪ್ರಜ್ಞೆ ಅವನಲ್ಲಿ ಇರುವುದಿಲ್ಲ. ಪ್ರವಾದಿ(ಸ) ಹೇಳಿದರು,
تعس عبد الدينار، تعس عبد الدرهم، عبد الخميصة، إن أعطي منها رضي، وإن لم يعط سخط، تعس وانتكس، وإذا شيك فلا انتقش “ದಿರ್ಹಮ್ ಮತ್ತು ದೀನಾರ್‍ಗಳ ಗುಲಾಮನು ನಾಶ ಹೊಂದಿದನು. ಅವನಿಗೆ ಏನಾದರೂ ನೀಡಲ್ಪಟ್ಟರೆ ಅವನು ಸಂತುಷ್ಟನಾಗುವನು. ನೀಡದಿದ್ದರೆ ಅವನು ಕೋಪಿಷ್ಠನಾಗುವನು. ಅವನ ಎಲ್ಲಾ ಲೆಕ್ಕಾಚಾರಗಳೂ ತಲೆಕೆಳಗಾಗುವುದು. ಅವನಿಗೆ ಒಂದು ಮುಳ್ಳು ಚುಚ್ಚಿದರೂ ಅದನ್ನು ತೆಗೆಯಲು ಜನರು ಸಿಗದೆ ಅವನು ಕಷ್ಟ ಅನುಭವಿಸುವನು.”
ಸಂತಾನಗಳ ಸ್ಥಿತಿಯೂ ಇದೇ ಆಗಿದೆ. ಅಲ್ಲಾಹನ ಸಂಪ್ರೀತಿಗಿಂತ ಹೆಚ್ಚಿನ ಆದ್ಯತೆಯನ್ನು ಮಕ್ಕಳಿಗೆ ನೀಡುವಾಗ ಅವರು ಹೆತ್ತವರಿಗೆ ಶತ್ರುಗಳಾಗಿ ಮಾರ್ಪಡುತ್ತಾರೆ. ಮಕ್ಕಳೊಂದಿಗಿರುವ ಮೇರೆ ವಿೂರಿದ ಪ್ರೀತ್ಯಾದರವು ಹೆತ್ತವರನ್ನು ಮಕ್ಕಳ ಗುಲಾಮರನ್ನಾಗಿಸುತ್ತದೆ. ಮಕ್ಕಳ ಬೇಡಿಕೆ ಗಳನ್ನು, ಆಸೆ-ಚಪಲಗಳನ್ನು ಪೂರೈಸಲು ಹೆತ್ತವರು ಹಲಾಲ್-ಹರಾಮ್‍ಗಳ ಕಡೆಗೆ ಜಾಣ ಕುರುಡು ಪ್ರದರ್ಶಿಸುವ ಮಟ್ಟಕ್ಕೆ ತಲುಪುತ್ತಾರೆ. ಹೇಗಾದರೂ ಮಾಡಿ ಮಕ್ಕಳನ್ನು ತೃಪ್ತಿ ಪಡಿಸುವುದು ಅವರ ಗುರಿಯಾಗಿರುತ್ತದೆ. ದೇವನ ಮಾರ್ಗದಿಂದ ಪಥ ಭ್ರಷ್ಟಗೊಳ್ಳುವ ಸಾಧ್ಯತೆಯೂ ಇಂತಹ ಸಂದರ್ಭಗಳಲ್ಲಿ ಉಂಟಾಗುತ್ತದೆ. ಹೀಗೆ ಮಕ್ಕಳು ಹೆತ್ತವರ ಪಾಲಿಗೆ ಪರಲೋಕ ಜೀವನವನ್ನು ದುರಂತ ಮಯಗೊಳಿಸುವ ಶತ್ರುಗಳಾಗಿ ಬದಲಾಗುತ್ತಾರೆ. ಪ್ರವಾದಿ(ಸ) ಹೇಳಿದರು.
يأتي على الناس زمان يكون هلاك الرجل على يد زوجته وأبويه وولده ، يعيرونه بالفقر ويكلفونه ما لا يطيق ! فيدخل المداخل التي يذهب فيها دينه فيهلك “ನನ್ನ ಸಮುದಾಯಕ್ಕೆ ಒಂದು ಕಾಲ ಬರಲಿಕ್ಕಿದೆ. ಅಂದು ಓರ್ವನ ನಾಶವು ಅವನ ಪತ್ನಿ ಮತ್ತು ಮಕ್ಕಳ ಮೂಲಕವಾಗಿರಬಹುದು. ದಾರಿದ್ರ್ಯದಿಂದಾಗಿ ಅವರು ಅವನನ್ನು ತೆಗಳುತ್ತಿರುವರು. ಹಾಗೆ ಅವನು ನಿಷಿದ್ಧ ಮಾರ್ಗ ತುಳಿಯಲು ನಿರ್ಬಂಧಿತನಾಗುವನು. ಕೊನೆಗೆ ಅವನು ನಾಶ ಹೊಂದುವನು.”
ಪತ್ನಿ-ಮಕ್ಕಳ ಬೇಡಿಕೆಗಳನ್ನು ಪೂರೈಸಲಿಕ್ಕಾಗಿ ಪಾಪ ಕೃತ್ಯಗಳಿಗೆ ಬಲಿಯಾದ ಎಷ್ಟೋ ಮಂದಿ ನಮ್ಮ ಕಣ್ಮುಂದೆಯೇ ಇದ್ದಾರೆ. ಪತ್ನಿಯ ಆಭರಣದ ವ್ಯಾಮೋಹಕ್ಕೆ ಮಣಿದು, ಮಕ್ಕಳ ಆಟಿಕೆಯ ತೀವ್ರ ಬೇಡಿಕೆಗೆ ಬಲಿಯಾಗಿ ಕಳ್ಳತನ ನಡೆಸಿ ಸಿಕ್ಕಿ ಬೀಳುವವರ ಪಟ್ಟಿಯು ಪುಟ್ಟದಲ್ಲ. ಪತ್ನಿ-ಮಕ್ಕಳಿಗಾಗಿ ತನ್ನ ಅಸ್ತಿತ್ವವನ್ನೇ ಅವರು ಮರೆಯುತ್ತಾರೆ. ತಮ್ಮ ಧಾರ್ಮಿಕ ಪ್ರಜ್ಞೆಯನ್ನೇ ಅವರು ಪಣಕ್ಕಿಡುತ್ತಾರೆ. ಅಂಥವರ ಕುರಿತು ಪ್ರವಾದಿ(ಸ) ಹೀಗೆ ಹೇಳಿದ್ದಾರೆ, “ನಾಳೆ ಪರ ಲೋಕದಲ್ಲಿ ಓರ್ವ ವ್ಯಕ್ತಿಯನ್ನು ಕರೆತರಲಾಗುವುದು. ಅವನ ಕುರಿತು “ಇವನ ಒಳಿತುಗಳನ್ನೆಲ್ಲಾ ಇವನ ಕುಟುಂಬವು ತಿಂದು ಮುಗಿಸಿದೆ” ಎಂದು ಹೇಳಲಾಗುವುದು. ಆದ್ದರಿಂದ ನಾವು ನಮ್ಮ ಸಂಪತ್ತು-ಸಂತಾನಗಳು ನಮ್ಮ ಶತ್ರುಗಳಾಗಿ ಬದಲಾಗದಂತೆ ಎಚ್ಚರ ವಹಿಸಬೇಕು. ಆ ಅನುಗ್ರಹಗಳಿಂದಾಗಿ ನಮಗೆ ಸ್ವರ್ಗಪ್ರಾಪ್ತಿಯಾಗಬೇಕೇ ಹೊರತು ನರಕವಲ್ಲ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ