ಸೋಮವಾರ, ಏಪ್ರಿಲ್ 30, 2012

ಹೇಳಿದರೆ ಸಾಲದು, ಮಾಡಿ ತೋರಿಸಿ


ಸಮಾಜದೊಂದಿಗೆ ನಾವು ಹೇಳುವ ವಿಚಾರಗಳು ಯಶಸ್ವಿಯಾಗಬೇಕಾದರೆ, ಸಮಾಜದ ಮಂದಿ ಕಿವಿಗೊಟ್ಟು ಆಲಿಸಬೇಕಾದರೆ ಹಲವಾರು ನಿಬಂಧನೆಗಳ ನಿವ್ರಹಣೆಯು ಅನಿವಾರ್ಯವಾಗಿದೆ. ಅವುಗಳ ಪೈಕಿ ಮಾದರಿ ಜೀವನವು ಪ್ರಮುಖವಾದುದಾಗಿದೆ. ಓರ್ವನು ಸಮಾಜದ ಉದ್ಧಾರಕ್ಕಾಗಿ ಮುಂದೆ ಬರುವುದಾದರೆ ಅವನ ಜೀವನವು ಉತ್ತಮವಾಗಿರಬೇಕು. ಅವನ ವರ್ತನೆಗಳು ಮಾದರಿ ಯೋಗ್ಯವಾಗಿರಬೇಕು. ಒಳಿತನ್ನು ಸ್ಥಾಪಿಸಲು ಬಯಸುವವನ ಜೀವನವು ಒಳಿತಿನಿಂದ ಕೂಡಿರಬೇಕು. ಸಮಾಜದಿಂದ ಕೆಡುಕನ್ನು ಅಳಿಸಲು ಹೊರಟವನ ಜೀವನವು ಕೆಡುಕುಗಳಿಂದ ಮುಕ್ತವಾಗಿರಬೇಕು. ಮಧ್ಯದ ಬಾಟಲಿಯನ್ನು ಜೇಬಲ್ಲಿರಿಸಿ ತನ್ನ ಶಿಷ್ಯರಿಗೆ ಮಧ್ಯಪಾನದ ಕೆಡುಕುಗಳನ್ನೂ, ಅದನ್ನು ಕುಡಿಯುವುದರಿಂದಾಗುವ ಅನಾಹುತಗಳನ್ನೂ ವಿವರಿಸಿ ಮುನ್ನೆಚ್ಚರಿಕೆ ನೀಡುವ ಅಧ್ಯಾಪಕನ ಕುರಿತೊಮ್ಮೆ ಆಲೋಚಿಸಿ ನೋಡಿ. ಇದು ಎಂತಹ ಅನರ್ಥವಾಗಿರಬಹುದು. ಇಂದು ಕೂಡಾ ನಡೆಯುತ್ತಿರುವುದು ಇದೇ ಆಗಿದೆ. ಜನರಿಗೆ ಉಪದೇಶ ನೀಡುವುದರಲ್ಲಿ ಸದಾ ಮುಂದಿರುವ ಕೆಲವರು ತಮ್ಮ ವೈಯಕ್ತಿಕ ಜೀವನದಲ್ಲಿ ಆ ಯಾವುದೇ ಅಂಶಗಳು ಇರುವುದಿಲ್ಲ. ಸ್ವಂತ ಜೀವನವು ಕೆಡುಕಿನಿಂದ ಕೂಡಿದ್ದರೂ ಜನರಿಗೆ ಉಪದೇಶ ನೀಡುವುದರಲ್ಲಿ ಚುರುಕಾಗಿರುತ್ತಾರೆ.
ಈ ರೀತಿಯ ಜನರನ್ನು ಅಲ್ಲಾಹನು ಇಷ್ಟಪಡುವುದಿಲ್ಲ. ಕುರಾನ್   ಹೇಳುತ್ತದೆ. “ಓ ಸತ್ಯ ವಿಶ್ವಾಸಿಗಳೇ, ನೀವು ಮಾಡದ್ದನ್ನು ಆಡುತ್ತೀರೇಕೆ? ಮಾಡದ್ದನ್ನು ಆಡುವುದು ಅಲ್ಲಾಹನ ಬಳಿ ಅತ್ಯಂತ ಅಪ್ರಿಯ ಕೃತ್ಯವಾಗಿದೆ.” (ಅಸ್ಸಫ್ಫ್  - 2,3) ಅದೇ ರೀತಿ ಸೂರಃ ಅಕರಾದ 44ನೇ ಸೂಕ್ತದಲ್ಲಿ ಅಲ್ಲಾಹನು ಕೇಳುತ್ತಾನೆ, “ನೀವು ಇತರರಿಗೆ ಸನ್ಮಾರ್ಗವನ್ನನುಸರಿಸಲು ಉಪದೇಶ ನೀಡುತ್ತೀರಿ. ಆದರೆ ನಿಮ್ಮನ್ನು ನೀವು ಮರೆತು ಬಿಡುತ್ತೀರಾ? ವಸ್ತುತಃ ನೀವು ದಿವ್ಯ ಗ್ರಂಥವನ್ನು ಪಠಿಸುತ್ತೀರಿ. ನೀವು ಒಂದಿಷ್ಟೂ ಯೋಚಿಸುವುದಿಲ್ಲವೇ?”
ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದ ವಿಚಾರಗಳನ್ನು ಇತರರಿಗೆ ಬೋಧಿಸುವುದು ಅಲ್ಲಾಹನಿಗೆ ಕೋಪ ಬರಿಸುವ ಕೆಲಸವಾಗಿದೆ. ಉಳಿದ ಬೆರಳುಗಳು ನಮ್ಮನ್ನೇ ಬೆಟ್ಟು ಮಾಡುತ್ತಿವೆ ಎಂಬ ಪ್ರಜ್ಞೆ ಇರಬೇಕು. ಇತರರ ತಪ್ಪಿಗೆ ಬೆರಳು ತೋರಿಸುವಾಗ ಇಂಥವರ ಸ್ಥಿತಿಯು ನಾಳೆ ಪರಲೋಕದಲ್ಲಿ ಹೇಗಿರುತ್ತದೆ ಎಂದು ಪ್ರವಾದಿಯವರು(ಸ) ತಿಳಿಸಿರುತ್ತಾರೆ. “ಅಂತ್ಯ ದಿನದಲ್ಲಿ ಓರ್ವನನ್ನು ತರಲಾಗುವುದು. ಬಳಿಕ ಅವನನ್ನು ನರಕಕ್ಕೆ ಎಸೆಯಲಾಗುವುದು. ಆಗ ಅವನ ಕರುಳು ಹೊರ ಬೀಳುತ್ತದೆ. ಕತ್ತೆ ಗಾಣಕ್ಕೆ ಸುತ್ತುವಂತೆ ಅವನು ಆ ಕರುಳಿನೊಂದಿಗೆ ಸುತ್ತುವನು. ಆ ವೇಳೆ ಅವನ ಬಳಿ ನರಕ ವಾಸಿಗಳು ಸೇರುವರು. ಬಳಿಕ ಅವರು ಕೇಳುವರು. “ಓ ಮನುಜ, ನಿನಗೇನು ಸಂಭವಿಸಿದೆ. ನೀನು ನಮಗೆ ಒಳಿತನ್ನು ಬೋಧಿಸುತ್ತಿರಲಿಲ್ಲವೇ! ಕೆಡುಕನ್ನು ತಡೆಯುತ್ತಿದ್ದಿರಲ್ಲವೇ?” ಆಗ ಅವನು ಹೇಳುವನು, “ಹೌದು, ನಾನು ನಿಮಗೆ ಒಳಿತನ್ನು ಉಪದೇಶಿಸುತ್ತಿದ್ದೆನು. ಆದರೆ ಅದರಂತೆ ನಾನು ಜೀವನ ನಡೆಸಲಿಲ್ಲ. ನಿಮ್ಮನ್ನು ನಾನು ಕೆಡುಕಿನಿಂದ ತಡೆಯುತ್ತಿದ್ದೆ. ಆದರೆ ಆ ಕೆಡುಕನ್ನು ನಾನು ಮಾಡುತ್ತಿದ್ದೆ. (ಬುಖಾರಿ, ಮುಸ್ಲಿಮ್)
ಓವ್ರ ಧಮ್ರ ಪ್ರಚಾರಕನಲ್ಲಿ ಜನರು ಇಷ್ಟಪಡುವಂತಹ ಹಲವಾರು ಗುಣಗಳಿರಬೇಕು. ಉತ್ತಮ ಸ್ವಭಾವ, ಚಾರಿತ್ರ್ಯ, ಸತ್ಯಸಂಧತೆ, ಕರುಣೆ, ಸಹನೆ, ಸಮಾಜ ಸೇವೆಯ ಗುಣ, ತ್ಯಾಗ, ಹೃದಯ ವೈಶಾಲ್ಯತೆ, ದೇವಭಯ ವೊದಲಾದ ಗುಣಗಳು ಜನರಲ್ಲಿ ಪ್ರಭಾವ ಬೀರುತ್ತವೆ. ನಾವು ಹೇಳುವ, ಉಪದೇಶಿಸುವ ವಿಚಾರಗಳನ್ನು ಜನರು ಆಲಿಸಬೇಕಾದರೆ ಈ ಎಲ್ಲಾ ಗುಣಗಳು ನಮ್ಮಲ್ಲಿರಬೇಕಾದುದು ಅನಿವಾಯ್ರವಾಗಿದೆ. ಓವ್ರನು ಜನರಿಗೆ ಉಪದೇಶ ಮಾಡುವಾಗ ಆ ವಿಚಾರವು ಅವನ ಜೀವನದಲ್ಲಿದೆಯೇ ಎಂದು ನೋಡುವುದು ಇಂದಿನ ಜನರ ಮನಸ್ಥಿತಿಯಾಗಿದೆ. ಧರ್ಮ ಪ್ರಚಾರಕನು ಇತರರಿಗೆ ಮಾದರಿಯಾದಾಗ ಮಾತ್ರ ಜನರು ಅವನನ್ನು ಅನುಸರಿಸಲು ಮುಂದಾಗುತ್ತಾರೆ. “ನೀನು ವೊದಲು ಸರಿಯಾಗು. ಬಳಿಕ ನಮಗೆ ಉಪದೇಶ ಮಾಡು” ಎಂದು ಹೇಳಲು ಜನರಿಗೆ ಅವಕಾಶ ನೀಡಬಾರದು. ಪ್ರವಾದಿಯವರ(ಸ) ಕಾಲದಲ್ಲಿ, ಅವತೀರ್ಣ ಗೊಳ್ಳುವ ಕುರಾನ್ ಸೂಕ್ತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿದ ನಂತರವೇ ಸಹಾಬಿಗಳು ಅದನ್ನು ಜನರಿಗೆ ಉಪದೇಶಿಸುತ್ತಿದ್ದರು. ಅವರು ಒಳಿತುಗಳನ್ನು ಮಾಡಿ ತೋರಿಸಿ ಜನರಿಗೆ ಮಾದರಿಯಾಗುತ್ತಿದ್ದರು. ಇಂತಹ ಗುಣಗಳಿಂದಾಗಿ ಪ್ರವಾದಿಯವರು(ಸ) ಮತ್ತು ಅವರ ಅನುಯಾಯಿಗಳು ಅನಾಗರಿಕ ಅರಬರನ್ನು ಒಂದು ಉತ್ತಮ, ಶ್ರೇಷ್ಠ ಸಂಸ್ಕ್ರತಿಯ ಮನುಷ್ಯರನ್ನಾಗಿ ಮಾರ್ಪಡಿಸಿದರು. ಜೀವನದ ನೈಜ ಗುರಿಯನ್ನು ಅವರಿಗೆ ಮನಗಾಣಿಸಿದರು. ದೊಡ್ಡ ದೊಡ್ಡ ಭಾಷಣ, ಹಾಳೆಗಟ್ಟಲೆ ಲೇಖನಮಾಲೆ, ಅತ್ಯಾಧುನಿಕ ಆಯುಧಗಳು ನಿರ್ವಹಿಸಲು ಸಾಧ್ಯವಾಗದ್ದನ್ನು ಹೃದಯದ ಅಂತರಾಳದಿಂದ ಬರುವ ಒಂದು ಮುಗುಳ್ನಗೆಯು ಸಾಧಿಸಬಹುದು. ಈ ಒಂದು ಆಯುಧವು ಎಂತಹ ಜನರನ್ನು ಮಂತ್ರ ಮುಗ್ಧರನ್ನಾಗಿಸುವ ಶಕ್ತಿ ಹೊಂದಿದೆ. ಇಂತಹ ಹಲವು ಘಟನೆಗಳಿಗೆ ಇತಿಹಾಸವು ಮೂಕ ಸಾಕ್ಷಿಯಾಗಿದೆ.
ಧಮ್ರ ಪ್ರಚಾರಕನಲ್ಲಿ ಸ್ವಾರ್ತತೆ, ಕಪಟತನ, ವಂಚನೆ, ವಿಶ್ವಾಸ ದ್ರೋಹ ವೊದಲಾದ ದುರ್ಗುಣ ಗಳಿದ್ದರೆ ಅವನ ಮಾತಿಗೆ ಸಮಾಜದಲ್ಲಿ ಯಾವುದೇ ಬೆಲೆ ಇರುವುದಿಲ್ಲ. ಅವನ ಮಾತಿಗೆ ಜನರು ಎದುರಾಡಲು ಪ್ರಾರಂಭಿಸುತ್ತಾರೆ. ಮಾತ್ರವಲ್ಲ ಇಂತಹ ಜನರ ದುಷ್ಟ ಮುಖವನ್ನು ಜನರು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಹೇಸುವುದಿಲ್ಲ. ಧರ್ಮ  ಪ್ರಚಾರಕ ಕೊನೆಗೆ ಮುಖ ಭಂಗ ಅನುಭವಿಸುತ್ತಾರೆ.
ಮಾಲಿಕ್ ಬಿನ್ ದೀನಾರ್, ಶರಫ್ ಬಿನ್ ಮಾಲಿಕ್, ಮಾಲಿಕ್ ಬಿನ್ ಹಬೀಬ್ ವೊದಲಾದ ಶ್ರೇಷ್ಠರು ಭಾರತದಲ್ಲಿ ಇಸ್ಲಾಮನ್ನು ಪ್ರಚಾರ ಪಡಿಸಿದರು. ಅವರ ಧರ್ಮ  ಪ್ರಚಾರದಿಂದಾಗಿ ಹಲವರು ಇಸ್ಲಾಮ್ ಸ್ವೀಕಾರ ಮಾಡಿದರು. ಕೇವಲ ಅರಬಿ ಭಾಷೆ ಮಾತ್ರ ತಿಳಿದಿರುವ ಇವರಿಂದ ಇಲ್ಲಿನ ಜನರು ಇಸ್ಲಾಮನ್ನು ಹೇಗೆ ಕಲಿತುಕೊಂಡರು? ಅವರು ಇಲ್ಲಿ ಬಂದು ಗಂಟೆಗಟ್ಟಲೆ ಭಾಷಣ ಮಾಡಲಿಲ್ಲ,ಪುಟಗಟ್ಟಲೆ ಲೇಖನಗಳನ್ನು ಬರೆಯಲಿಲ್ಲ. ಇಂದು ಧರ್ಮ ಪ್ರಚಾರಕ್ಕೆ ಬಳಸಿಕೊಳ್ಳುವ ಯಾವುದೇ ಮಾಧ್ಯಮಗಳನ್ನು ಬಳಸಿಕೊಳ್ಳಲಿಲ್ಲ. ಹಾಗಾದರೆ ಜನರು ಹೇಗೆ ಸತ್ಯಧರ್ಮಕ್ಕೆ ಆಗಮಿಸಿದರು? ಅವರ ವರ್ತನೆಯಿಂದಲೂ ಸ್ವಭಾವದಿಂದಲೂ ಜನರು ಸತ್ಯವನ್ನು ಅರಿತರು ಎಂಬುದು ಇತಿಹಾಸದತ್ತ ಕಣ್ಣೋಡಿಸಿದರೆ ಮನದಟ್ಟಾಗಬಹುದು. ಜನರ ಸಾಮಾನ್ಯ ಜೀವನ ಶೈಲಿಗಿಂತ ಭಿನ್ನವಾಗಿ ಅವರ ಜೀವನ ಶೈಲಿಯು ಗೋಚರವಾಯಿತು. ಅವರ ನಿಷ್ಕಳಂಕ ಪ್ರಾಮಾಣಿಕ ಜೀವ ಶೈಲಿಯು ಜನರನ್ನು ಆಕಷ್ರಿಸಿತು. ಇದು ಜನರಿಗೆ ಇಸ್ಲಾಮ್ ಸ್ವೀಕರಿಸಲು ಪ್ರೇರಕವಾಯಿತು.
ಖ್ಯಾತ ವಿದ್ವಾಂಸರೂ ಲೇಖಕರೂ ಆದ ಶೈಕ್ ಮುಹಮ್ಮದ್ ಹಸನ್ “ನಾಯಕತ್ವದ ಗೊಂದಲಗಳು ಮತ್ತು ಪರಿಹಾರ” ಎಂಬ ತನ್ನ ಗ್ರಂಥದಲ್ಲಿ ಈ ರೀತಿ ಬರೆಯುತ್ತಾರೆ. “ಅನುಯಾಯಿಗಳು ತಮ್ಮ ನಾಯಕರನ್ನು ಗೌರವದ ಕಣ್ಣುಗಳಿಂದ ವೀಕ್ಷಿಸುತ್ತಾರೆ. ಅವರು ನಾಯಕರಿಂದ ಬಯಸುವುದು ಉತ್ತಮ ಮಾದರಿಯನ್ನಾಗಿದೆ. ಚಿಂತನೆ, ಸ್ವಭಾವ,ವರ್ತನೆ ವೊದಲಾದವುಗಳಲ್ಲಿ ಮಾದರಿಯು ಅವರ ಬಯಕೆಯಾಗಿದೆ. ಆದರೆ ಜನರ   ಆಕಾಂಕ್ಷೆಗಳಿಗೆ ವಿರುದ್ಧವಾಗಿ ನಾಯಕರು ವರ್ತಿಸುವುದಾದರೆ ಜನರನ್ನು ನಿರಾಶೆಯು ಆವರಿಸುತ್ತದೆ. ಅದು ಕೆಲವರಲ್ಲಿ ನಿಷ್ಕ್ರಿಯತೆಯನ್ನು ಉಂಟು ಮಾಡಿದರೆ ಇನ್ನು ಕೆಲವರನ್ನು ಸಂಘಟನೆಯಿಂದಲೇ ದೂರ ಸರಿಸುತ್ತದೆ.”
ಓರ್ವ ಧರ್ಮ  ಪ್ರಚಾರಕನಿಗೆ ಹಲವಾರು ಒತ್ತಡಗಳು, ಸಮಸ್ಯೆಗಳು ಎದುರಾಗಬಹುದು. ಈ ರಂಗವು ಐಶಾರಾಮದ ರಂಗವಲ್ಲ. ಈ ರಂಗದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ಖಂಡಿತವಾಗಿಯೂ ಲಭಿಸುತ್ತದೆ. ಧರ್ಮ  ಪ್ರಚಾರದ ರಂಗದಲ್ಲಿ ಸಹನೆಯು ಅತಿ ಪ್ರಧಾನವಾಗಿದೆ. ಜನರನ್ನು ಧಮ್ರಕ್ಕೆ ಆಹ್ವಾನಿಸುವಾಗ ಅವರು ಬರುವುದಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ ಅಥವಾ ಅವರ ಕೆಡುಕುಗಳಲ್ಲಿ ತಾವು ಕೂಡಾ ಭಾಗಿಯಾಗುವಂತಿಲ್ಲ. ಇಂದು ಜನರನ್ನು ಕೆಡುಕುಗಳಿಂದ ತಡೆಯಲು ಪ್ರಯತ್ನಿಸಿ ಅವರು ಅದರಿಂದ ಹಿಂದೆ ಸರಿಯದಿದ್ದರೆ ತಡೆದವರು ನಿರಾಶರಾಗಿ ಆ ಜನರೊಂದಿಗೆ ಸೇರಿಕೊಳ್ಳುವ ಘಟನೆಗಳು ನಡೆಯುತ್ತಿವೆ. ಆದರೆ ಇದು ಅಲ್ಲಾಹನ ಶಿಕ್ಷೆಗೆ ಗುರಿಯಾಗುವಂತಹ ಕೆಲಸವಾಗಿದೆ.
ಪ್ರವಾದಿಯವರು(ಸ) ಹೇಳಿದರು, “ಇಸ್ರಾಈಲ್ ಸಂತತಿಗಳು ದೇವಧಿಕ್ಕಾರ ಪ್ರದರ್ಶಿಸಲು ಪ್ರಾರಂಭಿಸಿದಾಗ ಅವರ ವಿದ್ವಾಂಸರು ಅವರನ್ನು ಅದರಿಂದ ತಡೆದರು. ಆದರೆ ಜನರು ಅದರಿಂದ ಹಿಂದೆ ಸರಿಯಲಿಲ್ಲ. ಆಗ ಆ ವಿದ್ವಾಂಸರು ಅವರ ವೇದಿಕೆಗಳಲ್ಲಿ ಕುಳಿತುಕೊಳ್ಳ ತೊಡಗಿದರು ಮತ್ತು ಅವರೊಂದಿಗೆ ತಿನ್ನಲು, ಕುಡಿಯಲು ಪ್ರಾರಂಭಿಸಿದರು. ಆದ್ದರಿಂದ ಅಲ್ಲಾಹನು ಅವರೆಲ್ಲರ ಹೃದಯಗಳನ್ನು ಕಲ್ಲಾಗಿಸಿದನು. ಬಳಿಕ ದಾವೂದ್(ಅ) ಮತ್ತು ಈಸಾರ(ಅ) ನಾಲಗೆಯಿಂದ ಅವರನ್ನು ಶಪಿಸಿದನು. ಅವರು ತಪ್ಪೆಸಗಿದ ಹಾಗೂ ಅಲ್ಲಾಹನ ಆಜ್ನೋಲ್ಲಂಘನೆ ಮಾಡಿದುದರ ಪರಿಣಾಮವಾಗಿ ಈ ಶಾಪವು ಅವರ ಮೇಲೆರಗಿತು. (ವರದಿಗಾರರು ಹೇಳುತ್ತಾರೆ) ಆಗ ಪ್ರವಾದಿಯವರು(ಸ) ಒರಗಿ ಕುಳಿತಿದ್ದರು. ಅವರು ನೇರವಾಗಿ ಕುಳಿತು ಹೇಳಿದರು. “ನನ್ನ ಆತ್ಮವು ಯಾರ ಕೈಯಲ್ಲಿರುವುದೋ ಅವನಾಣೆ! ಖಂಡಿತವಾಗಿಯೂ ನೀವು ಒಳಿತನ್ನು ಸಂಸ್ಥಾಪಿಸಬೇಕು ಮತ್ತು ಕೆಡುಕನ್ನು ವಿರೋಧಿಸಬೇಕು. ನೀವು ಅಕ್ರಮಿಯ ಕೈ ಹಿಡಿದು ಅವನನ್ನು ಸತ್ಯಕ್ಕೆ ಮುನ್ನಡೆಸಬೇಕು. ಇಲ್ಲದಿದ್ದರೆ ನಿಮ್ಮೆಲ್ಲರ ಹೃದಯಗಳನ್ನು ಅಲ್ಲಾಹನು ಕಲ್ಲಾಗಿಸುವನು. ಬಳಿಕ ಅಲ್ಲಾಹನು ಅವರನ್ನು ನಾಶಪಡಿಸಿದಂತೆ ನಿಮ್ಮನ್ನೂ ನಾಶ ಪಡಿಸುವನು.”
ಆದ್ದರಿಂದ ನಾವು ಧರ್ಮ  ಪ್ರಚಾರದ ರಂಗಕ್ಕಿಳಿಯುವಾಗ ನಾವು ನಮ್ಮನ್ನೇ ಸಂಸ್ಕರಿಸಿಕೊಳ್ಳಬೇಕು. ಆ ಬಳಿಕವೇ ಜನರಿಗೆ ಉಪದೇಶ ನೀಡಬೇಕು. ನಮ್ಮ ಜೀವನವು ಹೊಲಸಾಗಿ ಇತರರಿಗೆ ಮಾತ್ರ ಒಳಿತನ್ನು ಉಪದೇಶಿಸುವಂತಾಗಬಾರದು. ನಮ್ಮ ಧಮ್ರ ಪ್ರಚಾರ ಕಾರ್ಯಗಳಿಂದಾಗಿ ಜನರು ಸನ್ಮಾರ್ಗಕ್ಕೆ ಬರಬೇಕೇ ಹೊರತು ಅದರಿಂದ ವಿಮುಖರಾಗುವಂತಾಗಬಾರದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ