ಬುಧವಾರ, ಮೇ 16, 2012

ಇವರಲ್ಲಿ ನಿಮಗೆ ಯಾರು ಹೆಚ್ಚು ಇಷ್ಟ?



ಈ ಲೋಕದಲ್ಲಿ ಜಯಾಪಜಯಗಳನ್ನು ನಿರ್ಧರಿಸುವಲ್ಲಿ ಮುಖ್ಯವಾಗಿ ಮೂರು ವಿಷಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವು ಸಂಪತ್ತು, ಕುಟುಂಬ ಮತ್ತು ಕರ್ಮಗಳಾಗಿವೆ. ಈ ಮೂರು ವಿಷಯಗಳ ನಿರ್ವಹಣೆಗನುಗುಣವಾಗಿ ಮಾನವರಿಗೆ ಸ್ವರ್ಗ-ನರಕ ಪ್ರಾಪ್ತಿಯಾಗುತ್ತದೆ. ಪ್ರವಾದಿಯವರು(ಸ) ಈ ಮೂರು ವಿಷಯಗಳನ್ನು ಗೆಳೆಯರಿಗೆ ಹೋಲಿಸಿದ್ದಾರೆ. ಅಬೂಹುರೈರರಿಂದ(ರ) ವರದಿಯಾಗಿದೆ: ಪ್ರವಾದಿಯವರು(ಸ) ಹೇಳಿದರು, “ಓರ್ವ ಮನುಷ್ಯನ ಸಂಪತ್ತು, ಕುಟುಂಬ, ಕರ್ಮಗಳ ಉಪಮೆಯು ಮೂವರು ಸಹೋದರರು ಅಥವಾ ಗೆಳೆಯರಿರುವ ಓರ್ವನಂತಾಗಿದೆ. ಅವರಲ್ಲಿ ಓರ್ವನು ಹೇಳಿದನು- ನಾನು ನಿನ್ನ ಜೀವನದಲ್ಲಿ ನಿನ್ನೊಂದಿಗೇ ಇರುವೆನು. ಆದರೆ ನೀನು ಮರಣ ಹೊಂದಿದರೆ ನನ್ನ ಮತ್ತು ನಿನ್ನ ಮಧ್ಯೆ ಇರುವ ಸರ್ವ ಸಂಬಂಧಗಳೂ ಮುರಿದು ಹೋಗುವುದು. ಎರಡನೆಯವನು ಹೇಳಿದನು, ನಾನೂ ನಿನ್ನೊಂದಿಗಿರುವೆನು. ಆದರೆ ಆ ಕಾಣುತ್ತಿರುವ ಮರದ ಬಳಿ ತಲುಪಿದರೆ ನನ್ನ ಮತ್ತು ನಿನ್ನ ಮಧ್ಯೆ ಯಾವುದೇ ಸಂಬಂಧವಿರುವುದಿಲ್ಲ. ಮೂರನೆಯವನು ಹೇಳಿದನು- ನೀನು ಜೀವಿಸಿದರೂ ಮರಣಿಸಿದರೂ ನಾನು ಸದಾ ನಿನ್ನೊಂದಿಗೆ ಇರುವೆನು.”
ಮನುಷ್ಯನು ತನ್ನ ಜೀವನದಲ್ಲಿ ಮಾಡುವ ಕರ್ಮಗಳು, ಅವನು ಪ್ರೀತಿಸುವ ಕುಟುಂಬಗಳು, ಅವನು ಹೆಚ್ಚು ಹೆಚ್ಚು ಸಂಪಾದಿಸಿರುವ ಅವನ ಸಂಪತ್ತು ಈ ಮೂರು ವಸ್ತುಗಳ ವಾಸ್ತವಿಕತೆಯನ್ನು ಮೇಲೆ ತಿಳಿಸಲಾದ ಪ್ರವಾದಿ ವಚನವು ವಿವರಿಸುತ್ತದೆ. ಸಂಪತ್ತು ಮನುಷ್ಯನಿಗೆ ತನ್ನ ಜೀವನದಲ್ಲಿ ಹೆಚ್ಚು ಪ್ರಯೋಜನ ನೀಡುವ ಒಂದು ವಸ್ತುವಾಗಿದೆ. ಜೀವನದ ಅವಶ್ಯಕತೆಗಳನ್ನು ಪೂರೈಸಲು ಸಂಪತ್ತು ಅಗತ್ಯವಾಗಿದೆ. ಮನುಷ್ಯನು ಸಂಪತ್ತಿನಲ್ಲಿ ತನ್ನ ಸಂತೋಷವನ್ನು ಕಾಣುತ್ತಾನೆ. ಅದರ ಸಂಪಾದನೆಗಾಗಿ ಆಹೋರಾತ್ರಿ ದುಡಿಯುತ್ತಾನೆ. ಬಡತನ, ಸಂಕಷ್ಟಗಳನ್ನು ಅನುಭವಿಸಲು ಯಾರೂ ತಯಾರಾಗುವುದಿಲ್ಲ. ಅವುಗಳನ್ನು ಹೊಗಲಾಡಿಸಲಿಕ್ಕಾಗಿ ಸಂಪತ್ತಿನ ವೊರೆ ಹೋಗುತ್ತಾರೆ. ಸಂಪತ್ತು ಅಲ್ಲಾಹನ ದೊಡ್ಡ ಅನುಗ್ರಹವಾಗಿದೆ. ಅಲ್ಲಾಹನು ತಾನಿಚ್ಛಿಸಿದವನಿಗೆ ಅದನ್ನು ನೀಡುತ್ತಾನೆ. ಆದರೆ ಈ ಸಂಪತ್ತು ಮನುಷ್ಯನ ಜೀವಿತಾವಧಿಗೆ ಮಾತ್ರ ಸೀಮಿತಗೊಂಡಿದೆ. ಅವನ ಪ್ರಾಣ ಪಕ್ಷಿಯು ಶರೀರದಿಂದ ಬೇರ್ಪಡುವುದರೊಂದಿಗೆ ಅವನಿಗೂ ಅವನ ಸಂಪತ್ತಿಗೂ ಇರುವ ಸಂಬಂಧವೂ ಮುರಿದು ಹೋಗುತ್ತದೆ. ಮರಣಿಸಿ ಹೋಗುವಾಗ ಯಾರೂ ಕೂಡಾ ಸಂಪತ್ತನ್ನು ತನ್ನೊಂದಿಗೆ ಕೊಂಡೊಯ್ದದ್ದಿಲ್ಲ. ಕೊಂಡುಹೋಗಲಿಕ್ಕೂ ಇಲ್ಲ. ಎಷ್ಟೇ ದೊಡ್ಡ ಶ್ರೀಮಂತನಾದರೂ ಗೋರಿ ಸೇರುವಾಗ ಅವನು ಶೂನ್ಯ ಹಸ್ತನಾಗಿಯೇ ಇರುತ್ತಾನೆ. ಜಗತ್ತನ್ನೇ ಜಯಿಸಲು ಹೊರಟ ಅಲೆಗ್ಸಾಂಡರ್ ಚಕ್ರವರ್ತಿ ಮರಣ ಹೊಂದಿದಾಗ ಒಂದು ಸಂದೇಶವನ್ನು ಜಗತ್ತಿಗೆ ರವಾನಿಸಿದ್ದನು. ಒಂದು ಕೈಯನ್ನು ಶವಪೆಟ್ಟಿಗೆಯಿಂದ ಹೊರ ಹಾಕಿದ ಸ್ಥಿತಿಯಲ್ಲೇ ಅವನನ್ನು ದಫನ ಮಾಡಲಾಯಿತು. “ಮನುಷ್ಯರು ಮರಣ ಹೊಂದಿ ಹೋಗುವಾಗ ಬರಿ ಕೈಯಲ್ಲೇ ಹೋಗುತ್ತಾರೆ” ಎಂಬ ಉನ್ನತ ಸಂದೇಶವು ಅದರಲ್ಲಿತ್ತು.
ಈ ಲೋಕವು ಒಂದು ಬಸ್ ಇದ್ದಂತೆ. ನಾವು ಬಸ್ಸಿನಲ್ಲಿ ಹತ್ತಿ ಒಂದು ನಿಗದಿತ ಸ್ಥಳದ ವರೆಗೆ ಪ್ರಯಾಣಿಸುತ್ತೇವೆ. ಅದಕ್ಕಾಗಿ ನಾವು ಟಿಕೇಟನ್ನೂ ಖರೀದಿಸುತ್ತೇವೆ. ಆ ಸ್ಥಳ ತಲುಪುವ ವರೆಗೆ ಆ ಟಿಕೇಟಿಗೆ ಬೆಲೆ ಇರುತ್ತದೆ. ಅಲ್ಲಿ ತಲುಪಿದ ಬಳಿಕ ಆ ಟಿಕೆಟ್ ತನ್ನ ಬೆಲೆ ಕಳೆದುಕೊಳ್ಳುತ್ತದೆ. ನಂತರ ಅದು ಪ್ರಯೋಜನಕ್ಕೆ ಬರುವುದಿಲ್ಲ. ಈ ಲೋಕದ ಸ್ಥಿತಿಯೂ ಹಾಗೆಯೇ ಆಗಿದೆ. ಜೀವನವೆಂಬ ಪ್ರಯಾಣದಲ್ಲಿ ಮರಣ ಎಂಬ ನಿಲ್ದಾಣ ತಲುಪುವ ವರಗೆ ಸಂಪತ್ತೆಂಬ ಟಿಕೇಟ್ ನಮಗೆ ಪ್ರಯೋಜನ ನೀಡುತ್ತದೆ. ಆ ನಿಲ್ದಾಣದಲ್ಲಿ ಇಳಿಯುವುದರೊಂದಿಗೆ ಅದರೊಂದಿಗಿನ ಸಂಬಂಧವೇ ಬೇರ್ಪಡುತ್ತದೆ.
ಸಾಮಾಜಿಕ ಜೀವನದಲ್ಲಿ ಸಂಪತ್ತಿನಂತೆಯೇ ಕುಟುಂಬವೂ ಮುಖ್ಯವಾಗಿದೆ. ಯಾರಿಗೂ ಕೂಡಾ ಕುಟುಂಬವಿಲ್ಲದೆ ಏಕಾಂಗಿಯಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲ. ಮನುಷ್ಯರ ಮಧ್ಯೆ ಕುಟುಂಬಕ್ಕೆ ಉನ್ನತ ಸ್ಥಾನವಿದೆ. ಜೀವನವನ್ನು ನೆಮ್ಮದಿದಾಯಕಗೊಳಿಸುವ ಹಾಗೂ ಬೀದಿಪಾಲು ಗೊಳಿಸುವ ಶಕ್ತಿಯು ಕುಟುಂಬಕ್ಕಿದೆ. ಜನನದಿಂದ ಮರಣದ ತನಕ ನವ್ಮೊಂದಿಗೆ ಕುಟುಂಬಿಕರು ಇರುತ್ತಾರೆ. ಮರಣ ಹೊಂದಿ ಗೋರಿ ಸೇರುವುದರೊಂದಿಗೆ ಕುಟುಂಬದೊಂದಿಗಿನ ಸಂಬಂಧವು ಮುರಿದು ಹೋಗುತ್ತದೆ. ಕುಟುಂಬವನ್ನು ಜೀವಕ್ಕಿಂತಲೂ ಹೆಚ್ಚು ಪ್ರೀತಿಸಿದರೂ ನಾವು ಮರಣ ಹೊಂದುವಾಗ ಅವರು ನವ್ಮೊಂದಿಗೆ ಬರಲಾರರು. ನಾವು ಏಕಾಂಗಿಯಾಗಿಯೇ ಹೋಗಬೇಕು.
ಮೇಲೆ ತಿಳಿಸಲಾದ ಸಂಪತ್ತು ಮತ್ತು ಕುಟುಂಬಗಳೆಂಬ ಅನುಗ್ರಹಗಳಿಗೆ ಕೆಲವು ಕೊರತೆಗಳಿವೆ. ಅವು ನಮಗೆ ಈ ಲೋಕದಲ್ಲಿ ಮಾತ್ರ ಪ್ರಯೋಜನ ನೀಡುತ್ತವೆ. ಪರಲೋಕದಲ್ಲಿ ಅವು ನಮಗೆ ಯಾವುದೇ ಪ್ರಯೋಜನ ನೀಡಲಿಕ್ಕಿಲ್ಲ. ನಾಳೆ ಪರಲೋಕದಲ್ಲಿ ವಿಚಾರಣೆಗೆ ಗುರಿಯಾಗುವಾಗ ಸಂಪತ್ತು ಅಥವಾ ಕುಟುಂಬವು ಅವನ ನೆರವಿಗೆ ಬರಲಿಕ್ಕಿಲ್ಲ. ತಾನು ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿ. ನಾನು ಮಸೀದಿಯ ಅಧ್ಯಕ್ಷನೂ ಸಮುದಾಯದ ನೇತಾರನೂ ಆಗಿದ್ದೆ ಎಂಬ ರಿಯಾಯಿತಿಯು ಅಲ್ಲಿ ಲಭಿಸಲಿಕ್ಕಿಲ್ಲ. ಅಲ್ಲಿ ನಮಗೆ ನಾವೇ ಜವಾಬ್ದಾರರಾಗಿರುತ್ತೇವೆ.
ಆದರೆ ಎಲ್ಲಾ ಸಂದರ್ಭಗಳಲ್ಲೂ ಕರ್ಮಗಳು ನವ್ಮೊಂದಿಗಿರುತ್ತವೆ. ಅವು ಉತ್ತಮ ಕರ್ಮಗಳಾಗಿದ್ದರೂ ದುಷ್ಕರ್ಮಗಳಾಗಿದ್ದರೂ ಸರಿಯೇ. ಸಂಪತ್ತು ಮತ್ತು ಕುಟುಂಬಗಳಂತೆ ಮರಣದೊಂದಿಗೆ ಕರ್ಮಗಳ ಸಂಬಂಧವು ಮುರಿದು ಹೋಗುವುದಿಲ್ಲ. ಮರಣದ ಬಳಿಕವೂ ಅವು ನಮ್ಮನ್ನು ಹಿಂಬಾಲಿಸುತ್ತವೆ. ಪರಲೋಕದಲ್ಲಿ ನಮ್ಮ ಕರ್ಮಗಳನ್ನು ಮಾನದಂಡವಾಗಿರಿಸಿ ಶಿಕ್ಷೆ-ರಕ್ಷೆ ನೀಡಲಾಗುತ್ತದೆ. ಮನುಷ್ಯರಿಗೆ ಕರ್ಮಗಳೊಂದಿಗಿನ ನೈಜ ಸಂಬಂಧವು ಸ್ಥಾಪನೆಯಾಗುವುದು ಮರಣದ ಬಳಿಕವೇ ಆಗಿದೆ.
ಪ್ರವಾದಿಯವರು(ಸ) ಹೇಳಿದರು, “ಮರಣ ಹೊಂದಿದ ವ್ಯಕ್ತಿಯನ್ನು ಮೂರು ವಿಷಯಗಳು ಹಿಂಬಾಲಿಸುತ್ತಿರುತ್ತವೆ. ಅವು ಕುಟುಂಬ, ಸಂಪತ್ತು ಮತ್ತು ಕರ್ಮಗಳಾಗಿವೆ. ಬಳಿಕ ಅವುಗಳಲ್ಲಿ ಎರಡು ವಸ್ತುಗಳು ಮರಳುತ್ತವೆ ಮತ್ತು ಒಂದು ಅವನೊಂದಿಗೆ ಉಳಿಯುತ್ತದೆ. ಕುಟುಂಬ ಮತ್ತು ಸಂಪತ್ತು ಮರಳಿ ಬರುತ್ತವೆ. ಕರ್ಮಗಳು ಅವನೊಂದಿಗೆ ಉಳಿಯುತ್ತವೆ.”
ಐಹಿಕ ಜೀವನದಲ್ಲಿ ಮನುಷ್ಯನು ತಿಳಿದೋ ತಿಳಿಯದೆಯೋ ಮಾಡಿದ ಕರ್ಮಗಳೆಲ್ಲವೂ ಮರಣದೊಂದಿಗೆ ಅವನ ಮುಂದೆ ಪ್ರತ್ಯಕ್ಷಗೊಳ್ಳುತ್ತವೆ. ಅಲ್ಲಿಯ ವರೆಗೆ ಅವನು ರಹಸ್ಯವಾಗಿರಿಸಿದ ಕರ್ಮಗಳು ಅವನಿಗೆ ರಕ್ಷೆಯನ್ನೂ ಶಿಕ್ಷೆಯನ್ನೂ ನೀಡುತ್ತವೆ.
ಬರ್ರಾಅï ಬಿನ್ ಆಸಿಬಿಯವರಿಂದ(ರ) ಇಮಾಮ್ ಅಹ್ಮದ್ ವರದಿ ಮಾಡುತ್ತಾರೆ: ಪ್ರವಾದಿಯವರು(ಸ) ಹೇಳಿದರು, “(ಸತ್ಯವಿಶ್ವಾಸಿಯಾದ ಓರ್ವನ ಆತ್ಮವು ಗೋರಿಗೆ ತಲುಪಿದಾಗ) ಉತ್ತಮವಾದ ವಸ್ತ್ರಧರಿಸಿದ ಸುಂದರ ವ್ಯಕ್ತಿಯು ಪರಿಮಳ ಸೂಸುತ್ತಾ ಅಲ್ಲಿಗೆ ಬರುತ್ತಾರೆ. ಬಳಿಕ ಅವರು ಹೇಳುವರು, ‘ಸಂತೋಷಪಡಿರಿ. ಆನಂದದಾಯಕವಾದ ಎಲ್ಲವನ್ನೂ ತಮಗೆ ತಯಾರಿಸಿಡಲಾಗಿದೆ. ಇದು ಭರವಸೆ ನೀಡಲ್ಪಟ್ಟ ಆ ದಿನವಾಗಿದೆ.’ ಆಗ ವಿಶ್ವಾಸಿಯು ಕೇಳುವನು. ‘ತಾವು ಯಾರು? ಸುಂದರವಾದ ತಮ್ಮ ಮುಖವನ್ನು ನೋಡುವಾಗ ಸಂತೋಷವಾಗುತ್ತದೆ.’ ಆಗ ಅವರು ಹೇಳುವರು, ‘ನಾನು ನಿನ್ನ ಸತ್ಕರ್ಮಗಳಾಗಿದ್ದೇನೆ.’ ಆಗ ಸತ್ಯವಿಶ್ವಾಸಿ ಹೇಳುವನು, ‘ಓ ನನ್ನ ಪ್ರಭೂ ಅಂತ್ಯ ದಿನವನ್ನು ಬೇಗನೇ ತಲುಪಿಸಿದ್ದರೆ ಎಷ್ಟು ಒಳ್ಳೆಯದಿತ್ತು. ನನಗೆ ನನ್ನ ಕುಟುಂಬಿಕರ ಬಳಿ ಮರಳಿ ಸುಖವಾಗಿ ಜೀವಿಸಬಹುದಾಗಿತ್ತು.’ (ಆದರೆ ಸತ್ಯನಿಷೇಧಿಯಾದ ಆತ್ಮವು ಗೋರಿಗೆ ತಲುಪಿದಾಗ) ಕೊಳೆಯಾದ ವಸ್ತ್ರಧರಿಸಿ ಕುರೂಪಿಯಾದ ಓರ್ವರು ದುರ್ಗಂಧ ಬೀರುತ್ತಾ ಬರುವರು. ಬಳಿಕ ಅವರು ಹೇಳುವರು, ‘ನಿನಗೆ ನಾಶವಿದೆ. ಇದು ಭರವಸೆ ನೀಡಲಾದ ದಿನವಾಗಿದೆ.’ ಆಗ ಸತ್ಯನಿಷೇಧಿಯು ಕೇಳುವನು. ‘ನೀನು ಯಾರು? ನಿನ್ನ ಕೆಟ್ಟ ಮುಖವನ್ನು ನೋಡುವಾಗಲೇ ಅಸಹ್ಯವಾಗುತ್ತಿದೆ.’ ಆಗ ಅವರು ಹೇಳುವರು, ‘ನಾನು ನಿನ್ನ ದುಷ್ಕರ್ಮಗಳಾಗಿದ್ದೇನೆ.’ ಈ ಸಂದರ್ಭದಲ್ಲಿ ಸತ್ಯನಿಷೇಧಿಯು ‘ಓ ನನ್ನ ಪ್ರಭೂ, ಆ ಅಂತ್ಯದಿನವು ಬೇಗನೇ ಬರದಿದ್ದರೆ ಎಷ್ಟು ಒಳ್ಳೆಯದಿತ್ತು’ ಎಂದು ಅಳುತ್ತಾ ಹೇಳುವನು.”
ಆದ್ದರಿಂದ ತಾತ್ಕಾಲಿಕವಾಗಿ ಈ ಲೋಕದಲ್ಲಿ ಮಾತ್ರ ನವ್ಮೊಂದಿಗಿರುವ ಸಂಪತ್ತು ಮತ್ತು ಕುಟುಂಬಗಳೆಂಬ ಗೆಳೆಯರ ಗಳಿಕೆಗಾಗಿ ನಮ್ಮ ಜೀವನವನ್ನು ವ್ಯರ್ಥಗೊಳಿಸದೆ ಇಹಲೋಕದಲ್ಲೂ ಪರಲೋಕದಲ್ಲೂ ಸದಾ ನವ್ಮೊಂದಿಗಿರುವ ಕರ್ಮಗಳೆಂಬ ಗೆಳೆಯನ ಸಂಪಾದನೆಗಾಗಿ ನಾವು ಪ್ರಯತ್ನಿಸಬೇಕು. ತಾತ್ಕಾಲಿಕವಾದ ಇಹಲೋಕಕ್ಕಾಗಿ ಶಾಶ್ವತವಾದ ಪರಲೋಕವನ್ನು ಕಳೆದುಕೊಳ್ಳಬೇಕೇ?


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ