ಸೋಮವಾರ, ಮೇ 21, 2012

ವ್ಯಭಿಚಾರಕ್ಕಿಂತ ದೊಡ್ಡ ಪಾಪ


ಇಸ್ಲಾಮ್ ಧರ್ಮವು ವ್ಯಭಿಚಾರವನ್ನು ತೀವ್ರವಾಗಿ ವಿರೋಧಿಸಿದೆ. ಕುರಾನ್ ಅದರ ಬಳಿ ಸುಳಿಯಬಾರದೆಂದು ತಾಕೀತು ಮಾಡಿದೆ. ಪ್ರವಾದಿಯವರು(ಸ) ಹೆಸರಿಸಿರುವ ಏಳು ಮಹಾ ಪಾಪಗಳಲ್ಲಿ ವ್ಯಭಿಚಾರವೂ ಒಂದಾಗಿದೆ. ವಿವಾಹಿತನು ವ್ಯಭಿಚಾರ ನಡೆಸಿದರೆ ವಧೆ ಶಿಕ್ಷೆ ಕಡ್ಡಾಯವಾಗುತ್ತದೆ. ಅದೊಂದು ಅಶ್ಲೀಲ ಕೃತ್ಯವಾಗಿದೆ. ಆದರೆ ಇಸ್ಲಾಮ್ ವ್ಯಭಿಚಾರಕ್ಕಿಂತಲೂ ದೊಡ್ಡ ಪಾಪಗಳೆಂದು ಹೇಳಿರುವ ಕೆಲವು ದುಶ್ಕರ್ಮಗಳಿವೆ. ಅವುಗಳ ಪೈಕಿ ಪರದೂಷಣೆಯು ಪ್ರದಾನವಾದುದಾಗಿದೆ. ಪರದೂಷಣೆ ಎಂದರೇನು? ಎಂದು ಪ್ರವಾದಿಯವರೊಡನೆ(ಸ) ಕೇಳಲಾಯಿತು. ಆಗ ಅವರು ಹೇಳಿದರು “ನೀನು ನಿನ್ನ ಸಹೋದರನ ಬಗ್ಗೆ ಅವನಿಗೆ ಅಸಮಾಧಾನ ಉಂಟಾಗುವಂತಹ ರೀತಿಯಲ್ಲಿ ಪ್ರಸ್ತಾಪಿಸುವುದು. ನಾನು ಪ್ರಸ್ತಾಪಿಸುವಂತಹ ವಿಷಯ ನನ್ನ ಸಹೋದರನಲ್ಲಿದ್ದರೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಲಾಯಿತು. ಅದಕ್ಕೆ ಪ್ರವಾದಿಯವರು(ಸ) ಹೇಳಿದರು. ಅವನಲ್ಲಿ ಆ ವಿಷಯ ಇದ್ದಾಗಲೇ ಅದು ಪರದೂಷಣೆ ಎನಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಅದು ಆರೋಪವೆನಿಸಿಕೊಳ್ಳುತ್ತದೆ.”
ಇಂದು ನಾವು ಈ ಮಹಾ ಅಪರಾಧವನ್ನು ಕ್ಷುಲ್ಲಕವೆಂದು ಭಾವಿಸಿ ದಿನನಿತ್ಯ ಮಾಡುತ್ತಿದ್ದೇವೆ. ಜನರು ‘ಟೈಂಪಾಸ್’ ಎಂಬ ನೆಲೆಯಲ್ಲಿ ಮಾಡುತ್ತಿರುವುದು ಈ ಪರದೂಷಣೆಯನ್ನಾಗಿದೆ. ಕಟ್ಟೆಗಳಲ್ಲಿ ಕ್ಲಾಸುಗಳಲ್ಲಿ, ದೂರವಾಣಿಯಲ್ಲಿ ನಾವು ಈ ಅಪರಾಧದ ವಕ್ತಾರರಾಗುತ್ತಿದ್ದೇವೆ. ಈ ಅಪರಾಧದ ನೀಚತೆಯನ್ನು ಪ್ರವಾದಿಯವರು(ಸ) ತನ್ನ ಅನುಯಾಯಿಗಳಿಗೆ ಉದಾಹರಣೆ ಸಹಿತ ವಿವರಿಸಿದ್ದಾರೆ.
ಅಬೂ ಹುರೈರ(ರ) ವರದಿ ಮಾಡಿದ್ದಾರೆ. “ಅಸ್ಲಮ್ ಗೋತ್ರದ ಮಾಯಿಝ್ ಬಿನ್ ಮಾಲಿಕ್(ರ) ಪ್ರವಾದಿಯವರ(ಸ) ಬಳಿ ಬಮದು ವ್ಯಭಿಚಾರಕ್ಕಿರುವ ಶಿಕ್ಷೆಯನ್ನು ತನ್ನ ಮೇಲೆ ಜಾರಿಗೊಳಿಸಬೇಕೆಂದು ನಾಲ್ಕು ಬಾರಿ ಬಂದು ಭಿನ್ನವಿಸಿದ್ದರು. ಬಳಿಕ ಪ್ರವಾದಿಯವರು(ಸ) ಅವರಿಗೆ ಕಲ್ಲೆಸೆದು ಕೊಲ್ಲುವ ಶಿಕ್ಷೆ ನೀಡಿದ್ದರು. ಕೆಲ ಕಾಲದ  ಬಳಿಕ ಪ್ರವಾದಿಯವರು(ಸ) ಮತ್ತು ಕೆಲವು ಅನುಯಾಯಿಗಳು (ಮಾಯಿಝ್(ರ) ವಧಿಸಲ್ಪಟ್ಟ ಸ್ಥಳದ ಮೂಲಕ) ನಡೆದು ಹೋಗುತ್ತಿದ್ದರು. ಆಗ ಓರ್ವರು ಹೇಳಿದರು, “ಇವರು ಎಂತಹ ಬುದ್ಧಿಹೀನ ವ್ಯಕ್ತಿ. ಹಲವು ಬಾರಿ ಅವರು ಪ್ರವಾದಿಯವರ(ಸ) ಬಳಿಗೆ ಬಂದರು. ಪ್ರತೀ ಭಾರಿಯೂ ಪ್ರವಾದಿಯವರು(ಸ) ಅವರನ್ನು ಮರಳಿಕಳಿಸಿದರು. ಆದರೂ ಒಂದು ನಾಯಿ ಕೊಲ್ಲಲ್ಪಡುವಂತೆ ಕೊಲ್ಲಲ್ಪಟ್ಟರು. ಇದನ್ನು ಕೇಳಿದ ಪ್ರವಾದಿವರ್ಯರು(ಸ) ಮೌನವ ವಹಿಸಿದರು. ಸ್ವಲ್ಪ ಮುಂದೆ ಹೋದಾಗ ಸತ್ತು ಕೊಳೆತು ನಾರುತ್ತಿರುವ ಕತ್ತೆಯ ಶವವನ್ನು ಕಂಡರು. ಪ್ರವಾದಿರ್ವಯರು(ಸ) ಅವರೊಂದಿಗೆ “ನೀವಿಬ್ಬರು ಈ ಕತ್ತೆಯನ್ನು ತಿನ್ನಿರಿ.” ಆಗ ಅವರು ಕೇಳಿದರು, “ಅಲ್ಲಾಹನ ದೂತರೇ, ಈ ಕತ್ತೆಯ ಶವವನ್ನಾ?” ಪ್ರವಾದಿಯವರು(ಸ) ಹೇಳಿದರು, “ಸ್ವಲ್ಪ ವೊದಲು ನೀವು ನಿಮ್ಮ ಸಹೋದರನ ಅಭಿಮಾನವನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದ್ದೀರಿ. ನೀವು ಹೇಳಿದ ಆ ಮಾತುಗಳು ಇದನ್ನು ತಿನ್ನುವುದಕ್ಕಿಂತ ಗಂಭೀರವಾದುದಾಗಿವೆ. ಮುಹಮ್ಮದನ ಆತ್ಮವು ಯಾರ ಕೈಯಲ್ಲಿದೆಯೋ ಅವನಾಣೆ! ಖಂಡಿತವಾಗಿಯೂ ಮಾಯಿಝ್(ರ) ಸ್ವರ್ಗದ ನದಿಯೊಂದರಲ್ಲಿ ಈಗ ಈಜಾಡುತ್ತಿರಬಹುದು.”
ಓರ್ವ ಮನುಷ್ಯನ ತಪ್ಪುಗಳನ್ನೂ ಕುಂದು ಕೊರತೆಗಳನ್ನೂ ಇತರರ ಮುಂದೆ ಹೇಳುವುದು ದೊಡ್ಡ ಪಾಪಕಾರ್ಯವಾಗಿದೆ. ವಿಶೇಷತಹ ಸತ್ಯವಿಶ್ವಾಸಿಗಳು ಈ ಪಾಪಕ್ಕೆ ಬಲಿ ಬಿಳ ಬಾರದು. ವಿಶ್ವಾಸಿಗಳು ಪರಸ್ಪರ ಸಹೋದರರಂತೆ ಜೀವಿಸಬೇಕಾದವರಾಗಿದ್ದಾರೆ. ಈ ಸಾಹೋದರ್ಯ ಸಂಬಂಧವನ್ನು ಮುರಿಯುವಂತ ದುಶ್ಚಟಗಳು ಅವರಲ್ಲಿ ಇರಲೇಬಾರದು ಸುಳ್ಳು, ಪರದೂಷಣೆಯಂತಹ ಪಾಪಗಳು ವಿಶ್ವಾಸಿಗಳ ಮಧ್ಯೆ ಇರುವ ಸೌಹಾರ್ದತೆಯನ್ನು ನಾಶಪಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ವಿಶ್ವಾಸಿಗಳು ವರ್ಜಿಸಬೇಕಾದ ಪಾಪ ಕೃತ್ಯಗಳ ಕುರಿತು ಅಲ್ಲಾಹನು ಸೂರಃ ಹುಜರಾತಿನ 12ನೇ ಸೂಕ್ತದಲ್ಲಿ ಹೇಳುತ್ತಾನೆ, “ಸತ್ಯವಿಶ್ವಾಸಿಗಳೇ ಹೆಚ್ಚಿನ ಗುಮಾನಿಗಳಿಂದ ದೂರವಿರಿ. ನಿಶ್ಚಯವಾಗಿಯೂ ಕೆಲವು ಗುಮಾನಿಗಳು ಪಾಪವಾಗಿವೆ. ದೋಷಾನ್ವೇಷಣೆ ಮಾಡದಿರಿ. ನಿಮ್ಲಲ್ಲಿ ಯಾರೂ ಯಾರ ಬಗ್ಗೆಯೂ ಪರದೂಷಣೆ ಮಾಡಬಾರದು. ನಿಮ್ಮಲ್ಲಿ ಯಾರಾದರೂ ತನ್ನ ಮೃತ ಸಹೋದರನ ಮಾಂಸ ತಿನ್ನುವನೇ? ನೀವು ಸ್ವತಃ ಅದನ್ನು ಅಸಹ್ಯಪಡುತ್ತೀರಿ. ಅಲ್ಲಾಹನನ್ನು ಭಯ ಪಡಿರಿ. ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನೂ ಕರುಣಾನಿಧಿಯೂ ಆಗಿರುತ್ತಾನೆ.”
ಇಂದು ಸಮಾಜದ ಬಹುತೇಕ ಮಂದಿಯಲ್ಲಿ ಪರದೂಷಣೆಯೆಂಬ ಆ ಮಹಾ ಪಾಪವು ಹಾಸು ಹೊಕ್ಕಾಗಿದೆ. ಅದರಲ್ಲಿ ವಿಶ್ವಾಸಿಗಳೂ ಸೇರಿದ್ದಾರೆ. ಧಾರ್ಮಿಕ ವಿಷಯಗಳಲ್ಲಿ ಹೆಚ್ಚು ಆಸಕ್ತರಾಗಿರುವವರೂ ಪರದೂಷಣೆಯಲ್ಲಿ ಮುಂದಿರುತ್ತಾರೆ ಎಂಬುದು ಒಂದು ದುರಂತವೇ ಸರಿ. ಅದರ ಅದರ ಗಂಭೀರತೆಯ ಕುರಿತೋ ಅಥವಾ ಅದು ಸಮಾಜದಲ್ಲಿ ಉಂಟು ಮಾಡುವ ಅನಾಹುತಗಳ ಕುರಿತೋ ಅವರು ಆಲೋಚಿಸುತ್ತಿಲ್ಲ. ಈ ಪಾಪವು ಹೆಚ್ಚಾಗಿ ಗೋಚರವಾಗುತ್ತಿರುವುದು ಮಹಿಳೆಯರಲ್ಲಿ ಎಂಬುದು ಖೇದಕರವಾದ ಸಂಗತಿಯಾಗಿದೆ. ಇದರರ್ಥ ಪುರುಷರಲ್ಲಿ ಈ ಸ್ವಭಾವವು ಇಲ್ಲವೆಂದಲ್ಲ. ಪುರುಷರು ದುಡಿಮೆಯ ನಿಭಿಡತೆಯಲ್ಲಿರುತ್ತಾರೆ. ಆದ್ದರಿಂದ ಅವರಿಗೆ ಅದಕ್ಕೆ ಹೆಚ್ಚು ಸಮಯ ದೊರೆಯುವುದಿಲ್ಲ. ಆದರೆ ಸಿಕ್ಕಿದ ಸಮಯವನ್ನು ಅದಕ್ಕೆ ಉಪಯೋಗಿಸುತ್ತಿದ್ದಾರೆ ಎಂಬುದು ಕಟು ಸತ್ಯವಾಗಿದೆ. ಮಹಿಳೆಯರು ಹಾಗಲ್ಲ. ಅವರಿಗೆ ಬಿಡುವು ಹೆಚ್ಚಾಗಿರುತ್ತದೆ. ಈ ಸಂದರ್ಭಗಳಲೆಲ್ಲಾ ಪರದೂಷಣೆಗೆ ಅವರ ನಾಲಗೆಯು ಸಾಕ್ಷಿಯಾಗುತ್ತದೆ. ಸಂಜೆ ವೇಳೆಗಳಲ್ಲೆಲ್ಲಾ ನೆರೆಯವರೊಂದಿಗೆ ಕುಳಿತು ಹರಟೆ ಹೊಡೆಯುವಾಗ ಹೆಚ್ಚಿನ ವೇಳೆ ಇತರರ ತಪ್ಪುಗಳೂ, ಕೊರತೆಗಳೂ ಅಲ್ಲಿ ಪ್ರಸ್ತಾಪಿಸಲ್ಪಡುತ್ತವೆ.
ಮಹಿಳೆಯರ ಕುರಿತು ಒಂದು ಗಾದೆ ಮಾತು ಚಾಲ್ತಿಯಲ್ಲಿದೆ. “ಮೂವರು ಮಹಿಳೆಯರು ಮಾತನಾಡುವಾಗ ಅದು ಸಂಭಾಷಣೆ. ಅವರ ಪೈಕಿ ಓರ್ವಳು ಹೊರಟು ಹೋದಾಗ ಅದು ಪರದೂಷಣೆ.” ಇಂದು ನಡೆಯುವ ವಿಷಯವೇ ಆಗಿದೆ. ಮೂವರೋ ನಾಲ್ವರೋ ಸೇರಿ ಏನಾದರೂ ಮಾತನಾಡುತ್ತಿರುತ್ತಾರೆ. ಅವರಲ್ಲಿ ಯಾರಾದರೂ ಹೋದರೆ ಮತ್ತು ಹೋದ ವ್ಯಕ್ತಿಯ ಕುರಿತು ಅಲ್ಲಿ ಚರ್ಚೆಯಾಗುತ್ತದೆ. ಖಂಡಿತವಾಗಿಯೂ ಇಂತಹ ಸ್ವಭಾವವು ಓರ್ವ ಸತ್ಯವಿಶ್ವಾಸಿಗೆ ಭೂಷಣವಲ್ಲ. ವ್ಯಭಿಚಾರದಂತಹ ಪಾಪಗಳನ್ನು ಬಹಳ ಗಂಭೀರವಾಗಿ ಪರಿಗಣಿಸುವವರು ವ್ಯಭಿಚಾರಕ್ಕಿಂತಲೂ ದೊಡ್ಡ ಈ ಪಾಪವನ್ನು ಕ್ಷುಲ್ಲಕವೆಂದು ಬಗೆದು ಮಾಡುತ್ತಿದ್ದಾರೆ.
ಅಬೂ ಸಯೀದಿಲ್ ಖುದ್ರೀ(ರ) ವರದಿ ಮಾಡಿದ್ದಾರೆ. ಪ್ರವಾದಿಯವರು(ಸ) ಹೇಳಿದರು, “ಪರದೂಷಣೆಯು ವ್ಯಭಿಚಾರಕ್ಕಿಂತ ಗಂಭೀರವಾದ ಪಾಪವಾಗಿದೆ.” ಜನರು ಕೇಳಿದರು, “ಅಲ್ಲಾಹನ ಪ್ರವಾದಿಯವರೇ(ಸ) ಪರದೂಷಣೆಯು ಯಾಕೆ ವ್ಯಭಿಚಾರಕ್ಕಿಂತ ದೊಡ್ಡ ಪಾಪವಾಯಿತು? ಪ್ರವಾದಿಯವರು(ಸ) ಹೇಳಿದರು. ಓರ್ವನು ವ್ಯಭಿಚಾರ ವೆಸಗಿದರೆ ಅಲ್ಲಾಹನು ಅವನ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಆದರೆ ಪರದೂಷಣೆ ಮಾಡಿದವನು. ಅವನು ಯಾರ ಕುರಿತು ಪರದೂಷಣೆ ಮಾಡಿರುವನೋ ಅವನು ಕ್ಷಮಿಸುವವರೆಗೆ ಅಲ್ಲಾಹನು ಪರದೂಷಣೆ ನಡೆಸಿದವನನ್ನು ಕ್ಷಮಿಸಿಲಿಕ್ಕಿಲ್ಲ.”
ಒಟ್ಟಿನಲ್ಲಿ ವ್ಯಕ್ತಿಗಳ ಅಭಿಮಾನವನ್ನು ಅವಹೇಳನ ಮಾಡುವ ಪರದೂಷಣೆಯು ವಿಶ್ವಾಸಿಗಳಲ್ಲಿರಲೇ ಬಾರದು. ಎಲ್ಲಾ ಧಾರ್ಮಿಕ ಕರ್ಮಗಳನ್ನು ಚಾಚೂ ತಪ್ಪದೆ ಮಾಡುತ್ತಿದ್ದರೂ ಪರದೂಷಣೆಯು ನಮ್ಮಲ್ಲಿದ್ದರೆ ಆ ಕರ್ಮಗಳಿಂದೇನೂ ಪ್ರಯೋಜನವಿಲ್ಲ. ಇದು ಕ್ಷುಲ್ಲಕವೆಂದು ಕಂಡರೂ ಇದರಿಂದಾಗುವ ಆಪತ್ತು ಬಹಳ ಗಂಭೀರವಾದುದಾಗಿದೆ. ಆದ್ದರಿಂದ ನಮ್ಮ ಕರ್ಮಗಳು ನಿಶ್ಫಲಗೊಳ್ಳದಿರಬೇಕಾದರೆ ಈ ಪಾಪದಿಂದ ನಾವು ದೂರ ಸರಿಯಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಿಮ್ಮನ್ನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ