ಸೋಮವಾರ, ಜೂನ್ 04, 2012

ಆಪತ್ಕಾಲದಲ್ಲಿ ಆಪತ್ಬಾಂಧವರಾಗುವವರು



ನಮ್ಮ ಮನೆಯಲ್ಲಿ ನಮಗೆ ಏನಾದರೂ ಸಂಕಷ್ಟ ಉಂಟಾದಾಗ ನೆರವಿಗೆ ಧಾವಿಸುವವರು ನೆರೆಮನೆಯ ಮಂದಿಯಾಗಿದ್ದಾರೆ. ನಮ್ಮ ಸುಖಗಳಲ್ಲೂ ದುಃಖಗಳಲ್ಲೂ ಅವರು ಭಾಗಿಯಾಗುತ್ತಾರೆ. ನೆರೆಕರೆಯವರಿದ್ದರೆ ನಮಗೆ ಒಂದು ರೀತಿಯ ಭದ್ರತಾ ಭಾವ ಮನದಲ್ಲಿ ಮೂಡುತ್ತದೆ. ನಾವು ಹೊರಗಡೆ ಹೋಗುವಾಗ ಮನೆಯ ಬೀಗದ ಕೈಯನ್ನೂ ನೆರೆಯವರ ಕೈಗೆ ಒಪ್ಪಿಸಿ ಹೋಗುತ್ತೇವೆ. ಮನೆಗೆ ನೆಂಟರು ಬಂದಾಗ ಸಕ್ಕರೆಯೋ ಇನ್ನಾವುದೋ ವಸ್ತುಗಳು ಮುಗಿದದ್ದು ಗೊತ್ತಾದರೆ ನಾವು ಲೋಟ ಹಿಡಿದು ಎರವಲು ಪಡೆಯಲು ನೆರೆಮನೆಗೆ ಓಡುತ್ತೇವೆ. ಒಟ್ಟಿನಲ್ಲಿ ಜೀವನದ ಹಲವಾರು ಸಂದರ್ಭಗಳಲ್ಲಿ ಸಂಕಷ್ಟವೆರಗಿದಾಗ ನಮಗೆ ಸಹಾಯ ಹಸ್ತ ಚಾಚುವವರು ನೆರೆಕರೆಯವರೇ ಆಗಿದ್ದಾರೆ. ಆದ್ದರಿಂದ ನಮಗೆ ಅವರ ಮೇಲೆ ಹಲವಾರು ಬಾಧ್ಯತೆಗಳಿವೆ. ಆ ಭಾದ್ಯತೆಗಳ ಕುರಿತು ನಾವು ಜಾಣ ಮರೆವು ಪ್ರದರ್ಶಿಸುತ್ತಿದ್ದೇವೆ.
ನೆರೆಕರೆಯವರೊಂದಿಗಿನ ವರ್ತನೆಗೆ ಕುರಾನ್ ಹೆಚ್ಚಿನ ಮಹತ್ವ ನೀಡಿದೆ. ಅಲ್ಲಾಹನೊಂದಿಗಿನ ಆರಾಧನೆಯ ಬಳಿಕ ಪರಸ್ಪರರ ಸಂಬಂಧಕ್ಕೆ  ಕುರಾನ್   ಮಹತ್ವ ನೀಡಿದ್ದನ್ನೂ ನಮಗೆ ಕಾಣಲು ಸಾಧ್ಯ. ಅಲ್ಲಾಹನು ಅನ್ನಿಸಾ ಅಧ್ಯಾಯದ 36ನೇ ಸೂಕ್ತದಲ್ಲಿ ಈ ರೀತಿ ಹೇಳುತ್ತಾನೆ, “ನೀವೆಲ್ಲರೂ ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ. ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಬೇಡಿರಿ. ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಿರಿ. ಸಂಬಂಧಿಕರೊಂದಿಗೂ ನಿರ್ಗತಿಕರೊಂದಿಗೂ ಆಪ್ತರಾದ ನೆರೆಕರೆಯವರೊಂದಿಗೂ ಅಪರಿಚಿತ ನೆರೆಹೊರೆಯವರೊಂದಿಗೂ ಅನುಚರರೊಂದಿಗೂ ಪ್ರಯಾಣಿಕರೊಂದಿಗೂ ನಿಮ್ಮ ಅಧೀನದಲ್ಲಿರುವ ದಾಸದಾಸಿಯರೊಂದಿಗೆ ಉತ್ತಮ ರೀತಿಯಿಂದ ವರ್ತಿಸಿರಿ. ದುರಹಂಕಾರ ಹೊಂದಿದ ಗರ್ವಿಷ್ಟನನ್ನೂ ಆತ್ಮಸ್ತುತಿಗೈಯುವವನನ್ನೂ ಅಲ್ಲಾಹನು ಇಷ್ಟಪಡುವುದಿಲ್ಲ.”
ನೆರೆಕರೆಯವರೊಂದಿಗಿನ ಬಾಧ್ಯತೆಯ ಕುರಿತು ತ್ವಬ್ರಾನಿ ಉದ್ಧರಿಸಿರುವ ಒಂದು ಪ್ರವಾದಿ ವಚನವು ಇಂತಿದೆ. “ಅವನು ರೋಗಿಯಾದರೆ ಅವನನ್ನು ಸಂದರ್ಶಿಸುವುದು ಮತ್ತು ಉಪಚರಿಸುವುದು, ಅವನು ಮರಣ ಹೊಂದಿದರೆ ಅವನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸುವುದು, ಅವನು ಸಾಲ ಕೇಳಿದರೆ ನೀಡುವುದು, ಅವನ ತಪ್ಪುಗಳನ್ನು ಕ್ಷಮಿಸುವುದು, ಮನೆ ನಿರ್ಮಿಸುವಾಗ ನೆರೆಮನೆಗಿರುವ ವಾಯು ಸಂಚಾರಕ್ಕೆ ತಡೆಯಾಗುವ ರೀತಿಯಲ್ಲಿ ನಿರ್ಮಿಸದಿರುವುದು, ಅಡುಗೆ ಮಾಡುವಾಗ ಅದರ ಗಂಧವು ನೆರೆಮನೆಯವನಿಗೆ ಉಪದ್ರವ ನೀಡದಂತಿರುವುದು. ಏನಾದರೂ ತಿಂಡಿ ತಿನಿಸುಗಳನ್ನು ತಂದರೆ ನೆರೆಮನೆಯವನಿಗೂ ನೀಡುವುದು.” ಕಂಸುಲ್ ಉಮ್ಮಾಲ್ ಎಂಬ ಗ್ರಂಥದಲ್ಲಿ ಹೀಗೆ ಉದ್ಧರಿಸಲಾಗಿದೆ, “ನೀವು ಹಣ್ಣನ್ನು ಖರೀದಿಸಿ ತಂದರೆ ಅದರಿಂದ ಒಂದು ಪಾಲನ್ನು ನೆರೆಮನೆಯವನಿಗೆ ನೀಡಬೇಕು. ಹಾಗೆ ನೀಡಲು ಸಾಧ್ಯವಿಲ್ಲದಿದ್ದರೆ ಅವರಿಗೆ ತೋರಿಸಬಾರದು.”
ಆದರೆ ಇಂದು ನಾವು ಈ ಎಲ್ಲಾ ಬಾಧ್ಯತೆಯ ಕುರಿತು ನಿರ್ಲಕ್ಷ್ಯರಾಗಿದ್ದೇವೆ. ಇಂದು ನಮ್ಮ ಜೀವನವು ಸಂಕೀರ್ಣಗೊಂಡು ದೊಡ್ಡ ದೊಡ್ಡ ‘ಫ್ಲಾಟ್’ಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಸೀಮಿತಗೊಂಡಿದ್ದೇವೆ. ಆಚೀಚೆ ಕಣ್ಣೆತ್ತಿಯೂ ನೋಡದೆ ಕೇವಲ ಪತ್ನಿ ಮಕ್ಕಳೊಂದಿಗೆ ಲೋಕದ ಪರಿವೇ ಇಲ್ಲದೆ ಕಾಲ ಕಳೆಯುವಾಗ ನೆರೆಕರೆಯಲ್ಲಿ ಏನೇ ಸಂಭವಿಸಿದರೂ ತಿಳಿಯದ ಪರಿಸ್ಥಿತಿ ಇಂದು ಬಂದೊದಗಿದೆ. ಇತ್ತೀಚೆಗೆ ಒಂದು ಫ್ಲಾಟಿನಲ್ಲಿ ಕೆಳಗಿನ ಅಂತಸ್ತಿನಲ್ಲಿರುವ ಒಂದು ಮನೆಯಲ್ಲಿ ಓರ್ವರು ಮರಣ ಹೊಂದಿ ಅವರ ಶವ ಸಂಸ್ಕಾರ ನಡೆದು ಸಂಜೆಯ ವರೆಗೂ ಮೇಲಿನ ಅಂತಸ್ತಿನ ಮನೆಯವರಿಗೆ ತಿಳಿಯದ ಪ್ರಸಂಗವೂ ನಡೆದಿದೆ.
ನೀವೇ ಆಲೋಚಿಸಿ ನೋಡಿ, ಬದುಕು ಎಷ್ಟು ಸಂಕೀರ್ಣಗೊಂಡಿದೆ! ನೆರೆಮನೆಯ ಮಕ್ಕಳು ನಮ್ಮ ಮಕ್ಕಳೊಂದಿಗಿರುವಾಗ ಕೇವಲ ನಮ್ಮ ಮಕ್ಕಳಿಗೆ ಮಾತ್ರ ತಿಂಡಿ-ತಿನಿಸನ್ನು ನೀಡುವ ಎಷ್ಟೋ ಹೆತ್ತವರಿದ್ದಾರೆ. ನಾವು ನಮ್ಮ ಸ್ಥಳದಲ್ಲಿಯೇ ಮನೆ ನಿರ್ಮಿಸುತ್ತಿದ್ದರೂ ಅದರಿಂದ ನೆರೆಮನೆಗೆ ಉಪದ್ರವ ಉಂಟಾಗದಿರುವುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಇಂದು ಯಾರು ಕೂಡಾ ಮುಂದಾಗುತ್ತಿಲ್ಲ. ಈ ಸ್ವಭಾವಗಳು ಯಾವನೇ ವಿಶ್ವಾಸಿಗೆ ಭೂಷಣವಲ್ಲ. ಎಲ್ಲ ಆರಾಧನಾ ಕರ್ಮಗಳನ್ನು ಭಕ್ತಿಯಿಂದ ನಿರ್ವಹಿಸುವ ಏಕದೇವತ್ವಕ್ಕೆ ಎಲ್ಲಿಲ್ಲದ ಮಹತ್ವ ನೀಡುತ್ತಿರುವ ಮಂದಿ ನೆರೆಮನೆಯವರೊಂದಿಗಿನ ವರ್ತನೆಯ ವಿಚಾರದಲ್ಲಿ ಬಹಳ ಹಿಂದಿದ್ದಾರೆ.
ನೆರೆಕರೆಯವರಿಗೆ ಕಾಟ ನೀಡುವುದು ಮಾತ್ರವಲ್ಲ, ಅವರಿಗೆ ಉಪಕಾರ ಮಾಡದಿರುವುದು ಕೂಡಾ ಪಾಪವಾಗಿದೆ. ಈ ಕುರಿತು ನಾಳೆ ಪರಲೋಕದಲ್ಲಿ ನೆರೆಮನೆಯವನು ಅಲ್ಲಾಹನ ಮುಂದೆ ನಮ್ಮ ವಿರುದ್ಧ ಸಾಕ್ಷಿ ನುಡಿಯುವನು. ಪ್ರವಾದಿ(ಸ) ಹೇಳಿದರು, “ಅಂತ್ಯ ದಿನದಲ್ಲಿ ಎಷ್ಟೋ ಜನರು ತಮ್ಮ ನೆರೆಕರೆಯವರೊಂದಿಗೆ ಹಾಜರಾಗುತ್ತಾರೆ. ನೆರೆಮನೆಯವನು ಹೇಳುವನು, ಓ ನನ್ನ ಪ್ರಭೂ, ಇವನು ನನಗಾಗಿ ತನ್ನ ಬಾಗಿಲನ್ನು ಮುಚ್ಚಿದ್ದಾನೆ. ತನ್ನ ಒಳಿತುಗಳನ್ನು ನನಗೆ ತಡೆದಿದ್ದಾನೆ.”
ಇಂದು ಹಲವರು, ಮುಸ್ಲಿಮರು ಮಾತ್ರ ನೆರೆಕರೆಯವರು ಎಂದು ಭಾವಿಸಿದ್ದಾರೆ. ಮುಸ್ಲಿಮೇತರರು ನೆರೆಕರೆಯ ಪಟ್ಟಿಗೆ ಸೇರಿದವರಲ್ಲ ಎಂದು ತೀರ್ಮಾನಿಸಿ ಬಿಟ್ಟಿದ್ದಾರೆ. ಆದರೆ ಇದು ತಪ್ಪಾದ ಕಲ್ಪನೆಯಾಗಿದೆ. ಮನೆಯ ಸುತ್ತ ವಾಸಿಸುವ ಯಾರೇ ಆದರೂ ಅವರು ನೆರೆಕರೆಯ ಸಾಲಿಗೆ ಸೇರುತ್ತಾರೆ. ಅವರೊಂದಿಗೆ ಬಾಧ್ಯತೆಯ ವಿಚಾರದಲ್ಲಿ ಹೆಚ್ಚು ಕಡಿಮೆ ಇದ್ದರೂ ನೆರೆಕರೆಯವರು ಎಂಬ ಸ್ಥಾನದಿಂದ ಅವರು ಹೊರಗುಳಿಯುವುದಿಲ್ಲ. ನಮ್ಮ ನೆರೆಯಲ್ಲಿರುವ ಒಂದೆರಡು ಮನೆಗಳನ್ನು ನೆರೆಮನೆಯವರ ಸಾಲಿಗೆ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತೇವೆ. ಆದರೆ ಪ್ರವಾದಿ(ಸ) ಒಂದು ಮನೆಯ ಸುತ್ತಮುತ್ತ ಇರುವ 40 ಮನೆಗಳು ನೆರೆಕರೆಯವರಾಗಿದ್ದಾರೆ ಎಂದು ಹೇಳಿದ್ದಾರೆ.
ಮುಸ್ನದ್ ಬಸ್ಸಾರ್ ವರದಿ ಮಾಡಿರುವ ಒಂದು ಪ್ರವಾದಿ ವಚನ ಹೀಗಿದೆ, “ನೆರೆಮನೆಯವರಲ್ಲಿ ಮೂರು ವಿಭಾಗಗಳಿವೆ. ಒಂದನೇ ವಿಭಾಗದವರಲ್ಲಿ ಒಂದೇ ಬಾಧ್ಯತೆ. ಎರಡನೇ ವಿಭಾಗದವರಲ್ಲಿ ಎರಡು ಬಾಧ್ಯತೆಗಳಿವೆ. ಮೂರನೇ ವಿಭಾಗದವರಲ್ಲಿ ಮೂರು ಬಾಧ್ಯತೆಗಳಿವೆ. ಒಂದನೇ ವಿಭಾಗದವರಲ್ಲಿ ನೆರೆಮನೆಯವರು ಎಂಬ ಬಾಧ್ಯತೆ ಮಾತ್ರ. ಎರಡನೇ ವಿಭಾಗದವರು ಮುಸ್ಲಿಮರಾಗಿದ್ದಾರೆ. ಅವರೊಂದಿಗೆ ನೆರೆಮನೆಯವರು ಎಂಬ ಬಾಧ್ಯತೆಯೊಂದಿಗೆ ಮುಸಲ್ಮಾನರು ಎಂಬ ಬಾಧ್ಯತೆಯೂ ಇದೆ. ಮೂರನೇ ವಿಭಾಗದವರು ಮುಸ್ಲಿಮರಾದ ಸಂಬಂಧಿಕರು. ಅವರೊಂದಿಗೆ ಮುಸ್ಲಿಮರು, ಸಂಬಂಧಿಕರು ಮತ್ತು ನೆರೆಮನೆಯವರು ಎಂಬ ನೆಲೆಯಲ್ಲಿ ಮೂರು ಬಾಧ್ಯತೆಗಳಿವೆ.”
ಆದರೆ ಇಂದು ಇವೆಲ್ಲದಕ್ಕೆ ಭಿನ್ನವಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೆರೆಮನೆಯವರಿಗೆ ಸದಾ ಅಪಚಾರ ಮಾಡುವ ಎಷ್ಟೋ ಮಂದಿಯಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೆ ಪರಸ್ಪರ ಜಗಳವಾಡುತ್ತಾರೆ. ನೆರೆಮನೆಯ ಕೋಳಿ ಅಥವಾ ಆಡು ನಮ್ಮ ಮನೆಗೆ ಬಂದರೆ ಅಲ್ಲಿ ದೊಡ್ಡ ಯುದ್ಧವೇರ್ಪಡುತ್ತದೆ. ಬುದ್ಧಿ ಇಲ್ಲದ ಜಾನುವಾರುಗಳು ಮಾಡುವ ಕೃತ್ಯಕ್ಕೆ ಬುದ್ಧಿ ಇರುವ ಮಾನವರು ಸಂಬಂಧಗಳನ್ನೇ ಮುರಿದುಕೊಳ್ಳುತ್ತಾರೆ. ಆದರೆ ಇದು ವಿಶ್ವಾಸಿಗೆ ತರವಲ್ಲ. ನೆರೆಮನೆಯವರೊಂದಿಗೆ ಉತ್ತಮವಾಗಿ ವರ್ತಿಸದವನು ವಿಶ್ವಾಸಿಯಾಗಲಿಕ್ಕಿಲ್ಲ. ಅವನ ಕರ್ಮಗಳು ನಿಶ್ಫಲವಾಗಬಹುದು. ಆದ್ದರಿಂದ ನಾವು ನಮ್ಮ ನೆರೆಕರೆಯವರೊಂದಿಗೆ ಉತ್ತಮವಾಗಿ ವರ್ತಿಸಬೇಕು ಮತ್ತು ಅವರೊಂದಿಗಿನ ಬಾಧ್ಯತೆಗಳನ್ನು ಪೂರೈಸಬೇಕು. ಆಪತ್ಕಾಲದಲ್ಲಿ ಆಪತ್ಭಾಂಧವರಾಗುವುದು ಅವರಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ