ಸೋಮವಾರ, ಜೂನ್ 25, 2012

ಗೆಳೆತನ ಸಂಪಾದಿಸುವಾಗ ಎಚ್ಚರ ವಹಿಸಿ


ಗೆಳೆತನವೆಂಬುದು ಮನುಷ್ಯನ ಜೀವನದ ಅನಿವಾರ್ಯ ಬೇಡಿಕೆಗಳಲ್ಲೊಂದಾಗಿದೆ. ಎಲ್ಲರೂ ಗೆಳೆಯರನ್ನು ಹೊಂದಿರುತ್ತಾರೆ. ಇನ್ನು ಗೆಳೆಯರಿಲ್ಲದವರು ಅವರ ಗಳಿಕೆಗಾಗಿ ಹಂಬಲಿಸುತ್ತಿರುತ್ತಾರೆ. ಯಾರಿಗೂ ಕೂಡಾ ಏಕಾಂಗಿಯಾಗಿ ಯಾರದೇ ಸಹಾಯವಿಲ್ಲದೇ ಜೀವಿಸಲು ಸಾಧ್ಯವಿಲ್ಲ. ಗೆಳೆತನವು ಮಾನವರ ಬದುಕಿನ ಮಾರ್ಗ ಸೂಚಿಯಾಗಿದೆ. ತಂದೆ ತಾಯಿಗಳೊಂದಿಗೆ ಹೇಳಲು ಸಾಧ್ಯವಿಲ್ಲದ್ದನ್ನೂ ನಾವು ಗೆಳೆಯರೊಂದಿಗೆ ಹಂಚಿಕೊಳ್ಳುತ್ತೇವೆ. ಅದು ಬದುಕಿನ ಮೇಲೆ ಹಲವಾರು ರೀತಿಯಲ್ಲಿ ಪ್ರಭಾವ ಬೀರುತ್ತದೆ. ಓರ್ವನ ಸ್ವಭಾವ ಹಾಗೂ ಚಾರಿತ್ರ್ಯ ನಿರ್ಮಾಣದ ಮೇಲೆ ಗೆಳೆತನವು ನಿರ್ವಹಿಸುವ ಪಾತ್ರವು ಸಣ್ಣದಲ್ಲ. ಓರ್ವ ವ್ಯಕ್ತಿಯ ವ್ಯಕ್ತಿತ್ವವು ಅವನ ಗೆಳೆಯರಿಗೆ ಹೊಂದಿಕೊಂಡಿರುತ್ತದೆ. ಉತ್ತಮ ಗೆಳೆಯರನ್ನು ಹೊಂದಿದವನ ಸ್ವಭಾವ, ವರ್ತನೆಗಳು ಯಾವಾಗಲೂ ಉತ್ತಮವಾಗಿಯೇ ಇರುತ್ತದೆ. ಇನ್ನು ಕೆಟ್ಟಗೆಳೆಯರಿದ್ದರೆ ಅದರ ಪರಿಣಾಮವು ಅವರಲ್ಲಿ ಖಂಡಿತವಾಗಿಯೂ ಗೋಚರವಾಗುತ್ತದೆ. ಉತ್ತಮ ಹಾಗೂ ಕೆಟ್ಟ ಗೆಳೆಯರ ಕುರಿತು ಪ್ರವಾದಿ(ಸ) ಹೀಗೆ ಹೇಳಿದ್ದಾರೆ.
ಅಬೂ ಮೂಸಲ್ ಅಶ್ಅರಿ(ರ) ವರದಿ ಮಾಡಿದ್ದಾರೆ. ಪ್ರವಾದಿ(ಸ) ಹೇಳಿದರು. “ಉತ್ತಮ ಹಾಗೂ ಕೆಟ್ಟ ಗೆಳೆಯರ ಉಪಮೆಯು ಕಸ್ತೂರಿ ಹೊರುವವನು ಮತ್ತು ಒಲೆಗೆ ಊದುವವನಂತಾಗಿದೆ. ಕಸ್ತೂರಿ ಹೊರುವವನು ಅದರಿಂದ ನಿನಗೆ ಏನಾದರೂ ನೀಡಬಹುದು. ಇಲ್ಲದಿದ್ದರೆ ನೀನು ಅವನಿಂದ ಹಣ ನೀಡಿ ಖರೀದಿಸಬಹುದು. ಅದೂ ಅಲ್ಲದಿದ್ದರೆ ಅದರ ಸುವಾಸನೆಯನ್ನಾದರೂ ಸವಿಯಬಹುದು. ಇನ್ನು ಒಲೆಯಲ್ಲಿ ಊದುವವನು ಒಂದೋ ನಿನ್ನ ಬಟ್ಟೆಯನ್ನು ಸುಟ್ಟು ಬಿಡಬಹುದು. ಇಲ್ಲದಿದ್ದರೆ ದುರ್ಗಂಧವನ್ನು ನೀನು ಅನುಭವಿಸ ಬೇಕಾಗುವುದು.” ಇದು ಬಹಳ ಉತ್ತಮವಾದ ಉದಾಹರಣೆಯಾಗಿದೆ. ಉತ್ತಮ ಗೆಳೆಯನನ್ನು ಪ್ರವಾದಿಯವರು ಕಸ್ತೂರಿ ಹೊರುವವನಿಗೆ ಹೋಲಿಸಿದ್ದಾರೆ. ಕಸ್ತೂರಿ ಹೊರುವವನನ್ನು ಎಲ್ಲರೂ ಇಷ್ಟ ಪಡುತ್ತಾರೆ. ಯಾಕೆಂದರೆ ಅವನ ಬಳಿ ಹೋದರೆ ಉತ್ತಮ ಪರಿಮಳ ಲಭಿಸುತ್ತದೆ. ಮನಸ್ಸಿಗೆ ಆಹ್ಲಾದವಾಗುತ್ತದೆ. ಆದರೆ ಒಲೆಗೆ ಊದುವವನ ಸ್ಥಿತಿಯು ಇದಕ್ಕೆ ವಿರುದ್ಧವಾಗಿರುತ್ತದೆ. ಕಿಡಿಗಳು ಅಲ್ಲಲ್ಲ್ಲಿ ಹಾರುತ್ತಿರುತ್ತವೆ. ಬಳಿ ಹೋದವರ ಬಟ್ಟೆ ಅಥವಾ ಶರೀರ ಸುಡುವ ಸಾಧ್ಯತೆ ಇದೆ. ಆದ್ದರಿಂದ ಯಾರು ಕೂಡಾ ಅವನ ಬಳಿ ಹೋಗಲು ಇಷ್ಟ ಪಡುವುದಿಲ್ಲ.
ನಾವು ನಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಉತ್ತಮ ಗೆಳೆಯರು ನೆರವಾಗುತ್ತಾರೆ. ಸಚ್ಚಾರಿತ್ರ್ಯದಿಂದ ತುಂಬಿದ ಅವರ ಜೀವನವು ಇತರರಿಗೆ ದಾರಿ ದೀಪವಾಗುತ್ತದೆ. ಅಂತಹ ವ್ಯಕ್ತಿಗಳೊಂದಿಗೆ ಗೆಳೆತನ ಬೆಳೆಸಲು ಎಲ್ಲರೂ ಮುಂದಾಗುತ್ತಾರೆ. ಉತ್ತಮ ಗೆಳೆಯರ ಕುರಿತು ಪ್ರವಾದಿ(ಸ) ಹೀಗೆ ಹೇಳಿದರು, “ಎರಡು ಗೆಳೆಯರು ಎರಡು ಕೈಗಳಿದ್ದಂತೆ. ಒಂದು ಕೈಯು ಇನ್ನೊಂದು ಕೈಯನ್ನು ಶುಚಿಗೊಳಿಸಲು ಸದಾ ನೆರವಾಗುತ್ತಿರುತ್ತದೆ. ವಿಶ್ವಾಸಿಗಳಾದ ಇಬ್ಬರು ವ್ಯಕ್ತಿಗಳು ಪರಸ್ಪರ ಭೇಟಿಯಾದರೆ ಓರ್ವನಿಂದ ಇನ್ನೋರ್ವನಿಗೆ ಅಲ್ಲಾಹನು ಯಾವುದಾದರೂ ಒಳಿತನ್ನು ನೀಡದಿರಲಿಕ್ಕಿಲ್ಲ.”
ಕೆಟ್ಟ ಗೆಳೆಯರೊಂದಿಗೆ ಗೆಳೆತನ ಬೆಳೆಸಿದರೆ ಅದು ಜೀವನದ ಅಧಃಪತನಕ್ಕೆ ನಾಂದಿ ಹಾಡಿದಂತಾಗುತ್ತದೆ. ಅವರಿಂದ ಯಾವುದೇ ಉತ್ತಮ ಗುಣಗಳನ್ನು ನಿರೀಕ್ಷಿಸುವಂತಿಲ್ಲ. ಅವರೊಂದಿಗೆ ಗೆಳೆತನ ಬೆಳೆಸಿದರೆ ನಮ್ಮ ಜೀವನವು ಅವರ ಜೀವನದಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕುರಿತು ಪ್ರವಾದಿ(ಸ) ಎಚ್ಚರಿಕೆ ನೀಡಿದ್ದಾರೆ. ಅಬೂದರ್ರುಲ್ ಗಿಫಾರಿ(ರಿ) ವರದಿ ಮಾಡಿದ್ದಾರೆ. ಪ್ರವಾದಿ(ಸ) ಹೇಳಿದರು. “ಕೆಟ್ಟ ಗೆಳೆಯರಿಗಿಂತ ಉತ್ತಮವಾದದ್ದು ಏಕಾಂತತೆಯಾಗಿದೆ. ಏಕಾಂತತೆಗಿಂತ ಉತ್ತಮವಾದುದು ಸಚ್ಚರಿತರಾದ ಉತ್ತಮ ಗೆಳೆಯರಾಗಿದ್ದಾರೆ. ಉತ್ತಮ ಮಾತುಕತೆಯು ಮೌನಕ್ಕಿಂತ ಶ್ರೇಷ್ಠವಾದುದಾಗಿದೆ. ಮೌನವು ಕೆಟ್ಟ ಮಾತುಕತೆಗಿಂತ ಶ್ರೇಷ್ಠ ವಾದುದಾಗಿದೆ.”
ನಾವು ಗೆಳೆತನ ಬೆಳೆಸುವಾಗ ಜಾಗರೂಕರಾಗಿರಬೇಕು. ಕೆಟ್ಟ ಗೆಳೆಯರ ಸಂಪಾದನೆಯು ವಿನಾಶಕ್ಕೆ ಆಹ್ವಾನವೀಯುತ್ತದೆ. ಪ್ರವಾದಿ(ಸ) ಹೇಳಿದರು, “ಮನುಷ್ಯನು ಅವನ ಗೆಳೆಯನ ಧರ್ಮದಲ್ಲಾಗಿರುವನು. ಆದ್ದರಿಂದ ಯಾರೊಂದಿಗೆ ಗೆಳೆತನ ಬೆಳೆಸಬೇಕೆಂದು ಪ್ರತಿಯೊಬ್ಬನೂ ಆಲೋಚಿಸಿ ತೀರ್ಮಾನಿಸಲಿ.” ಗೆಳೆಯರನ್ನು ಸಂಪಾದಿಸುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಇಮಾಮ್ ಜಅïಫರ್ ಸ್ವಾದಿಕ್(ರ) ಹೀಗೆ ಹೇಳುತ್ತಾರೆ. “ಸುಳ್ಳು ಹೇಳುವವನು, ಪೆದ್ದ, ಜಿಪುಣ, ಹೇಡಿ, ದುರ್ವರ್ತನೆ ಹೊಂದಿದವನು ವೊದಲಾದವರೊಂದಿಗೆ ನೀನು ಗೆಳೆತನ ಬೆಳೆಸಬಾರದು. ಸುಳ್ಳು ಹೇಳುವವನು ನಿನ್ನನ್ನು ವಂಚನೆಯಲ್ಲಿ ಸಿಲುಕಿಸುವನು. ಅವನು ಮರುಭೂಮಿಯಲ್ಲಿರುವ ಮರೀಚಿಕೆಯಂತಿರುವನು. ಹತ್ತಿರ ಇರುವುದನ್ನು ದೂರವಾಗಿಯೂ ದೂರ ಇರುವುದನ್ನು ಹತ್ತಿರವಾಗಿಯೂ ಪ್ರದರ್ಶಿಸುವನು. ಪೆದ್ದನಿಂದ ನಿನಗೆ ಯಾವುದೇ ಉಪಕಾರ ಲಭಿಸಲಿಕ್ಕಿಲ್ಲ. ಅವನು ಉಪಕಾರ ಮಾಡಲು ಬಯಸಿದರೂ ಅದು ಉಪದ್ರವದಲ್ಲಿ ಕೊನೆಗೊಳ್ಳುತ್ತದೆ. ಜಿಪುಣನು, ನಿನಗೆ ಅವನ ಅಗತ್ಯ ಹೆಚ್ಚಿರುವಾಗ ಅವನು ನಿನ್ನೊಂದಿಗೆ ಸಂಬಂಧವನ್ನು ಕಡಿದುಕೊಳ್ಳತ್ತಾನೆ. (ಹಣ ಖರ್ಚಾಗಬಹುದು ಎಂಬ ಭಯ) ಹೇಡಿಯು ಸಂಕಷ್ಟದ ಸ್ಥಿತಿಯಲ್ಲಿ ನಿನ್ನನ್ನು ಕೈಬಿಡುವನು. ದುರ್ವರ್ತನೆ ಹೊಂದಿ ದವನು ನಿನ್ನನ್ನು ತುಚ್ಚ ಬೆಲೆಗೆ ಮಾರಿ ಬಿಡಲೂ ಹೇಸಲಿಕ್ಕಿಲ್ಲ.”
ಗೆಳೆಯರ ಕುರಿತು ಖಲೀಫ ಮಾಮೂನ್ ಹೀಗೆ ಹೇಳಿದ್ದರು. “ಗೆಳೆಯರು ಮೂರು ವಿಧದಲ್ಲಿದ್ದಾರೆ. ಒಂದು ವಿಭಾಗವು ಆಹಾರದಂತಿದೆ. ಅದಿಲ್ಲದೆ ಯಾರಿಗೂ ಜೀವಿಸಲು ಸಾಧ್ಯವಿಲ್ಲ. ಇನ್ನೊಂದು ವಿಭಾಗವು ರೋಗಕ್ಕಿರುವ ಔಷಧದಂತಿದೆ. ಅಗತ್ಯವಿರುವ ಸಂದರ್ಭದಲ್ಲಿ ಅದನ್ನು ಉಪಯೋಗಿಸಬಹುದು. ಯಾವಾಗಲೂ ಅದರ ಅವಶ್ಯಕತೆ ಇರಲಿಕ್ಕಿಲ್ಲ. ಮೂರನೇ ವಿಭಾಗವು ರೋಗದಂತಿದೆ. ಅದರ ಉಪಸ್ಥಿತಿಯನ್ನು ಯಾರೂ ಇಷ್ಟಪಡುವುದಿಲ್ಲ. ಅದು ಅಂಟಿಕೊಂಡರೆ ಶರೀರವು ಅವ್ಯವಸ್ಥಿತವಾಗುತ್ತದೆ.”
ಆದ್ದರಿಂದ ಗೆಳೆಯರನ್ನು ಆರಿಸುವಾಗ ಅವರ ಸ್ವಭಾವ-ಗುಣಗಳ ಕಡೆಗೆ ಗಮನ ಹರಿಸಬೇಕು. ನಾವು ನಮ್ಮ ಮಕ್ಕಳ ಮೇಲೆ ತೀವ್ರ ನಿಗಾ ಇರಿಸಬೇಕು. ವಿಶೇಷತಃ ಈ ಕಾಲದಲ್ಲಿ ಮಕ್ಕಳ ಗೆಳೆಯರು ಎಂತಹವರೆಂಬುದನ್ನು ಹೆತ್ತವರು ಖಾತರಿ ಪಡಿಸಿಕೊಳ್ಳಬೇಕು. ಕಾರಣ, ಗೆಳೆಯರಿಗೆ ಹೊಂದಿಕೊಂಡು ಮಕ್ಕಳ ಸ್ವಭಾವವು ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗ ಬೇಕಾಗಿದೆ. ಅಲ್ಲಾಹನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ