ಸೋಮವಾರ, ಜುಲೈ 02, 2012

ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕೇ?


ಅಲ್ಲಾಹನೊಂದಿಗೆ ಪ್ರೀತಿ ಮತ್ತು ಸಹಸೃಷ್ಟಿಗಳೊಂದಿಗಿನ ಸೇವೆಯು ಇಸ್ಲಾಮಿನಲ್ಲಿ ಅತೀ ಹೆಚ್ಚು ಮಹತ್ವ ಇರುವ ಕರ್ಮಗಳಾಗಿವೆ. ಈ ಎರಡು ವಿಷಯಗಳು ಪರಸ್ಪರ ಪೂರಕವಾಗಿದೆ. ಅಲ್ಲಾಹನೊಂದಿಗಿರುವ ಪ್ರೀತಿ, ಇಷ್ಟಗಳು ಅವನ ಇತರ ಸೃಷ್ಟಿಜಾಲಗಳೊಂದಿಗಿರುವ ಕರುಣೆಗೂ ದಯೆಗೂ ನಾಂದಿಯಾಗುತ್ತವೆ. ಓರ್ವನು ತನ್ನ ಪ್ರಭುವಿನಿಂದ ದೂರ ಸರಿಯುತ್ತಿದ್ದಂತೆ ಇತರ ಸೃಷ್ಟಿಗಳಿಂದಲೂ ಅವನು ದೂರ ಸರಿಯುತ್ತಾನೆ. ಅವನು ಅಲ್ಲಾಹನ ಸಾಮಿಪ್ಯ ಗಳಿಸುತ್ತಾನೆಂದಾದರೆ ಇತರ ಸೃಷ್ಟಿಗಳಿಗೂ ಹತ್ತಿರವಾಗುತ್ತಾನೆ.
ಇಬ್ಬ್ನು ಉಮರ್(ರ) ವರದಿ ಮಾಡಿದ್ದಾರೆ. ಓರ್ವರು ಪ್ರವಾದಿಯವರೊಂದಿಗೆ(ಸ) ಕೇಳಿದರು “ಅಲ್ಲಾಹನ ಸಂದೇಶವಾಹಕರೇ. ಜನರ ಪೈಕಿ ಅಲ್ಲಾಹನಿಗೆ ಹೆಚ್ಚು ಇಷ್ಟವಿರುವವರು ಯಾರು? ಅಲ್ಲಾಹನಿಗೆ ಅತ್ಯಂತ ಹೆಚ್ಚು ಇಷ್ಟ ಇರುವ ಕೆಲಸ ಯಾವುದು?” ಆಗ ಪ್ರವಾದಿ(ಸ) ಹೇಳಿದರು, “ಅಲ್ಲಾಹನಿಗೆ ಹೆಚ್ಚು ಪ್ರೀತಿ ಪಾತ್ರರು ಜನರಿಗೆ ಹೆಚ್ಚು ಉಪಕಾರ ಮಾಡುವವರಾಗಿದ್ದಾರೆ. ಅಲ್ಲಾಹನಿಗೆ ಹೆಚ್ಚು ಇಷ್ಟ ಇರುವ ಕೆಲಸ ಓರ್ವ ಮುಸ್ಲಿಮನಿಗೆ ನಿನ್ನ ಮೂಲಕ ಲಭಿಸುವ ಸಂತೋಷವಾಗಿದೆ. ಅಲ್ಲದಿದ್ದರೆ ಅವನ ಒಂದು ಸಂಕಷ್ಟವನ್ನು ಪರಿಹರಿಸುವುದು ಅಥವಾ ಸಾಲ ಸಂದಾಯ ಮಾಡುವುದಾಗಿದೆ. ಅದೂ ಅಲ್ಲದಿದ್ದರೆ ಅವನ ಹಸಿವನ್ನು ನೀಗಿಸುವುದಾಗಿದೆ. ನಿಶ್ಚಯವಾಗಿಯೂ, ಓರ್ವ ಸಹೋದರನೊಂದಿಗೆ ಅವನ ಅವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಸಂಚರಿಸಿದರೆ ಈ ಮಸೀದಿಯಲ್ಲಿ (ಮಸ್ಜಿದುನ್ನಬವಿ) ಒಂದು ತಿಂಗಳು ಪೂರ್ತಿಯಾಗಿ ಇಅïತಿಕಾಫ್ ನಿರ್ವಹಿಸುವುದಕ್ಕಿಂತ ಹೆಚ್ಚು ನನಗೆ ಪ್ರಿಯವಾಗಿದೆ. ಓರ್ವನು ತನ್ನ ಕೋಪವನ್ನು ತಡೆದಿರಿಸಿದರೆ ಅಲ್ಲಾಹನು ಅವನ ನ್ಯೂನತೆಗಳನ್ನು ಮರೆಸುವನು. ಬಯಸಿದ್ದನ್ನು ಮಾಡಿಬಿಡುವ ಸಾಮಥ್ರ್ಯವಿದ್ದೂ ತನ್ನ ದ್ವೇಷವನ್ನು ತಡೆದಿರಿಸಿದವನ ಹೃದಯದಲ್ಲಿ ಅಲ್ಲಾಹನು ಅಂತ್ಯದಿನದಲ್ಲಿ ನಿರೀಕ್ಷೆಗಳನ್ನು ತುಂಬುವನು. ತನ್ನ ಸಹೋದರನೊಂದಿಗೆ ಸಂಚರಿಸಿ ಅವನ ಅವಶ್ಯಕತೆಗಳನ್ನು ಪೂರೈಸಿಕೊಟ್ಟವನ ಪಾದಗಳನ್ನು ಎಲ್ಲಾ ಪಾದಗಳು ಜಾರಿಬೀಳುವ ದಿನದಲ್ಲೂ ಅವುಗಳನ್ನು ಸುದೃಡವಾಗಿ ನಿಲ್ಲಿಸುವನು.”
ಇಸ್ಲಾಮಿನ ದೃಷ್ಟಿಯಲ್ಲಿ ಜನಸೇವೆ ಎಂಬುದು ಕೇವಲ ಬೌತಿಕ ಕರ್ಮವಲ್ಲ. ಅದು ತೌಹೀದ್ನ ಭಾಗವಾಗಿದೆ. ನಮಾಝ್, ಉಪವಾಸ, ಹಜ್ಜ್ ವೊದಲಾದವುಗಳಿಗೆ ಮಾತ್ರ ಇಸ್ಲಾಮ್ ಸೀಮಿತಗೊಂಡಿಲ್ಲ. ಬದಲಾಗಿ ಅದು ಮನುಷ್ಯನ ಬದುಕಿನ ಎಲ್ಲಾ ಸ್ತರಗಳಿಗೂ ವ್ಯಾಪಿಸಿದೆ. ಜನರ ಸೇವೆ ಮಾಡುವುದು ಮತ್ತು ಅವರನ್ನು ಪ್ರೀತಿಸುವುದು ನೈಜವಾಗಿ ಅಲ್ಲಾಹನನ್ನು ಪ್ರೀತಿಸುವುದಕ್ಕೆ ಸಮಾನವಾಗಿದೆ. ಜನರೊಂದಿಗೆ ಕೆಟ್ಟದಾಗಿ ವರ್ತಿಸಿದವನು, ಜನರನ್ನು ದ್ವೇಷಿಸುವವನು ಅಲ್ಲಾಹನೊಂದಿಗೂ ವೈರ ಕೆಟ್ಟಿಕೊಳ್ಳುತ್ತಾನೆ.
ಅಬೂ ಹುರೈರ(ರ) ವರದಿ ಮಾಡಿದ ಒಂದು ಪ್ರವಾದಿ ವಚನವು ಹೀಗಿದೆ: ಅಂತ್ಯ ದಿನದಲ್ಲಿ ತನ್ನ ಮುಂದೆ ಬರುವ ದಾಸನೊಂದಿಗೆ ಅಲ್ಲಾಹನು ಪ್ರಶ್ನಿಸುವನು, “ಓ ಮಾನವಾ ನಾನು ರೋಗಿಯಾಗಿದ್ದ ಸಂದರ್ಭದಲ್ಲಿ ನೀನು ಯಾಕೆ ನನ್ನನ್ನು ಭೇಟಿ ಮಾಡಲಿಲ್ಲ?” ಆಗ ಮಾನವನು ಹೇಳುವನು, “ಓ ನನ್ನ ಪ್ರಭೂ, ನಾನು ನಿನ್ನನ್ನು ಭೇಟಿ ಮಾಡುವುದೇ? ನೀನು ಸರ್ವಲೋಕಗಳ ಪಾಲಕನಲ್ಲವೇ?” ಅಲ್ಲಾಹನು ಹೇಳುವನು, “ನನ್ನ ಇಂಥ ದಾಸನು ರೋಗಿಯಾದದ್ದು ನಿನಗೆ ತಿಳಿದಿಲ್ಲವೇ? ಆದರೂ ನೀನು ಯಾಕೆ ಅವನನ್ನು ಸಂದರ್ಶಿಸಿಲ್ಲ? ಅವರನ್ನು ನೀನು ಬೇಟಿಯಾಗುತ್ತಿದ್ದರೆ ಖಂಡಿತವಾಗಿಯೂ ಅವನ ಬಳಿ ನನ್ನನ್ನು ಕಾಣಬಹುದಾಗಿತ್ತು. ಓ ಮನುಜಾ! ನಾನು ನಿನ್ನೊಂದಿಗೆ ಆಹಾರ ಕೇಳಿದೆ. ಆದರೆ ನೀನು ನನಗೆ ಆಹಾರ ನೀಡಲಿಲ್ಲ.” ಆಗ ದಾಸನು ಹೇಳುವನು, “ಓ ಪ್ರಭೂ ನಾನು ನಿನಗೆ ತಿನ್ನಿಸುವುದೇ? ನೀನು ಸರ್ವಲೋಕದವರಿಗೂ ಆಹಾರ ನೀಡುವವನಲ್ಲವೇ?” ಆಗ ಅಲ್ಲಾಹನು ಹೇಳುವನು, “ಹೌದು ನನ್ನ ಇಂತಹ ದಾಸನು ನಿನ್ನೊಂದಿಗೆ ಆಹಾರ ಕೇಳಿದ. ಆದರೆ ನೀನು ಆಹಾರ ನೀಡಲಿಲ್ಲ. ಅವನಿಗೆ ನೀನು ನೀಡುತ್ತಿದ್ದರೆ, ಅದರ ಪ್ರತಿಫಲವನ್ನು ನಿನಗೆ ಇಲ್ಲಿ ಅನುಭವಿಸಬಹುದಾಗಿತ್ತು.. ಓ ಮನುಜಾ! ನಾನು ನಿನ್ನೊಂದಿಗೆ ನೀರನ್ನು ಕೇಳಿದೆ. ಆದರೆ ನೀನು ನೀಡಲಿಲ್ಲ. ಆಗ ದಾಸನು ಹೇಳುವನು, “ಪ್ರಭೂ, ನೀನು ಸರ್ವಲೋಕಗಳ ಪರಿಪಾಲಕನಾಗಿರುವಾಗ ನಿನಗೆ ನಾನು ನೀರು ನೀಡುವುದೇ?” ಆಗ ಅಲ್ಲಾಹನು ಹೇಳುವನು. “ಹೌದು. ನನ್ನ ಇಂತಿಂತಹ ದಾಸನು ನಿನ್ನೊಂದಿಗೆ ನೀರನ್ನು ಕೇಳಿದನು. ನೀನು ಅವನಿಗೆ ನೀರು ನೀಡಲಿಲ್ಲ. ಅಂದು ನೀನು ಅವನಿಗೆ ನೀರು ನೀಡುತ್ತಿದ್ದರೆ ಅದರ ಪ್ರತಿಫಲವನ್ನು ನಿನಗೆ ಇಲ್ಲಿ ಕಾಣಬಹುದಾಗಿತ್ತು.”
ಈ ಪ್ರವಾದಿ ವಚನವು ಜನರ ಸೇವೆಯ ಮಹತ್ವವನ್ನು ಬೆಟ್ಟು ಮಾಡುತ್ತದೆ. ಕಷ್ಟ ಅನುಭವಿಸುವವರಿಗೆ ನೆರವಾಗುವಾಗ ಮಾತ್ರ ಓರ್ವನಿಗೆ ಪೂರ್ಣ ವಿಶ್ವಾಸಿಯಾಗಲು ಸಾಧ್ಯ. ಪ್ರವಾದಿಯವರ(ಸ) ಜೀವನವನ್ನು ಅವಲೋಕಿಸಿದರೆ ಹಲವಾರು ಜನಸೇವೆಯ ಕೆಲಸಗಳನ್ನು ಕಾಣಲು ಸಾಧ್ಯ. ಜನರ ಸಮಸ್ಯೆಗಳಿಗೆ ಹೆಗಲು ಕೊಡದೆ ಪ್ರವಾದಿಯವರ(ಸ) ಅನುಯಾಯಿಗಳೆಂದು ಹೆಮ್ಮೆ ಪಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅಲ್ಲಾಹನ ಪ್ರೀತಿ ಸಂಪಾದನೆಗೆ ಜನರ ಸೇವೆಯು ಅನಿವಾರ್ಯವಾಗಿದೆ.
ಇನ್ನು ಜನರಿಗೆ ಉಪಕಾರ ಮಾಡಲು ಸಾಧ್ಯವಿಲ್ಲದವರು ಉಪದ್ರವ ನೀಡದಿರಲಾದರೂ ಪ್ರಯತ್ನಿಸಬೇಕು. ಅದು ಕೂಡಾ ಪ್ರತಿಫಲಾರ್ಹವಾಗಿದೆ. ಕೆಲವರೊಂದಿಗಿರುವ ಹಗೆತನವು ಅವರೊಂದಿಗೆ ಅಕ್ರಮವೆಸಗಲು ಪ್ರೇರೇಪಿಸುತ್ತದೆ. ವಿಶೇಷತಃ ಅವರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ, ಪ್ರವಾದಿಯವರು(ಸ) ಶತ್ರುಗಳ ಹಿತಾಕಾಂಕ್ಷೆ ಬಯಸುತ್ತಿದ್ದರೇ ಹೊರತು ಅವರ ಸರ್ವನಾಶಕ್ಕಾಗಿ ಬಯಸಲಿಲ್ಲ. ಮಕ್ಕಾ ವಿಜಯದ ವೇಳೆ ಬಂಧಿತರಾದವರನ್ನು ಕೊಂದು ಬಿಡುವ ಎಲ್ಲಾ ಅವಕಾಶಗಳೂ ಪ್ರವಾದಿಯವರಿಗಿತ್ತು. ಆದರೆ ಅವರು ಆ ಬಂಧಿತರಿಗೆ ಕ್ಷಮೆ ನೀಡಿ ಸ್ವತಂತ್ರಗೊಳಿಸಿದರು.
ಮಸೀದಿಯಲ್ಲಿ ಜಾಗರಣೆ ನಡೆಸುವುದು ಅತೀ ಹೆಚ್ಚು ಪ್ರತಿಫಲಾರ್ಹ ಕರ್ಮಗಳಲ್ಲೊಂದಾಗಿದೆ. ಅದು ಕೂಡಾ ಮಸ್ಜಿದುನ್ನಬವಿಯಲ್ಲಾದರೆ ಪುಣ್ಯದ ಪಟ್ಟು ಇನ್ನೂ ಹೆಚ್ಚಾಗುತ್ತದೆ. ಆದರೆ ಪ್ರವಾದಿಯವರು(ಸ) ಓರ್ವ ಸಹೋದರನ ಕಷ್ಟಕ್ಕೆ ನೆರವಾಗುವುದನ್ನು ಜಾಗರಣೆ ನಡೆಸುವುದಕ್ಕೆಂತ ದೊಡ್ಡ ಪದವಿಗೆ ಏರಿಸಿದ್ದಾರೆ. ಸಹಜೀವಿಗಳ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಮಸೀದಿಗಳಲ್ಲಿ ಕುಳಿತು ಆರಾಧನೆಗಳಲ್ಲಿ ನಿರತರಾಗುವುದನ್ನು ಇಸ್ಲಾಮ್ ಪ್ರೋತ್ಸಾಹಿಸಿಲ್ಲ. ರಾತ್ರಿಕಾಲದ ಪ್ರಾರ್ಥನೆಗಳೂ ಹಗಲಿನ ಕರ್ಮಗಳೂ ಓರ್ವನನ್ನು ನೈಜ ವಿಶ್ವಾಸಿಯಾಗಿ ಮಾರ್ಪಡಿಸುತ್ತದೆ. ಅವನ ಈಮಾನನ್ನು ಪರಿಪೂರ್ಣಗೊಳಿಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ಈಮಾನನ್ನು ನವೀಕರಿಸಬೇಕಾಗಿದೆ. ನೈಜ ವಿಶ್ವಾಸಿಗಳಾಗಿ ಬಾಳಲು ಇಸ್ಲಾಮಿನ ಆದೇಶ ನಿರ್ದೇಶನಗಳನ್ನು ಪಾಲಿಸಬೇಕಾಗಿದೆ. ಅದಕ್ಕೆ ಅಲ್ಲಾಹನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ