ಸೋಮವಾರ, ಅಕ್ಟೋಬರ್ 15, 2012

ನಿಮ್ಮ ಸಂಪತ್ತು ಪಿಶಾಚಿಯ ಹಿಡಿತದಲ್ಲಿರಬಹುದೇ?


ದಾನ ಧರ್ಮವು ಶ್ರೇಷ್ಠ ಕರ್ಮಗಳ ಪೈಕಿ ಒಂದಾಗಿದೆ. ಇದು ಧನಿಕರ ಮೇಲಿನ ಹೊಣೆಗಾರಿಕೆಯಾಗಿದೆ. ಸಮಾಜದಲ್ಲಿನ ಬಡತನವನ್ನು ಹೋಗಲಾಡಿಸಲು ದಾನ ಮಾಡುವುದು ಅನಿವಾರ್ಯವಾಗಿದೆ. ಪ್ರವಾದಿಯವರು(ಸ) ಮತ್ತು ಅವರ ಅನುಯಾಯಿಗಳ ಜೀವನದ ಕಡೆಗೊಮ್ಮೆ ಕಣ್ಣೋಡಿಸುವುದಾದರೆ ದಾನ ಧರ್ಮದ ಉಜ್ವಲ ಉದಾಹರಣೆಯನ್ನು ದರ್ಶಿಸಲು ಸಾಧ್ಯವಿದೆ. ಅವರು ಎಲ್ಲವನ್ನೂ ಅಲ್ಲಾಹನ ಮಾರ್ಗದಲ್ಲಿ ದಾನ ಮಾಡುತ್ತಿದ್ದರು. ಮಾತ್ರವಲ್ಲ, ಈ ವಿಷಯದಲ್ಲಿ ಪರಸ್ಪರ ಪೈಪೋಟಿ  ನಡೆಸುತ್ತಿದ್ದರು. ಸಂಪತ್ತನ್ನು ದಾನ ಮಾಡಿದರೆ ಅಲ್ಲಾಹನು ಹೆಚ್ಚು ಹೆಚ್ಚು ನೀಡುತ್ತಾನೆ ಎಂಬ ಅಚಲ ನಂಬಿಕೆ ಅವರಲ್ಲಿತ್ತು. ದಾನ ಮಾಡಿದ್ದರಿಂದ ಯಾರು ಕೂಡಾ ದಿವಾಳಿಯಾಗಿಲ್ಲ. ದಿವಾಳಿಯಾಗುವುದೂ ಇಲ್ಲ.
ಸಂಪತ್ತೆಲ್ಲ ಒಂದು ಕಡೆಯೇ ವ್ಯಕ್ತಿಗತವಾಗಿ ಶೇಖರಣೆಯಾಗುವಾಗ ಬಡತನ, ದಾರಿದ್ರ್ಯ ಹೆಚ್ಚಾಗುತ್ತಲೇ ಹೋಗುತ್ತದೆ. ಈ ಸಂಪತ್ತು ಜನರ ಮಧ್ಯೆ ಹರಿದಾಡುವಾಗ ಬಡತನದ ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ. ಅದಕ್ಕಾಗಿಯೇ ಅಲ್ಲಾಹನು ಝಕಾತ್, ದಾನ ಧರ್ಮಗಳನ್ನು ಪುಣ್ಯ ಕಾರ್ಯಗಳ ಸಾಲಿಗೆ ಸೇರಿಸಿದ್ದಾನೆ. ಮರಣದ ಬಳಿಕವೂ ಪ್ರತಿಫಲ ಲಭಿಸುವ ಕರ್ಮಗಳ ಪೈಕಿ ಒಂದು ಕರ್ಮವನ್ನಾಗಿ ಮಾಡಿದ್ದಾನೆ.
ಸಂಪತ್ತನ್ನು ದಾನ ಮಾಡುವ ವಿಚಾರದಲ್ಲಿ ಜನರು ಹಿಂದೆ ಸರಿಯುವುದನ್ನು ನಾವು ಕಾಣುತ್ತೇವೆ. ಕಾರಣ ಸಂಪತ್ತು ಮನುಷ್ಯರನ್ನು ಆಕರ್ಷಣೆಗೆ ಒಳಪಡಿಸುವ ಒಂದು ಸಾಧನವಾಗಿದೆ. ಗಳಿಸಿದಷ್ಟೂ ಬೇಕೆನಿಸುವ ಒಂದು ಅನುಗ್ರಹವಾಗಿದೆ ಸಂಪತ್ತು. ಸುಖ ಸೌಲಭ್ಯಗಳೆಲ್ಲ ಇದ್ದೂ ಅದನ್ನು ದೇವಮಾರ್ಗದಲ್ಲಿ ವ್ಯಯಿಸದೆ ಆಡಂಬರದ ಪ್ರದರ್ಶನಕ್ಕೆ ವ್ಯಯಿಸಿ ಕೊನೆಗೆ ಮರಣ ಸನ್ನಿಹಿತವಾಗುವಾಗ “ನಾನು ನನ್ನ ಸಂಪತ್ತೆಲ್ಲವನ್ನು ದಾನ ಮಾಡುತ್ತೇನೆ” ಎಂದು ಉಯಿಲು ಬರೆದಿಡುವ ಕೆಲವರಿದ್ದಾರೆ. ಇವರು ತಮ್ಮ ಜೀವಿತಾವಧಿಯಲ್ಲಿ ಬಡವರ್ಗವನ್ನು ಕಂಡೂ ಕಾಣದಂತೆ ನಟಿಸುತ್ತಿದ್ದವರಾಗಿರುತ್ತಾರೆ. ಸ್ವಂತ ಸುಖಾಡಂಬರಗಳಿಗೆ ಮಹತ್ವ ನೀಡಿದವರು. ಕೊನೆಗೆ ಜೀವನವು ಕೊನೆಗೊಂಡಿತೆಂದು ಅರಿವಾಗುವಾಗ ಎಲ್ಲವನ್ನೂ ದೇವನ ಮಾರ್ಗದಲ್ಲಿ ವ್ಯಯಿಸುವ ತೀರ್ಮಾನ ಕೈಗೊಂಡು ದೇವನನ್ನು ಮರುಳು ಮಾಡುವ ವ್ಯರ್ಥ ಪ್ರಯತ್ನಕ್ಕೆ ಮುಂದಾಗುತ್ತಾರೆ. ಅಲ್ಲಾಹನ ಪ್ರೀತಿ ಗಳಿಸಲಿಕ್ಕೆ ಮರಣಾಸನ್ನ ಸಮಯದಲ್ಲಿ ನಡೆಸುವ ಇಂತಹ ನಟನೆಗಳು ಸಾಕೆಂದು ಅವರು ಭಾವಿಸುತ್ತಾರೆ.
ದಾನವು ಅತ್ಯಂತ ಪ್ರತಿಫಲಾರ್ಹವಾಗುವುದು ವ್ಯಕ್ತಿಯ ಆರೋಗ್ಯ ಸಮಯದಲ್ಲಿ ವ್ಯಯಿಸುವ ಮೂಲಕವಾಗಿದೆ. ಅಬೂ ಹುರೈರಾ(ರ) ವರದಿ ಮಾಡುತ್ತಾರೆ: ಓರ್ವರು ಪ್ರವಾದಿಯವರ(ಸ) ಬಳಿ ಬಂದು ಕೇಳಿದರು, “ಅಲ್ಲಾಹನ ಸಂದೇಶವಾಹಕರೇ! ಅತ್ಯಂತ ಪ್ರತಿಫಲಾರ್ಹವಾದ ದಾನ ಯಾವುದು?” ಆಗ ಪ್ರವಾದಿಯವರು(ಸ) ಹೇಳಿದರು, “ನಾನು ಹೇಳಿಕೊಡುತ್ತೇನೆ. ನೀನು ಆರೋಗ್ಯವಂತನೂ ಜಿಪುಣನೂ ಆಗಿರಬೇಕು. ಅದೇ ವೇಳೆ ಬಡತನವನ್ನು ಹೆದರುತ್ತಿ ಮತ್ತು ಐಶ್ವರ್ಯವನ್ನು ಬಯಸುತ್ತಿ. ಈ ಸಂದರ್ಭದಲ್ಲಿ ನೀನು ಮಾಡುವ ದಾನವು ಶ್ರೇಷ್ಠ ದಾನವಾಗಿದೆ. ದಾನ ಮಾಡಲು ನೀನು ಆತ್ಮವು ಗಂಟಲಿಗೆ ತಲುಪುವವರೆಗೆ ಕಾಯಬಾರದು. ಇಂತಿಂಥವನಿಗೆ ಇಂತಿಷ್ಟು ಕೊಡಬೇಕು ಇಂತಿಂಥವನಿಗೆ ಅಷ್ಟು ಕೊಡಬೇಕು ಎಂದೆಲ್ಲಾ ಆಗ ನೀನು ಹೇಳುತ್ತಿರುವೆ. ಆದರೆ ವಾಸ್ತವದಲ್ಲಿ ಆ ಸಂದರ್ಭ ಬಂದೊದಗಿದಾಗಲೇ ಸೊತ್ತೆಲ್ಲವೂ ಇತರರದ್ದಾಗಿರುತ್ತದೆ.”
ತನ್ನ ಅವಶ್ಯಕತೆಗಳನ್ನು ಪೂರೈಸುವುದರೊಂದಿಗೆ ಇತರರ ಅಗತ್ಯತೆಗಳಿಗೂ ಸ್ಪಂಧಿಸುವ ಉನ್ನತ ಗುಣವನ್ನು ಓರ್ವ ವಿಶ್ವಾಸಿ ಹೊಂದಿರುತ್ತಾನೆ. ತನ್ನ ಎಲ್ಲಾ ಬೇಡಿಕೆಗಳನ್ನು ಬದಿಗಿಟ್ಟು ಇತರರ ಕರೆಗೆ ಆತನು ಓಗೊಡುತ್ತಾನೆ. ತನ್ನ ಹಸಿವೆಯನ್ನು ಕಡೆಗಣಿಸಿ ಇತರರ ಹಸಿವಿನ ಶಮನಕ್ಕೆ ಪ್ರಯತ್ನಿಸುತ್ತಾನೆ. ಪವಿತ್ರ ಕುರ್‍ಆನ್ ಸತ್ಯವಿಶ್ವಾಸಿಗಳನ್ನು ಈ ರೀತಿ ಪರಿಚಯಿಸುತ್ತದೆ. “ಅಲ್ಲಾಹನ ಮೇಲಿನ ಪ್ರೇಮದಿಂದ ದರಿದ್ರರಿಗೂ ಅನಾಥರಿಗೂ ಸೆರೆಯಾಳುಗಳಿಗೂ ಊಟ ಕೊಡುತ್ತಾರೆ. (ಮತ್ತು ಅವರೊಡನೆ ಹೇಳುತ್ತಾರೆ) ನಾವು ನಿಮಗೆ ಕೇವಲ ಅಲ್ಲಾಹನಿಗಾಗಿ ಉಣಿಸುತ್ತಿದ್ದೇವೆ. ನಾವು ನಿಮ್ಮಿಂದ ಯಾವುದೇ ಪ್ರತಿಫಲವನ್ನಾಗಲಿ, ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ. ನಮಗಂತು ನಮ್ಮ ಪ್ರಭುವಿನಿಂದ ಆ ತೀವ್ರ ಕಾಠಿಣ್ಯದ ಅತ್ಯಂತ ಸುದೀರ್ಘ ದಿನದ ಭಯವಿದೆ.” (ಅದ್ದಹ್ರ್: 8-10) ಅದೇ ರೀತಿ ಸೂರಃ ಅಲ್‍ಹಶ್ರ್‍ನ 9ನೇ ಸೂಕ್ತದಲ್ಲಿ ಅಲ್ಲಾಹನು ಈ ರೀತಿ ಹೇಳುತ್ತಾನೆ, “ಸ್ವತಃ ತಮಗೆ ಅಗತ್ಯವಿದ್ದರೂ ಇತರರಿಗೆ ತಮ್ಮ ಮೇಲಿನದಕ್ಕಿಂತ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ವಾಸ್ತವದಲ್ಲಿ ಯಾರು ತಮ್ಮ ಮನಸ್ಸಿನ ಸಂಕುಚಿತತೆಯಿಂದ ರಕ್ಷಿಸಲ್ಪಟ್ಟರೋ ಅವರೇ ವಿಜಯಿಗಳು.”
“ನಮ್ಮ ಅವಶ್ಯಕತೆಗಳೆಲ್ಲಾ ಮುಗಿದ ಬಳಿಕ ಇತರರಿಗೆ ನೆರವಾಗುವ” ಎಂದು ತೀರ್ಮಾನಿಸುವ ಹಲವರಿದ್ದಾರೆ. ಇಂತಹ ಮನೋಭಾವವು ಒಂದು ಮೌಢ್ಯವಾಗಿದೆ. ಮನುಷ್ಯನ ಅವಶ್ಯಕತೆಗಳಿಗೆ ಕೊನೆಯೆಂಬುದಿಲ್ಲ. ಅದು ನಿರಂತರ ಮುಂದುವರಿಯುತ್ತದೆ. ಒಂದು ಸಿಕ್ಕಿದರೆ ಮತ್ತೊಂದನ್ನು ಗಳಿಸಬೇಕು ಎಂಬ ಹಂಬಲ ಅವನಲ್ಲಿರುತ್ತದೆ. ಮನಸ್ಸಿನಲ್ಲಿ ಸಂತೃಪ್ತಿ ಎಂಬ ಅಂಶವಿಲ್ಲದ ವ್ಯಕ್ತಿಗೆ ಎಷ್ಟೇ ಲಭಿಸಿದರೂ ಅದು ಸಾಕಾಗಲಿಕ್ಕಿಲ್ಲ. “ಮಣ್ಣಲ್ಲದೆ ಮನುಷ್ಯನ ಬಾಯಿಯನ್ನು ತುಂಬಲಿಕ್ಕಿಲ್ಲ” ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಆದ್ದರಿಂದ ವಿಶ್ವಾಸಿಗಳು ದಾನ ಧರ್ಮದ ವಿಚಾರದಲ್ಲಿ ಎಂದೂ ಮುಂದಿರುತ್ತಾರೆ. ಅಲ್ಪವನ್ನು ತಮಗಿಟ್ಟು ಮಿಕ್ಕಿದ್ದನ್ನು ಇತರರಿಗೆ ನೀಡುತ್ತಾರೆ. ಕುರ್‍ಆನಿನಲ್ಲಿ ವಿಶ್ವಾಸಿಗಳ ಸ್ವಭಾವದ ಕುರಿತು ಹೀಗೆ ಹೇಳಲಾಗಿದೆ. “ಅವರು ಸ್ಥಿತಿವಂತರಾಗಿರುವಾಗಲೂ ದುಃಸ್ಥಿತಿಯಲ್ಲಿರುವಾಗಲೂ ತಮ್ಮ ಸಂಪತ್ತನ್ನು ದಾನ ಮಾಡುತ್ತಾರೆ, ಕೋಪವನ್ನು ನುಂಗಿಕೊಳ್ಳುತ್ತಾರೆ ಮತ್ತು ಇತರರ ಅಪರಾಧಗಳನ್ನು ಕ್ಷಮಿಸುತ್ತಾರೆ. ಇಂತಹ ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು.” (ಆಲಿಇಮ್ರಾನ್: 134)
ದಾನಧರ್ಮದಿಂದ ಬಡತನ ಬರುತ್ತದೆ. ಎಂಬ ಅಂಜಿಕೆಯು ವಿಶ್ವಾಸಿಗೆ ತರವಲ್ಲ. ಅಲ್ಲಾಹನು ಸಂಪತ್ತನ್ನು ವ್ಯಯಿಸುವುದು ಅಲ್ಲಾಹನ ಬೇಡಿಕೆಯಾಗಿದೆ. ಹಾಗೆ ವ್ಯಯಿಸಿದರೆ ಅಲ್ಲಾಹನು ಹೆಚ್ಚು ಹೆಚ್ಚು ನೀಡುತ್ತಾನೆಯೇ ಹೊರತು ಕಡಿತಗೊಳಿಸುವುದಿಲ್ಲ. ದಾನ ಮಾಡಿ ಬೀದಿ ಪಾಲಾದವರಿಲ್ಲ. ಬಡತನಕ್ಕೆ ಹೆದರಿ ದಾನ ಧರ್ಮಗಳಿಂದ ಹಿಂದೆ ಸರಿಯುವವರನ್ನು ಅಲ್ಲಾಹನು ವಿಮರ್ಶಿಸಿದ್ದಾನೆ. “ಶೈತಾನನು ನಿಮ್ಮನ್ನು ದಾರಿದ್ರ್ಯದಿಂದ ಭಯಭೀತಗೊಳಿಸುತ್ತಾನೆ ಮತ್ತು ಅಶ್ಲೀಲ ಕಾರ್ಯಗಳನ್ನೆಸಗುವ ಪ್ರಚೋದನೆಯನ್ನೀಯುತ್ತಾನೆ. ಆದರೆ, ಅಲ್ಲಾಹನು ನಿಮಗೆ ತನ್ನ ಕ್ಷಮೆ ಹಾಗೂ ಅನುಗ್ರಹದ ವಚನವನ್ನೀಯುತ್ತಾನೆ. ಅಲ್ಲಾಹನು ಮಹಾ ವಿಶಾಲನೂ ಸರ್ವಜ್ಞನೂ ಆಗಿರುತ್ತಾನೆ.”
ಪ್ರವಾದಿಯವರು(ಸ) ಹೇಳಿದರು, “ದಾನ ಮಾಡುವುದನ್ನು ತಡೆಯುತ್ತಾ ತನ್ನ ಸಂಪತ್ತಿನಲ್ಲಿ ಕಚ್ಚಿ ಹಿಡಿದಿರುವ ಎಪ್ಪತ್ತು ಪಿಶಾಚಿಗಳ ದವಡೆಗಳನ್ನು ಅದರಿಂದ ಬೇರ್ಪಡಿಸದೆ ಯಾರಿಗೂ ಏನನ್ನೂ ದಾನ ಮಾಡಲು ಸಾಧ್ಯವಿಲ್ಲ.” ದಾನ ಮಾಡಲು ಒಪ್ಪದ ಮನಸ್ಥಿತಿಯನ್ನು ಈ ಪ್ರವಾದಿ ವಚನವು ಬೆಟ್ಟು ಮಾಡುತ್ತದೆ. ಸಂಪತ್ತನ್ನು ದಾನ ಮಾಡುವ ವಿಚಾರದಲ್ಲಿ ಹಿಂದೇಟು ಹಾಕುವರ ಸಂಪತ್ತನ್ನು ಶೈತಾನನು ಹಿಡಿದಿಟ್ಟುಕೊಂಡಿರುತ್ತಾನೆ ಎಂಬುದು ಮೇಲಿನ ಪ್ರವಾದಿ ವಚನದ ಸಾರವಾಗಿದೆ. ಇದು ಶೈತಾನನಿಗೆ ತಲೆಬಾಗಿದಂತೆ. ಹಾಗೆ ಮಾಡುವುದು ವಿಶ್ವಾಸಿಯ ಮಟ್ಟಿಗೆ ಭೂಷಣವಲ್ಲ.
ಎಲ್ಲ ಕರ್ಮಗಳಿಗೂ ಸಂಕಲ್ಪ ಶುದ್ಧಿ ಇರಬೇಕು. ದಾನ ಧರ್ಮದ ವಿಚಾರದಲ್ಲೂ ಇದು ಬಹಳ ಮುಖ್ಯವಾಗಿದೆ. ತಮ್ಮ ಸಂಪತ್ತನ್ನು ಯಥೇಚ್ಛವಾಗಿ ದಾನ ಮಾಡಿ ಅದರ ಹಿಂದೆ ‘ತಾನು ಕೊಡುಗೈ ದಾನಿ’ ಎಂದು ಜನರಿಂದ ಕರೆಸಿಕೊಳ್ಳಬೇಕೆಂಬ ಉದ್ದೇಶವಿದ್ದರೆ, ಆ ದಾನವು ವ್ಯರ್ಥ ಎಂಬುದರಲ್ಲಿ ಎರಡು ಮಾತಿಲ್ಲ. ದಾನ ಮಾಡಬೇಕಾದುದು ಅಲ್ಲಾಹನ ಸಂತೃಪ್ತಿಯನ್ನು ಬಯಸಿಯೇ ಹೊರತು ಅದನ್ನು ಪಡೆಯುವವನ ಸಂತೃಪ್ತಿಗಾಗಿ ಅಲ್ಲ. ಅಂತಹ ದಾನದಿಂದ ಅವನಿಗೆ ಈ ಭೂಮಿಯಲ್ಲಿ ಗೌರವಾದರಗಳು ಲಭಿಸಬಹುದು. ಆದರೆ ಪರಲೋಕದಲ್ಲಿ ಯಾವುದೇ ಬೆಲೆ ಇರಲಿಕ್ಕಿಲ್ಲ. ಅದ್ದರಿಂದ ನಾವು ನಮ್ಮ ದಾನಧರ್ಮಗಳ ಹಿಂದೆ ತೋರಿಕೆಯ ಭಾವವು ಬರದಂತೆ ಎಚ್ಚರ ವಹಿಸಬೇಕು. ತೋರಿಕೆಗಾಗಿ ಮಾಡುವ ಕರ್ಮಗಳು ಅತ್ಯಂತ ಸಣ್ಣ ಶಿರ್ಕಾಗಿದೆ ಎಂದು ಪ್ರವಾದಿಯವರು(ಸ) ಕಲಿಸಿದ್ದಾರೆ. ಆದ್ದರಿಂದ ದಾನ ಮಾಡಿ ಶಿಕ್ಷೆಗೆ ಗುರಿಯಾಗುವ ದು:ಸ್ಥಿತಿಯಿಂದ ಪಾರಾಗಬೇಕಾಗಿದೆ. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ