ಸೋಮವಾರ, ಅಕ್ಟೋಬರ್ 29, 2012

ವಿಶ್ವಾಸಾರ್ಹರಾಗಿ, ಘಾತುಕರಾಗಬೇಡಿ


ಅಮಾನತ್ ಎಂಬುದು ನಾವು ಸಾಮಾನ್ಯವಾಗಿ ಕೇಳುವ ಪದವಾಗಿದೆ. ಈ ಪದಕ್ಕೆ ವಿಶಾಲವಾದ ಅರ್ಥಗಳಿವೆ. ವಿಶ್ವಾಸಾರ್ಹತೆ, ಸತ್ಯಸಂಧತೆ ಎಂಬುದೆಲ್ಲಾ ಅಮಾನತ್‍ನ ಭಾಷಾರ್ಥವಾಗಿದೆ. ಓರ್ವನು ಇನ್ನೋರ್ವನ ಮೇಲೆ ವಿಶ್ವಾಸವಿರಿಸಿ ಆತನಿಗೆ ವಹಿಸಿಕೊಡಲಾಗುವ ಎಲ್ಲಾ ಹೊಣೆಗಾರಿಕೆಗಳನ್ನು ಅಮಾನತ್ ಎನ್ನುತ್ತಾರೆ. ಅದು ಕರಾರನ್ನು ಈಡೇರಿಸುವುದು, ಸಾಮೂಹಿಕ ಸಂಧಾನ ಮಾಡಿಸುವುದು, ಸಮಾಜದ ರಹಸ್ಯ ಪಾಲನೆ ಮಾಡುವುದು, ವೈಯಕ್ತಿಕ ಅಥವಾ ಸಾಮೂಹಿಕ ಸೊತ್ತಿನ ಮೇಲ್ನೋಟ ವಹಿಸುವುದು, ಯಾವುದೇ ಪದವಿ ಅಥವಾ ಹುದ್ದೆಯನ್ನು ಸ್ವೀಕರಿಸುವುದು ಮುಂತಾದ ವ್ಯಕ್ತಿಯ ಮೇಲಿನ ಭರವಸೆಯೊಂದಿಗೆ ಸಮಾಜ ಅವನಿಗೆ ನೀಡುವಂತಹ ಯಾವುದೇ ಹೊಣೆಗಾರಿಕೆಯಾಗಿರಬಹುದು. ಅಲ್ಲಾಹನು ಹೇಳುತ್ತಾನೆ, “ಓ ಸತ್ಯವಿಶ್ವಾಸಿಗಳೇ, ತಿಳುವಳಿಕೆ ಇದ್ದೂ ಅಲ್ಲಾಹ್ ಮತ್ತು ರಸೂಲರೊಂದಿಗೆ ವಿಶ್ವಾಸಘಾತುಕವೆಸಗಬೇಡಿರಿ ಮತ್ತು ಅಮಾನತ್(ವಿಶ್ವಸ್ಥ ನಿಧಿ)ಗಳಲ್ಲಿ ವಿದ್ರೋಹವೆಸಗಬೇಡಿ.” (ಅಲ್ ಅನ್‍ಫಾಲ್: 27)
ಅಮಾನತ್ತನ್ನು ಕಾಪಾಡುವುದು ಪ್ರತಿಯೋರ್ವ ವಿಶ್ವಾಸಿಯ ಕರ್ತವ್ಯವಾಗಿದೆ. ಅದನ್ನು ಕಾಪಾಡಲು ಹೇಳಿದವನಿಗೆ ವಿದ್ರೋಹವೆಸಗುವುದು ಸತ್ಯವಿಶ್ವಾಸಿಗಳ ಲಕ್ಷಣವಲ್ಲ. ಅದು ಕಪಟವಿಶ್ವಾಸಿಯ ಸ್ವಭಾವವಾಗಿದೆ. ಕಪಟ ವಿಶ್ವಾಸಿಗಳ ಗುಣಗಳ ಪೈಕಿ ಅಮಾನತಿನಲ್ಲಿ ವಂಚನೆ ನಡೆಸುವುದು ಒಂದಾಗಿದೆ.
ಹುದೈಫ(ರ) ವರದಿ ಮಾಡಿದ್ದಾರೆ: ಪ್ರವಾದಿಯವರು(ಸ) ನಮ್ಮೊಂದಿಗೆ ಹೇಳಿದರು, “ವಿಶ್ವಾಸಾರ್ಹತೆ (ಅಮಾನತ್) ಮನುಷ್ಯರ ಹೃದಯಗಳ ಕೆಳಸ್ತರದಲ್ಲಿರುವುದಾಗಿದೆ.” ಬಳಿಕ ಕುರ್‍ಆನ್ ಅವತೀರ್ಣಗೊಂಡಾಗ ಜನರು ಕುರ್‍ಆನಿನಿಂದಲೂ ಹದೀಸ್‍ಗಳಿಂದಲೂ ಅದನ್ನು ಕಲಿತರು. ಮುಂದುವರಿದು ಪ್ರವಾದಿಯವರು(ಸ) ವಿಶ್ವಾಸಾರ್ಹತೆ ಇಲ್ಲವಾಗುವುದರ ಕುರಿತು ಹೇಳಿದರು. “ಓರ್ವ ವ್ಯಕ್ತಿ ನಿದ್ರಿಸುತ್ತಿರುವಾಗ ಅವನ ಹೃದಯದಿಂದ ವಿಶ್ವಾಸಾರ್ಹತೆಯನ್ನು ನೀಗಿಸಲಾಗುವುದು. ಬಳಿಕ ಅಲ್ಲಿ ಬೆಂಕಿ ತಾಗಿದಾಗ ಉಂಟಾಗುವಂತೆ ಸಣ್ಣ ಕಲೆ ಮಾತ್ರ ಅಲ್ಲಿ ಉಳಿದಿರುತ್ತದೆ. ಅವನು ಮತ್ತೆ ನಿದ್ರಿಸುವಾಗ ಉಳಿದ ಅಮಾನತ್ ಕೂಡಾ ನಷ್ಟವಾಗುವುದು. ಬಳಿಕ ಕೆಂಡ ತಾಗಿದಾಗ ಉಂಟಾಗುವ ಗುಳ್ಳೆಯಂತೆ ಒಂದು ಗುರುತು ಮಾತ್ರ ಉಳಿದಿರುತ್ತದೆ. ಅದು ತುಂಬಿರುವಂತೆ ತೋರುತ್ತದೆ. ಆದರೆ ಅದರೊಳಗೆ ಶೂನ್ಯವಾಗಿರುವುದು. ಜನರು ಪರಸ್ಪರ ಕ್ರಯ-ವಿಕ್ರಯ ನಡೆಯುತ್ತಿರುವರು. ಯಾರು ಕೂಡಾ ವಿಶ್ವಾಸಾರ್ಹತೆ ತೋರಿಸಲಿಕ್ಕಿಲ್ಲ. ಅಂತಹ ಸಂದರ್ಭದಲ್ಲಿ ಜನರು ಆಶ್ಚರ್ಯದಿಂದ ಹೇಳುವರು, “ಇಂತಿಂಥ ಕುಟುಂಬದಲ್ಲಿ ವಿಶ್ವಾಸಾರ್ಹ ವ್ಯಕ್ತಿಯೋರ್ವನಿದ್ದಾನೆ. ಆತ ಮಹಾ ಧೀರ, ವಿವೇಕಶಾಲಿ ಮತ್ತು ಬುದ್ಧಿವಂತನಾಗಿರುವನು. ಆದರೆ ಆತನ ಹೃದಯದಲ್ಲಿ ಒಂದು ಸಾಸಿವೆ ಕಾಳಿನಷ್ಟೂ ಈಮಾನ್ ಇರಲಿಕ್ಕಿಲ್ಲ.”
ಈಮಾನ್ ಮತ್ತು ಅಮಾನತ್ ಒಂದೇ ಪದದಿಂದ ಉದ್ಭವಗೊಂಡದ್ದಾಗಿವೆ. ಸತ್ಯವನ್ನು ಮನಸಾರೆ ಒಪ್ಪಿಕೊಂಡು ಅದಕ್ಕಾಗಿ ಎಲ್ಲವನ್ನೂ ಅರ್ಪಿಸಿದವನಿಗೆ ಕಪಟಿಯೂ ವಂಚಕನೂ ಆಗಲು ಎಂದೂ ಸಾಧ್ಯವಿಲ್ಲ. ಕಳ್ಳನು, ವಂಚಕನು ವಿಶ್ವಾಸಘಾತುಕನು ಮೊದಲಾದವರೆಲ್ಲರೂ ಸತ್ಯಕ್ಕೆ ವಿರುದ್ಧವಾಗಿದ್ದಾರೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಅನಸ್(ರ) ಹೇಳುತ್ತಾರೆ, “ಪ್ರವಾದಿಯವರು(ಸ) ನಮ್ಮ ಮುಂದೆ ಮಾಡುವ ಎಲ್ಲಾ ಭಾಷಣಗಳಲ್ಲೂ ಈ ರೀತಿ ನೆನಪಿಸುತ್ತಿದ್ದರು. ತಿಳಿಯಿರಿ, ವಿಶ್ವಾಸಾರ್ಹತೆ ಇಲ್ಲದವನಿಗೆ ಈಮಾನಿಲ್ಲ. ಕರಾರು ಪಾಲಿಸದವನಿಗೆ ಧರ್ಮವಿಲ್ಲ.”
ಅಮಾನತ್ ಎಂಬುದು ಮನುಷ್ಯ ಹುಟ್ಟಿನಿಂದಲೇ ಪಡೆದಿರುತ್ತಾನೆ. ಬಳಿಕ ಜನರು ಕುರ್‍ಆನಿನಿಂದಲೂ ಪ್ರವಾದಿ ವಚನಗಳಿಂದಲೂ ಅವರ ಎಲ್ಲಾ ಭಾಗಗಳನ್ನೂ ಕರಗತ ಮಾಡಿಕೊಂಡರು. ವಿಶ್ವಾಸಾರ್ಹತೆ, ಸದಾಚಾರ, ಧಾರ್ಮಿಕ ಪ್ರಜ್ಞೆಗಳೊಂದೂ ಮಾನವರಿಗೆ ಅಪರಿಚಿತವಾದ ವಿಚಾರವಲ್ಲ. ಇವೆಲ್ಲವೂ ಮನುಷ್ಯ ಎಂದು ಕರೆಸಿಕೊಳ್ಳಲಿಕ್ಕೆ ಪೂರಕವಾದ ವಿಚಾರಗಳಾಗಿವೆ. ಜನರಿಗೆ ಅಪರಿಚಿತವಾಗಿರುವ ಹೊಸ ವಿಚಾರಗಳನ್ನು ಮಾತ್ರ ಕಲಿಸಲು ಪ್ರವಾದಿಗಳು ಬಂದದ್ದಲ್ಲ. ಬದಲಾಗಿ ಅವರಲ್ಲಿ ಹುಟ್ಟಿನಿಂದಲೇ ಅಡಕವಾಗಿರುವ ಮಾನವೀಯ ಮೌಲ್ಯಗಳಿಗೆ ಪ್ರಚೋದನೆ ನೀಡಲು ಆಗಮಿಸಿದ್ದರು.
ಮೇಲೆ ತಿಳಿಸಿರುವ ಹದೀಸ್‍ನಲ್ಲಿ ವಿಶ್ವಾಸಾರ್ಹತೆ ಸಷ್ಟವಾಗುವುದರ ಕುರಿತು ತಿಳಿಸಲಾಗಿದೆ. ಒಂದು ಸ್ವಭಾವವು ಓರ್ವನಿಂದ ಒಮ್ಮೆಲೇ ನಷ್ಟ ಹೊಂದುವುದಿಲ್ಲ. ಅದು ಅವನಿಂದ ಸ್ವಲ್ಪ ಸ್ವಲ್ಪವೇ ಸರಿದು ಹೋಗುತ್ತದೆ. ನಾವು ಕ್ಷುಲ್ಲಕವೆಂದು ಭಾವಿಸುವ ತಪ್ಪುಗಳು ನಮ್ಮನ್ನು ಮಹಾಪಾಪಗಳ ವರೆಗೆ ತಲುಪಿಸುತ್ತವೆ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ನಾವು ತಪ್ಪು ಮಾಡುತ್ತೇವೆ. ಹಾಗೆ ನಿರಂತರವಾಗಿ ಮಾಡುವಾಗ ತಪ್ಪುಗಳ ಕುರಿತು ಮೊದಲಿದ್ದ ಧೋರಣೆಯು ಸಡಿಲಗೊಳ್ಳುತ್ತದೆ. ಮನಸ್ಸಿನಲ್ಲಿ ಉಂಟಾಗುತ್ತಿದ್ದ ಕಳವಳವು ಕ್ರಮೇಣ ದೂರವಾಗುತ್ತದೆ. ಹಾಗೇ ದೊಡ್ಡ ತಪ್ಪುಗಳನ್ನು ಮಾಡುವಾಗ ಯಾವುದೇ ಪಾಪ ಪ್ರಜ್ಞೆ ಇಲ್ಲದಾಗುತ್ತದೆ. ಅಮಾನತ್ತಿನ ಸ್ಥಿತಿಯೂ ಇದೇ ರೀತಿಯಾಗಿದೆ. ಅದನ್ನು ಪಾಲಿಸಲು ಅನಾಸ್ಥೆ ತೋರುವುದಾದರೆ ಮುಂದೆ ಅದು ನಮ್ಮಿಂದ ಕಳೆದುಹೋಗುತ್ತದೆ. ಅದಕ್ಕೆ ಕೇವಲ ನಿದ್ರೆಯ ಸಮಯವಷ್ಟೇ ಸಾಕು. ಅವನು ಎಚ್ಚೆತ್ತುಕೊಳ್ಳುವಾಗ ಕಪಟಿಯೂ ವಿಶ್ವಾಸಘಾತುಕನೂ ಆಗಿ ಬದಲಾಗಿರುತ್ತಾನೆ. ಇಂತಹವರು ಹೊರ ಪ್ರಪಂಚಕ್ಕೆ ಸಭ್ಯರಾಗಿ ಕಂಡರೂ ಅವರ ಹೃದಯವು ಟೊಳ್ಳಾಗಿರುತ್ತದೆ. ವಂಚನೆಯ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.
ಪ್ರವಾದಿಯವರು(ಸ) ಹೇಳಿದರು, “ನಿಮ್ಮ ಪೈಕಿ ಅತ್ಯುತ್ತಮರು ನನ್ನ ಕಾಲದವರಾಗಿದ್ದಾರೆ. ಬಳಿಕ ಅವರ ನಂತರ ಬರುವವರು. ಕೊನೆಗೆ ಒಂದು ವಿಭಾಗದ ಜನರು ಬರುವರು. ಅವರು ಸಾಕ್ಷಿ ಹೇಳುವರು. ಆದರೆ ಯಾರೂ ಅವರಲ್ಲಿ ಸಾಕ್ಷಿ ನುಡಿಯಲು ಹೇಳಲಿಕ್ಕಿಲ್ಲ. ಅವರು ವಂಚನೆ ನಡೆಸುವರು. ವಿಶ್ವಾಸಘಾತುಕರಾಗುವರು. ಅವರು ಪ್ರತಿಜ್ಞೆಗಳನ್ನು ಮಾಡುವರು. ಆದರೆ ಅವುಗಳನ್ನು ಪಾಲಿಸಲಿಕ್ಕಿಲ್ಲ. ಹೊರ ನೋಟಕ್ಕೆ ಅವರು ಸಭ್ಯರಾಗಿರುವರು.”
ಅತ್ಯಂತ ಹೆಚ್ಚು ವಿಶ್ವಾಸಾರ್ಹತೆ ತೋರಬೇಕಾಗಿರುವುದು ಜನರ ಮಧ್ಯೆ ಇರುವ ಆರ್ಥಿಕ ವ್ಯವಹಾರದಲ್ಲಾಗಿದೆ. ಹಣದ ವಿಚಾರದಲ್ಲಿ ಹೆಚ್ಚಿನ ಮಂದಿ ಎಡವಿ ಬೀಳುವ ಸಾಧ್ಯತೆ ಇದೆ. ಹಣವು ಮನುಷ್ಯನಿಗೆ ಅಲಂಕಾರ ವಸ್ತುವಾಗಿದೆ. ಅವನು ಸದಾ ಅದರ ಕಡೆಗೆ ಆಕರ್ಷಿತನಾಗಿರುತ್ತಾನೆ. ಮಾನವರ ಶರೀರದಲ್ಲಿ ರಕ್ತದಂತೆ ಚಲಿಸುವ ಶೈತಾನನು ಹಣದ ವಿಚಾರದಲ್ಲಿ ವಂಚನೆ ನಡೆಸಲು ಪ್ರೇರೇಪಿಸುತ್ತಿರುತ್ತಾನೆ. ಈ ಸಂದರ್ಭದಲ್ಲಿ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಕಡೆಗಣಿಸಿದರೆ ನಾವು ಪಾಪಿಗಳ ಸಾಲಿಗೆ ಸೇರುವುದು ನಿಶ್ಚಿತವಾಗಿದೆ. ಹಣದ ವಿಚಾರದಲ್ಲಿ ವಂಚನೆ ನಡೆಸುವುದು ಮಹಾ ಅಪರಾಧವಾಗಿದೆ. ಅಬ್ದುಲ್ಲಾ ಬಿನ್ ಮಸ್‍ಊದ್(ರ) ಹೇಳುತ್ತಾರೆ,
“ವಿಶ್ವಾಸ ವಂಚನೆ ನಡೆಸದಿದ್ದರೆ ರಕ್ತ ಸಾಕ್ಷಿಯಾದವನ ಎಲ್ಲಾ ಪಾಪಗಳು ಮನ್ನಿಸಲ್ಪಡುತ್ತವೆ. ಅಂತ್ಯ ದಿನದಲ್ಲಿ ಅಂತಹ ವ್ಯಕ್ತಿಯನ್ನು ಕರೆತರಲಾಗುವುದು. ಅವನು ಅಲ್ಲಾಹನ ಮಾರ್ಗದಲ್ಲಿ ತನ್ನ ಪ್ರಾಣವನ್ನು ಅರ್ಪಿಸಿರುವವನಾಗಿರುವನು. ಆತನಲ್ಲಿ ಅಲ್ಲಾಹನು ಅಮಾನತ್ತುಗಳನ್ನು ಪೂರ್ತೀಕರಿಸಲು ಹೇಳುವನು. ಆಗ ಅವನು ಹೇಳುವನು, ‘ಪ್ರಭೂ, ಐಹಿಕ ಜೀವನವು ಕೊನೆಗೊಂಡಿತಲ್ಲವೇ. ಇನ್ನು ನಾನು ಅದನ್ನು ಪೂರ್ತಿಗೊಳಿಸುವುದು ಹೇಗೆ?’ ಆಗ ಆತನನ್ನು ನರಕಕ್ಕೆ ಎಳೆದೊಯ್ಯಲು ಆಜ್ಞೆ ಬರುತ್ತದೆ. ಭೂಮಿಯಲ್ಲಿ ಆತನ ಮೇಲೆ ವಿಶ್ವಾಸವಿರಿಸಿ ಜನರು ನೀಡಿರುವ ಸೊತ್ತುಗಳೆಲ್ಲವೂ ಯಥಾs ಪ್ರಕಾರ ನರಕದಲ್ಲಿ ಆತ ಕಾಣುವನು. 'ಬಚಾವಾದೆ' ಎಂಬ ಭಾವನೆಯಿಂದ ಅವೆಲ್ಲವನ್ನೂ ಬಾಚಿ ನರಕದಿಂದ ಹೊರಬರಲು ಪ್ರಯತ್ನಿಸುವನು. ಆದರೆ ಅವೆಲ್ಲವೂ ಅವನ ಬಾಹು ಬಂಧನದಿಂದ ಜಾರಿ ಬೀಳುವುದು. ಆತ ಮತ್ತೆ ಅದನ್ನು ಹೊತ್ತುಕೊಳ್ಳಲು ಪ್ರಯತ್ನಿಸುವನು. ಆಗಲೂ ಅವು ಕೆಳಗೆ ಬೀಳುತ್ತಿರುವುವು. ಇದೇ ಪ್ರಕಾರ ಆತ ನರಕದಲ್ಲಿ ಕಳೆಯುವನು.” ಇಬ್ನು ಮಸ್‍ಊದ್(ರ) ಮುಂದುವರಿಸುತ್ತಾ ಹೇಳುತ್ತಾರೆ, "ತಿಳಿಯಿರಿ, ಎಲ್ಲವೂ ಅಮಾನತ್ತಾಗಿದೆ. ನಮಾಝ್, ವುಝೂ, ಅಳತೆ, ತೂಕ ಮೊದಲಾದವುಗಳೆಲ್ಲವೂ ಅಮಾನತ್ತಾಗಿದೆ. ಅತ್ಯಂತ ದೊಡ್ಡ ಅಮಾನತ್ ವಿಶ್ವಾಸವಿರಿಸಿ ನೀಡಿರುವ ಸಂಪತ್ತಾಗಿದೆ. ಅಮಾನತ್ತಿನಲ್ಲಿ ವಂಚನೆ ನಡೆಸಿರುವ ರಕ್ತಸಾಕ್ಷಿಗಳ ದುಃಸ್ಥಿತಿಯು ಈ ರೀತಿಯಾದರೆ ನಮ್ಮ ಗತಿ ಏನಾಗಿರಬಹುದು!"
ಪ್ರವಾದಿ(ಸ) ಈ ಕುರಿತು ಎಚ್ಚರಿಕೆ ನೀಡಿರುವರು, "ಎಲ್ಲ ವಂಚಕರಿಗೂ ಅಂತ್ಯ ದಿನದಲ್ಲಿ ಒಂದು ಪತಾಕೆ ನೀಡಲಾಗುವುದು. ವಂಚನೆಯ ಪ್ರಮಾಣಕ್ಕನುಸಾರವಾಗಿ ಅದು ಎತ್ತರಕ್ಕೇರುತ್ತದೆ. ತಿಳಿಯಿರಿ, ನಾಯಕ ನಡೆಸುವ ವಿಶ್ವಾಸ ವಂಚನೆಗಿಂತ ದೊಡ್ಡ ವಿಶ್ವಾಸ ವಂಚನೆ ಬೇರೊಂದಿಲ್ಲ."
ನಾವು ಹಲವು ವೇಳೆ ಅಮಾನತ್ತಿನ ವಿಚಾರದಲ್ಲಿ ಅಸಡ್ಡೆ ತೋರುತ್ತೇವೆ. ಇದರಿಂದ ಮಹಿಳೆಯರೂ ಹೊರತಾಗಿಲ್ಲ. ಯಾರಾದರೂ ಏನಾದರೂ ವಿಚಾರವೊಂದನ್ನು ನಮಗೆ ತಿಳಿಸಿ ಯಾರಿಗೂ ಹೇಳಬಾರದೆಂದು ಹೇಳಿರುತ್ತಾರೆ. ಆದರೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಅವರು ಹೇಳಿದ ವಿಚಾರವು ಒಂದು ಅಮಾನತ್ತಾಗಿರುತ್ತದೆ. ಅವರು ನಮ್ಮ ಮೇಲೆ ವಿಶ್ವಾಸವಿರಿಸಿ ಹೇಳಿರುತ್ತಾರೆ. ಆದರೆ ನಾವು ಮಾಡುವ ಕೆಲಸವೇ ಬೇರೆ. ನಾವು ಅದನ್ನು ಇತರರಲ್ಲಿ ತಿಳಿಸುತ್ತೇವೆ. ಅದರೊಂದಿಗೆ "ಇದು ನಿನ್ನಲ್ಲಿ ಮಾತ್ರ ಹೇಳುವುದು, ಯಾರಲ್ಲೂ ಹೇಳಬಾರದೆಂದು ಆತ ತಿಳಿಸಿದ್ದಾನೆ" ಎಂಬ ಔದಾರ್ಯದ ಮಾತನ್ನಾಡಲು ಮರೆಯುವುದಿಲ್ಲ. ಅದು ಹಾಗೇ ಬಾಯಿಯಿಂದ ಬಾಯಿಗೆ ಹರಡಿ ರಹಸ್ಯವಿದ್ದದ್ದು ಬಹಿರಂಗವಾಗುತ್ತದೆ. ಇದು ನಮ್ಮ ನಿತ್ಯ ಜೀವನದಲ್ಲಿ ನಡೆಯುವ, ನಾವು ಕ್ಷುಲ್ಲಕವೆಂದು ಭಾವಿಸುವ ದೊಡ್ಡ ವಿಚಾರವಾಗಿದೆ.
ವಿಶ್ವಾಸಿಯಾದವನು ವಿಶ್ವಾಸದ್ರೋಹವೆಸಗುವುದು ಧರ್ಮವನ್ನೇ ಅವಹೇಳನ ಮಾಡಿದಂತೆ. ಅಂತಹವರು ಇಹಲೋಕದಲ್ಲೂ ಪರಲೋಕದಲ್ಲೂ ಮೌಲ್ಯಹೀನರಾಗುವರು. ಜನರ ಮಧ್ಯೆ ವಿಶ್ವಾಸ ಗಳಿಸಲು ವರ್ಷಗಳ ಸಭ್ಯ ವರ್ತನೆ ಬೇಕಾಗಬಹುದು. ಆದರೆ ಅದನ್ನು ಕಳೆದುಕೊಳ್ಳಲು ಒಂದು ಕ್ಷದ ವಂಚನೆ, ಕಪಟತನದ ವರ್ತನೆ ಧಾರಾಳ ಸಾಕು. ವಿಶ್ವಾಸ ದ್ರೋಹವು ಕಪಟ ವಿಶ್ವಾಸಿಗಳ ಸ್ವಭಾವವಾದುದರಿಂದ ನಾವು ಅವರ ಸಾಲಿಗೆ ಸೇರದಂತಾಗಲು ಗರಿಷ್ಠ ಪ್ರಯತ್ನ ನಡೆಸಬೇಕಾಗಿದೆ. ಅದಕ್ಕೆ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಧಾರೆಯೆರೆಯುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಕರ್ಮಗಳ ಬಗ್ಗೆ ಜಾಗೃತರಾಗಬೇಕು. ಸರ್ವಶಕ್ತನಾದ ಅಲ್ಲಾಹನು ಅದಕ್ಕಾಗಿ ನಮ್ಮೆಲ್ಲರನ್ನೂ ಅನುಗ್ರಹಿಸಲಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ