ಸೋಮವಾರ, ಫೆಬ್ರವರಿ 11, 2013

ಯಾರೊಂದಿಗೋ ಪ್ರಾರ್ಥಿಸಿ ಉತ್ತರ ಲಭಿಸಲಿಲ್ಲ ಎಂದು ಅಲ್ಲಾಹನನ್ನು ದೂರಿದರೆ ಹೇಗೆ?


 ಮಾನವರೆಲ್ಲರೂ ಅಲ್ಲಾಹನ ಸೃಷ್ಟಿಗಳು. ಪ್ರತಿಯೋರ್ವನ ಜನನವೂ ಮರಣವೂ ದೇವ ಲಿಖಿತವಾಗಿದೆ. ಅಲ್ಲಾಹನು ಮನುಷ್ಯರನ್ನು ಕೇವಲ ಸೃಷ್ಟಿಸಿಬಿಟ್ಟದ್ದು ಮಾತ್ರವಲ್ಲ, ಅವನಿಗೆ ಜೀವನ ನಡೆಸಲಿಕ್ಕಿರುವ ಎಲ್ಲಾ ಸೌಕರ್ಯಗಳನ್ನೂ ಒದಗಿಸಿದ್ದಾನೆ. ಆದ್ದರಿಂದ ಸೌಕರ್ಯಗಳ ಕೊರತೆ ಉಂಟಾದಾಗ ಅವುಗಳ ಬೇಡಿಕೆ ಸಲ್ಲಿಸಬೇಕಾದುದು ಕೂಡಾ ಅಲ್ಲಾಹನಲ್ಲೇ ಆಗಿದೆ. ಅದಕ್ಕಾಗಿ ಅಲ್ಲಾಹನು ನಮಗೆ ಪ್ರಾರ್ಥನೆ ಎಂಬ ಮಾರ್ಗವನ್ನು ನೀಡಿದ್ದಾನೆ. ಪ್ರಾರ್ಥನೆ ಎಂಬುದು ಓರ್ವ ವಿಶ್ವಾಸಿಯನ್ನು ತನ್ನ ಸೃಷ್ಟಿಕರ್ತನಾದ ಅಲ್ಲಾಹನೊಂದಿಗೆ ಜೋಡಿಸುವ ಪಾಶವಾಗಿದೆ. ಬಾನ ಲೋಕದ ಬಾಗಿಲುಗಳನ್ನು ಬಡಿಯುವ ಪ್ರಾರ್ಥನೆಗಳು ವಿಶ್ವಾಸಿಗಳ ಆಯುಧಗಳಾಗಿವೆ. ಪ್ರವಾದಿಯವರು(ಸ) ಹೇಳಿದರು, “ನೀವು ಪ್ರಾರ್ಥನೆಯಲ್ಲಿ ಅನಾಸ್ಥೆ ತೋರಬಾರದು. ಪ್ರಾರ್ಥಿಸುವವನು ನಾಶವನ್ನು ಎದುರಿಸಬೇಕಾಗಲಿಕ್ಕಿಲ್ಲ.” ಪ್ರಾರ್ಥನೆಯನ್ನು ರೂಢಿಯಾಗಿಸಿದವನು ಹೇಡಿಯಾಗಲಿಕ್ಕಿಲ್ಲ. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಹೆದರಿ ಅವನು ಮುಖ ತಿರುಗಿಸಲಿಕ್ಕಿಲ್ಲ. ಅದನ್ನು ಕೆಚ್ಚೆದೆಯಿಂದ ಎದುರಿಸುತ್ತಾನೆ. ಸರ್ವಶಕ್ತನಾದ ಅಲ್ಲಾಹನ ಸಾನ್ನಿಧ್ಯವು ಜೀವನದಲ್ಲಿ ಮುನ್ನುಗ್ಗಲು ಅವನನ್ನು ಸದಾ ಪ್ರೇರೇಪಿಸುತ್ತಿರುತ್ತದೆ.
ಪ್ರವಾದಿಯವರು(ಸ) ಹೀಗೆ ಕಲಿಸಿದ್ದಾರೆ, “ಪ್ರಾರ್ಥನೆಯು ವಿಶ್ವಾಸಿಯ ಆಯುಧವಾಗಿದೆ. ಧರ್ಮದ ಸ್ಥಂಭವಾಗಿದೆ. ಭೂಮ್ಯಾಕಾಶಗಳ ಪ್ರಕಾಶವಾಗಿದೆ.” ಸಂಕಷ್ಟಕ್ಕೆ ಸಿಲುಕಿ ದಡ ಸೇರಲು ಸಾಧ್ಯವಾಗದೆ ಚಡಪಡಿಸುತ್ತಿರುವಾಗ ಕಗ್ಗತ್ತಲೆಯಲ್ಲಿ ದೀಪ ಲಭಿಸಿದಂತೆ ಪ್ರಾರ್ಥನೆಯು ನೆರವಿಗೆ ಬರುತ್ತದೆ. ಅಲ್ಲಾಹನು ನೆರವಾಗುತ್ತಾನೆ ಎಂಬ ಸಂಕಲ್ಪದೊಂದಿಗೆ ಪ್ರಾರ್ಥಿಸುವಾಗ ಮನಸ್ಸಿನಲ್ಲಿ ಒಂದು ರೀತಿಯ ಸ್ಥೈರ್ಯ ಮೂಡುತ್ತದೆ. ಒಮ್ಮೆ ಪ್ರವಾದಿಯವರು(ಸ) ಮಸೀದಿಗೆ ಪ್ರವೇಶಿಸಿದಾಗ ಅಬೂ ಉಮಾಮ(ರ) ಮಸೀದಿಯ ಮೂಲೆಯಲ್ಲಿ ದುಃಖದಿಂದ ಕುಳಿತಿರುವುದನ್ನು ಕಾಣುತ್ತಾರೆ.
       “ಓ ಅಬೂ ಉಮಾಮ! ತಾವೇಕೆ ಹೀಗೆ ಕುಳಿತಿದ್ದೀರಿ. ಇದು ನಮಾಝಿನ ಸಮಯ ಅಲ್ಲವಲ್ಲ?” ಪ್ರವಾದಿಯವರು(ಸ) ಕೇಳಿದರು.
      “ಪ್ರವಾದಿಯವರೇ(ಸ) ಹಲವಾರು ಸಂಕಷ್ಟಗಳು, ದುಃಖ-ದುಮ್ಮಾನಗಳು, ಸಾಲಗಳು ನನ್ನನ್ನು ಆವರಿಸಿ ಕೊಂಡಿವೆ” ಅಬೂ ಉಮಾಮ(ರ) ದುಃಖದಿಂದ ಉತ್ತರಿಸಿದರು.
       “ನಾನು ನಿಮಗೆ ಒಂದು ಪ್ರಾರ್ಥನೆ ಕಲಿಸಿಕೊಡುತ್ತೇನೆ. ನೀವು ಅದನ್ನು ಪ್ರಾರ್ಥಿಸುತಲಿದ್ದರೆ ನಿಮ್ಮ ಸಾಲಗಳು ತೀರುವುದು, ಸಂಕಷ್ಟಗಳು ನೀಗುವುದು, ಸಂತೋಷವು ಮರಳುವುದು.”
        “ಸರಿ ಪ್ರವಾದಿಯವರೇ(ಸ) ತಾವು ಹೇಳಿರಿ” ಅಬೂ ಉಮಾಮ(ರ) ಹೇಳಿದರು,
     “ಅಲ್ಲಾಹನೇ ದುಃಖಗಳಿಂದಲೂ ವ್ಯಥೆಗಳಿಂದಲೂ ಮಾನಸಿಕ ಸಂಘರ್ಷಗಳಿಂದಲೂ ನಾನು ನಿನ್ನಿಂದ ಅಭಯ ಯಾಚಿಸುತ್ತೇವೆ. ದೌರ್ಬಲ್ಯಗಳಿಂದಲೂ ಆಲಸ್ಯ ಗಳಿಂದಲೂ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ. ಹೇಡಿತನದಿಂದಲೂ ಜಿಪುಣತೆಯಿಂದಲೂ ಸಾಲಗಳಿಂದಲೂ ಜನರ ಅವಹೇಳನಗಳಿಂದಲೂ ನೀನು ನನ್ನನ್ನು ರಕ್ಷಿಸು.” ಅಬೂ ಉಮಾಮ(ರ) ಈ ಪ್ರಾರ್ಥನೆಯನ್ನು ರೂಢಿಯಾಗಿಸಿದರು. ಅಲ್ಲಾಹನು ತನ್ನ ಎಲ್ಲಾ ಸಂಕಷ್ಟಗಳನ್ನು ನೀಗಿಸಿರುವುದಾಗಿ ಅವರು ಬಳಿಕ ಹೇಳುತ್ತಿದ್ದರು.
ನನ್ನ ದಾಸನು ನನ್ನೊಂದಿಗೇ ಬೇಡಬೇಕು ಮತ್ತು ನಿರಂತರವಾಗಿ ಸಂಬಂಧವಿರಿಸಬೇಕು ಎಂದು ಅಲ್ಲಾಹನು ಬಯಸುತ್ತಾನೆ. ದಾಸರ ಪ್ರಾರ್ಥನೆಗೆ ಉತ್ತರಿಸಲು ಅಲ್ಲಾಹನು ಸಿದ್ಧನಾಗಿದ್ದಾನೆ. ಮನುಷ್ಯರ ಬೇಡಿಕೆಗಳನ್ನು ಈಡೇರಿಸಲು ಅಲ್ಲಾಹನಿಗೆ ಮಾತ್ರ ಸಾಧ್ಯ. ಅಲ್ಲಾಹನು ಹೇಳುತ್ತಾನೆ, “ಓ ಪೈಗಂಬರರೇ, ನನ್ನ ದಾಸರು ನಿಮ್ಮೊಡನೆ ನನ್ನ ಬಗ್ಗೆ ಕೇಳಿದರೆ, ನಾನು ಅವರಿಗೆ ನಿಕಟನಾಗಿದ್ದೇನೆಂದೂ ಪ್ರಾರ್ಥಿಸುವವನು ನನ್ನೊಂದಿಗೆ ಪ್ರಾರ್ಥಿಸಿದಾಗ ಅವರ ಪ್ರಾರ್ಥನೆಯನ್ನು ಆಲಿಸು ತ್ತೇನೆಂದೂ ಅವರಿಗೆ ಹೇಳಿರಿ. ಆದುದರಿಂದ ಅವರು ನನ್ನ ಕರೆಗೆ ಓಗೊಡಲಿ ಮತ್ತು ನನ್ನ ಮೇಲೆ ವಿಶ್ವಾಸವಿರಿಸಲಿ. ಅವರು ಸನ್ಮಾರ್ಗ ಪಡೆಯಲೂ ಬಹುದು.” (ಅಲ್ ಬಕರ: 186)
‘ನಿಮ್ಮ ಪ್ರಾರ್ಥನೆಗೆ ನಾನು ಉತ್ತರ ನೀಡುತ್ತೇನೆ’ ಎಂದು ಅಲ್ಲಾಹನು ಸ್ಪಷ್ಟವಾಗಿ ಹೇಳಿರುವಾಗ ಅಲ್ಲಾಹೇತರರೊಂದಿಗೆ ಪ್ರಾರ್ಥಿಸುವುದರ ವಾಸ್ತವಿಕತೆ ಯಾದರೂ ಏನು? ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸುತ್ತಿದ್ದ ಮಹಾನರು ಮರಣ ಹೊಂದಿದ ಬಳಿಕ ಜನರು ಅವರ ಘೋರಿಗಳ ಬಳಿ ನಿಂತು ಅವರೊಂದಿಗೆ ಪ್ರಾರ್ಥಿಸುವುದು ಅಜ್ಞಾನವೋ ದೇವ ಧಿಕ್ಕಾರವೋ? ಹಣಗಳಿಸಲಿಕ್ಕಾಗಿ ಜನರ ನಂಬಿಕೆಗಳನ್ನು ಪಣಕ್ಕಿಡುವವರು ನಾಳೆ ಅಲ್ಲಾಹನ ಮುಂದೆ ಹಾಜರಾಗಲಿಕ್ಕಿದೆ ಎಂಬ ವಾಸ್ತವಿಕತೆ ಯನ್ನು ಮರೆತಿದ್ದಾರೆಯೇ?
ಮಕ್‍ಬರಗಳ ಹೆಸರಿನಲ್ಲಿ ಜನರ ಸಂಪತ್ತನ್ನು ಕೊಳ್ಳೆ ಹೊಡೆಯುವ ಒಂದು ದಂಧೆಯೇ ನಡೆಯುತ್ತಿದೆ. ‘ಈಗ ಎಲ್ಲಕ್ಕಿಂತ ಲಾಭದಾಯಕ ವ್ಯವಸಾಯ ಮಕ್‍ಬರ ವ್ಯವಸಾಯ’ ಎಂದು ನನ್ನ ಗೆಳೆಯರೊಬ್ಬರು ಹೇಳುತ್ತಿದ್ದರು. ಅವರು ಇದನ್ನು ತಮಾಷೆಗಾಗಿ ಹೇಳುತ್ತಿದ್ದರೂ ಅದು ವಾಸ್ತವದಂತೆ ಭಾಸವಾಗುತ್ತಿತ್ತು. ಇಂತಹ ಕೇಂದ್ರ ಗಳಿಗೆ ಹೋಗಿ ಪ್ರಾರ್ಥನೆ ನಡೆಸಿದರೆ ಉತ್ತರ ಲಭಿಸುತ್ತದೆ ಎಂಬುದು ದೇವ ಧಿಕ್ಕಾರವಲ್ಲವೇ? ಶಾಲೆಯಲ್ಲಿ ಪರೀಕ್ಷೆ ಹತ್ತಿರ ಬರುವಾಗ ವಿದ್ಯಾರ್ಥಿ ಗಳು ಇಂತಹ ಮಕ್‍ಬರಗಳ ಬಳಿ ನಿಂತು ಪರೀಕ್ಷೆ ಉತ್ತೀರ್ಣರಾಗಲು ಪ್ರಾರ್ಥಿಸುವುದನ್ನು ಇಂದು ನಾವು ವ್ಯಾಪಕವಾಗಿ ಕಾಣುತ್ತಿದ್ದೇವೆ. ಉತ್ತರ ಸಿಗದಂತಹ ಪ್ರಾರ್ಥನೆ ನಡೆಸಿ ಕೊನೆಗೆ ಅನುತ್ತೀರ್ಣರಾದಾಗ ದೇವನ ಮೇಲೆ ಕೋಪ ಗೊಂಡು ಪ್ರಯೋಜನವಾದರೂ ಏನು? ಅಲ್ಲಾಹ ನೊಂದಿಗಿನ ಪ್ರಾರ್ಥನೆಗೆ ಮಾತ್ರ ಉತ್ತರ ಲಭಿಸುವುದು ಎಂಬುದು ಹಗಲಿನಂತೆ ಸತ್ಯವಾಗಿದೆ. ಆದ್ದರಿಂದ ಪ್ರಾರ್ಥನೆ ಅಲ್ಲಾಹನೊಡನೆ ಮಾತ್ರ.
ಅಲ್ಲಾಹನು ನಮಗೆ ಹಲವಾರು ಅನುಗ್ರಹಗಳನ್ನು ನೀಡಿದ್ದಾನೆ. ಅದನ್ನು ಎಣಿಸಲು ಸಾಧ್ಯವಿಲ್ಲ. ಆದ್ದರಿಂದ ಅದಕ್ಕಾಗಿ ಕೃತಜ್ಞತೆ ಸಲ್ಲಿಸಬೇಕಾದದ್ದು ಪ್ರತೀ ವಿಶ್ವಾಸಿಯ ಕಡ್ಡಾಯ ಹೊಣೆಗಾರಿಕೆಯಾಗಿದೆ. ಓರ್ವ ಪತ್ನಿಯು ತನ್ನ ಪತಿಯನ್ನು ಪ್ರೀತಿಸುತ್ತಾಳೆ. ಅವನಿಗೆ ಬೇಕಾದ ಆಹಾರ ವಸ್ತುಗಳನ್ನು ತಯಾರಿ ಸುತ್ತಾಳೆ. ಅವನ ಬಟ್ಟೆಬರೆಗಳನ್ನು ಒಗೆಯುತ್ತಾಳೆ. ಅವನಿಗೆ ರೋಗ ಬಂದರೆ ಶುಶ್ರೂಷೆ ಮಾಡುತ್ತಾಳೆ. ಆದರೆ ಇವೆಲ್ಲವನ್ನು ಅನುಭವಿಸುವ ಪತಿಯು ಪ್ರೀತಿಸುವುದು ಬೇರೊಬ್ಬಳನ್ನಾದರೆ ಹೇಗಾಗಬಹುದು? ಅಲ್ಲಾಹನು ನೀಡಿದ ಎಲ್ಲಾ ಅನುಗ್ರಹಗಳನ್ನು ಸವಿದು ಪ್ರಾರ್ಥನೆ, ಆರಾಧನೆ ಇನ್ನಾರಿಗೋ ಆದರೆ ಅದು ಎಷ್ಟು ದೊಡ್ಡ ಅಪರಾಧ ಎಂದು ಚಿಂತಿಸುವ ಯಾರಿಗೂ ಅರ್ಥವಾಗಬಹುದು. ಅಲ್ಲಾಹನು ‘ನನ್ನೊಂದಿಗೆ ಪ್ರಾರ್ಥಿಸಿರಿ, ಉತ್ತರ ನೀಡುತ್ತೇನೆ’ ಎಂದು ಭರವಸೆ ನೀಡುವಾಗ ಇತರರೊಂದಿಗೆ ಪ್ರಾರ್ಥಿಸುವುದು ಅಲ್ಲಾಹನ ಮೇಲೆ ನಂಬಿಕೆ ಇಲ್ಲದ್ದರಿಂದಲ್ಲವೇ?
ಪ್ರವಾದಿಯವರು(ಸ) ಹೇಳಿದರು, “ತನ್ನ ಮುಂದೆ ಬೊಗಸೆ ಕೈಯೊಂದಿಗೆ ಬಂದು ಪ್ರಾರ್ಥಿಸುವವರನ್ನು ಬರಿಗೈಯಿಂದ ಮರಳಿಸುವುದು ಅಲ್ಲಾಹ ನಿಗೆ ನಾಚಿಕೆಗೇಡಿನ ವಿಚಾರವಾಗಿದೆ.” (ಅಬೂ ದಾವೂದ್, ತಿರ್ಮಿದಿ). ಅಲ್ಲಾಹನು ಕುದ್ಸಿಯಾದ ಹದೀಸ್‍ನಲ್ಲಿ ಹೇಳುತ್ತಾನೆ, “ನನ್ನ ದಾಸನು ನನ್ನ ಕುರಿತು ಏನಾದರೂ ಯೋಚಿಸಿದರೆ ನಾನು ಆ ಯೋಚನೆಯೊಂದಿಗಿರುತ್ತೇನೆ. ಅವನು ನನ್ನೊಂದಿಗೆ ಪ್ರಾರ್ಥಿಸಿದರೆ ನಾನು ಅವನೊಂದಿಗಿರುವೆನು.” (ಬುಖಾರಿ, ಮುಸ್ಲಿಮ್)
ಪ್ರಾರ್ಥನೆಗಳು ಹೃದಯಾಂತರಾಳದಿಂದ ಬರುವುದಾದರೆ ಅವುಗಳಿಗೆ ಉತ್ತರ ಬೇಗನೇ ಲಭಿಸುತ್ತದೆ. ಏನು ಪ್ರಾರ್ಥಿಸುತ್ತಿದ್ದೇವೆ ಎಂಬ ಬಗ್ಗೆ ಪ್ರಜ್ಞಾವಂತರಾಗಿರಬೇಕು. ಅನಾಸ್ಥೆಯಿಂದ ಯಾಂತ್ರಿಕವಾಗಿ ಪ್ರಾರ್ಥಿಸುವುದಾದರೆ ಅದರಿಂದ ಪ್ರಯೋಜನವೇನೂ ಸಿಗಲಿಕ್ಕಿಲ್ಲ. ಪ್ರಾರ್ಥಿಸುವಾಗ ಇರಬೇಕಾದ ಮನಃಸ್ಥಿತಿಯ ಕುರಿತು ಪ್ರವಾದಿಯವರು(ಸ) ಹೀಗೆ ಹೇಳಿದ್ದಾರೆ, “ಹೃದಯಗಳೆಲ್ಲವೂ ಪ್ರಜ್ಞೆ ಇರುವಂಥದ್ದಾಗಿವೆ. ಆದರೆ ಕೆಲವು ಹೃದಯಗಳು ಇತರ ಕೆಲವು ಹೃದಯಗಳಿಗಿಂತ ಹೆಚ್ಚು ಪ್ರಜ್ಞೆ ಇರುವವುಗಳಾಗಿರುತ್ತವೆ. ಆದ್ದರಿಂದ ಜನರೇ, ನೀವು ಅಲ್ಲಾಹನ ಮುಂದೆ ಪ್ರಾರ್ಥಿಸುವಾಗ ಪ್ರಾರ್ಥನೆಗೆ ಉತ್ತರ ಲಭಿಸುತ್ತದೆ ಎಂಬ ದೃಢ ವಿಶ್ವಾಸದೊಂದಿಗೆ ಪ್ರಾರ್ಥಿಸಬೇಕು. ಅನಾಸ್ಥೆಯಿಂದ ಕೂಡಿದ ಹೃದಯಗಳಿಂದ ಹೊರಡುವ ಪ್ರಾರ್ಥನೆಗೆ ಅಲ್ಲಾಹನು ಉತ್ತರಿಸಲಿಕ್ಕಿಲ್ಲ.”
ಪ್ರಾರ್ಥನೆಗಳಿಗೆ ಉತ್ತರ ನೀಡಲು ಅಲ್ಲಾಹನಿಗೆ ಹೊರತು ಇನ್ನಾರಿಗೂ ಸಾಧ್ಯವಿಲ್ಲ. ಆದ್ದರಿಂದ ನಾವು ಅಲ್ಲಾಹನೊಂದಿಗೇ ಪ್ರಾರ್ಥಿಸಬೇಕು. ಪ್ರಾರ್ಥಿಸುವುದು ಸೃಷ್ಟಿಗಳ ಕೆಲಸವಾದರೆ ಉತ್ತರ ನೀಡುವುದು ಸೃಷ್ಟಿಕರ್ತನ ಕೆಲಸವಾಗಿದೆ. ಎಷ್ಟೇ ಪ್ರಾರ್ಥಿಸಿದರೂ ಉತ್ತರ ಲಭಿಸುವುದಿಲ್ಲ ಎಂದು ಯಾರೂ ವ್ಯಥೆ ಪಡಬೇಕಾಗಿಲ್ಲ. ಪ್ರವಾದಿಯವರು(ಸ) ಹೇಳಿದರು, “ಅಲ್ಲಾಹನು ತನ್ನ ದಾಸರ ಪ್ರಾರ್ಥನೆಗೆ ಮೂರು ವಿಧದಲ್ಲಿ ಉತ್ತರ ನೀಡುವನು. ಒಂದೋ ಪ್ರಾರ್ಥನೆಗೆ ಶೀಘ್ರ ಉತ್ತರ. ಇಲ್ಲದಿದ್ದರೆ ಅದನ್ನು ಪರಲೋಕಕ್ಕೆ ಮೀಸಲಿರಿಸುವನು. ಅದಲ್ಲದಿದ್ದರೆ ನಿಮ್ಮ ಬೇಡಿಕೆಗೆ ಸಮಾನಾಂತರವಾದ ಯಾವುದಾದರೂ ಸಂಕಷ್ಟವನ್ನು ನೀಗಿಸುವನು.” (ಅಹ್ಮದ್)
ಆದ್ದರಿಂದ ಪ್ರಾರ್ಥನೆಗಳನ್ನು ಅಲ್ಲಾಹನಿಗೆ ಮಾತ್ರ ಸೀಮಿತಗೊಳಿಸಬೇಕು. ಅಲ್ಲಾಹೇತರರೊಂದಿಗೆ ಪ್ರಾರ್ಥಿಸುವುದು ಶಿರ್ಕ್ ಆಗಿದೆ. ಶಿರ್ಕ್ ಎಂಬುದು ಮಹಾ ಪಾಪವಾಗಿದೆ. ಮಾತ್ರವಲ್ಲ, ಅದಕ್ಕೆ ಅಲ್ಲಾಹನ ಬಳಿ ಕ್ಷಮೆಯಿಲ್ಲ. ಹಾಗಾಗಿ ನಾವು ನಮ್ಮ ಜೀವನದಲ್ಲಿ ಶಿರ್ಕ್ ಬರದಂತೆ ಎಚ್ಚರ ವಹಿಸಬೇಕು. ಅದಕ್ಕಾಗಿ ಅಲ್ಲಾಹನು ನಮ್ಮೆಲ್ಲರನ್ನು ಅನುಗ್ರಹಿಸಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ