ಸೋಮವಾರ, ಮಾರ್ಚ್ 04, 2013

ಕೈಗೆ ನಾಲ್ಕು ಕಾಸು ಬಂದಾಗ ಧರ್ಮವನ್ನು ಮರೆಯಬೇಡಿ


ಇಸ್ಲಾಮ್ ಒಂದು ಸಂಪೂರ್ಣ ಜೀವನ ಕ್ರಮವಾಗಿದೆ. ಅದು ಜೀವನದ ಎಲ್ಲಾ ರಂಗಗಳಿಗೂ ವ್ಯಾಪಿಸಿದೆ. ಐಹಿಕ ಜೀವನದ ಸುಖಾಡಂಬರಗಳಿಗಾಗಿಯೇ ಜೀವಿಸುವುದನ್ನು ಮತ್ತು ಎಲ್ಲಾ ಸುಖಾಡಂಬರಗಳಿಂದ ವಿರಕ್ತರಾಗಿ ಜೀವಿಸುವುದನ್ನು ಇಸ್ಲಾಮ್ ವಿರೋಧಿಸುತ್ತದೆ. ಪರಲೋಕ ಮೋಕ್ಷಕ್ಕಾಗಿ ಐಹಿಕ ಜೀವನವನ್ನು ತ್ಯಜಿಸಲು ಅಥವಾ ಐಹಿಕ ಜೀವನಕ್ಕಾಗಿ ಪರಲೋಕ ಜೀವನವನ್ನು ತ್ಯಜಿಸಲು ಇಸ್ಲಾಮ್ ಅನುಮತಿಸುವುದಿಲ್ಲ. ಎರಡೂ ಲೋಕಗಳು ಒಂದಕ್ಕೊಂದು ಪೂರಕವಾಗಿವೆ.
ಮನುಷ್ಯರು ಈ ಲೋಕದಲ್ಲಿ ಹೆಚ್ಚಾಗಿ ಮಾರುಹೋಗುವುದು ಸಂಪತ್ತಿಗಾಗಿದೆ. ವಾಸ್ತವದಲ್ಲಿ ಸಂಪತ್ತು ಒಂದು ಶತ್ರುವೋ, ಶಾಪವೋ, ಕೆಡುಕೋ ಅಲ್ಲ. ಬದಲಾಗಿ ಲೌಕಿಕ ಜೀವನದ ಅವಶ್ಯಕತೆಗಾಗಿ ಅಲ್ಲಾಹನು ನೀಡಿರುವ ಅನುಗ್ರಹಗಳ ಪೈಕಿ ಒಂದು ಅನುಗ್ರಹ ಮಾತ್ರವಾಗಿದೆ. ಅದಿಲ್ಲದಿದ್ದರೆ ಈ ಲೋಕದಲ್ಲಿ ಮನುಷ್ಯನಿಗೆ ಜೀವಿಸಲು ಕಷ್ಟ ಸಾಧ್ಯ. ಪ್ರತೀ ಅನುಗ್ರಹಗಳಿಗೂ ಪರೀಕ್ಷೆಯ ಇನ್ನೊಂದು ಮಗ್ಗುಲಿದೆ. ಐಹಿಕ ಜೀವನದ ಎಲ್ಲಾ ಅನುಗ್ರಹಗಳು ಒಂದರ್ಥದಲ್ಲದಿದ್ದರೆ ಮತ್ತೊಂದರ್ಥದಲ್ಲಿ ಪರೀಕ್ಷೆಯಾಗಿದೆ. ಅಲ್ಲಾಹನು ಹೇಳುತ್ತಾನೆ, “ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವವನೆಂದು ನೋಡಲಿಕ್ಕಾಗಿ ಅವನು ಜೀವನವನ್ನೂ ಮರಣವನ್ನೂ ಆವಿಷ್ಕರಿಸಿದನು. ಅವನು ಪ್ರಬಲನೂ ಕ್ಷಮಾಶೀಲನೂ ಆಗಿರುತ್ತಾನೆ.” (ಅಲ್‍ಮುಲ್ಕ್- 2) ಅಂದರೆ ಭೂಮಿಯಲ್ಲಿ ಮಾನವನ ಹುಟ್ಟು ಸಾವುಗಳ ಸರಣಿಯನ್ನು ಅವನು ಆರಂಭಿಸಿದನು. ಯಾವ ಮಾನವ ಹೆಚ್ಚು ಉತ್ತಮವಾದ ಕರ್ಮಗಳನ್ನೆಸಗುತ್ತಾನೆ ಎಂದು ಪರೀಕ್ಷಿಸುವುದೇ ಇದರ ಉದ್ದೇಶ.
ಸಂಪತ್ತು ಕೂಡಾ ಏಕ ಕಾಲದಲ್ಲಿ ಅನುಗ್ರಹವೂ ಪರೀಕ್ಷೆಯೂ ಆಗಿದೆ. ಮನುಷ್ಯನು ಇಹಲೋಕದಲ್ಲಿ ಸಂಪತ್ತಿನ ನಿರ್ವಹಣೆಯನ್ನು ಹೇಗೆ ನಿರ್ವಹಿಸಿದ್ದಾನೆ ಎಂಬ ಬಗ್ಗೆ ನಾಳೆ ಪರಲೋಕದಲ್ಲಿ ವಿಚಾರಣೆ ನಡೆಯಲಿದೆ. ಮನುಷ್ಯನು ವ್ಯಯಿಸಿದ ಸಂಪತ್ತು, ಕಟ್ಟಿಟ್ಟ ಸಂಪತ್ತು, ವಂಚಿಸಿದ ಸಂಪತ್ತು ಹೀಗೆ ಎಲ್ಲದರ ಬಗ್ಗೆಯೂ ವಿಚಾರಣೆ ನಡೆಯಲಿದೆ. ಒಂದು ನಯಾ ಪೈಸೆಯೂ ವಿಚಾರಣೆಯ ಮೇರೆ ವಿೂರಿ ಹೋಗದು. ಅಲ್ಲಾಹನು ಹೇಳುತ್ತಾನೆ, “ನಿಮ್ಮ ಸೊತ್ತುಗಳು ಮತ್ತು ನಿಮ್ಮ ಸಂತಾನಗಳು ವಾಸ್ತವದಲ್ಲಿ ಪರೀಕ್ಷಾ ಸಾಧನಗಳೆಂದೂ ಪ್ರತಿಫಲ ನೀಡಲು ಅಲ್ಲಾಹನ ಬಳಿ ಬೇಕಾದಷ್ಟಿದೆಯೆಂದೂ ತಿಳಿದುಕೊಳ್ಳಿರಿ.” (ಅಲ್ ಅನ್‍ಫಾಲ್- 28)
ಪ್ರವಾದಿಯವರು(ಸ) ಹೇಳಿದ್ದಾರೆ, “ಖಂಡಿತವಾಗಿಯೂ ಎಲ್ಲಾ ಸಮುದಾಯಗಳಿಗೂ ಒಂದೊಂದು ಪರೀಕ್ಷಾ ಸಾಧನಗಳಿವೆ. ನನ್ನ ಸಮುದಾಯದ ಪರೀಕ್ಷಾ ವಸ್ತು ಸಂಪತ್ತಾಗಿದೆ.” ಸಂಪತ್ತು ಮತ್ತು ಸುಖಾಡಂಬರಗಳು ಕೆಲವರ ವಿಶ್ವಾಸಕ್ಕೂ ಧಾರ್ಮಿಕ ಕಾರ್ಯ ಚಟುವಟಿಕೆಗಳಿಗೂ ಆರಾಧನೆಗಳಿಗೂ ತೊಡಕಾಗುವುದಿದೆ. ಹಲವು ವೇಳೆ ಸಂಪನ್ನತೆಯು ವ್ಯಕ್ತಿಗಳ ಕರ್ಮ ರಂಗವನ್ನು ಉತ್ತೇಜಿಸುವುದಿಲ್ಲ. ಬದಲಾಗಿ ಅದನ್ನು ಕುಂಠಿತಗೊಳಿಸುತ್ತದೆ. ಕೆಲವು ಮೇರೆಗಳಿಗೆ ಸೀಮಿತ ಗೊಳಿಸುತ್ತದೆ. ಈ ವಿಷಯದಲ್ಲಿ ಒಂದು ಪ್ರವಾದಿ ವಚನವು ಹೀಗಿದೆ. “ಅಲ್ಲಾಹನಾಣೆ! ನಿಮ್ಮ ವಿಚಾರದಲ್ಲಿ ನಾನು ದಾರಿದ್ರ್ಯವನ್ನು ಭಯಪಡುತ್ತಿಲ್ಲ. ನಿಮ್ಮ ಪೂರ್ವಿಕರಿಗುಂಟಾಗಿರುವಂತೆ ನಿಮಗೆ ಸಂಪತ್ತು ವೃದ್ಧಿಯಾಗುವುದರ ಬಗ್ಗೆ ನಾನು ಕಳವಳಗೊಳ್ಳುತ್ತೇನೆ. ಅವರು ಪರಸ್ಪರ ಪೈಪೋಟಿ ನಡೆಸಿದಂತೆ ನೀವು ಕೂಡಾ ಪರಸ್ಪರ ಪೈಪೋ ಟಿ ನಡೆಸುವಿರಿ. ಅವರು ನಾಶ ಹೊಂದಿದಂತೆ ನೀವೂ ನಾಶ ಹೊಂದುವಿರಿ.”
ಉಮರ್(ರ) ಹೇಳಿದರು, “ಸಂಪತ್ತು ಒಂದು ಮಾದಕ ಪದಾರ್ಥದಂತಿದೆ. ಮದ್ಯದಲ್ಲಿ ಅಮಲಿರುವಂತೆ ಸಂಪತ್ತಿನಲ್ಲೂ ಒಂದು ರೀತಿಯ ಅಮಲಿದೆ.”
ಸಂಪತ್ತು ಅಲ್ಲಾಹನೊಂದಿಗಿರುವ ಸಂಬಂಧಕ್ಕೆ ಮಾತ್ರವಲ್ಲ ವ್ಯಕ್ತಿಗಳ ಮಧ್ಯೆ ಇರುವ ಸಂಬಂಧಕ್ಕೂ ಧಕ್ಕೆ ತರುತ್ತದೆ. ಹಣಕ್ಕಾಗಿ ಸಂಬಂಧ ಹಳಸಿದ ಎಷ್ಟೋ ಕುಟುಂಬಗಳು, ವ್ಯಕ್ತಿಗಳು ನಮ್ಮ ಸಮಾಜದಲ್ಲಿದ್ದಾರೆ. ಅಲ್ಪ ಹಣಕ್ಕಾಗಿ ಬೆಲೆಕಟ್ಟಲಾಗದ ರಕ್ತ ಸಂಬಂಧವನ್ನೂ ಮುರಿಯುವವರಿದ್ದಾರೆ. ಸಂಪತ್ತು ಕೈ ಸೇರಿದಾಗ ಮನುಷ್ಯನು ಸಂಬಂಧಗಳ  ಮಹತ್ವವನ್ನೇ ಮರೆತು ಬಿಡುತ್ತಾನೆ. ಅವನು ಸಂಪತ್ತಿನ ಅಮಲಿನಲ್ಲಿ ಯಾರದೇ ನೆರವು ತನಗೆ ಬೇಕಾಗಿಲ್ಲ ಎಂದು ತೀರ್ಮಾನಿಸುತ್ತಾನೆ. ಕಷ್ಟ ಕಾಲದಲ್ಲಿ ತನಗೆ ನೆರವಾದವರನ್ನು ಮರೆತು ಬಿಡುತ್ತಾನೆ.
ಮುಸ್ಲಿಮ್ ಸೇನೆಯು ಇರಾಕನ್ನು ಜಯಿಸಿದ ಸಂದರ್ಭದಲ್ಲಿ ಧಾರಾಳ ಸ್ವರ್ಣಾಭರಣಗಳನ್ನು ಇತರ ಸೊತ್ತುಗಳನ್ನೂ ಉಮರ್‍ರವರ(ರ) ಮುಂದಿರಿಸಲಾಯಿತು. ಅವುಗಳನ್ನು ನೋಡಿ ಉಮರ್‍ರವರು(ರ) ಅಳಲು ಪ್ರಾರಂಭಿಸಿದರು. ಆಗ ಅನುಯಾಯಿಗಳು ಕೇಳಿದರು, “ಅಮೀರುಲ್ ಮುಅಮಿನೀನ್. ತಾವು ಏತಕ್ಕೆ ಅಳುತ್ತಿದ್ದೀರಿ? ಅಲ್ಲಾಹನು ತಮಗೆ ವಿಜಯ ನೀಡುವ ಮೂಲಕ ಶತ್ರುಗಳನ್ನು ಸೋಲಿಸಿದ್ದಾನೆ. ಮಾತ್ರವಲ್ಲ ತಮ್ಮ ಕಣ್ಣಿಗೂ ತಂಪೆರೆದಿದ್ದಾನೆ.” ಆಗ ಉಮರ್(ರ) ಹೇಳಿದರು, “ಪ್ರವಾದಿಯವರು(ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ. ಯಾವ ಸಮುದಾಯಕ್ಕೆ ಐಹಿಕ ಲೋಕವು ತೆರೆಯಲ್ಪಡುವುದೋ ಅವರ ಮಧ್ಯ ಅಂತ್ಯದಿನದ ವರೆಗೆ ನೆಲೆನಿಲ್ಲುವ ಶತ್ರುತ್ವ ವನ್ನೂ ದ್ವೇಷವನ್ನೂ ಉಂಟು ಮಾಡುವನು.”
ಬೇಕಾದಷ್ಟು ಸಂಪತ್ತು ಲಭಿಸುವಾಗ ಜೀವನದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು. ಬಳಿಕ ಅಲ್ಲಾಹನ ಮಾರ್ಗದಲ್ಲಿ ಪೂರ್ಣವಾಗಿ ಕಾರ್ಯ ನಿರತರಾಗಬಹುದು ಎಂದು ಭಾವಿಸುವವರಿದ್ದಾರೆ. ಆದರೆ ಇದು ಕೇವಲ ವ್ಯಾಮೋಹವಷ್ಟೇ. ಸಂಪತ್ತು ಹೆಚ್ಚಾದಾಗ ಮನುಷ್ಯನು ಸಮಯವನ್ನು ಆರಾಧನೆಗಾಗಿ ವಿೂಸಲಿರಿಸುವುದಿಲ್ಲ. ಅವನು ಹೆಚ್ಚು ಹೆಚ್ಚು ಗಳಿಸಲಿಕ್ಕಾಗಿ ಆರಾಧನೆಗಳನ್ನು ಬದಿಗಿರಿಸುತ್ತಾನೆ.
ಸಂಪತ್ತು ಮನುಷ್ಯನನ್ನು ಹೇಗೆ ವಿನಾಶಕ್ಕೊಡ್ಡುತ್ತದೆ ಎಂಬುದಕ್ಕೆ ಸಅಲಬತ್ ಬಿನ್ ಹಾತ್ತಿಬ್‍ರ ಇತಿಹಾಸವು ಉತ್ತಮ ಉದಾಹರಣೆಯಾಗಿದೆ. ಒಂದು ಕಾಲದಲ್ಲಿ ಅವರು ‘ಹಮಾಮತುಲ್ ಮಸ್ಜಿದ್’ (ಮಸೀದಿಯ ಪಾರಿವಾಳ) ಎಂದು ಕರೆಯಲ್ಪಡುವ ಶ್ರೇಷ್ಠ ವ್ಯಕ್ತಿಯಾಗಿದ್ದರು. ನಮಾಝ್‍ಗಾಗಿಯೂ ಇತರ ಸಂದರ್ಭಗಳಲ್ಲೂ ಮಸೀದಿಯಲ್ಲೇ ಅವರು ಕಾಲ ಕಳೆಯುತ್ತಿದ್ದರು. ಆದ್ದರಿಂದ ಅವರಿಗೆ ಈ ಬಿರುದು ಲಭಿಸಿತ್ತು. ಉಡಲು ವಸ್ತ್ರಗಳಿಲ್ಲದಷ್ಟು ಬಡತನವನ್ನು ಅವರು ಅನುಭವಿಸುತ್ತಿದ್ದರು. ಆದರೂ ಅವರು ಅಲ್ಲಾಹನ ಮಾರ್ಗದಿಂದ ವಿಚಲಿತರಾಗಲಿಲ್ಲ. ಯಾವುದೇ ಸಾಮೂಹಿಕ ನಮಾಝ್ ನಷ್ಟವಾಗದ ರೀತಿಯಲ್ಲಿ ಎಚ್ಚರ ವಹಿಸುತ್ತಿದ್ದರು.
ಅಬೂಉಮಾಮ(ರ) ಹೇಳುತ್ತಾರೆ, “ಬಡತನವನ್ನು ಸಹಿಸಲು ಸಾಧ್ಯವಾಗದೆ ಒಮ್ಮೆ ಸಅಲಬ ಪ್ರವಾದಿಯವರ(ಸ) ಬಳಿಗೆ ಬಂದು ಹೇಳಿದರು. “ಅಲ್ಲಾಹನ ಸಂದೇಶವಾಹಕರೇ ನನಗೆ ಸ್ವಲ್ಪ ಸಂಪತ್ತು ಲಭಿಸಲು ತಾವು ಅಲ್ಲಾಹನೊಂದಿಗೆ ಪ್ರಾರ್ಥಿಸಬೇಕು.” ಪ್ರವಾದಿಯವರು(ಸ) ಹೇಳಿದರು, “ಸಅïಲಬಾ ಧಾರಾಳವಾಗಿ ಸಂಪತ್ತುಂಟಾಗಿ ಅಲ್ಲಾಹ ನಿಗೆ ಕೃತಘ್ನನಾಗುವುದಕ್ಕಿಂತ ಸ್ವಲ್ಪ ಹಣ ಉಂಟಾಗಿ ಅಲ್ಲಾಹನಿಗೆ ಕೃತಜ್ಞನಾಗುವುದು ವಾಸಿಯಲ್ಲವೇ?” ಆಗ ಸಅïಲಬ ಹೇಳಿದರು, “ಪ್ರವಾದಿಯವರೇ(ಸ) ನನಗೆ ಸಂಪತ್ತುಂಟಾಗುವುದಾದರೆ ನಾನು ಅಲ್ಲಾಹನ ಮಾರ್ಗದಲ್ಲಿ ಧಾರಾಳ ದಾನ ಮಾಡುವೆ. ಸಂಪತ್ತಿನ ಹಕ್ಕುಗಳೆಲ್ಲವನ್ನು ಪೂರೈಸುವೆನು. ಆದ್ದರಿಂದ ತಾವು ನನಗಾಗಿ ಪ್ರಾರ್ಥಿಸಬೇಕು.”
ಅಬೂಉಮಾಮ(ರ) ಮುಂದುವರಿಸುತ್ತಾರೆ. “ಸಅಲಬರಿಗಾಗಿ ಪ್ರವಾದಿಯವರು(ಸ) ಪ್ರಾರ್ಥಿಸಿದರು. ಹಾಗೆ ಅವರ ಜೀವನದಲ್ಲಿ ಆರ್ಥಿಕ ಅಭಿವೃದ್ಧಿ ಉಂಟಾಗತೊಡಗಿತು. ಅವರಿಗೆ ಆಡು-ದನಗಳೆಲ್ಲ ಲಭಿಸಿದವು. ಮೊದಲೆಲ್ಲಾ ಅವರು ದಿನನಿತ್ಯ ಪ್ರವಾದಿಯವರನ್ನು(ಸ) ಭೇಟಿಯಾಗಲು ಬರುತ್ತಿದ್ದರು. ಆದರೆ ಜಾನುವಾರುಗಳು ವರ್ಧಿಸಿ ಸಂಪತ್ತು ಹೆಚ್ಚಾದಾಗ ಅವರು ಪ್ರವಾದಿಯವರ(ಸ) ಬಳಿ ಬರುವುದನ್ನು ಕಡಿಮೆ ಮಾಡಿದರು. ಮಗ್ರಿಬ್, ಇಶಾ ನಮಾಝ್‍ಗೆ ಮಾತ್ರ ಮಸೀದಿಗೆ ಬರಲಾಂರಭಿಸಿದರು. ಸಂಪತ್ತು ಇನ್ನೂ ಹೆಚ್ಚಾದಾಗ ತನ್ನ ವಾಸ್ತವ್ಯವನ್ನು ಮದೀನಾದ ಹೊರಭಾಗಕ್ಕೆ ಬದಲಾಯಿಸಿದರು. ಬಳಿಕ ಶುಕ್ರವಾರಗಳಂದು ಮಾತ್ರ ಪ್ರವಾದಿಯವರನ್ನು(ಸ) ಭೇಟಿಯಾಗಲು ಬರುತ್ತಿದ್ದರು. ಕೆಲ ಕಾಲಗಳ ನಂತರ ಅದೂ ಇಲ್ಲವಾಯಿತು. ನಮಾಝ್‍ನ ಬಳಿಕ ಪ್ರವಾದಿಯವರು(ಸ) ತನ್ನ ಅನುಯಾಯಿಗಳೊಂದಿಗೆ ಕುಳಿತುಕೊಳ್ಳುವಾಗ ಕೇಳುತ್ತಿದ್ದರು. “ಸಅಲಬರಿಗೆ ಏನಾಯಿತು? ಈಗ ಅವರನ್ನು ಕಾಣುತ್ತಿಲ್ಲವಲ್ಲ?”
ಹೀಗಿರುವಾಗ ಝಕಾತನ್ನು ಕಡ್ಡಾಯಗೊಳಿ ಸುತ್ತಾ ಅಲ್ಲಾಹನ ಆದೇಶ ಬಂತು. ಪ್ರವಾದಿಯವರು(ಸ) ಒಂದು ಪತ್ರ ಬರೆದು ತನ್ನ ಅನುಯಾಯಿಗಳ ಮೂಲಕ ಸಅಲಬಗೆ ಕಳುಹಿಸಿದರು. ಪತ್ರ ಓದಿದ ಬಳಿಕ ಅವರು ಕೇಳಿದರು, “ನಿಮಗೆ ಬೇರೆ ಸ್ಥಳಗಳಿಂದ ಝಕಾತ್ ಶೇಖರಿಸಲಿಕ್ಕಿದೆಯೇ? ಹಾಗಾದರೆ ಅದು ಮುಗಿದ ಬಳಿಕ ಬನ್ನಿ” ಹಾಗೆ ಎಲ್ಲಾ ಕಡೆಗಳಲ್ಲೂ ಝಕಾತ್ ಶೇಖರಿಸಿದ ಬಳಿಕ ಕೊನೆಗೆ ಅವರು ಸಅಲಬರ ಬಳಿಗೆ ಬಂದರು. ಆಗ ಸಅಲಬ ಹೇಳಿದರು, “ಅಲ್ಲಾಹನಾಣೆ, ಇದೆಂಥಾ ಒಂದು ತೆರಿಗೆ. ನೀವು ಮರಳಿ ಹೋಗಿರಿ. ನನಗೆ ಒಂದು ಸಲ ಆಲೋಚಿಸಲಿಕ್ಕಿದೆ.”
ಅವರು ಪ್ರವಾದಿಯವರ(ಸ) ಬಳಿಗೆ ಮರಳಿದರು. ಆಗ ಪವಿತ್ರ ಕುರ್‍ಆನಿನ ಈ ಸೂಕ್ತ ಅವತೀರ್ಣಗೊಂಡಿತು. “ಅವನು ತನ್ನ ಅನುಗ್ರಹದಿಂದ ನಮಗೇನಾದರೂ ಕೊಟ್ಟರೆ ನಾವೂ ದಾನ ಮಾಡುವೆವೆಂದೂ ಸಜ್ಜನರಾಗಿ ಬಾಳುವೆವೆಂದೂ ಅಲ್ಲಾಹನೊಡನೆ ಕರಾರು ಮಾಡಿದವರೂ ಅವರಲ್ಲಿ ಕೆಲವರಿದ್ದಾರೆ. ಆದರೆ, ಅಲ್ಲಾಹನು ತನ್ನ ಅನುಗ್ರಹದಿಂದ ಅವರನ್ನು ಸಂಪನ್ನರನ್ನಾಗಿ ಮಾಡಿದಾಗ ಅವರು ಜಿಪುಣತೆಗೆ ಇಳಿದರು ಮತ್ತು ತಮ್ಮ ಕರಾರಿನ ಗೊಡವೆಯೇ ಇಲ್ಲದಂತೆ ಅದರಿಂದ ವಿಮುಖರಾದರು. ಪರಿಣಾಮವಾಗಿ ಅವರು ಅಲ್ಲಾಹನೊಡನೆ ಮಾಡಿದ ಕರಾರು ಭಂಗಕ್ಕಾಗಿಯೂ ಅವರು ಸುಳ್ಳು ಹೇಳಿದುದಕ್ಕಾಗಿಯೂ ಅಲ್ಲಾಹನು ಅವರ ಹೃದಯದಲ್ಲಿ `ಕಾಪಟ್ಯ’ವನ್ನು ಇರಿಸಿ ಬಿಟ್ಟನು. ಅದು ಅವರು ಅವನ ಸನ್ನಿಧಿಯಲ್ಲಿ ಹಾಜರಾಗುವವರೆಗೂ ಅವರ ಬೆನ್ನು ಬಿಡದು.” (ಅತ್ತೌಬ: 75-77)
ಸಂಪತ್ತು ಮತ್ತು ಸುಖಾಡಂಬರಗಳು ಸಅಲಬ ಹಾಗೂ ಅವರಂತಹವರ ಧಾರ್ಮಿಕತೆಯನ್ನು ಬುಡಮೇಲು ಗೊಳಿಸಿದರೆ ಆರ್ಥಿಕ ಸಮೃದ್ಧಿಯಿಂದ ಜೀವನವನ್ನು ಸನ್ಮಾರ್ಗದಲ್ಲೇ ವ್ಯಯಿಸಿದ ಸಹಾಬಿಗಳೂ ಇದ್ದಾರೆ. ಮಿಸ್‍ಅಬ್ ಬಿನ್ ಉಮೈರ್‍ರಂಥ(ರ) ಅಗರ್ಭ ಶ್ರೀಮಂತರು ಅದಕ್ಕೆ ಉದಾ ಹರಣೆಯಾಗಿದ್ದಾರೆ. ಒಟ್ಟಿನಲ್ಲಿ ಸಂಪತ್ತು ಜೀವನದ ನೈಜಗುರಿಯನ್ನು ತಪ್ಪಿಸುವಂತಹದ್ದಾಗಬಾರದು. ಸಂಪತ್ತನ್ನು ನೀಡಿದರೂ ನೀನು ನಮ್ಮನ್ನು ಸನ್ಮಾರ್ಗದಲ್ಲೇ ದೃಢವಾಗಿ ನಿಲ್ಲುವಂತೆ ಮಾಡು ಎಂದು ನಾವು ಅಲ್ಲಾಹನಲ್ಲಿ ಪ್ರಾರ್ಥಿಸಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ